ADVERTISEMENT

ಆಳ-ಅಗಲ | ಭಾರತ–ಬ್ರಿಟನ್ ಮುಕ್ತ ವ್ಯಾಪಾರಕ್ಕೆ ನಿರ್ಣಾಯಕ ಹೆಜ್ಜೆ

ಭಾರತ–ಬ್ರಿಟನ್ ಮಹತ್ವದ ಒಪ್ಪಂದ; ಬಹುತೇಕ ಸರಕು, ಸೇವೆಗಳ ಮೇಲಿನ ಸುಂಕ ಪರಸ್ಪರ ರದ್ದು

​ಪ್ರಜಾವಾಣಿ ವಾರ್ತೆ
Published 12 ಮೇ 2025, 0:30 IST
Last Updated 12 ಮೇ 2025, 0:30 IST
ಭಾರತ ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ
ಭಾರತ ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ   
ಮೂರು ವರ್ಷಗಳ ಮಾತುಕತೆ ನಂತರ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಅಂತಿಮಗೊಂಡಿದೆ. ಎರಡೂ ರಾಷ್ಟ್ರಗಳು ಇದನ್ನು ಚಾರಿತ್ರಿಕ ಎಂದು ಬಣ್ಣಿಸಿವೆ. ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಭಾರತ ಮತ್ತು ಆರನೇ ದೊಡ್ಡ ಆರ್ಥಿಕತೆಯಾಗಿರುವ ಬ್ರಿಟನ್ ನಡುವಿನ ಈ ಒಪ್ಪಂದದಿಂದ ಸರಕು ಮತ್ತು ಸೇವೆಗಳ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಸಹಕಾರಿಯಾಗಲಿದೆ ಎಂದೂ ಹೇಳಲಾಗಿದೆ. ಬ್ರಿಟನ್‌ನ ಬಹುತೇಕ ವಸ್ತುಗಳು ಸುಂಕಮುಕ್ತವಾಗಿ ಭಾರತ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗಿದೆ. ಕೆಲವು ಕೃಷಿ ಉತ್ಪನ್ನಗಳನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.

* ಏನಿದು ಒಪ್ಪಂದ?

ಬಹುತೇಕ ಸರಕು ಮತ್ತು ಸೇವೆಗಳನ್ನು ಸುಂಕರಹಿತವಾಗಿ ನಡೆಸುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾಡಿಕೊಳ್ಳುವ ದಿಸೆಯಲ್ಲಿ ಭಾರತ ಮತ್ತು ಬ್ರಿಟನ್ ಮಾತುಕತೆ ಆರಂಭಿಸಿದ್ದು 2022ರ ಜನವರಿಯಲ್ಲಿ. ಮೂರು ವರ್ಷಗಳ ನಂತರ, 2025ರ ಮೇ 6ರಂದು  ಮಾತುಕತೆ ಯಶಸ್ವಿಯಾಗಿದೆ ಎಂದು ಘೋಷಣೆ ಹೊರಬಿದ್ದಿದೆ. ಐರೋಪ್ಯ ಒಕ್ಕೂಟದಿಂದ ಹೊರಬಂದ ನಂತರದ ಅತಿದೊಡ್ಡ ಹಾಗೂ ಆರ್ಥಿಕವಾಗಿ ನಿರ್ಣಾಯಕವಾದ ವ್ಯಾಪಾರ ಒಪ್ಪಂದ ಇದು ಎಂದು ಬ್ರಿಟನ್ ಬಣ್ಣಿಸಿದೆ. ಪ್ರಸ್ತುತ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳ ಪೈಕಿ ಭಾರತ ಒಂದಾಗಿದೆ. ಈ ಒಪ್ಪಂದದಿಂದ ಭಾರತಕ್ಕೆ ರಫ್ತಾಗುವ ಬ್ರಿಟನ್‌ನ ಶೇ 90ರಷ್ಟು ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳ್ಳಲಿದೆ. ಒಂದು ದಶಕದಲ್ಲಿ ಬ್ರಿಟನ್‌ನ ಶೇ 85ರಷ್ಟು ಉತ್ಪನ್ನಗಳು ಸುಂಕಮುಕ್ತವಾಗಲಿವೆ. 

