
ಮಳೆಯ ಋತು ಸರಿದ ಮೇಲೆ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ಮೊಂಥಾ’ ಚಂಡಮಾರುತವು, ಪೂರ್ವ ಕರಾವಳಿಯ ಹಲವು ರಾಜ್ಯಗಳಲ್ಲಿ ಭಾರಿ ಮಳೆಗೆ ಕಾರಣವಾಗಿದೆ. ಚಂಡಮಾರುತವು ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ನೆರೆಯ ಒಡಿಶಾದಲ್ಲಿ ಹೆಚ್ಚಿನ ಪರಿಣಾಮ ಬೀರುವ ಅಂದಾಜು ಇದೆ. ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯಗಳೂ ಇದರ ಪರಿಣಾಮಕ್ಕೆ ಒಳಪಟ್ಟಿವೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಆಧಾರದಲ್ಲಿ ರಾಜ್ಯ ಸರ್ಕಾರಗಳು ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ವ್ಯಾಪಕ ಸಿದ್ಧತೆ ಮಾಡಿಕೊಂಡಿವೆ.
ಮೊಂಥಾ ಚಂಡಮಾರುತವು ಅಬ್ಬರಿಸಲು ಶುರುವಿಟ್ಟಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬುಡ ಮೇಲಾಗಿ ಬಿದ್ದ ಮರಗಳು. ಸಮುದ್ರ ತೀರದಲ್ಲಿ ಕಟ್ಟೆಚ್ಚರ. ಎತ್ತರದ ಅಲೆಗಳಿಗೆ ಮುಖ ಮಾಡಿ ಓಡುವ ಜನರನ್ನು ಕೂಗಿ ಕರೆದು, ಮನೆಗೆ ಕಳುಹಿಸುತ್ತಿರುವ ಪೊಲೀಸರು. ಸಮುದ್ರ ತೀರದ ರಸ್ತೆಗಳ ಮೇಲೆ ಹರಿದು ಸಾಗುತ್ತಿರುವ ಸಮುದ್ರದ ಅಲೆಗಳು. ಹೀಗೆ ಹರಿಯುವಾಗ ರಸ್ತೆಗಳ ಮೇಲೆಲ್ಲಾ ಕಲ್ಲುಗಳನ್ನು ಹೊತ್ತು ತರುತ್ತಿರುವ ಅಲೆಗಳು. ತೀರದಲ್ಲಿ ವಿರಮಿಸುತ್ತಿರುವ ಮೀನುಗಾರಿಕೆ ದೋಣಿಗಳು... ‘ಮೊಂಥಾ’ದಿಂದಾಗಿ ಆಂಧ್ರ ಪ್ರದೇಶ ಮತ್ತು ಒಡಿಶಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಕಂಡುಬಂದ ಚಿತ್ರಣವಿದು.
ಈ ರಾಜ್ಯಗಳು ‘ಮೊಂಥಾ’ವನ್ನು ಎದುರಿಸಲು ಸಜ್ಜುಗೊಂಡಿವೆ. ಆಂಧ್ರ ಪ್ರದೇಶದ 19 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಚಂಡಮಾರುತದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರಿ ವಾಹನ ಸಂಚಾರವನ್ನು ಆಂಧ್ರ ಪ್ರದೇಶದಲ್ಲಿ ರದ್ದು ಮಾಡಲಾಗಿದೆ. ಒಡಿಶಾಕ್ಕೆ ಚಂಡಮಾರುತವು ಹೊಸ ವಿಚಾರವೇನೂ ಅಲ್ಲ. ಭಾರಿ ಚಂಡಮಾರುತಗಳನ್ನು ಎದುರಿಸಿರುವ ಅನುಭವಿಯಾದ ಒಡಿಶಾವು ‘ಮೊಂಥಾ’ಕ್ಕೂ ಸಕಲ ತಯಾರಿ ನಡೆಸಿದೆ. ಎರಡೂ ರಾಜ್ಯಗಳಲ್ಲಿ ‘ಮೊಂಥಾ’ ಪರಿಣಾಮದ ಜಿಲ್ಲೆಗಳಲ್ಲಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ಮೊಂಥಾ ಚಂಡಮಾರುತದ ಕಾರಣಕ್ಕೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದೆ
* ಚಂಡಮಾರುತಕ್ಕೆ ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣದಲ್ಲಿನ ಇಲಾಖೆಯ ಸಿದ್ಧತೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಪರಿಶೀಲನೆ ನಡೆಸಿದರು. ಪೂರ್ವ ಕರಾವಳಿ ರೈಲ್ವೆ ವಲಯದ ಹಲವು ರೈಲುಗಳ ಸಂಚಾರವನ್ನು ಮಂಗಳವಾರ ರದ್ದು ಮಾಡಲಾಗಿತ್ತು
* ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 32 ವಿಮಾನಗಳ (ದೇಶೀಯ ಹಾಗೂ ಅಂತರರಾಷ್ಟ್ರೀಯ) ಹಾರಾಟವನ್ನು ಮಂಗಳವಾರ ರದ್ದು ಮಾಡಲಾಯಿತು
* ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ ಚಂಡಮಾರುತ ಬಾಧಿತ ರಾಜ್ಯಗಳಲ್ಲಿ ಒಟ್ಟು 45 ತಂಡಗಳನ್ನು ಎನ್‌ಡಿಆರ್‌ಎಫ್ ನಿಯೋಜಿಸಲಾಗಿದೆ
* ಆಂಧ್ರ ಪ್ರದೇಶದಲ್ಲಿ ಸಮುದ್ರದ ಅಲೆಗಳು 4.7 ಮೀ. ಎತ್ತರಕ್ಕೆ ಏಳಲಿವೆ ಎಂದು ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ ಹೇಳಿದೆ
ಈ ವರ್ಷ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಹಲವು ಬಾರಿ ವಾಯುಭಾರ ಕುಸಿತ ಉಂಟಾಗಿದ್ದರೂ ಅದು ಚಂಡಮಾರುತವಾಗಿ ಪರಿವರ್ತನೆಯಾಗಿದ್ದು ಎರಡು ಬಾರಿ ಮಾತ್ರ. ಈ ತಿಂಗಳ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ‘ಶಕ್ತಿ’ ಮೊದಲನೆಯದ್ದಾದರೆ, ಈಗಿನ ‘ಮೊಂಥಾ’ ಎರಡನೆಯದ್ದು. ‘ಶಕ್ತಿ’ ಚಂಡಮಾರುತವು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚು ವೇಗದಲ್ಲಿ ಮಹಾರಾಷ್ಟ್ರ, ಗುಜರಾತ್, ಗೋವಾ ಕರಾವಳಿಗೆ ಅಪ್ಪಳಿಸಿತ್ತು. ಗುಜರಾತ್ ಕರಾವಳಿ ಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚಾಗಿತ್ತು. ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ.
