ADVERTISEMENT

ಆಳ ಅಗಲ | ಅತಿ ಹಿಂದುಳಿದ 'ಉತ್ತರ': ಅಸಮತೋಲನ ತೀವ್ರ

ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಬಗೆಗಿನ ಪ್ರೊ. ಎಂ.ಗೋವಿಂದ ರಾವ್ ವರದಿಯಲ್ಲಿ ಉಲ್ಲೇಖ; ಹಲವು ಕ್ರಮಗಳ ಶಿಫಾರಸು

ಬಿ.ವಿ. ಶ್ರೀನಾಥ್
ಸೂರ್ಯನಾರಾಯಣ ವಿ.
Published 2 ಫೆಬ್ರುವರಿ 2026, 19:43 IST
Last Updated 2 ಫೆಬ್ರುವರಿ 2026, 19:43 IST
   
ಸುಮಾರು 24 ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಬಗ್ಗೆ ಡಿ.ಎಂ.ನಂಜುಂಡಪ್ಪ ಅವರ ನೇತೃತ್ವದ ಸಮಿತಿಯು ಅಧ್ಯಯನ ಮಾಡಿ ವರದಿ ನೀಡಿತ್ತು. ಮತ್ತೆ ಇಂತಹದ್ದೇ ಅಧ್ಯಯನ ನಡೆಸಿರುವ ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ಅವರ ಅಧ್ಯಕ್ಷತೆಯ ಸಮಿತಿಯು, ರಾಜ್ಯ ಸರ್ಕಾರಕ್ಕೆ ಇದೀಗ ವರದಿ ಸಲ್ಲಿಸಿದೆ. ಹಿಂದುಳಿದಿರುವಿಕೆಯು ರಾಜ್ಯದ ಉತ್ತರ ಭಾಗದಲ್ಲಿಯೇ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಉತ್ತರ ಕರ್ನಾಟಕದ ಒಂದು ಜಿಲ್ಲೆಯನ್ನೂ ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ವರದಿಯು, ರಾಜ್ಯದ ಇತರೆ ತಾಲ್ಲೂಕುಗಳ ಹಿಂದುಳಿದ ಸ್ಥಿತಿಗತಿ, ಅಭಿವೃದ್ಧಿಯ ಚಿತ್ರಣವನ್ನೂ ಒಳಗೊಂಡಿದೆ.

2024–25ನೇ ಸಾಲಿನಲ್ಲಿ ಕರ್ನಾಟಕದ ತಲಾ ನಿವ್ವಳ ರಾಜ್ಯ ಆಂತರಿಕ ಉತ್ಪನ್ನದ ಮೌಲ್ಯವು (ಎನ್‌ಎಸ್‌ಡಿಪಿ) ₹3.81 ಲಕ್ಷ ಇದ್ದು, ಅತಿ ಹೆಚ್ಚು ತಲಾದಾಯ ಹೊಂದಿರುವ ದೇಶದ ದೊಡ್ಡ ರಾಜ್ಯಗಳಲ್ಲಿ ಎರಡನೇ ಸ್ಥಾನ ‍ಪಡೆದಿದೆ. ಆದರೆ, 1960ರಲ್ಲಿ ಕಡಿಮೆ ಆದಾಯದ ರಾಜ್ಯಗಳಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕವು ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ತಲಾ ಆದಾಯ ಹೊಂದಿತ್ತು. ಸೇವಾ ವಲಯದಲ್ಲಿನ ಪ್ರಗತಿಯಿಂದಾಗಿ ಅಭಿವೃದ್ಧಿಯಲ್ಲಿ ದಾಪುಗಾಲಿಡುವ ಮೂಲಕ ದೇಶದ ಜಿಡಿಪಿಯಲ್ಲಿ ತನ್ನ ಪಾಲನ್ನು ರಾಜ್ಯವು ಹೆಚ್ಚಿಸಿಕೊಂಡಿದೆ. ಆದರೆ, ಆರ್ಥಿಕ ಪ್ರಗತಿಯು ಸಾಮಾಜಿಕ ಅಭಿವೃದ್ಧಿಯಾಗಿ ರೂಪಾಂತರಗೊಂಡಿಲ್ಲ ಮತ್ತು ಅಭಿವೃದ್ಧಿಯು ಕೆಲವೇ ಜಿಲ್ಲೆಗಳಲ್ಲಿ ಕೇಂದ್ರೀಕರಿಸಿದ್ದು, ಉಳಿದ ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ; ರಾಜ್ಯದಲ್ಲಿ ಆರ್ಥಿಕ ಅಸಮತೋಲನವು ವ್ಯಾಪಕವಾಗಿದೆ ಎಂದು ಆರ್ಥಿಕ ತಜ್ಞ ಪ್ರೊ.ಗೋವಿಂದ ರಾವ್ ನೇತೃತ್ವದ ಸಮಿತಿ ವರದಿ ಹೇಳಿದೆ.

