ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪರ್ಷಿಯನ್ ಕೊಲ್ಲಿಯಲ್ಲಿರುವ ಹೊರ್ಮುಜ್ ಜಲಸಂಧಿ ಹಾಗೂ ಕೆಂಪು ಸಮುದ್ರವು ತೈಲ ಮತ್ತು ಸರಕು ಸಾಗಣೆ ಮಾಡುವ ಪ್ರಮುಖ ಜಲಮಾರ್ಗಗಳಾಗಿವೆ. ಇಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ತಡೆ ಒಡ್ಡಿದರೆ ಭಾರತ, ಚೀನಾ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳಿಗೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದರಿಂದ ಇಂಧನ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ. ವಾರದ ಹಿಂದೆ ಹೆಚ್ಚಾಗಿದ್ದ ಕಚ್ಚಾ ತೈಲದ ಬೆಲೆಯಲ್ಲಿ ಈಗ ಕೊಂಚ ಇಳಿಕೆಯಾಗಿದೆ. ಹಾಗಾಗಿ, ಸದ್ಯಕ್ಕೆ ಭಾರತಕ್ಕೆ ಗಂಭೀರ ಆತಂಕ ಇಲ್ಲ ಎನ್ನಲಾಗುತ್ತಿದೆ. ಆದರೆ, ಎರಡೂ ರಾಷ್ಟ್ರಗಳ ನಡುವಿನ ಸೇನಾ ಕಲಹ ಮುಂದುವರಿದರೆ ಪರಿಸ್ಥಿತಿ ಬದಲಾಗಬಹುದು.
––––
ದೇಶ ದೇಶಗಳ ನಡುವೆ ಒಂದಿಲ್ಲೊಂದು ಸಂಘರ್ಷ ಹುಟ್ಟಿಕೊಳ್ಳುತ್ತಿದ್ದು, ಇದೀಗ ಈ ಪಟ್ಟಿಗೆ ಇಸ್ರೇಲ್–ಇರಾನ್ ಸೇರಿವೆ. ಇರಾನ್‌ನ ತೈಲ ಘಟಕಗಳು, ರಕ್ಷಣಾ ನೆಲೆಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಕೂಡ ಪ್ರತಿದಾಳಿ ನಡೆಸಿದ್ದು, ಎರಡೂ ಕಡೆ ಸಾವು–ನೋವು ವರದಿಯಾಗಿದೆ. ಪಶ್ಚಿಮ ಏಷ್ಯಾದ ಎರಡು ರಾಷ್ಟ್ರಗಳ ನಡುವಿನ ಸಂಘರ್ಷವು ಮತ್ತಷ್ಟು ತೀವ್ರಗೊಂಡರೆ, ಆ ಎರಡು ರಾಷ್ಟ್ರಗಳು ಮಾತ್ರವಲ್ಲದೇ ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಭಾರತವು ಇರಾನ್‌ನ ಜಲಮಾರ್ಗ ಮತ್ತು ವಾಯುಮಾರ್ಗಗಳ ಮೂಲಕ ಹಲವು ರೀತಿಯ ಸರಕು ಸಾಗಣೆ ಮಾಡುತ್ತಿದೆ. ಹೊರ್ಮುಜ್ ಜಲಸಂಧಿ ಮತ್ತು ಕೆಂಪು ಸಮುದ್ರವು ಭಾರತವಷ್ಟೇ ಅಲ್ಲದೇ ಹಲವು ದೇಶಗಳಿಗೆ ಪ್ರಮುಖ ಮಾರ್ಗಗಳಾಗಿವೆ. ಹೊರ್ಮುಜ್ ಜಲಸಂಧಿ ಮಾರ್ಗದ ಮೇಲೆ ಇರಾನ್ ನೇರ ನಿಯಂತ್ರಣ ಹೊಂದಿದೆ. ಕೆಂಪು ಸಮುದ್ರದ ನೌಕಾ ಮಾರ್ಗದ ಮೇಲೆ ಅದಕ್ಕೆ ನೇರ ನಿಯಂತ್ರಣ ಇಲ್ಲದಿದ್ದರೂ ಯೆಮನ್‌ನಲ್ಲಿ ಕಾರ್ಯಾಚರಿಸುತ್ತಿರುವ ಹುಥಿ ಬಂಡುಕೋರರ ಮೂಲಕ ಜಲ ಮಾರ್ಗವನ್ನು ಅದು ತಡೆಯಬಹುದು.
