
ಮೆಕ್ಸಿಕೊದ ಜಾಲಿಸ್ಕೊ ರಾಜ್ಯದ ಝಪೊಪಾನ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು
ಮೆಕ್ಸಿಕೊದಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಕೂಟವೊಂದರ ಮುಖ್ಯಸ್ಥನನ್ನು ಸೇನೆ ಹೊಡೆದುರುಳಿಸಿದ ಬೆನ್ನಲ್ಲೆ ವ್ಯಾಪಕ ಹಿಂಸಾಚಾರ ಹುಟ್ಟಿಕೊಂಡಿದೆ. ಗುಂಪಿನ ಮುಖ್ಯಸ್ಥನನ್ನು ಕೊಂದರೆ, ಜಾಲದ ಅಂತ್ಯವಲ್ಲ, ಹೊಸ ಜಾಲವೊಂದರ ಹುಟ್ಟಿನ ಆರಂಭ ಎನ್ನುವುದು ಅಲ್ಲಿ ಹೊಸ ವಿಚಾರವೇನಲ್ಲ. ಹಲವು ಹಂತಗಳ, ಹಲವು ಗುಂಪುಗಳ, ಹಲವು ಪ್ರದೇಶಗಳನ್ನು ಆಧರಿಸಿದ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೆಲೆ ಕಂಡುಕೊಂಡಿರುವ ಡ್ರಗ್ಸ್ ಕಳ್ಳಸಾಗಣೆಯ ಕೂಟಗಳ ಹಿಂದೆ ಅಲ್ಲಿನ ರಾಜಕಾರಣಿಗಳ, ಅಧಿಕಾರಿಗಳ, ಉದ್ಯಮಿಗಳ ಪಾಲೂ ಇದೆ ಎನ್ನಲಾಗುತ್ತಿದೆ
ಉತ್ತರ ಅಮೆರಿಕ ಖಂಡಕ್ಕೆ ಸೇರಿದ ಮೆಕ್ಸಿಕೊ ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಭಯದ ವಾತಾವರಣ ಸೃಷ್ಟಿಯಾಗಿದ್ದು, ಯಾವ ಕ್ಷಣ ಏನಾಗುವುದೋ ಎನ್ನುವ ಆತಂಕ ಇದೆ. ವಿಚಿತ್ರ ಏನೆಂದರೆ, ಇಂಥ ಹಿಂಸಾಚಾರಕ್ಕೆ ಕಾರಣ, ಡ್ರಗ್ ಮಾಫಿಯಾದ ನೇತೃತ್ವ ಹೊತ್ತಿದ್ದ ಕುಖ್ಯಾತನನ್ನು ಸೇನೆ ಹತ್ಯೆ ಮಾಡಿರುವುದು. ಸೈನಿಕರ ಗುಂಡಿಗೆ ಬಲಿಯಾದವನ ಹೆಸರು ಎಲ್ ಮೆಂಚೊ.
ಎಲ್ ಮೆಂಚೊಗೆ ಇನ್ನೊಂದು ಹೆಸರಿದೆ: ನೆಮೆಸಿಯೊ ಒಸೆಗುರಾ ಸೆರ್ವೆಂಟೆಸ್. ಇವನು ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಎನ್ನುವ ಮಾದಕ ವಸ್ತು ಸಾಗಣೆ ಜಾಲದ ಅಧಿಪತಿಯಾಗಿದ್ದ. ಅಮೆರಿಕಕ್ಕೆ ಫೆಂಟಾನಿಲ್, ಮೆಥಾಂಫೆಟಮೈನ್ ಮತ್ತು ಕೊಕೇನ್ ಮುಂತಾದ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು ಈ ಕೂಟದ ಮುಖ್ಯ ದಂಧೆ. ಮಾನವ ಕಳ್ಳಸಾಗಣೆ ಅದರ ಇನ್ನೊಂದು ದಂಧೆ.
