
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ.1) 2026–27ನೇ ಸಾಲಿನ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಸರ್ಕಾರದ ಆರ್ಥಿಕ ಗುರಿಗಳ ನೀಲನಕ್ಷೆಯನ್ನು ಒಳಗೊಂಡ ಬಜೆಟ್ ಸಿದ್ಧಪಡಿಸುವುದು ಸವಾಲಿನ ಮತ್ತು ಸಂಕೀರ್ಣವಾದ ಕೆಲಸ. ಈ ದೀರ್ಘ ಪ್ರಕ್ರಿಯೆಯಲ್ಲಿ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರವು ಗಮನಾರ್ಹವಾದುದು. ಬಜೆಟ್ ತಯಾರಿಯ ವಿವಿಧ ಹಂತಗಳು ಮತ್ತು ಈ ಪ್ರಕ್ರಿಯೆಯಲ್ಲಿ ಹಣಕಾಸು ಸಚಿವರ ಜತೆಗೆ ಕೆಲಸ ನಿರ್ವಹಿಸಿದ ಅಧಿಕಾರಿಗಳ ಪರಿಚಯ ಇಲ್ಲಿದೆ.
ಬಜೆಟ್ ಅನ್ನು ಹೇಗೆ ರೂಪಿಸಲಾಗುತ್ತದೆ ಎನ್ನುವ ಕುತೂಹಲ ಜನರಲ್ಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಗುರಿಗಳು, ಅನುದಾನದ ವಿನಿಯೋಗ ಮತ್ತು ವರಮಾನ ಸಂಗ್ರಹದ ವಾರ್ಷಿಕ ದಿಕ್ಸೂಚಿಯಾದ ಬಜೆಟ್ ಅನ್ನು ರೂಪಿಸುವುದು ಗುರುತರವಾದ ಕಾರ್ಯ. ಸರ್ಕಾರದ ವಿವಿಧ ಇಲಾಖೆಗಳು ಮತ್ತು ಕೇಂದ್ರ ಸರ್ಕಾರದ ಹಲವು ಉನ್ನತ ಅಧಿಕಾರಿಗಳ ಹಲವು ತಿಂಗಳ ಶ್ರಮ ಬಜೆಟ್ ಹಿಂದೆ ಇರುತ್ತದೆ.
ಹಣಕಾಸು ಸಚಿವಾಲಯವು ನೀತಿ ಆಯೋಗವೂ ಸೇರಿದಂತೆ ಪ್ರಮುಖ ಸಂಸ್ಥೆ, ಇಲಾಖೆಗಳೊಂದಿಗೆ ಚರ್ಚಿಸಿ ಬಜೆಟ್ ರೂಪಿಸುತ್ತದೆ. ಸರ್ಕಾರದ ವೆಚ್ಚದ ಆದ್ಯತೆಗಳು, ವರಮಾನದ ಗುರಿ, ಆರ್ಥಿಕ ನೀತಿಗಳು ಮತ್ತು ಆರ್ಥಿಕ ಕಾರ್ಯತಂತ್ರಗಳನ್ನು ಬಜೆಟ್ ಒಳಗೊಂಡಿರುತ್ತದೆ. ಸಂಸತ್‌ನ ಪ್ರತಿವರ್ಷದ (ಫೆಬ್ರುವರಿಯಲ್ಲಿ ನಡೆಯುವ) ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಹಣಕಾಸು ಸಚಿವರು ಬಜೆಟ್ ಮಂಡಿಸುವುದು ಸಂಪ್ರದಾಯ. ಅದಕ್ಕೂ ಆರು ತಿಂಗಳ ಹಿಂದೆಯೇ (ಆಗಸ್ಟ್–ಸೆಪ್ಟೆಂಬರ್) ಅದರ ಸಿದ್ಧತೆಗಳು ಆರಂಭವಾಗಿರುತ್ತವೆ. ಹಲವು ಹಂತಗಳ ಮೂಲಕ ಬಜೆಟ್ ರೂಪು ಪಡೆಯುತ್ತದೆ.
