ADVERTISEMENT

ವಿದೇಶ ವಿದ್ಯಮಾನ: ಮತ್ತೊಂದು ಅಂತಃಕಲಹದ ಹೊಸ್ತಿಲಲ್ಲಿ ಪಾಕಿಸ್ತಾನ?

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 23:30 IST
Last Updated 28 ನವೆಂಬರ್ 2024, 23:30 IST
   
ಪಾಕಿಸ್ತಾನದಲ್ಲಿ ಮತ್ತೆ ಕ್ಷೋಭೆ ಉಂಟಾಗಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಶೆಹಬಾಜ್ ಶರೀಫ್ ಸರ್ಕಾರದ ನಿದ್ದೆ ಕೆಡಿಸಿದ್ದಾರೆ. ಸರ್ಕಾರಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಸೇನೆ ಬೆಚ್ಚಿಬಿದ್ದಿದೆ. ಇಮ್ರಾನ್‌ ಮಾತಿಗೆ ದೇಶದ ಜನ ಎಷ್ಟರ ಮಟ್ಟಿಗೆ ಗೌರವ ಕೊಡುತ್ತಾರೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸರಳುಗಳ ಹಿಂದೆ ಇದ್ದರೂ ಇಮ್ರಾನ್ ಪಾಕಿಸ್ತಾನದ ಅತ್ಯಂತ ಪ್ರಬಲ ನಾಯಕರಾಗಿದ್ದಾರೆ ಎನ್ನುವುದನ್ನು ಈಗಿನ ಬೆಳವಣಿಗೆಗಳು ತೋರುತ್ತಿವೆ. ಸದ್ಯಕ್ಕೆ ಭಾರಿ ಹಿಂಸಾಚಾರ ತಪ್ಪಿದ್ದರೂ ಈಗಿನ ವಿದ್ಯಮಾನಗಳು ಸರ್ಕಾರಕ್ಕೆ ಮತ್ತು ಸೇನೆಗೆ ಎಚ್ಚರಿಕೆಯ ಸಂದೇಶ ರವಾನಿಸಿವೆ

1992ರ ವಿಶ್ವಕಪ್ ಕ್ರಿಕೆಟ್‌ನ ಹೀರೋ, ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖಂಡ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಜನ ಅಷ್ಟು ಸುಲಭಕ್ಕೆ ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಪ್ರಧಾನಿ ಹುದ್ದೆಯಿಂದ ಅವರನ್ನು ಕೆಳಗಿಳಿಸಿ ಎರಡು ವರ್ಷವಾಗಿದೆ. ವಿವಿಧ ಆರೋಪಗಳ ಅಡಿ ಇಮ್ರಾನ್ ಜೈಲು ಸೇರಿ ವರ್ಷದ ಮೇಲಾಗಿದೆ. ಆದರೂ ಜನ ಅವರ ಮೇಲಿನ ವಿಶ್ವಾಸ ಕಳೆದುಕೊಂಡಿಲ್ಲ. ಸದ್ಯ ಪಾಕ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇಮ್ರಾನ್ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಹಾಗೆಯೇ ದೇಶದಲ್ಲಿ ಮತ್ತೊಂದು ಅಂತರ್ಯುದ್ಧದ ಅಪಾಯವನ್ನೂ ತೋರುತ್ತಿವೆ.

