ಪ್ರಾತಿನಿಧಿಕ ಚಿತ್ರ
ಕರ್ನಾಟಕ ಸರ್ಕಾರವು ‘ಮುಟ್ಟಿನ ರಜೆ’ ನೀಡುವ ನಿರ್ಧಾರ ಕೈಗೊಳ್ಳುವ ಮೂಲಕ ಮಹಿಳೆಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ. ಉದ್ಯೋಗನಿರತ ಮಹಿಳೆಯರಿಗೆ ಮುಟ್ಟಿನ ರಜೆ ನೀಡಿದ ಮೊದಲ ರಾಜ್ಯ ಕರ್ನಾಟಕ ಅಲ್ಲ. ಬಿಹಾರ, ಕೇರಳ, ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ವಿವಿಧ ರೂಪಗಳಲ್ಲಿ ಮುಟ್ಟಿನ ರಜೆ ಸೌಲಭ್ಯ ಇದೆ. ಆದಾಗ್ಯೂ, ದೇಶದ ವ್ಯಾಪ್ತಿಯಲ್ಲಿ ಈ ಕುರಿತು ಆಗಿರುವ ಸಾಧನೆ ಕಡಿಮೆ ಎಂದೇ ಹೇಳಬೇಕು. ಯಾವ ರಾಜ್ಯದಲ್ಲಿ ಯಾವ ವಲಯದಲ್ಲಿ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಲಾಗಿದೆ; ರಾಜ್ಯದಲ್ಲಿ ಮುಟ್ಟಿನ ರಜೆ ನೀತಿ ಜಾರಿಯ ವಿಚಾರದಲ್ಲಿ ಇರುವ ತೊಡಕುಗಳೇನು ಎನ್ನುವ ವಿವರಗಳು ಇಲ್ಲಿವೆ
ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ವೇತನಸಹಿತ ಮುಟ್ಟಿನ ರಜೆ ನೀಡುವ ‘ಮುಟ್ಟಿನ ರಜೆ ನೀತಿ–2025’ ಅನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ. ಈ ಬಗ್ಗೆ ದೇಶವ್ಯಾಪಿ ಮೆಚ್ಚುಗೆ ವ್ಯಕ್ತವಾಗಿದ್ದು, ಮಹಿಳಾ ಕಾರ್ಯಪಡೆಯನ್ನು ಒಳಗೊಳ್ಳುವ ಮತ್ತು ಲಿಂಗಸೂಕ್ಷ್ಮತೆಯನ್ನು ಬೆಳೆಸುವ ದಿಸೆಯಲ್ಲಿ ಅತ್ಯುತ್ತಮ ಕ್ರಮ ಎನ್ನಲಾಗುತ್ತಿದೆ. ಸರ್ಕಾರಿ, ಖಾಸಗಿ ವಲಯಗಳಿಗೂ ಅನ್ವಯವಾಗುವಂತೆ ಈ ನಿರ್ಧಾರ ಕೈಗೊಂಡ ಮೊದಲ ರಾಜ್ಯ ಕರ್ನಾಟಕ.
ನೀತಿ ಜಾರಿಯಾದ ನಂತರ ರಾಜ್ಯದ ಸರ್ಕಾರಿ, ಗಾರ್ಮೆಂಟ್ಸ್, ಐಟಿ, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ದೊರೆಯಲಿದೆ. ಕರ್ನಾಟಕದಲ್ಲಿ ವರ್ಷಕ್ಕೆ ಆರು ದಿನ ವೇತನಸಹಿತ ಮುಟ್ಟಿನ ರಜೆ ನೀಡಬೇಕು ಎಂದು 2024ರಲ್ಲಿ ಮುಟ್ಟಿನ ರಜೆ ನೀತಿ ಸಮಿತಿ ಶಿಫಾರಸು ಮಾಡಿತ್ತು. ನಂತರ ರಜೆಯ ದಿನಗಳನ್ನು ತಿಂಗಳಿಗೆ ಒಂದರಂತೆ 12ಕ್ಕೆ ಏರಿಸಿ, ಆ ನಿಯಮವನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಲಾಗಿದೆ.
ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಾನೂನುಬದ್ಧಗೊಳಿಸಲು ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್, ರಾಜ್ಯಗಳಿಗೆ ಹಿಂದೆಯೇ ಸೂಚಿಸಿತ್ತು. ಆದಾಗ್ಯೂ, ಬೆರಳೆಣಿಕೆಯ ರಾಜ್ಯಗಳಲ್ಲಿ ಮಾತ್ರ ಕೆಲವು ವಲಯಗಳಿಗೆ ಸೀಮಿತಗೊಳಿಸಿ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಲಾಗಿದೆ.
ಬಿಹಾರ: ಉದ್ಯೋಗಿಗಳಿಗೆ ಮುಟ್ಟಿನ ರಜೆ ಸೌಲಭ್ಯ ನೀಡಿದ ಮೊದಲ ರಾಜ್ಯ ಬಿಹಾರ. ಅಲ್ಲಿ, ಮುಟ್ಟಿನ ಸಂದರ್ಭದಲ್ಲಿ ಸತತ ಎರಡು ದಿನ ರಜೆ ನೀಡಲಾಗುತ್ತಿದೆ. ಆದರೆ, ಈ ಸೌಲಭ್ಯವು ಸರ್ಕಾರಿ ನೌಕರರಿಗೆ ಸೀಮಿತವಾಗಿದೆ. 1992ರ ಜ.2ರಂದು ಅಂದಿನ ಮುಖ್ಯಮಂತ್ರಿ ಲಾಲೂಪ್ರಸಾದ್ ಈ ನಿರ್ಧಾರ ಕೈಗೊಂಡಿದ್ದರು.
ಕೇರಳ: ಕೊಚ್ಚಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಕೇರಳದ ವಿಶ್ವವಿದ್ಯಾಲಯಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ನೀಡುವ ಪರಿಪಾಟ ಆರಂಭವಾಯಿತು. ಮುಟ್ಟಿನ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನುವಾಗುವಂತೆ, 2023ರ ಜನವರಿಯಲ್ಲಿ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರು ವಿದ್ಯಾರ್ಥಿನಿಯರಿಗೆ ಹಾಜರಾತಿಯಲ್ಲಿ ಶೇ 2ರಷ್ಟು ವಿನಾಯಿತಿ ಘೋಷಿಸಿದರು.
ಒಡಿಶಾ: ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಒಂದು ದಿನ ವೇತನಸಹಿತ ಮುಟ್ಟಿನ ರಜೆ ನೀಡುವುದಾಗಿ 2024ರ ಸ್ವಾತಂತ್ರ್ಯೋತ್ಸವದಂದು ಆಗಿನ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಘೋಷಿಸಿದ್ದರು.
ಸಿಕ್ಕಿಂ: ರಾಜ್ಯದ ಹೈಕೋರ್ಟ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ, ವೈದ್ಯರ ಶಿಫಾರಸಿನ ಆಧಾರದಲ್ಲಿ 2–3 ದಿನ ಮುಟ್ಟಿನ ರಜೆ ಪಡೆಯಬಹುದಾದ ಸೌಲಭ್ಯ ನೀಡಲಾಗಿದೆ. ಸಿಕ್ಕಿಂ ವಿಶ್ವವಿದ್ಯಾಲಯದಲ್ಲಿಯೂ ವಿದ್ಯಾರ್ಥಿನಿಯರಿಗೆ ಮತ್ತು ಸಿಬ್ಬಂದಿಗೆ ಒಂದು ದಿನದ ಮುಟ್ಟಿನ ರಜೆ ನೀಡಲಾಗುತ್ತಿದೆ. ಆದರೆ, ಇತರೆ ರಾಜ್ಯಗಳಂತೆ ರಾಜ್ಯವ್ಯಾಪಿ ಮುಟ್ಟಿನ ರಜೆ ನೀಡುವ ವ್ಯವಸ್ಥೆ ಸಿಕ್ಕಿಂನಲ್ಲಿ ಇಲ್ಲ; ಈ ಸೌಲಭ್ಯವು ಕೆಲವು ವಲಯ/ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ.