ಹೊರ್ಮುಜ್ ಜಲಸಂಧಿ ಏಕೆ ಮುಖ್ಯ?: ಜಾಗತಿಕವಾಗಿ ಈ ಜಲಸಂಧಿಯ ಮೂಲಕವೇ ಐದನೇ ಒಂದು ಭಾಗದಷ್ಟು ಕಚ್ಚಾತೈಲ ಸಾಗಣೆ ಆಗುತ್ತಿದೆ. ಭಾರತವು ತನ್ನ ಬಳಕೆಯ ಹೆಚ್ಚಿನ ಪ್ರಮಾಣದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ಈ ಪೈಕಿ ಬಹುಪಾಲು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲವು (ಎನ್‌ಎನ್‌ಜಿ) ಈ ಮಾರ್ಗದ ಮೂಲಕ ಬರುತ್ತಿದೆ.
ಚಿಂತಕರ ಚಾವಡಿ ಜಿಟಿಆರ್‌ಐ ಪ್ರಕಾರ, ಯಾವುದೇ ರೀತಿಯ ಸೇನಾ ಚಟುವಟಿಕೆ ಮತ್ತಿತರ ಕಾರಣಗಳಿಂದ ಈ ಜಲಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ಬಂಧವಾದರೆ, ಭಾರತಕ್ಕೆ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತದೆ. ಅದರಿಂದ ಸರಕುಗಳ ಬೆಲೆ ಹೆಚ್ಚಾಗಿ, ಹಣದುಬ್ಬರ ಉಂಟಾಗುತ್ತದೆ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಹಣಕಾಸು ನಿರ್ವಹಣೆ ಕಷ್ಟವಾಗುತ್ತದೆ.
ಕೆಂಪು ಸಮುದ್ರದಲ್ಲಿ ಕಂಪನ: ಇಸ್ರೇಲ್ ಜೂನ್ 14–15ರಂದು ಯೆಮನ್‌ನ ಹುಥಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸಿದ ನಂತರ ಕೆಂಪು ಸಮುದ್ರದಲ್ಲಿ ಕಂಪನ ಸೃಷ್ಟಿಯಾಗಿದೆ. ಹುಥಿ ಪಡೆಗಳು ಕೆಂಪು ಸಮುದ್ರದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿವೆ.
ಭಾರತದಿಂದ ಯುರೋಪ್, ದಕ್ಷಿಣ ಅಮೆರಿಕ ಮತ್ತು ಅಮೆರಿಕದ ಪೂರ್ವ ಕರಾವಳಿ ಸೇರಿದಂತೆ ಪಶ್ಚಿಮ ದೇಶಗಳಿಗೆ ರಫ್ತಾಗುವ ಸರಕುಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಕೆಂಪು ಸಮುದ್ರದಲ್ಲಿರುವ ಬಾಬ್ –ಎಲ್ ಮಂಡಬ್ ಜಲಸಂಧಿ ಮೂಲಕ ಸಾಗಣೆಯಾಗುತ್ತವೆ.
ಇಸ್ರೇಲ್ ಮೇಲೆ 2023ರ ಅ.7ರಂದು ಹಮಾಸ್ ಬಂಡುಕೋರರು ದಾಳಿ ನಡೆಸಿದ ನಂತರ ಆರಂಭಗೊಂಡಿದ್ದ ಸಂಘರ್ಷದ ಬಳಿಕ ನಡೆದ ಬೆಳವಣಿಗೆಗಳಿಂದಾಗಿ ಹುಥಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಆರಂಭಿಸಿದ್ದರು. ಇದರಿಂದಾಗಿ ಬಾಬ್ ಎಲ್ ಮಂಡಬ್ ಜಲಸಂಧಿಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿತ್ತು. ಅಮೆರಿಕವು ಬಂಡುಕೋರರ ಮೇಲೆ ದಾಳಿ ನಡೆಸಿ ಅವರನ್ನು ಬಗ್ಗುಬಡಿದ ನಂತರ ಆ ಮಾರ್ಗದಲ್ಲಿ ಹಡಗುಗಳ ಸಂಚಾರ ಸರಾಗವಾಯಿತು. ಕ್ರಮೇಣ ಭಾರತದ ಸರಕು ಸಾಗಣೆ ಹಡಗುಗಳು ಈ ಮಾರ್ಗದಲ್ಲಿ ಹಾದುಹೋಗಲಾರಂಭಿಸಿದ್ದವು. ಇದರಿಂದಾಗಿ ಭಾರತದಿಂದ ಅಮೆರಿಕ ಮತ್ತು ಯುರೋಪ್‌ಗೆ ಪ್ರಯಾಣಿಸುವ ಕಾಲಾವಧಿಯಲ್ಲಿ 15–20 ದಿನ ಕಡಿಮೆಯಾಗುತ್ತಿತ್ತು. ಈಗ ಈ ಮಾರ್ಗಕ್ಕೆ ಕುತ್ತು ಬರಬಹುದು ಎನ್ನುವ ಆತಂಕ ವ್ಯಕ್ತವಾಗಿದೆ.