ಪಾಕಿಸ್ತಾನದ ಪ್ರಧಾನಿ ಆಗಿದ್ದ 72 ವರ್ಷದ ಇಮ್ರಾನ್ ಖಾನ್ ಅವರನ್ನು 2022ರಲ್ಲಿ ಅವಿಶ್ವಾಸ ಮಂಡಿಸಿ ಪದವಿಯಿಂದ ಕೆಳಗಿಳಿಸಲಾಗಿತ್ತು. ನಂತರ 2023ರ ಮೇ 9ರಂದು ಮೊದಲ ಬಾರಿಗೆ ಇಮ್ರಾನ್ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಅಷ್ಟಕ್ಕೇ ನಿಲ್ಲದೇ ಅವರ ಪಕ್ಷದ ಚಿಹ್ನೆಯನ್ನೇ ರದ್ದುಪಡಿಸಲಾಯಿತು. ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐ ಅಧಿಕಾರಕ್ಕೇರುವುದನ್ನು ತಡೆಯುವುದಕ್ಕಾಗಿಯೇ ಇಮ್ರಾನ್ ವಿರುದ್ಧ ವಿರೋಧ ಪಕ್ಷಗಳು ಮತ್ತು ಸೇನೆ ಪಿತೂರಿ ನಡೆಸಿವೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೂ ಜನ ಇಮ್ರಾನ್ ಅವರ ಕೈಬಿಡಲಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದರು. ಇಮ್ರಾನ್ ಪ್ರಧಾನಿ ಆಗುವುದು ತೆರೆಯ ಹಿಂದಿನ ಸೂತ್ರಧಾರನಾದ ಸೇನೆಗೆ ಇಷ್ಟವಿರಲಿಲ್ಲ. ಸೇನೆಯ ಇಚ್ಛೆಗೆ ವಿರುದ್ಧವಾಗಿ ಅಲ್ಲಿ ಸರ್ಕಾರ ಸ್ಥಾಪನೆ ಮಾಡುವುದು ಅಸಾಧ್ಯ. ಹೀಗಾಗಿಯೇ ಸೇನೆಯ ಬೆಂಬಲದೊಂದಿಗೆ ಪ್ರಧಾನಿ ಆಗಿ ಪಾಕಿಸ್ತಾನ್ ಮುಸ್ಲಿಂ ಲೀಗ್‌ ನವಾಜ್
(ಪಿಎಂಎಲ್‌–ಎನ್) ಮುಖಂಡ ಶೆಹಭಾಜ್ ಶರೀಫ್ ಅಧಿಕಾರ ಹಿಡಿದರು. 

ಒಂದೆಡೆ, ಕೈತಪ್ಪಿದ ಅಧಿಕಾರ. ಇನ್ನೊಂದೆಡೆ, ಒಂದಾದ ಮೇಲೊಂದರಂತೆ ದಾಖಲಾಗುತ್ತಿದ್ದ ಪ್ರಕರಣಗಳು. ಕೆಲವೇ ತಿಂಗಳಲ್ಲಿ ಇಮ್ರಾನ್ ವಿರುದ್ಧ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಬುಶ್ರಾ ಬೀಬಿ ಅವರೊಂದಿಗಿನ ಇಮ್ರಾನ್ ಮದುವೆಯನ್ನೂ ಕಾನೂನುಬಾಹಿರ ಎನ್ನಲಾಯಿತು. ಇಮ್ರಾನ್ ಜತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರನ್ನೂ ಜೈಲಿಗೆ ಹಾಕಲಾಯಿತು. ಅಲ್ಲಿಗೆ ಇಮ್ರಾನ್ ಕಥೆ ಮುಗಿಯಿತು ಎಂದೇ ಹೆಚ್ಚಿನವರು ಭಾವಿಸಿದ್ದರು. ಆದರೆ, ‘ನಾನು ಮಣಿಯುವುದಿಲ್ಲ, ತಲೆ ಬಾಗುವುದಿಲ್ಲ’ ಎಂದು ಸರಳುಗಳ ಹಿಂದಿನಿಂದಲೇ ಘೋಷಿಸಿದರು ಇಮ್ರಾನ್. ಅವರ ಘೋಷಣೆ ಕೇವಲ ಹೇಳಿಕೆ ಆಗಿರಲಿಲ್ಲ; ಒಂದು ರಾಜಕೀಯ ತಂತ್ರವಾಗಿತ್ತು. 

