ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಗೆ ಈಗ 18ರ ಹರೆಯ. ಈ ಟೂರ್ನಿಯು ಅಗಾಧವಾಗಿ ಬೆಳೆಯುವಲ್ಲಿ ಕರ್ನಾಟಕದ ಆಟಗಾರರ ಕಾಣಿಕೆಯೂ ದೊಡ್ಡದು. ಅದರಲ್ಲೂ ಐಪಿಎಲ್ ಆರಂಭದ ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡದ ದಿಗ್ಗಜ ಕನ್ನಡಿಗರು ಇದರಲ್ಲಿ ಆಡಿದ್ದರು. ಅವರ ವರ್ಚಸ್ಸು ಕೂಡ ಐಪಿಎಲ್ ಬೆಳವಣಿಗೆಗೆ ಮೆಟ್ಟಿಲುಗಳಾಗಿದ್ದವು ಎಂದರೆ ಅತಿಶಯೋಕ್ತಿಯಲ್ಲ.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ತಾಳ್ಮೆಯ ಆಟದಿಂದ ‘ಗೋಡೆ’ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಐಪಿಎಲ್ ಪಂದ್ಯದಲ್ಲಿ ಸಿಕ್ಸರ್ ಹೊಡೆದು ಬೆರಗು ಮೂಡಿಸಿದ್ದರು. ಟಿ20 ಮಾದರಿ ಬೌಲರ್‌ಗಳಿಗೆ ಕಂಟಕ ಎಂಬ ಆತಂಕ ಮೂಡಿದ್ದ ಕಾಲದಲ್ಲಿ ಅನಿಲ್ ಕುಂಬ್ಳೆ ತಮ್ಮ ಸ್ಪಿನ್ ಇಲ್ಲಿಯೂ ಸೈ ಎಂದಿದ್ದರು. ಆಗಿನ್ನೂ ದೇಶಿ ಕ್ರಿಕೆಟ್‌ನಲ್ಲಿ ಹೆಜ್ಜೆ ಗುರುತು ಮೂಡಿಸಲು ಆರಂಭಿಸಿದ್ದ ಮನೀಷ್ ಪಾಂಡೆ ಐಪಿಎಲ್‌ನಲ್ಲಿ ಮೊದಲ ಶತಕ ಹೊಡೆದ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು.
2008ರಿಂದ ಇಲ್ಲಿಯವರೆಗೆ ಕರ್ನಾಟಕದ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಭಾರಿ ಪೈಪೋಟಿಯ ಮಧ್ಯೆ 13 ಆಟಗಾರರು ಈಗ ಕಣದಲ್ಲಿದ್ದಾರೆ.
ಹೋದ ವರ್ಷ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆ.ಎಲ್.ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಂದಿದ್ದಾರೆ. ಆದರೆ ಈ ತಂಡಕ್ಕೆ ಅವರು ನಾಯಕರಲ್ಲ. ಅಕ್ಷರ್ ಪಟೇಲ್ ನಾಯಕತ್ವದಲ್ಲಿ ರಾಹುಲ್ ಆಡಲಿದ್ದಾರೆ.
ಈಚೆಗೆ ಮುಗಿದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರಾಹುಲ್ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಅದರಲ್ಲೂ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್‌ನಿಂದಾಗಿ ತಂಡವು ಗೆಲುವಿನ ದಡ ಸೇರಿತ್ತು. ಅಲ್ಲದೇ ವಿಕೆಟ್ ಕೀಪಿಂಗ್‌ನಲ್ಲಿ ಮಿಂಚಿದ್ದರು. ಇದರಿಂದಾಗಿ ಡೆಲ್ಲಿ ತಂಡಕ್ಕೆ ರಾಹುಲ್ ಅವರಿಂದ ಅಪಾರ ನಿರೀಕ್ಷೆ ಮೂಡಿದೆ.
ಕೆ.ಎಲ್.ರಾಹುಲ್
2008ರಿಂದಲೂ ಐಪಿಎಲ್‌ನಲ್ಲಿ ಆಡುತ್ತಿರುವ ಆಟಗಾರ ಮನೀಷ್ ಪಾಂಡೆ. ದೇಶಿ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ ಪ್ರತಿಭಾವಂತ ಐಪಿಎಲ್‌ನಲ್ಲಿ ಶತಕ ಬಾರಿಸಿ ಸೈ ಎನಿಸಿಕೊಂಡವರು. ಆರ್‌ಸಿಬಿಯಿಂದ ಆರಂಭವಾದ ಅವರ ಐಪಿಎಲ್ ಪಯಣ ಈಗ ಕೋಲ್ಕತ್ತ ನೈಟ್ ರೈಡರ್ಸ್‌ವರೆಗೆ ಬಂದಿದೆ. ಆದರೆ ಅವರು ಈಗ ಮೊದಲಿನಂತೆ ಉತ್ತಮ ಲಯದಲ್ಲಿ ಇಲ್ಲ. ಕಳೆದ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿಯೂ ಅವರಿಗೆ ಸ್ಥಾನ ಲಭಿಸಿರಲಿಲ್ಲ.