ಜಗತ್ತಿನ ಪ್ರತಿ ಭಾಗಕ್ಕೂ ಇದು ವಿಸ್ತರಣೆಗೊಂಡಿದೆ. ಆಹಾರ ಪದಾರ್ಥಗಳಲ್ಲಿ ಬಳಸಲಾಗುವ ಅವಕಾಡೊಗಳನ್ನು (ಬೆಣ್ಣೆ ಹಣ್ಣು) ಬೆಳೆಯುವುದರಿಂದ ಹಿಡಿದು ಅಮೆರಿಕಕ್ಕೆ ವಲಸಿಗರನ್ನು ಕಳ್ಳ ಮಾರ್ಗಗಳಲ್ಲಿ ಕಳುಹಿಸುವವರೆಗೆ ಇದು ಹಲವು ರೀತಿಯ ಅಕ್ರಮಗಳಲ್ಲಿ ತೊಡಗಿದೆ. ಆದರೆ, ಇದರ ಮುಖ್ಯ ದಂಧೆ, ಅಮೆರಿಕಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವುದು.
ಜಗತ್ತಿನ ಅತಿ ದೊಡ್ಡ ಮಾದಕ ವಸ್ತು ಜಾಲದ ಮುಖ್ಯಸ್ಥನಾಗಿ, ಕಿರೀಟವಿಲ್ಲದ ದೊರೆಯಂತೆ ಮೆರೆಯುತ್ತಿದ್ದ ಎಲ್ ಮೆಂಚೊ ಮೇಲೆ ಭಾನುವಾರ ಮೆಕ್ಸಿಕೊ ಸೇನೆ ಮುಗಿಬಿದ್ದಿತ್ತು. ಸೇನೆಯ ಕೈಯಲ್ಲಿ ಎಲೆ ಮೆಂಚೊ ಹತನಾಗಿದ್ದ. ಅಲ್ಲಿಗೆ ಸಿಜೆಎನ್‌ಜಿ ಕಥೆ ಮುಗಿಯಿತು ಎಂದೇ ಹಲವರು ಭಾವಿಸಿದ್ದರು. ಆದರೆ, ನಂತರದ ಬೆಳವಣಿಗೆಗಳು, ಇದು ಅಂತ್ಯ ಅಲ್ಲ, ಹೊಸ ಕಥೆಯೊಂದರ ಆರಂಭ ಎನ್ನುವುದನ್ನು ತೋರಿಸುತ್ತಿವೆ.
ಮಾದಕ ವಸ್ತುಗಳ ವಿರುದ್ಧದ ಆರು ದಶಕಗಳ ಸುದೀರ್ಘ ಹೋರಾಟದಲ್ಲಿ ಮೆಕ್ಸಿಕೊ ಇಂಥ ಹಲವು ಪಾತಕಿಗಳನ್ನು ಹೊಡೆದುರುಳಿಸಿದೆ.
ಎಲ್ ಮೆಂಚೊ
ಅದಕ್ಕೆ ಕಾರಣಗಳಿವೆ. ಮೆಕ್ಸಿಕೊದಲ್ಲಿ ಹಲವು ಮಾದಕ ವಸ್ತುಗಳ ಕೂಟಗಳಿವೆ. ಅವುಗಳ ಮುಖ್ಯಸ್ಥರು ಹತ್ಯೆಯಾದರೆ ಅಥವಾ ಸತ್ತರೆ, ಅವನ ಸ್ಥಾನಕ್ಕೆ ಬರಲು ಆ ಕೂಟದೊಳಗೇ ಮುಖಂಡರ ನಡುವೆ ಪೈಪೋಟಿ, ಸಂಘರ್ಷ, ಹೊಡೆದಾಟ ಆರಂಭವಾಗುತ್ತದೆ. ಅದು ಕೂಟದ ಸದಸ್ಯರಿಗೂ ವಿಸ್ತರಣೆಗೊಂಡು, ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಹಲವು ಕೂಟಗಳು ಹೀಗೆ ಒಡೆದು ಚೂರಾಗಿರುವುದೂ ಉಂಟು.
ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಹಿಂದೊಮ್ಮೆ ಮಿಲೆನಿಯೊ ಕಾರ್ಟೆಲ್‌ನ ಭಾಗವಾಗಿತ್ತು. ಅದು 2009ರಲ್ಲಿ ಕೂಟದಿಂದ ಸಿಡಿದು ಪ್ರತ್ಯೇಕ ಕೂಟವಾಗಿತ್ತು. ವಿಶೇಷ ಎಂದರೆ, ಮಿಲೆನಿಯೊ ಕಾರ್ಟೆಲ್ ಸಿನಲೋವಾ ಎಂಬ ಕೂಟದಿಂದ ಸಿಡಿದು ಪ್ರತ್ಯೇಕ ಗುಂಪಾಗಿತ್ತು. ಪ್ರತ್ಯೇಕಗೊಂಡ ಕೂಟಗಳಿಗೆ ಹೊಸ ಮುಖ್ಯಸ್ಥನ ನೇಮಕವಾಗುತ್ತಿತ್ತು. ಸೇನಾ ಕಾರ್ಯಾಚರಣೆಯಿಂದ ಕೂಟದ ಮುಖ್ಯಸ್ಥ ಹತ್ಯೆಯಾದರೆ, ಆ ಸ್ಥಾನಕ್ಕೆ ಮತ್ತೊಬ್ಬ ಏರುತ್ತಿದ್ದ. ಆದರೆ, ಆ ಪ್ರಕ್ರಿಯೆಯು ಸುಲಭವಾಗಿ ನಡೆಯುತ್ತಿರಲಿಲ್ಲ. ಅದು ಕೇವಲ ಆ ಕೂಟದ ಮೇಲಷ್ಟೇ ಅಲ್ಲದೇ ಇಡೀ ಪ್ರದೇಶದ ಜನಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಸಿನಲೋವಾ ಕೂಟದ ಮೇಲೆ ಸೇನೆ ದಾಳಿ ಮಾಡಿದ ನಂತರ ಆ ಪ್ರದೇಶದಲ್ಲಿ ಹುಟ್ಟಿಕೊಂಡು, ಈಗಲೂ ಮುಂದುವರಿಯುತ್ತಿರುವ ಉದ್ವಿಗ್ನ ಪರಿಸ್ಥಿತಿಯೇ ಕಾರಣ.
ಸಿನಲೋವಾ ಕೂಡ ಸಿಜೆಎನ್‌ಜಿಯಂತೆಯೇ ಮೆಕ್ಸಿಕೊದ ಅತ್ಯಂತ ಕುಖ್ಯಾತ ಕಳ್ಳಸಾಗಣೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವವರ ಕೂಟ. ಮಾನವ ಕಳ್ಳಸಾಗಣೆ, ವಲಸೆಗಾರರ ಅಪಹರಣ, ಇಂಧನ ಕಳ್ಳತನ, ಕಳ್ಳನಾಟ ಸಂಗ್ರಹ, ಮಾದಕ ವಸ್ತುಗಳ ಉತ್ಪಾದನೆ ಮತ್ತು ಹಿಂಸಾಚಾರದ ಮೂಲಕ ಅಧಿಕಾರ ಸ್ಥಾಪನೆಗೆ ಈ ಕೂಟವು ಕುಖ್ಯಾತಿ ಪಡೆದಿತ್ತು.
ಅಮೆರಿಕದ ಒತ್ತಡ ಹೆಚ್ಚಾಗಿದ್ದರಿಂದ ಮೆಕ್ಸಿಕೊ 2024ರಿಂದ ಮಾದಕ ವಸ್ತು ಕೂಟಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. 2024ರಲ್ಲಿ ಸೇನೆಯು ಈ ಕೂಟದ ಮೇಲೆ ದಾಳಿ ಮಾಡಿತು. ಅದರ ಮುಖ್ಯಸ್ಥ ಎಲ್ ಚಾಪೊ ಈಗ ಅಮೆರಿಕದ ಭಾರಿ ಭದ್ರತೆಯ ಜೈಲಿನಲ್ಲಿ ಜೀವಾವಧಿ ಕೈದಿಯಾಗಿದ್ದಾನೆ. ಅದರ ನಂತರ ಕೂಟವು ಎರಡು ಗುಂಪುಗಳಾಗಿ ಒಡೆದಿದ್ದು, ಅವನ ಮಕ್ಕಳು ಮತ್ತು ಆಪ್ತರ ನಡುವೆಯೇ ಕೂಟದ ಮುಖ್ಯಸ್ಥ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಅದರಿಂದಾಗಿ ಮೆಕ್ಸಿಕೊದ ವಾಯವ್ಯ ಪ್ರದೇಶದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಕೂಟದೊಳಗಿನ ವಿರೋಧಿಗಳ ತಲೆ ಕತ್ತರಿಸಿ ಸಾರ್ವಜನಿಕವಾಗಿ ನೇತು ಹಾಕುವುದು, ಹಿಂಸಾಚಾರ ಸೃಷ್ಟಿಸುವುದು ಅವುಗಳ ಕಾರ್ಯತಂತ್ರವಾಗಿ ಮಾರ್ಪಟ್ಟಿದೆ.
