ದಲೈ ಲಾಮಾ (1940ರ ಫೆ.2ರಂದು ಟಿಬೆಟ್‌ನಲ್ಲಿ ಈಗಿನ ದಲೈ ಲಾಮಾ ಅವರ ಪಟ್ಟಾಭಿಷೇಕ ಸಂದರ್ಭದ ಚಿತ್ರ. ಆಗ ಅವರಿಗೆ ಐದು ವರ್ಷ ಚಿತ್ರ ಕೃಪೆ: ದಲೈಲಾಮಾ.ಕಾಂ)
ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ವಿವಾದದ ಸ್ವರೂಪ ಪಡೆದಿದೆ. ಜುಲೈ 6ರಂದು 90ನೇ ಜನ್ಮದಿನವನ್ನು ಆಚರಿಸಲಿರುವ ಈಗಿನ 14ನೇ ದಲೈ ಲಾಮಾ ಅವರು, ತಮ್ಮ ನಿಧನದ ನಂತರ ಗಾಡೆನ್ ಫೋಡ್ರಾಂಗ್ ಟ್ರಸ್ಟ್ ಸಾಂಪ್ರದಾಯಿಕ ಪ್ರಕ್ರಿಯೆ ಅನುಸರಿಸಿ ತಮ್ಮ ಉತ್ತರಾಧಿಕಾರಿಯನ್ನು ನೇಮಿಸಲಿದೆ ಎಂದು ಘೋಷಿಸಿದ್ದಾರೆ. ಆದರೆ, ಚೀನಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ್ದು, ಉತ್ತರಾಧಿಕಾರಿ ಆಯ್ಕೆಗೆ ತನ್ನ ಸಮ್ಮತಿ ಅಗತ್ಯ ಎಂದಿದೆ. 1959ರಲ್ಲಿ ಟಿಬೆಟಿಯನ್ನರು ಚೀನಾದ ವಿರುದ್ಧ ದಂಗೆ ಎದ್ದು ವೈಫಲ್ಯ ಅನುಭವಿಸಿದ ನಂತರ ದಲೈ ಲಾಮಾ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಭಾರತಕ್ಕೆ ಬಂದು ಧರ್ಮಶಾಲಾದಲ್ಲಿ ನೆಲಸಿದ್ದಾರೆ. ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ದಲೈ ಲಾಮಾ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟಿದೆ. ದಲೈ ಲಾಮಾಗೆ ಆಶ್ರಯ ನೀಡಿರುವ ಭಾರತವು ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ
ಟಿಬೆಟಿಯನ್ನರ ಪರಮೋಚ್ಚ ಧರ್ಮಗುರು ದಲೈ ಲಾಮಾ ಅವರ ಇತ್ತೀಚಿನ ಹೇಳಿಕೆಯೊಂದು ಟಿಬೆಟ್ ಬೌದ್ಧ ಧರ್ಮದ ಅನುಯಾಯಿಗಳಲ್ಲಿ ಏಕಕಾಲಕ್ಕೆ ಅಪಾರ ಸಂತೋಷ ಮತ್ತು ಆತಂಕ ಉಂಟು ಮಾಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಜೂನ್ 30ರಂದು ನಡೆದ ತಮ್ಮ 90ನೇ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯು ಟಿಬೆಟಿಯನ್ ಬೌದ್ಧಧರ್ಮದ ಸಂಪ್ರದಾಯಕ್ಕೆ ಅನುಗುಣವಾಗಿಯೇ ನಡೆಯಲಿದ್ದು, ಗಾಡೆನ್ ಫೋಡ್ರಾಂಗ್ ಟ್ರಸ್ಟ್ (ದಲೈ ಲಾಮಾ ನೇತೃತ್ವದ ಎನ್‌ಜಿಒ) ಉಸ್ತುವಾರಿಯಲ್ಲಿ ನಡೆಯಲಿದೆ ಎಂದಿದ್ದಾರೆ. ತಾವು ಪುನರ್ಜನ್ಮ ಹೊಂದುವುದಾಗಿಯೂ ಪುನರ್ಜನ್ಮದ ಆಧಾರದಲ್ಲಿಯೇ ಮುಂದಿನ ದಲೈ ಲಾಮಾ ಆಯ್ಕೆ ನಡೆಯಲಿದೆ ಎಂದೂ ಅವರು ಸೂಚನೆ ನೀಡಿದ್ದಾರೆ.
