
1975ರ ವಿಶ್ವಕಪ್ ಗೆದ್ದ ತಂಡದೊಂದಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಚಿತ್ರ
ಕೃಪೆ: ಹಾಕಿ ಇಂಡಿಯಾ
ಭಾರತ ಹಾಕಿ ತಂಡದ ವಿಶ್ವಕಪ್ ಜಯಕ್ಕೆ ಈಗ ಚಿನ್ನದ ಮೆರುಗು. ಮಲೇಷ್ಯಾದಲ್ಲಿ 1975ರ ಮಾರ್ಚ್ 15ರಂದು ನಡೆದಿದ್ದ ಫೈನಲ್‌ನಲ್ಲಿ ಅಜಿತ್ ಪಾಲ್ ಸಿಂಗ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನದ ಎದುರು ಜಯಿಸಿತು. ಈ ಐತಿಹಾಸಿಕ ಗೆಲುವಿಗೆ ಈಗ 50 ವರ್ಷ. ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿ ಅಂದಿನ ಸಾಧನೆಯ ಮೆಲುಕು ಇಲ್ಲಿದೆ.
50 ವರ್ಷಗಳು ಕಳೆದುಹೋದವು. ರೇಡಿಯೊ ವೀಕ್ಷಕ ವಿವರಣೆಯಲ್ಲಿ ಹೊರಹೊಮ್ಮಿದ ಆ ಸಾಲು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. ಎದೆಯಲ್ಲಿ ಸಂಭ್ರಮ, ಹೆಮ್ಮೆಯ ಅಲೆಗಳನ್ನು ಎಬ್ಬಿಸುತ್ತದೆ. ‘ಇಸ್ ತರಹ್ ಭಾರತ್ ನೇ ಪಾಕಿಸ್ತಾನ್ ಕೊ ಏಕ್ ಗೋಲ್ ಸೆ ಹರಾ ಕರ್ ವರ್ಲ್ಡ್‌ಕಪ್ ಜೀತ್ ಲಿಯಾ... ’ ಎಂದು ಜಸ್‌ದೇವ್ ಸಿಂಗ್ ಅವರು ಮಾಡಿದ್ದ ಉದ್ಘೋಷ ಕೋಟಿ ಕೋಟಿ ಭಾರತೀಯರನ್ನು ರೋಮಾಂಚನಗೊಳಿಸಿತ್ತು.
ನಾನಷ್ಟೇ ಅಲ್ಲ; ಹಾಕಿ ಕ್ರೀಡೆಯ ಚಿನ್ನದ ದಿನಗಳನ್ನು ಬಾನುಲಿಯ ವೀಕ್ಷಕ ವಿವರಣೆ ಮೂಲಕ ಎದೆ ತುಂಬಿಕೊಂಡವರು ಇವತ್ತಿಗೂ ಇದ್ದಾರೆ. ನಮ್ಮನ್ನು (ಅಂದು ಆ ತಂಡದಲ್ಲಿ ಆಡಿದ ಆಟಗಾರರು) ಹುಡುಕಿಕೊಂಡು ಬಂದು ಅಭಿನಂದಿಸುತ್ತಾರೆ. ಕಾಣಿಕೆಗಳನ್ನು ಕೊಟ್ಟು ಸ್ನೇಹ ಬೆಳೆಸುತ್ತಾರೆ. ಒಂದೆರಡು ಘಟನೆಗಳನ್ನು ಮೊದಲು ಇಲ್ಲಿ ಹಂಚಿಕೊಳ್ಳುವೆ.