1. ಸ್ಪೇನ್: 2003ರಲ್ಲಿ ಈ ನೀತಿಯನ್ನು ಜಾರಿಗೆ ತಂದಿದ್ದು, ಋತುಚಕ್ರದ ಸಮಯದಲ್ಲಿ ಮಹಿಳಾ ಉದ್ಯೋಗಿಗಳು ಮೂರರಿಂದ ಐದು ದಿನ ರಜೆ ತೆಗೆದುಕೊಳ್ಳಬಹುದು. ಆದರೆ, ಇದಕ್ಕೆ ವೈದ್ಯರ ಟಿಪ್ಪಣಿ ಅಗತ್ಯ. ಇದು ವೇತನಸಹಿತ ರಜೆ ಆಗಿದ್ದರೂ, ಆ ದಿನಗಳಲ್ಲಿ ದಿನದ ಸಂಬಳದ ಶೇ 75ರಷ್ಟು ಮಾತ್ರ ಸರ್ಕಾರ ಪಾವತಿ ಮಾಡುತ್ತದೆ
2. ಇಂಡೊನೇಷ್ಯಾ: ಇಲ್ಲಿ 2003ರಿಂದಲೇ ಈ ನೀತಿ ಜಾರಿಯಲ್ಲಿದೆ. ಮುಟ್ಟಿನ ಸಮಯದಲ್ಲಿ ಮೊದಲ ಎರಡು ದಿನಗಳಿಗೆ ವೇತನಸಹಿತ ರಜೆ ನೀಡುವುದಕ್ಕೆ ಇದರಲ್ಲಿ ಅವಕಾಶ ಇದೆ. ಆದರೆ, ರಜೆ ನೀಡುವುದು ಪ್ರತಿ ಉದ್ಯೋಗದಾತ ಕಂಪನಿಯ ವಿವೇಚನೆಗೆ ಬಿಟ್ಟಿದ್ದು. ಹಾಗಾಗಿ ಕಂಪನಿಗಳು ಈ ನೀತಿಯನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು ಎಂಬುದಿಲ್ಲ
3. ಜಪಾನ್: 1947ರಲ್ಲೇ ಈ ಸಂಬಂಧ ಶಾಸನ ಜಾರಿಗೆ ಬಂದಿದೆ. ಇದರ ಪ್ರಕಾರ, ಕಠಿಣ ಕೆಲಸ ಮಾಡುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಕೆಲಸ ಮಾಡುವಂತೆ ಕಂಪನಿಗಳು ಸೂಚಿಸುವಂತಿಲ್ಲ. ಅವರು ರಜೆ ತೆಗೆದುಕೊಳ್ಳಬಹುದು. ಆದರೆ, ರಜಾ ದಿನದ ವೇತನ ಪಾವತಿ ಮಾಡುವುದು ಕಡ್ಡಾಯವಲ್ಲ
4. ದಕ್ಷಿಣ ಕೊರಿಯಾ: 1953ರಿಂದಲೇ ನೀತಿ ಜಾರಿಯಲ್ಲಿದ್ದು, ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ವೇತನರಹಿತ ರಜೆ ನೀಡುವ ವ್ಯವಸ್ಥೆ ಇದೆ. ಆದರೆ, 2017ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಇಂತಹ ರಜೆ ತೆಗೆದುಕೊಳ್ಳುವ ಮಹಿಳೆಯರ ಪ್ರಮಾಣ ತುಂಬಾ ಕಡಿಮೆ
5. ತೈವಾನ್: ಮುಟ್ಟಿನ ದಿನಗಳಲ್ಲಿ ತೀವ್ರ ನೋವಿನಿಂದಾಗಿ ಕೆಲಸ ಮಾಡಲು ಸಾಧ್ಯವಿಲ್ಲದವರು ತಿಂಗಳಿಗೆ ಒಂದು ದಿನ ರಜೆ ಪಡೆಯುವುದಕ್ಕೆ ತೈವಾನ್‌ನಲ್ಲಿ ಅವಕಾಶ ಇದೆ. ಆ ದಿನದ ಅರ್ಧ ವೇತನ ನೀಡಲಾಗುತ್ತದೆ