ಟಿಬೆಟ್‌ನಿಂದ ಬಹುದೂರ, ಭಾರತದ ಧರ್ಮಶಾಲಾದಿಂದ ತಮ್ಮ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ಬಗ್ಗೆ ದಲೈ ಲಾಮಾ ಅವರು ನೀಡಿರುವ ಹೇಳಿಕೆಯು ಟಿಬೆಟಿಯನ್ ಬೌದ್ಧರ ಧಾರ್ಮಿಕ ಸಂಸ್ಥೆ ಮತ್ತು ಟಿಬೆಟ್‌ನ ಸ್ವಾತಂತ್ರ್ಯ ಹೋರಾಟದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಇದು ಟಿಬೆಟ್ ಮೇಲೆ ಹಿಡಿತ ಹೊಂದಿರುವ ಚೀನಾಕ್ಕೆ ಅವರು ನೀಡಿರುವ ಪರೋಕ್ಷ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ. ‘ಪುನರ್ಜನ್ಮ’ ಪದ್ಧತಿಯ ಮೂಲಕವೇ 14ನೇ ದಲೈ ಲಾಮಾ ಆಗಿದ್ದವರು ಅವರು. ಜತೆಗೆ, ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಚೀನಾದ ಕಮ್ಯುನಿಸ್ಟ್ ನಾಯಕ ಮಾವೋ ಜತೆ ವಿಫಲ ಹೋರಾಟ ನಡೆಸಿ, 1959ರಲ್ಲಿ ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಧರ್ಮಶಾಲಾವೇ ಅವರ ನೆಲೆಯಾಗಿದೆ. ಪ್ರಸ್ತುತ 1.40 ಲಕ್ಷದಷ್ಟು ಟಿಬೆಟಿಯನ್ ಬೌದ್ಧರು ಭಾರತದಾದ್ಯಂತ ಹರಡಿರುವ 45 ವಸತಿ ಪ್ರದೇಶಗಳಲ್ಲಿ (ಕಾಲೊನಿ) ವಾಸವಾಗಿದ್ದಾರೆ; ಕರ್ನಾಟಕದಲ್ಲಿಯೂ ಅವರ ಮೂರು ವಸತಿ ಪ್ರದೇಶಗಳಿವೆ.
ದಲೈ ಲಾಮಾ, ಜಗತ್ತಿನಲ್ಲಿ ಪ್ರಸ್ತುತ ಜೀವಂತ ಇರುವ ಪ್ರಭಾವಶಾಲಿ ಧರ್ಮಗುರುಗಳಲ್ಲಿ ಒಬ್ಬರು. ಅವರಿಗೆ ಟಿಬೆಟ್‌ನ ಹೊರಗೂ ಅನುಯಾಯಿಗಳಿದ್ದು, ಜಾಗತಿಕ ಮಟ್ಟದಲ್ಲಿ ಅವರ ಮಾತಿಗೆ ವಿಶೇಷ ಮನ್ನಣೆಯಿದೆ. ಟಿಬೆಟ್‌ನಲ್ಲಿ ಪ್ರಜಾಪ್ರಭುತ್ವವನ್ನು ಅಸ್ತಿತ್ವಕ್ಕೆ ತರುವುದು ಅವರ ಬಯಕೆ. ಅದಕ್ಕಾಗಿ ದಶಕಗಳಿಂದಲೂ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಾ, ಟಿಬೆಟ್‌ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಚೀನಾ ಮಾತ್ರ ಅವರನ್ನು ಪ್ರತ್ಯೇಕತಾವಾದಿ ಎಂದು ನೋಡುತ್ತಿದೆ. ಟಿಬೆಟ್‌ನ ಮೇಲಿನ ಹಿಡಿತ ಬಿಟ್ಟುಕೊಡಲು ಸಿದ್ಧವಿಲ್ಲದ ಚೀನಾ, ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದ ದಲೈ ಲಾಮಾ ಮಾತಿಗೆ ವಿರೋಧ ವ್ಯಕ್ತಪಡಿಸಿದೆ. ಜತೆಗೆ, ದಲೈ ಲಾಮಾ ಒಬ್ಬರೇ ಉತ್ತರಾಧಿಕಾರಿ ಆಯ್ಕೆ ಮಾಡುವಂತಿಲ್ಲ; ಅದರಲ್ಲಿ ತನ್ನ ಪಾತ್ರವೇ ನಿರ್ಣಾಯಕವಾಗಿರಬೇಕು ಎಂದು ಹಟ ಹಿಡಿದಿದೆ. ಆದರೆ, ಚೀನಾಕ್ಕೆ ತಕ್ಕ ಉತ್ತರ ನೀಡಿರುವ ದಲೈ ಲಾಮಾ ಅವರು, ‘ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ತಮ್ಮ ಸಂಸ್ಥೆಯ ತೀರ್ಮಾನವೇ ಅಂತಿಮ’ ಎಂದಿದ್ದಾರೆ.