ಕೆಲವು ವರ್ಷಗಳ ಹಿಂದೆ ಮೈಸೂರು ದಸರಾ ಕ್ರೀಡಾಕೂಟಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಜಿಮ್ನಾಸ್ಟ್ ದೀಪಾ ಕರ್ಮಾಕರ್ ಕೂಡ ಇದ್ದರು. ನನ್ನನ್ನು ನೋಡಲು ಬಹಳಷ್ಟು ಜನ ಸೇರಿದ್ದರು. ಅವರಲ್ಲಿ ಬಹುತೇಕರು ಬಂದು 1975ರ ವಿಶ್ವಕಪ್ ವಿಜಯದ ಕುರಿತು ಅಭಿನಂದಿಸಿದ್ದರು. ಈಗಲೂ ಮೈಸೂರಿನ ಹಲವರು ಕರೆ ಮಾಡುತ್ತಾರೆ. ಪ್ರೀತಿ ತೋರಿಸುತ್ತಾರೆ.
ಜೈಪುರದ ರಘುನಂದನ್ ಸಿಂಗ್ ನಿವೃತ್ತ ಅಧಿಕಾರಿ. ಝಾನ್ಸಿಯಲ್ಲಿರುವ (ಮಧ್ಯಪ್ರದೇಶ) ನಮ್ಮ ಮನೆಗೆ ಒಂದು ಸಲ ಬಂದು ಪರಿಚಯಿಸಿಕೊಂಡರು. ನನ್ನ ಕೈಗೆ ₹1 ಲಕ್ಷ ನೀಡಿದರು. ಈ ಹಣ ಏಕೆ ಎಂದು ಕೇಳಿದೆ. ಅದಕ್ಕವರು, ‘ನಿಮ್ಮ ತಂಡವು ವಿಶ್ವಕಪ್ ಗೆದ್ದಾಗ ನಾನು 14 ವರ್ಷದ ಹುಡುಗ. ಆ ದಿನ ತಾವು ಹೊಡೆದ ನಿರ್ಣಾಯಕ ಗೋಲು ನನ್ನ ಮನಗೆದ್ದಿತ್ತು. ಆಗ ನಿಮಗೆ ₹1 ಲಕ್ಷ ನೀಡಬೇಕು ಅನ್ಕೊಂಡಿದ್ದೆ. ಈಗ ಅದು ಸಾಧ್ಯವಾಯಿತು’ ಎಂದರು. ಅಷ್ಟೇ ಅಲ್ಲ; ಈಗ ಆ ವಿಜಯಕ್ಕೆ 50 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ನಾನು ಮತ್ತು ಉಳಿದಿರುವ ಎಲ್ಲ ಆಟಗಾರರನ್ನೂ ತಮ್ಮೂರಿಗೆ ಕರೆಸಿ ಸನ್ಮಾನ ಮಾಡುವ ಕಾರ್ಯಕ್ರಮ ಯೋಜಿಸಿದ್ದಾರೆ.
ಇದು ನನ್ನನ್ನು ಬಹಳ ರೋಮಾಂಚನಗೊಳಿಸುತ್ತದೆ. ಟಿ.ವಿ. ಮಾಧ್ಯಮಗಳಿರದ ಆ ಕಾಲದಲ್ಲಿ ನಾವು ಮಾಡಿದ ಸಾಧನೆಯನ್ನು ಜನ ಈಗಲೂ ನೆನಪಿಸಿಕೊಳ್ಳುವುದು, ಹಾಕಿ ಕ್ರೀಡೆ ಮತ್ತು ಭಾರತೀಯರ ನಡುವಿನ ಭಾವನಾತ್ಮಕ ಸಂಬಂಧದ ದ್ಯೋತಕ. ಈಗಲೂ ಆ ಟೂರ್ನಿಯನ್ನು ನೆನಪಿಸಿಕೊಂಡರೆ ನನ್ನ ಸ್ನೇಹಿತರ ಸಾಧನೆಗಳು ಕಣ್ಮುಂದೆ ಸಾಲುಗಟ್ಟುತ್ತವೆ; ಮನತುಂಬಿ ಬರುತ್ತದೆ. ಎಲ್ಲ ಪಂದ್ಯಗಳನ್ನು ವಿವರಿಸಲಾಗದು. ಆದರೆ, ಸೆಮಿಫೈನಲ್ ಮತ್ತು ಫೈನಲ್‌ಗಳು ದಂತಕಥೆಗಳಾಗಿವೆ. ಅದನ್ನೇ ಹೇಳುವೆ.
