ಇಸ್ರೇಲ್–ಇರಾನ್ ಸಂಘರ್ಷ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇರಾನ್ ಮೇಲೆ ಇಸ್ರೇಲ್ ಹಲವು ದಿಕ್ಕಿನಿಂದ ದಾಳಿ ನಡೆಸುತ್ತಿದೆ. ಇರಾನ್ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಅವರ ಎಡಗೈ, ಬಲಗೈನಂತಿದ್ದವರು, ಯುದ್ಧತಂತ್ರಗಳಲ್ಲಿ ನೆರವು ನೀಡುತ್ತಿದ್ದವರು ದಾಳಿಯಲ್ಲಿ ಅಸುನೀಗಿದ್ದಾರೆ. ಅದರೊಂದಿಗೆ ಪರಮಾಪ್ತ ರಾಷ್ಟ್ರಗಳಾದ ರಷ್ಯಾ, ಚೀನಾ, ಉತ್ತರ ಕೊರಿಯಾ ನಿರ್ಣಾಯಕ ಸಂದರ್ಭದಲ್ಲಿ ನೆರವಿಗೆ ಬಂದಿಲ್ಲ. ತಾತ್ವಿಕವಾಗಿ ಮತ್ತು ರಾಜಕೀಯವಾಗಿ ಸದಾ ಬೆಂಬಲ ನೀಡುತ್ತಿದ್ದ ಲೆಬನಾನ್‌ನ ಹಿಜ್ಬುಲ್ಲಾ, ಪ್ಯಾಲೆಸ್ಟೀನ್‌ನ ಹಮಾಸ್, ಯೆಮನ್‌ನ ಹುಥಿ ಮತ್ತು ಇರಾಕ್‌ನ ಶಿಯಾ ಬಂಡುಕೋರ ಸಂಘಟನೆಗಳು ಮೌನವಹಿಸಿವೆ. ಸಮರಾಂಗಣದಲ್ಲಿ ಇರಾನ್ ಏಕಾಂಗಿಯಾದಂತೆ ಕಾಣುತ್ತಿದೆ
–––––––
ವಾರದಿಂದ ನಡೆಯುತ್ತಿರುವ ಇಸ್ರೇಲ್–ಇರಾನ್ ಯುದ್ಧ ತೀವ್ರಗೊಳ್ಳುತ್ತಿದೆ. ಇಸ್ರೇಲ್‌ಗೆ ಬಹಿರಂಗವಾಗಿ ಬೆಂಬಲ ಘೋಷಿಸಿರುವ ಅಮೆರಿಕ ಕೂಡ ಇರಾನ್ ವಿರುದ್ಧ ದಾಳಿಗೆ ಸಜ್ಜಾದಂತೆ ಕಾಣುತ್ತಿದೆ. ಜಿ–7 ಶೃಂಗಸಭೆಯಲ್ಲಿ ಇಸ್ರೇಲ್ ಪರವಾದ ಅಭಿಪ್ರಾಯ ಕೇಳಿ ಬಂದಿದೆ. ರಷ್ಯಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆಯೇ ವಿನಾ, ಸಮರದಲ್ಲಿ ಇರಾನ್‌ಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತಿದ್ದ ಹಲವು ಬಂಡುಕೋರ ಸಂಘಟನೆಗಳು ಮಾತನಾಡುತ್ತಿಲ್ಲ. ಹೀಗಾಗಿ, ಯುದ್ಧದಲ್ಲಿ ಇರಾನ್‌ಗೆ ಯಾರಿಂದಲೂ ಬೆಂಬಲ ಸಿಗದಂತೆ ಆಗಿದೆ.