ADVERTISEMENT

ಜಗತ್ತಿನ ಅತ್ಯುತ್ತಮ ಕ್ರಿಕೆಟ್‌ ಆಟಗಾರರಲ್ಲಿ ಒಬ್ಬರಾಗಿದ್ದ ಇಮ್ರಾನ್‌ ಆಟದ ಒತ್ತಡ, ಗೆಲುವಿನ ಸಂಭ್ರಮ, ಸೋಲಿನ ಅವಮಾನ, ಸೋಲಿನ ಸ್ಥಿತಿಯಿಂದ ಪುಟಿದೇಳುವ ರೀತಿ ಎಲ್ಲವನ್ನೂ ಅನುಭವಿಸಿದ್ದವರು. 1992ರ ವಿಶ್ವಕಪ್ ಗೆದ್ದ ನಂತರ ಇಮ್ರಾನ್ ಜನಪ್ರಿಯತೆ ಉತ್ತುಂಗಕ್ಕೇರಿತ್ತು. ಇಷ್ಟಾದರೂ ಪಾಕಿಸ್ತಾನದ ಪ್ರಧಾನಿ ಪಟ್ಟದವರೆಗಿನ ಅವರ ನಡಿಗೆ ಸುಲಭದ್ದೇನೂ ಆಗಿರಲಿಲ್ಲ. 1996ರಲ್ಲಿ ಪಿಟಿಐ ಪಕ್ಷ ಸ್ಥಾಪಿಸಿದರೂ ಅವರು ಅಧಿಕಾರದ ಗದ್ದುಗೆ ಏರಲು ನಿರಂತರ 12 ವರ್ಷ ಶ್ರಮಿಸಬೇಕಾಯಿತು. 2018ರಲ್ಲಿ ಪ್ರಧಾನಿ ಆದರೂ ಅವಧಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ (ಪಾಕಿಸ್ತಾನ ರಚನೆ ಆದಾಗಿನಿಂದಲೂ ಯಾವ ಪ್ರಧಾನಿಯೂ ತಮ್ಮ ಅವಧಿ ಪೂರ್ಣಗೊಳಿಸಿಲ್ಲ). 

ಅಧಿಕಾರದಿಂದ ಕೆಳಗಿಳಿದಿದ್ದರೂ ನೂರಾರು ಪ್ರಕರಣಗಳನ್ನು ಎದುರಿಸುತ್ತಿದ್ದರೂ ಪಾಕಿಸ್ತಾನದ ಜನರ ನಡುವೆ ಇಮ್ರಾನ್ ಜನಪ್ರಿಯತೆ ಕಡಿಮೆ ಆಗಿರಲಿಲ್ಲ. ಇದರ ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಇಮ್ರಾನ್ ಅವರ ಜೈಲು ಸುದ್ದಿ, ಕೋರ್ಟ್ ವಿಚಾರಣೆ ಇತ್ಯಾದಿ ಮಾಹಿತಿಯನ್ನು ಪಿಟಿಐ ಪಕ್ಷವು ಅತ್ಯಂತ ಯಶಸ್ವಿಯಾಗಿ ಜನರಿಗೆ ಮುಟ್ಟಿಸುತ್ತಿತ್ತು. ಅವರನ್ನು ಶೆಹಬಾಜ್ ಶರೀಫ್ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಜನರಲ್ಲಿ ಅಸಮಾಧಾನ ಇತ್ತು. 2023ರಲ್ಲಿ ಅವರನ್ನು ಮೊದಲ ಬಾರಿ ಬಂಧಿಸಿದಾಗ ದೇಶದ ಹಲವು ಭಾಗಗಳಲ್ಲಿ ಜನ ಬೀದಿಗಿಳಿದು ಪ್ರತಿಭಟಿಸಿದ್ದರು. ಸೇನೆಯ ಕಚೇರಿಗಳ ಮೇಲೆ, ಕಟ್ಟಡಗಳ ಮೇಲೆ ದಾಳಿಯನ್ನೂ ನಡೆಸಿದ್ದರು. ನಂತರ ಆಗಿಂದಾಗ್ಗೆ ಇಮ್ರಾನ್ ಬೆಂಬಲಿಗರು ಮತ್ತು ಸರ್ಕಾರದ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಪಾಕಿಸ್ತಾನದ ಸಂಸತ್ ಭವನದ ಸನಿಹದಲ್ಲೇ ಪಿಟಿಐ ಪಕ್ಷದ ಸಂಸದರನ್ನು ಬಂಧಿಸಲಾಯಿತು. ಪ್ರತಿಭಟನಕಾರರನ್ನು ಗಮನದಲ್ಲಿಟ್ಟುಕೊಂಡೇ ಜನ ಗುಂಪು ಸೇರುವುದನ್ನು ನಿಷೇಧಿಸಿ ಹೊಸ ಕಾಯ್ದೆ ಜಾರಿಗೆ ತರಲಾಯಿತು. ಆದರೂ ಪ್ರತಿಭಟನೆಗಳು ನಿಲ್ಲಲಿಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರವೂ ಅದರ ಮುಂದುವರಿದ ಭಾಗವೇ ಆಗಿವೆ.

