ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲದ ಪ್ರಮಾಣವು ಭಾರಿ ಅಪಾಯಕಾರಿ ಸ್ಥಿತಿಯಲ್ಲಿದೆ. ಕೇಂದ್ರ ಅಂತರ್ಜಲ ಮಂಡಳಿಯ ವರದಿಯ ಪ್ರಕಾರ, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆ ಪ್ರಮಾಣವು ಶೇ 100ಕ್ಕಿಂತಲೂ ಹೆಚ್ಚಾಗಿದೆ. ಈ ಜಿಲ್ಲೆಗಳಲ್ಲಿ ಭವಿಷ್ಯದ ಬಳಕೆಗೆ ಅಂತರ್ಜಲವೇ ಸಿಗುವುದಿಲ್ಲ. ಇವುಗಳ ಜತೆಗೆ, ರಾಜ್ಯದ 45 ತಾಲ್ಲೂಕುಗಳು ಅಂತರ್ಜಲವನ್ನು ಮಿತಿಮೀರಿ ಬಳಸುತ್ತಿವೆ...
ಕೇಂದ್ರ ಅಂತರ್ಜಲ ಮಂಡಳಿಯು ದೇಶದ ಅಂತರ್ಜಲ ಸಂಪನ್ಮೂಲದ ಸ್ಥಿತಿಗತಿ ಬಗ್ಗೆ ವರದಿ ಬಿಡುಗಡೆ ಮಾಡಿದೆ. ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳನ್ನು ಘಟಕಗಳನ್ನಾಗಿ (ಬ್ಲಾಕ್, ಮಂಡಲ ಅಥವಾ ತಾಲ್ಲೂಕು) ವಿಂಗಡಿಸಿ, ಅಂತರ್ಜಲದ ಲಭ್ಯತೆ, ಬಳಕೆ ಮತ್ತು ಭವಿಷ್ಯದ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣದ ದತ್ತಾಂಶವನ್ನು ಪ್ರಕಟಿಸಿದೆ.
ಕರ್ನಾಟಕದಲ್ಲಿ ತಾಲ್ಲೂಕುವಾರು ಅಂತರ್ಜಲ ಪ್ರಮಾಣದ ಮೌಲ್ಯಮಾಪನ ಮಾಡಲಾಗಿದೆ. ರಾಜ್ಯದಲ್ಲಿ ವಾರ್ಷಿಕವಾಗಿ 1,874 ಕೋಟಿ ಘನ ಮೀಟರ್ ಅಂತರ್ಜಲ ಮರುಪೂರಣವಾಗಿದ್ದರೆ, ವಾರ್ಷಿಕವಾಗಿ 1,688 ಕೋಟಿ ಘನ ಮೀಟರ್‌ನಷ್ಟು ಅಂತರ್ಜಲ ಬಳಸಬಹುದು ಎಂದು ವರದಿ ಹೇಳಿದೆ. 2024ರಲ್ಲಿ 1,155 ಕೋಟಿ ಘನ ಮೀಟರ್ ಅಂತರ್ಜಲವನ್ನು (ಶೇ 68.44) ಬಳಕೆ ಮಾಡಲಾಗಿದೆ. 2023ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಅಂತರ್ಜಲ ಬಳಕೆಯ ಪ್ರಮಾಣವು ಶೇ 2.22ರಷ್ಟು ಹೆಚ್ಚಳವಾಗಿದೆ.
ಮೌಲ್ಯಮಾಪನ ಮಾಡಲಾದ 237 ಘಟಕಗಳ (ತಾಲ್ಲೂಕುಗಳ) ಪೈಕಿ, 45 ಘಟಕಗಳು (ಶೇ 18.99) ಭಾರಿ ಅಪಾಯಕಾರಿ ಘಟಕಗಳೆಂದು ಗುರುತಿಸಲಾಗಿದೆ. ಇಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗಿದೆ. 15 ಘಟಕಗಳನ್ನು (ಶೇ 6.33) ಅಪಾಯಕಾರಿ ಎಂದು, 33 ಘಟಕಗಳನ್ನು ಶೇ (13.92) ಮಧ್ಯಮ ಅಪಾಯಕಾರಿ ಎಂದು ಗುರುತಿಸಲಾಗಿದೆ. 144 ಘಟಕಗಳನ್ನು (ಶೇ 60.76) ಸುರಕ್ಷಿತ ಎಂದು ಪಟ್ಟಿ ಮಾಡಲಾಗಿದೆ. ಅಂದರೆ, ಈ 144 ತಾಲ್ಲೂಕುಗಳಲ್ಲಿ ಮಾತ್ರವೇ ಅಂತರ್ಜಲವು ಸುರಕ್ಷಿತ ಪ್ರಮಾಣದಲ್ಲಿದೆ. ಕ್ಷಾರಯುಕ್ತ ಅಂತರ್ಜಲ ಇರುವ ಘಟಕಗಳು ರಾಜ್ಯದಲ್ಲಿ ಇಲ್ಲ ಎಂದು ವರದಿ ಹೇಳಿದೆ.