ಬಂಡುಕೋರ ಜಾಲ ಪೋಷಿಸಿದ್ದ ಇರಾನ್: ವೈರಿ ರಾಷ್ಟ್ರಗಳಾದ ಇಸ್ರೇಲ್, ಅಮೆರಿಕದಿಂದ ತನಗೆ ಎದುರಾಗಬಹುದಾದ ಬೆದರಿಕೆಯನ್ನು ಎದುರಿಸಲು ಇರಾನ್ ದಶಕಗಳ ಹಿಂದಿನಿಂದಲೂ ಭಿನ್ನ ದಾರಿಯನ್ನು ಅನುಸರಿಸುತ್ತಿದೆ. ತನ್ನ ನೆರೆ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಬಂಡುಕೋರ ಸಂಘಟನೆಗಳನ್ನು ಬೆಂಬಲಿಸಿ, ಅವರ ಜಾಲವೊಂದನ್ನು ಸೃಷ್ಟಿಸಿದೆ.
ಇಸ್ರೇಲ್‌ನ ಉತ್ತರದ (ಲೆಬನಾನ್) ಗಡಿಯಲ್ಲಿ ರಾಕೆಟ್‌ಗಳ ಸಹಿತ ಆಧುನಿಕ ಶಸ್ತ್ರಾಸ್ತ್ರ ಹೊಂದಿದ್ದ ಹಿಜ್ಬುಲ್ಲಾ ಸಂಘಟನೆಯನ್ನು ಪೋಷಿಸುತ್ತಾ ಬಂದಿತ್ತು. ಇರಾಕ್‌ನಲ್ಲಿ ಶಿಯಾ ತೀವ್ರವಾದಿ ಸಂಘಟನೆಗಳೊಂದಿಗೆ ಕೈಜೋಡಿಸಿ, ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಈ ಸಂಘಟನೆಗಳ ನಿಗಾದಲ್ಲಿ ಇರಿಸಿತ್ತು. ಪ್ಯಾಲೆಸ್ಟೀನಿನ ಗಾಜಾ ಪಟ್ಟಿಯಲ್ಲಿ ಹಮಾಸ್ ಬಂಡುಕೋರ ಸಂಘಟನೆಗೆ ಬೆಂಬಲ ನೀಡುತ್ತಾ ಇಸ್ರೇಲ್ ಅನ್ನು ಎದುರಿಸುತ್ತಿತ್ತು. ದಕ್ಷಿಣದಲ್ಲಿ ಯೆಮನ್‌ನ ಹುಥಿ ಬಂಡುಕೋರ ಸಂಘಟನೆಯನ್ನೂ ತನ್ನ ವೈರಿ ರಾಷ್ಟ್ರಗಳ ವಿರುದ್ಧ ಬಳಸುತ್ತಿತ್ತು. ಆದರೆ, ಇರಾನಿನ ಲೆಕ್ಕಾಚಾರ ತಪ್ಪಿದಂತೆ ಕಾಣುತ್ತಿದೆ. ವಾರದಿಂದ ನಡೆಯುತ್ತಿರುವ ಯುದ್ಧದಲ್ಲಿ ಈ ಸಂಘಟನೆಗಳು ನೇರವಾಗಿ ಭಾಗಿಯಾಗಿಲ್ಲ.