ಉತ್ತರಾಧಿಕಾರಿ ಆಯ್ಕೆ ಮತ್ತು ಅವರನ್ನು ತರಬೇತಿಗೊಳಿಸುವ ಪ್ರಕ್ರಿಯೆಗೆ ಹಲವು ವರ್ಷಗಳೇ ಬೇಕಾಗುತ್ತವೆ. ಈ ನಡುವಿನ ಅವಧಿಯಲ್ಲಿ ಚೀನಾ ಷಡ್ಯಂತ್ರ ಹೂಡಬಹುದು ಎನ್ನುವ ಮುನ್ನೆಚ್ಚರಿಕೆಯೂ ದಲೈ ಲಾಮಾ ಅವರಲ್ಲಿದೆ. ಟಿಬೆಟ್‌ನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ದೇಶದ ಹೊರಗಿದ್ದು, ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿರುವ ಟಿಬೆಟಿಯನ್ನರನ್ನು ಒಳಗೊಂಡ ದೇಶಾಂತರ ಸರ್ಕಾರ ರಚಿಸಿದ್ದು, ಅದು ದಲೈ ಲಾಮಾ ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಹೊಂದಿದೆ.
ಉತ್ತರಾಧಿಕಾರಿ ಆಯ್ಕೆಯ ಮೂಲಕ ಟಿಬೆಟ್‌ನ ಧಾರ್ಮಿಕ ಪರಂಪರೆ ಮತ್ತು ಅದರ ಸ್ವಾಯತ್ತೆಯ ಹೋರಾಟವನ್ನು ತಮ್ಮ ನಂತರವೂ ಮುಂದುವರಿಸಲು ದಲೈ ಲಾಮಾ ಪ್ರಯತ್ನಿಸುತ್ತಿದ್ದರೆ, ಇದೇ ಅವಕಾಶ ಬಳಸಿಕೊಂಡು ಟಿಬೆಟ್ ಮೇಲಿನ ತನ್ನ ಹಿಡಿತ ಬಲಗೊಳಿಸಲು ಚೀನಾ ಮುಂದಾಗಿದೆ.
ದಲೈ ಲಾಮಾ ಅವರು 1959ರಲ್ಲಿ ಭಾರತಕ್ಕೆ ಪಲಾಯನ ಮಾಡಿದ ನಂತರ, ಚೀನಾವು ಅವರನ್ನು ಸ್ವತಂತ್ರ ಟಿಬೆಟ್‌ಗಾಗಿ ಹೋರಾಟ ಮಾಡುವ ಪ್ರತ್ಯೇಕತಾವಾದಿ ಎಂದು ಗುರುತಿಸಿದೆ. ಟಿಬೆಟಿಯನ್ನರಿಗೆ ಭಾರತ ಆಶ್ರಯ ನೀಡಿರುವ ಬಗ್ಗೆ ಚೀನಾಕ್ಕೆ ಈಗಲೂ ಅಸಮಾಧಾನವಿದೆ. ಟಿಬೆಟ್‌ನಲ್ಲಿರುವ ಬೌದ್ಧ ಧರ್ಮದ ಅನುಯಾಯಿಗಳು, ಅವರ ಧರ್ಮಗುರುಗಳು, ಅವರ ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ಸಂಪೂರ್ಣ ನಿಯಂತ್ರಣ ಹೇರಲು ಚೀನಾ ಬಯಸುತ್ತದೆ. ದಲೈ ಲಾಮಾ ಅವರ ಯಾವ ನಿರ್ಧಾರವನ್ನೂ ಅದು ಒಪ್ಪುವುದಿಲ್ಲ.
