ಜಸ್‌ಪ್ರೀತ್ ಬೂಮ್ರಾ
ಜಸ್‌ಪ್ರೀತ್ ಬೂಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಯೋಗಿಸಿದ 4483 ಎಸೆತಗಳಿಗೆ ಯಾವ ಬ್ಯಾಟರ್ ಕೂಡ ಸಿಕ್ಸರ್ ಬಾರಿಸಿರಲಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾದ ಹೊಸ ಹುಡುಗ ಸ್ಯಾಮ್ ಕಾನ್‌ಸ್ಟಸ್ ಅವರು ಸಿಕ್ಸರ್ ಹೊಡೆದು ಈ ದಾಖಲೆ ಮುರಿದರು. ಸತತ ಮೂರು ವರ್ಷಗಳಲ್ಲಿ ಬೂಮ್ರಾ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟರ್ ಸಿಕ್ಸರ್ ಹೊಡೆದಿರಲಿಲ್ಲ. ಇದು ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಒಂದು ಉದಾಹರಣೆಯಷ್ಟೇ...
ಜೆ ಫ್ ಥಾಮ್ಸನ್, ಡೆನಿಸ್ ಲಿಲ್ಲಿ, ಗ್ಲೆನ್ ಮೆಕ್‌ಗ್ರಾ, ಆ್ಯಂಡಿ ರಾಬರ್ಟ್ಸ್, ಮೈಕೆಲ್ ಹೋಲ್ಡಿಂಗ್, ಮಾಲ್ಕಂ ಮಾರ್ಷಲ್, ಬ್ರೆಟ್ ಲೀ, ಶೋಯೆಬ್ ಅಖ್ತರ್, ವಸೀಂ ಅಕ್ರಂ...
ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್ ವಿಷಯ ಬಂದಾಗಲೆಲ್ಲ ಹಲವಾರು ವರ್ಷಗಳಿಂದ ಈ ಎಲ್ಲ ವೇಗಿಗಳ ಆಟದ ಕುರಿತು ಗಂಟೆಗಟ್ಟಲೇ ಮಾತನಾಡುತ್ತಾರೆ. ದಶಕಗಳಿಂದಲೂ ವೇಗದ ಬೌಲಿಂಗ್ ಎಂದರೆ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳೇ ಲಾಯಕ್ಕು ಎಂಬ ಮಾತಿತ್ತು. ಆದರೆ ಇವತ್ತು ಕಾಲ ಬದಲಾಗಿದೆ. ಈಗ ನಿವೃತ್ತ ಘಟಾನುಘಟಿ ವೇಗಿಗಳ ನಾಲಿಗೆ ಮೇಲೆ ಭಾರತದ ಜಸ್‌ಪ್ರೀತ್ ಬೂಮ್ರಾ ಹೆಸರು ನಲಿಯುತ್ತಿದೆ.
ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಎರಡು ಪಂದ್ಯಗಳಲ್ಲಿ ಸೋತಿದೆ. ಸರಣಿ ಗೆಲುವು ಕೈತಪ್ಪಿದೆ. ಇರುವ ಇನ್ನೊಂದು ಪಂದ್ಯದಲ್ಲಿ ಜಯಿಸಿ ಸರಣಿ ಸಮ ಮಾಡಿಕೊಳ್ಳುವ ಅವಕಾಶವೊಂದು ಉಳಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶವೂ ಬಹುತೇಕ ಕೈತಪ್ಪುವ ಹಂತದಲ್ಲಿದೆ. ಹೀಗಾಗಿ ತಂಡದ ಬಹುತೇಕ ಆಟಗಾರರು ಕ್ರಿಕೆಟ್‌ಪ್ರೇಮಿಗಳ ಟೀಕೆಗೆ ಗುರಿಯಾಗಿದ್ದಾರೆ. ಆದರೆ, ಟೀಕಾಕಾರರು ಪ್ರಜ್ಞಾಪೂರ್ವಕವಾಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ಮಾತ್ರ ಟೀಕಿಸುತ್ತಿಲ್ಲ. ಬದಲಿಗೆ ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ.