* ಭಾರತದ ಉದ್ಯಮ ರಂಗಕ್ಕೆ ಏನು ಲಾಭವಾಗಲಿದೆ? 

ADVERTISEMENT

ಭಾರತವು ರಫ್ತು ಮಾಡುವ ಎಲ್ಲ ಸರಕುಗಳಿಗೆ ಬ್ರಿಟನ್‌ನಲ್ಲಿ ಮಾರುಕಟ್ಟೆ ಲಭ್ಯವಾಗಲಿದೆ. ಭಾರತವು ಬ್ರಿಟನ್‌ಗೆ ರಫ್ತು ಮಾಡುವ ಶೇ 99ರಷ್ಟು ಉತ್ಪನ್ನಗಳು ‘ಶೂನ್ಯ ಸುಂಕ’ದ ಮೂಲಕ ಆ ದೇಶ ತಲುಪಲಿವೆ. ಚರ್ಮ, ಪಾದರಕ್ಷೆ, ಸಿದ್ಧಉಡುಪು, ಜವಳಿ, ಆಭರಣ, ಪೀಠೋಪಕರಣ, ಕ್ರೀಡಾ ಸಾಮಗ್ರಿ, ರಾಸಾಯನಿಕಗಳು, ಯಾಂತ್ರಿಕ/ಎಲೆಕ್ಟ್ರಿಕಲ್ ವಸ್ತುಗಳು, ಖನಿಜಗಳು ಸೇರಿದಂತೆ ಸರಕುಗಳು ಶೂನ್ಯ ಸುಂಕದೊಂದಿಗೆ ಬ್ರಿಟನ್ ಪ್ರವೇಶಿಸಲಿವೆ. ಸದ್ಯ, ಇವುಗಳ ಮೇಲೆ ಶೇ 4–ಶೇ 16ರಷ್ಟು ಸುಂಕ ವಿಧಿಸಲಾಗುತ್ತಿದೆ. ಜತೆಗೆ, ದ್ವಿಪಕ್ಷೀಯ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಇದರಿಂದ ವಿಪುಲ ಅವಕಾಶಗಳು ಸಿಗಲಿವೆ. ಬ್ರಿಟನ್‌, ಭಾರತದ 16ನೇ ಅತಿ ದೊಡ್ಡ ವ್ಯಾ‍ಪಾರ ಪಾಲುದಾರನಾಗಿದ್ದರೆ, ಭಾರತವು ಬ್ರಿಟನ್‌ನ 11ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶ. ಎರಡೂ ರಾಷ್ಟ್ರಗಳ ನಡುವೆ ಪ್ರಸ್ತುತ ₹5 ಲಕ್ಷ ಕೋಟಿಯಷ್ಟು ದ್ವಿ‍ಪಕ್ಷೀಯ ವ್ಯಾಪಾರ ನಡೆಯುತ್ತಿದ್ದು, ಅದನ್ನು 2030ರ ಹೊತ್ತಿಗೆ ದ್ವಿಗುಣಗೊಳಿಸುವ ಉದ್ದೇಶ ಹೊಂದಲಾಗಿದೆ.

* ಸೂಕ್ಷ್ಮ ವಲಯಗಳಿಗೆ ಭಾರತ ರಕ್ಷಣೆ ಒದಗಿಸಿದೆಯೇ?

