ಒಂದು ಕಾಲದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಗಳಲ್ಲಿ ‘ದೈತ್ಯ ಶಕ್ತಿ’ಯಾಗಿ ಜಾಗತಿಕ ಕ್ರಿಕೆಟ್‌ನ ಅನಭಿಷಿಕ್ತ ದೊರೆಯಾಗಿ ಮೆರೆದಿದ್ದ ವೆಸ್ಟ್ ಇಂಡೀಸ್ ತಂಡ ಈಗ ಈ ಎರಡೂ ಮಾದರಿಗಳಲ್ಲಿ ತಳ ಕಾಣುತ್ತಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಕೇವಲ 27 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ವೆಸ್ಟ್ ಇಂಡೀಸ್‌ನ ಈಗಿನ ದೈನ್ಯ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ. ಹಲವು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರನ್ನು ಹುಟ್ಟುಹಾಕಿದ್ದ ಕೆರೀಬಿಯನ್ ನಾಡಿನ ಕ್ರಿಕೆಟ್ ಅವನತಿಯತ್ತ ಸಾಗುತ್ತಿರುವಂತೆ ಕಾಣುತ್ತಿದೆ
ಅನಪೇಕ್ಷಿತ ಕಾರಣಗಳಿಂದಾಗಿಯೇ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇತ್ತೀಚಿನ ದಶಕಗಳಲ್ಲಿ ಆಗಾಗ ಸುದ್ದಿಯಲ್ಲಿದೆ. ಅದು ಸಾಗುತ್ತಿರುವ ಅವನತಿಯ ಹಾದಿ ಕ್ರಿಕೆಟ್ ಪ್ರೇಮಿಗಳಲ್ಲಿ ಮರುಕ ಮೂಡಿಸುವಂತಿದೆ. ಕೆರೀಬಿಯನ್ನರ ಅಧಃಪತನದ ಬಗ್ಗೆ ಸಾಕಷ್ಟು ವಿಮರ್ಶೆ, ವಿಶ್ಲೇಷಣೆಗಳೂ ನಡೆದಿವೆ. 2023ರ ಜೂನ್–ಜುಲೈನಲ್ಲಿ ಹರಾರೆಯಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ನೆದರ್ಲೆಂಡ್ಸ್, ಜಿಂಬಾಬ್ವೆ ತಂಡಗಳೆದುರು, ಕೊನೆಗೆ ಸ್ಕಾಟ್ಲೆಂಡ್ ವಿರುದ್ಧವೂ ಸೋತಿತ್ತು. ವಿಶ್ವ ಕಪ್‌ನಲ್ಲಿ ಎರಡು ಬಾರಿಯ ಚಾಂಪಿಯನ್, ಒಮ್ಮೆ ರನ್ನರ್ ಅಪ್ ಆಗಿದ್ದ ತಂಡ ಹೊರಬಿದ್ದಾಗ ಅಭಿಮಾನಿಗಳು ವ್ಯಥೆಪಟ್ಟಿದ್ದರು.