ಸುತ್ತೋಲೆ:
ಕೇಂದ್ರ ಹಣಕಾಸು ಸಚಿವಾಲಯವು ಅಂದಾಜು ವರಮಾನ ಮತ್ತು ವೆಚ್ಚದ ಮಾಹಿತಿಯ ಸಂಬಂಧ ಎಲ್ಲ ಇಲಾಖೆಗಳಿಗೆ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೆ ಸುತ್ತೋಲೆ ಕಳಿಸುವುದರೊಂದಿಗೆ ಬಜೆಟ್ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರತಿಯೊಂದು ಇಲಾಖೆಯೂ ಮೂರು ರೀತಿಯ ಮಾಹಿತಿ ನೀಡುತ್ತದೆ; ಮುಂದಿನ ವರ್ಷದ ಬಜೆಟ್ ಅಂದಾಜು, ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಮತ್ತು ಹಿಂದಿನ ವರ್ಷದ ಸ್ವೀಕೃತಿ (ವರಮಾನ) ಮತ್ತು ವೆಚ್ಚದ ಮಾಹಿತಿಯನ್ನು ಇಲಾಖೆಗಳು ನೀಡುತ್ತವೆ.
ವರಮಾನ ಮತ್ತು ವೆಚ್ಚದ ಅಂದಾಜು:
ವಿವಿಧ ರಾಜ್ಯ/ಮೂಲಗಳಿಂದ ಬಂದ ಮಾಹಿತಿಯನ್ನು ಹಣಕಾಸು ಸಚಿವಾಲಯವು ವಿಶ್ಲೇಷಿಸಿ, ವರಮಾನ ಮತ್ತು ವೆಚ್ಚವನ್ನು ಅಂದಾಜಿಸುತ್ತದೆ. ಈ ಮೂಲಕ ಸರ್ಕಾರದ ವರಮಾನ ಮತ್ತು ವೆಚ್ಚದ ನಡುವಿನ ಅಂತರವನ್ನು (ಬಜೆಟ್ ಕೊರತೆ) ತಿಳಿಯಲಾಗುತ್ತದೆ.
ಬಜೆಟ್‌ಪೂರ್ವ ಸಮಾಲೋಚನೆ:
ಹಣಕಾಸು ಸಚಿವರು ರಾಜ್ಯಗಳ ಪ್ರತಿನಿಧಿಗಳು, ಉದ್ಯಮಿಗಳು, ಆರ್ಥಿಕ ತಜ್ಞರು, ಕಾರ್ಮಿಕ ಸಂಘಟನೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರ ನಿರೀಕ್ಷೆ ಮತ್ತು ಅಗತ್ಯಗಳ ಬಗ್ಗೆ ದೀರ್ಘ ಹಾಗೂ ವಿಸ್ತೃತ ಚರ್ಚೆ ನಡೆಸುತ್ತಾರೆ.
ಬಜೆಟ್ ಬೇಡಿಕೆಗಳನ್ನು ಅಂತಿಮಗೊಳಿಸುವುದು:
ವಿವಿಧ ವಲಯ/ರಾಜ್ಯ/ಇಲಾಖೆಗಳ ಬೇಡಿಕೆಗಳ ಬಗ್ಗೆ ಹಣಕಾಸು ಸಚಿವರು ಸಚಿವ ಸಂಪುಟದೊಂದಿಗೆ, ಪ್ರಧಾನಿ ಅವರೊಂದಿಗೆ ಚರ್ಚಿಸುತ್ತಾರೆ. ಯಾವ ಕ್ಷೇತ್ರ, ಇಲಾಖೆಗೆ ಎಷ್ಟು ಅನುದಾನ ನೀಡಬೇಕು ಎನ್ನುವ ಬಗ್ಗೆ ಸಮಾಲೋಚಿಸುತ್ತಾರೆ. ವರಮಾನ, ವೆಚ್ಚಗಳ ಅಂದಾಜು ಆಧರಿಸಿ ಹಣಕಾಸು ಸಚಿವರು ವಿವಿಧ ಇಲಾಖೆಗಳಿಗೆ ಅನುದಾನ ನಿಗದಿಯ ಬಗ್ಗೆ ತೀರ್ಮಾನಿಸುತ್ತಾರೆ.