ವರದಿಯಲ್ಲಿ ರಾಜ್ಯವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ; ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ. ರಾಜ್ಯದ ಎಲ್ಲ ತಾಲ್ಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತಿ ಹೆಚ್ಚು ಹಿಂದುಳಿದ ಮತ್ತು ಅಭಿವೃದ್ಧಿ ಹೊಂದಿದ ಎಂದು ನಾಲ್ಕು ಭಾಗಗಳನ್ನಾಗಿ ವರ್ಗೀಕರಿಸಲಾಗಿದೆ. ನಾಲ್ಕು ವಿಭಾಗಗಳ ಪೈಕಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿಯೇ ಹಿಂದುಳಿದಿರುವಿಕೆ ಹೆಚ್ಚಾಗಿದೆ, ಬಡತನ ತೀವ್ರವಾಗಿದೆ ಎಂದು ವರದಿ ಉಲ್ಲೇಖಿಸಿದೆ. ಆದಾಗ್ಯೂ, ಇತರೆ ವಲಯಗಳಲ್ಲಿನ ಹಿಂದುಳಿದಿರುವಿಕೆ ಬಗ್ಗೆಯೂ ವರದಿ ಪ್ರಸ್ತಾಪಿಸಿದೆ.

ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯನಗರ, ಯಾದಗಿರಿ, ಕಲಬುರಗಿ, ಬೀದರ್ ಮತ್ತು ರಾಮನಗರ ವ್ಯವಸಾಯ ಸಂಪನ್ಮೂಲಗಳು ಹೇರಳವಾಗಿರುವ ಜಿಲ್ಲೆಗಳಾಗಿವೆ. ಆದರೆ, ಇವುಗಳಲ್ಲಿ ಮೂಲಸೌಕರ್ಯದ ಕೊರತೆಯಿದ್ದು, ಸರ್ಕಾರ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯ ಇದೆ. ನೀರು ಕೊಯ್ಲು, ಸಣ್ಣ ನೀರಾವರಿ, ಕೆರೆಗಳ ಪುನರುಜ್ಜೀವನ, ಶೈತ್ಯಾಗಾರ ವ್ಯವಸ್ಥೆ, ಭೌತಿಕ ಮತ್ತು ಇಂಟರ್ನೆಟ್ ಆಧಾರಿತ ಸಂಪರ್ಕ ವ್ಯವಸ್ಥೆ, ರೈತ ಉತ್ಪಾದನಾ ಸಂಸ್ಥೆಗಳನ್ನು ಮತ್ತು ಕೃಷಿ ವಿಸ್ತರಣೆಯ ಸೇವೆಗಳನ್ನು ಉತ್ತಮಗೊಳಿಸಬೇಕು ಎಂದು ವರದಿ ಸೂಚಿಸಿದೆ. 

ADVERTISEMENT

ಹಲವು ಕ್ರಮಗಳ ಶಿಫಾರಸು: ಸರ್ಕಾರದ 11 ಇಲಾಖೆಗಳಿಗೆ ಹೆಚ್ಚುವರಿ ಹಣ ಒದಗಿಸುವುದು, ಮುಖ್ಯಮಂತ್ರಿಗಳ ವಿವೇಚನಾ ಅನುದಾನವನ್ನು ಹೆಚ್ಚಿಸುವುದು, ಗುಣಮಟ್ಟದ ಶಿಕ್ಷಣ, ಕೌಶಲ ತರಬೇತಿ, ಆರೋಗ್ಯ ಸೇವೆಗಳ ಮೂಲಕ ಮಾನವ ಸಂಪನ್ಮೂಲವನ್ನು ಉತ್ತಮಪಡಿಸುವುದು, ಮುಂದಿನ ಐದು ವರ್ಷಗಳಲ್ಲಿ ₹30,000 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ವೃದ್ಧಿಸುವುದು, ಯೋಜನೆಗಳ ಜಾರಿಗೆ ಪೂರ್ವತಯಾರಿ ನಡೆಸುವುದು ಸೇರಿದಂತೆ ವರದಿಯು ಹಲವು ಶಿಫಾರಸುಗಳನ್ನು ಮಾಡಿದೆ.  

ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಮಂಡಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದಿರುವ ಸಮಿತಿಯು, ಅವುಗಳನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿದೆ. ಅನುದಾನದ ಸಮರ್ಥ ಬಳಕೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಪುನರ್ ಸಂಘಟಿಸುವಂತೆ ಸೂಚಿಸಿದೆ.

ಪ್ರೊ.ಗೋವಿಂದ ರಾವ್ ಸಮಿತಿ ರಚಿಸಿದ್ದು ಏಕೆ?

ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಮತ್ತು ಹಿಂದುಳಿದಿರುವಿಕೆಯ ಅಧ್ಯಯನ ಮಾಡಲು 2002ರಲ್ಲಿ ಡಿ.ಎಂ.ನಂಜುಂಡಪ್ಪ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿ ಸಮಿತಿ ರಚಿಸಲಾಗಿತ್ತು. ಸಮಿತಿಯು ರಾಜ್ಯದಲ್ಲಿ ಹಿಂದುಳಿದಿದ್ದ ತಾಲ್ಲೂಕುಗಳನ್ನು ಪಟ್ಟಿ ಮಾಡಿ, ಅಭಿವೃದ್ಧಿಯಲ್ಲಿ ಅವು ಇತರ ತಾಲ್ಲೂಕುಗಳನ್ನು ಸರಿಗಟ್ಟಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರಂತೆ, ಹಿಂದುಳಿದ ತಾಲ್ಲೂಕುಗಳಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯನ್ನು (ಎಸ್‌ಡಿಪಿ) 2007–2008ರಿಂದ ಜಾರಿಗೊಳಿಸಿತ್ತು. ಆ ಯೋಜನೆಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಿವೆ ಮತ್ತು ಸರ್ಕಾರದ ಯೋಜನೆಗಳು ಎಂಥ ಬದಲಾವಣೆ ತಂದಿವೆ ಎನ್ನುವುದನ್ನು ಅಧ್ಯಯನ ಮಾಡಲು ಪ್ರೊ.ಗೋವಿಂದರಾವ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಡಿ.ಎಂ.ನಂಜುಂಡಪ್ಪ ಅವರ ಸಮಿತಿಗಿಂತ ಭಿನ್ನ ಮಾನದಂಡ, ಮಾರ್ಗ ಅನುಸರಿಸಿರುವ ಗೋವಿಂದರಾವ್ ಸಮಿತಿಯು, ಪ್ರಾದೇಶಿಕ ಅಸಮಾನತೆಯ ವಿವರಗಳನ್ನು ವಿಸ್ತೃತವಾಗಿ ಚರ್ಚಿಸಿದೆ.

ಪ್ರಮುಖ ಅಂಶಗಳು

1. ಉತ್ತರ ಕರ್ನಾಟಕದಲ್ಲಿ ಹಿಂದುಳಿದಿರುವಿಕೆಯು ವ್ಗಾಪಕವಾಗಿದ್ದು, ಅದನ್ನು ಪರಿಹರಿಸಲು ನಿರ್ದಿಷ್ಟ ನೀತಿ/ಯೋಜನೆಗಳ ಜಾರಿ ಅಗತ್ಯವಾಗಿದೆ

2. ಉತ್ತರ ಕರ್ನಾಟಕದಲ್ಲಿ, ಹೆಚ್ಚು ಹಿಂದುಳಿದ ಜಿಲ್ಲೆಗಳು ಬೆಳಗಾವಿ ವಿಭಾಗದಲ್ಲಿದ್ದರೆ, ಅತಿ ಹೆಚ್ಚು ಹಿಂದುಳಿದ ಜಿಲ್ಲೆಗಳು ಕಲಬುರಗಿ ವಿಭಾಗದಲ್ಲಿವೆ                 