ಹಾಲಿ, ಮಾಜಿ ಕ್ರಿಕೆಟಿಗರಷ್ಟೇ ಅಲ್ಲ; ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನೀಸ್ ಕೂಡ ಬೂಮ್ರಾ ಅವರ ಅಭಿಮಾನಿಯಾಗಿಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಬೂಮ್ರಾ ಜಾದೂ ಆವರಿಸಿದೆ. ಆದರೆ, ಇವತ್ತು ಬೂಮ್ರಾ ಅವರನ್ನು ಶ್ಲಾಘಿಸುತ್ತಿರುವ ದಿಗ್ಗಜರೆಲ್ಲರೂ 160 ಕಿ.ಮೀ (ಪ್ರತಿ ಗಂಟೆಗೆ) ವೇಗದ ಎಸೆತಗಳನ್ನು ಪ್ರಯೋಗಿಸಿದ ಯಮವೇಗಿಗಳು. ಅವರಷ್ಟು ವೇಗ ಬೂಮ್ರಾ (153 ಕಿ.ಮೀ) ಅವರಿಗಿಲ್ಲ. ಆದರೆ, ಬೂಮ್ರಾ ಅವರು ತಾವು ಹಾಕುವ ಎಸೆತಗಳ ವೈವಿಧ್ಯ ಮತ್ತು ಶೈಲಿಯಿಂದಾಗಿ ವಿಭಿನ್ನವಾಗಿ ನಿಲ್ಲುತ್ತಾರೆ.
‘ಬೂಮ್ರಾ ಅವರ ಶೈಲಿಯನ್ನು ಅನುಕರಿಸುವುದು ಕಷ್ಟಸಾಧ್ಯ. ಜೂನಿಯರ್ ಆಟಗಾರರಿಗೆ ಹೇಳಿಕೊಡುವುದು ಸಾಧ್ಯವಿಲ್ಲ. ಅಂತಹ ಕ್ಲಿಷ್ಟಕರವಾದ ಶೈಲಿಯನ್ನು ಲೀಲಾಜಾಲವಾಗಿ ರೂಢಿಸಿಕೊಂಡಿರುವ ಬೂಮ್ರಾ ಅಸಾಮಾನ್ಯರೇ ಸರಿ’ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾ ಮೆಚ್ಚುಗೆ ಸೂಚಿಸಿದ್ದಾರೆ. ಭಾರತದ ವೇಗಿಯೊಬ್ಬರು ಇಂತಹ ಸಾಧನೆ ಮಾಡುವುದೆಂದರೆ ಅದು ಅಪರೂಪ.
ಸ್ಪಿನ್ ಬೌಲಿಂಗ್ ಕಲೆಯ ದೇಶ ಭಾರತ. ಭಾರತ ತಂಡವು ಕರ್ನಲ್ ಸಿ.ಕೆ.ನಾಯ್ಡು ಅವರ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿದ ಕಾಲದಿಂದಲೂ ವೇಗದ ಬೌಲರ್‌ಗಳು ಇರಲಿಲ್ಲ. ಇದರಿಂದಾಗಿ ವಿದೇಶಗಳಲ್ಲಿ ವೇಗದ ಬೌಲಿಂಗ್‌ಸ್ನೇಹಿ ಪಿಚ್‌ಗಳ ಮೇಲೆ ಭಾರತದ ಸ್ಪಿನ್ನರ್‌ಗಳೇ ತಮ್ಮ ಸಾಮರ್ಥ್ಯ ಮೀರಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಇತಿಹಾಸವಿದೆ. ದತ್ತು ಫಡ್ಕರ್, ರಮಾಕಾಂತ್ ದೇಸಾಯಿ, ಸೈಯದ್ ಅಬಿದ್ ಅಲಿ, ಮದನ್ ಲಾಲ್, ಕರ್ಸನ್ ಗಾವ್ರಿ ಅವರು ಮಧ್ಯಮವೇಗಿಗಳಾಗಿ ಒಂದಷ್ಟು ಮಿಂಚುತ್ತಿದ್ದರು. ಆದರೆ, ವಿದೇಶಿ ಪಿಚ್‌ಗಳ ಮಟ್ಟಕ್ಕೆ ಏರಲು ಅವರಿಗೆ ಯಾವುದೇ ತರಬೇತಿ ಮತ್ತಿತರ ಸೌಲಭ್ಯಗಳು ಇರಲಿಲ್ಲ. ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾದಲ್ಲಿ ಶರವೇಗದ ಎಸೆತಗಳ ಮುಂದೆ ಭಾರತದ ಬ್ಯಾಟರ್‌ಗಳು ಆಡುವ ಕಲೆಯನ್ನು ಕಲಿತಿದ್ದರು. ಅದೂ ಹೆಲ್ಮೆಟ್ ಇಲ್ಲದೇ!
