ADVERTISEMENT

ವಾರದ ವಿಶೇಷ | ಯುಜಿಸಿಯ ಕರಡು ಪಠ್ಯಕ್ರಮ ಚೌಕಟ್ಟು: ವಿರೋಧ ಏಕೆ?

ಸೂರ್ಯನಾರಾಯಣ ವಿ.
ಬಿ.ವಿ. ಶ್ರೀನಾಥ್
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪದವಿ ಕೋರ್ಸ್‌ಗಳ ಒಂಬತ್ತು ವಿಷಯಗಳಿಗೆ ಸಿದ್ಧಪಡಿಸಿರುವ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟಿನ (ಎಲ್‌ಒಸಿಎಫ್) ಕರಡು ವಿವಾದಕ್ಕೆ ಗುರಿಯಾಗಿದೆ. ಪಠ್ಯಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಆಶಯದಿಂದ ಎಲ್‌ಒಸಿಎಫ್ ರೂಪಿಸಲಾಗಿದೆ ಎನ್ನುವುದು ಯುಜಿಸಿ ಪ್ರತಿಪಾದನೆ. ಯುಜಿಸಿಯ ಈ ಪ್ರಯತ್ನಕ್ಕೆ ಕರ್ನಾಟಕ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಶಿಕ್ಷಣದ ಮೂಲಕ ಪಠ್ಯಪುಸ್ತಕಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಜಾರಿಗೆ ತರುವ ಮೂಲಕ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ ಎನ್ನುವ ಟೀಕೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ರೂಪಿಸಿರುವ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟು (ಎಲ್‌ಒಸಿಎಫ್) ವಿವಾದಕ್ಕೆ ಗುರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ–2020ರ ನಿಯಮಗಳಿಗೆ ತಕ್ಕಂತೆ ಯುಜಿಸಿ ವಿಷಯವಾರು ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟಿನ ಕರಡು ರೂಪಿಸಿದೆ. ಕಾರ್ಯಕ್ರಮ ವಿನ್ಯಾಸ ಮತ್ತು ಪಠ್ಯದಲ್ಲಿ ನಾವೀನ್ಯ ಮತ್ತು ಹೊಂದಿಕೆ ಗುಣವನ್ನು ಉತ್ತೇಜಿಸಲು ಮಾದರಿ ಪಠ್ಯಕ್ರಮವಾಗಿ ಪದವಿ ಕೋರ್ಸ್‌ಗಳ ಒಂಬತ್ತು ವಿಷಯಗಳಲ್ಲಿ (ಮಾನವ ಶಾಸ್ತ್ರ, ರಸಾಯನ ವಿಜ್ಞಾನ, ವಾಣಿಜ್ಯ, ಅರ್ಥಶಾಸ್ತ್ರ, ಗಣಿತ, ಭೂಗೋಳ ವಿಜ್ಞಾನ, ಗೃಹ ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ರಾಜ್ಯಶಾಸ್ತ್ರ) ಎಲ್‌ಒಸಿಎಫ್ ಕರಡು ಪ್ರಕಟಿಸಿದ್ದು, ಆಕ್ಷೇಪಗಳಿದ್ದರೆ ತಿಳಿಸುವಂತೆ ಶಿಕ್ಷಣ ಸಂಸ್ಥೆಗಳನ್ನು, ಶಿಕ್ಷಣ ತಜ್ಞರನ್ನು ಯುಜಿಸಿ ಕೋರಿದೆ.