ಹಮಾಸ್
ಇಸ್ರೇಲ್ ವಿರುದ್ಧ ಸದಾ ಕೆಂಡ ಕಾರುವ ಹಮಾಸ್ ಸಂಘಟನೆ, 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಆರಂಭವಾದ ಸಂಘರ್ಷ ಇನ್ನೂ ನಿಂತಿಲ್ಲ. ಕಳೆದ ವಾರ ಇಸ್ರೇಲ್, ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ, ಹಮಾಸ್ ಸಂಘಟನೆ ಇರಾನ್ ಪರವಾಗಿ ಮಾತನಾಡಿಲ್ಲ. ಇಸ್ರೇಲ್‌ನ ನಿರಂತರ ದಾಳಿಯಿಂದ ಹಮಾಸ್‌ನ ಶಕ್ತಿ ಕುಂದಿದೆ. ಅದರ ಪ್ರಮುಖ ನಾಯಕರು (ಇಸ್ಮಾಯಿಲ್ ಹನಿಯಾ ಮತ್ತು ಯಾಹ್ಯಾ ಸಿನ್ವಾರ್) ಹತ್ಯೆಯಾಗಿದ್ದಾರೆ. ಈಗ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಖಲೀದ್ ಮಾಶಲ್ ಕತಾರ್‌ನಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ಬಂಡುಕೋರ ಸಂಘಟನೆ ಹೊಂದಿದ್ದ ಸುರಂಗ ಮಾರ್ಗ, ನಿಯಂತ್ರಣ ಕೇಂದ್ರಗಳು, ರಾಕೆಟ್ ತಯಾರಿಕಾ ಘಟಕಗಳು ಸೇರಿದಂತೆ ಇನ್ನಿತರ ಸೇನಾ ಮೂಲಸೌಕರ್ಯಗಳು ಇಸ್ರೇಲ್ ದಾಳಿಯಲ್ಲಿ ನಾಶವಾಗಿವೆ
ಹಿಜ್ಬುಲ್ಲಾ
ಇಸ್ರೇಲ್‌ನ ನೆರೆರಾಷ್ಟ್ರ ಲೆಬನಾನ್‌ನಲ್ಲಿ ಸಕ್ರಿಯವಾಗಿರುವ ಶಿಯಾ ಬಂಡುಕೋರ ಸಂಘಟನೆ ಹಿಜ್ಬುಲ್ಲಾ ಇರಾನ್‌ನ ಪರಮಾಪ್ತ. ಇಸ್ರೇಲ್–ಇರಾನ್ ಘರ್ಷಣೆಯಲ್ಲಿ ಇದು ಮೌನವಾಗಿದೆ. ಬಲಿಷ್ಠವಾಗಿದ್ದ ಈ ಬಂಡುಕೋರರ ಸಾಮರ್ಥ್ಯ ಈಗ ಕುಂದಿಹೋಗಿದೆ. ಕಳೆದ ವರ್ಷ ಈ ಸಂಘಟನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ್ದ ಎರಡು ತಿಂಗಳ ಯುದ್ಧದ್ದಲ್ಲಿ ಹಿಜ್ಬುಲ್ಲಾ ಬಂಡುಕೋರರಿಗೆ ಸೇರಿದ ಶಸ್ತ್ರಾಸ್ತ್ರಗಳು, ಸಂವಹನ, ನಿಯಂತ್ರಣ ಕೇಂದ್ರಗಳು ಧ್ವಂಸಗೊಂಡಿವೆ. ಈಗ ಲೆಬನಾನ್ ಸರ್ಕಾರವು ಇಸ್ರೇಲ್–ಇರಾನ್ ಸಂಘರ್ಷದಲ್ಲಿ ಭಾಗಿಯಾಗುವುದರ ವಿರುದ್ಧ ಸಂಘಟನೆಯ ಮುಖಂಡರನ್ನು ಎಚ್ಚರಿಸಿದೆ.