ಟಿಬೆಟ್‌ನ ಬೌದ್ಧ ಧರ್ಮದಲ್ಲಿ ದಲೈ ಲಾಮಾ ಅವರ ನಂತರದ ಉನ್ನತ ಧಾರ್ಮಿಕ ಹುದ್ದೆ ಎಂದರೆ ಪಂಚೆನ್ ಲಾಮಾ. 1995ರಲ್ಲಿ ದಲೈ ಲಾಮಾ ಅವರು ಆರು ವರ್ಷದ ಬಾಲಕನೊಬ್ಬನನ್ನು ಟಿಬೆಟ್‌ನ 11ನೇ ಪಂಚೆನ್ ಲಾಮಾ ಆಗಿ ಆಯ್ಕೆ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಆ ಬಾಲಕ ಮತ್ತು ಅವರ ಕುಟುಂಬ ನಾಪತ್ತೆಯಾಗಿತ್ತು. ಚೀನಾ ಆಡಳಿತ ಅವರನ್ನು ವಶಕ್ಕೆ ಪಡೆದಿದೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. 11ನೇ ಪಂಚೆನ್ ಲಾಮಾ ಹುದ್ದೆಗೆ ಚೀನಾ ಮತ್ತೊಬ್ಬ ಬಾಲಕನನ್ನು ನೇಮಕ ಮಾಡಿತ್ತು.
14ನೇ ದಲೈ ಲಾಮಾ ಅವರ ನಂತರ 15ನೇ ದಲೈ ಲಾಮಾ ಆಯ್ಕೆಯಲ್ಲಿ ತನ್ನ ಪಾತ್ರವೂ ಇರುತ್ತದೆ ಎಂದು ಈಗಲೇ ಅದು ಪ್ರತಿಪಾದಿಸಲು ಆರಂಭಿಸಿದೆ. ಜೂನ್ 30ರಂದು ದಲೈ ಲಾಮಾ ಅವರು ಉತ್ತರಾಧಿಕಾರಿ ಬಗ್ಗೆ ಮಾತನಾಡಿದ ಕೆಲ ಹೊತ್ತಿನಲ್ಲಿ ಈ ಬೆಳವಣಿಗೆ ಬಗ್ಗೆ ಅದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಹೊಸ ದಲೈ ಲಾಮಾ ಆಯ್ಕೆಯು ‘ಗೋಲ್ಡನ್ ಅರ್ನ್’ ವ್ಯವಸ್ಥೆಯಲ್ಲಿ ನಡೆಯಬೇಕು. ಮತ್ತು ಆಯ್ಕೆಗೆ ತನ್ನ ಅನುಮತಿಯೂ ಬೇಕು ಎಂದು ಹೇಳಿದೆ (ಗೋಲ್ಡನ್ ಅರ್ನ್ ಎಂದರೆ, ಚಿನ್ನದ ಕರಂಡಿಕೆಯಿಂದ ಚೀಟಿ ಎತ್ತಿ ಆಯ್ಕೆ ಮಾಡುವುದು). ಹಾಗಾಗಿ, ಭಾರತದಲ್ಲಿರುವ ದಲೈ ಲಾಮಾ ಅವರ ಟ್ರಸ್ಟ್ ಹಾಗೂ ಬೌದ್ಧ ಭಿಕ್ಕುಗಳು ಆಯ್ಕೆ ಮಾಡುವ ಹೊಸ ಧರ್ಮಗುರುವನ್ನು ಚೀನಾ ಒಪ್ಪದು. ತನ್ನದೇ ವಿಧಾನದಲ್ಲಿ ಇನ್ನೊಬ್ಬರನ್ನು ಆಯ್ಕೆ ಮಾಡಬಹುದು. ಹಾಗಾದ ಪಕ್ಷದಲ್ಲಿ ಟಿಬೆಟಿಯನ್ನರು ಇಬ್ಬರು ಧರ್ಮಗುರುಗಳನ್ನು ಕಾಣಲಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ಜೀವನದುದ್ದಕ್ಕೂ ಚೀನಾವನ್ನು ವಿರೋಧಿಸುತ್ತಲೇ ಬಂದಿರುವ ಹಾಲಿ ದಲೈ ಲಾಮಾ ಅವರು, ಹೊಸ ದಲೈ ಲಾಮಾ ಆಯ್ಕೆ ಪ್ರಕ್ರಿಯೆಯಲ್ಲಿ ಚೀನಾದ ಪಾಲ್ಗೊಳ್ಳುವಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ತಮ್ಮ ಅನುಯಾಯಿಗಳಿಗೆ ಕರೆ ನೀಡಿದ್ದಾರೆ. ಅಲ್ಲದೇ, ಹೊಸ ದಲೈ ಲಾಮಾ ಆಗುವ ವ್ಯಕ್ತಿ ಚೀನಾ ಹೊರತಾದ ಪ್ರದೇಶದಲ್ಲಿ ಜನಿಸಬಹುದು. ಆತ ಪುರುಷನೇ ಆಗಬೇಕಿಲ್ಲ, ಮಹಿಳೆಯೂ ಆಗಬಹುದು ಎಂದೂ ಈ ಹಿಂದೆ ಹೇಳಿದ್ದರು.
1959ರಿಂದ ದಲೈ ಲಾಮಾಗೆ ಆಶ್ರಯ ನೀಡಿರುವ ಭಾರತವು ಉತ್ತರಾಧಿಕಾರಿ ಆಯ್ಕೆಗೆ ಸಂಬಂಧಿಸಿದ ಸಂಘರ್ಷದ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ದಲೈ ಲಾಮಾ ಮತ್ತು ಅವರ ಬೆಂಬಲಿಗರಿಗೆ ಆಶ್ರಯ ನೀಡಿರುವುದರಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಪ್ರಾಪ್ತವಾಗಿದ್ದರೂ ಚೀನಾದೊಂದಿಗಿನ ಗಡಿ ಸಂಘರ್ಷದ ಕಾರಣಕ್ಕೆ ಸೂಕ್ಷ್ಮವಾಗಿ ವರ್ತಿಸುತ್ತಿದೆ.
ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಕಾಪಾಡಿಕೊಳ್ಳುವ ದೃಷ್ಟಿಯಿಂದ ಭಾರತವು ಟಿಬೆಟ್ ಸ್ವಾಯತ್ತ ಹೋರಾಟದಿಂದಲೂ ಅಂತರ ಕಾಯ್ದುಕೊಂಡಿದೆ. ಆದರೆ, ಭಾರತದಲ್ಲಿದ್ದು, ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ದಲೈ ಲಾಮಾ ಅವರ ಧಾರ್ಮಿಕ ಹಕ್ಕನ್ನು ಭಾರತವು ಬಹಿರಂಗವಾಗಿ ಸಮರ್ಥಿಸಿದೆ. 2025ರ ಮಾರ್ಚ್‌ನಲ್ಲಿ ದೇಶದ 46 ಸಂಸದರು ದಲೈ ಲಾಮಾ ಅವರಿಗೆ ಇರುವ ಉತ್ತರಾಧಿಕಾರಿ ಆಯ್ಕೆಯ ವಿಶೇಷ ಹಕ್ಕನ್ನು ಬೆಂಬಲಿಸಿ, ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದರು. ಈ ವಿಚಾರದಲ್ಲಿ ಚೀನಾದ ಹಸ್ತಕ್ಷೇಪ ಸಲ್ಲದು ಎಂದಿದ್ದರು.