6. ವಿಯೆಟ್ನಾಂ: ಪ್ರತಿ ತಿಂಗಳು ಮಹಿಳಾ ಉದ್ಯೋಗಿಗಳು ಮೂರು ದಿನ ರಜೆ ಪಡೆಯಬಹುದು. ಆ ದಿನದ ವೇತನ ಪಾವತಿ ಕಡ್ಡಾಯವಲ್ಲ. ಕೆಲಸಕ್ಕೆ ಬಂದರೆ ಪ್ರತಿ ದಿನ 30 ನಿಮಿಷಗಳಷ್ಟು ವಿಶ್ರಾಂತಿ ಪಡೆಯುವುದಕ್ಕೂ ಅವಕಾಶ ಇದೆ. ಆದರೆ, ರಜೆ ಪಡೆಯದಿದ್ದ ಉದ್ಯೋಗಿಗಳಿಗೆ ಹೆಚ್ಚುವರಿ ವೇತನ ನೀಡಲಾಗುತ್ತದೆ
7. ಝಾಂಬಿಯಾ: ಇಲ್ಲಿ ಪ್ರತಿ ತಿಂಗಳು ‘ತಾಯಂದಿರ ದಿನ’ ಆಚರಿಸಲಾಗುತ್ತದೆ. ಮಹಿಳಾ ಉದ್ಯೋಗಿಗಳು ಕಾರಣ ನೀಡದೇ ತಿಂಗಳಿಗೆ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಕಂಪನಿಗಳು ಆ ದಿನದ ವೇತನ ನೀಡುವುದು ಕಡ್ಡಾಯವಲ್ಲ
ದುರುಪಯೋಗದ ವಾದ ಸರಿಯಲ್ಲ
ಮಹಿಳೆಯರಿಗೆ ಮುಟ್ಟು ಒಂದು ಜೈವಿಕ ಸ್ಥಿತಿ. ಆ ದಿನಗಳಲ್ಲಿ ಬಹುತೇಕ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ದುಡಿಯುವ ಮಹಿಳೆಯರಿಗಂತೂ ರಜೆ ತೀರಾ ಅವಶ್ಯಕ. ಗೃಹಿಣಿಯರಿಗೆ, ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಪಡೆಯುವ ಆಯ್ಕೆಯಾದರೂ ಇರುತ್ತದೆ. ಆದರೆ, ಉದ್ಯೋಗಸ್ಥ ಮಹಿಳೆಯರಿಗೆ ಅದು ಸಾಧ್ಯವಿಲ್ಲ. ಮಹಿಳೆಯರಿಗೆ ಈ ಸಂದರ್ಭದಲ್ಲಿ ಮೂರ್ನಾಲ್ಕು ದಿನ ನೋವು ಇರುತ್ತದೆ. ಎಷ್ಟು ದಿನ ರಜೆ ನೀಡುವುದು ಎನ್ನುವುದರ ಬಗ್ಗೆಯೂ ಸಮಿತಿಯಲ್ಲಿ ಚರ್ಚಿಸಿದೆವು. ಸಮಿತಿಯಲ್ಲಿ ಸ್ತ್ರೀರೋಗ ತಜ್ಞೆಯೂ ಇದ್ದರು. ಕೆಲವರಿಗೆ ಮೊದಲ ದಿನ ನೋವು ಬರುತ್ತೆ, ಕೆಲವರಿಗೆ ಎರಡನೇ ದಿನ, ಮತ್ತೆ ಕೆಲವರಿಗೆ ಮೂರನೇ ದಿನ ನೋವು ಕಾಡುತ್ತೆ ಎಂದು ವೈದ್ಯೆ ಹೇಳಿದರು. ಕೊನೆಗೆ, ಅವರ ಆಯ್ಕೆಯ ಒಂದು ದಿನ ರಜೆ ಹಾಕಲು ಅವಕಾಶ ನೀಡಬೇಕು ಎಂದು ತೀರ್ಮಾನಕ್ಕೆ ಬರಲಾಯಿತು.