ಹುಥಿ
ಯೆಮನ್‌ನ ಹುಥಿ ಬಂಡುಕೋರ ಸಂಘಟನೆಯನ್ನೂ ಇರಾನ್ ಬೆಂಬಲಿಸುತ್ತಾ ಬಂದಿದೆ. ಇತ್ತೀಚಿನ ತಿಂಗಳಲ್ಲಿ ಇರಾನ್ ಪರವಾಗಿ ಇಸ್ರೇಲ್‌ನತ್ತ ಹಲವು ಕ್ಷಿಪಣಿಗಳ ಮೇಲೆ ದಾಳಿ ನಡೆಸಿತ್ತು. ಅಲ್ಲದೇ, ಹೊರ್ಮುಜ್ ಜಲಸಂಧಿ ಮಾರ್ಗವಾಗಿ ಸಾಗುವ ಸರಕು ಸಾಗಣೆ ಹಡಗುಗಳ ಮೇಲೆ ದಾಳಿ ನಡೆಸುತ್ತಾ, ಅವುಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಸರಕು ಸಾಗಾಣಿಕೆಗೆ ತಡೆ ಒಡ್ಡಿತ್ತು. ಈ ವರ್ಷದ ಮಾರ್ಚ್–ಏಪ್ರಿಲ್‌ನಲ್ಲಿ ಅಮೆರಿಕವು ಈ ಸಂಘಟನೆಯ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ನಾಶಪಡಿಸಿದ ನಂತರ ಈಗ ಅದು ಸುಮ್ಮನಾಗಿದೆ. ಹುಥಿ ಬಂಡುಕೋರರು ಈಗಲೂ ಇರಾನ್ ಅನ್ನು ಬೆಂಬಲಿಸುತ್ತಿದ್ದರಾದರೂ, ಅವರಿನ್ನೂ ಈ ಯುದ್ಧದ ಭಾಗವಾಗಿಲ್ಲ
ಇರಾಕ್ ತಟಸ್ಥ
ಇರಾಕಿನಲ್ಲಿರುವ ಶಸ್ತ್ರಸಜ್ಜಿತ ಶಿಯಾ ತೀವ್ರವಾದಿ ಸಂಘಟನೆಗಳು ಇರಾನ್ ಜತೆ ಉತ್ತಮ ಬಾಂಧವ್ಯ ಹೊಂದಿವೆ. ಈಗ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದರೆ, ದಾಳಿ ನಡೆಸುವುದಾಗಿ ಕತೇಬ್ ಹಿಜ್ಬುಲ್ಲಾ ಎಂಬ ಸಂಘಟನೆ ಎಚ್ಚರಿಸಿದೆ. ಆದರೆ, ಇರಾಕ್ ಸರ್ಕಾರ ತಟಸ್ಥ ನಿಲುವನ್ನು ಹೊಂದಿದ್ದು, ಯಾವುದೇ ದಾಳಿಗೆ ತನ್ನ ನೆಲವನ್ನು ಬಳಸದಂತೆ ಇರಾನ್ ಆಡಳಿತವನ್ನು ಕೇಳಿಕೊಂಡಿದೆ ಎಂದು ವರದಿಯಾಗಿದೆ.
ಸಿರಿಯಾದಿಂದಲೂ ಸಿಕ್ಕಿಲ್ಲ ಬೆಂಬಲ
ಸಿರಿಯಾದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಷರ್ ಅಲ್–ಅಸಾದ್ ಆಡಳಿತ ಸದಾ ಇರಾನ್ ಬೆನ್ನಿಗೆ ನಿಲ್ಲುತ್ತಿತ್ತು. ಹಿಜ್ಬುಲ್ಲಾ ಸಂಘಟನೆಗೆ ಅಗತ್ಯವಾದ ನೆರವನ್ನೂ ನೀಡುತ್ತಿತ್ತು. ಕಳೆದ ವರ್ಷ ಇಸ್ರೇಲ್–ಹಿಜ್ಬುಲ್ಲಾ ಘರ್ಷಣೆ ಮುಗಿದ ಎರಡು ವಾರಗಳಲ್ಲಿ ಸಿರಿಯಾದಲ್ಲಿ ಅಸಾದ್ ಆಡಳಿತ ಪತನಗೊಂಡಿತ್ತು. ಹೊಸ ಸರ್ಕಾರ ಮತ್ತು ಇರಾನಿನ ಸಂಬಂಧ ಮೊದಲಿನಂತಿಲ್ಲ. ಹಾಗಾಗಿ, ಅಲ್ಲಿಂದಲೂ ನೆರವು ಸಿಗುತ್ತಿಲ್ಲ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಾನಿಗೀಡಾದ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು –ಎಎಫ್ ಪಿ ಚಿತ್ರ
ನೆರವಿಗೆ ಬಾರದ ‘ಕ್ರಿಂಕ್’ ಗುಂಪು
ಇರಾನ್‌ನ ‘ಮಿತ್ರರಾಷ್ಟ್ರಗಳು’ (‘ಕ್ರಿಂಕ್’ ಗುಂಪು) ಎಂದೇ ಹೆಸರಾಗಿರುವ ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾಗಳು ಕೂಡ ಕೇವಲ ಇಸ್ರೇಲ್ ದಾಳಿಯನ್ನು ಖಂಡಿಸಿ ಸುಮ್ಮನಾಗಿದ್ದು, ಇರಾನ್‌ಗೆ ಬಹಿರಂಗ ಬೆಂಬಲವನ್ನು ಘೋಷಿಸಿಲ್ಲ.