1983ರ ವಿಶ್ವಕಪ್ ಜಯದ ನಂತರ ವೇಗದ ಬೌಲಿಂಗ್‌ಗೆ ಹೆಚ್ಚು ಒತ್ತು ಸಿಗತೊಡಗಿತು. ಆಗ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರೂ ಮಧ್ಯಮವೇಗಿಯಾಗಿದ್ದು ಅದಕ್ಕೆ ಕಾರಣ. ಆ ವಿಶ್ವಕಪ್ ಜಯಿಸಲು ಮಧ್ಯಮವೇಗಿಗಳಾದ ಕಪಿಲ್, ಮದನ್ ಲಾಲ್, ರೋಜರ್ ಬಿನ್ನಿ ಹಾಗೂ ಬಲ್ವಿಂದರ್ ಸಿಂಗ್ ಸಂಧು ಅವರ ಬೌಲಿಂಗ್‌ನ ಪಾತ್ರವು ದೊಡ್ಡದಿತ್ತು. ಅದರಿಂದಾಗಿ ನಂತರದ ಪೀಳಿಗೆಗಳಲ್ಲಿ ಮಧ್ಯಮವೇಗದ ಬೌಲರ್‌ಗಳು ಉದಯಿಸತೊಡಗಿದರು. ಚೇತನ್ ಶರ್ಮಾ ಹಾಗೂ ಮನೋಜ್ ಪ್ರಭಾಕರ್ ಅದರಲ್ಲಿ ಪ್ರಮುಖರು.
ಆದರೆ, ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟದ್ದೇ ತಡ ಮಿಂಚಿನ ಸಂಚಲನವಾಯಿತು. ‘ಮೈಸೂರು ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾದ ಶ್ರೀನಾಥ್ ಅವರನ್ನು ಭಾರತದ ಪ್ರಥಮ ವೇಗಿ ಎನ್ನಲಡ್ಡಿಯಿಲ್ಲ. ಅವರು 150 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವೇಗದ ಎಸೆತವನ್ನು ಪ್ರಯೋಗಿಸಿ ಗಮನ ಸೆಳೆದಿದ್ದರು. ಶಿಸ್ತು, ಸಂಯಮ ಮತ್ತು ಕಡಿಮೆ ರನ್ ಕೊಟ್ಟು ವಿಕೆಟ್ ಗಳಿಸುವ ಕಲೆ ಅವರಲ್ಲಿತ್ತು. ಭಾರತವೂ ವೇಗಿಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಅವರು ತೋರಿಸಿಕೊಟ್ಟರು.
ಅವರ ಹಾದಿಯಲ್ಲಿ ಜಹೀರ್ ಖಾನ್, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಎಸ್.ಶ್ರೀಶಾಂತ್, ಉಮೇಶ್ ಯಾದವ್, ವೆಂಕಟೇಶ್ ಪ್ರಸಾದ್, ಅಭಿಮನ್ಯು ಮಿಥುನ್, ಇಶಾಂತ್ ಶರ್ಮಾ, ದೊಡ್ಡ ಗಣೇಶ್, ಭುವನೇಶ್ವರ್ ಕುಮಾರ್ ಅವರು ತಮ್ಮ ಸಾಮರ್ಥ್ಯ ಮೆರೆದರು. ಈಗ ಬೂಮ್ರಾ ಅವರೆಲ್ಲರಿಗಿಂತ ಮುಂದಿದ್ದಾರೆ.
ಬೂಮ್ರಾ ಅವರು ಪ್ರಯೋಗಿಸುವ ಎಸೆತಗಳು ಮತ್ತು ಗಳಿಸುವ ವಿಕೆಟ್‌ಗಳಿಗಿಂತ ಹೆಚ್ಚು ಆಕರ್ಷಕವೆಂದರೆ, ಅವರ ರನ್ ಅಪ್ ಮತ್ತು ಬೌಲಿಂಗ್ ಶೈಲಿ. ಮೇಲ್ನೋಟಕ್ಕೆ ಅತ್ಯಂತ ಕಡಿಮೆ ರನ್ ಅಪ್ ಎಂದೆನಿಸಿದರೂ ಅವರು 150 ಕಿ.ಮೀ ಆಸುಪಾಸಿನಲ್ಲಿ ಪ್ರಯೋಗಿಸುವ ಯಾರ್ಕರ್‌ಗಳು ಅತ್ಯಂತ ಪರಿಣಾಮಕಾರಿ.
