ADVERTISEMENT

ಆಳ–ಅಗಲ | ಶೇಖ್ ಹಸೀನಾ ಹಸ್ತಾಂತರ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 0:59 IST
Last Updated 19 ನವೆಂಬರ್ 2025, 0:59 IST
   

ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ‘ಸಾಮೂಹಿಕ ಮಾರಣಹೋಮದ  ಅಪರಾಧ’ಕ್ಕಾಗಿ ಮರಣದಂಡನೆ ವಿಧಿಸಿದೆ. ಐಸಿಟಿಯು ಹಸೀನಾ ಅವರ ಬಂಧನಕ್ಕೆ ವಾರಂಟ್ ಅನ್ನೂ ಹೊರಡಿಸಿದೆ. ಭಾರತ–ಬಾಂಗ್ಲಾದೇಶ ಹಸ್ತಾಂತರ ಒಪ್ಪಂದ–2013ರ ಅನ್ವಯ ಮರಣದಂಡನೆಗೆ ಗುರಿಯಾಗಿರುವ ಹಸೀನಾ ಅವರನ್ನು ತಮಗೆ ಒಪ್ಪಿಸಬೇಕು ಎಂದು ಅಲ್ಲಿನ ಮಧ್ಯಂತರ ಸರ್ಕಾರ ಬೇಡಿಕೆ ಇಟ್ಟಿದೆ. ಆದರೆ, ಹಸೀನಾ ಅವರನ್ನು ಹಸ್ತಾಂತರ ಮಾಡಬೇಕೇ ಬೇಡವೇ ಎನ್ನುವುದು ಒಪ್ಪಂದದಲ್ಲಿರುವ ಜಟಿಲವಾದ ನಿಯಮಗಳು, ಅಪವಾದಗಳು ಮತ್ತು ಭಾರತದ ದೇಶೀಯ ಕಾನೂನನ್ನು ಅವಲಂಬಿಸಿದೆ. ಅಂತರರಾಷ್ಟ್ರೀಯ ವಲಯದಲ್ಲಿ ಐಸಿಟಿ ತೀರ್ಪಿಗೆ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಶೇಖ್ ಹಸೀನಾ ಮತ್ತು ‌ಅವರ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಅಸಾದುಝ್ಝುಮಾನ್ ಖಾನ್ ಕಮಾಲ್ ಬಾಂಗ್ಲಾದೇಶದಲ್ಲಿ ಕಳೆದ ವರ್ಷದ ಆಗಸ್ಟ್‌ 5ರಂದು ಸರ್ಕಾರ ಪತನವಾದ ನಂತರ ದೇಶ ತೊರೆದಿದ್ದರು. ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಕಮಾಲ್ ಅವರೂ ಭಾರತದಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರನ್ನೂ ದೇಶಭ್ರಷ್ಟರು ಎಂದು  ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು (ಐಸಿಟಿ) ಘೋಷಿಸಿತ್ತು. ಇದೀಗ, ‘ಸಾಮೂಹಿಕ ಮಾರಣಹೋಮದ ಅಪರಾಧ’ಕ್ಕಾಗಿ ಹಸೀನಾ ಮತ್ತು ಖಾನ್ ಕಮಾಲ್ ಅವರಿಗೆ ಐಸಿಟಿ ಮರಣದಂಡನೆ ವಿಧಿಸಿದೆ. ಇಬ್ಬರನ್ನೂ ತನಗೆ ಹಸ್ತಾಂತರಿಸಬೇಕು ಎಂದು ಬಾಂಗ್ಲಾ ಆಡಳಿತ ಒತ್ತಡ ಹಾಕಲು ಆರಂಭಿಸಿದೆ. 