ಸಂಬಂಧ ಇರುವುದು ಕೂಟಗಳ ಜಾಣ ಆಡಳಿತ ವ್ಯವಸ್ಥೆಯಲ್ಲಿ. ಮಾಫಿಯಾ ಕೂಟಗಳು ಇತ್ತೀಚಿನ ದಶಕಗಳಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿವೆ. ಕೂಟದ ವಿವಿಧ ಹಂತಗಳ ಕೆಲಸವನ್ನು ಫ್ರಾಂಚೈಸಿಯಂತೆ ನಡೆಸುತ್ತಿವೆ.
ತಳಮಟ್ಟದಿಂದ ಮುಖ್ಯಸ್ಥನವರೆಗೆ ವಿವಿಧ ಹಂತಗಳ, ವಿವಿಧ ಗುಂಪುಗಳ, ವಿವಿಧ ಪ್ರದೇಶಗಳನ್ನು ಆಧರಿಸಿದ ಕಾರ್ಯನಿರ್ವಹಣೆಯ ಜಾಲಗಳನ್ನು ರೂಪಿಸಿಕೊಂಡಿವೆ. ಬೆನ್ನೆಲುಬಾಗಿ ಏಷ್ಯಾ, ಯುರೋಪ್ ರಾಷ್ಟ್ರಗಳವರೆಗೆ ಹರಡಿದ ಅವುಗಳ ಆರ್ಥಿಕ ಜಾಲವೂ ಇದೆ. ಕಂಪನಿಯೊಂದರಂತೆಯೇ ಕೂಟಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳದ್ದೇ ಖಾಸಗಿ ಸೈನ್ಯವನ್ನೂ ಹೊಂದಿವೆ.
ಇಂಥ ಕೂಟಗಳನ್ನು ನಿಷ್ಕ್ರಿಯಗೊಳಿಸುವುದು ತಾಳ್ಮೆ ಬೇಡುವ, ದೀರ್ಘಕಾಲದ ಚಟುವಟಿಕೆ ಆಗಿದೆ. ಅತ್ಯುತ್ತಮವಾದ ತನಿಖೆ, ಗುಪ್ತಚರ ವ್ಯವಸ್ಥೆ, ವಿವಿಧ ಹಂತಗಳ ಮತ್ತು ಸ್ಥಳೀಯ ಜನರನ್ನು ಒಳಗೊಂಡ ಕಾರ್ಯಾಚರಣೆಯಿಂದ ಅದು ಸಾಧ್ಯ ಎನ್ನುವ ವಿಶ್ಲೇಷಣೆ ನಡೆಯುತ್ತಿದೆ.
ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತದ ಒತ್ತಡದ ಕಾರಣಕ್ಕೆ ಮೆಕ್ಸಿಕೊದ ವಿಶೇಷ ಭದ್ರತಾ ಪಡೆಗಳು ಎಲ್.ಮೆಂಚೊನನ್ನು ಹೊಡೆದುರುಳಿಸಿವೆ. ಈ ಕಾರ್ಯಾಚರಣೆಗೆ ಅಮೆರಿಕದ ಸೇನೆ ನೇತೃತ್ವದ ಕಾರ್ಯಪಡೆಯೊಂದು ನೆರವನ್ನೂ ನೀಡಿದೆ.