ವಿವಿಧ ಪಠ್ಯಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಆಶಯದಿಂದ ಎಲ್‌ಒಸಿಎಫ್ ರೂಪಿಸಲಾಗಿದೆ ಎಂದು ಯುಜಿಸಿ ಹೇಳುತ್ತಿದೆ. ನಿದರ್ಶನಕ್ಕೆ, ರಸಾಯನ ವಿಜ್ಞಾನ ವಿಷಯದ ಆರಂಭದಲ್ಲೇ ಹಿಂದೂಗಳ ಜ್ಞಾನದ ದೇವತೆ ಎಂದು ಪರಿಗಣಿಸಲಾಗಿರುವ ಸರಸ್ವತಿಯ ಫೋಟೊ ಬಳಸಿ ಪ್ರಾರ್ಥನೆಯನ್ನು ಪ್ರಕಟಿಸಲಾಗಿದೆ. ವಾಣಿಜ್ಯ ಮತ್ತು ಅರ್ಥಶಾಸ್ತ್ರದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸೇರಿಸಲಾಗಿದೆ. ಗಣಿತದಲ್ಲಿ ಕಾಲಗಣನೆ, ಜ್ಯೋತಿಷ್ಯ, ಬೀಜಗಣಿತ ಹಾಗೂ ಕ್ಯಾಲ್ಕುಲಸ್‌ಗೆ ಪ್ರಾಚೀನ ಭಾರತದ ಕೊಡುಗೆಯನ್ನೂ ಸೇರಿಸಲಾಗಿದೆ. ರಾಜ್ಯಶಾಸ್ತ್ರ ಪಠ್ಯದಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟ ಕುರಿತ ಪಾಠದಲ್ಲಿ ವಿ.ಡಿ.ಸಾವರ್ಕರ್ ಅವರ ‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಕೃತಿಯನ್ನು ‘ರೀಡಿಂಗ್’ (ಹೆಚ್ಚಿನ ಅಧ್ಯಯನದ ಪುಸ್ತಕಗಳ) ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲದೇ, ಸಾವರ್ಕರ್‌ ಬಗ್ಗೆ ಪಾಠವೂ ಇದೆ. ದೀನ ದಯಾಳ್ ಉಪಾಧ್ಯಾಯರ ಕುರಿತ ಪಾಠವನ್ನೂ ಅಳವಡಿಸಲಾಗಿದೆ.  

ಆದರೆ, ಯುಜಿಸಿಯ ಈ ಪ್ರಯತ್ನಕ್ಕೆ ಕರ್ನಾಟಕ ಸೇರಿದಂತೆ  ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಜಿಸಿಯ ಮೂಲಕ ಪಠ್ಯಪುಸ್ತಕಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಸೂಚಿಯನ್ನು ಜಾರಿಗೆ ತರುವ ಮೂಲಕ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಮುಂದಾಗಿದೆ ಎನ್ನುವ ಟೀಕೆ ವ್ಯಕ್ತವಾಗಿದೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಕರಡನ್ನು ವಿರೋಧಿಸಿವೆ. ಶಿಕ್ಷಣ ತಜ್ಞರು, ಎಸ್‌ಎಫ್‌ಐನಂಥ ಕೆಲವು ವಿದ್ಯಾರ್ಥಿ ಸಂಘಟನೆಗಳು ಯುಜಿಸಿ ಕರಡಿಗೆ ವಿರೋಧ ವ್ಯಕ್ತಪಡಿಸಿದ್ದರೆ, ಆಂಧ್ರಪ್ರದೇಶ ಕ್ರಿಶ್ಚಿಯನ್ ಲೀಡರ್ಸ್ ಫೋರಂನಂಥ ಕೆಲವು ಅಲ್ಪಸಂಖ್ಯಾತ ಸಂಸ್ಥೆಗಳು ಕರಡನ್ನು ವಿರೋಧಿಸಿ ಸಹಿ ಸಂಗ್ರಹ ಮಾಡಿವೆ. 

ADVERTISEMENT

ಕರ್ನಾಟಕವು ಈ ಕರಡು ಚೌಕಟ್ಟನ್ನು ವಿರೋಧಿಸಿದೆ. ಅಲ್ಲದೇ, ಕರಡಿನ ಅಧ್ಯಯನ ನಡೆಸುವುದಕ್ಕಾಗಿ ತಜ್ಞರ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದ್ದಾರೆ.

