ADVERTISEMENT

ಆಳ-ಅಗಲ | ಕೌಂಟಿ ರಚನೆ: ಬಲವಾಗುತ್ತಿದೆಯೇ ಚೀನಾ ಹಿಡಿತ?

ಒಂದು ಕಡೆ ಸ್ನೇಹಹಸ್ತ, ಮತ್ತೊಂದು ಕಡೆ ಸಂಘರ್ಷ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 0:30 IST
Last Updated 15 ಜನವರಿ 2025, 0:30 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   
ಭಾರತವು ಸಂಬಂಧ ಸುಧಾರಣೆಯ ದಿಸೆಯಲ್ಲಿ ಹಲವು ರೀತಿಯ ಮಾತುಕತೆ, ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ ನಂತರವೂ ಚೀನಾ ಅದನ್ನು ಉಲ್ಲಂಘಿಸುತ್ತಲೇ ಬರುತ್ತಿದೆ. ಏಕಪಕ್ಷೀಯವಾಗಿ ಗಡಿಯಲ್ಲಿ ಸೇನೆ ನಿಯೋಜಿಸುವುದು ಮತ್ತು ವಿವಾದಾತ್ಮಕ ಪ್ರದೇಶದಲ್ಲಿ ಹಲವು ರೀತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಹ ನಡೆಗಳಿಗೆ ಮುಂದಾಗುತ್ತಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಗೆ ಸಂಬಂಧಿಸಿದಂತೆ 23ನೇ ಮಾತುಕತೆ ನಡೆದ ಕೆಲವೇ ದಿನಗಳಲ್ಲಿ ಚೀನಾ ವಿವಾದಿತ ಅಕ್ಸಾಯ್ ಚಿನ್ ಪ್ರದೇಶವನ್ನು ಒಳಗೊಂಡಂತೆ ಎರಡು ಕೌಂಟಿಗಳನ್ನು ರಚಿಸಿದೆ. ಇದನ್ನು ವಿರೋಧಿಸಿರುವ ಭಾರತ, ತನ್ನ ಪ್ರತಿಭಟನೆಯನ್ನು ದಾಖಲಿಸಿದೆ. ವಿವಾದಿತ ಪ್ರದೇಶದ ಮೇಲೆ ತನ್ನ ಆಡಳಿತಾತ್ಮಕ ಹಿಡಿತ ಬಲಪಡಿಸಲು ಚೀನಾ ಕೌಂಟಿಗಳನ್ನು ನಿರ್ಮಿಸಿದೆ ಎನ್ನಲಾಗುತ್ತಿದೆ 

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ದಿಸೆಯಲ್ಲಿ 2024ರ ಡಿಸೆಂಬರ್ 18ರಂದು 23ನೇ ಮಾತುಕತೆ ನಡೆದಿತ್ತು. 2020ರ ಗಾಲ್ವನ್ ಕಣಿವೆಯ ಸಂಘರ್ಷದ ನಂತರ ನಡೆದ ಮೊದಲ ಸಭೆ ಅದು. ಭಾರತದ ಪರವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾಗವಹಿಸಿದ್ದರು. ಭಾರತ–ಚೀನಾ ದ್ವಿಪಕ್ಷೀಯ ಸಂಬಂಧ ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುವುದು ಮತ್ತು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು.

ಆದರೆ, ಇದಾದ 10 ದಿನಗಳ ಬಳಿಕ ಸಭೆಯ ನಿರ್ಣಯಕ್ಕೆ ವಿರುದ್ಧವಾದ ಸುದ್ದಿಯೊಂದನ್ನು ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಾಯವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯ್ಗರ್ ಸ್ವಾಯತ್ತ ಪ್ರದೇಶದ ಸ್ಥಳೀಯ ಸರ್ಕಾರವು ಎರಡು ಹೊಸ ಕೌಂಟಿಗಳನ್ನು ರಚಿಸಿರುವುದಾಗಿಯೂ, ‘ಹೆಯಾನ್’ ಮತ್ತು ‘ಹೆಕಾಂಗ್‌’ ಹೆಸರಿನ ಅವುಗಳನ್ನು ಚೀನಾದ ಕಮ್ಯುನಿಸ್ಟ್ ಪಾರ್ಟಿ ಮತ್ತು ಸ್ಟೇಟ್ ಕೌನ್ಸಿಲ್ ಅನುಮೋದಿಸಿವೆ ಎಂದೂ ವರದಿ ತಿಳಿಸಿದೆ.

