ADVERTISEMENT

ಆಳ ಅಗಲ | ಹಣಕಾಸು ಆರೋಗ್ಯ ಸೂಚ್ಯಂಕ: ಕರ್ನಾಟಕದ ಸ್ಥಿತಿ ಹೇಗಿದೆ?

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 23:30 IST
Last Updated 2 ಫೆಬ್ರುವರಿ 2025, 23:30 IST
ಹಣ–ಸಾಂದರ್ಭಿಕ ಚಿತ್ರ
ಹಣ–ಸಾಂದರ್ಭಿಕ ಚಿತ್ರ   

ನೀತಿ ಆಯೋಗವು ರಾಜ್ಯಗಳ ಆರ್ಥಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ಮೊದಲ ಪ್ರಯತ್ನವಾಗಿ ಹಣಕಾಸು ಆರೋಗ್ಯ ಸೂಚ್ಯಂಕವನ್ನು (ಎಫ್‌ಎಚ್‌ಐ) ಇತ್ತೀಚೆಗೆ ಬಿಡುಗಡೆ ಮಾಡಿದೆ. ಮಹಾಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ದತ್ತಾಂಶ ಆಧರಿಸಿ 2022–23ರ ಹಣಕಾಸು ವರ್ಷದಲ್ಲಿ ರಾಜ್ಯಗಳ ಹಣಕಾಸಿನ ಸದೃಢತೆ ಬಗ್ಗೆ ವರದಿ ವಿಶ್ಲೇಷಿಸಿದೆ. ಈ ಸೂಚ್ಯಂಕವು 18 ಪ್ರಮುಖ ರಾಜ್ಯಗಳನ್ನು ಒಳಗೊಂಡಿದ್ದು, ಹಿಮಾಲಯ ಮತ್ತು ಈಶಾನ್ಯ ರಾಜ್ಯಗಳನ್ನು ಕೈಬಿಡಲಾಗಿದೆ.

ದೇಶದ ಒಟ್ಟು ವೆಚ್ಚದಲ್ಲಿ ರಾಜ್ಯಗಳ ವೆಚ್ಚದ ಪಾಲು ಮೂರನೇ ಎರಡರಷ್ಟು. ಹಾಗೆಯೇ ಒಟ್ಟು ಆದಾಯದಲ್ಲಿ ರಾಜ್ಯಗಳ ಆದಾಯದ ಪಾಲು ಮೂರನೇ ಒಂದರಷ್ಟು. ಹೀಗಾಗಿ ರಾಜ್ಯಗಳ ಎಫ್‌ಎಚ್‌ಐ ಮಹತ್ವ ಪಡೆದುಕೊಂಡಿದೆ.

ವೆಚ್ಚದ ಗುಣಮಟ್ಟ, ಆದಾಯ ಕ್ರೋಡೀಕರಣ, ವಿತ್ತೀಯ ವಿವೇಚನೆ, ಸಾಲ ಸೂಚ್ಯಂಕ ಮತ್ತು ಸಾಲ ಸುಸ್ಥಿರತೆ ಎಂಬ ಐದು ಪ್ರಮುಖ ಉಪ ಸೂಚ್ಯಂಕಗಳನ್ನು (ಮಾನದಂಡ) ಆಧರಿಸಿ ರಾಜ್ಯಗಳಿಗೆ ಅಂಕಗಳು ಮತ್ತು ರ‍್ಯಾಂಕಿಂಗ್‌ ನೀಡಲಾಗಿದೆ.

ADVERTISEMENT

ಒಡಿಶಾ (67.8 ಅಂಕ), ಛತ್ತೀಸಗಢ (55.2), ಗೋವಾ (53.6) ಮೊದಲ ಮೂರು ಸ್ಥಾನ ಗಳಿಸಿದ್ದರೆ, ಪಶ್ಚಿಮ ಬಂಗಾಳ (21.8), ಆಂಧ್ರಪ್ರದೇಶ (20.9) ಮತ್ತು ಪಂಜಾಬ್ (10.7) ಕೊನೆಯ ಮೂರು ಸ್ಥಾನ ಪಡೆದಿವೆ. ಕರ್ನಾಟಕವು 40.8 ಅಂಕಗಳೊಂದಿಗೆ 10ನೇ ರ‍್ಯಾಂಕ್ ಗಳಿಸಿದೆ.