ಈಗ ಟೆಸ್ಟ್ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಮೊತ್ತಕ್ಕೆ– ಕೇವಲ 27 ರನ್‌ಗಳಿಗೆ ಉರುಳಿರುವುದು ತಂಡಕ್ಕೆ ಮುಖಭಂಗ ಉಂಟುಮಾಡಿದೆ. ನ್ಯೂಜಿಲೆಂಡ್ (26) ಮಾತ್ರ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿತ್ತು. ಕಳೆದ ಭಾನುವಾರ ರಾತ್ರಿ ವೆಸ್ಟ್ ಇಂಡೀಸ್ ತಂಡಕ್ಕೆ ಒಂದು ಇನಿಂಗ್ಸ್‌ನಲ್ಲಿ 15 ಪೂರ್ಣ ಓವರುಗಳನ್ನೂ ಆಡಲಾಗಲಿಲ್ಲ ಎನ್ನುವುದು ದುರಂತ. ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಹಗಲು ರಾತ್ರಿ ಟೆಸ್ಟ್‌ನ ಮೂರನೇ ದಿನ ವೆಸ್ಟ್ ಇಂಡೀಸ್ ಪಾಲಿಗೆ ದುಃಸ್ವಪ್ನವಾಯಿತು. ನೂರನೇ ಟೆಸ್ಟ್‌ನಲ್ಲಿ ಅತಿ ವೇಗದ ಪಂಚಗೊಂಚಲು ಪಡೆದು ಮಿಂಚಿದ ಮಿಚೆಲ್ ಸ್ಟಾರ್ಕ್ (9ಕ್ಕೆ 6), ಹ್ಯಾಟ್ರಿಕ್ ಸಾಧಿಸಿದ ಸ್ಕಾಟ್ ಬೋಲ್ಯಾಂಡ್ (2ಕ್ಕೆ 3) ವೇಗದ ದಾಳಿಗೆ ವೆಸ್ಟ್ ಇಂಡೀಸ್ ಆಟಗಾರರು ತರಗೆಲೆಗಳಂತೆ ಉದುರಿದರು. ಫ್ರಾಂಕ್ ವೊರೆಲ್ ಟ್ರೋಫಿ ಸರಣಿಯಲ್ಲಿ ಆ ತಂಡವನ್ನು ತವರು ನೆಲದಲ್ಲೇ ಆಸ್ಟ್ರೇಲಿಯಾ ತಂಡ 3–0 ಯಿಂದ ಹೊಸಕಿಹಾಕಿದ ರೀತಿ ಅದು ಸಾಗಿರುವ ಅವನತಿಯ ಹಾದಿಗೆ ಕನ್ನಡಿ.
ದೈತ್ಯ ಶಕ್ತಿ: ವೆಸ್ಟ್ ಇಂಡೀಸ್ ಕ್ರಿಕೆಟ್ ಎಂದಾಕ್ಷಣ ‘ದೈತ್ಯರು’ ಎಂಬ ವಿಶೇಷಣ ಬಳಸುವುದು ಮಾಮೂಲಿಯಾಗಿತ್ತು. ದೈಹಿಕವಾಗಿ ಮಾತ್ರವಲ್ಲ, ತಮ್ಮ ಆಟದ ಬಲದಿಂದಲೂ ಅವರು ಈ ಆಟದಲ್ಲಿ ದೈತ್ಯಶಕ್ತಿಯೇ ಆಗಿದ್ದರು. ಆದರೆ ಅದು ಗತವೈಭವವಾಗಿ ದಶಕಗಳೇ ಉರುಳಿವೆ. ತಂಡ ಹಲವು ಕಾರಣಗಳಿಂದಾಗಿ ನಿಶ್ಶಕ್ತಗೊಳ್ಳುತ್ತಾ ಸಾಗಿದೆ.
ಆರಂಭ ಆಟಗಾರರಾದ ಗಾರ್ಡನ್ ಗ್ರೀನಿಜ್, ಡೆಸ್ಮಂಡ್ ಹೇನ್ಸ್, ಮಧ್ಯಮ ಕ್ರಮಾಂಕದಲ್ಲಿ ಲ್ಯಾರಿ ಗೋಮ್ಸ್, ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಅಲ್ವಿನ್ ಕಾಳಿಚರಣ್, ಡೆರೆಕ್ ಮರ್‍ರೆ ಜೆಫ್ ಡ್ಯುಜಾನ್ (ವಿಕೆಟ್ ಕೀಪರ್), ವೇಗದ ಪಡೆಯಲ್ಲಿ ಮಾಲ್ಕಂ ಮಾರ್ಷಲ್, ಮೈಕೆಲ್ ಹೋಲ್ಡಿಂಗ್, ಜೋಲ್ ಗಾರ್ನರ್, ಆ್ಯಂಡಿ ರಾಬರ್ಟ್ಸ್, ಕಾಲಿನ್ ಕ್ರಾಫ್ಟ್ ಅವರನ್ನು ಒಳಗೊಂಡ ತಂಡ ಏಕದಿನದಂತೆ ಟೆಸ್ಟ್ ಕ್ರಿಕೆಟ್‌ನಲ್ಲೂ ವಿಶ್ವವಿಜೇತವಾಗಿತ್ತು. ಅವರಿಗಿಂತ ಹಿಂದೆ ರೋಹನ್ ಕನ್ಹಾಯ್, ಗ್ಯಾರಿ ಸೋಬರ್ಸ್, ಸ್ಪಿನ್ನರ್ ಲ್ಯಾನ್ಸ್ ಗಿಬ್ಸ್ ತಂಡದ ಹೆಸರನ್ನು ಬೆಳಗಿದ್ದರು. 1984ರಿಂದ 1986ರ ಅವಧಿಯಲ್ಲಿ ವೆಸ್ಟ್ ಇಂಡೀಸ್ ಸತತ 11 ಟೆಸ್ಟ್ ಸರಣಿಗಳನ್ನು ಗೆದ್ದಿತ್ತು. ಸತತ 27 ಟೆಸ್ಟ್‌ಗಳಲ್ಲಿ ಸೋಲೇ ಕಂಡಿರಲಿಲ್ಲ.