ಅತ್ಯಂತ ಆತಂಕದ ವಿಚಾರವೆಂದರೆ, ಅಂತರ್ಜಲದ ಬಳಕೆಯ ಪ್ರಮಾಣವು ಶೇ 100ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ರಾಜಧಾನಿ ಬೆಂಗಳೂರು ಕೂಡ ಸೇರಿದೆ. ಬೆಂಗಳೂರಿನಲ್ಲಿ ಶೇ 186.70ರಷ್ಟು ಅಂತರ್ಜಲವನ್ನು ಕಳೆದ ವರ್ಷ ಬಳಕೆ ಮಾಡಲಾಗಿದೆ. ರಾಜಧಾನಿ ಮಾತ್ರವಲ್ಲದೆ, ಅದಕ್ಕೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಜತೆಗೆ ಚಿತ್ರದುರ್ಗ ಜಿಲ್ಲೆಗಳಲ್ಲಿ ಅಂತರ್ಜಲದ ಬಳಕೆಯ ಪ್ರಮಾಣವು ಭಾರಿ ಅಪಾಯಕಾರಿ ಸ್ಥಿತಿಯಲ್ಲಿದೆ.
ದೇಶದಲ್ಲಿ ಮಳೆಯೇ ಅಂತರ್ಜಲ ಮರುಪೂರಣದ ಪ್ರಮುಖ ಮೂಲವಾಗಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಬಳಕೆಗೆ ದೇಶದಲ್ಲಿ ಅಂತರ್ಜಲವೇ ಮೂಲಾಧಾರವಾಗಿದೆ. ಕರ್ನಾಟಕದಲ್ಲಿ ವಾಡಿಕೆಯಲ್ಲಿ ಬೀಳುವ ಮಳೆಯ ಸರಾಸರಿ ಪ್ರಮಾಣ 113.16 ಮಿ.ಮೀ. 2023ರಲ್ಲಿ 91.42 ಸೆಂ.ಮೀ ಮಳೆ ಬಿದ್ದಿದ್ದರೆ, 2024ರಲ್ಲಿ (ಅಂತರ್ಜಲ ಪರೀಕ್ಷೆ ಮಾಡುವ ವೇಳೆ) 93.62 ಸೆಂ.ಮೀ.ನಷ್ಟು ಮಳೆಯಾಗಿತ್ತು.
ಎಲ್ಲೆಲ್ಲಿ ಅಪಾಯಕಾರಿ ಸ್ಥಿತಿ?
ಮಧ್ಯಮ ಅಪಾಯಕಾರಿ (33 ತಾಲ್ಲೂಕುಗಳು):
ರಬಕವಿ–ಬನಹಟ್ಟಿ, ಹುನಗುಂದ, ಇಳಕಲ್, ಮುಧೋಳ (ಬಾಗಲಕೋಟೆ ಜಿಲ್ಲೆ); ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಯರಗಟ್ಟಿ, ಅಥಣಿ (ಬೆಳಗಾವಿ ಜಿಲ್ಲೆ); ಭಾಲ್ಕಿ, ಹುಲಸೂರು (ಬೀದರ್ ಜಿಲ್ಲೆ); ಯಳಂದೂರು, ಕೊಳ್ಳೇಗಾಲ, ಹನೂರು (ಚಾಮರಾಜನಗರ ಜಿಲ್ಲೆ); ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ); ಹೊನ್ನಾಳಿ (ದಾವಣಗೆರೆ ಜಿಲ್ಲೆ); ಶಿರಹಟ್ಟಿ, ಮುಂಡರಗಿ, ಗದಗ (ಗದಗ ಜಿಲ್ಲೆ); ಸವಣೂರು, ಶಿಗ್ಗಾವಿ, ರಟ್ಟೀಹಳ್ಳಿ, ರಾಣೆಬೆನ್ನೂರು (ಹಾವೇರಿ ಜಿಲ್ಲೆ); ಕನಕಗಿರಿ, ಕುಷ್ಟಗಿ (ಕೊಪ್ಪಳ ಜಿಲ್ಲೆ); ಮಳವಳ್ಳಿ (ಮಂಡ್ಯ ಜಿಲ್ಲೆ); ಸಿರವಾರ (ರಾಯಚೂರು ಜಿಲ್ಲೆ); ಕನಕಪುರ, ಚನ್ನಪಟ್ಟಣ (ರಾಮನಗರ ಜಿಲ್ಲೆ); ಪಾವಗಡ (ತುಮಕೂರು ಜಿಲ್ಲೆ); ನಿಡಗುಂದಿ (ವಿಜಯಪುರ); ಯಾದಗಿರಿ, ಗುರುಮಠಕಲ್ (ಯಾದಗಿರಿ ಜಿಲ್ಲೆ).