ಅಂಕಗಳ ಆಧಾರದಲ್ಲಿ ರಾಜ್ಯಗಳನ್ನು ಸಾಧಕ ರಾಜ್ಯ, ಮುಂಚೂಣಿಯಲ್ಲಿರುವ ರಾಜ್ಯ, ಉತ್ತಮ ನಿರ್ವಹಣೆ ತೋರುತ್ತಿರುವ ರಾಜ್ಯ ಮತ್ತು ಭರವಸೆದಾಯಕ ರಾಜ್ಯ ಎಂದು ನಾಲ್ಕು ವಿಭಾಗ ಮಾಡಲಾಗಿದೆ. ಕರ್ನಾಟಕವು ಮುಂಚೂಣಿ ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ಸಾಧಕ ರಾಜ್ಯಗಳು ಮತ್ತು ಭರವಸೆದಾಯಕ ರಾಜ್ಯಗಳ ನಡುವಿನ ಅಂತರ ಹೆಚ್ಚಾಗಿದೆ. ದಕ್ಷಿಣದ ರಾಜ್ಯಗಳ ಪೈಕಿ ತೆಲಂಗಾಣ ಉತ್ತಮ ನಿರ್ವಹಣೆ ತೋರಿ 8ನೇ ಸ್ಥಾನದಲ್ಲಿದ್ದರೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳು ಹಲವು ರೀತಿಯ ಸವಾಲುಗಳನ್ನು ಎದುರಿಸುತ್ತಿವೆ.

ಕೆಲವು ರಾಜ್ಯಗಳ ಸಾಲ ಸುಸ್ಥಿರತೆಯ ಬಗ್ಗೆ ನೀತಿ ಆಯೋಗ ಕಳವಳ ವ್ಯಕ್ತಪಡಿಸಿದೆ. ಆದಾಯಕ್ಕಿಂತ ಸಾಲ ವಿಪರೀತ ಹೆಚ್ಚಿರುವುದು, ವಿವಿಧ ರಾಜ್ಯಗಳ ನಡುವಿನ ವಿತ್ತೀಯ ಸಾಧನೆಯ ಅಂತರವು ಸುಧಾರಣೆಗಳು ಮತ್ತು ಯೋಜಿತ ಮಧ್ಯಪ್ರವೇಶದ ಅಗತ್ಯವನ್ನು ಸೂಚಿಸುತ್ತದೆ ಎಂದು ಸೂಚ್ಯಂಕದ ವರದಿ ಹೇಳಿದೆ.

ಈ ಸೂಚ್ಯಂಕವು ರಾಜ್ಯಗಳ ಆರ್ಥಿಕ ಸ್ಥಿತಿಗತಿಗಳ ಚಿತ್ರಣ ನೀಡಿದೆ. ಹಣಕಾಸಿನ ಕೊರತೆ ಹೆಚ್ಚಳ, ಸಮತೋಲನವಿಲ್ಲದ ವೆಚ್ಚ, ಬಜೆಟ್‌ ಆಚೆಗಿನ ಸಾಲಗಳು ರಾಜ್ಯಗಳ ಹಣಕಾಸು ನಿರ್ವಹಣೆಯಲ್ಲಿ ಬದಲಾವಣೆಯ ಅಗತ್ಯವನ್ನು ಸೂಚಿಸುತ್ತವೆ ಎಂದು ಅದು ಹೇಳಿದೆ.