ಭಾರತದಿಂದ ಅಮೆರಿಕಕ್ಕೆ ಮತ್ತು ಅಲ್ಲಿಂದ ಇಲ್ಲಿಗೆ ಹೆಚ್ಚಿನ ಸರಕುಗಳ ಸಾಗಣೆಗೆ ಈಗಲೂ ಕೆಂಪು ಸಮುದ್ರದ ಮಾರ್ಗವನ್ನೇ ಬಳಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿಯೂ ಸರಕು ಸಾಗಣೆಗೆ ಈ ಜಲಮಾರ್ಗವು ಮಹತ್ವದ್ದಾಗಿದೆ. ಆದರೆ, ಇಸ್ರೇಲ್ ದಾಳಿಯಿಂದ ತೀವ್ರ ಸಾವು–ನೋವು ಅನುಭವಿಸುತ್ತಿರುವ ಇರಾನ್, ಹೊರ್ಮುಜ್ ಹಾಗೂ ಕೆಂಪು ಸಮುದ್ರದ ಮಾರ್ಗಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಒಡ್ಡಿದೆ.
ಜತೆಗೆ, ಜಾಗತಿಕವಾಗಿ ಇರಾನ್ ಶೇ 3ರಷ್ಟು ಕಚ್ಚಾ ತೈಲವನ್ನು ಉತ್ಪಾದಿಸುತ್ತಿದ್ದು, ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ. ಈಗ ಉದ್ಭವಿಸಿರುವ ಸಂಘರ್ಷದಿಂದ ತೈಲ ಪೂರೈಕೆಗೆ ಅಡ್ಡಿಯುಂಟಾಗುವುದರಿಂದ ಜಾಗತಿಕ ಮಟ್ಟದಲ್ಲಿ ತೈಲಕ್ಕೆ ಬೇಡಿಕೆ ಹೆಚ್ಚಾಗಲಿದೆ. ಅದರ ಪರಿಣಾಮ ಭಾರತದ ಮೇಲೂ ಉಂಟಾಗಲಿದ್ದು, ದೇಶದಲ್ಲಿ ಇಂಧನ ಬೆಲೆ ಹೆಚ್ಚಾಗಲಿದೆ. ಜನ ಹಲವು ರೀತಿಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಬೇಕಾಗುತ್ತದೆ.
ವಾಯುಪ್ರದೇಶ ಬಳಕೆಗೆ ಅಡ್ಡಿ: ಸಂಘರ್ಷದ ಕಾರಣ ಇಸ್ರೇಲ್ ಮತ್ತು ಇರಾನ್ ತಮ್ಮ ವಾಯುಪ್ರದೇಶಗಳನ್ನು ನಿರ್ಬಂಧಿಸಿವೆ. ಇದರಿಂದ ಜಾಗತಿಕ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದಲ್ಲಿಯೂ ಕೆಲವು ವಿಮಾನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಕೆಲವು ವಿಮಾನಗಳನ್ನು ರದ್ದುಪಡಿಸಲಾಗಿದೆ.
ಇತ್ತೀಚೆಗೆ, ಏರ್ ಇಂಡಿಯಾದ ಮುಂಬೈ–ಲಂಡನ್ ವಿಮಾನವು ಆಗಸದಲ್ಲಿ ಮೂರು ಗಂಟೆ ತಿರುಗಾಡಿ ಭಾರತಕ್ಕೇ ವಾಪಸ್ ಆಗಿತ್ತು. ಇರಾನ್ ವಾಯುಪ್ರದೇಶ ಮುಚ್ಚಿದ್ದರಿಂದ ವಾಪಸ್ ಆಗಬೇಕಾಯಿತು ಎಂದು ಏರ್ ಇಂಡಿಯಾ ಹೇಳಿದೆ. ಸಂಘರ್ಷದಿಂದಾಗಿ ತನ್ನ 12ಕ್ಕೂ ಹೆಚ್ಚು ವಿಮಾನಗಳ ಪ್ರಯಾಣವನ್ನು ರದ್ದುಪಡಿಸಲಾಗಿದೆ ಇಲ್ಲವೇ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಇರಾನ್, ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತದ ವಿಮಾನಗಳು ಹೆಚ್ಚು ದೂರ ಪ್ರಯಾಣಿಸಬೇಕಾಗಿದೆ ಹಾಗೂ ಹೆಚ್ಚು ಇಂಧನ ಹಾಗೂ ಸಮಯ ವ್ಯಯಿಸಬೇಕಾಗಿದೆ. ಸಂಘರ್ಷ ಹೆಚ್ಚು ದಿನ ನಡೆದರೆ, ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರ ಮೇಲೆ ಆರ್ಥಿಕ ಹೊರೆ ಹೆಚ್ಚಲಿದೆ.