ಅಪಾಯಕಾರಿ (15 ತಾಲ್ಲೂಕುಗಳು):
ಗುಳೇದಗುಡ್ಡ, ಬಾದಾಮಿ (ಬಾಗಲಕೋಟೆ ಜಿಲ್ಲೆ); ಕಾಗವಾಡ (ಬೆಳಗಾವಿ ಜಿಲ್ಲೆ); ಕಡೂರು (ಚಿಕ್ಕಮಗಳೂರು ಜಿಲ್ಲೆ); ದಾವಣಗೆರೆ (ದಾವಣಗೆರೆ ಜಿಲ್ಲೆ); ರೋಣ (ಗದಗ ಜಿಲ್ಲೆ); ಚನ್ನರಾಯಪಟ್ಟಣ (ಹಾಸನ ಜಿಲ್ಲೆ); ಬ್ಯಾಡಗಿ (ಹಾವೇರಿ ಜಿಲ್ಲೆ); ಅಫಜಲಪುರ (ಕಲಬುರಗಿ ಜಿಲ್ಲೆ); ಯಲಬುರ್ಗಾ, ಕೂಕನೂರು (ಕೊಪ್ಪಳ ಜಿಲ್ಲೆ); ರಾಮನಗರ, ಮಾಗಡಿ (ರಾಮನಗರ ಜಿಲ್ಲೆ); ಕೊರಟಗೆರೆ (ತುಮಕೂರು ಜಿಲ್ಲೆ); ಹರಪನಹಳ್ಳಿ (ವಿಜಯನಗರ ಜಿಲ್ಲೆ).
ಭಾರಿ ಅಪಾಯಕಾರಿ (45 ತಾಲ್ಲೂಕುಗಳು):
ಬಾಗಲಕೋಟೆ (ಬಾಗಲಕೋಟೆ ಜಿಲ್ಲೆ); ಬೈಲಹೊಂಗಲ, ಸವದತ್ತಿ (ಬೆಳಗಾವಿ ಜಿಲ್ಲೆ); ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ); ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಯಲಹಂಕ, ಬೆಂಗಳೂರು ನಗರ, ಆನೇಕಲ್, ಬೆಂಗಳೂರು ಉತ್ತರ (ಬೆಂಗಳೂರು ನಗರ ಜಿಲ್ಲೆ); ಗುಂಡ್ಲುಪೇಟೆ, ಚಾಮರಾಜನಗರ (ಚಾಮರಾಜನಗರ ಜಿಲ್ಲೆ); ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು (ಚಿಕ್ಕಬಳ್ಳಾಪುರ ಜಿಲ್ಲೆ); ಅಜ್ಜಂಪುರ (ಚಿಕ್ಕಮಗಳೂರು ಜಿಲ್ಲೆ); ಹೊಳಲ್ಕೆರೆ, ಹೊಸದುರ್ಗ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು (ಚಿತ್ರದುರ್ಗ ಜಿಲ್ಲೆ); ಚನ್ನಗಿರಿ, ಜಗಳೂರು (ದಾವಣಗೆರೆ); ಗಜೇಂದ್ರಗಡ (ಗದಗ ಜಿಲ್ಲೆ); ಅರಸೀಕೆರೆ (ಹಾಸನ ಜಿಲ್ಲೆ); ಮುಳಬಾಗಿಲು, ಕೆಜಿಎಫ್, ಕೋಲಾರ, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ (ಕೋಲಾರ ಜಿಲ್ಲೆ); ಹಾರೋಹಳ್ಳಿ (ರಾಮನಗರ ಜಿಲ್ಲೆ); ತುಮಕೂರು, ತಿಪಟೂರು, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ); ಹಗರಿಬೊಮ್ಮನಹಳ್ಳಿ, ಕೊಟ್ಟೂರು (ವಿಜಯನಗರ ಜಿಲ್ಲೆ).