ಉಕ್ರೇನ್ ವಿರುದ್ಧ ಯುದ್ಧದಲ್ಲಿ ರಷ್ಯಾಗೆ ಇರಾನ್ ಶಸ್ತ್ರಾಸ್ತ್ರ ಪೂರೈಸಿದೆ ಎಂದೇ ಪಶ್ಚಿಮದ ರಾಷ್ಟ್ರಗಳು ಆರೋಪ ಮಾಡಿದ್ದವು. ಜನವರಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಹೊಸ ಒಪ್ಪಂದಗಳು ಕೂಡ ಏರ್ಪಟ್ಟಿದ್ದವು. ಮೇನಲ್ಲಿ ಇರಾನ್, ಯುರೇಷಿಯ ಆರ್ಥಿಕ ಒಕ್ಕೂಟವನ್ನೂ ಸೇರಿತ್ತು. ಆದರೂ ಇಸ್ರೇಲ್, ಇರಾನ್ ಮೇಲೆ ದಾಳಿ ಮಾಡಿದಾಗ ರಷ್ಯಾ ಅದರ ನೆರವಿಗೆ ಧಾವಿಸಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಸ್ರೇಲ್‌ನ ‘ಅಪ್ರಚೋದಿತ ದಾಳಿ’ಯನ್ನು ಖಂಡಿಸುವುದಕ್ಕೆ ಮಾತ್ರ ಅವರ ‘ನೆರವು’ ಸೀಮಿತವಾಗಿದೆ. ಜಾಗತಿಕವಾಗಿ ಶಕ್ತಿಶಾಲಿ ರಾಷ್ಟ್ರವಾದ ರಷ್ಯಾ, ಈ ಸಂದರ್ಭವನ್ನು ಹೇಗೆ ತನ್ನ ಪ್ರಭಾವ ವೃದ್ಧಿಗೆ ಬಳಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ನಿರ್ಬಂಧದ ನಂತರ ಇರಾನ್ ಇಂಧನಕ್ಕೆ ಅತಿ ದೊಡ್ಡ ಗ್ರಾಹಕನಾಗಿ ಹೊರಹೊಮ್ಮಿದ್ದು ಚೀನಾ. 2023ರಲ್ಲಿ ಇರಾನ್, ಶಾಂಘೈ ಸಹಕಾರ ಸಂಘಟನೆ ಸೇರಿದ ಮೇಲೆ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತ್ತು. ಆದರೆ, ಇಸ್ರೇಲ್ ದಾಳಿಯಿಂದ ಇರಾನ್ ಕಂಗೆಟ್ಟಿದ್ದರೂ, ಚೀನಾ ಅದರ ನೆರವಿಗೆ ನಿಂತಿಲ್ಲ. ‘ಇರಾನ್‌ನ ಸಾರ್ವಭೌಮತೆ, ರಕ್ಷಣೆ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲೆ ನಡೆದ ದಾಳಿ’ಯನ್ನು ಚೀನಾ ಖಂಡಿಸಿದೆಯೇ ವಿನಾ, ಅದರಾಚೆಗೆ ಯಾವುದೇ ನೆರವು ನೀಡಿಲ್ಲ. ಅದರ ಬದಲಿಗೆ ಸಂಘರ್ಷದ ಸಂದರ್ಭದಲ್ಲಿ ಶಾಂತಿ ಮೂಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಭಾವಿ ಶಕ್ತಿ ಎನ್ನಿಸಿಕೊಳ್ಳಲು ಅವಕಾಶ ಸಿಗುವುದೇ ಎಂದು ಅದು ಕಾಯುತ್ತಿದೆ ಎನ್ನಲಾಗಿದೆ. ಉತ್ತರ ಕೊರಿಯಾದ್ದೂ ಇದೇ ಕಥೆ. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ನೆರವು ನೀಡಿದ್ದೇ ಉತ್ತರ ಕೊರಿಯಾ ಎನ್ನುವ ಗುಮಾನಿ ಕೆಲವು ರಾಷ್ಟ್ರಗಳಲ್ಲಿದೆ. ಅಷ್ಟು ಆಪ್ತವಾಗಿದ್ದರೂ ಉತ್ತರ ಕೊರಿಯಾ ಇರಾನ್‌ಗೆ ಸಹಾಯ ಹಸ್ತ ಚಾಚಿಲ್ಲ.