43 ಟೆಸ್ಟ್ ಪಂದ್ಯಗಳಿಂದ 203 ವಿಕೆಟ್‌ಗಳನ್ನು ಗಳಿಸಿರುವ ಬೂಮ್ರಾ 19.5ರ ಸರಾಸರಿ ಹೊಂದಿದ್ದಾರೆ. ಇದು ವೇಗದ ಬೌಲಿಂಗ್‌ನಲ್ಲಿಯೇ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸರಾಸರಿಯಾಗಿದೆ. ಈ ಹಾದಿಯಲ್ಲಿ ಅವರು ವೆಸ್ಟ್ ಇಂಡೀಸ್‌ನ ಜೋಲ್ ಗಾರ್ನರ್ (20.34) ಮತ್ತು ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ (20.39) ಅವರನ್ನು ಹಿಂದಿಕ್ಕಿದ್ದಾರೆ. ಇದೇನೂ ಸಣ್ಣ ಸಾಧನೆಯಲ್ಲ.
ದಶಕಗಳ ಹಿಂದೆ ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರ ರನ್ ಅಪ್ ನೋಡಿದವರಿಗೆ ಬೂಮ್ರಾ ಅವರ ರನ್ ಅಪ್ ತೀರಾ ಚಿಕ್ಕದು ಎನಿಸುವುದರಲ್ಲಿ ಸಂಶಯವಿಲ್ಲ. ಶೋಯೆಬ್ ಅವರು ಓಡಿ ಬರುತ್ತಿದ್ದ ರೀತಿಗೆ ಬ್ಯಾಟರ್‌ಗಳು ಒಂದರೆಕ್ಷಣ ನಡುಗುತ್ತಿದ್ದರು. ಆದರೆ ಬೂಮ್ರಾ ಅವರ ರನ್ ಅಪ್ ಎಲ್ಲ ಸೇರಿ 15 ಹೆಜ್ಜೆಗಳು ಮಾತ್ರ.
‘ಬೂಮ್ರಾ ಅವರ ಬೌಲಿಂಗ್ ಶೈಲಿ ಬಹಳ ಆಸಕ್ತಿಕರವಾಗಿದೆ. ಬಹಳ ಚುಟುಕಾದ ರನ್ ಅಪ್ ಅದು. ಮೊದಲಿಗೆ ಜಾಗಿಂಗ್ ಮಾದರಿಯಲ್ಲಿ ಆರಂಭಿಸುತ್ತಾರೆ. ಉಳಿದ ಸ್ವಲ್ಪ ಅಂತರ ಓಡುತ್ತಾರೆ. ನೇರವಾದ (ಸೆಟೆದ ರೀತಿಯ) ತೋಳುಗಳನ್ನು ತಿರುಗಿಸಿ ಬೌಲಿಂಗ್ ಮಾಡುತ್ತಾರೆ. ಅವರ ಶೈಲಿಯು ಕ್ರಿಕೆಟ್ ಆಟದ ಯಾವುದೇ ಪುಸ್ತಕದಲ್ಲಿಯೂ ಇಲ್ಲ. ಬೇರೆಲ್ಲ ವೇಗಿಗಳಿಗಿಂತಲೂ ಅವರು ಪೂರ್ತಿ ಭಿನ್ನರಾಗಿದ್ದಾರೆ. ನನ್ನ ಕಾಲದಲ್ಲಿದ್ದ ವೇಗಿ ಜೆಫ್ ಥಾಮ್ಸನ್ ಕೂಡ ಎಲ್ಲರಿಗಿಂತ ಭಿನ್ನ ಶೈಲಿಯವರಾಗಿದ್ದರು. ಬೂಮ್ರಾ ಅವರನ್ನು ನೋಡಿದಾಗ ಜೆಫ್ ನೆನಪಾಗುತ್ತಾರೆ‘ ಎಂದು ಆಸ್ಟ್ರೇಲಿಯಾದ ದಿಗ್ಗಜ ಡೆನಿಸ್ ಲಿಲ್ಲಿ ಹೇಳುತ್ತಾರೆ.