ಮುಟ್ಟಿನ ರಜೆ ನೀತಿಯ ಜಾರಿಯಲ್ಲಿರುವ ತೊಡಕಿನ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ, ಅವರ ಉತ್ಪಾದಕತೆ ಕಡಿಮೆ ಆಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾವುದೇ ಹೊಸ ಕಾನೂನು ಮಾಡಿದರೂ ಇಂಥ ಕೆಲವು ತೊಡಕುಗಳು ಇದ್ದೇ ಇರುತ್ತವೆ. ಹೆರಿಗೆ ರಜೆ ಕಾನೂನು ಮಾಡುವಾಗಲೂ ಕೆಲವರು ಇದೇ ರೀತಿಯ ಆಕ್ಷೇಪ ಎತ್ತಿದ್ದರು. ನಂತರ ಅದು ಜಾರಿಯಾಗಲಿಲ್ಲವೇ. ನಾವು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಮಹಿಳೆಯರು ಇರುವುದು ಕೇವಲ ಉದ್ಯಮಿಗಳ ಉತ್ಪಾದನೆ ಹೆಚ್ಚಿಸಲೋ ಅಥವಾ ಹೆಚ್ಚು ಕೆಲಸ ಮಾಡಲೋ ಅಲ್ಲ. ಮುಟ್ಟಿನ ರಜೆಯಿಂದ ಅವರ ಕೆಲಸದ ಕ್ಷಮತೆ ಹೆಚ್ಚಾಗುತ್ತದೆ, ಅವರ ಸಾಮಾಜಿಕ ಉತ್ಪಾದನೆ ಹೆಚ್ಚಾಗುತ್ತದೆ. ಮುಟ್ಟಿನ ರಜೆ ಪಡೆದ ಹೆಣ್ಣು, ಅದನ್ನು ತನಗಾಗಿ, ಕುಟುಂಬಕ್ಕಾಗಿ ಬಳಸುತ್ತಾಳೆ; ಅದು ಅವಳು ಸಮಾಜಕ್ಕೆ ವಾಪಸ್ ಕೊಡುವ ರೀತಿಯೂ ಆಗಿದೆ.
ಕೆಲವರು ಮುಟ್ಟಿನ ರಜೆ ನೀತಿ ದುರುಪಯೋಗವಾಗುತ್ತದೆ ಎಂದು ಹೇಳುತ್ತಿದ್ದಾರೆ. ಮಹಿಳೆಯರಿಗೆ ಏನಾದರೂ ಒಳ್ಳೆಯದು ಮಾಡುವ ಪ್ರಯತ್ನಗಳು ನಡೆದಾಗಲೆಲ್ಲ ಕೆಲವರು ದುರುಪಯೋಗದ ವಾದ ಮುಂದಿಡುತ್ತಾರೆ. ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎನ್ನುವಂಥ ನಕಾರಾತ್ಮಕ ವಾದಗಳೂ ಇವೆ. ಶಾಲೆಗಳಲ್ಲಿ, ಗಾರ್ಮೆಂಟ್ಸ್‌ನಲ್ಲಿ ಮಹಿಳೆಯರನ್ನೇ ಹೆಚ್ಚಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಗಾರ್ಮೆಂಟ್ಸ್‌ನಲ್ಲಿ ಸುಮಾರು ನಾಲ್ಕು ಲಕ್ಷ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ವಲಯದಲ್ಲಿ ಪುರುಷರ್‍ಯಾರೂ ಕೆಲಸ ಮಾಡುವುದಿಲ್ಲ. ಇಂಥ ವಲಯಗಳಲ್ಲಿ ಉದ್ಯೋಗದಾತರು ಕೆಲಸಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಉದಾಹರಣೆಗೆ, ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಅಲ್ಪಪ್ರಮಾಣದಲ್ಲಿ ಹೆಚ್ಚಿಸುವುದು. ಸರ್ಕಾರವೂ ಇದೇ ಕ್ರಮ ಅನುಸರಿಸಬೇಕು.