3. ಅತಿ ಹೆಚ್ಚು ಹಿಂದುಳಿದ ಜಿಲ್ಲೆಗಳು ಎಲ್ಲ ಮಾನದಂಡಗಳಲ್ಲಿಯೂ ಹಿಂದುಳಿದಿವೆ. ಹೀಗಾಗಿ ಎಲ್ಲ ವಲಯಗಳನ್ನೂ ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು

4. ಹಿಂದುಳಿದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಮತ್ತು ಸಂಪನ್ಮೂಲದ ಕೊರತೆ ಇದೆ (ಕೃಷಿ ಸಂಪನ್ಮೂಲ ಉತ್ತಮವಾಗಿರುವ ಜಿಲ್ಲೆಗಳನ್ನು ಹೊರತುಪಡಿಸಿ). ಕೃಷಿಯೇತರ ಆರ್ಥಿಕ ಮತ್ತು ಸಾಮಾಜಿಕ ಮೂಲ ಸೌಕರ್ಯ ಉತ್ತಮಪಡಿಸುವುದು ಅಭಿವೃದ್ಧಿಯ ಸಮತೋಲನ ಸಾಧಿಸಲು ಮುಖ್ಯ ಕ್ರಮವಾಗಿದೆ

5. ಕೃಷಿ ಸಂಪನ್ಮೂಲವು ಹೇರಳವಾಗಿರುವ ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಗಳು ತೀವ್ರಗತಿಯಲ್ಲಿ ನಡೆಯುತ್ತಿರುವ ಪರಿಣಾಮ, ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಆದಾಗ್ಯೂ ಕೆಲವು ಜಿಲ್ಲೆಗಳಲ್ಲಿ ಇಂಥ ಬದಲಾವಣೆ ಆಗದೇ ಇರುವುದರಿಂದ ಅಲ್ಲಿ ಸಂಪನ್ಮೂಲ ಮತ್ತು ಮೂಲಸೌಕರ್ಯದ ಕೊರತೆ ಇದೆ

6. ಹೆಚ್ಚು ಹಿಂದುಳಿದ ಮತ್ತು ಅತಿ ಹೆಚ್ಚು ಹಿಂದುಳಿದ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಾಮಾಜಿಕ ವಲಯಕ್ಕೆ ಸಂಬಂಧಿಸಿದ ಸಂಪನ್ಮೂಲಗಳು ಮತ್ತು ಮೂಲಸೌಕರ್ಯದ ಕೊರತೆ ಕಂಡುಬಂದಿದೆ

ನಂಜುಂಡಪ್ಪ ವರದಿ ಈಗ ಅನ್ವಯವಾದರೆ...

ಡಿ.ಎಂ.ನಂಜುಂಡಪ್ಪ ಸಮಿತಿಯು ಪ್ರಾದೇಶಿಕ ಅಸಮತೋಲನದ ಅಧ್ಯಯನ ನಡೆಸುವಾಗ ರಾಜ್ಯದಲ್ಲಿ 175 ತಾಲ್ಲೂಕುಗಳಿದ್ದವು. ಕೃಷಿ, ಕೈಗಾರಿಕೆ, ವ್ಯಾಪಾರ ಮತ್ತು ಹಣಕಾಸು, ಆರ್ಥಿಕ ಮೂಲಸೌಕರ್ಯ, ಸಾಮಾಜಿಕ ಮೂಲಸೌಕರ್ಯ ಮತ್ತು ಭೌಗೋಳಿಕ ಗುಣಲಕ್ಷಣಗಳು ಈ ಐದು ಮಾನದಂಡಗಳ ಆಧಾರದಲ್ಲಿ ಸಮಿತಿಯು ಸಮಗ್ರ ಸಂಯೋಜಿತ ಅಭಿವೃದ್ಧಿ ಸೂಚ್ಯಂಕ (ಸಿಸಿಡಿಐ–ಕಾಂಪ್ರಿಹೆನ್ಸಿವ್‌ ಕಾಂಪಸಿಟ್‌ ಡೆವೆಲಪ್‌ಮೆಂಟ್‌ ಇಂಡೆಕ್ಸ್‌) ಲೆಕ್ಕ ಹಾಕಿ, ಸೂಚ್ಯಂಕಗಳ ಅಂಕಗಳ ಆಧಾರದಲ್ಲಿ ತಾಲ್ಲೂಕುಗಳ ಹಿಂದುಳಿದಿರುವಿಕೆಯನ್ನು ಲೆಕ್ಕಹಾಕಿತ್ತು. 