‘ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅನ್ವಯ ಭಾರತವು ಹಸೀನಾ ಮತ್ತು ಕಮಾಲ್ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು. ‌ಸಾಮೂಹಿಕ ಮಾರಣಹೋಮದ  ಅಪರಾಧ ಎಸಗಿದವರಿಗೆ ಆಶ್ರಯ ಕಲ್ಪಿಸುವುದನ್ನು ಸ್ನೇಹಪರವಲ್ಲದ ಮತ್ತು ನ್ಯಾಯಕ್ಕೆ ವಿರುದ್ಧವಾದ ಕ್ರಿಯೆ ಎಂದು ಪರಿಗಣಿಸಲಾಗುವುದು’ ಎಂದು ಬಾಂಗ್ಲಾದೇಶದ ವಿದೇಶಾಂಗ ಇಲಾಖೆ ತಿಳಿಸಿದೆ.

ADVERTISEMENT

ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದಕ್ಕೆ ಅಂತರರಾಷ್ಟ್ರೀಯ ಮಟ್ಟದ ಮಾನವ ಹಕ್ಕು ಸಂಘಟನೆಗಳು ಮತ್ತು ಚಿಂತಕರ ಚಾವಡಿಗಳಿಂದ ವಿರೋಧ ವ್ಯಕ್ತವಾಗಿದೆ. ತೀರ್ಪು ನ್ಯಾಯಯುತವಾಗಿ ಇಲ್ಲ, ನಿಷ್ಪಕ್ಷಪಾತವಾಗಿಯೂ ಇಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ. ನ್ಯೂಯಾರ್ಕ್‌ನ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯು), ಶಿಕ್ಷೆಯು ಅಂತರರಾಷ್ಟ್ರೀಯ ನ್ಯಾಯ ವಿಚಾರಣಾ ಮಾನದಂಡಗಳಿಗೆ ತಕ್ಕಂತೆ ಇಲ್ಲ ಎಂದಿದೆ. ಅತ್ಯಂತ ಸಂಕೀರ್ಣವಾಗಿದ್ದ ಪ್ರಕರಣಗಳಲ್ಲಿ ಹಸೀನಾ ಅವರಿಗೆ ತಮ್ಮ ಪರ ವಾದ ಮಂಡಿಸಲು ಸಾಕಷ್ಟು ಅವಕಾಶ ನೀಡದೇ, ಅತ್ಯಂತ ವೇಗವಾಗಿ ವಿಚಾರಣೆ ಪೂರೈಸಿ ತೀರ್ಪು ಪ್ರಕಟಿಸಲಾಗಿದೆ ಎನ್ನುವುದು  ಎಚ್‌ಆರ್‌ಡಬ್ಲ್ಯು ಅಭಿಪ್ರಾಯ. 

ಐಸಿಟಿ ಮೂಲಕ ರಾಜಕೀಯ ವಿರೋಧಿಗಳನ್ನು ಗುರಿ ಮಾಡಿಕೊಂಡು ಪ್ರಕರಣಗಳನ್ನು ವಿಚಾರಣೆ ನಡೆಸುವುದು, ಮನಸೋಇಚ್ಛೆ ಬಂಧಿಸುವುದು, ಶಿಕ್ಷಿಸುವುದು, ಮರಣದಂಡನೆ ಜಾರಿ ಮಾಡುವುದಕ್ಕೆ ಬಾಂಗ್ಲಾದೇಶದಲ್ಲಿ ದೀರ್ಘ ಇತಿಹಾಸವೇ ಇದೆ. ಹಸೀನಾ ಅವಧಿಯಲ್ಲೂ ಅದು ನಡೆದಿತ್ತು. ಈಗ ಮೊಹಮದ್ ಯೂನುಸ್ ಅವರ ಮಧ್ಯಂತರ ಸರ್ಕಾರದಲ್ಲೂ ಅದೇ ಮುಂದುವರಿಯುತ್ತಿದೆ ಎಂದು ಅದು ವಿಶ್ಲೇಷಿಸಿದೆ.