40ನೇ ವಯಸ್ಸಿನವರೆಗೆ ಆಡಿದ ಲಾಯ್ಡ್ ಸಮರ್ಥ ನಾಯಕರಾಗಿ ಹೆಸರು ಮಾಡಿದವರು. ವಿವಿಯನ್ ರಿಚರ್ಡ್ಸ್ ಯಾವುದೇ ದಾಳಿಯನ್ನು ದಂಡಿಸಬಲ್ಲ ದೈತ್ಯ ಆಟಗಾರ. ಟಿ20 ಕ್ರಿಕೆಟ್ ಹುಟ್ಟುವ ಸುಮಾರು 20 ವರ್ಷ ಮೊದಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ (1986ರಲ್ಲಿ ಇಂಗ್ಲೆಂಡ್ ವಿರುದ್ಧ 56 ಎಸೆತಗಳಲ್ಲಿ) ಸಿಡಿಸಿದ್ದು ಅಂದಿನ ದಿನಗಳಲ್ಲಿ ಗಮನ ಸೆಳೆದಿತ್ತು. ಬ್ರೆಂಡನ್ ಮೆಕ್ಕಲಂ ಅದನ್ನು ಮುರಿಯುವ ಮೊದಲು 30 ವರ್ಷ ಆ ದಾಖಲೆ ಉಳಿದಿತ್ತು.
ಕೆರೀಬಿಯನ್ ನಾಡಿನಲ್ಲಿ ನಂತರದ ವರ್ಷಗಳಲ್ಲಿ ತಾರಾ ವರ್ಚಸ್ಸಿನ ಆಟಗಾರರು ಆ ಪ್ರಮಾಣದಲ್ಲಿ ಮೂಡಲಿಲ್ಲ. ಅವರ ಸಂಖ್ಯೆ ಕಡಿಮೆಯಾಗತೊಡಗಿತು. ಆರಂಭ ಆಟಗಾರ ಬ್ರಯನ್ ಲಾರಾ ದಾಖಲೆಗಳನ್ನು ಸ್ಥಾಪಿಸಿದರು. ಪ್ರಥಮ ದರ್ಜೆಯಲ್ಲಿ ಅಜೇಯ 501, ಟೆಸ್ಟ್ ಕ್ರಿಕೆಟ್‌ನಲ್ಲಿ ಅಜೇಯ 400 ರನ್ ಈಗಲೂ ದಾಖಲೆಯಾಗಿ ಉಳಿದಿವೆ. ಕೆಲಕಾಲ ಅವರನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಕೆ ಮಾಡಲಾಗಿತ್ತು. ಲಾರಾ ತಮ್ಮ ಸಾಹಸದಿಂದಲೇ ಕೆಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟರು. ಬ್ಯಾಟರ್‌ಗಳಾದ ರಿಚಿ ರಿಚರ್ಡ್‌ಸನ್, ಶಿವನಾರಾಯಣ ಚಂದ್ರಪಾಲ್, ಜಿಮ್ಮಿ ಆ್ಯಡಮ್ಸ್, ಕ್ರಿಸ್ ಗೇಲ್, ಬೌಲರ್‌ಗಳಾದ ಕೋರ್ಟ್ನಿ ವಾಲ್ಶ್, ಕರ್ಟ್ಲಿ ಆ್ಯಂಬ್ರೋಸ್, ಇಯಾನ್ ಬಿಷಪ್, ಆಲ್‌ರೌಂಡರ್‌ಗಳಾದ ರೋಜರ್ ಹಾರ್ಪರ್, ಕಾರ್ಲ್ ಹೂಪರ್, ರೋಲಂಡ್ ಹೋಲ್ಡರ್, ಡ್ಯಾರೆನ್ ಸಮಿ, ಕ್ರೇಗ್ ಬ್ರಾಥ್‌ವೇಟ್ ಹೀಗೆ ವಿವಿಧ ಅವಧಿಗಳಲ್ಲಿ ಪ್ರಮುಖ ಕ್ರಿಕೆಟಿಗರು ಮೂಡಿದರು. ಈಗ ನಿಕೋಲಸ್ ಪೂರನ್, ಶಾಯ್ ಹೋಪ್, ಕೆಮಾರ್ ರೋಚ್ ಅಂಥ ಆಟಗಾರರು ಟಿ20 ಕ್ರಿಕೆಟ್‌ನತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪೂರನ್ 29ನೇ ವಯಸ್ಸಿಗೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಫ್ರಾಂಚೈಸಿ ಕ್ರಿಕೆಟ್‌ನತ್ತ ಗಮನಹರಿಸಲು.