ಕುಸಿದ ರಾಜ್ಯದ ಸ್ಥಾನ

ಐದು ಉಪ ಸೂಚ್ಯಂಕಗಳ ಅನುಸಾರ ಕರ್ನಾಟಕದ ಆರ್ಥಿಕ ಸ್ಥಿತಿಗತಿಯನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. 2014–15ರ ದತ್ತಾಂಶದ ಆಧಾರದಲ್ಲಿ ಮೂರನೇ ಸ್ಥಾನ ಗಳಿಸಿದ್ದ ರಾಜ್ಯವು, ದಶಕದ ಅವಧಿಯಲ್ಲಿ (2022–23ರ ದತ್ತಾಂಶ) 10ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ವೆಚ್ಚದ ಗುಣಮಟ್ಟ ಮತ್ತು ಸಾಲ ಸುಸ್ಥಿರತೆಯಲ್ಲಿ ಕಳಪೆ ನಿರ್ವಹಣೆಯೇ ಕಾರಣ ಎಂದು ಹೇಳಲಾಗಿದೆ. ರಾಜ್ಯವು ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನವನ್ನು ಪುನರ್‌ನಿಗದಿಪಡಿಸಬೇಕು ಮತ್ತು ರಾಜ್ಯದ ವರಮಾನವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ನೀತಿ ಆಯೋಗ ಸಲಹೆ ನೀಡಿದೆ.

ರಾಜ್ಯದ ಬಗ್ಗೆ ವರದಿ ಹೇಳುವುದೇನು?
  • ರಾಜ್ಯದಲ್ಲಿ ರಸ್ತೆಗಳು, ಸೇತುವೆಗಳು, ವಿದ್ಯುತ್ ಯೋಜನೆಗಳಿಗೆ ಬಂಡವಾಳ ವೆಚ್ಚದ ಹೆಚ್ಚಳ; ಶಿಕ್ಷಣ, ಆರೋಗ್ಯ ವೆಚ್ಚಗಳಲ್ಲಿ ಕಡಿತ

  • ಕರ್ನಾಟಕವು ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಶೇ 11.6 ಮತ್ತು ಆರೋಗ್ಯಕ್ಕಾಗಿ ಶೇ 4.5 ಖರ್ಚು ಮಾಡುತ್ತಿದ್ದು, ಇದು ಇತರೆ ರಾಜ್ಯಗಳ ಸರಾಸರಿಗಿಂತ ಕಡಿಮೆ

  • ಜಿಎಸ್‌ಟಿ ರಾಜ್ಯದ ಪ್ರಮುಖ ಆದಾಯ ಮೂಲವಾಗಿದೆ (ಶೇ 63). ರಾಜ್ಯದ ಆರ್ಥಿಕ ಪರಿಸ್ಥಿತಿಯು ಬಹುತೇಕ ಸ್ವಂತದ ಸಂಪನ್ಮೂಲಗಳನ್ನೇ ಆಧರಿಸಿದೆ    

  • 2018–19ರಿಂದ 2022–23ರವರೆಗೆ, ಸರ್ಕಾರದ ಆದಾಯವು ₹1,64,979 ಕೋಟಿಯಿಂದ ₹2,29,080 ಕೋಟಿಗೆ ಹೆಚ್ಚಾಗಿದೆ (ಶೇ 7ರಷ್ಟು ವಾರ್ಷಿಕ ಪ್ರಗತಿ). ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಎಸ್‌ಡಿಪಿ) ತಕ್ಕಂತೆ ಆದಾಯದ ಏರಿಕೆಯು (2020–21ರ ಕೋವಿಡ್ ಅವಧಿ ಹೊರತುಪಡಿಸಿ) ಸಕಾರಾತ್ಮಕವಾಗಿದೆ      

  • 2022-23ರಲ್ಲಿ ನಿಗದಿಪಡಿಸಿದ ಗುರಿಗಿಂತ ಶೇ 0.6ರಷ್ಟು ಹೆಚ್ಚು ಆದಾಯವನ್ನು ರಾಜ್ಯವು ಗಳಿಸಿದೆ. ಎಫ್‌ಆರ್‌ಬಿಎಂ ಕಾಯ್ದೆ ಪ್ರಕಾರ ವಿತ್ತೀಯ ಕೊರತೆಯು ಶೇ 3.5ರ ಮಿತಿಯೊಳಗಿರಬೇಕು; ರಾಜ್ಯದ ವಿತ್ತೀಯ ಕೊರತೆಯು ಶೇ 2.1ರಷ್ಟು ಇತ್ತು

  • 2018–19ರಿಂದ 2022–23ರ ನಡುವೆ ಸಾರ್ವಜನಿಕ ಸಾಲದ ಪ್ರಮಾಣ ವಾರ್ಷಿಕವಾಗಿ ಶೇ 19.1ರಷ್ಟು ಹೆಚ್ಚಳವಾಗಿದೆ. ಆದರೆ ಸಾಲ ಮತ್ತು ಜಿಎಸ್‌ಡಿಪಿ ಅನುಪಾತವು 2020–21ರಿಂದ ಕಡಿಮೆಯಾಗುತ್ತಿದ್ದು, ಇದು ಭವಿಷ್ಯದ ಸಾಲ ಸುಸ್ಥಿರತೆಯನ್ನು ತೋರಿಸುತ್ತದೆ

  • ಪಡೆದಿರುವ ಸಾಲದಲ್ಲಿ ದೊಡ್ಡ ಭಾಗವನ್ನು ಮರುಪಾವತಿಗೆ ಬಳಸಲಾಗಿದೆ. ಶೇ 40.5ರಷ್ಟು ಸಾಲದ ಅವಧಿ 1ರಿಂದ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ 

  • 2018–19ರಲ್ಲಿ ಶೇ 7.4ರಷ್ಟಿದ್ದ ಸಾರ್ವಜನಿಕ ಸಾಲದ ಸರಾಸರಿ ಬಡ್ಡಿದರವು 2022–23ರಲ್ಲಿ ಶೇ 6.5ಕ್ಕೆ ಕುಗ್ಗಿದೆ

ಕೇರಳದ ಕಳಪೆ ಸಾಧನೆ

ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಸಂಸ್ಥೆಗಳು ನೀಡುವ ಸೂಚ್ಯಂಕಗಳಲ್ಲಿ ಮುಂಚೂಣಿಯಲ್ಲಿರುವ ಕೇರಳವು ಹಣಕಾಸು ಆರೋಗ್ಯ ಸೂಚ್ಯಂಕದಲ್ಲಿ ಕಳಪೆ ಸಾಧನೆ ಮಾಡಿದೆ. 25.4 ಅಂಕ
ಗಳನ್ನು ಪಡೆದಿರುವ ಕೇರಳ 15ನೇ ರ‍್ಯಾಂಕ್‌ ಗಳಿಸಿದೆ. ರಾಜ್ಯಗಳ ಪಟ್ಟಿಯಲ್ಲಿ ಕೊನೆಯಿಂದ ನಾಲ್ಕನೇ ಸ್ಥಾನ ಪಡೆದಿದೆ.

ರಾಜ್ಯವು ಆದಾಯ ಕ್ರೋಡೀಕರಣದಲ್ಲಿ ಅತ್ಯುತ್ತಮ ಸಾಧನೆ (54.2 ಅಂಕ) ತೋರಿದ್ದರೂ, ವೆಚ್ಚದ ಗುಣಮಟ್ಟದಲ್ಲಿ ಅತ್ಯಂತ ಕಡಿಮೆ ಅಂಕ (4.2) ಪಡೆದಿದೆ. ಇದು ರಾಜ್ಯದ ಒಟ್ಟಾರೆ ರ‍್ಯಾಂಕಿಂಗ್‌ನ ಮೇಲೆ ಪರಿಣಾಮ ಬೀರಿದೆ.