ಬಂಗಾಳ ಕೊಲ್ಲಿಯಲ್ಲಿ ‘ಮೊಂಥಾ’ ಚಂಡಮಾರುತದ ವೇಗ ತೀವ್ರಗೊಳ್ಳುವ ಹೊತ್ತಿನಲ್ಲೇ ಪಶ್ಚಿಮದ ಅರಬ್ಬೀ ಸಮುದ್ರದಲ್ಲೂ ವಾಯುಭಾರ ಕುಸಿತ ಕಂಡುಬಂದಿದೆ. ಇದರ ಪರಿಣಾಮದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಆದರೆ, ಗಾಳಿಯ ತೀವ್ರತೆ ಹೆಚ್ಚಿಲ್ಲ. ಮಂಗಳವಾರ ಬೆಳಿಗ್ಗೆ ಸಮುದ್ರದ ಪೂರ್ವ–ಕೇಂದ್ರ ಪ್ರದೇಶದಲ್ಲಿ ಕಂಡು ಬಂದಿದ್ದ ವಾಯುಭಾರ ಕುಸಿತವು ಪ್ರತಿ ಗಂಟೆಗೆ 7 ಕಿ.ಮೀ ವೇಗದಲ್ಲಿ ಈಶಾನ್ಯದತ್ತ ಸಾಗಿದೆ. ಮುಂದಿನ 24 ಗಂಟೆಗಳಲ್ಲಿ ಅದೇ ದಿಕ್ಕಿನಲ್ಲಿ ಸಾಗುವ ಅಂದಾಜು ಇದೆ. ಪ್ರತಿ ಗಂಟೆಗೆ 46ರಿಂದ 65 ಕಿ.ಮೀವರೆಗೆ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನವದೆಹಲಿಯ ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರವು (ಆರ್‌ಎಸ್‌ಎಂಸಿ) ಉತ್ತರ ಹಿಂದೂ ಮಹಾಸಾಗರದಲ್ಲಿ ಕಾಣಿಸಿಕೊಳ್ಳುವ ಚಂಡಮಾರುತಗಳ ನಾಮಕರಣವನ್ನು ಮಾಡುತ್ತದೆ. ಆರ್‌ಎಸ್‌ಎಂಸಿಯನ್ನು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮತ್ತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ (ಏಷ್ಯಾ ಮತ್ತು ಪೆಸಿಫಿಕ್) ಉಸ್ತುವಾರಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನಿರ್ವಹಿಸುತ್ತದೆ.
ಚಂಡಮಾರುತಗಳ ಹೆಸರುಗಳನ್ನು ಆ ಪ್ರದೇಶದ ವ್ಯಾಪ್ತಿಯಲ್ಲಿರುವ 13 ದೇಶಗಳು ಸರತಿ ಪ್ರಕಾರ ನಿರ್ಧರಿಸುತ್ತವೆ. ಈ ಪ್ರದೇಶದಲ್ಲಿರುವ ಭಾರತ, ಬಾಂಗ್ಲಾದೇಶ, ಮಾಲ್ದೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್, ಯೆಮನ್, ಇರಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮುಂತಾದ ದೇಶಗಳು ಹೆಸರುಗಳನ್ನು ಸೂಚಿಸುತ್ತವೆ. ಪ್ರತಿ ದೇಶವೂ 13 ಹೆಸರುಗಳ ಪಟ್ಟಿಯನ್ನು ಪೂರ್ವಭಾವಿಯಾಗಿಯೇ ಸಲ್ಲಿಸಿರುತ್ತದೆ. ಹೊಸ ಚಂಡಮಾರುತ ಕಾಣಿಸಿಕೊಂಡಾಗ, 169 ಹೆಸರುಗಳ ಪಟ್ಟಿಯಿಂದ ಒಂದು ಹೆಸರನ್ನು ಸರತಿಯ ಪ್ರಕಾರ ಐಎಂಡಿ ಆಯ್ಕೆ ಮಾಡುತ್ತದೆ.
ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ, ಸುಂದರವಾದ ಅಥವಾ ಸುವಾಸನೆಯುಕ್ತ ಹೂವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.