ಮರ್ಡೆಕಾ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ಮಲೇಷ್ಯಾದ ಎದುರು ಛಲದಿಂದ ಆಡಿ ಜಯಿಸಿದ್ದೆವು. 50 ಸಾವಿರ ಜನ ಸೇರಿದ್ದರು. ನಾವು 3–2ರಿಂದ ಗೆದ್ದೆವು. ಶಿವಾಜಿ ಪವಾರ್, ಅಸ್ಲಂ ಖಾನ್ ಮತ್ತು ಹರಚರಣ್ ಸಿಂಗ್ ಗೋಲುಗಳು ಗೆಲುವು ತಂದುಕೊಟ್ಟಿದ್ದವು. ಮಲೇಷ್ಯಾ 2 ಗೋಲು ಗಳಿಸಿತ್ತು.
ಫೈನಲ್‌ಗೂ ಮುಂಚೆ ನಾವು ದೇವಸ್ಥಾನ, ಗುರುದ್ವಾರ, ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದೆವು. ಫೈನಲ್ ಪಂದ್ಯ ಶನಿವಾರ (ಮಾರ್ಚ್ 15, 1975) ಇತ್ತು. ನಾನು ಕೋಣೆಯಿಂದ ಹೊರಡುವ ಮುಂಚೆ ನನ್ನಲ್ಲಿದ್ದ ಸಾಸಿವೆ ಎಣ್ಣೆಯ ಎರಡು ಹನಿ ನೆಲದ ಮೇಲೆ ಹಾಕಿ ಶನಿದೇವರಿಗೆ ಪ್ರಾರ್ಥಿಸಿದೆ. ಎಲ್ಲರೂ ಪ್ರಾರ್ಥಿಸಿ ಪಾಕಿಸ್ತಾನದ ಎದುರು ಕಣಕ್ಕಿಳಿದೆವು. ವೆಸ್ಟ್ ಜರ್ಮನಿಯನ್ನು ಸೆಮಿಫೈನಲ್‌ನಲ್ಲಿ ಹಣಿದಿದ್ದ ಇಸ್ಲಾಹುದ್ದೀನ್ ನಾಯಕತ್ವದ ಪಾಕ್ ತಂಡವು ಆರಂಭದಿಂದಲೇ ಜೋರಾಗಿ ಆಡತೊಡಗಿತು. 17ನೇ ನಿಮಿಷದಲ್ಲಿಯೇ ಗೋಲು ಹೊಡೆದ ಝಹೀದ್ ಶೇಖ್ ಪಾಕಿಸ್ತಾನಕ್ಕೆ ಮುನ್ನಡೆ ಒದಗಿಸಿದರು. ಮೊದಲ ಅರ್ಧ ಅವಧಿ ಮುಗಿದರೂ ಅವರು ಮುನ್ನಡೆಯಲ್ಲಿದ್ದರು.