ಇರಾನ್ ಜೊತೆ ವ್ಯಾಪಾರ ಕಡಿಮೆ
ಇತರ ಅರಬ್ ರಾಷ್ಟ್ರಗಳಿಗೆ ಹೋಲಿಸಿದರೆ ಇರಾನ್‌ನೊಂದಿಗೆ ಭಾರತದ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣ ಕಡಿಮೆ. ಜಾಗತಿಕ ಮಟ್ಟದಲ್ಲಿ ತೈಲ ಉತ್ಪಾದನೆಯಲ್ಲಿ ಇರಾನ್ ಮುಂಚೂಣಿಯಲ್ಲಿದ್ದರೂ ಭಾರತ ಇರಾನ್‌ನಿಂದ ಕಚ್ಚಾ ತೈಲ ಖರೀದಿ ಮಾಡುವುದಿಲ್ಲ. ಇದಕ್ಕೆ ಅಮೆರಿಕವು ಇರಾನ್ ಮೇಲೆ ಹೇರಿರುವ ನಿರ್ಬಂಧ ಕಾರಣ ಎಂದು ಹೇಳಲಾಗಿದೆ. 2017ರಲ್ಲಿ ಅಮೆರಿಕ ನಿರ್ಬಂಧ ಹೇರುವ ಮುನ್ನ ಇರಾನ್ ಭಾರತದ ಮೂರನೇ ಅತಿ ದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿತ್ತು.
ಭಾರತವು ಇರಾನ್‌ಗೆ ಬಾಸುಮತಿ ಅಕ್ಕಿ, ಚಹಾ ಪುಡಿ, ಸಕ್ಕರೆ, ತಾಜಾ ಹಣ್ಣುಗಳು, ಔಷಧಿಗಳು, ತಂಪು ಪಾನೀಯಗಳು, ಕಾಳುಗಳು, ನೆಲಗಡಲೆಯನ್ನು ರಫ್ತು ಮಾಡಿದರೆ, ಸ್ಯಾಚುರೇಟೆಡ್ ಮಿಥೆನಾಲ್, ಪೆಟ್ರೋಲಿಯಂ ಉತ್ಪನ್ನಗಳು, ಸೇಬು, ಒಣಕರ್ಜೂರ, ಬಾದಾಮಿ, ರಾಸಾಯನಿಕಗಳು ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
ಭಾರತದ ನಿಲುವೇನು?
ಭಾರತವು ಇಸ್ರೇಲ್ ಮತ್ತು ಇರಾನ್ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಇಸ್ರೇಲ್‌ನಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಇರಾನಿನ ಛಬಹಾರ್ ಬಂದರನ್ನು ಭಾರತ ಅಭಿವೃದ್ಧಿ ಪಡಿಸುತ್ತಿದೆ. ಇದು ಭಾರತಕ್ಕೆ ಅಫ್ಗಾನಿಸ್ತಾನ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಮಹತ್ವದ್ದಾಗಿದೆ. ಹಾಗಾಗಿ, ಸಂಘರ್ಷದ ಬೆಳವಣಿಗೆಯ ನಡುವೆಯೂ ಇಬ್ಬರೊಂದಿಗೂ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಲು ಅದು ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತ ಯಾವ ರಾಷ್ಟ್ರವನ್ನೂ ಬಹಿರಂಗವಾಗಿ ಬೆಂಬಲಿಸಿಲ್ಲ. ಈಗಿನ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಬೇಕು ಎಂದು ಇಸ್ರೇಲ್ ಮತ್ತು ಇರಾನ್‌ಗೆ ಸಲಹೆ ನೀಡಿದೆ. ಎರಡೂ ರಾಷ್ಟ್ರಗಳೊಂದಿಗೆ ಭಾರತ ಆತ್ಮೀಯ ಸಂಬಂಧ ಹೊಂದಿದ್ದು, ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಿರುವುದಾಗಿ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದಾಗಲೂ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಅಗತ್ಯದ ಬಗ್ಗೆ ಸಲಹೆ ನೀಡಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯು ಇಸ್ರೇಲ್‌ನ ಕ್ರಮವನ್ನು ಖಂಡಿಸಿ ನೀಡಿರುವ ಹೇಳಿಕೆಯಿಂದ ಭಾರತ ಅಂತರ ಕಾಯ್ದುಕೊಂಡಿದೆ. ತಾನು ಈ ಸಂಬಂಧದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಎಂದು ಅದು ಹೇಳಿದೆ.
ಆಧಾರ: ಪಿಟಿಐ, ರಾಯಿಟರ್ಸ್, ಬಿಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.