ADVERTISEMENT

ಹೋಟಾನ್ ಪ್ರಾಂತ್ಯದಲ್ಲಿ ಚೀನಾ ಈಗಾಗಲೇ ಏಳು ಕೌಂಟಿಗಳನ್ನು ರಚಿಸಿದೆ. ಅವುಗಳ ಜತೆಗೆ ಈಗ ಎರಡು ಹೊಸ ಕೌಂಟಿಗಳು ಸೇರ್ಪಡೆಗೊಂಡಿವೆ. ಚೀನಾ ತನ್ನ ನೆಲದಲ್ಲಿ ಕೌಂಟಿಗಳನ್ನು ನಿರ್ಮಿಸಿದ್ದರೆ ಯಾರೂ ತಕರಾರು ಮಾಡುತ್ತಿರಲಿಲ್ಲ. ಆದರೆ, ಅಕ್ಸಾಯ್‌ ಚಿನ್‌ನಲ್ಲಿ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಭಾರತ ಪ್ರತಿಪಾದಿಸುತ್ತಿರುವ ಪ್ರದೇಶದ ಸುಮಾರು 38 ಸಾವಿರ ಚದರ ಕಿ.ಮೀ. ಜಾಗವನ್ನು ಹೆಯಾನ್‌ ಕೌಂಟಿ ಒಳಗೊಂಡಿದೆ. ವಿವಾದಿತ ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಅದರ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.           

ಚೀನಾ ಹೀಗೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 1993 ಮತ್ತು 1996ರ ಒಪ್ಪಂದಗಳ ನಂತರ, ವಿವಾದಿತ ಪ್ರದೇಶಗಳಲ್ಲಿ ಗಸ್ತನ್ನು ತೀವ್ರಗೊಳಿಸಿದ್ದಷ್ಟೆ ‌ಅಲ್ಲದೇ, ಹೆಚ್ಚು ಕಾಲ ಸೇನೆಯನ್ನು ಅಲ್ಲಿ ನಿಯೋಜಿಸಿತ್ತು. 2005ರ ಒಪ್ಪಂದ ಏರ್ಪಟ್ಟ ನಂತರ, ಇಡೀ ಅರುಣಾಚಲ ಪ್ರದೇಶವೇ ತನ್ನದೆಂದು ಚೀನಾ ಪ್ರತಿಪಾದಿಸತೊಡಗಿತು. 2014ರಲ್ಲಿ ನರೇಂದ್ರ ಮೋದಿ–ಷಿ ಜಿನ್‌ಪಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಡೋಕ್ಲಾಮ್‌ ಅನ್ನು ಆಕ್ರಮಿಸಿಕೊಳ್ಳಲು ಅದು ಪ್ರಯತ್ನಿಸಿತು. ಅವರು 2019ರಲ್ಲಿ ಮತ್ತೆ ಮಹಾಬಲಿಪುರದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಗಾಲ್ವನ್ ಕಣಿವೆಯ ಸಂಘರ್ಷ ತಲೆದೋರಿತು. 

