ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸುವ ಕನಿಷ್ಠ ವಯೋಮಿತಿಯ ವಿಚಾರವು ರಾಜ್ಯದಲ್ಲಿ ಪೋಷಕರ ಕಳವಳಕ್ಕೆ ಕಾರಣವಾಗಿದೆ. 2025–26ನೇ ಸಾಲಿಗೆ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ 6 ವರ್ಷ ಪೂರೈಸಿರಬೇಕು ಎನ್ನುವ ರಾಜ್ಯ ಸರ್ಕಾರದ 2022ರ ಆದೇಶವನ್ನು ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪಾಲಿಸಲು ಮುಂದಾಗಿವೆ. ಇದರಿಂದ ರಾಜ್ಯದ ಲಕ್ಷಾಂತರ ಮಕ್ಕಳು ಯುಕೆಜಿ ಅನ್ನು ಮತ್ತೆ ಒಂದು ವರ್ಷ ಪುನರಾವರ್ತಿಸಬೇಕಾಗಿ ಬಂದಿದೆ. ಪೋಷಕರ ಆರ್ಥಿಕ ಹೊರೆ ಮತ್ತು ಮಕ್ಕಳ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಇತರೆ ಕೆಲ ರಾಜ್ಯಗಳಂತೆ, ಶಾಲಾ ಪ್ರವೇಶದ ವಯೋಮಿತಿಯಲ್ಲಿ ಈ ಬಾರಿ ವಿನಾಯಿತಿ ನೀಡುವಂತೆ ಪೋಷಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಪ್ರತಿ ವರ್ಷವೂ ಇಂಥದ್ದೇ ಸ್ಥಿತಿ ಉದ್ಭವಿಸುವುದರಿಂದ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ
ಮಕ್ಕಳನ್ನು ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ದಾಖಲಾತಿ ಮಾಡುವ ವಯಸ್ಸು ರಾಜ್ಯದಲ್ಲಿ ಹಲವು ಬಾರಿ ಬದಲಾವಣೆಗೆ ಒಳಗಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 20ರ ಅನ್ವಯ ಆಯಾ ಶೈಕ್ಷಣಿಕ ವರ್ಷದ ಜೂ.1ಕ್ಕೆ ಪೂರ್ವ ಪ್ರಾಥಮಿಕಕ್ಕೆ (ಎಲ್‌ಕೆಜಿ) ಮಕ್ಕಳನ್ನು ಸೇರಿಸಲು 3 ವರ್ಷ 10 ತಿಂಗಳು ಮತ್ತು ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರಿಸಲು 5 ವರ್ಷ 10 ತಿಂಗಳು ಪೂರೈಸಿರಬೇಕು ಎಂದು ವಯೋಮಿತಿ ನಿಗದಿಪಡಿಸಲಾಗಿತ್ತು.
ನಂತರ ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅನ್ವಯ 2018ರಲ್ಲಿ ನಿಯಮ ಬದಲಾಯಿಸಿ, ಒಂದನೇ ತರಗತಿಗೆ ಸೇರಲು ಮಗುವಿಗೆ ಕನಿಷ್ಠ 5 ವರ್ಷ 5 ತಿಂಗಳು (ಗರಿಷ್ಠ 7 ವರ್ಷ) ಆಗಿರಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು. 2020ರಲ್ಲಿ ಮತ್ತೊಂದು ಆದೇಶ ಹೊರಡಿಸಿ, ಎಲ್‌ಕೆಜಿಗೆ ಸೇರಲು ಮಗು 3 ವರ್ಷ 5 ತಿಂಗಳು, ಒಂದನೇ ತರಗತಿಗೆ ಸೇರಲು 5 ವರ್ಷ 5 ತಿಂಗಳು ಪೂರೈಸಿರಬೇಕು ಎಂದು ನಿಯಮ ರೂಪಿಸಿತು.
ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾದ ನಂತರ ರಾಜ್ಯ ಸರ್ಕಾರವು ಜು.2022ರಲ್ಲಿ ಮತ್ತೊಂದು ಆದೇಶ ಹೊರಡಿಸಿ, ಆಯಾ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಅನ್ವಯವಾಗುವಂತೆ ಒಂದನೇ ತರಗತಿಗೆ ಪ್ರವೇಶ ಪಡೆಯುವ (2023–24ನೇ ಸಾಲಿನ) ಮಕ್ಕಳು ಕಡ್ಡಾಯವಾಗಿ 6 ವರ್ಷ ಪೂರೈಸಿರಲೇಬೇಕು ಎಂದಿತು. ನಿಯಮದ ಬಗ್ಗೆ ಹಲವರು ಆಕ್ಷೇಪಣೆ ಎತ್ತಿದ್ದರಿಂದ ಅದರ ಜಾರಿಯನ್ನು ಸರ್ಕಾರ ಮುಂದೂಡಿತು. ನಿಯಮಕ್ಕೆ ತಿದ್ದುಪಡಿ ತಂದು, 2025–26ನೇ ಸಾಲಿನಿಂದ ಇದು ಜಾರಿಗೆ ಬರಲಿದೆ ಎಂದು ನ.2022ರಲ್ಲಿ ಪ್ರಕಟಿಸಿತು.
ನಿಯಮದ ಪ್ರಕಾರ, 2025 ಜೂನ್ 1ಕ್ಕೆ 6 ವರ್ಷ ತುಂಬಿರುವ ಮಕ್ಕಳಿಗೆ ಮಾತ್ರ ಒಂದನೇ ತರಗತಿಗೆ ಪ್ರವೇಶ ನೀಡುವುದಾಗಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಹೇಳುತ್ತಿವೆ. ಇದರಿಂದ ರಾಜ್ಯದಲ್ಲಿ 6 ವರ್ಷ ತುಂಬದ ಯುಕೆಜಿಯ ಮಕ್ಕಳು ಮತ್ತೆ ಒಂದು ವರ್ಷ ಯುಕೆಜಿ ಪುನರಾವರ್ತಿಸಬೇಕಾಗುತ್ತದೆ. ರಾಜ್ಯದಲ್ಲಿ ಇಂಥ ಸುಮಾರು ಐದು ಲಕ್ಷ ಮಕ್ಕಳು ಇದ್ದು, ಅವರ ಶೈಕ್ಷಣಿಕ ಜೀವನ ಸಂದಿಗ್ಧಕ್ಕೆ ಸಿಲುಕಿದೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಬಹುತೇಕ ಶಾಲೆಗಳು ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಿಕೊಳ್ಳುವಾಗ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ; ಈಗ ದಿಢೀರ್ ನಿಯಮ ಮುಂದಿಡುತ್ತಿವೆ ಎನ್ನುವುದು ಪೋಷಕರ ಆರೋಪ. ಇಂಥ ಮಕ್ಕಳ ಪಟ್ಟಿಯಲ್ಲಿ ಒಂದೆರಡು ದಿನದ ವ್ಯತ್ಯಾಸ ಇರುವವರು, ವಾರಗಳ, ತಿಂಗಳ ವ್ಯತ್ಯಾಸ ಇರುವವರೂ ಇದ್ದಾರೆ.
ಯುಕೆಜಿ ಪುನರಾವರ್ತನೆ ಮಾಡುವುದು ಎಂದರೆ, ಲಕ್ಷಾಂತರ ರೂಪಾಯಿ ಫೀಸು ಕಟ್ಟಬೇಕು. ಆರ್ಥಿಕ ಹೊರೆ ಒಂದೆಡೆ ಇದ್ದರೆ, ಇನ್ನೊಂದೆಡೆ, ಓದಿದ ತರಗತಿಯನ್ನೇ ಮತ್ತೊಂದು ವರ್ಷ ಓದಬೇಕಾಗಿರುವುದರಿಂದ ಮಕ್ಕಳು ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾರೆ. ಮಕ್ಕಳ ಮುಂದಿನ ವಿದ್ಯಾಭ್ಯಾಸ ಮತ್ತು ವೃತ್ತಿಜೀವನದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ಈಗ ಒಂದನೇ ತರಗತಿ ಸೇರುವ ವಿಚಾರದಲ್ಲಿ ತೊಂದರೆ ಎದುರಿಸುತ್ತಿರುವ ಮಕ್ಕಳಿಗೆ ವಿನಾಯಿತಿ ನೀಡಬೇಕು ಎನ್ನುವುದು ಪೋಷಕರ ವಾದ. ವಿಪಕ್ಷಗಳ ಕೆಲವು ಮುಖಂಡರು, ಮನಃಶಾಸ್ತ್ರಜ್ಞರು ಮತ್ತು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗವೂ ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಕ್ಕಳ ಹಿತ ಕಾಯುವಂತೆ ಒತ್ತಾಯಿಸಿವೆ. ಆದರೆ, ಪ್ರತಿ ವರ್ಷವೂ ಇಂಥದ್ದೇ ಪರಿಸ್ಥಿತಿ ಉದ್ಭವಿಸುವುದರಿಂದ ಯಾವ ನಿರ್ಧಾರ ತಳೆಯಬೇಕು ಎನ್ನುವ ಬಗ್ಗೆ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ.
ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸಲು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗವನ್ನು ನೇಮಿಸಿದೆ. ಒಂದನೇ ತರಗತಿಗೆ ಮಕ್ಕಳ ದಾಖಲಾತಿ ವಯಸ್ಸಿನ ವಿಚಾರವನ್ನೂ ರಾಜ್ಯ ಸರ್ಕಾರವು ಆಯೋಗಕ್ಕೆ ವಹಿಸಿದೆ. ಅದು ನೀಡುವ ಸಲಹೆ–ಸೂಚನೆ ಆಧರಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ತಿಳಿಸಿದ್ದಾರೆ. 2025–26ರ ಶಾಲಾ ಪ್ರವೇಶಗಳು ಈಗಾಗಲೇ ಆರಂಭವಾಗಿರುವುದರಿಂದ ಸರ್ಕಾರ ತಡಮಾಡದೇ ಶೀಘ್ರವಾಗಿ ತನ್ನ ನಿಲುವು ಪ್ರಕಟಿಸಬೇಕು ಎನ್ನುವುದು ಪೋಷಕರ ಒತ್ತಾಯ.
ಕೆಲವು ರಾಜ್ಯಗಳಲ್ಲಿ ವಿನಾಯಿತಿ
ಒಂದನೇ ತರಗತಿಗೆ ಮಕ್ಕಳ ದಾಖಲಾತಿ ವಯೋಮಿತಿಯು ಆರು ವರ್ಷ ಆಗಿರಬೇಕು ಎನ್ನುವ ನಿಯಮವನ್ನು ಅಳವಡಿಸಿಕೊಳ್ಳುವಂತೆ ಎನ್‌ಇಪಿ ಜಾರಿಯಾದ ನಂತರ ಕೇಂದ್ರ ಸರ್ಕಾರವು ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೂ ಪ್ರತಿವರ್ಷ ಜ್ಞಾಪನಾ ಪತ್ರಗಳನ್ನು ಬರೆಯುತ್ತಲೇ ಇದೆ. ಆರ್‌ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ಕೂಡ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗು ಆರು ವರ್ಷ ಪೂರೈಸಿರಬೇಕು ಎಂದು ಹೇಳುತ್ತದೆ. ಆದರೂ ದೇಶದ ವಿವಿಧ ರಾಜ್ಯಗಳಲ್ಲಿ ಒಂದನೇ ತರಗತಿಗೆ ಸೇರಲು ನಿಗದಿಪಡಿಸಲಾಗಿರುವ ಮಕ್ಕಳ ವಯಸ್ಸಿನಲ್ಲಿ ವ್ಯತ್ಯಾಸಗಳಿವೆ.
ಎನ್‌ಇಪಿ ಅಳವಡಿಸಿಕೊಂಡಿರುವ ಕೆಲವು ರಾಜ್ಯಗಳಲ್ಲಿಯೂ 2025–26ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳ ವಯಸ್ಸಿನಲ್ಲಿ ವಿನಾಯಿತಿ ನೀಡಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಾ.31ಕ್ಕೆ ಅನ್ವಯವಾಗುವಂತೆ ಆರು ವರ್ಷ ಪೂರೈಸಿರಬೇಕು ಎಂದು ನಿಯಮ ಮಾಡಲಾಗಿದೆ. ಆದರೆ, ಈ ನಿಯಮದಿಂದ 2024–25, 2025–26, 2026–27ರಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಮಕ್ಕಳ ವಯಸ್ಸಿನ ಕಟ್ ಆಫ್ ದಿನಾಂಕವನ್ನು ಜು.1ಕ್ಕೆ ನಿಗದಿಪಡಿಸಲಾಗಿದೆ. ಇದೇ ರೀತಿ ಹರಿಯಾಣದಲ್ಲಿ ಸೆ.1, ಒಡಿಶಾದಲ್ಲಿ ಅ.1, ಜಮ್ಮು–ಕಾಶ್ಮೀರದಲ್ಲಿ ಸೆ.30 ಕಟ್ ಆಫ್ ದಿನಾಂಕವಾಗಿದೆ. ಕೇರಳದಲ್ಲಿ ಒಂದನೇ ತರಗತಿಗೆ ಸೇರುವ ಮಕ್ಕಳ ವಯಸ್ಸನ್ನು 5 ವರ್ಷದಿಂದ 6 ವರ್ಷಕ್ಕೆ ಹೆಚ್ಚಿಸಲಾಗಿದೆ.