ಬೂಮ್ರಾ ಅವರ ಈ ಶೈಲಿಯು ಅಪಾಯಕಾರಿ. ಬೆನ್ನುಹುರಿಯ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಅವರು ಬಹುಬೇಗನೆ ಗಾಯಗೊಳ್ಳುವ ಸಾಧ್ಯತೆ ಇದೆ ಎಂದು ಎರಡು ವರ್ಷಗಳ ಹಿಂದೆ ಜೆಫ್ ಥಾಮ್ಸನ್ ಅವರು ಹೇಳಿದ್ದರು.
ಅಂತಹದೊಂದು ಗಾಯದಿಂದ ಚೇತರಿಸಿಕೊಂಡು ಕ್ರೀಡಾಂಗಣಕ್ಕೆ ಮರಳಿರುವ ಬೂಮ್ರಾ ಮತ್ತೆ ದೂಳೆಬ್ಬಿಸುತ್ತಿದ್ದಾರೆ. ಅದು ಅವರ ದೈಹಿಕ ಸಾಮರ್ಥ್ಯವಷ್ಟೇ ಅಲ್ಲ, ಗಟ್ಟಿ ಮನೋಬಲವೂ ಹೌದು. ಅವರ ಯಶಸ್ಸಿನ ಹಿಂದಿರುವ ಗುಟ್ಟು ಇನ್ನೊಂದಿದೆ. ಅದೇನೆಂದರೆ, ಅವರು ಎಸೆತಗಳನ್ನು ಪ್ರಯೋಗಿಸುವಾಗ ಕೇವಲ ವೇಗಕ್ಕೆ ಮಹತ್ವ ನೀಡುವುದಿಲ್ಲ. ಲೈನ್, ಲೆಂಗ್ತ್, ಸ್ವಿಂಗ್ ಮತ್ತು ಸೀಮ್ ಬ್ಯಾಲೆನ್ಸ್‌ಗೂ ಆದ್ಯತೆ ಕೊಡುತ್ತಾರೆ. ಪಿಚ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಯಾ ಪಿಚ್‌ಗೆ ತಕ್ಕಂತೆ ಬೌಲಿಂಗ್ ಮಾಡುತ್ತಾರೆ. ಅವರ ಐಪಿಎಲ್ ಅಂಕಿಸಂಖ್ಯೆಗಳನ್ನು ತೆಗೆದು ನೋಡಿದರೆ ಇದರ ಅರಿವಾಗುತ್ತದೆ.
ಸದ್ಯ ಮೂರು ಮಾದರಿಗಳಲ್ಲಿಯೂ ಶಿಸ್ತಿನ ಬೌಲಿಂಗ್ ಮತ್ತು ಎಕಾನಮಿ ನಿರ್ವಹಣೆಯಲ್ಲಿ ಉತ್ತಮ ಸ್ಥಿರತೆ ಹೊಂದಿರುವ ಬೌಲರ್ ಬೂಮ್ರಾ. ಅವರನ್ನು ಬಿಟ್ಟರೆ ಮೊಹಮ್ಮದ್ ಶಮಿಗೆ ಅಂತಹ ಸಾಮರ್ಥ್ಯವಿದೆ. ಆದರೆ, ಅವರು ಗಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಗಮನ ಸೆಳೆದ ಮಯಂಕ್ ಯಾದವ್ ಮತ್ತು ಉಮ್ರಾನ್ ಮಲಿಕ್ ಅವರು 150 ಕಿ.ಮೀ ವೇಗದ ಎಸೆತಗಳನ್ನು ಹಾಕಿ ಗಮನ ಸೆಳೆದಿದ್ದಾರೆ. ಬೂಮ್ರಾ ಅವರನ್ನು ನೋಡಿ ಜೂನಿಯರ್ ಹಂತದಲ್ಲಿ ಬಹಳಷ್ಟು ಆಟಗಾರರು ವೇಗದ ಬೌಲಿಂಗ್‌ನತ್ತ ಮುಖ ಮಾಡಿದ್ದಾರೆ.