2020ರಲ್ಲಿ ಗಾಲ್ವನ್‌, ಪ್ಯಾಂಗಾಂಗ್‌ ಸರೋವರದ ಬಳಿ ಭಾರತ–ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಅದರ ನಂತರ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ತೀವ್ರಗೊಂಡಿತ್ತು. ನಂತರ ಹಲವು ಸುತ್ತಿನ ಮಾತುಕತೆಗಳು ನಡೆದು ಗಡಿಯಲ್ಲಿ ನಿಯೋಜಿಸಿದ್ದ ಸೈನ್ಯವನ್ನು ವಾಪಸ್ ಕರೆಸಿಕೊಳ್ಳಲಾಗಿತ್ತಾದರೂ, ಬಫರ್‌ ವಲಯದ ಹೆಸರಿನಲ್ಲಿ ಭಾರತವು ತನ್ನ ಭೂಪ್ರದೇಶದಲ್ಲೇ ಗಸ್ತು ತಿರುಗದಂತೆ ಆಗಿತ್ತು. ಅದರ ನಂತರ, 2024ರ ಅಕ್ಟೋಬರ್ 23ರಂದು ರಷ್ಯಾದಲ್ಲಿ ನಡೆದಿದ್ದ ಬ್ರಿಕ್ಸ್ ಸಮಾವೇಶದಲ್ಲಿಯೂ ಮೋದಿ ಮತ್ತು ಜಿನ್‌ಪಿಂಗ್ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಬಗ್ಗೆ ಮಾತುಕತೆ ನಡೆಸಿದ್ದರು. ಆ ನಂತರ, ಡೆಮ್‌ಚೊಕ್‌ ಮತ್ತು ಡೆಪ್ಸಾಂಗ್‌ ಪ್ರದೇಶದಲ್ಲಿ ನಾಲ್ಕೂವರೆ ವರ್ಷಗಳಿಂದಲೂ ಬಗೆಹರಿಯದಿದ್ದ ಸೇನಾ ಬಿಕ್ಕಟ್ಟು ಅಂತ್ಯಗೊಳಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಬಂದಿದ್ದವು. ಸಂಘರ್ಷ ಕೊನೆಯಾಗಿ ಸ್ನೇಹ ಸಂಬಂಧದ ಪರ್ವ ಆರಂಭವಾಯಿತು ಎಂದುಕೊಳ್ಳುತ್ತಿರುವಾಗಲೇ ಚೀನಾದ ಕೌಂಟಿ ರಚನೆಯ ಸುದ್ದಿ ಬಂದಿದೆ.      

ಚೀನಾ, ಒಂದು ಕಡೆ ಬ್ರಹ್ಮಪುತ್ರ ನದಿಗೆ ಜಗತ್ತಿನಲ್ಲಿಯೇ ಅತಿ ದೊಡ್ಡ ಅಣೆಕಟ್ಟು ಕಟ್ಟಲು ಹೊರಟಿದೆ. ಇನ್ನೊಂದು ಕಡೆ ಲಡಾಖ್‌ನಲ್ಲಿ ಎರಡು ಕೌಂಟಿಗಳನ್ನು ನಿರ್ಮಿಸಿ, ಭಾರತಕ್ಕೆ ಸೇರಿದ ಭೂಪ್ರದೇಶವನ್ನೂ ಅದರ ವ್ಯಾಪ್ತಿಯಲ್ಲಿ ಸೇರಿಸಿದೆ. ಭೂಪ್ರದೇಶ, ನೀರು ಹೀಗೆ ಹಲವು ವಿಧದಲ್ಲಿ ಭಾರತದ ಪಾಲನ್ನು ಕಸಿಯುವ ಕೆಲಸವನ್ನು ಮಾಡುತ್ತಿದ್ದು, ಆಕ್ರಮಣಕಾರಿ ವರ್ತನೆಯನ್ನು ಮುಂದುವರೆಸುತ್ತಿದೆ. 