ಮೆಂಚೊ ಅಮೆರಿಕಕ್ಕೆ ಅತಿ ಅಗತ್ಯವಾಗಿ ಬೇಕಾದ ಅಪರಾಧಿಯಾಗಿದ್ದ. ಆತನ ಬಗ್ಗೆ ಮಾಹಿತಿ ನೀಡಿದವರಿಗೆ 1.5 ಕೋಟಿ ಡಾಲರ್ ಬಹುಮಾನ ನೀಡುವುದಾಗಿ ಅದು ಘೋಷಿಸಿತ್ತು. ಈತನ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದ ಡ್ರಗ್ಸ್ ಕೂಟವು ಮೆಕ್ಸಿಕೊ ನೆಲದಿಂದ ಅಮೆರಿಕಕ್ಕೆ ಫೆಂಟಾನಿಲ್, ಕೊಕೇನ್, ಹೆರಾಯಿನ್ ಮತ್ತು ಮೆಥಾಂಫೆಟಮೈನ್.. ಮುಂತಾದ ಮಾದಕ ದ್ರವ್ಯಗಳನ್ನು ಸಾಗಿಸುತ್ತಿತ್ತು.
2017ರಿಂದೀಚೆಗೆ ಅಮೆರಿಕದ ಕೊಲಂಬಿಯಾದ ಜಿಲ್ಲಾ ನ್ಯಾಯಾಲಯ ಹಲವು ಪ್ರಕರಣಗಳಲ್ಲಿ ಮೆಂಚೊವನ್ನು ಅಪರಾಧಿ ಎಂದು ಘೋಷಿಸಿತ್ತು. ಇತ್ತೀಚಿಗೆ ಅಂದರೆ 2022ರ ಏಪ್ರಿಲ್ 5ರಂದು ಕಳ್ಳ ಮಾರ್ಗದಲ್ಲಿ ಅಮೆರಿಕಕ್ಕೆ ಡ್ರಗ್ಸ್ ಸಾಗಿಸಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಈತನನ್ನು ಬಂಧಿಸಬೇಕು. ಆತನ ಡ್ರಗ್ಸ್ ಕೂಟವನ್ನು ಮಟ್ಟಹಾಕಬೇಕು ಎಂದು ಅಮೆರಿಕ ಮೆಕ್ಸಿಕೊ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿತ್ತು.
ಟ್ರಂಪ್ ಅವರು ಅಧ್ಯಕ್ಷರಾದ ಮೇಲೆ ಅಮೆರಿಕದಲ್ಲಿ ಡ್ರಗ್ಸ್ ನಿಯಂತ್ರಣದ ಬಗ್ಗೆ ಮಾತನಾಡುತ್ತಲೇ ಬಂದಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡು ಮೆಕ್ಸಿಕೊ, ವೆನೆಜುವೆಲಾದ ಮೇಲೆ ಟೀಕಾ ಪ್ರಹಾರ ನಡೆಸುತ್ತಲೇ ಬಂದಿದ್ದರು. ವೆನೆಜುವೆಲಾದ ಅಧ್ಯಕ್ಷರಾಗಿದ್ದ ನಿಕೊಲಸ್ ಮಡೂರೊ ಅವರ ವಿರುದ್ಧದ ಕಾರ್ಯಾಚರಣೆಗೆ ಮಾದಕ ವಸ್ತುಗಳನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡುತ್ತಿದ್ದುದೂ ಒಂದು ಕಾರಣ ಎಂದು ಟ್ರಂಪ್ ಹೇಳಿಕೊಂಡಿದ್ದರು.
ಮೆಕ್ಸಿಕೊ ಕೂಡ ಅಮೆರಿಕಕ್ಕೆ ಮಾದಕ ದ್ರವ್ಯಗಳನ್ನು ಕಳ್ಳ ಮಾರ್ಗದ ಮೂಲಕ ಕಳುಹಿಸುತ್ತಿದೆ ಎಂದು ಆರೋಪಿಸುತ್ತಾ ಬಂದಿದ್ದ ಟ್ರಂಪ್, ಮಾದಕ ದ್ರವ್ಯ ಮಾಫಿಯಾದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೆಕ್ಸಿಕೊ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದರು.