ಹೆಚ್ಚಿನ ಆಟಗಾರರು ಟಿ20ಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ವೆಸ್ಟ್ ಇಂಡೀಸ್ ಎರಡು ಬಾರಿ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಯಿತು. ಆದರೆ ಇತರ ಎರಡು ಮಾದರಿಗಳಲ್ಲಿ ಇನ್ನಷ್ಟು ಹಿನ್ನಡೆ ಕಾಣುತ್ತ ಹೋಯಿತು.
ನಿರೀಕ್ಷಿತವೇ ಆಗಿದ್ದ ಹಿನ್ನಡೆ: ವೆಸ್ಟ್‌ಇಂಡೀಸ್ ಟೆಸ್ಟ್‌ನಲ್ಲಿ ಹಿನ್ನಡೆ ಸಾಧಿಸುತ್ತಿರುವುದು ಅಂಕಿ ಅಂಶಗಳಿಂದ ಮನದಟ್ಟಾಗುತ್ತದೆ. ಅದು 2000ದಿಂದ ಈಚೆಗೆ ಆಡಿರುವ 87 ಟೆಸ್ಟ್‌ಗಳಲ್ಲಿ ಗೆದ್ದಿರುವುದು 23ರಲ್ಲಿ ಮಾತ್ರ. ಇವುಗಳಲ್ಲಿ ಬಹುತೇಕ ಗೆಲುವು ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ವಿರುದ್ಧ ದಾಖಲಾಗಿತ್ತು.
ಇನ್ನು ಹಾಲಿ ಸರಣಿಯ ಕಡೆ ಗಮನಹರಿಸಿದರೆ, ಬೌಲರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಆಸ್ಟ್ರೇಲಿಯಾ ತಂಡ ಅನುಭವಿಗಳಿಂದ ಕೂಡಿತ್ತು. ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನಲ್ಲಿದ್ದರೆ, ವೆಸ್ಟ್ ಇಂಡೀಸ್ ಎಂಟನೇ ಸ್ಥಾನದಲ್ಲಿದೆ. ಕಾಂಗರೂ ಪಡೆಯ ನಾಲ್ವರು ಪ್ರಮುಖ ಬ್ಯಾಟರ್‌ಗಳು (ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ ಮತ್ತು ಉಸ್ಮಾನ್ ಖ್ವಾಜಾ) ಅಗ್ರ 20ರಲ್ಲಿದ್ದರು. ವೆಸ್ಟ್ ಇಂಡೀಸ್ ತಂಡದಲ್ಲಿ ಒಬ್ಬ ಬ್ಯಾಟರ್ ಸಹ ಅಗ್ರ 50ರಲ್ಲಿರಲಿಲ್ಲ.