ಆರೋಪಿಯ ಅನುಪಸ್ಥಿತಿಯಲ್ಲಿ ನಡೆಯುವ ವಿಚಾರಣೆಗಳು ವಿವಾದಾಸ್ಪದವಾಗಿರುತ್ತವೆ ಎನ್ನುವುದು ಇಂಟರ್‌ನ್ಯಾಷನಲ್ ಕ್ರೈಸಿಸ್ ಗ್ರೂಪ್ (ಐಸಿಜಿ) ಅಭಿಪ್ರಾಯ. ಹಸೀನಾ ಅವರ ಪ್ರಕರಣದಲ್ಲಿ ಅತ್ಯಂತ ವೇಗವಾಗಿ ವಿಚಾರಣೆ ಪೂರೈಸಿರುವುದು ಮತ್ತು ತನ್ನ ವಾದ ಮಂಡನೆ ಮಾಡಲು ಪ್ರತಿವಾದಿಗೆ ಸೂಕ್ತ ಅವಕಾಶ ಮತ್ತು ಸೌಲಭ್ಯಗಳನ್ನು ಕಲ್ಪಿಸದೇ ಇರುವುದು ನ್ಯಾಯಸಮ್ಮತತೆಯ ಪ್ರಶ್ನೆ ಹುಟ್ಟುಹಾಕಿದೆ ಎಂದು ಐಸಿಜಿ ಹೇಳಿದೆ.

ಭಾರತದ ರಾಜತಾಂತ್ರಿಕ ತಜ್ಞರೂ ಹಸೀನಾ ಅವರಿಗೆ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ‘ಇದು ಕಾಂಗರೂ ಕೋರ್ಟ್ ಅಲ್ಲದೇ ಬೇರೇನಲ್ಲ’ ಎಂದು ಬಾಂಗ್ಲಾದೇಶದಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ವೀಣಾ ಸಿಕ್ರಿ ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ಅಪರಾಧಿಗಳ ವಿಚಾರಣೆಗಾಗಿ ಸ್ಥಾಪಿಸಿರುವ ಐಸಿಟಿಯು ಹಸೀನಾ ಅವರ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದೇ ಅಕ್ರಮವಾಗಿದೆ. ಮತ್ತೊಬ್ಬ ರಾಜತಾಂತ್ರಿಕ ಅಧಿಕಾರಿ ರಾಜೀವ್ ಡೊಗ್ರಾ, ‘ಹಸೀನಾ ಉತ್ತಮ ನಾಯಕಿಯಾಗಿದ್ದು, ಅವರಿಗೆ ಭಾರತವು ಆಶ್ರಯ ನೀಡಿ ಉತ್ತಮ ಕೆಲಸ ಮಾಡಿದೆ’ ಎಂದಿದ್ದಾರೆ. 

‘ಶೇಖ್ ಹಸೀನಾ ಅವರಿಗೆ ಐಸಿಟಿಯು ಶಿಕ್ಷೆ ವಿಧಿಸಿರುವುದು ಸಂತ್ರಸ್ತರ ದೃಷ್ಟಿಯಿಂದ ಮಹತ್ವದ ಗಳಿಗೆಯಾಗಿದೆ. ಆದರೆ, ಅವರಿಗೆ ಮರಣದಂಡನೆ ವಿಧಿಸಿರುವುದರ ಬಗ್ಗೆ ಪಶ್ಚಾತ್ತಾಪವಿದೆ’ ಎಂದು ವಿಶ್ವಸಂಸ್ಥೆ ಪ್ರತಿಕ್ರಿಯಿಸಿದೆ. 