ಇರಾನ್ ಅಷ್ಟೊಂದು ದುರ್ಬಲವೇ?
‘ಜಗತ್ತಿನ ಅಪಾಯಕಾರಿ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದು. ಅದರ ಪರಮಾಣು ಕಾರ್ಯಕ್ರಮಗಳು, ಹೊರಜಗತ್ತಿಗೆ ತಿಳಿಯದ ಅದರ ಸೇನಾ ಸಾಮರ್ಥ್ಯಗಳು ಇಸ್ರೇಲ್, ಅಮೆರಿಕ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳಿಗೆ ಬೆದರಿಕೆಯಾಗಬಹುದು ಎಂದೆಲ್ಲ ವಿಶ್ಲೇಷಿಸಲಾಗಿತ್ತು. ಆದರೆ, 2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರ ಸಂಘಟನೆ ಇಸ್ರೇಲ್ ಮೇಲೆ ದಾಳಿ ಸಂಘಟಿಸಿದ ನಂತರ ಇಲ್ಲಿವರೆಗೆ ನಡೆದಿರುವ ಸೇನಾ ಸಂಘರ್ಷಗಳು ಇರಾನ್‌ನ ಸೇನಾ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವಂತೆ ಮಾಡಿದೆ’ ಎಂದು ‘ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್’ ಬರೆದಿದೆ.
‘ಒಂದೂವರೆ ವರ್ಷದಿಂದ ಇರಾನ್, ಸಿರಿಯಾದಲ್ಲಿ ಅದರ ರಾಯಭಾರ ಕಚೇರಿ ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ್ದ ದಾಳಿಯಲ್ಲಿ ಇರಾನ್‌ಗೆ ಸಾಕಷ್ಟು ಹಾನಿಯಾಗಿದೆ. ವಾರದ ಹಿಂದೆ ಇಸ್ರೇಲ್ ಶುರುಮಾಡಿರುವ ಕ್ಷಿಪಣಿ, ಡ್ರೋನ್ ದಾಳಿಗಳಲ್ಲೂ ಇರಾನ್ ಸೇನೆಯ ವಿವಿಧ ವಿಭಾಗಗಳ ಉನ್ನತ ಕಮಾಂಡರ್‌ಗಳು ಮೃತಪಟ್ಟಿದ್ದಾರೆ. ಆಸ್ತಿಗೂ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಇಸ್ರೇಲ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಇರಾನ್ ವಿಫಲವಾಗಿದೆ. ಪಶ್ಚಿಮ ಏಷ್ಯಾದ ವಿವಿಧ ರಾಷ್ಟ್ರಗಳಲ್ಲಿರುವ ಪರಮಾಪ್ತ ಬಂಡುಕೋರರ ಸಂಘಟನೆಗಳ ಮೂಲಕ ಇಸ್ರೇಲ್ ದಾಳಿಯನ್ನು ಎದುರಿಸಬಹುದು, ಅಮೆರಿಕವನ್ನು ಬೆದರಿಸಬಹುದು ಎಂಬ ಅದರ ಲೆಕ್ಕಾಚಾರ ತಲೆಕೆಳಲಾಗಿದೆ’ ಎಂದು ತಜ್ಞರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಪತ್ರಿಕೆ ವಿಶ್ಲೇಷಣೆ ಮಾಡಿದೆ.