‘ಅಕ್ರಮ ಕಾಯ್ದೆ ರದ್ದಾಗಬೇಕು. ಚುನಾವಣೆಯಲ್ಲಿ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು, ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಬೇಕು. ಅದಕ್ಕಾಗಿ ಪಾಕಿಸ್ತಾನದ ಜನ ನ.24ರಂದು ದೇಶದಾದ್ಯಂತ ಪ್ರತಿಭಟನೆ ಮಾಡಬೇಕು’ ಎಂದು ಇಮ್ರಾನ್ ಖಾನ್‌ ನ.13ರಂದು ಕರೆ ನೀಡಿದರು. ಜನ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದರು. ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಸಂಸತ್ ಭವನ ಸೇರಿದಂತೆ ಸರ್ಕಾರದ ಪ್ರಮುಖ ಕಚೇರಿಗಳಿರುವ, ಚಾರಿತ್ರಿಕವಾದ ರ‍್ಯಾಲಿಗಳು ನಡೆದ ಸ್ಥಳವಾಗಿರುವ ಡಿ ಚೌಕದತ್ತ ಸಾವಿರಾರು ಪ್ರತಿಭಟನಕಾರರು ಸಾಗತೊಡಗಿದರು. ಇಮ್ರಾನ್ ಅವರ ಪತ್ನಿ ಬುಶ್ರಾ ಬೀಬಿ ಹಾಗೂ ಖೈಬರ್‌ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್‌ ಗಂಡಾಪುರ್‌ ಇದರ ನೇತೃತ್ವ ವಹಿಸಿದರು. ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಕಂಟೇನರ್‌ಗಳನ್ನು ಅಡ್ಡ ನಿಲ್ಲಿಸಿದರೆ, ಜೆಸಿಪಿಗಳ ನೆರವಿನಿಂದ ಅವನ್ನು ದೂರ ಸರಿಸಿ, ಮುನ್ನುಗ್ಗತೊಡಗಿದರು. ಈ ಸಂಘರ್ಷದಲ್ಲಿ ಹಲವರು ಸಾವಿಗೀಡಾಗಿದ್ದಾರೆ.