44ನೇ ನಿಮಿಷದಲ್ಲಿ ಸುರ್ಜಿತ್, ಪಾಕ್ ರಕ್ಷಣಾ ಗೋಡೆಯನ್ನು ಮುರಿದು ನುಗ್ಗಿದರು. ಪುಟ್ಟ ಪುಟ್ಟ ಪಾಸ್‌ಗಳ ಮೂಲಕ ತಮ್ಮ ಬಳಿ ಬಂದ ಚೆಂಡನ್ನು ಚೆಂದದ ರೀತಿಯಲ್ಲಿ ಗೋಲುಪೆಟ್ಟಿಗೆಗೆ ಸೇರಿಸಿದರು. ಸಂಭ್ರಮ ಪುಟಿದೆದ್ದಿತ್ತು. 1–1ರ ಸಮಬಲ ವಿಶ್ವಾಸ ಮೂಡಿಸಿತ್ತು. ನಂತರದ ಆಟ ರೋಚಕವಾಗಿತ್ತು. 51ನೇ ನಿಮಿಷದಲ್ಲಿ ಲಾಂಗ್ ಕಾರ್ನರ್‌ನಲ್ಲಿದ್ದ ಅಜಿತ್ ಪಾಲ್ ಚೆಂಡನ್ನು ತಡೆದು ನನಗೆ ಪಾಸ್ ನೀಡಿದರು. ನಾನು ರೈಟ್‌ನಲ್ಲಿದ್ದೆ. ಡಾಡ್ಜ್ ಮಾಡುತ್ತಾ ಸರ್ಕಲ್ ಪ್ರವೇಶಿಸಿದೆ. ಫಿಲಿಪ್ ಅವರಿಗೆ ಪಾಸ್ ಮಾಡಿದೆ. ಅವರು ಚುಟುಕು ಪಾಸ್ ಮೂಲಕ ಚೆಂಡನ್ನು ಮುನ್ನುಗ್ಗಿಸಿದರು. ಗೋಲು ಪೆಟ್ಟಿಗೆಯ ಮೂರ್ನಾಲ್ಕು ಗಜಗಳ ದೂರದಲ್ಲಿದ್ದ ನನಗೆ ಫಿಲಿಪ್ ಮರಳಿ ಪಾಸ್ ಮಾಡಿದರು. ಫ್ಲಿಕ್ ಮಾಡಿದೆ. ವೇಗವಾಗಿ ಸಾಗಿದ ಚೆಂಡು ಗೋಲುಪೆಟ್ಟಿಗೆಯನ್ನು ಪ್ರವೇಶಿಸಿತು. ಆದರೆ ಹಿಂದಿನ ಗೋಡೆಯ ತಳಕ್ಕೆ ಅಪ್ಪಳಿಸುವ ಬದಲು, ಟ್ರಯಾಂಗಲ್‌ಗೆ ಬಡಿದು ಮರಳಿತು. ಮಲೇಷ್ಯಾದ ಅಂಪೈರ್ ವಿಜಯನಾಥನ್ ಕೂಡಲೇ ತೀರ್ಪು ನೀಡಲಿಲ್ಲ. ಮೂರ್ನಾಲ್ಕು ಸೆಕೆಂಡುಗಳವರೆಗೆ ಯೋಚನೆ ಮಾಡಿ ಗೋಲು ಎಂದು ಘೋಷಿದರು. ಇದರಿಂದ ಕುಪಿತಗೊಂಡ ಪಾಕ್ ಆಟಗಾರರು ಪ್ರತಿಭಟಿಸಿದರು. ನಂತರದ 16 ನಿಮಿಷಗಳಲ್ಲಿ ಆಟ ಮುಗಿಯುವವರೆಗೂ ಅವರು ಬಿರುಸಿನ ಆಟಕ್ಕೆ ಇಳಿದರು. ನನ್ನ ಒಂದು ಕಣ್ಣು ಮಾತ್ರ ಬೌಂಡರಿ ಲೈನ್ ಹೊರಗೆ ಇದ್ದ ದೊಡ್ಡ ಗಡಿಯಾರದ ಮೇಲೆಯೇ ಇತ್ತು. ಒಂದೊಂದು ಕ್ಷಣವೂ ಯುಗದಂತೆ ಭಾಸವಾಗಿತ್ತು. ಪಂದ್ಯ ಮುಕ್ತಾಯದ ವಿಷಲ್ ಸದ್ದು ಕೇಳಿದಾಗ ಭಾರತ 2–1ರಿಂದ ಗೆದ್ದಿತ್ತು. ಇಡೀ ದೇಶ ಸಂಭ್ರಮಿಸಿತ್ತು.