‘ಸ್ಟಂಪ್‌ಗಳು ಗಾಳಿಯಲ್ಲಿ ಹಾರಿಹೋಗಿ ಬೀಳುವುದನ್ನು ನೋಡುವುದೆಂದರೆ ನನಗೆ ಅಪಾರ ಸಂತಸ..’ ಎಂದು ಹೇಳುವ ಬೂಮ್ರಾ ಅವರಿಗೆ ವಿಕೆಟ್ ಗಳಿಕೆಯ ಹಸಿವು ನೀಗಿಲ್ಲ. ಆದ್ದರಿಂದಲೇ ಪ್ರತಿದಿನವೂ ಹೊಸದೊಂದು ಅಸ್ತ್ರವನ್ನು ತಮ್ಮ ಬತ್ತಳಿಕೆಗೆ ಸೇರಿಸುತ್ತಾರೆ. ಭಾರತವನ್ನು ಸದಾ ಕಾಡುವ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಅಂತಹ ಬ್ಯಾಟರ್‌ಗಳಿಗೂ ‘ತಲೆನೋವು’ ತರುತ್ತಾರೆ.
ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಗಳಲ್ಲಿಯೂ ಜಸ್‌ಪ್ರೀತ್ ಬೂಮ್ರಾ ‘ಡೆತ್ ಓವರ್’ ಪರಿಣತರೆಂದೇ ಖ್ಯಾತರಾಗಿದ್ದಾರೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಿದಷ್ಟೇ ಪರಿಣಾಮಕಾರಿಯಾಗಿ ಅವರು ಕೊನೆಯ ಹಂತದ ಓವರ್‌ಗಳಲ್ಲಿ ರಿವರ್ಸ್ ಸ್ವಿಂಗ್ ಹಾಗೂ ಯಾರ್ಕರ್‌ಗಳನ್ನು ನಿಖರವಾಗಿ ಪ್ರಯೋಗಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಬ್ಯಾಟರ್‌ಗಳು ಮೇಲುಗೈ ಸಾಧಿಸಿದರೂ ಎದೆಗುಂದದೇ ವಿಕೆಟ್ ಉರುಳಿಸುವ ಕೌಶಲ ಅವರಿಗೆ ಇದೆ. ಕೆಲವು ವರ್ಷಗಳ ಹಿಂದೆ ಡೆತ್ ಓವರ್‌ಗಳಲ್ಲಿ ನೋಬಾಲ್ ಹಾಕುವ ಲೋಪ ಮಾಡುತ್ತಿದ್ದರು. ಇದರಿಂದಾಗಿ ಟೀಕೆಗಳಿಗೂ ಒಳಗಾಗಿದ್ದರು. ಆದರೆ ಅದನ್ನು ಬೇಗನೆ ತಿದ್ದಿಕೊಂಡ ಅವರು ಯಶಸ್ವಿ ಬೌಲರ್ ಆಗಿ ರೂಪುಗೊಂಡರು.
ಇವತ್ತು ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ. ನಾನೂ ಚೆನ್ನಾಗಿ ಆಡುತ್ತಿದ್ದೇನೆ. ಮುಂದೊಂದು ದಿನ ಸಾಮರ್ಥ್ಯ ಕಡಿಮೆಯಾದಾಗ ಇದೇ ಜನ ಟೀಕಿಸುತ್ತಾರೆ. ಆದ್ದರಿಂದ ಹೊಗಳಿಕೆ, ತೆಗಳಿಕೆ ಎರಡನ್ನೂ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಸಿಕ್ಕ ಅವಕಾಶದಲ್ಲಿ ಉತ್ತಮವಾಗಿ ಆಡಲು ಪ್ರಯತ್ನಿಸಬೇಕು. ಎಲ್ಲವನ್ನೂ ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು.–ಜಸ್‌ಪ್ರೀತ್ ಬೂಮ್ರಾ
ವಿರಾಟ್ ಕೊಹ್ಲಿಯೊಳಗಿನ ಕಿಂಗ್ ಈಗ ಅಂತ್ಯವಾಗಿದ್ದಾನೆ. ಹೊಸ ಕಿಂಗ್ ಆಗಿ ಈಗ ಜಸ್‌ಪ್ರೀತ್ ಬೂಮ್ರಾ ಉದಯಿಸಿದ್ದಾರೆ.–ಸೈಮನ್ ಕ್ಯಾಟಿಚ್, ವೀಕ್ಷಕ ವಿವರಣೆಕಾರ
ವೇಗದ ಬೌಲರ್ ಅಭಿಮನ್ಯು ಮಿಥುನ್ ಜತೆ ಜಾವಗಲ್ ಶ್ರೀನಾಥ್
ಕಪಿಲ್ ದೇವ್
ಮೊಹಮ್ಮದ್ ಶಮಿ
ಶೋಯೆಬ್ ಅಖ್ತರ್
ಬ್ರೆಟ್ ಲೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.