ಪ್ರತಿಕ್ರಿಯೆಗೆ ಅವಕಾಶ

ಕರಡು ಚೌಕಟ್ಟಿಗೆ ಸಂಬಂಧಿಸಿದಂತೆ ಅಭಿಪ್ರಾಯ, ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಇದೇ 20ರವರೆಗೆ ಯುಜಿಸಿ ಅವಕಾಶ ನೀಡಿದೆ. ಯುಜಿಸಿ ವೆಬ್‌ಸೈಟ್‌ನಲ್ಲಿ (ugc.gov.in/Notices) ಕರಡು ಲಭ್ಯವಿದ್ದು, ಅದರೊಂದಿಗೆ ಗೂಗಲ್‌ ಫಾರ್ಮ್‌ನ ಲಿಂಕ್ ನೀಡಲಾಗಿದೆ. ಅದರಲ್ಲಿ ವಿವರಗಳನ್ನು ತುಂಬಿ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು ಎಂದು ಯುಜಿಸಿ ಹೇಳಿದೆ.   

ವಿರೋಧಿಸುತ್ತಿರುವವರ ವಾದವೇನು?

* ಕರಡು ಅವೈಜ್ಞಾನಿಕವಾಗಿದ್ದು, ಪ್ರತಿಗಾಮಿತನದಿಂದ ಕೂಡಿದೆ. ಎಲ್‌ಒಸಿಎಫ್ ಶಿಫಾರಸುಗಳು ದೇಶದ ಜಾತ್ಯತೀತ ಮತ್ತು ವೈವಿಧ್ಯತೆಯ ಮೌಲ್ಯಗಳಿಗೆ ವಿರುದ್ಧವಾಗಿವೆ

* ಭಾರತೀಯ ಜ್ಞಾನ ವ್ಯವಸ್ಥೆಯನ್ನು ಶಿಕ್ಷಣದಲ್ಲಿ ಅಳವಡಿಸುವುದು ಎಲ್‌ಒಸಿಎಫ್ ಆಶಯವಾಗಿದೆ. ಆದರೆ, ಭಾರತದಲ್ಲಿ ಎಂದೂ ಒಂದು ಜ್ಞಾನ ವ್ಯವಸ್ಥೆ ಇರಲಿಲ್ಲ. ಬದಲಿಗೆ, ಹಲವು ಜ್ಞಾನ ವ್ಯವಸ್ಥೆಗಳು ಇದ್ದವು. ಕರಡಿನಲ್ಲಿ ‘ವೇದಗಳು, ಪಂಚಾಂಗ, ಉಪನಿಷತ್‌ಗಳು, ಭಗವದ್ಗೀತೆ, ಪುರಾಣ, ರಾಮಾಯಣ, ಮಹಾಭಾರತ ಮತ್ತು ಇತರ ಪುರಾತನ ಸಾಹಿತ್ಯ’ದ ಉಲ್ಲೇಖ ಮಾತ್ರ ಇದೆ. ಕೆಳಸ್ತರದ ಜನರಿಗೆ ಸಂಬಂಧಿಸಿದ ಜ್ಞಾನವನ್ನು ಅಳಿಸಿಹಾಕುವ ಪ್ರಯತ್ನ ಇದಾಗಿದೆ.  

* ಇದು ಗತವನ್ನು ವರ್ತಮಾನದೊಂದಿಗೆ ಅಸಂಬದ್ಧವಾಗಿ ಬೆಸೆಯುತ್ತದೆ. ಉದಾಹರಣಗೆ, ರಾಮರಾಜ್ಯದಂಥ ಪುರಾತನ ಆದರ್ಶವನ್ನು ವರ್ತಮಾನದ ಕಂಪನಿಗಳ ಸಿಎಸ್‌ಆರ್ ಯೋಜನೆಯೊಂದಿಗೆ ಸಮೀಕರಿಸಲಾಗಿದೆ