ಇಬ್ಬರನ್ನೂ ಹಸ್ತಾಂತರಿಸಬೇಕು ಎಂಬ ಬಾಂಗ್ಲಾದೇಶದ ಮನವಿಗೆ ಭಾರತವು ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದೆ. ಬಾಂಗ್ಲಾದೇಶದ ಶಾಂತಿ, ಪ್ರಜಾಪ್ರಭುತ್ವ, ಸ್ಥಿರತೆಗೆ ಭಾರತ ಬದ್ಧವಾಗಿದ್ದು, ಜನರ ಹಿತದೃಷ್ಟಿಯಿಂದ ರಚನಾತ್ಮಕ ಪಾತ್ರ ನಿರ್ವಹಿಸುತ್ತದೆ ಎಂದಿದೆ. ಭಾರತವು ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವುದು ಬಹುತೇಕ ಅಸಂಭವ ಎನ್ನಲಾಗುತ್ತಿದೆ. ಹಸೀನಾ ಅವರನ್ನು ಹಸ್ತಾಂತರಿಸದಿರಲು ದೇಶೀಯ ಕಾನೂನು ಮತ್ತು ದ್ವಿಪಕ್ಷೀಯ ಒಪ್ಪಂದ ಎರಡರ ಪ್ರಕಾರವೂ ಭಾರತಕ್ಕೆ ಸಾಕಷ್ಟು ಕಾರಣಗಳಿವೆ. 

ವಿಶ್ವಸಂಸ್ಥೆ ಮಧ್ಯಪ್ರವೇಶಿಸಬಹುದೇ?

ಹಸ್ತಾಂತರ ಒಪ್ಪಂದವು ಎರಡು ರಾಷ್ಟ್ರಗಳಿಗೆ ಸಂಬಂಧಿಸಿದ್ದಾಗಿರುವುದರಿಂದ ಈ ಪ್ರಕರಣದಲ್ಲಿ ವಿಶ್ವಸಂಸ್ಥೆಗೆ ಮಧ್ಯಪ್ರವೇಶಿಸಲು ಅವಕಾಶ ಇಲ್ಲ. ಆದರೆ, ಎರಡೂ ರಾಷ್ಟ್ರಗಳು ಒಪ್ಪಿದರೆ ಅಂತರರಾಷ್ಟ್ರೀಯ ನ್ಯಾಯಾಲವು ಈ ಪ್ರಕರಣದ ವಿಚಾರಣೆ ನಡೆಸಬಹುದು. 

ಹಸ್ತಾಂತರ ಒಪ್ಪಂದ ಏನು ಹೇಳುತ್ತದೆ?

ಅಪರಾಧ ಕೃತ್ಯಗಳಲ್ಲಿ ತೊಡಗಿರುವವರನ್ನು ಪರಸ್ಪರ ಹಸ್ತಾಂತರ ಮಾಡಿಕೊಳ್ಳುವ ಕುರಿತಾಗಿ ಭಾರತ ಮತ್ತು ಬಾಂಗ್ಲಾದೇಶವು 2013ರಲ್ಲಿ ಒಪ್ಪಂದ ಮಾಡಿಕೊಂಡಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬಾಂಗ್ಲಾದ ಗೃಹ ಸಚಿವಾಲಯದ ನಡುವೆ ಈ ಕರಾರು ನಡೆದಿದೆ. 

ಒಪ್ಪಂದಕ್ಕೆ ಬದ್ಧವಾಗಿ ಭಾರತವು ಹಸೀನಾ ಅವರನ್ನು ಬಾಂಗ್ಲಾದ ಮಧ್ಯಂತರ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಾಗುತ್ತದೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಆದರೆ, ಭಾರತವು ಹಸ್ತಾಂತರ ಮಾಡಲೇಬೇಕು ಎಂದೇನಿಲ್ಲ. ಅದನ್ನು ನಿರಾಕರಿಸಲು ಭಾರತಕ್ಕೆ ಹಲವು ಕಾರಣಗಳಿವೆ. ಕಾನೂನಿನ ಅಡಿಯಲ್ಲೇ ಹಸ್ತಾಂತರದ ಪ್ರಕ್ರಿಯೆಯು ನಡೆಯಬೇಕಾಗುತ್ತದೆ. ಹಾಗಾಗಿ, ತ್ವರಿತವಾಗಿ ಈ ಪ್ರಕ್ರಿಯೆ ನಡೆಯದು ಎಂದು ಮಾಜಿ ರಾಜತಾಂತ್ರಿಕ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

  • ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ 1 ಮತ್ತು 2ನೇ ಕಲಂಗಳು ಯಾರನ್ನು ಹಸ್ತಾಂತರ ಮಾಡಬಹುದು, ಯಾವ ಸಂದರ್ಭದಲ್ಲಿ ಮಾಡಬಹುದು ಎಂದು ವಿವರಿಸುತ್ತವೆ. ‌ಅಪರಾಧ ಕೃತ್ಯ ಎಸಗಿದವರನ್ನು ಹಸ್ತಾಂತರಿಸಬೇಕಾದರೆ, ಅವರು ಮಾಡಿರುವ ಅಪರಾಧಗಳು ಎರಡೂ ದೇಶಗಳ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹವಾಗಿರಬೇಕು 

  • ಬಾಂಗ್ಲಾದೇಶವು ಶೇಖ್‌ ಹಸೀನಾ ಅವರು ‘ಸಾಮೂಹಿಕ ಮಾರಣಹೋಮದ ಅಪರಾಧ’ ಎಸಗಿದ್ದಾರೆ ಎಂದು ಆರೋಪಿಸಿದೆ. ಅಲ್ಲಿನ ಯುದ್ಧ ಅಪರಾಧಗಳ ಚೌಕಟ್ಟಿನ ಅಡಿಯಲ್ಲಿ ಈ ಆರೋಪ ಮಾಡಲಾಗಿದೆ. ಆದರೆ, ಭಾರತದಲ್ಲಿ ಈ ಆರೋಪಗಳನ್ನು ಭಿನ್ನವಾಗಿ ವ್ಯಾಖ್ಯಾನಿಸಲಾಗುತ್ತದೆ. ಅಂತರರಾಷ್ಟ್ರೀಯ ನ್ಯಾಯಮಂಡಳಿಗಳ ವಿಚಾರದಲ್ಲಿ ಇದನ್ನು ಪರಿಗಣಿಸಲಾಗುತ್ತಿದೆಯೇ ವಿನಾ, ದೇಶೀಯ ರಾಜಕಾರಣದ ಘಟನೆಗಳಿಗೆ ಸಂಬಂಧಿಸಿದಂತೆ ಈ ಆರೋಪಕ್ಕೆ ಪ್ರಾಮುಖ್ಯ ನೀಡುವುದಿಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯ. ಹಾಗಾಗಿ, ಹಸೀನಾ ವಿರುದ್ಧ ಹೊರಿಸಿರುವ ದೋಷಾರೋಪವು ಭಾರತದ ಕಾನೂನು ವ್ಯವಸ್ಥೆಗೆ ಹೊಂದುವಂತಿಲ್ಲ ಎಂಬುದು ಅವರ ವಾದ

  • ಒಪ್ಪಂದದ ಆರನೇ ಕಲಂ, ರಾಜಕೀಯ ಅಪರಾಧಗಳ ವಿನಾಯಿತಿ ಕುರಿತಂತೆ ಇದೆ. ಅದರ 1ನೇ ಸೆಕ್ಷನ್‌ ಪ್ರಕಾರ, ಅಪರಾಧವು ರಾಜಕೀಯ ಸ್ವರೂಪದ್ದಾಗಿದ್ದರೆ, ಅಪರಾಧ ನಡೆಸಿದ ವ್ಯಕ್ತಿಯ ಹಸ್ತಾಂತರವನ್ನು ನಿರಾಕರಿಸಬಹುದು

  • ಒಪ್ಪಂದದ 8ನೇ ಕಲಂ ಯಾವ ಆಧಾರದಲ್ಲಿ ಹಸ್ತಾಂತರವನ್ನು ನಿರಾಕರಿಸಬಹುದು ಎಂಬುದನ್ನು ವಿವರಿಸುತ್ತದೆ . ಅದರ 3ನೇ ಉಪನಿಯಮದ ಪ್ರಕಾರ, ಒಂದು ವೇಳೆ, ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಮಾಡಲಾದ ಆರೋಪದ ಹಿಂದೆ ಪ್ರಾಮಾಣಿಕ ಮತ್ತು ನ್ಯಾಯಸಮ್ಮತ ಉದ್ದೇಶ ಇಲ್ಲದಿದ್ದರೆ ಅಂತಹ ಸಂದರ್ಭದಲ್ಲಿ ವ್ಯಕ್ತಿಯನ್ನು ಹಸ್ತಾಂತರಿಸದೇ ಇರಬಹುದು