ಕೃಷಿ ಉತ್ಪನ್ನಗಳಾದ ಸೇಬು, ಚೀಸ್, ಓಟ್ಸ್, ಎಣ್ಣೆ, ಹಾಲಿನ ಉತ್ಪನ್ನಗಳು ಮುಂತಾದವನ್ನು ಒಪ್ಪಂದದಿಂದ ಹೊರಗಿಡಲಾಗಿದೆ. ಮುಕ್ತ ವ್ಯಾಪಾರ ಒಪ್ಪಂದದ ‘ಶೂನ್ಯ ಸುಂಕ’ ನೀತಿಯು ಇವುಗಳಿಗೆ ಅನ್ವಯಿಸುವುದಿಲ್ಲ. ಇದೇ ರೀತಿ ಕೈಗಾರಿಕಾ ಉತ್ಪನ್ನಗಳಾದ ಪ್ಲಾಸ್ಟಿಕ್‌, ವಜ್ರ, ಬೆಳ್ಳಿ, ಸ್ಮಾರ್ಟ್ ಫೋನ್‌, ಟಿ.ವಿ.ಕ್ಯಾಮೆರಾ ಟ್ಯೂಬ್‌, ಆಪ್ಟಿಕಲ್ ಫೈಬರ್ಸ್ ಮುಂತಾದವನ್ನು ಕೂಡ ಒಪ್ಪಂದದಿಂದ ಹೊರಗಿಡಲಾಗಿದೆ.

ತನ್ನ ದೇಶದ ಉತ್ಪಾದಕರ ಹಿತ ಕಾಯುವ ಸಲುವಾಗಿ ಭಾರತವು ಮತ್ತಷ್ಟು ಕ್ರಮಗಳನ್ನು ಕೂಡ ಕೈಗೊಂಡಿದೆ. ತನ್ನ ಕೆಲವು ಸರಕುಗಳ ಮೇಲಿನ ಸುಂಕವನ್ನು ದೀರ್ಘಾವಧಿಯಲ್ಲಿ ನಿಧಾನಕ್ಕೆ ಕಡಿಮೆ ಮಾಡುವುದಕ್ಕೆ ಇಲ್ಲವೇ ರದ್ದು ಮಾಡುವುದಕ್ಕೆ ಸಮ್ಮತಿಸಿದೆ. ಇಂಥ ಸರಕುಗಳಲ್ಲಿ ಸೆರಾಮಿಕ್ಸ್, ಪೆಟ್ರೋಲಿಯಂ ಉತ್ಪನ್ನಗಳು, ಇಂಗಾಲ, ಪಾಸ್ಫರಸ್, ಕ್ಲೊರೊಸಲ್ಫ್ಯೂರಿಕ್ ಆ್ಯಸಿಡ್, ಸಲ್ಫ್ಯೂರಿಕ್ ಆ್ಯಸಿಡ್, ಬೋರಿಕ್ ಆ್ಯಸಿಡ್ ಮುಂತಾದ ರಾಸಾಯನಿಕಗಳು ಸೇರಿವೆ.

* ಬ್ರಿಟನ್‌ಗೆ ಏನು ಲಾಭ?

ಸ್ಕಾಚ್ ವಿಸ್ಕಿಯ ಮೇಲೆ ಪ್ರಸ್ತುತ ಶೇ 150ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಆರಂಭದಲ್ಲಿ ಅದನ್ನು ಶೇ 75ಕ್ಕೆ ಮತ್ತು 10ನೇ ವರ್ಷದ ಹೊತ್ತಿಗೆ ಶೇ 40ಕ್ಕೆ ಇಳಿಸಲಾಗುವುದು. ವಿಸ್ಕಿ ಮಾರುಕಟ್ಟೆಯಲ್ಲಿ ಸ್ಕಾಚ್ ವಿಸ್ಕಿಯ ಪಾಲು ಶೇ 2.5 ಮಾತ್ರ. ಜತೆಗೆ, ಸುಂಕ ಇಳಿಕೆಯನ್ನು 10 ವರ್ಷಗಳಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಇದು ದೇಶೀ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತಿದೆ. 2022ರ ದತ್ತಾಂಶದ ಪ್ರಕಾರ, ಭಾರತದ ಸುಂಕ ಕಡಿತದ ಮೌಲ್ಯವು ₹4,560 ಕೋಟಿ. ಹತ್ತು ವರ್ಷಗಳಲ್ಲಿ ಇದರ ಮೌಲ್ಯವು ದುಪ್ಪಟ್ಟಾಗಲಿದೆ ಎನ್ನಲಾಗಿದೆ. ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿದ್ದು, ಬ್ರಿಟನ್‌ನ ಸರಕುಗಳಿಗೆ ಭಾರತ ಉತ್ತಮ ಮಾರುಕಟ್ಟೆಯಾಗಲಿದೆ ಎನ್ನುವುದು ಅದರ ಲೆಕ್ಕಾಚಾರ. 