* ಇದು ವಿಜ್ಞಾನ, ಕಲೆ ಮತ್ತು ಪುರಾಣಗಳ ನಡುವಿನ ಗೆರೆಯನ್ನು ತೆಳುವಾಗಿಸುತ್ತದೆ. ನಿದರ್ಶನಕ್ಕೆ, ‘ಪಂಚಕೋಶ’ ಎನ್ನುವ ಪಠ್ಯದಲ್ಲಿ ‘ಚಕ್ರಗಳನ್ನು ಕ್ರಿಯಾಶೀಲಗೊಳಿಸುವ ಮೂಲಕ ಬುದ್ಧಿಮತ್ತೆಯನ್ನು ಬೆಳೆಸುವುದು’ ಎನ್ನುವ ಉಲ್ಲೇಖವಿದೆ. ಇದೇ ರೀತಿ ಗಣಿತವನ್ನು ನಾರದ ಪುರಾಣದೊಂದಿಗೆ ವಿವರಿಸಲಾಗಿದೆ. ವೇದಗಳ ಪ್ರಸ್ತಾಪವೂ ಬರುತ್ತದೆ

* ಕರಡಿನಲ್ಲಿ ‘ಇತಿಹಾಸ’ದ ನೆ‍ಪದಲ್ಲಿ ರಾಜಕೀಯ ಕಾರ್ಯಸೂಚಿಯನ್ನು ಹೇರುವ ಪ್ರಯತ್ನ ಮಾಡಲಾಗಿದೆ. ರಾಷ್ಟ್ರೀಯ ಚಳವಳಿಯಲ್ಲಿ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್ ಅವರ ಜತೆ ವಿ.ಡಿ.ಸಾವರ್ಕರ್ ಮತ್ತು ದೀನದಯಾಳ್ ಉಪಾಧ್ಯಾಯ ಅವರ ಹೆಸರುಗಳೂ ಸೇರಿವೆ 

* ಭಾರತದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಹೆಮ್ಮೆ ತರುವ ಅಂಶಗಳಿವೆ. ಆದರೆ, ಉದ್ಯೋಗ ಸಿಗಲು ನೆರವಾಗುವ ಅಂಶಗಳ ಕೊರತೆ ಇದೆ 

* ಯಂತ್ರ, ರಂಗೋಲಿಗಳನ್ನು ಗಣಿತದಲ್ಲಿ ಅಳವಡಿಸುವುದರಿಂದ ಮೂಲಕ ಜಾಗತಿಕ ಮಟ್ಟದಲ್ಲಿ ಈ ಕ್ಷೇತ್ರದಲ್ಲಿ ಇದುವರೆಗೆ ಆಗಿರುವ ಅಭಿವೃದ್ಧಿಯನ್ನು ಕಡೆಗಣಿಸಿ, ಹಿಂದಕ್ಕೆ ಚಲಿಸಿದಂತಾಗುತ್ತದೆ.

* ಕರಡಿನಲ್ಲಿರುವ ಅಂಶಗಳು ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಮುಂತಾದ, ಹಿಂದೂಯೇತರ ಧರ್ಮಗಳಿಗೆ ಸೇರಿದ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಲಿವೆ. ದಾರ್ಮಿಕ ಅರ್ಥಶಾಸ್ತ್ರ, ವೇದಕಾಲದ ಮಾನವಶಾಸ್ತ್ರ ಮುಂತಾದ ಪರಿಕಲ್ಪನೆಗಳು ಅವರಿಗೆ ‘ಪರಕೀಯ’ ಆಗಿ ಕಾಣಲಿದ್ದು, ವೈವಿಧ್ಯಮಯ ದೇಶದಲ್ಲಿ ಅವರಿಗೆ ತಾವು ಎರಡನೇ ದರ್ಜೆಯ ಪ್ರಜೆಗಳು ಎಂಬ ಭಾವನೆ ಬರುವ ಸಾಧ್ಯತೆ ಇದೆ

* ಸರ್ಕಾರಿ ಸಂಸ್ಥೆಗಳೂ ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಿಸಲಾಗುವ ಪಠ್ಯಗಳಲ್ಲಿ ವೇದ, ಪುರಾಣ, ರಾಮಾಯಣದಂಥ ಅಂಶಗಳನ್ನು ಅಳವಡಿಸುವುದರಿಂದ ಶಿಕ್ಷಣದ ಜಾತ್ಯತೀಯ ಸ್ವರೂಪಕ್ಕೆ ಧಕ್ಕೆಯಾಗುತ್ತದೆ