  • ಬಾಂಗ್ಲಾದೇಶದಲ್ಲಿ ಹಸೀನಾ ಅವರ ವಿರುದ್ಧ ನಡೆದ ದಂಗೆ, ಅವರ ಪದಚ್ಯುತಿ ನಂತರ ಅವರ ಮೇಲೆ ಹೊರಿಸಲಾಗಿರುವ ಆರೋಪಗಳೆಲ್ಲ ರಾಜಕೀಯ ದ್ವೇಷದಿಂದ ಮಾಡಿರುವಂತಹದ್ದು ಎಂಬ ಮಾತು ಕೇಳಿಬರುತ್ತಲೇ ಇವೆ. ಈಗ ನಡೆದಿರುವ ವಿಚಾರಣೆಯೂ ನ್ಯಾಯಸಮ್ಮತವಾಗಿ ನಡೆದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ, ಇದರ ಆಧಾರದಲ್ಲೂ ಹಸ್ತಾಂತರ ಮಾಡುವುದಿಲ್ಲ ಎಂದು ಭಾರತ ವಾದಿಸಬಹುದು ಎಂಬುದು ಮಾಜಿ ರಾಜತಾಂತ್ರಿಕರ ಅಭಿಪ್ರಾಯ

ಹಸ್ತಾಂತರ ಕಾಯ್ದೆ ಹೇಳುವುದೇನು?

ಹೊರದೇಶಗಳಲ್ಲಿ ಅಪರಾಧ ಎಸಗಿ ಅಲ್ಲಿಂದ ಪರಾರಿಯಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಗಳನ್ನು ಅವರ ದೇಶಕ್ಕೆ ಹಸ್ತಾಂತರ ಮಾಡುವ ಸಂಬಂಧ ಭಾರತವು 1962ರಲ್ಲಿ ಹಸ್ತಾಂತರ ಕಾಯ್ದೆಯನ್ನು ಜಾರಿಗೆ ತಂದಿದೆ. 

  • ಕಾಯ್ದೆಯ 31(1) ಸೆಕ್ಷನ್‌ ಪ್ರಕಾರ, ಒಂದು ವೇಳೆ ಅಪರಾಧವು ರಾಜಕೀಯ ಸ್ವರೂಪದ್ದಾಗಿದ್ದರೆ ವಿದೇಶದಿಂದ ಪರಾರಿಯಾಗಿ ಬಂದಿರುವ ಅಪರಾಧಿಯನ್ನು ಹಸ್ತಾಂತರಿಸಬೇಕಿಲ್ಲ ಅಥವಾ ಆತ ಶರಣಾಗುವಂತೆ ಮಾಡಬೇಕಾಗಿಲ್ಲ

  • ಕಾಯ್ದೆಯ 29ನೇ ಸೆಕ್ಷನ್‌ ಪ್ರಕಾರ, ಅಪರಾಧಿಯನ್ನು ಹಸ್ತಾಂತರಿಸುವಂತೆ ಅಥವಾ ಮರಳಿಸುವಂತೆ ಹೊರದೇಶವು ಮಾಡಿರುವ ಮನವಿಯು ಪ್ರಾಮಾಣಿಕವಾಗಿ ಇಲ್ಲದಿದ್ದರೆ ಅಥವಾ ನ್ಯಾಯದ ಹಿತಾಸಕ್ತಿಯಿಂದ ಕೂಡಿರದಿದ್ದರೆ ಅಥವಾ ರಾಜಕೀಯ ಕಾರಣಗಳಿಗೆ ಆಗಿದ್ದರೆ ಕೇಂದ್ರ ಸರ್ಕಾರವು ಆ ಮನವಿಯನ್ನು ತಿರಸ್ಕರಿಸಬಹುದು