ಐದು ದಶಕಗಳಲ್ಲಿ ದೇಶ ಬಹಳಷ್ಟು ಬದಲಾಗಿದೆ. ಕ್ರಿಕೆಟ್ ಜನಪ್ರಿಯ ಆಟವಾಗಿದೆ. ದೇಶಕ್ಕೆ ಆ ಕ್ರೀಡೆಯೂ ಬಹಳಷ್ಟು ಗೌರವ ತಂದುಕೊಟ್ಟಿದೆ. ಹಾಕಿ ಕ್ರೀಡೆಯೂ ಬದಲಾಗಿದೆ. ನಾವು ಆಡುತ್ತಿದ್ದ ನೈಜ ನೆಲದ ಹಾಕಿ ಈಗಿಲ್ಲ. ಕೃತಕ ಹುಲ್ಲುಹಾಸಿನ ಮೇಲೆ ಹಾಕಿ ನಡೆಯುತ್ತಿದೆ. ನೈಜ ಕೌಶಲಗಳೆಂಬ ಆತ್ಮವೇ ಇಲ್ಲ. ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವುದೇ ಮುಖ್ಯ. ಗೋಲ್ ಕೀಪರ್ ಮೇಲೆ ಅವಲಂಬನೆ ಹೆಚ್ಚು; ಕಾಲಾಯ ತಸ್ಮೈ ನಮಃ. ಒಂದು ಸಮಾಧಾನವೆಂದರೆ, ನಮ್ಮ ದೇಶದ ತಂಡವು ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಜಯಿಸಿದೆ. ಈಗಿರುವ ಆಟಗಾರರು ಪ್ರತಿಭಾವಂತರಾಗಿದ್ದಾರೆ. ಆಧುನಿಕತೆ ಮೈಗೂಡಿಸಿಕೊಂಡಿದ್ದಾರೆ. 50 ವರ್ಷಗಳಿಂದ ಕಾಡುತ್ತಿರುವ ವಿಶ್ವಕಪ್ ಬರವನ್ನು ನಿವಾರಿಸುವ ಭರವಸೆ ಮೂಡಿಸಿದ್ದಾರೆ. ಈ ಸುವರ್ಣ ಕಾಲದಲ್ಲಿ ಮತ್ತೊಂದು ವಿಶ್ವಕಪ್ ಗೆಲುವು ನಮ್ಮದಾಗಲಿ ಎಂದು ಹಾರೈಸುವೆ.
ಅಶೋಕ್ ಕುಮಾರ್
ತಂದೆಯ ಧ್ಯಾನ...
ಅಶೋಕ್ ಕುಮಾರ್ ಅವರು ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಮಗ. ಅಪ್ಪನ ಪ್ರೇರಣೆಯಿಂದಲೇ ಹಾಕಿಪಟುವಾದವರು. ವಿಶ್ವಕಪ್ ಚಿನ್ನ ಗೆದ್ದು ಬಂದ ಕ್ಷಣವನ್ನು ನೆನೆದು ಭಾವುಕರಾಗುತ್ತಾರೆ.
‘ಆ ದಿನ ಕ್ವಾಲಾಲಂಪುರದಿಂದ ಭಾರತಕ್ಕೆ ಬಂದ ಕೂಡಲೇ ನನ್ನ ತವರೂರು ಝಾನ್ಸಿಗೆ ತೆರಳಿದೆ. ಮನೆಯಲ್ಲಿ ಅಪ್ಪನ ಮುಂದೆ ಚಿನ್ನದ ಪದಕ ಹಿಡಿದು ನಿಂತೆ. ವಿಧೇಯ ವಿದ್ಯಾರ್ಥಿಯಂತೆ ನಿಂತಿದ್ದ ನನ್ನನ್ನು ನೋಡಿದ ಅವರಿಂದ ಒಂದೇ ಒಂದು ಮಾತು ಹೊರಡಲಿಲ್ಲ. ಆದರೆ, ನನ್ನ ಬೆನ್ನ ಮೇಲೆ ಮೂರು ಬಾರಿ ಪ್ರೀತಿಯಿಂದ ತಟ್ಟಿದ್ದರು ಅಷ್ಟೇ. ಅದಕ್ಕಿಂತ ದೊಡ್ಡ ಅಭಿನಂದನೆಯನ್ನು ನಾನು ಜೀವಮಾನದಲ್ಲಿ ಸ್ವೀಕರಿಸಲು ಸಾಧ್ಯವೇ ಇಲ್ಲ. ಇಡೀ ಜಗತ್ತೇ ಅವರ ಹಾಕಿ ಆಟಕ್ಕೆ ಮನಸೋತಿತ್ತು. ಅಂತಹವರ ಮಗ ನಾನು ಎಂಬ ಹೆಮ್ಮೆ ಇತ್ತು. ಆದರೆ, ವಿಶ್ವಕಪ್ ಅನ್ನು ಭಾರತ ತಂಡವು ಗೆಲ್ಲಲು ನಾನು ಗಳಿಸಿದ ಗೋಲು ಕೂಡ ಕಾರಣವಾಗಿತ್ತು. ಆದ್ದರಿಂದ ಅಪ್ಪನ ಮುಂದೆ ಹೋಗಿ ಹೆಮ್ಮೆಯಿಂದ ನಿಲ್ಲುವ ಧೈರ್ಯ ಮಾಡಿದ್ದೆ. ಅವರಿಗೂ ನಾನು ಕೇವಲ ಧ್ಯಾನಚಂದ್ ಮಗನಾಗಿ ಅಲ್ಲ. ಉತ್ತಮ ಆಟಗಾರನಾಗಿಯೂ ಬೆಳೆದಿದ್ದೇನೆ ಎಂದು ಅನಿಸಿದ್ದು ಅವರ ಕಂಗಳಲ್ಲಿ ಕಂಡಿದ್ದೆ’ ಎಂದು ಅಶೋಕ್ ಹೇಳುತ್ತಾರೆ.
1973ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತಿತ್ತು. ನಂತರದ ವರ್ಷದಲ್ಲಿಯೇ ಪುಟಿದೆದ್ದು ಚಿನ್ನ ಗೆದ್ದಿತ್ತು.
ಬಿ.ಪಿ. ಗೋವಿಂದ
ಸ್ನೇಹಮಯಿ ಗೋವಿಂದ...
‘ಕೊಡಗಿನ ಆಟಗಾರ ಬಿ.ಪಿ. ಗೋವಿಂದ ಮತ್ತು ನಾನು ಆಪ್ತಮಿತ್ರರು. ನಮ್ಮಿಬ್ಬರದ್ದು ‘ಎರಡು ದೇಹ ಒಂದೇ ಮನಸ್ಸು’ ಎಂಬಂತಹ ಸ್ನೇಹ. ಮೈದಾನದೊಳಗೆ ಕೇವಲ ಕಣ್ಸನ್ನೆ ವಿನಿಮಯದಿಂದಲೇ ಚೆಂಡನ್ನು ಪಾಸ್ ಮಾಡುವುದು, ಬ್ಲಾಕ್ ಮಾಡುವುದು, ಡಾಡ್ಜ್ ಮಾಡುವುದು ನಮ್ಮ ರೂಢಿಯಾಗಿತ್ತು. ಪಂದ್ಯದ ಪ್ರತಿಯೊಂದು ನಿಮಿಷದಲ್ಲಿಯೂ ತಂಡದ ಗೆಲುವಿಗಾಗಿ ಜೊತೆಯಾಗಿ ಶ್ರಮಿಸಿದ್ದೇವೆ. 1975ರ ಫೈನಲ್‌ನಲ್ಲಿ ಪಾಕ್ ಆಟಗಾರರ ದಾಳಿಯನ್ನು ಇಬ್ಬರೂ ಜೊತೆಗೂಡಿ ತಡೆದ ನೆನಪುಗಳು ಇಂದಿಗೂ ಹಸಿರು. ಅವರ ಆಟ ನೋಡುವುದೇ ಕಣ್ಣಿಗೆ ಹಬ್ಬ’ ಎಂದು ಅಶೋಕ್‌ಕುಮಾರ್ ನೆನಪಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.