ಮನೀಷ್ ಪಾಂಡೆ
ಹೋದ ವರ್ಷ ಗುಜರಾತ್ ಟೈಟನ್ಸ್‌ನಲ್ಲಿದ್ದ ಮನೋಹರ್ ಈ ಸಲ ಸನ್‌ರೈಸರ್ಸ್ ಹೈದರಾಬಾದ್ ಜರ್ಸಿ ತೊಡಲಿದ್ದಾರೆ. ಬೀಸಾಟಕ್ಕೆ ಹೆಸರಾಗಿರುವ 30 ವರ್ಷ ವಯಸ್ಸಿನ ಆಟಗಾರ ಮನೋಹರ್ ಅವರಿಗೆ ಕಣಕ್ಕಿಳಿಯುವ ಅವಕಾಶಗಳು ಸಿಗಬಹುದೇ ಎಂಬುದೇ ಕುತೂಹಲ. ಏಕೆಂದರೆ, ಸನ್‌ರೈಸರ್ಸ್ ತಂಡದಲ್ಲಿ ಸಿಡಿಲಬ್ಬರದ ಬ್ಯಾಟರ್‌ಗಳು ಇದ್ದಾರೆ. ಅದರಿಂದಾಗಿ ತಮಗೆ ಸಿಕ್ಕ ಅವಕಾಶಗಳಲ್ಲಿ ಮನೋಹರ್ ಭುಜಬಲ ಮೆರೆಯಬೇಕಿದೆ. ಟ್ರಾವಿಸ್ ಹೆಡ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ ಕಮಿನ್ಸ್ ಅವರೊಂದಿಗೆ ಆಡುವ ಅನುಭವವೂ ಅವರದ್ದಾಗಲಿದೆ.
ಸ್ಪಿನ್ನರ್–ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಈ ಸಲ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುವರು. ಈ ಹಿಂದೆ ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ತಂಡಗಳಲ್ಲಿ ಆಡಿದ್ದರು. ವಿರಾಟ್ ಕೊಹ್ಲಿ, ಎಬಿ ಡಿವಿಯರ್ಸ್ ಸೇರಿದಂತೆ ಹಲವು ದಿಗ್ಗಜ ಬ್ಯಾಟರ್‌ಗಳಿಗೆ ತಮ್ಮ ಲೆಗ್‌ಸ್ಪಿನ್ ರುಚಿ ತೋರಿಸಿದ್ದರು. 52 ಪಂದ್ಯಗಳನ್ನು ಆಡಿದ ಅನುಭವ ಅವರಿಗಿದೆ.
ಇನ್ನುಳಿದಂತೆ ಬೌಲಿಂಗ್ ಆಲ್‌ರೌಂಡರ್ ಮನ್ವಂತ್ ಕುಮಾರ್, ಶ್ರೀಜಿತ್ ಕೃಷ್ಣನ್, ಲವ್‌ನೀತ್ ಸಿಸೊಡಿಯಾ, ಮನೋಜ್ ಭಾಂಡಗೆ ಮತ್ತು ಪ್ರವೀಣ ದುಬೆ ಅವರು ಕಣಕ್ಕಿಳಿಯುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ತಮ್ಮ ಸಾಮರ್ಥ್ಯ ತೋರಿಸುವ ಕನಸು ಕಾಣುತ್ತಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ "ಮಹಾರಾಜ ಟ್ರೋಫಿ" ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿದ ಮೈಸೂರು ವಾರಿಯರ್ಸ್ ತಂಡದ ಆಟಗಾರ ಶ್ರೇಯಸ್ ಗೋಪಾಲ್ ಬೌಲಿಂಗ್ ಸಂಭ್ರಮ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎರಡು ವರ್ಷ ಆಡಿದ್ದ ವೇಗಿ ವೈಶಾಖ ವಿಜಯಕುಮಾರ್ ಈ ಸಲ ಪಂಜಾಬ್ ಕಿಂಗ್ಸ್‌ನಲ್ಲಿ ಆಡಲಿದ್ದಾರೆ. ಈಚೆಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಆದರೆ, ಅವರಿಗೆ ದೇಶಿ ಕ್ರಿಕೆಟ್‌ನಲ್ಲಿ ಫಾರ್ಮ್ ಕೊರತೆ ಮತ್ತು ಗಾಯದ ಸಮಸ್ಯೆ ಕಾಡಿತ್ತು.