ಆರು ವರ್ಷ ಏಕೆ?
ಮಗುವಿನ ಮಿದುಳು ಬೆಳವಣಿಗೆ ಹೊಂದಲು ಮತ್ತು ಅದು ಗಂಟೆಗಟ್ಟಲೇ ತರಗತಿಯಲ್ಲಿ ಕುಳಿತು ಪಾಠ ಕೇಳಲು, ವಿಷಯ ಗ್ರಹಿಸಲು ಅದಕ್ಕೆ ಕನಿಷ್ಠ ಆರು ವರ್ಷವಾದರೂ ಬೇಕಾಗುತ್ತದೆ. ಕೆಲವು ಮಕ್ಕಳು ಅದಕ್ಕೂ ಮುನ್ನವೇ ಉತ್ತಮ ಬೆಳವಣಿಗೆ ಕಾಣಬಹುದು, ಕೆಲವರು ಆರು ವರ್ಷದ ನಂತರವೂ ಸಮರ್ಪಕ ಬೆಳವಣಿಗೆ ಕಾಣದೇ ಇರಬಹುದು. ಅಂಥ ಮಕ್ಕಳಿಗೆ ವಿಶೇಷ ರೀತಿಯ ಬೋಧನೆ, ಕಲಿಕಾ ಕ್ರಮಗಳ ಅಗತ್ಯ ಇರುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ಯುನಿಸೆಫ್ 3ರಿಂದ 6 ವರ್ಷದವರೆಗಿನ ಶಿಕ್ಷಣವನ್ನು ಬುನಾದಿ ಶಿಕ್ಷಣ ಎಂದೂ, 6ರಿಂದ 11ದ ವರ್ಷದವರೆಗಿನ ಶಿಕ್ಷಣವನ್ನು ಪ್ರಾಥಮಿಕ ಶಿಕ್ಷಣ ಎಂದೂ ವರ್ಗೀಕರಿಸಿದೆ. ಒಂದನೇ ತರಗತಿಗೆ ಪ್ರವೇಶ ಪಡೆಯಲು ಹೆಚ್ಚಿನ ದೇಶಗಳಲ್ಲಿ 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸು, ಕೆಲವು ದೇಶಗಳಲ್ಲಿ 5 ವರ್ಷ, ಇನ್ನೂ ಕೆಲವು ದೇಶಗಲ್ಲಿ 4 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸನ್ನೂ ನಿಗದಿಪಡಿಸಲಾಗಿದೆ.
ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಎನ್‌ಇಪಿ ಭಾಗವಾಗಿ ಶಾಲಾ ಪ್ರವೇಶದ ವಯೋಮಿತಿಯನ್ನು ಆರು ವರ್ಷಕ್ಕೆ ನಿಗದಿ ಮಾಡಿತ್ತು. ವಯೋಮಿತಿ ಸಡಿಲಿಸುವಂತೆ ಹಲವು ಪೋಷಕರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಎನ್‌ಇಪಿ ರದ್ದು ಮಾಡಲು ಕ್ರಮ ಕೈಗೊಂಡಿದೆ. ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರೂಪಿಸಲು ಆಯೋಗ ರಚಿಸಿದೆ. ಪೋಷಕರ ವಿನಂತಿಯನ್ನು ಆಯೋಗದ ಗಮನಕ್ಕೂ ತರಲಾಗಿದೆ. ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸಿನ ಆಧಾರದಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು.–ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.