ಕೊನೆಗೆ, ನ. 27ರ ರಾತ್ರಿ ಸೇನೆ ಮತ್ತು ಪೊಲೀಸರು ಬಲ ಪ್ರಯೋಗಿಸಿ ಇಸ್ಲಾಮಾಬಾದ್‌ನ ‘ಕೆಂಪು ವಲಯ’ದಿಂದ ಪ್ರತಿಭಟನಕಾರರನ್ನು ಹೊರಹಾಕಿದ್ದಾರೆ. ಪೊಲೀಸ್ ದಾಳಿಗೆ ಬೆದರಿ ಬುಶ್ರಾ ಬೀಬಿ ಮತ್ತು ಅಲಿ ಅಮೀನ್ ಗುಂಡಾಪುರ್ ಕಾಲ್ಕಿತ್ತಿದ್ದಾರೆ ಎಂದು ಸರ್ಕಾರ ಹೇಳಿದೆ. ಫ್ಯಾಸಿಸ್ಟ್ ಸರ್ಕಾರವು ಕಾರ್ಯಕರ್ತರ ‘ಹತ್ಯಾಕಾಂಡ’ ನಡೆಸಿದೆ ಎಂದು ಪಿಟಿಐ ಆರೋಪಿಸಿದೆ. ಸಂಘರ್ಷ ತೀವ್ರವಾದ ನಂತರ ಪಿಟಿಐ ಡಿ ಚೌಕದಲ್ಲಿನ ಪ್ರತಿಭಟನೆ ಹಿಂಪಡೆದಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿರುವಂತೆ ಕಂಡರೂ ಆಳದಲ್ಲಿ ಪ್ರಕ್ಷುಬ್ಧವಾಗಿಯೇ ಇದೆ. ಸರಳುಗಳ ಹಿಂದಿದ್ದರೂ ಇಮ್ರಾನ್ ಸೇನೆ ಮತ್ತು ಶೆಹಬಾಜ್ ಶರೀಫ್ ಸರ್ಕಾರಕ್ಕೆ ಸಿಂಹಸ್ವಪ್ನವಾಗಿದ್ದಾರೆ. ಪಾಕಿಸ್ತಾನ ಮತ್ತೊಂದು ಅಂತರ್ಯುದ್ಧದ ಹೊಸ್ತಿಲಲ್ಲಿರುವಂತೆ ಕಾಣುತ್ತಿದೆ.

ಇಮ್ರಾನ್‌ ಪತ್ನಿ ಬುಶ್ರಾ ಪ್ರತಿಭಟನೆಯ ಹೊಸ ಮುಖ

ರಾಜಧಾನಿ ಇಸ್ಲಾಮಾಬಾದ್‌ ಅನ್ನು ಅಕ್ಷರಶಃ ರಣಾಂಗಣವನ್ನಾಗಿ ಮಾಡಿದ್ದ ಪಿಟಿಐ ಬೆಂಬಲಿಗರ ಪ್ರತಿಭಟನೆಯ ನೇತೃತ್ವದ ವಹಿಸಿದ್ದು ಇಮ್ರಾನ್‌ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿ. 

ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ಆರಂಭಿಸುತ್ತಿದ್ದಂತೆಯೇ ಅವರು ಇಸ್ಲಾಮಾಬಾದ್‌ನ ಸೂಕ್ಷ್ಮ ಪ್ರದೇಶ ಡಿ–ಚೌಕದಿಂದ ತೆರಳಿದರು. ಬುಶ್ರಾ ಮತ್ತು ಪಕ್ಷದ ನಾಯಕರು ಅರ್ಧದಿಂದಲೇ ಪ್ರತಿಭಟನೆಯನ್ನು ತೊರೆದಿರುವುದಕ್ಕೆ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದರೂ, ಇಮ್ರಾನ್‌ ಬಂಧನದ ಬಳಿಕ ನಾಯಕತ್ವದ ಕೊರತೆಯಿಂದ ಬಳಲುತ್ತಿದ್ದ ಪಕ್ಷಕ್ಕೆ ಬುಶ್ರಾ ಅವರು ಶಕ್ತಿ ತುಂಬಲಿದ್ದಾರೆಯೇ ಎಂಬ ಚರ್ಚೆಯೂ ಆರಂಭಗೊಂಡಿದೆ.   

2018ರಲ್ಲಿ ಇಮ್ರಾನ್‌ ಖಾನ್‌ ಅವರನ್ನು ಮದುವೆಯಾಗಿದ್ದ ಬುಶ್ರಾ ಅವರು ರಾಜಕೀಯ, ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದರು. ಬಲು ಅಪರೂಪವಾಗಿ ಇಮ್ರಾನ್‌ ಖಾನ್‌ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಆಗಲೂ ಅವರು ತಮ್ಮ ಮುಖವನ್ನು ತೋರಿಸುತ್ತಿರಲಿಲ್ಲ.