ವೈಶಾಖ ವಿಜಯಕುಮಾರ್
ಭಾರತ ತಂಡಕ್ಕೆ ಮರಳುವ ಛಲದಲ್ಲಿರುವ ಕರುಣ್ ನಾಯರ್ ಐಪಿಎಲ್‌ನಲ್ಲಿಯೂ ರನ್ ಹೊಳೆ ಹರಿಸುವ ವಿಶ್ವಾಸದಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಹಾಗೂ ರಣಜಿ ಟ್ರೋಫಿ ಟೂರ್ನಿಗಳಲ್ಲಿ ಅವರು ವಿದರ್ಭ ತಂಡದ ಪರವಾಗಿ ಕ್ರಮವಾಗಿ 779 ಮತ್ತು 863 ರನ್‌ಗಳನ್ನು ಪೇರಿಸಿದ್ದರು. ವಿಜಯ್ ಹಜಾರೆ ಟೂರ್ನಿಯಲ್ಲಿ ವಿದರ್ಭ ರನ್ನರ್ ಅಪ್ ಮತ್ತು ರಣಜಿ ಚಾಂಪಿಯನ್ ಆಗಿತ್ತು.
ಕರುಣ್ ನಾಯರ್
ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮರಳಿದ್ದಾರೆ. ಒಂದು ವರ್ಷದಲ್ಲಿ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿ ಅವರು ಭರವಸೆಯ ಆಟವಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಭಾರತ ‘ಎ’ ಮತ್ತು ಭಾರತ ಟೆಸ್ಟ್ ತಂಡಗಳಲ್ಲಿ ಆಡಿದ್ದಾರೆ. ಆರ್‌ಸಿಬಿಯ ಮೂಲಕವೇ ಐಪಿಎಲ್ ಪದಾರ್ಪಣೆ ಮಾಡಿದ್ದ ದೇವದತ್ತ, 2022-23ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ₹ 7.75 ಕೋಟಿಗೆ ಸೇರ್ಪಡೆಯಾಗಿದ್ದರು. ಆದರೆ ಅಲ್ಲಿ ಅವರು ಹೆಚ್ಚು ರನ್ ಗಳಿಸಲಿಲ್ಲ. ಹೋದ ವರ್ಷ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು. ಆದರೆ ಆರ್‌ಸಿಬಿಯಲ್ಲಿದ್ದಾಗ ಅವರು ಶತಕ ಗಳಿಸಿದ್ದರು. ವಿರಾಟ್ ಕೊಹ್ಲಿ ಅವರೊಂದಿಗಿನ ಜೊತೆಯಾಟಗಳ ಮೂಲಕ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು.
ದೇವದತ್ತ ಪಡಿಕ್ಕಲ್
ವೇಗಿ ಪ್ರಸಿದ್ಧ ಕೃಷ್ಣ ಈ ಬಾರಿ ಗುಜರಾತ್ ಟೈಟನ್ಸ್‌ನಲ್ಲಿ ಆಡಲಿದ್ದಾರೆ. ಈ ಹಿಂದೆ ಅವರು ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡಿದ್ದರು. 51 ಪಂದ್ಯಗಳಿಂದ 49 ವಿಕೆಟ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಗಾಯದ ಸಮಸ್ಯೆಯಿಂದಾಗಿ ಬಳಲಿದರೂ ಮತ್ತೆ ಮರಳಿ ಬಂದು ತಮ್ಮ ಸ್ವಿಂಗ್ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಈಚೆಗೆ ಭಾರತ ತಂಡದಲ್ಲಿಯೂ ಆಡಿದ್ದರು.
ಪ್ರಸಿದ್ಧ ಕೃಷ್ಣ
ಈ ಬಾರಿಯ ಐಪಿಎಲ್‌ನಲ್ಲಿ ಹೊಸ ನಿಯಮಗಳನ್ನು ಅನ್ವಯಿಸಲಾಗುತ್ತಿದೆ. ಬದಲಾದ ನಿಯಮಗಳಲ್ಲಿ ಪ್ರಮುಖವಾಗಿರುವುದು ಚೆಂಡಿಗೆ ಹೊಳಪು ನೀಡಲು ಬೌಲರ್‌ಗಳಿಗೆ ಎಂಜಲು ಬಳಕೆಗೆ ಇದ್ದ ನಿಷೇಧ ತೆಗೆದುಹಾಕಿರುವುದು. ಕೋವಿಡ್ ಸಾಂಕ್ರಾಮಿಕದ ವೇಳೆ ಈ ನಿಷೇಧ ಹೇರಲಾಗಿತ್ತು. 2022ರಲ್ಲಿ ಐಸಿಸಿ ಈ ನಿಯಮವನ್ನು ಕಾಯಂಗೊಳಿಸಿತ್ತು. ಐಪಿಎಲ್ ನಾಯಕರ ಸಭೆಯಲ್ಲಿ ಹೊಸ ನಿಯಮಕ್ಕೆ ಒಪ್ಪಿಗೆ ನೀಡಲಾಗಿದೆ.