ಮುಟ್ಟಿನ ರಜೆಯಿಂದ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಉದ್ಭವವಾಗಬಹುದು. ಹಾಗೆಂದು ರಜೆ ನೀಡದೇ ಇರುವುದು ಉತ್ತಮ ಸಮಾಜ/ವ್ಯವಸ್ಥೆಯ ಲಕ್ಷಣವಲ್ಲ; ಮುಟ್ಟಿನ ರಜೆ ನೀಡಲೇಬೇಕು. ಯಾವುದೇ ಕಂಪನಿ/ಕಚೇರಿಯಲ್ಲಿ ಮುಟ್ಟಿನ ರಜೆ ನೀಡದೇ ಇರುವುದು ನಿಯಮದ ಉಲ್ಲಂಘನೆ ಆಗುತ್ತದೆ. ಅವರು ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಮಾನವ ಜನಾಂಗದ ಮುಂದುವರಿಕೆಗೆ ಕಾರಣವಾದ ಹೆಣ್ತನದ ನೋವಿನ ಬಗ್ಗೆ ಸಮಾಜ, ಸರ್ಕಾರಕ್ಕೆ ಸಹಾನುಭೂತಿ ಇರಬೇಕು. ಮುಟ್ಟಿನ ರಜೆ ಮಹಿಳೆಯರ ಹಕ್ಕು ಎನ್ನುವುದನ್ನು ಎಲ್ಲರೂ ನೆನಪಿಡಬೇಕು.
–ಪ್ರತಿಭಾ ಆರ್., ಮುಟ್ಟಿನ ರಜೆ ನೀತಿ ಸಮಿತಿ ಸದಸ್ಯೆ, ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ
ಸ್ವಾಗತಿಸುವೆ, ಆದರೆ ಆತಂಕವೂ ಇದೆ...
ಸರ್ಕಾರದ ನಿರ್ಧಾರವನ್ನು ಹೆಣ್ಣಾಗಿ ನಾನು ಸ್ವಾಗತಿಸುತ್ತೇನೆ. ಇದು ಬಹಳ ದೊಡ್ಡ ಕ್ರಮ. ಆದರೆ, ಇದರ ಅನುಷ್ಠಾನದಲ್ಲಿ ಕೆಲವು ಸಮಸ್ಯೆಗಳೂ ಇವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ಈ ಬಗೆಯ ರಜೆಯು ಹೆಚ್ಚುವರಿ ಹೊರೆಯಂತೆ ಆಗಬಹುದು. ಈ ಉದ್ದಿಮೆಗಳು ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಮುಟ್ಟಿನ ರಜೆಯ ಕಾರಣದಿಂದಾಗಿ ಉಂಟಾಗುವ ಹೆಚ್ಚುವರಿ ಹೊರೆಯು ಯಾರ ಹೆಗಲಿಗೆ ವರ್ಗಾವಣೆ ಆಗುತ್ತದೆ ಎಂಬುದು ಇನ್ನೂ
ಸ್ಪಷ್ಟವಾಗಿಲ್ಲ. ಹೊರೆಯನ್ನು ಸರ್ಕಾರ ಅಥವಾ ಸರ್ಕಾರದ ಯಾವುದೇ ಸಂಸ್ಥೆ ಹೊರುತ್ತದೆ ಎಂದಾದರೆ ಸ್ವಾಗತಾರ್ಹ. ಮುಟ್ಟಿನ ರಜೆ ಎಂಬುದು ಅನಿರೀಕ್ಷಿತವಾಗಿ ಎದುರಾಗುವ ರಜೆ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಇರುವುದಿಲ್ಲ. ಕೆಲಸದ ಸ್ಥಳದಲ್ಲಿ ಬಹಳ ಮಹತ್ವದ ಪಾತ್ರ ವಹಿಸುವ ಮಹಿಳಾ ಸಿಬ್ಬಂದಿ ಇದ್ದಕ್ಕಿದ್ದಂತೆ ಈ ರಜೆಯನ್ನು ಪಡೆದಲ್ಲಿ, ಅವರ ಪಾಲಿನ ಕೆಲಸವನ್ನು ಯಾರು ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಈ ರಜೆಯು ಮಹಿಳೆಯರಿಗೆ ಉದ್ಯೋಗಾವಕಾಶಗಳು ಕ್ಷೀಣಿಸುವುದಕ್ಕೆ ಕಾರಣ ಆಗಬಹುದೇ ಎಂಬ ಆತಂಕವೂ ಇದೆ.