ಕಾನೂನುಬಾಹಿರ ಮದುವೆ ಪ್ರಕರಣದಲ್ಲಿ ಇಮ್ರಾನ್‌ ಅವರೊಂದಿಗೆ ಏಳು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅವರು ಕಳೆದ ತಿಂಗಳಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಆ ಬಳಿಕ ತಮ್ಮ ಪತಿಯ ಪರವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಇಮ್ರಾನ್‌ ಅವರ ಬಿಡುಗಡೆಗಾಗಿ ಹೋರಾಟ ನಡೆಸುವಂತೆ ಬೆಂಬಲಿಗರಿಗೆ ಕರೆ ನೀಡುತ್ತಿದ್ದಾರೆ. 

ಇಸ್ಲಾಮಾಬಾದ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡು ಪಕ್ಷದ ಬೆಂಬಲಿಗರನ್ನು ಅಚ್ಚರಿಗೆ ಕೆಡವಿದ್ದರು. ಮುಖಂಡರಿಂದ ತುಂಬಿದ್ದ ಟ್ರಕ್‌ನಲ್ಲಿದ್ದ ಕಂಟೇನರ್‌ನ ಮೇಲೆ ನಿಂತುಕೊಂಡು ಮಾತನಾಡಿದ್ದ ಅವರು, ‌‘ಖಾನ್‌ ಅವರು ಇಲ್ಲಿಗೆ ಬರುವವರೆಗೆ, ಇಲ್ಲಿಂದ ನೀವು ಕದಲುವುದಿಲ್ಲ ಎಂದು ಭರವಸೆ ನೀಡಬೇಕು’ ಎಂದು ಅಳುತ್ತಾ ಹೇಳಿದ್ದರು. 

ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಬುಶ್ರಾ ಅವರನ್ನು ಭೇಟಿ ಮಾಡಿದ್ದ ಇಮ್ರಾನ್‌ ಖಾನ್‌, ತಮ್ಮ ರಾಜಕೀಯ ಜೀವನದ ಏಳಿಗೆಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವಂತೆ ಕೋರಿದ್ದರು. ನಂತರ ಇಬ್ಬರೂ ಹತ್ತಿರವಾಗಿದ್ದರು. ಬುಶ್ರಾ, ತಮ್ಮ ಪತಿಗೆ ವಿಚ್ಛೇದನ ನೀಡಿ ಖಾನ್‌ ಅವರನ್ನು ವರಿಸಿದ್ದರು. 

ಬುಶ್ರಾ ಅವರು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ ಖಾನ್‌ ಅವರು ಜೈಲಿನಿಂದಲೇ ಕಳುಹಿಸಿದ ಸಂದೇಶದಲ್ಲಿ ಇಂತಹ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ. 

‘ನನ್ನ ಪತ್ನಿಯಾಗಿ ನನ್ನ ಸಂದೇಶವನ್ನು ಆಕೆ ರವಾನಿಸಿದ್ದಾರೆ. ರಾಜಕಾರಣದೊಂದಿಗೆ ಆಕೆಗೆ ಸಂಬಂಧವಿಲ್ಲ’ ಎಂದು ಖಾನ್‌ ಹೇಳಿದ್ದಾರೆ. 

ಪಿಟಿಐನ ಮಾಧ್ಯಮ ಘಟಕವು ಕೂಡ, ‘ಖಾನ್‌ ಪತ್ನಿಯಾಗಿ ಅವರು ಪ್ರತಿಭಟನೆ ಮುನ್ನಡೆಸಿದ್ದಾರೆಯೇ ವಿನಾ, ಪಕ್ಷದ ನಾಯಕಿಯಾಗಿ ಅಲ್ಲ’ ಎಂದು ಹೇಳಿದೆ. 