ಬೌಲರ್‌ಗಳಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ತಮ್ಮ ನಡುವೆ 700 ವಿಕೆಟ್ ಹಂಚಿಕೊಂಡವರು. ವೆಸ್ಟ್ ಇಂಡೀಸ್ ಬೌಲರ್‌ಗಳ ಪೈಕಿ ಅಲ್ಜಾರಿ ಜೋಸೆಫ್ ಮಾತ್ರ ನೂರಕ್ಕಿಂತ ಹೆಚ್ಚು ವಿಕೆಟ್ ಪಡೆದವರು. ಟೆಸ್ಟ್ ರ‍್ಯಾಂಕಿಂಗ್ ಅಗ್ರ 10ರಲ್ಲಿ ಆಸ್ಟ್ರೇಲಿಯಾದ ನಾಲ್ಕು ಮಂದಿ ಇಲ್ಲಿ ಆಡಿದ್ದರು. ವೆಸ್ಟ್ ಇಂಡೀಸ್‌ನ ಒಬ್ಬ ಬೌಲರ್ ಕೂಡ ಅಗ್ರ 10ರಲ್ಲಿ ಇರಲಿಲ್ಲ. ಜೇಡನ್ ಸೀಲ್ಸ್ 11ನೇ ಕ್ರಮಾಂಕ ಹೊಂದಿದ್ದರು. (ಜುಲೈ 12ರ ಐಸಿಸಿ ರ‍್ಯಾಂಕಿಂಗ್ ಪ್ರಕಾರ).
ಹೀಗಾಗಿ, ಆಸ್ಟ್ರೇಲಿಯಾ ತಂಡ ಬಲಾಢ್ಯವೇ ಆಗಿತ್ತು. ಆದರೆ ವೆಸ್ಟ್ ಇಂಡೀಸ್ ಇಷ್ಟು ಹೀನಾಯ ಸೋಲಿಗೆ ಒಳಗಾಗಲು ಎದುರಾಳಿಗಳ ಪರಿಣಾಮಕಾರಿ ಬೌಲಿಂಗ್ ಜೊತೆಗೆ, ಅದರ ಕೆಟ್ಟ ಬ್ಯಾಟಿಂಗ್‌ನ ಕೊಡುಗೆಯೂ ಇದೆ. ಅಗ್ರ ಬ್ಯಾಟರ್‌ಗಳು ಪರೇಡ್ ಮಾಡಿದ ನಂತರ, ಬೌಲರ್‌ಗಳಾದ ಅಲ್ಜಾರಿ ಜೋಸೆಫ್ ಮತ್ತು ಜಸ್ಟಿನ್ ಗ್ರೀವ್ಸ್ ಕ್ರಮವಾಗಿ 24 ಮತ್ತು 28 ಎಸೆತಗಳನ್ನು ಆಡಿದ್ದರು. ಇದೂ ಅಗ್ರ ಆಟಗಾರರ ವೈಫಲ್ಯ ತೋರಿಸುತ್ತದೆ.
ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಕಾಯಕಲ್ಪ ಆಗಬೇಕಾಗಿದೆ. ಟೆಸ್ಟ್, ಏಕದಿನ ಕ್ರಿಕೆಟ್ ಬೆಳೆಯಲು ಪೂರಕ ವಾತಾವರಣ ನಿರ್ಮಿಸಬೇಕಾಗಿದೆ. ತಂಡಕ್ಕೆ ಸ್ಫೂರ್ತಿಯುತ ನಾಯಕತ್ವದ ಜೊತೆಗೆ, ದೇಶಕ್ಕೆ ಆಡುವಂತೆ ಪ್ರತಿಭಾನ್ವಿತ ಆಟಗಾರರ ಮನವೊಲಿಸಬೇಕಾಗಿದೆ. ಆಟಗಾರರ ಅಶಿಸ್ತಿನ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗಿದೆ. ಇದೆಲ್ಲದರ ಜೊತೆ ಆಟಗಾರರ ಸಂಭಾವನೆ ಹೆಚ್ಚಿಸುವುದು ಮಂಡಳಿಯ ಮುಂದಿರುವ ದೊಡ್ಡ ಸವಾಲು. ದೇಶದ ದಿಗ್ಗಜ ಆಟಗಾರರನ್ನು ಒಳಗೊಳ್ಳುವತ್ತ ಮಂಡಳಿ ಈಗ ಹೆಜ್ಜೆಯಿಟ್ಟರುವುದು ಒಳ್ಳೆಯ ಬೆಳವಣಿಗೆ.