ಆ ಲೆಕ್ಕಾಚಾರದಲ್ಲಿ ಕೆಲವು ಕೊರತೆಗಳಿವೆ ಎಂದು ಗೋವಿಂದರಾವ್‌ ಸಮಿತಿ ಹೇಳಿದೆ.

ನಂಜುಂಡಪ್ಪ ಸಮಿತಿ ಅನುಸರಿಸಿದ ವರ್ಗೀಕರಣ ವಿಧಾನ ಮತ್ತು ಮರುಲೆಕ್ಕ ಹಾಕಿದ ಸಿಸಿಡಿಐ ಅನ್ನು ಗೋವಿಂದರಾವ್‌ ಸಮಿತಿಯು ಈಗಿನ 236 ತಾಲ್ಲೂಕುಗಳಿಗೆ ಅನ್ವಯಿಸಿದೆ. ಅದರ ಪ್ರಕಾರ, 93 ತಾಲ್ಲೂಕುಗಳು ಅತಿ ಹೆಚ್ಚು ಹಿಂದುಳಿದಿದ್ದರೆ, 36 ಹೆಚ್ಚು ಹಿಂದುಳಿದಿವೆ. 43 ಮತ್ತು 64 ತಾಲ್ಲೂಕುಗಳು ಕ್ರಮವಾಗಿ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದಿದ ವರ್ಗದಲ್ಲಿ ಬರುತ್ತವೆ.

ಅದರ ಪ್ರಕಾರ

* 2001–02ಕ್ಕೆ ಹೋಲಿಸಿದರೆ ಶೇ 65ರಷ್ಟಿದ್ದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ 2022–23ಕ್ಕೆ ಶೇ 72.8ಕ್ಕೆ ಹೆಚ್ಚಾಗಿದೆ

* ಶೇ 60ರಷ್ಟು ಹಿಂದುಳಿದ ತಾಲ್ಲೂಕುಗಳು ಉತ್ತರ ಕರ್ನಾಟದಲ್ಲಿವೆ

* ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು ಕಲಬುರಗಿ ವಿಭಾಗದಲ್ಲಿವೆ (ಶೇ 42). ಬೆಳಗಾವಿಯಲ್ಲಿ ಶೇ 34ರಷ್ಟು ತಾಲ್ಲೂಕುಗಳಿವೆ

* ಹೆಚ್ಚು ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಬೆಳಗಾವಿ ವಿಭಾಗದಲ್ಲಿದೆ (ಶೇ 33.7). ನಂತರ ಕಲಬುರಗಿ ವಿಭಾಗದಲ್ಲಿದೆ (ಶೇ 26.1)

* ಹೊಸದಾಗಿ ರಚನೆಯಾದ 61 ತಾಲ್ಲೂಕುಗಳಲ್ಲಿ 51 ತಾಲ್ಲೂಕು ಅತಿ ಹೆಚ್ಚು ಹಿಂದುಳಿದ ವರ್ಗದಲ್ಲಿ ಬರುತ್ತವೆ. 2 ಹೆಚ್ಚು ಹಿಂದುಳಿದ, 5 ಹಿಂದುಳಿದ ಮತ್ತು ಮೂರು ಅಭಿವೃದ್ಧಿ ಹೊಂದಿದ ವರ್ಗಗಳಲ್ಲಿ ಬರುತ್ತವೆ

ಮಾಪನಕ್ಕೆ ಭಿನ್ನ ವಿಧಾನ

ನಂಜುಂಡಪ್ಪ ಸಮಿತಿ ಅನುಸರಿಸಿದ್ದಕ್ಕಿಂತ ಕೊಂಚ ಭಿನ್ನವಾದ ವಿಧಾನ ಮತ್ತು ಮಾನದಂಡಗಳನ್ನು ಗೋವಿಂದ ರಾವ್‌ ಸಮಿತಿ ಅಳವಡಿಸಿಕೊಂಡು ತಾಲ್ಲೂಕುಗಳ ಅಭಿವೃದ್ಧಿ ಮತ್ತು ಹಿಂದುಳಿದಿರುವಿಕೆಯನ್ನು ಅಳೆದಿದೆ. 