ಕ್ರಿಕೆಟಿಗ, ಪ್ರಧಾನಿ, ಜೈಲುವಾಸಿ

ಕ್ರಿಕೆಟಿಗನಾಗಿ ಪಾಕಿಸ್ತಾನದ ಕ್ರಿಕೆಟ್‌ ಅನ್ನು ಉತ್ತುಂಗಕ್ಕೆ ಏರಿಸಿದ್ದ ಇಮ್ರಾನ್‌ ಖಾನ್, ರಾಜಕೀಯ ಪಕ್ಷ ಹುಟ್ಟುಹಾಕಿ ದೇಶದ ಜನಲ್ಲಿ ‘ನಯಾ ಪಾಕಿಸ್ತಾನ‌’ದ ಕನಸು ಬಿತ್ತಿ ಪ್ರಧಾನಿ ಹುದ್ದೆಗೆ ಏರಿ ವೈಯಕ್ತಿಕ ಜೀವನದಲ್ಲೂ ಉತ್ತುಂಗಕ್ಕೆ ಏರಿದವರು. ಕೊಟ್ಟ ಭರವಸೆಯನ್ನು ಈಡೇರಿಸಲು ಸಾಧ್ಯವಾಗದೇ 2022ರಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಂಡ ಬಳಿಕ ಅವರು ಮುಖ ಮಾಡಿದ್ದು ಜೈಲಿನತ್ತ. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕಾರಾಗೃಹದಲ್ಲಿರುವ ಅವರು ಜೈಲಿನಿಂದ ಹೊರಬರಲು ಬೆಂಬಲಿಗರ ಮೂಲಕ ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ.

  • 1952ರ ಅಕ್ಟೋಬರ್‌ 5: ಲಾಹೋರ್‌ನಲ್ಲಿ ಜನನ

  • 1971: ಇಂಗ್ಲೆಂಡ್‌ ವಿರುದ್ಧ ಎಜ್‌ಬಾಸ್ಟನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ

  • 1982: ಪಾಕ್‌ ಕ್ರಿಕೆಟ್‌ ತಂಡದ ನಾಯಕನಾಗಿ ಆಯ್ಕೆ

  • 1992: ಪಾಕಿಸ್ತಾನಕ್ಕೆ ವಿಶ್ವಕಪ್‌ ತಂದುಕೊಟ್ಟ ಗೌರವ, ಫೈಸಲಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್‌. ಅದೇ‌ ವರ್ಷ ಕ್ರಿಕೆಟ್‌ಗೆ ವಿದಾಯ‌

  • 1996, ಏ.25: ಪಾಕಿಸ್ತಾನ್‌ ತೆಹ್ರೀಕ್‌ ಎ–ಇನ್ಸಾಫ್‌ ರಾಜಕೀಯ ಪಕ್ಷ ಸ್ಥಾಪನೆ

  • 1997: ಮೊದಲ ಬಾರಿಗೆ ರಾಷ್ಟ್ರೀಯ ಚುನಾವಣೆಯಲ್ಲಿ ಕಣಕ್ಕೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ. ಎರಡರಲ್ಲೂ ಸೋಲು

  • 2002, ಅಕ್ಟೋಬರ್‌: ಮಿಯಾನ್ವಾಲಿ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆ 

  • 2011–2013: ಲಾಹೋರ್‌ ಮತ್ತು ಕರಾಚಿಯಲ್ಲಿ ಬೃಹತ್‌ ರ‍್ಯಾಲಿ

  • 2018: ಸಾರ್ವತ್ರಿಕ ಚುನಾವಣೆಯಲ್ಲಿ 270 ಕ್ಷೇತ್ರಗಳ ಪೈಕಿ 116 ಕ್ಷೇತ್ರಗಳಲ್ಲಿ ಪಿಟಿಐಗೆ ಗೆಲುವು

  • 2018, ಆಗಸ್ಟ್‌ 18: ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ.