– ಉಮಾ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷೆ
ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆಯಾಗದಿರಲಿ
ಹೆಣ್ಣುಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೈಹಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಸಮಸ್ಯೆ ಅನುಭವಿಸುತ್ತಾರೆ. ಅದರಲ್ಲೂ ಮೊದಲ ದಿನದ ನೋವು, ಹೇಳಲಾಗದ ಯಾತನೆ. ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ಹಾಗಾಗಿ, ಹೆಣ್ಣುಮಕ್ಕಳ ಕಷ್ಟಗಳ ಬಗ್ಗೆ ಕಾಳಜಿ ವಹಿಸಿ, ಯಾವುದೇ ರೀತಿಯ ಪ್ರಮಾಣಪತ್ರ ಕೇಳದೇ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನದ ರಜೆ ನೀಡಬೇಕು ಎಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯನ್ನು ಸರ್ಕಾರ ಈಡೇರಿಸಿರುವುದು ತುಂಬಾ ಮಹತ್ವದ್ದು. ಈ ನಿರ್ಣಯವು ಒಂದು ದಿಟ್ಟ ಹೆಜ್ಜೆ. ಈ ಕುರಿತು ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಸೂಕ್ತ ಕಾನೂನು ರೂಪಿಸಬೇಕು. ರಜೆ ನೀಡುವಾಗ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಪುರುಷ ಮೇಲಧಿಕಾರಿಗಳು ನಡೆದುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು
–ಯಶೋಧ, ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
‘ಅಸಂಘಟಿತ ವಲಯಕ್ಕೂ ಅನ್ವಯವಾಗಲಿ’
ರಾಜ್ಯ ಸರ್ಕಾರ ರೂಪಿಸಲು ಹೊರಟಿರುವ ನೀತಿ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಇದರಿಂದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ ಪ್ರಯೋಜನವಾಗಲಿದ್ದು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಅನ್ವಯವಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಕಾರ್ಮಿಕ ಕಲ್ಯಾಣ ಮಂಡಳಿ ಅಥವಾ ಇಂತಹದೇ ಬೇರೆ ವ್ಯವಸ್ಥೆಯ ಮೂಲಕ ಈ ನೀತಿಯ ಪ್ರಯೋಜನ ಅವರಿಗೂ ಸಿಗುವಂತೆ ಮಾಡಬೇಕು ಎಂಬುದು ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳ ಒತ್ತಾಯ.
ಅಸಂಘಟಿತ ವಲಯದ ಮಹಿಳೆಯರು ಕಠಿಣ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ. ಮುಟ್ಟಿನ ಸಮಯದಲ್ಲಿ ನೋವು ತೀವ್ರವಾಗಿದ್ದರೆ ಕೆಲಸ ಮಾಡುವುದು ತುಂಬಾ ಕಷ್ಟ. ಸಂಘಟಿತ ವಲಯದ ಕೆಲವು ಮಹಿಳಾ ಉದ್ಯೋಗಿಗಳು ಆ ದಿನಗಳಂದು ಮನೆಯಿಂದಲೇ ಕೆಲಸ ಮಾಡಬಹುದು. ಆದರೆ, ಇವರಿಗೆ ಅಂತಹ ಅವಕಾಶ ಇಲ್ಲ. ಒಂದು ವೇಳೆ ರಜೆ ಮಾಡಿದರೂ, ಆ ದಿನದ ವೇತನ ಸಿಗುವುದಿಲ್ಲ. ಬಡ ಮಹಿಳಾ ಕಾರ್ಮಿಕರೇ ಹೆಚ್ಚಿರುವ ಈ ವಲಯದಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀತಿ ಅನ್ವಯವಾದರೆ ತುಂಬಾ ಅನುಕೂಲವಾಗುತ್ತದೆ ಎಂಬುದು ಮಹಿಳಾ ಹೋರಾಟಗಾರರ ವಾದ.
ಆಧಾರ: ಡೇಫಾರ್‌ಗರ್ಲ್ಸ್.ಒಆರ್‌ಜಿ, ಫ್ರೀ ಪೀರಿಯಡ್ಸ್ ಕೆನಡಾ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.