ಐಸಿಟಿ ಸ್ಥಾಪಿಸಿದ್ದೇ ಹಸೀನಾ

ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯನ್ನು (ಐಸಿಟಿ) ಸ್ಥಾಪಿಸಿದ್ದೂ ಅವರೇ. 1971ರ ಬಾಂಗ್ಲಾ ವಿಮೋಚನಾ ಹೋರಾಟದ ಸಂದರ್ಭದಲ್ಲಿ ಸುಮಾರು 30 ಲಕ್ಷ ಮಂದಿ ಸಾವಿಗೀಡಾಗಿದ್ದರು. ಆ ಸಂದರ್ಭದಲ್ಲಿ ನಡೆದ ಜನಾಂಗೀಯ ಹತ್ಯೆ, ಕೊಲೆ, ಅತ್ಯಾಚಾರ ಇತ್ಯಾದಿಗಳನ್ನು ವಿಚಾರಣೆ ಮಾಡಲು ಹಸೀನಾ ಅವರು 2010ರಲ್ಲಿ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯನ್ನು ಸ್ಥಾಪಿಸಿದ್ದರು. ಅದು ದೇಶೀಯ ನ್ಯಾಯಾಲಯವಾಗಿದೆ. ಹಸೀನಾ ಅವರ ಅವಧಿಯಲ್ಲಿ ಐಸಿಟಿಯು ಜಮಾತ್–ಎ–ಇಸ್ಲಾಮಿ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಪಾಕಿಸ್ತಾನದ ಸೇನೆಯ ಜತೆಗೆ ಒಡನಾಟ ಹೊಂದಿದ್ದವರನ್ನು ಶಿಕ್ಷೆಗೆ ಗುರಿ ಮಾಡಿತ್ತು.

2024ರಲ್ಲಿ ಹಸೀನಾ ಪದಚ್ಯುತಿಯ ನಂತರ ನವೆಂಬರ್‌ನಲ್ಲಿ ಐಸಿಟಿ ಕಾಯ್ದೆಗೆ ತಿದ್ದುಪಡಿ ತಂದು, ಅದರ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. 2025ರಲ್ಲಿ ಮತ್ತಷ್ಟು ತಿದ್ದುಪಡಿಗಳನ್ನು ತಂದು, ರಾಜಕೀಯ ಸಂಘಟನೆಗಳನ್ನೂ ಅದರ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಅವುಗಳನ್ನು ರದ್ದುಪಡಿಸುವ ಅಧಿಕಾರವನ್ನೂ ಐಸಿಟಿಗೆ ನೀಡಲಾಯಿತು. ಹಸೀನಾ ಅವರ ವಿರುದ್ಧದ ಐದು ಪ್ರಕರಣಗಳಲ್ಲಿ ತೀರ್ಪು ಹೊರಬಿದ್ದಿದ್ದು, ಇನ್ನೂ ಮೂರು ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ತೀರ್ಪು ಪ್ರಕಟವಾದ 30 ದಿನಗಳ ಒಳಗೆ ಹಸೀನಾ ನ್ಯಾಯಮಂಡಳಿಗೆ ಶರಣಾಗಬೇಕು ಇಲ್ಲವೇ ಅವರ ಬಂಧನವಾಗಬೇಕು. ಇಲ್ಲದಿದ್ದರೆ, ಅವರಿಗೆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಇರುವುದಿಲ್ಲ. 

ಆಧಾರ: ಭಾರತ –ಬಾಂಗ್ಲಾದೇಶ ಹಸ್ತಾಂತರ ಒಪ್ಪಂದ, ಹಸ್ತಾಂತರ ಕಾಯ್ದೆ–1962, ಪಿಟಿಐ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.