* ಧಾರ್ಮಿಕ ಗ್ರಂಥಗಳ ಕೆಲವು ಸೂಕ್ತಿ, ಉಲ್ಲೇಖಗಳು ನಿರ್ದಿಷ್ಟ ಜಾತಿಗಳ ಪರವಾಗಿದ್ದು, ಅವು ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ವಿರುದ್ಧವಾಗಿವೆ. ಸಾರ್ವಜನಿಕ ಶಿಕ್ಷಣವು ಯಾವುದೇ ಧಾರ್ಮಿಕ ಬೋಧನೆಗಳನ್ನು ಒಳಗೊಳ್ಳುವಂತಿಲ್ಲ, ಯಾವುದೇ ಧರ್ಮದ ಸಾಹಿತ್ಯವನ್ನು ಉತ್ತೇಜಿಸುವಂತಿಲ್ಲ ಎನ್ನುವುದು ನಮ್ಮ ಸಂವಿಧಾನದ ಆಶಯ

ಕರ್ನಾಟಕ ಹೇಳುತ್ತಿರುವುದೇನು?

ಯುಜಿಸಿಯ ಪಠ್ಯಕ್ರಮ ಚೌಕಟ್ಟಿನ ಕರಡಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಕೇಂದ್ರ ಸರ್ಕಾರವು ತನ್ನ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದ್ದು, ಅದನ್ನು ಒಪ್ಪುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ‘ಯುಜಿಸಿ ಪ್ರತಿಯೊಂದು ವಿಚಾರದಲ್ಲಿಯೂ ಮಧ್ಯಪ್ರವೇಶ ಮಾಡುತ್ತಿದೆ. ನಿಯಂತ್ರಣ ಸಂಸ್ಥೆಯಾಗಿರುವ ಅದಕ್ಕೆ ಅದರ ಮಿತಿಗಳೂ ಗೊತ್ತಿರಬೇಕು. ಯುಜಿಸಿಯು ವಿಸ್ತೃತವಾದ ಚೌಕಟ್ಟನ್ನು ರೂಪಿಸಬಹುದೇ ವಿನಾ ಪಠ್ಯವನ್ನಲ್ಲ; ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ರಚನಾ ಸಮಿತಿಗಳು ಆ ಅಧಿಕಾರ ಹೊಂದಿರುತ್ತವೆ’ ಎಂದು ಪ್ರತಿಕ್ರಿಯಿಸಿದ್ದಾರೆ. 

‘ಬಿಜೆಪಿಯು ಶಿಕ್ಷಣದ ಮೂಲಕ ತನ್ನ ಕಾರ್ಯಸೂಚಿಯನ್ನು ಮಕ್ಕಳ ಮೇಲೆ ಹೇರಲು ನಾವು ಬಿಡುವುದಿಲ್ಲ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರ ಸರ್ಕಾರವು ಈ ರೀತಿ ಮಾಡುವಂತಿಲ್ಲ. ಈ ಹಿಂದೆ ಉಪಕುಪಲತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಂದ ಕಸಿದುಕೊಳ್ಳುವ ನಿಯಮ ರೂಪಿಸಿದ್ದನ್ನು ಮೊದಲು ವಿರೋಧಿಸಿದ್ದೇ ಕರ್ನಾಟಕ. ನಂತರ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೂ ಅದನ್ನು ವಿರೋಧಿಸಿದವು. ಆ ನಿಯಮವನ್ನು ವಾಪಸ್ ಪಡೆಯಲಾಯಿತು. ಈಗ ಅವರು ಮತ್ತೊಂದು ಪ್ರಯತ್ನ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಕರಡನ್ನು ಅಧ್ಯಯನ ಮಾಡಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ತಜ್ಞರ ಸಮಿತಿಯನ್ನು ರಚಿಸಲಿದೆ. ಅದು ನೀಡುವ ವರಧಿ ಆಧರಿಸಿ ತನ್ನ ವಿರೋಧವನ್ನು ಅಧಿಕೃತವಾಗಿ ದಾಖಲಿಸಲಿದೆ.