* ಪೂರೈಕೆ ವಲಯವನ್ನೂ ಮುಕ್ತಗೊಳಿಸಲಾಗಿದೆಯೇ?

ಹೌದು. ಆದರೆ, ಅದನ್ನು ಸೂಕ್ಷ್ಮವಲ್ಲದ, ಕೇಂದ್ರ ಮಟ್ಟದ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ರಾಜ್ಯ ಮಟ್ಟದ ಮತ್ತು ಸ್ಥಳೀಯ ಸಂಸ್ಥೆಗಳನ್ನು ಇದರಿಂದ ಹೊರಗಿಡಲಾಗಿದೆ. ಸಾರ್ವಜನಿಕ ಸಂಸ್ಥೆಗಳಿಗೆ ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ₹200 ಕೋಟಿಗೂ ಹೆಚ್ಚು ಮೌಲ್ಯದ ದೇಶೀಯ ಟೆಂಡರ್‌ಗಳಲ್ಲಿ ಭಾಗವಹಿಸುವುದಕ್ಕೆ ಬ್ರಿಟನ್ ಪೂರೈಕೆದಾರರಿಗೆ ಅವಕಾಶ ನೀಡಲಾಗಿದೆ.

* ಒಪ್ಪಂದ ಎಂದಿನಿಂದ ಜಾರಿಗೆ ಬರಲಿದೆ?

ಒಪ್ಪಂದದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಅಗತ್ಯವಿದೆ. ನಂತರ ಅದು ಭಾರತ ಮತ್ತು ಬ್ರಿಟನ್‌ನ ಸಂಸತ್‌ಗಳಲ್ಲಿ ಅಂಗೀಕಾರವಾಗಬೇಕು. ಅದಕ್ಕೆ ಸುಮಾರು ಒಂದು ವರ್ಷ ಹಿಡಿಸಬಹುದು ಎನ್ನಲಾಗುತ್ತಿದೆ.

* ಸೇವಾ ವಲಯಕ್ಕೆ ಏನು ಲಾಭ?

ಎಫ್‌ಟಿಎಯಿಂದ ಸೇವಾ ವಲಯಕ್ಕೂ ಹಲವು ಅನುಕೂಲಗಳಾಗಲಿವೆ. ವ್ಯಾಪಾರದ ಉದ್ದೇಶಕ್ಕೆ ದೇಶಕ್ಕೆ ಭೇಟಿ ನೀಡುವವರು, ಕಾರ್ಪೊರೇಟ್‌ ಕ್ಷೇತ್ರದಲ್ಲಿ ತೊಡಗಿರುವವರು, ಗುತ್ತಿಗೆ ಸೇವೆಗಳ ಪೂರೈಕೆದಾರರು, ಸ್ವತಂತ್ರ ವೃತ್ತಿಪರರು ಮತ್ತು ಕಾರ್ಪೊರೇಟ್‌ ಉದ್ಯೋಗದ ಭಾಗವಾಗಿ ಭೇಟಿ ನೀಡುವ ಪಾಲುದಾರರು, ಹೂಡಿಕೆದಾರರು ಮತ್ತು ಅವರ ಮಕ್ಕಳಿಗೆ ಬ್ರಿಟನ್‌ಗೆ ಬಂದು ಹೋಗಲು ಅವಕಾಶ ನೀಡುವ ಬಗ್ಗೆ ಬ್ರಿಟನ್‌ ಭರವಸೆ ನೀಡಿದೆ. ಗುತ್ತಿಗೆ ಸೇವೆಗಳ ಪೂರೈಕೆಯ ಅಡಿಯಲ್ಲಿ ಬರುವ 36 ಉಪವಲಯಗಳು (ಯೋಗ ತರಬೇತುದಾರರು, ಶಾಸ್ತ್ರೀಯ ಸಂಗೀತಗಾರರು ಮತ್ತು ಪಾಕತಜ್ಞರು ಸೇರಿದಂತೆ ವರ್ಷಕ್ಕೆ 1,800 ಮಂದಿ) ಮತ್ತು ಸ್ವತಂತ್ರ ವೃತ್ತಿಪರರ ವಿಭಾಗದಲ್ಲಿ ಬರುವ 16 ಉಪವಲಯಗಳಲ್ಲಿ ತೊಡಗಿರುವವರ ಭೇಟಿಗೆ ಅನುಕೂಲ ಕಲ್ಪಿಸುವ ಭರವಸೆಯನ್ನೂ ಬ್ರಿಟನ್‌ ನೀಡಿದೆ.