ಕೌಂಟಿ ರಚನೆಯನ್ನು ಭಾರತವು ವಿರೋಧಿಸಿದೆ. ‘ನಮ್ಮ ಭೂಭಾಗವನ್ನು ಆಕ್ರಮಿಸಿಕೊಳ್ಳುವ ಚೀನಾದ ಕಾನೂನುಬಾಹಿರ ಕ್ರಮವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ’ ಎಂದು ಅದು ಹೇಳಿದೆ. ರಾಜತಾಂತ್ರಿಕವಾಗಿ ತನ್ನ ಪ್ರತಿಭಟನೆಯನ್ನೂ ದಾಖಲಿಸಿದೆ. ಕೇಂದ್ರ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ, ‘ಸೌಮ್ಯ’ ಪ್ರತಿಕ್ರಿಯೆ ನೀಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ‘ಭಾರತದ ಭೂಭಾಗ ಆಕ್ರಮಿಸಿಕೊಳ್ಳುವುದನ್ನು ಚೀನಾ ಮುಂದುವರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಕ್ಲೀನ್‌ ಚಿಟ್ ನೀಡುತ್ತಲೇ ಇದ್ದಾರೆ’ ಎಂದು ಅವು ಟೀಕಿಸಿವೆ.     

ಕೌಂಟಿ ಎಂದರೇನು?

ಚೀನಾದಲ್ಲಿ ಕೌಂಟಿ ಎಂದರೆ ಮೂರನೇ ಹಂತದ ಆಡಳಿತ ಘಟಕ. ಚೀನಾದ ಆಡಳಿತ ವ್ಯವಸ್ಥೆಯಲ್ಲಿ ಮೊದಲು ಪ್ರಾಂತ್ಯಗಳು (provinces)/ಸ್ವಾಯತ್ತ ವಲಯಗಳು (autonomous regions), ನಂತರ ಆಡಳಿತ ಪ್ರಾಂತ್ಯಗಳು (prefecture) ಬರುತ್ತವೆ. ಆಡಳಿತ ಪ್ರಾಂತ್ಯಗಳನ್ನು ವಿಭಾಗಿಸಿ ಕೌಂಟಿಗಳನ್ನು ರಚಿಸಲಾಗುತ್ತದೆ.  

ಚೀನಾದಲ್ಲಿ 23 ಪ್ರಾಂತ್ಯಗಳು, ಐದು ಸ್ವಾಯತ್ತ ವಲಯಗಳು, ಎರಡು ವಿಶೇಷ ಆಡಳಿತಾತ್ಮಕ ವಲಯಗಳು ಇವೆ. ರಾಜಧಾನಿ ಬೀಜಿಂಗ್‌, ಶಾಂಘೈ ಸೇರಿದಂತೆ ನಾಲ್ಕು ಮಹಾನಗರಗಳ ಆಡಳಿತ ಸರ್ಕಾರದ ನೇರ ಸುಪರ್ದಿಗೆ ಬರುತ್ತದೆ. ಚೀನಾದಲ್ಲಿ 1,350ಕ್ಕೂ ಹೆಚ್ಚು ಕೌಂಟಿಗಳು ಇವೆ ಎಂದು ಹೇಳಲಾಗಿದೆ. ಕೌಂಟಿ ಮಟ್ಟದ ಆಡಳಿತದಲ್ಲಿ ಕೆಲವು ಕಡೆಗಳಲ್ಲಿ ಕೌಂಟಿಗಳು, ಜಿಲ್ಲೆ, ಕೌಂಟಿ ಮಟ್ಟದ ನಗರಗಳು, ಸ್ವಾಯತ್ತ ಕೌಂಟಿಗಳು ಬರುತ್ತವೆ. ಬಹುಪಾಲು ಕೌಂಟಿಗಳು ಚೀನಾದ ಗ್ರಾಮೀಣ ಭಾಗದ ಆಡಳಿತವನ್ನು ನಿರ್ವಹಿಸುತ್ತವೆ. 