ಇಬ್ಬನಿಯು ಫಲಿತಾಂಶದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು, ಎರಡನೇ ಇನಿಂಗ್ಸ್‌ನ 11ನೇ ಓವರಿನಲ್ಲಿ ಆನ್‌ಫೀಲ್ಡ್ ಅಂಪೈರ್ ವಿವೇಚನೆಗೆ ಒಳಪಟ್ಟು ಚೆಂಡು ಬದಲಾಯಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನದ ಪಂದ್ಯಗಳಿಗೆ ಇದು ಅನ್ವಯಿಸುವುದಿಲ್ಲ. ಚೆಂಡು ಪುಟಿತದ ಎತ್ತರಕ್ಕೆ, ಆಫ್‌ಸೈಡ್ ವೈಡ್ ಘೋಷಣೆ ವೇಳೆ ತೀರ್ಪು ಮರುಪರಿಶೀಲನೆ (ಡಿಆರ್‌ಎಸ್) ಅನ್ವಯಿಸಲು ಈ ಐಪಿಎಲ್‌ನಲ್ಲಿ ಅವಕಾಶ ನೀಡಲಾಗಿದೆ.
ಪಂದ್ಯದ ವೇಳೆ, ಯಾವುದೇ ತಂಡವು ನಿಧಾನಗತಿ ಬೌಲಿಂಗ್ ಮಾಡಿದರೆ ಇನ್ನು ಮುಂದೆ ನಾಯಕನಿಗೆ ಪಂದ್ಯದಿಂದ ನಿಷೇಧ ಹೇರಲಾಗುವುದಿಲ್ಲ. ಬದಲಾಗಿ ಡೀಮೆರಿಟ್ ಪಾಯಿಂಟ್ ವಿಧಿಸಲಾಗುತ್ತದೆ.
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಳೆದ ಆವೃತ್ತಿಯಲ್ಲಿ ಮೂರು ಬಾರಿ ನಿಧಾನಗತಿ ಬೌಲಿಂಗ್ ಮಾಡಿದ್ದವು. ನಾಯಕರಾದ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಪಂತ್, 2024ರಲ್ಲೇ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಹಾರ್ದಿಕ್, ಈ ಬಾರಿ ಮುಂಬೈನ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಸೂರ್ಯಕುಮಾರ್ ಯಾದವ್ ತಂಡ ಮುನ್ನಡೆಸಲಿದ್ದಾರೆ.
ಸಾಕಷ್ಟು ಚರ್ಚೆಗೊಳಗಾದರೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉಳಿದುಕೊಂಡಿದೆ.
ಹೊಸ ಚಿಗುರು
ತಂಡ: ರಾಜಸ್ಥಾನ ರಾಯಲ್ಸ್
ವಯಸ್ಸು: 13
ಬಿಹಾರದ ಎಡಗೈ ಬ್ಯಾಟರ್ ಐಪಿಎಲ್ ತಂಡದಲ್ಲಿ ಸ್ಥಾನ ಪಡೆದಿರುವ ಅತಿ ಕಿರಿಯ ವಯಸ್ಸಿನ ಆಟಗಾರ. ಕಳೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ₹ 1.1 ಕೋಟಿಗೆ ಖರೀದಿಸಿತ್ತು.
5 ಪ್ರಥಮ ದರ್ಜೆ ಪಂದ್ಯಗಳಲ್ಲಿ 100 ರನ್ ಗಳಿಸಿದ್ದಾರೆ. 1 ಟಿ20 ಮತ್ತು 6 ಲಿಸ್ಟ್ ‘ಎ’ ಪಂದ್ಯಗಳಲ್ಲಿ ಆಡಿದ್ದಾರೆ.