ಖಮೇನಿ ‘ಆಪ್ತ ವಲಯ’ ನಿರ್ನಾಮ?
ಕಳೆದ ಕೆಲವು ದಿನಗಳಿಂದ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಇರಾನ್‌ನ 20ಕ್ಕೂ ಹೆಚ್ಚು ಸೇನಾ ಕಮಾಂಡರ್‌ಗಳು ಮೃತರಾಗಿದ್ದು, ಇಸ್ಲಾಮಿಕ್ ಕ್ರಾಂತಿಕಾರಿ ರಕ್ಷಣಾ ಪಡೆಯ (ಐಆರ್‌ಜಿಸಿ) ಪ್ರಮುಖರೆಲ್ಲಾ ನಿರ್ನಾಮವಾಗಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಖಮೇನಿಯ ಆಡಳಿತದ ಆಧಾರ ಸ್ತಂಭಗಳೇ ಇಲ್ಲದಂತಾಗಿವೆ ಎನ್ನಲಾಗಿದೆ.
ಇರಾನ್ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ ಬಘೇರಿ, ಐಆರ್‌ಜಿಸಿಯ ಮುಖ್ಯ ಕಮಾಂಡರ್ ಹೊಸೈನ್ ಸಲಾಮಿ, ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಅಮೀರ್ ಅಲಿ ಹಾಜಿಝದಾ ಸೇರಿದಂತೆ ಹಲವು ಪ್ರಮುಖರು ಮೃತರಾಗಿದ್ದಾರೆ. ಇವರೆಲ್ಲಾ ಖಮೇನಿಯ ‘ಆಪ್ತ ವಲಯ’ದವರಾಗಿದ್ದು, ದೇಶದ ಯುದ್ಧತಂತ್ರ, ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು. ಖಮೇನಿ ಸ್ಥಿತಿ ರೆಕ್ಕೆ ಕತ್ತರಿಸಿದ ಹಕ್ಕಿಯಂತಾಗಿದ್ದು, ಸದ್ಯದ ಬಿಕ್ಕಟ್ಟಿನ ಸ್ಥಿತಿಯಲ್ಲಿ ಪ್ರಮುಖರ ಅನುಪಸ್ಥಿತಿ ತೀವ್ರವಾಗಿ ಕಾಡುತ್ತಿದೆ ಎನ್ನಲಾಗಿದೆ. ಖಮೇನಿಗೆ ಸಲಹೆ ಸೂಚನೆ ನೀಡುತ್ತಿದ್ದವರ ಪೈಕಿ ಮೊಜ್ತಾಬಾ ಖಮೇನಿ ಮಾತ್ರ ಉಳಿದಿದ್ದಾರೆ. ಮೊಜ್ತಾಬಾ, ಖಮೇನಿಯ ಮಗನಾಗಿದ್ದು, ಅವರ ಉತ್ತರಾಧಿಕಾರಿ ಎಂದೇ ಕರೆಯಲಾಗುತ್ತಿದೆ.
––––
ಆಧಾರ: ಪಿಟಿಐ, ರಾಯಿಟರ್ಸ್, ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.