ಈ ಬೆಳವಣಿಗೆಯನ್ನು ಅಮೆರಿಕ ಕೂಡ ಗಮನಿಸುತ್ತಿದೆ. ಅಮೆರಿಕ ಈವರೆಗೂ ಟಿಬೆಟಿಯನ್ನರು, ದಲೈ ಲಾಮಾ ಹಾಗೂ ಅವರ ಸ್ವಾತಂತ್ರ್ಯ ಹೋರಾಟವನ್ನು ಬೆಂಬಲಿಸುತ್ತಿತ್ತು. ಆದರೆ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವು ಏನು ಎಂಬುದು ಸ್ಪಷ್ಟವಾಗಿಲ್ಲ. ಟ್ರಂಪ್ ಅವರು ಚೀನಾದೊಂದಿಗೆ ಸುಂಕ ಸಮರದಲ್ಲಿ ತೊಡಗಿರುವುದರ ಜೊತೆಗೆ ಸ್ನೇಹದ ಹಸ್ತವನ್ನೂ ಚಾಚುತ್ತಿದ್ದಾರೆ. ಹೀಗಾಗಿ, ಅವರು ಯಾರಿಗೆ ಬೆಂಬಲ ನೀಡಬಹುದು ಎಂಬ ಕುತೂಹಲ ಮೂಡಿದೆ.
ಟಿಬೆಟ್‌ನ ಬೌದ್ಧ ಧರ್ಮದ ಸಂಸ್ಕೃತಿ, ಶಿಷ್ಟಾಚಾರದ ಅನುಸಾರ ಹೊಸ ದಲೈ ಲಾಮಾ ಆಯ್ಕೆ ನಡೆಯುತ್ತದೆ. ಆದರೆ, ಆ ಪ್ರಕ್ರಿಯೆ ಆರಂಭವಾಗುವುದು ಹಾಲಿ ದಲೈ ಲಾಮಾ ನಿಧನದ ನಂತರ. ದಲೈ ಲಾಮಾ ಅವರೇ ಮರುಜನ್ಮ ಪಡೆದು ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂಬ ನಂಬಿಕೆ ಟಿಬೆಟಿಯನ್ನರದು.
ಹೊಸ ದಲೈ ಲಾಮಾ ಅವರನ್ನು ಗುರುತಿಸುವುದಕ್ಕಾಗಿ ಹಿರಿಯ ಧಾರ್ಮಿಕ ಮುಖಂಡರು ಹಳೆಯ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಾರೆ. ಹಿಂದಿನ ದಲೈ ಲಾಮಾ ಅವರು ಬಿಟ್ಟು ಹೋಗಿರುವ ಸುಳಿವುಗಳು, ಜ್ಯೋತಿಷ್ಯದಿಂದ ಕಂಡುಕೊಂಡ ಮಾಹಿತಿಗಳು, ಆಧ್ಯಾತ್ಮಿಕ ಜ್ಞಾನವನ್ನು ವಿಶ್ಲೇಷಿಸಲಾಗುತ್ತದೆ. ಇದಲ್ಲದೇ, ಹುಟ್ಟಿದ ಕೆಲವೇ ವರ್ಷಗಳಲ್ಲಿ ಯಾರಾದರೂ ಹಿಂದಿನ ದಲೈ ಲಾಮಾ ಅವರು ಬಳಸಿದ ವಸ್ತುಗಳನ್ನು, ಅವರ ಆಪ್ತರು ಮತ್ತು ಹೆಚ್ಚು ಒಡನಾಟ ಹೊಂದಿರುವವರನ್ನು ಗುರುತಿಸಿದರೆ ಅವರು ಮರುಜನ್ಮ ಪಡೆದವರು ಎಂದು ತಿಳಿಯಲಾಗುತ್ತದೆ.
ಈವರೆಗೆ 14 ಮಂದಿ ದಲೈ ಲಾಮಾ ಹುದ್ದೆಗೆ ಏರಿದ್ದಾರೆ. ಈ ಪೈಕಿ ಇಬ್ಬರನ್ನು ಬಿಟ್ಟ ಉಳಿದವರೆಲ್ಲರೂ ಟಿಬೆಟ್‌ನಲ್ಲಿ ಜನಿಸಿದವರು. ನಾಲ್ಕನೇ ಮತ್ತು ಆರನೇ ದಲೈ ಲಾಮಾ ಆಗಿ, ಟಿಬೆಟ್ ಹೊರತಾದ ಪ್ರದೇಶದಲ್ಲಿ ಜನಿಸಿದವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕನೇ ದಲೈ ಲಾಮಾ (ಹೆಸರು: ಯೊಂಟೆನ್ ಗ್ಯಾಟ್ಸೊ) 1589ರಲ್ಲಿ ಮಂಗೋಲಿಯಾದಲ್ಲಿ ಜನಿಸಿದ್ದರು. ಆರನೇ ದಲೈ ಲಾಮಾ (ತ್ಸಾಂಗ್ಯಾಂಗ್ ಗ್ಯಾಟ್ಸೊ) ಈಗಿನ ಅರುಣಾಚಲ ಪ್ರದೇಶದಲ್ಲಿ ಹುಟ್ಟಿದ್ದರು.