ತಂಡ: ಮುಂಬೈ ಇಂಡಿಯನ್ಸ್
ವಯಸ್ಸು: 22
ಜಾರ್ಖಂಡ್ ತಂಡದ ‘ಕ್ರಿಸ್ ಗೇಲ್’ ಎಂದೇ ಚಿರಪರಿಚಿತರಾಗಿರುವ ರಾಬಿನ್ ಅವರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಾಜಿ ಸೈನಿಕ ಫ್ರಾನ್ಸಿಸ್ ಝೇವಿಯರ್ ಮಿಂಜ್ ಹಾಗೂ ಎಲಿಸ್ ಮಿಂಜ್ ದಂಪತಿಯ ಮಗ. ಫ್ರಾನ್ಸಿಸ್ ಅವರು ಈಗ ರಾಂಚಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದಾರೆ.
ತಂಡ: ಪಂಜಾಬ್ ಕಿಂಗ್ಸ್
ವಯಸ್ಸು; 22
ಮುಂಬೈನ ಸುಯಶ್ ಭರವಸೆಯ ಆಲ್‌ರೌಂಡರ್ ಆಗಿದ್ದಾರೆ. ಈ ಸಲದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಜಯದಲ್ಲಿ ಸುಯಶ್ ಪ್ರಮುಖ ಪಾತ್ರ ವಹಿಸಿದ್ದರು. ಅವರು 7 ಪ್ರಥಮ ದರ್ಜೆ ಪಂದ್ಯಗಳಿಂದ 404 ರನ್ ಗಳಿಸಿದ್ದಾರೆ.
ತಂಡ: ಮುಂಬೈ ಇಂಡಿಯನ್ಸ್
ವಯಸ್ಸು: 28
ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್–ಬ್ಯಾಟರ್. ಬೀಸುಹೊಡೆತಗಳಿಂದಾಗಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ರಗ್ಬಿ ಆಟಗಾರನಾಗಿದ್ದ ರಿಯಾನ್ ಅವರು ಉತ್ತಮ ಫಿಟ್‌ನೆಸ್ ಹೊಂದಿದ್ದಾರೆ. ಚುರುಕಾದ ಕೀಪಿಂಗ್ ಅವರ ವಿಶೇಷತೆ.
ತಂಡ: ಪಂಜಾಬ್ ಕಿಂಗ್ಸ್
ವಯಸ್ಸು: 24
ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ 50 ಎಸೆತಗಳಲ್ಲಿ 120 ರನ್ ಗಳಿಸಿದ್ದರು. ದೆಹಲಿಯ ಎಡಗೈ ಬ್ಯಾಟರ್ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿಯೂ ಅವರು 325 ರನ್‌ಗಳನ್ನು ಪೇರಿಸಿದ್ದರು.
ತಂಡ: ಸನ್‌ರೈಸರ್ಸ್ ಹೈದರಾಬಾದ್
ವಯಸ್ಸು: 24
ಶ್ರೀಲಂಕಾ ತಂಡದ ವೇಗದ ಬೌಲರ್. 5 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರು ಆಡಿದ್ದಾರೆ. ಲಂಕಾ ಕ್ರಿಕೆಟ್ ದಿಗ್ಗಜ ಲಸಿತ್ ಮಾಲಿಂಗ ಅವರ ಮಾದರಿಯ ಬೌಲಿಂಗ್ ಶೈಲಿ ಇಶಾನ್ ಅವರದ್ದಲ್ಲ. ಆದರೆ ಪರಿಣಾಮಕಾರಿ ಸ್ವಿಂಗ್ ಅಸ್ತ್ರಗಳನ್ನು ಪ್ರಯೋಗಿಸುವ ಯುವ ಬೌಲರ್ ಅವರಾಗಿದ್ದಾರೆ.
ತಂಡ: ಮುಂಬೈ ಇಂಡಿಯನ್ಸ್
ವಯಸ್ಸು: 30
ಕಾರ್ಬಿನ್ ಬಾಷ್, ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಆಲ್‌ರೌಂಡರ್. ಮುಂಬೈ ತಂಡದ ಲಿಝಾರ್ಡ್ ವಿಲಿಯಮ್ಸ್ ಅವರು ಗಾಯಗೊಂಡು ಹೊರನಡೆದ ಕಾರಣ ಬಾಷ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಲಿದ್ದಾರೆ.
ತಂಡ: ಡೆಲ್ಲಿ ಕ್ಯಾಪಿಟಲ್ಸ್
ವಯಸ್ಸು: 20
ಉತ್ತರಪ್ರದೇಶದ ಲೆಗ್‌ಸ್ಪಿನ್ ಬೌಲರ್.
ಯುಪಿ ಟಿ20 ಟೂರ್ನಿಯಲ್ಲಿ 11 ಇನಿಂಗ್ಸ್‌ಗಳಿಂದ
20 ವಿಕೆಟ್ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.