ಲಡಾಖ್‌ಗೆ ಹೊಂದಿಕೊಂಡಂತೆ ಈಗ ರಚಿಸಲಾಗಿರುವ ಹೆಯಾನ್‌, ಹೆಕಾಂಗ್‌ ಕೌಂಟಿಗಳು ಕ್ಸಿನ್‌ಜಿಯಾಂಗ್ ಉಯ್ಗರ್ ಸ್ವಾಯತ್ತ ಪ್ರದೇಶದ ವ್ಯಾಪ್ತಿಯಲ್ಲಿರುವ ಹೋಟಾನ್‌ ಆಡಳಿತ ಪ್ರಾಂತ್ಯದ ವ್ಯಾಪ್ತಿಯಲ್ಲಿ ಬರುತ್ತವೆ. ಹೋಟಾನ್‌ ಪ್ರಾಂತ್ಯದ ಹೋಟಾನ್‌ ಕೌಂಟಿಯ ಸ್ವಲ್ಪ ಭಾಗ ಮತ್ತು ಅಕ್ಸಾಯ್‌ ಚಿನ್ ಪ್ರದೇಶದ ಬಹುಪಾಲು ಭೂಪ್ರದೇಶ ಸೇರಿಸಿ ಹೆಯಾನ್‌ ಕೌಂಟಿಯನ್ನು ರಚಿಸಲಾಗಿದೆ ಎಂದು ಹೇಳಲಾಗಿದ್ದು, ಹಾಂಗ್‌ಲಿಯು ಪ್ರದೇಶವನ್ನು ಇದರ ಆಡಳಿತ ಕೇಂದ್ರ ಅಥವಾ ರಾಜಧಾನಿ ಎಂದು ಗುರುತಿಸಲಾಗಿದೆ. 

ಹೋಟಾನ್‌ ಆಡಳಿತ ಪ್ರಾಂತ್ಯದ ಮತ್ತೊಂದು ಪಿಶನ್‌ ಕೌಂಟಿಯನ್ನು ವಿಭಜಿಸಿ ಹೆಕಾಂಗ್‌ ಕೌಂಟಿಯನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ. ಈ ಪ್ರದೇಶವೂ ಭಾರತದ ಗಡಿಗೆ ಸಮೀಪದಲ್ಲಿದ್ದು ಕ್ಸೆಯಿಡುಲಾ ಪ್ರದೇಶವನ್ನು ಈ ಕೌಂಟಿಯ ಆಡಳಿತ ಕೇಂದ್ರ ಎಂದು ಘೋಷಿಸಲಾಗಿದೆ. 

ಅಕ್ಸಾಯ್‌ ಚಿನ್‌ ಮೇಲೆ ಚೀನಾ ಕಣ್ಣೇಕೆ?

ಚೀನಾವು ಭಾರತದ ಗಡಿ ಪ್ರದೇಶದಲ್ಲಿ ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದೆ. ದಕ್ಷಿಣ ಟಿಬೆಟ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಅದು ಸಿದ್ಧತೆಯನ್ನೂ ನಡೆಸಿದೆ. ಲಡಾಖ್‌ಗೆ ಹೊಂದಿಕೊಂಡ ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಸತು, ಸೀಸ ನಿಕ್ಷೇಪಗಳು ಪತ್ತೆಯಾಗಿವೆ. ಈಗ ರಚಿಸಲಾಗಿರುವ ಹೆಯಾನ್‌ ಕೌಂಟಿಯ ಆಡಳಿತ ಕೇಂದ್ರ ಹಾಂಗ್‌ಲಿಯು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಲೀಥಿಯಂ, ಬೆರಿಲಿಯಂ ಸೇರಿದಂತೆ ಕೆಲವು ಅಪರೂಪದ ಲೋಹಗಳು, ಖನಿಜ ಸಂಪನ್ಮೂಲಗಳು ಹೇರಳವಾಗಿವೆ ಎಂದೂ ಹೇಳಲಾಗುತ್ತಿದೆ.