ಕಾರಣಗಳೇನು?
ವೆಸ್ಟ್ ಇಂಡೀಸ್ ಕ್ರಿಕೆಟ್ ಸೊರಗಿಹೋಗಲು ಪ್ರಮುಖ ಕಾರಣಗಳು– ಹೇರಳ ಹಣ, ಜನಪ್ರಿಯತೆ ತಂದುಕೊಡುವ ಟಿ20 ಫ್ರಾಂಚೈಸಿ ಲೀಗ್‌ನತ್ತ ಹೆಚ್ಚಿದ ಆಕರ್ಷಣೆ, ಹಿಂದಿನ ತಲೆಮಾರುಗಳಿಗೆ ಹೋಲಿಸಿದಲ್ಲಿ ಕೆರೀಬಿಯನ್ ನಾಡಿನಲ್ಲಿ ಕ್ರಿಕೆಟ್ ಆಸಕ್ತಿ, ಅಭಿಮಾನ ಕಡಿಮೆಯಾಗಿರುವುದು, ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯುವಂಥ ತಾರಾ ಆಟಗಾರರ ಕೊರತೆ, ತಂಡ ವಿವಿಧ ದ್ವೀಪಗಳಲ್ಲಿ ಹಂಚಿಹೋಗಿರುವುದು, ಮಂಡಳಿ ಆರ್ಥಿಕವಾಗಿ ದುರ್ಬಲವಾಗಿರುವುದು... ಇದರಿಂದಾಗಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ನಿಶ್ಶಕ್ತವಾಗುತ್ತ ಸಾಗಿದೆ. ಮಂಡಳಿಗೆ ಆಟಗಾರರ ಮೇಲೆ ಹಿಡಿತವಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ಈ ಆಟದ ಜನಪ್ರಿಯತೆ ಕಡಿಮೆಯಾದ ಮೇಲೆ ಹಣಕಾಸು ಹರಿವೂ ಕ್ಷೀಣವಾಗತೊಡಗಿದೆ. ಇದರಿಂದಾಗಿ ಬೇರೆ ದೇಶಗಳ ತಂಡಗಳು ಪ್ರವಾಸ ಮಾಡುವುದು ಕಡಿಮೆಯಾಗಿದೆ.
ದಿಗ್ಗಜರ ಕಡೆ ಮುಖ...
ತಂಡದ ಹಿನ್ನಡೆಯಿಂದ ಕಂಗಾಲಾಗಿರುವ ಆಯ್ಕೆ ಸಮಿತಿ, ಈ ಹಿಂದೆ ತಂಡದ ಸುವರ್ಣ ಯುಗ ಕಂಡಿದ್ದ ದಿಗ್ಗಜ ಆಟಗಾರರ ಮೊರೆಹೋಗಿದೆ. ಕ್ಲೈವ್ ಲಾಯ್ಡ್, ವಿವಿಯನ್ ರಿಚರ್ಡ್ಸ್ ಮತ್ತು ಬ್ರಯನ್ ಲಾರಾ ಅವರ ನೆರವು ಕೋರಿದೆ. ಪರಿವರ್ತನೆಯ ಹಾದಿಯಲ್ಲಿರುವ ತಂಡವನ್ನು ಉತ್ತಮಗೊಳಿಸಲು ಎಲ್ಲರೂ ಸೇರಿ ಯೋಜನೆ ರೂಪಿಸಲಿದ್ದಾರೆ ಎಂದು ಅಧ್ಯಕ್ಷ ಕಿಶೋರ್ ಶಾಲೊ ಹೇಳಿದ್ದಾರೆ.
ಮಾಜಿ ಆರಂಭ ಆಟಗಾರ ಡೆಸ್ಮಂಡ್ ಹೇನ್ಸ್ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯಲ್ಲಿ ಶಿವನಾರಾಯಣ ಚಂದ್ರಪಾಲ್ ಅವರೂ ಇದ್ದಾರೆ. ಸಂಕಷ್ಟದಿಂದ ತಂಡವನ್ನು ಮೇಲೆತ್ತಲು ಹೊಣೆ ಈಗ ದಿಗ್ಗಜರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.