ಸಂಪನ್ಮೂಲ/ಮೂಲಸೌಕರ್ಯ ಮಾತ್ರವಲ್ಲದೆ ತಲಾ ಆದಾಯ, ಆರೋಗ್ಯ (ಐದು ವರ್ಷದ ಕೆಳಗಿನ ಮಕ್ಕಳ ಮರಣ ಪ್ರಮಾಣ ಮತ್ತು 15–49 ವಯೋಮಾನದ ಮಹಿಳೆಯರಲ್ಲಿ ರಕ್ತಹೀನತೆ ಪ್ರಮಾಣ) ಮತ್ತು ಶಿಕ್ಷಣಗಳನ್ನೂ (ಸಾಕ್ಷರತೆ, ಲಿಂಗವಾರು ವ್ಯತ್ಯಾಸ) ಮಾನದಂಡವಾಗಿ ಪರಿಗಣಿಸಿದೆ.

ಜೀವನ ಮಟ್ಟ, ಆರೋಗ್ಯಕ್ಷೇತ್ರ ಮತ್ತು ಶಿಕ್ಷಣ ಈ ಮೂರು ವಿಷಯಗಳಿಗೂ ಪ್ರತ್ಯೇಕ ಫಲಿತಾಂಶ ಅಂಕಗಳನ್ನು (ಔಟ್‌ಕಮ್‌ ಸ್ಕೋರ್‌) ಲೆಕ್ಕಹಾಕಿದೆ. ನಂತರ ಮೂರು ಅಂಕಗಳನ್ನೂ ಪರಿಗಣಿಸಿ ಸಂಯೋಜಿತ ಫಲಿತಾಂಶ ಅಂಕಗಳನ್ನು (ಕಾಂಪಸಿಟ್‌ ಔಟ್‌ಕಮ್‌ ಸ್ಕೋರ್‌) ಲೆಕ್ಕಹಾಕಿದೆ. ಹಿಂದುಳಿದಿರುವಿಕೆಯ ತೀವ್ರತೆಯನ್ನು ಗುರುತಿಸಲು ಸಮಿತಿಯು 59 ತಾಲ್ಲೂಕುಗಳನ್ನೊಳಗೊಂಡ ನಾಲ್ಕು ಸಮನಾದ ವಿಭಾಗಗಳನ್ನು ಮಾಡಿದೆ.

ಅತ್ಯಂತ ಕಡಿಮೆ ಸಂಯೋಜಿತ ಸೂಚ್ಯಂಕ ಪಡೆದ 59 ತಾಲ್ಲೂಕುಗಳನ್ನು ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು ಎಂದು ಪರಿಗಣಿಸಿದೆ. ಅತಿ ಹೆಚ್ಚು ಸೂಚ್ಯಂಕ ಹೊಂದಿದ 59 ತಾಲ್ಲೂಕುಗಳನ್ನು ಅಭಿವೃದ್ಧಿಹೊಂದಿದ ತಾಲ್ಲೂಕುಗಳು ಎಂದು ಗುರುತಿಸಿದೆ. ಅದೇ ರೀತಿ ಇದೇ ಸೂಚ್ಯಂಕದ ಆಧಾರದಲ್ಲಿ ತಲಾ 59 ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳನ್ನಾಗಿ ಸಮಿತಿ ಪಟ್ಟಿ ಮಾಡಿದೆ. 

ಇದೇ ರೀತಿಯಲ್ಲಿ ಸಂಪನ್ಮೂಲ/ಮೂಲಸೌಕರ್ಯ ಮಾನದಂಡದ ಆಧಾರದಲ್ಲೂ ಅಂಕಗಳನ್ನು ಲೆಕ್ಕಹಾಕಲಾಗಿದೆ.

ಈ ಮಾನದಂಡದ ಅಡಿಯಲ್ಲಿ ಮೊದಲನೇ ಶ್ರೇಣಿ, ಎರಡನೇ ಶ್ರೇಣಿ ಮತ್ತು ‌ಮೂರನೇ ಶ್ರೇಣಿಯ ಮೂಲಸೌಕರ್ಯಗಳು, ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನೂ ‍ಪರಿಗಣಿಸಿ ಅಂಕಗಳನ್ನು ಲೆಕ್ಕಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.