ಮೆಕ್ಸಿಕೊ– ಅಮೆರಿಕ ಗಡಿಯ ಎರಡೂ ಭಾಗಗಳಲ್ಲಿ ಸಕ್ರಿಯವಾಗಿರುವ ಮಾದಕ ದ್ರವ್ಯಗಳನ್ನು ಕಳ್ಳ ಸಾಗಣೆ ಮಾಡುವ ಜಾಲದ ಕೂಟಗಳು ಮತ್ತು ಅವುಗಳ ಸದಸ್ಯರ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ವಿವಿಧ ಇಲಾಖೆಗಳನ್ನು ಒಟ್ಟು ಸೇರಿಸಿ ತಿಂಗಳ ಹಿಂದೆಯಷ್ಟೇ ಅಕ್ರಮ ಕೂಟಗಳ ನಿಗ್ರಹ ಜಂಟಿ ಇಲಾಖೆಗಳ ಕಾರ್ಯ ಪಡೆಯನ್ನು (ಜೆಐಟಿಎಫ್–ಸಿಸಿ) ಅಮೆರಿಕ ಸ್ಥಾಪಿಸಿತ್ತು. ರಕ್ಷಣೆ, ಗುಪ್ತಚರ, ಕಾನೂನು ಇಲಾಖೆಗಳನ್ನೊಳಗೊಂಡ ಈ ಕಾರ್ಯಪಡೆಯು ಡ್ರಗ್ಸ್ ಜಾಲದ ಬಗ್ಗೆ ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ.
ಎಲ್ ಮೆಂಚೊ ಮತ್ತು ಆತನ ಕೂಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಈ ಕಾರ್ಯಪಡೆಯು ಮೆಕ್ಸಿಕೊಗೆ ಮಾಹಿತಿಗಳನ್ನು ನೀಡಿತ್ತು. ಕಾರ್ಯಾಚರಣೆ ಹೇಗಿರಬೇಕು ಎಂಬುದನ್ನೂ ವಿವರಿಸಿತ್ತು ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಿಂಸಾಚಾರವು ಜೂನ್–ಜುಲೈನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ. ಈ ಬಾರಿಯ ಫಿಫಾ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯು ಜೂನ್ 11ರಿಂದ ಜುಲೈ19ರವರೆಗೆ ನಡೆಯಲಿದ್ದು, ಅಮೆರಿಕ, ಕೆನಡಾದೊಂದಿಗೆ ಮೆಕ್ಸಿಕೊ ಕೂಡ ಆತಿಥ್ಯ ವಹಿಸಿಕೊಂಡಿದೆ.
ಜಾಗತಿಕ ಮಟ್ಟದ ದೊಡ್ಡ ಕ್ರೀಡಾ ಹಬ್ಬಗಳಲ್ಲಿ ಫಿಫಾ ವಿಶ್ವಕಪ್ ಕೂಡ ಒಂದು. ಫುಟ್‌ಬಾಲ್ ಪ್ರಿಯರು ದೊಡ್ಡ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುತ್ತಾರೆ.
‘ಈಗ ನಡೆಯುತ್ತಿರುವ ಹಿಂಸಾಚಾರವು ಫುಟ್‌ಬಾಲ್ ವಿಶ್ವಕಪ್ ಮೇಲೆ ಪರಿಣಾಮ ಬೀರದು’ ಎಂದು ಮೆಕ್ಸಿಕೊ ಅಧ್ಯಕ್ಷೆ
ಕ್ಲೌಡಿಯಾ ಶೇನ್‌ಬಾಮ್ ಹೇಳಿದ್ದಾರೆ.
ಫಿಫಾದ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಕೂಡ, ‘ಹಿಂಸಾಚಾರದಿಂದಾಗಿ ಟೂರ್ನಿಗೆ ತೊಂದರೆಯಾಗದು’ ಎಂದಿದ್ದಾರೆ.
ಆಧಾರ: ರಾಯಿಟರ್ಸ್, ದಿ ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಎಪಿ, ಅಮೆರಿಕದ ವಿದೇಶಾಂಗ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.