* ಕಾರುಗಳ ಬೆಲೆ ಇಳಿಯುವುದೇ?

ಬ್ರಿಟನ್‌ನಲ್ಲಿ ತಯಾರಾಗುವ ಕಾರುಗಳ ಮೇಲಿನ ಸುಂಕವನ್ನು ಒಪ್ಪಂದದಲ್ಲಿ ಶೇ 100ರಿಂದ ಶೇ 10ಕ್ಕೆ ಇಳಿಸಲಾಗಿದೆ. ಇದು ಟಾಟಾ–ಜಾಗ್ವಾರ್‌ ಆ್ಯಂಡ್‌ ಲ್ಯಾಂಡ್‌ರೋವರ್‌ನಂತಹ (ಜೆಎಲ್‌ಆರ್‌) ಕಂಪನಿಗಳಿಗೆ ಅನುಕೂಲ ಕಲ್ಪಿಸಲಿದೆ. ಜೆಎಲ್‌ಆರ್‌, ರೋಲ್ಸ್‌–ರಾಯ್ಸ್‌, ಆಸ್ಟನ್‌ ಮಾರ್ಟಿನ್‌ ಮತ್ತು ಬೆಂಟ್ಲೆಯಂತಹ ಐಷಾರಾಮಿ ಕಾರುಗಳ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ. 

ಆದರೆ, ವಾಹನಗಳ ಮೇಲಿನ ಸುಂಕದ ಕಡಿತವು 10ರಿಂದ 15 ವರ್ಷಗಳಲ್ಲಿ ಕಡಿತಗೊಳ್ಳಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ವಾಹನಗಳ ಮೇಲಿನ ಸುಂಕ ರಿಯಾಯಿತಿ ಮೊದಲೇ ನಿಗದಿಪಡಿಸಿದ ಕೋಟಾಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ತಕ್ಷಣಕ್ಕೆ ಅಲ್ಲಿ ತಯಾರಾಗುವ ವಿಲಾಸಿ ಕಾರುಗಳ ಬೆಲೆ ಕಡಿಮೆಯಾಗದು ಎಂದು ಹೇಳಲಾಗುತ್ತಿದೆ. ಬ್ಯಾಟರಿಚಾಲಿತ ಕಾರುಗಳ ಕೋಟಾದ ಅಡಿಯಲ್ಲಿ ಆಮದು ಮಾಡುವ ಕಾರುಗಳಿಗೆ ನೀಡಲಾಗುವ ಸುಂಕದ ರಿಯಾಯಿತಿಯು ಕೆಲವು ಸಾವಿರ ಕಾರುಗಳಿಗೆ ಮಾತ್ರ ಸೀಮಿತವಾಗಿದೆ. 