ರಸಾಯನ ವಿಜ್ಞಾನದಲ್ಲಿ ಆಯುರ್ವೇದ ಸಿದ್ಧ

* ರಸಾಯನ ವಿಜ್ಞಾನದ ಅಡಿಯಲ್ಲಿ ಬರುವ ಆಹಾರ ವಿಜ್ಞಾನ (ಫುಡ್‌ ಕೆಮಿಸ್ಟ್ರಿ) ವಿಭಾಗದಲ್ಲಿ ಆಯುರ್ವೇದದ ಪ್ರಕಾರ ಆಹಾರ ವಿಜ್ಞಾನ ಮತ್ತು ಪೋಷಕಾಂಶಗಳು ಹಾಗೂ ರುಚಿಗಳ ಪರಿಚಯ ಪಾಠ ಇದೆ

* ಆಯುರ್ವೇದ, ಚಿಕಿತ್ಸಾ ಪದ್ಧತಿಯನ್ನು ಪರಿಚಯಿಸುವ ಭಾರತದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳು ಎಂಬ ಪಾಠ ಇದ್ದು, ಎರಡೂ ಪದ್ಧತಿಗಳಲ್ಲಿರುವ ಚಿಕಿತ್ಸಾ ವಿಧಾನಗಳ ಬಗ್ಗೆ ವಿವರಿಸಲಾಗಿದೆ 

* ಪ್ರಾಚೀನ ಭಾರತದಲ್ಲಿ ರಸಾಯನ ವಿಜ್ಞಾನ ಎಂಬ ಪತ್ರಿಕೆ ಇದ್ದು, ಇದರಲ್ಲಿ ದೇಶದ ಪುರಾತನ ವಿಜ್ಞಾನಿಗಳು, ವಿವಿಧ ಕಾಲಘಟ್ಟಗಳಲ್ಲಿ ರಸಾಯನ ವಿಜ್ಞಾನ ಬೆಳೆದುಬಂದ ಹಾದಿ, ಕಣಾದ ಅಣು ಸಿದ್ಧಾಂತ, ಪರಮಾಣುವಿನ ಪರಿಕಲ್ಪನೆ, ಅಣುಗಳ ರಚನೆ, ಪರಿಮಂಡಲ, ಅಣು ರೋಹಿತ ಮತ್ತು ಕುಂಡಲಿನಿ ಪರಿಕಲ್ಪನೆ ಮುಂತಾದ ವಿವರಣೆಗಳಿವೆ 

ಗಣಿತದಲ್ಲಿ ಕಾಲ ಗಣನೆ

* ಗಣಿತ ಪಠ್ಯದಲ್ಲಿ ‘ಭಾರತೀಯ ಗಣಿತದ ತತ್ವಶಾಸ್ತ್ರ’ ಎಂಬ ಪತ್ರಿಕೆ ಇದೆ. ಪುರಾತನ ಭಾರತದ 14 ಕಲಿಕಾ ಶಾಖೆಗಳಾದ ಪುರಾಣ, ನ್ಯಾಯ, ಮೀಮಾಂಸೆ, ಧರ್ಮಶಾಸ್ತ್ರ, ಆರು ವೇದಾಂಗಗಳು, ವೇದಾಂಗಗಳ ಪರಿಚಯ ಮತ್ತು ಉಪವೇದ, ಚಾರ್ವಾಕ ಜೈನ ಮತ್ತು ಬುದ್ಧ ದರ್ಶನ, ತರ್ಕಶಾಸ್ತ್ರ ಪ್ರಮಾಣ, ಪ್ರತಕ್ಷ, ಅನುಮಾನ, ಉಪಮಾನಗಳ ಬಗ್ಗೆ ವಿವರಣೆಗಳಿವೆ