ಹಾಂಗ್‌ಲಿಯು ಪ್ರದೇಶದಲ್ಲಿ ಚೀನಾವು ಭಾರಿ ಪ್ರಮಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುತ್ತಿದ್ದು, ಅಲ್ಲಿ ಗಣಿಗಾರಿಕೆ ನಡೆಸುವ ಇರಾದೆ ಅದಕ್ಕಿದೆ ಎನ್ನಲಾಗುತ್ತಿದೆ. ಅಕ್ಸಾಯ್ ಚಿನ್ ಪ್ರದೇಶದಲ್ಲಿ ಜನ ವಸತಿ ಇಲ್ಲ. ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ವಲಸೆ ಕಾರ್ಮಿಕರು ಅಕ್ಸಾಯ್‌ ಚೀನಾ ಪ್ರದೇಶವನ್ನು ಪ್ರವೇಶಿಸುವ ಸಾಧ್ಯತೆ ಇದೆ. ತನ್ನ ಮಹತ್ವಾಕಾಂಕ್ಷೆಯ ಬೆಲ್ಟ್‌ ಆ್ಯಂಡ್‌ ರೋಡ್‌ ಯೋಜನೆಯ ಜಾಲವನ್ನು ಹೆಯಾನ್‌ ಕೌಂಟಿಯವರೆಗೂ ವಿಸ್ತರಿಸಿ, ಆ ಪ್ರದೇಶದಲ್ಲಿ ಆರ್ಥಿಕ ವಹಿವಾಟು ಹೆಚ್ಚಿಸುವ ಉದ್ದೇಶವೂ ಚೀನಾಕ್ಕೆ ಇರಬಹುದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಡಿ.18ರಂದು ಬೀಜಿಂಗ್‍ನಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು

ಲಡಾಖ್‌ ಮೇಲೆಯೂ ಕಣ್ಣು

ಕೌಂಟಿ ರಚನೆಯನ್ನು ವಿರೋಧಿಸಿ ಭಾರತವು ರಾಜತಾಂತ್ರಿಕ ವಿಧಾನದಲ್ಲಿ ದಾಖಲಿಸಿರುವ ಪ್ರತಿಭಟನೆ ಬಗ್ಗೆ ಚೀನಾ ವಾರ ಕಳೆದರೂ ಪ್ರತಿಕ್ರಿಯಿಸಿಲ್ಲ.

2019ರಲ್ಲಿ ಭಾರತವು ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ್ದಕ್ಕೆ ಚೀನಾ ತೀವ್ರವಾಗಿ ಆಕ್ಷೇಪಿಸಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಭಾರತವು ಲಡಾಖ್‌, ಕಾರ್ಗಿಲ್‌ ಮತ್ತು ಲೇಹ್‌ಗಳನ್ನು ವಿಭಜಿಸಿ ಐದು ಹೊಸ ಜಿಲ್ಲೆಗಳನ್ನು ರಚಿಸಿತ್ತು. ಇದು ಕೂಡ ಚೀನಾದ ಅಸಮಾಧಾನಕ್ಕೆ ಕಾರಣವಾಗಿತ್ತು. 

1892ರಿಂದ ಚೀನಾವು ಅಕ್ಸಾಯ್‌ ಚಿನ್‌ ಪ್ರದೇಶದಲ್ಲಿ ಅತಿಕ್ರಮಣ ನಡೆಸುತ್ತಾ ಬಂದಿದೆ. 1962ರಲ್ಲಿ ನಡೆದ ಯುದ್ಧದ ಬಳಿಕ ಚೀನಾ ಅಕ್ಸಾಯ್‌ ಚಿನ್‌ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಈಗಲೂ ಚೀನಾ ಲಡಾಖ್‌ನಲ್ಲಿ ಅತಿಕ್ರಮಣ ನಡೆಸುತ್ತಿದೆ ಎಂಬ ಆರೋಪ ಇದೆ. ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಅವರು ಇದರ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ. ಕಳೆದ ವರ್ಷ ಅವರು ದೊಡ್ಡ ಪ್ರತಿಭಟನೆಯನ್ನೂ ನಡೆಸಿದ್ದರು. 

ಆಧಾರ: ಪಿಟಿಐ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.