14 ಒಪ್ಪಂದಗಳಿಗೆ ಸಹಿ

ಭಾರತವು ಈವರೆಗೆ 14 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದರಲ್ಲಿ ನಿರ್ದಿಷ್ಟ ದೇಶ ಹಾಗೂ ಆಸಿಯಾನ್‌ನಂತಹ ರಾಷ್ಟ್ರಗಳ ಗುಂಪುಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಸೇರಿವೆ

*ಭಾರತ–ಶ್ರೀಲಂಕಾ ಎಫ್‌ಟಿಎ

* ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ (ಎಸ್‌ಎಎಫ್‌ಟಿಎ) (ಇದರಲ್ಲಿ ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್‌, ಮಾಲ್ದೀವ್ಸ್‌ ಮತ್ತು ಅಫ್ಗಾನಿಸ್ತಾನ ಸೇರಿವೆ)

* ಭಾರತ–ನೇಪಾಳ ವ್ಯಾಪಾರ ಒಪ್ಪಂದ

* ಭಾರತ–ಭೂತಾನ್‌ ವಾಣಿಜ್ಯ ಮತ್ತು ಸರಕು, ಸೇವೆಗಳ ವಿನಿಮಯ ಒಪ್ಪಂದ

* ಭಾರತ–ಥಾಯ್ಲೆಂಡ್‌ ಎಫ್‌ಟಿಎ

* ಭಾರತ–ಸಿಂಗಪುರ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)

* ಭಾರತ- ದಕ್ಷಿಣ ಕೊರಿಯಾ ಸಿಇಪಿಎ

* ಭಾರತ–ಏಷಿಯಾನ್‌ ಸಿಇಸಿಎ– ಸರಕುಗಳು, ಸೇವೆಗಳ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಒಪ್ಪಂದ (ಬ್ರೂನೈ, ಕಾಂಬೋಡಿಯಾ, ಇಂಡೊನೇಷ್ಯಾ, ಲಾವೊಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪ್ಪೀನ್ಸ್‌, ಸಿಂಗಪುರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ)

* ಭಾರತ-ಜಪಾನ್ ಸಿಇಪಿಎ

* ಭಾರತ–ಮಾರಿಷಸ್‌ ಸಿಸಿಪಿಎ

* ಭಾರತ–ಯುಎಇ ಸಿಇಪಿಎ

* ಭಾರತ–ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ)

* ಭಾರತ– ಯುರೋಪಿನ ಮುಕ್ತ ವ್ಯಾಪಾರ ಒಕ್ಕೂಟ (ಇಎಫ್‌ಟಿಎ) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ)

ವಿವಿಧ ರಾಷ್ಟ್ರಗಳೊಂದಿಗೆ ಮಾತುಕತೆ

ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಭಾರತ ಮಾತುಕತೆ ನಡೆಸುತ್ತಿದೆ. ಚಿಲಿಯೊಂದಿಗಿನ ಮಾತುಕತೆ ಅಂತಿಮ ಹಂತ ತಲುಪಿದೆ. ಐರೋಪ್ಯ ಒಕ್ಕೂಟ, ಒಮಾನ್‌, ಪೆರು, ನ್ಯೂಜಿಲೆಂಡ್‌ ಜೊತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು,  ಆಸ್ಟ್ರೇಲಿಯಾದೊಂದಿಗೆ ಸಿಇಸಿಎ ಮತ್ತು ಶ್ರೀಲಂಕಾದೊಂದಿಗೆ ಈಗಾಗಲೇ ಜಾರಿಯಲ್ಲಿರುವ ಒಪ್ಪಂದವನ್ನು ಇನ್ನಷ್ಟು ವಿಸ್ತರಿಸಲು ಚರ್ಚೆ ನಡೆಯುತ್ತಿದೆ.  

ಆಧಾರ: ಪಿಟಿಐ, ರಾಯಿಟರ್ಸ್, ಯುಕೆ ಪಾರ್ಲಿಮೆಂಟ್⇒ವೆಬ್‌ಸೈಟ್, ವಿಶ್ವ ಆರ್ಥಿಕ ವೇದಿಕೆ, ಸಂಸತ್ತಿನಲ್ಲಿ ಸಚಿವರ ಉತ್ತರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.