2014–15ರಿಂದ 2021–22ರ ನಡುವಿನ ಅಂಕಿಅಂಶಗಳ ಪ್ರಕಾರ ಕೇರಳ 16ನೇ ಸ್ಥಾನದಲ್ಲಿದೆ.

ಕೇರಳದ ವರಮಾನ ಸಂಗ್ರಹ ಹೆಚ್ಚಿಲ್ಲದಿದ್ದರೂ ಅದು ಸಾಮಾಜಿಕ ಕಲ್ಯಾಣ ಯೋಜನೆಗಳಿಗಾಗಿ ಹೆಚ್ಚು ವೆಚ್ಚ ಮಾಡುತ್ತಿದೆ. 2022–23ನೇ ಸಾಲಿನಲ್ಲಿ ಅದು ತನ್ನ ಒಟ್ಟಾರೆ ವೆಚ್ಚದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಶೇ 6.4ರಷ್ಟು ವೆಚ್ಚ ಮಾಡಿದೆ. ದೇಶದ ಪ್ರಮುಖ ರಾಜ್ಯಗಳು ಮಾಡುತ್ತಿರುವ ಸರಾಸರಿ ವೆಚ್ಚಕ್ಕಿಂತ (ಶೇ 5.6) ಇದು ಹೆಚ್ಚಾಗಿದೆ. ಆ ವರ್ಷ ಶಿಕ್ಷಣಕ್ಕಾಗಿ ಕೇರಳವು ಒಟ್ಟು ವೆಚ್ಚದಲ್ಲಿ ಶೇ 14ರಷ್ಟನ್ನು ವ್ಯಯಿಸಿದೆ.  

ನೀತಿ ಆಯೋಗದ ವರದಿಯನ್ನು ಒಪ್ಪದ ಕೇರಳ ಸರ್ಕಾರ ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಸಾಮಾಜಿಕ ವಲಯಗಳಲ್ಲಿ ಹೆಚ್ಚು ವೆಚ್ಚ ಮಾಡುತ್ತಿರುವುದನ್ನು ಸಮರ್ಥಿಸಿಕೊಂಡಿದೆ.

2002ರಲ್ಲೇ ನಿಯಮ ರೂಪಿಸಿದ್ದ ರಾಜ್ಯ

ಹಣಕಾಸು ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ನೀತಿ ಆಯೋಗದ ಪ್ರಯತ್ನ ಮುಖ್ಯವಾದದ್ದು. ಆದರೆ ಹಣಕಾಸು ನಿಯಮಗಳನ್ನು ಮೊದಲು ಜಾರಿ ಮಾಡಿದ್ದೇ ಕರ್ನಾಟಕ. ವಿತ್ತೀಯ ಕೊರತೆಯನ್ನು ರಾಜ್ಯದ ಜಿಡಿಪಿಯ ಶೇ 3ಕ್ಕಿಂತ ಕಡಿಮೆ ಮಾಡುವುದು, ಸಾಲದ ಪ್ರಮಾಣ ಜಿಡಿಪಿ ಆಧರಿಸಿ ವಿವೇಚನಾ ಮಟ್ಟ ಮೀರದಂತೆ ನೋಡಿಕೊಳ್ಳುವುದು, ಅಭಿವೃದ್ಧಿ ವೆಚ್ಚವನ್ನು ಗರಿಷ್ಠ ಪ್ರಮಾಣದಲ್ಲಿ ಸಾಧಿಸಲು ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ–2002 ಜಾರಿ ಮಾಡಲಾಗಿತ್ತು. ನಂತರ ಕೇಂದ್ರ ಅದನ್ನು 2003ರಲ್ಲಿ ಅಳವಡಿಸಿಕೊಂಡಿತ್ತು.

ಆಧಾರ: ನೀತಿ ಆಯೋಗದ ಹಣಕಾಸು ಆರೋಗ್ಯ ಸೂಚ್ಯಂಕ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.