751 ಘಟಕಗಳಲ್ಲಿ ಭಾರಿ ಅಪಾಯಕಾರಿ ಸ್ಥಿತಿ
ದೇಶದಾದ್ಯಂತ 6,746 ಘಟಕಗಳಲ್ಲಿ ಅಂತರ್ಜಲದ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಲಾಗಿದ್ದು ಈ ಪೈಕಿ, 751 ಘಟಕಗಳಲ್ಲಿ ಕಳೆದ ವರ್ಷ ಮಿತಿ ಮೀರಿ ಅಂತರ್ಜಲವನ್ನು ಬಳಕೆ ಮಾಡಲಾಗಿದೆ. ಇಲ್ಲಿನ ಸ್ಥಿತಿ ಭಾರಿ ಅಪಾಯಕಾರಿಯಾಗಿದೆ ಎಂದು ವರದಿ ಹೇಳಿದೆ. 206 ಘಟಕಗಳಲ್ಲಿಅಂತರ್ಜಲ ಮಟ್ಟ ಅಪಾಯಕಾರಿ ಸ್ಥಿತಿಯಲ್ಲಿದ್ದರೆ, 711 ಘಟಕಗಳಲ್ಲಿ ಮಧ್ಯಮ ಅಪಾಯಕಾರಿ ಸ್ಥಿತಿ ಇದೆ. 4,951 ಘಟಕಗಳಲ್ಲಿ ಅಂತರ್ಜಲದ ಸ್ಥಿತಿ ಸುರಕ್ಷಿತವಾಗಿದೆ. 127 ಘಟಕಗಳು ಲವಣಯುಕ್ತ ನೀರನ್ನು (ಕ್ಷಾರ) ಹೊಂದಿವೆ ಎಂದು ವರದಿ ವಿವರಿಸಿದೆ.
ಅಂತರ್ಜಲ ಅತಿ ಬಳಕೆ ಎಂದರೆ...
ನಿಗದಿತ ಮಿತಿಗಿಂತಲೂ ಹೆಚ್ಚು ಅಂತರ್ಜಲವನ್ನು ಬಳಕೆ ಮಾಡಿದರೆ ಅದನ್ನು ಅತಿ ಬಳಕೆ (exploitation) ಎಂದು ಕರೆಯಲಾಗುತ್ತದೆ. ಅದನ್ನು ಭಾರಿ ಅಪಾಯಕಾರಿ ಸ್ಥಿತಿ ಎಂದು ಗುರುತಿಸಲಾಗಿದೆ.
ಉದಾಹರಣೆಗೆ; ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಕಳೆದ ವರ್ಷ 31,739.53 ಹೆಕ್ಟೇರ್ ಮೀಟರ್‌ಗಳಷ್ಟು (ಎಚ್‌ಎಎಂ) ಅಂತರ್ಜಲ ಮರುಪೂರಣವಾಗಿತ್ತು. ಕೇಂದ್ರ ಅಂತರ್ಜಲ ಮಂಡಳಿಯ ಲೆಕ್ಕಚಾರದ ಪ್ರಕಾರ, ಒಂದು ವರ್ಷದಲ್ಲಿ 28,565.58 ಹೆಕ್ಟೇರ್ ಮೀಟರ್‌ಗಳಷ್ಟು ಅಂತರ್ಜಲವನ್ನು ಬಳಸುವುದಕ್ಕೆ ಅವಕಾಶ ಇತ್ತು. ಆದರೆ, 53,332.51 ಹೆಕ್ಟೇರ್ ಮೀಟರ್‌ಗಳಷ್ಟು ಅಂತರ್ಜಲವನ್ನು ಬಳಸಲಾಗಿದೆ. ಶೇಕಡವಾರು ಲೆಕ್ಕ ಹಾಕಿದರೆ ಶೇ 186.70ರಷ್ಟು ಅಂತರ್ಜಲವನ್ನು ಭೂಮಿಯಿಂದ ಮೇಲಕ್ಕೆತ್ತಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.