2024–25ನೇ ಸಾಲಿನ ಕರ್ನಾಟಕದ ಆರ್ಥಿಕ ಸಮೀಕ್ಷೆಯು ರಾಜ್ಯದ ಆದಾಯ, ವೆಚ್ಚಗಳ ವಿವರಗಳನ್ನು ಒಳಗೊಂಡಿರುವುದರ ಜತೆಗೆ ಆರ್ಥಿಕ ಮುನ್ನೋಟವನ್ನೂ ನೀಡಿದೆ. ಕೋವಿಡ್ ಪರಿಸ್ಥಿತಿಯ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಂಡಿದೆ ಎಂದು ಸಮೀಕ್ಷೆ ಹೇಳಿದೆ. ಸರ್ಕಾರದ ವೆಚ್ಚ ಹೆಚ್ಚಾಗಿ, ಆದಾಯ ಕುಸಿಯುತ್ತಿದ್ದರೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದು, ವಿತ್ತೀಯ ಕೊರತೆಯನ್ನು ನಿಗದಿತ ಮಿತಿಯ ಒಳಗಡೆ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಅದು ಹೇಳಿದೆ
ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿದೆ ಎಂದು 2024–24ನೇ ಸಾಲಿನ ರಾಜ್ಯದ ಆರ್ಥಿಕ ಸಮೀಕ್ಷೆ ಪ್ರತಿಪಾದಿಸಿದೆ. 2023-24ನೇ ಸಾಲಿನಲ್ಲಿ ರಾಷ್ಟ್ರೀಯ ಆದಾಯಕ್ಕೆ ರಾಜ್ಯ ಆದಾಯದ ಕೊಡುಗೆ ಶೇ 8.6ರಷ್ಟಿದ್ದು, ಇದು 2024–25ರಲ್ಲಿ ಶೇ 0.3ರಷ್ಟು ಹೆಚ್ಚಾಗಿ ಶೇ 8.9ಕ್ಕೆ ಏರುವ ನಿರೀಕ್ಷೆ ಇದೆ. ಗ್ಯಾರಂಟಿಗಳ ಹೊರೆಯ ನಡುವೆಯೂ ವೆಚ್ಚದ ಗುಣಮಟ್ಟ ಕೂಡ ಚೆನ್ನಾಗಿದೆ. ರಾಜ್ಯದ ಅಭಿವೃದ್ಧಿ ವೆಚ್ಚದ ಪ್ರಮಾಣವು ಶೇ 65.10 ರಷ್ಟಿದ್ದು, ಇದು ಎಲ್ಲ ರಾಜ್ಯಗಳ ಸರಾಸರಿಗಿಂತ (ಶೇ 62.50) ಹೆಚ್ಚಾಗಿದೆ ಎಂದು ಅದು ತಿಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ (2023–24) ದಕ್ಷಿಣದ ಐದು ರಾಜ್ಯಗಳ ಪೈಕಿ ಕರ್ನಾಟಕವು ಅತ್ಯಂತ ಕಡಿಮೆ ವಿತ್ತೀಯ ಕೊರತೆಯನ್ನು (ಶೇ 2.70) ಹೊಂದಿರುವ ರಾಜ್ಯವಾಗಿತ್ತು; ಈ ವರ್ಷ (2024–25) ಇದು ಶೇ 3ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ– 2002 (ಕೆಎಫ್‌ಆರ್‌ಎ) ಅಡಿ ವಿತ್ತೀಯ ಕೊರತೆಯು ಶೇ 3ರ ಒಳಗೆ ಇರಬೇಕು.
ಸರ್ಕಾರದ ವೆಚ್ಚಗಳು ಹೆಚ್ಚುತ್ತಿದ್ದು, ಆದಾಯ ಇಳಿಮುಖವಾಗುತ್ತಿದೆ. ಹೀಗಾಗಿ, ವಿತ್ತೀಯ ಕೊರತೆಯನ್ನು ಕಡಿಮೆ ಮಟ್ಟದಲ್ಲಿ ಇಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಹಾಗಿದ್ದರೂ, 2024-25ರ ಬಜೆಟ್ ಅಂದಾಜಿನಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಶೇ 2.95ಕ್ಕೆ ನಿಗದಿಪಡಿಸಲಾಗಿದೆ ಎಂದೂ ಅದು ಹೇಳಿದೆ.