* ‘ಕಾಲ ಗಣನೆ’ ಎಂಬ ಇನ್ನೊಂದು ಪಾಠ ಗಣಿತ ಪಠ್ಯದ ಭಾಗವಾಗಿದೆ. ಇದರಲ್ಲಿ ಕಾಲದ ಪರಿಕಲ್ಪನೆ, ಸೂರ್ಯ ಸಿದ್ಧಾಂತ, ವಿ.ಭೃಗು ಸಂಹಿತಾ, ಆರ್ಯಭಟಿಯಂ, ಪಂಚಸಿದ್ಧಾಂತಿಕ, ಸಿದ್ಧಾಂತ ಶಿರೋಮಣಿಗಳಲ್ಲಿರುವ ಕಾಲ ಗಣನೆಯ ವಿವರಣೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಸೂರ್ಯ, ಚಂದ್ರ, ನಕ್ಷತ್ರಗಳಂತಹ ಖಗೋಳ ಕಾಯಗಳ ಪಾತ್ರ, ಭೂಮಿಯ ಚಲನೆ, ರಾತ್ರಿ, ಹಗಲಿನ ಮೇಲೆ ಅದರ ಪರಿಣಾಮ, ಋತುಗಳು, ಕ್ರಾಂತಿಚಕ್ರ, ರಾಶಿಚಕ್ರಗಳ ಬಗ್ಗೆ ತಿಳಿಹೇಳುವ ವಿವರಗಳು, ಪಂಚಾಂಗದ ವಿವರಗಳು, ಒಳ್ಳೆಯ, ಕೆಟ್ಟ ಮುಹೂರ್ತಗಳು, ಪಂಚಾಗ ಆಧಾರಿತ ಆಚರಣೆಗಳು ಸೇರಿದಂತೆ ಹಲವು ವಿಚಾರಗಳಿವೆ

ವಾಣಿಜ್ಯ, ಅರ್ಥಶಾಸ್ತ್ರದಲ್ಲಿ ಕೌಟಿಲ್ಯನ ನೀತಿ

* ವಾಣಿಜ್ಯ ಮತ್ತು ಅರ್ಥಶಾಸ್ತ್ರ ಎರಡು ಪಠ್ಯಗಳಲ್ಲೂ ಒಂದೇ ರೀತಿಯ ಪಾಠಗಳು ಇವೆ. ಹಿಂದಿನ ಕಾಲದಲ್ಲಿ ಭಾರತದಲ್ಲಿದ್ದ ವ್ಯಾಪಾರ ಕ್ರಮಗಳು, ನೀತಿಗಳು, ವ್ಯವಹಾರ ತಂತ್ರಗಳು ಇನ್ನಿತರ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ 

* ಎರಡೂ ಪಠ್ಯಗಳಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಎಂಬ ವಿಷಯದ ಕುರಿತು ಪಾಠ ಇದೆ. ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಮಾಹಿತಿಗಳನ್ನು ನೀಡಲಾಗಿದೆ. ಕೌಟಿಲ್ಯನ ವ್ಯಾಪಾರ ನೀತಿಗಳು, ತಂತ್ರಗಳು ಶತಮಾನಗಳಿಂದ ಜಗತ್ತಿನಾದ್ಯಂತ ಇರುವ ನೀತಿ ನಿರೂಪಕರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಕೋರ್ಸ್‌ನ ಉದ್ದೇಶದಲ್ಲಿ ಹೇಳಲಾಗಿದೆ

* ವಾಣಿಜ್ಯ ಪಠ್ಯದಲ್ಲಿ ಭಾರತೀಯ ನೈತಿಕತೆ ಮತ್ತು ಮೌಲ್ಯಗಳು ಎಂಬ ಇನ್ನೊಂದು ಪತ್ರಿಕೆ ಇದೆ. ವೇದ, ಉಪನಿಷದ್‌ಗಳಲ್ಲಿ ಹೇಳಲಾಗಿರುವ ಧರ್ಮ, ಕರ್ಮ, ಮೋಕ್ಷ ಎಂಬ ತತ್ವಗಳ ಪ್ರಸ್ಥಾಪ ಇಲ್ಲಿದೆ

ಆಧಾರ: ಪಿಟಿಐ, ಯುಜಿಸಿ ವೆಬ್‌ಸೈಟ್, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.