  • 2022, ಏಪ್ರಿಲ್‌: ಅವಿಶ್ವಾಸ ಮೂಲಕ ಪ್ರಧಾನಿ ಹುದ್ದೆಯಿಂದ ಪದಚ್ಯುತಿ 

  • 2022, ಆಗಸ್ಟ್‌: ಆಸ್ತಿ ಘೋಷಣೆ ಮಾಡುವಾಗ, ಪ್ರಧಾನಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಸಿಕ್ಕಿದ ಉಡುಗೊರೆಗಳ ವಿವರಗಳನ್ನು ನೀಡದೇ ಇದ್ದುದಕ್ಕೆ ಪಾಕಿಸ್ತಾನ ಚುನಾವಣಾ ಆಯೋಗದಿಂದ ತೋಶಖಾನ ಪ್ರಕರಣ ದಾಖಲು

  • 2022, ಅಕ್ಟೋಬರ್‌: ಆಸ್ತಿ ವಿವರಗಳಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಸಾರ್ವಜನಿಕ ಪದವಿಯಿಂದ ಅನರ್ಹ

  • 2023, ಮೇ 9: ಭ್ರಷ್ಟಾಚಾರ ಆರೋಪಗಳ ಅಡಿಯಲ್ಲಿ ಬಂಧನ, ಇದರ ವಿರುದ್ಧ ಬೆಂಬಲಿಗರಿಂದ ದೇಶದಾದ್ಯಂತ ಹಿಂಸಾಚಾರ

  • 2023, ಮೇ: ಬಂಧನ ಕಾನೂನಿಗೆ ವಿರುದ್ಧ ಎಂದು ಹೇಳಿದ ಸುಪ್ರೀಂ ಕೋರ್ಟ್‌, ಬಿಡುಗಡೆಗೆ ಆದೇಶ

  • 2023, ಆಗಸ್ಟ್‌ 5: ಪ್ರಧಾನಿಯಾಗಿದ್ದಾಗ ಸಿಕ್ಕಿದ ಉಡುಗೊರೆಗಳ ದುರ್ಬಳಕೆ ಮಾಡಿದ್ದಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ

  • 2023, ಆಗಸ್ಟ್‌ 29: ಜಾಮೀನು ಸಿಕ್ಕಿದರೂ, ದೇಶದ ರಹಸ್ಯಗಳನ್ನು ಸೋರಿಕೆ ಮಾಡಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಕೆ

  • 2024, ಜನವರಿ: ಅಧಿಕೃತ ರಹಸ್ಯಗಳ ಕಾಯ್ದೆ ಉಲ್ಲಂಘಿಸಿದ್ದಕ್ಕೆ 10 ವರ್ಷಗಳ ಜೈಲು ಶಿಕ್ಷೆ

  • 2024, ಫೆ.3: ಬುಶ್ರಾ ಬೀಬಿ ಅವರ ಇದ್ದತ್‌ ಅವಧಿಯಲ್ಲಿ ಕಾನೂನು
    ಬಾಹಿರವಾಗಿ ಅವರನ್ನು ಮದುವೆಯಾಗಿದ್ದಕ್ಕಾಗಿ ಬುಶ್ರಾ ಅವರ ಜೊತೆಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶ

  • 2024, ಜೂನ್‌ 3: ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದ್ದನ್ನು ರದ್ದುಪಡಿಸಿದ ಇಸ್ಲಾಮಾಬಾದ್‌ ಹೈಕೋರ್ಟ್‌. ಆದರೆ, ಇತರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಮುಂದುವರಿಕೆ

  • 2024, ಜುಲೈ 13: ಕಾನೂನುಬಾಹಿರ ಮದುವೆ ಪ್ರಕರಣದಲ್ಲಿ ನೀಡಿದ ಶಿಕ್ಷೆ ರದ್ದು. ಆದರೂ 2023ರ ಹಿಂಸಾಚಾರ ಪ್ರಕರಣದಲ್ಲಿ ಜೈಲಿನೊಳಗೆ ಬಂದಿ

ಆಧಾರ: ಪಿಟಿಐ, ರಾಯಿಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.