ತಲಾ ಆದಾಯ ಏರಿಕೆ: 2023–24ರಲ್ಲಿ ಕರ್ನಾಟಕ ರಾಜ್ಯದ ತಲಾ ಆದಾಯವು ₹3,39,813 ಇದ್ದು, 2024–25ನೇ ಸಾಲಿನಲ್ಲಿ ಅದು ಶೇ 12.1ರಷ್ಟು ಹೆಚ್ಚಳವಾಗಿ, ₹3,80,906ಕ್ಕೆ ಏರುವ ನಿರೀಕ್ಷೆ ಇದೆ. ರಾಷ್ಟ್ರೀಯ ತಲಾ ಆದಾಯಕ್ಕೆ ಹೋಲಿಸಿದರೆ ರಾಜ್ಯದ ತಲಾ ಆದಾಯ ಉತ್ತಮವಾಗಿದೆ. 2023–24ರಲ್ಲಿ ರಾಷ್ಟ್ರೀಯ ಸರಾಸರಿ ತಲಾದಾಯವು ₹1,84,205 ಇತ್ತು. 2024–25ರಲ್ಲಿ ಅದು ₹2,00,162ಕ್ಕೆ ಏರುವ ನಿರೀಕ್ಷೆ ಇದೆ ಸಮೀಕ್ಷೆ ಹೇಳಿದೆ.
ರಾಜ್ಯದಲ್ಲಿ ಜಿಲ್ಲಾವಾರು ತಲಾ ಆದಾಯದಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2023–24ನೇ ಸಾಲಿನಲ್ಲಿ ಬೆಂಗಳೂರಿಗರ ತಲಾ ಆದಾಯ (₹7,38,910) ಉಳಿದ ಜಿಲ್ಲೆಗಳ ಜನರಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕಲಬುರಗಿ ಜಿಲ್ಲೆ (₹1,43,610) ಕೊನೆಯ ಸ್ಥಾನದಲ್ಲಿದೆ.
ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಜಿಲ್ಲೆಗಳು ನೀಡುತ್ತಿರುವ ಕೊಡುಗೆಯ ಪೈಕಿ ಬೆಂಗಳೂರಿನದ್ದೇ ಸಿಂಹಪಾಲು. ಉಳಿದ ಜಿಲ್ಲೆಗಳ ಕೊಡುಗೆ ಎರಡು ಅಂಕಿಯ ಹತ್ತಿರವೂ ಇಲ್ಲ. ಐಟಿ–ಬಿಟಿ ನಗರಿಯು ಒಟ್ಟು ಶೇ 39.1ರಷ್ಟು ಕೊಡುಗೆ ನೀಡುತ್ತಿದೆ. ಇದರಲ್ಲಿ ಕೈಗಾರಿಕಾ ವಲಯದ ಪಾಲು ಶೇ 28.5 ಮತ್ತು ಸೇವಾ ವಲಯದ ಕೊಡುಗೆ ಶೇ 48.9ರಷ್ಟಿದೆ. ಶೇ 5.4ರಷ್ಟು ಕೊಡುಗೆ ನೀಡಿರುವ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದೆ. ಬೆಳಗಾವಿ (ಶೇ 3.9), ತುಮಕೂರು (ಶೇ 3.6) ಮತ್ತು ಮೈಸೂರು (ಶೇ 3.50) ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ. ಕೊಡಗು ಜಿಲ್ಲೆಯ ಕೊಡುಗೆ ಅತಿ ಕಡಿಮೆ ಅಂದರೆ
ಶೇ 0.7ರಷ್ಟಿದೆ. ಯಾದಗಿರಿ ಕೊಡುಗೆ ಶೇ 0.9ರಷ್ಟಿದೆ.
ಕೇಂದ್ರದ ಪಾಲು ಕಡಿತ
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆ ಪಾಲು ಮತ್ತು ಅನುದಾನದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದ್ದು, ಇದು ಕಳವಳಕಾರಿ ಸಂಗತಿ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.
ಆಧಾರ: ಕರ್ನಾಟಕ ಆರ್ಥಿಕ ಸಮೀಕ್ಷೆ 2024–25
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.