1935 ಜುಲೈ 6: ಟಿಬೆಟ್‌ನ ಉತ್ತರ ಭಾಗದ ಟಕ್‌ಟ್ಸೆರ್ ಎಂಬ ಗ್ರಾಮದ ರೈತ ಕುಟುಂಬದಲ್ಲಿ ಜನನ. ಹೆಸರು ಲ್ಹಾಮೊ ಥೊಂಡುಪ್
1937: ಲ್ಹಾಮೊ ಥೊಂಡುಪ್, ಹಿಂದಿನ (13ನೇ) ದಲೈ ಲಾಮಾ ಅವರ ಮರುಜನ್ಮ ಎಂದು ಗುರುತು
1940 ಫೆ. 2: 13ನೇ ದಲೈಲಾಮಾ ಅವರ ಉತ್ತರಾಧಿಕಾರಿ ಎಂದು ಅಧಿಕೃತ ಘೋಷಣೆ. ಪಟ್ಟಾಭಿಷೇಕ. ಆಗ ಅವರ ವಯಸ್ಸು 5 ವರ್ಷ. ಟೆಂಜಿನ್ ಗ್ಯಾಟ್ಸೊ ಎಂದು ನಾಮಕರಣ
1950: ಟಿಬೆಟ್ ಮೇಲೆ ಚೀನಾವು ಅತಿಕ್ರಮಣ ನಡೆಸಿದ ನಂತರ, 15ನೇ ವರ್ಷದಲ್ಲಿ ಟಿಬೆಟ್‌ನ ಸಂಪೂರ್ಣ ರಾಜಕೀಯ ನಿಯಂತ್ರಣವನ್ನು ಪಡೆದ ಧರ್ಮಗುರು
1956: ಬೀಜಿಂಗ್‌ನಲ್ಲಿ ಚೀನಾದ ಪರಮೋಚ್ಚ ನಾಯಕ ಮಾವೋ ಝೆಡಾಂಗ್ ಮತ್ತು ನಾಯಕರೊಂದಿಗೆ ಶಾಂತಿ ಮಾತುಕತೆ
1959: ಚೀನಾದ ವಿರುದ್ಧ ಟಿಬೆಟ್‌ನಲ್ಲಿ ನಡೆದ ದಂಗೆ ವಿಫಲವಾದ ನಂತರ ಭಾರತಕ್ಕೆ ಪಲಾಯನ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆ
1989: ಅಹಿಂಸೆ ಮತ್ತು ಶಾಂತಿಯ ಪ್ರತಿಪಾದನೆಗಾಗಿ ನೊಬೆಲ್ ಶಾಂತಿ ಪುರಸ್ಕಾರದ ಗೌರವ
2011: ರಾಜಕೀಯ ಸ್ಥಾನಮಾನ ಪದತ್ಯಾಗ, ಟಿಬೆಟನ್ನರ ಧರ್ಮಗುರುವಾಗಿ ಮುಂದುವರಿಕೆ
2024 ಅಮೆರಿಕಕ್ಕೆ ಭೇಟಿ. ಮಂಡಿ ಶಸ್ತ್ರಚಿಕಿತ್ಸೆ. ಮೊದಲ ಬಾರಿಗೆ ಉತ್ತರಾಧಿಕಾರಿ ಬಗ್ಗೆ ಪ್ರಸ್ತಾಪ
ಆಧಾರ: ಪಿಟಿಐ, ಬಿಬಿಸಿ, ರಾಯಿಟರ್ಸ್, ದಿ ನ್ಯೂಯಾರ್ಕ್ ಟೈಮ್ಸ್, ಸಿಬಿಸಿ, ದಲೈ ಲಾಮಾ.ಕಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.