ಮಂಡನೆ:
ಬಜೆಟ್ ಅಧಿವೇಶನದ ವೇಳೆ ಸಂಸತ್ತಿನಲ್ಲಿ ಹಣಕಾಸು ಸಚಿವರು ಬಜೆಟ್ ಅನ್ನು ಮಂಡಿಸುತ್ತಾರೆ. ಸರ್ಕಾರ ಆರ್ಥಿಕ ಕಾರ್ಯತಂತ್ರ, ವರಮಾನ, ವೆಚ್ಚದ ಆದ್ಯತೆಗಳು, ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳು ಬಜೆಟ್‌ನಲ್ಲಿ ವ್ಯಕ್ತವಾಗುತ್ತವೆ. ಸರ್ಕಾರ ಬಜೆಟ್‌ಗೆ ಸಂಸತ್ತಿನ ಅಂಗೀಕಾರ ಪಡೆಯಬೇಕಾಗುತ್ತದೆ. ಹೊಸ ಆರ್ಥಿಕ ವರ್ಷದ ಆರಂಭದ ದಿನ ಅಂದರೆ ಏಪ್ರಿಲ್ 1ರಿಂದ ಬಜೆಟ್ ಜಾರಿಗೆ ಬರುತ್ತದೆ.
1.ಅನುರಾಧ ಠಾಕೂರ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ
ಬಜೆಟ್‌ನ ಮೂಲ ಶಿಲ್ಪಿ ಇವರು. ಬಜೆಟ್ ಸಿದ್ಧಪಡಿಸುವ ಇಲಾಖೆಯ ಮುಖ್ಯಸ್ಥರಾಗಿ ಸಂಪನ್ಮೂಲಗಳ ಹಂಚಿಕೆ ಮತ್ತು 2026–27ರ ಅರ್ಥವ್ಯವಸ್ಥೆಯ ಚೌಕಟ್ಟುಗಳನ್ನು ನಿರ್ಧರಿಸುವ ಪ್ರಮುಖ ಅಧಿಕಾರಿ. ಬಜೆಟ್ ದಾಖಲೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಹೊಂದಿರುವ ಬಜೆಟ್ ವಿಭಾಗದ ನೇತೃತ್ವ ಇವರದ್ದು. 1994ರ ಹಿಮಾಚಲ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಅನುರಾಧ ಅವರಿಗೆ ಇದು ಮೊದಲ ಬಜೆಟ್. ಈ ಇಲಾಖೆಯ ನೇತೃತ್ವ ವಹಿಸಿದ ಮೊದಲ ಮಹಿಳಾ ಅಧಿಕಾರಿಯೂ ಹೌದು.
2. ಅರವಿಂದ ಶ್ರೀವಾಸ್ತವ, ರೆವೆನ್ಯೂ ಕಾರ್ಯದರ್ಶಿ
ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಅರವಿಂದ ಶ್ರೀವಾಸ್ತವ ಅವರದ್ದು ತೆರಿಗೆ ಪ್ರಸ್ತಾವನೆಗಳನ್ನು (ಬಜೆಟ್ ಭಾಷಣದ ‘ಬಿ’ ಭಾಗ) ಸಿದ್ಧಪಡಿಸುವ ಜವಾಬ್ದಾರಿ. ಇವರ ತಂಡವು ನೇರ ತೆರಿಗೆ–ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಮತ್ತು ಪರೋಕ್ಷ ತೆರಿಗೆಗಳನ್ನು (ಜಿಎಸ್‌ಟಿ, ಕಸ್ಟಮ್ಸ್) ನಿರ್ವಹಿಸುತ್ತದೆ. ರೆವೆನ್ಯೂ ಕಾರ್ಯದರ್ಶಿಯಾಗಿ ಶ್ರೀವಾಸ್ತವ ಅವರಿಗೆ ಇದು ಮೊದಲ ಬಜೆಟ್ ಆದರೂ, ಹಿಂದೆ ಅವರು ಹಣಕಾಸು ಸಚಿವಾಲಯದ ಬಜೆಟ್ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು. ಆ ಬಳಿಕ ಪ್ರಧಾನಿ ಕಚೇರಿಗೆ ನಿಯೋಜನೆಗೊಂಡಿದ್ದರು. ವರಮಾನ ಸಂಗ್ರಹದ ವಿಚಾರದಲ್ಲಿ ಇವರ ಪಾತ್ರ ನಿರ್ಣಾಯಕವಾಗಿದೆ.
3. ವುಮಲುನಮಾಂಗ ವುಅಲ್ನಮ್, ವೆಚ್ಚ ಕಾರ್ಯದರ್ಶಿ
ಸರ್ಕಾರ ಮಾಡುವ ವೆಚ್ಚ, ಸಬ್ಸಿಡಿ ಸರಳೀಕರಣ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಮೇಲುಸ್ತುವಾರಿ ಇವರದ್ದು. ವಿತ್ತೀಯ ಕೊರತೆಯನ್ನು ನಿಭಾಯಿಸಲು ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದರ ಜೊತೆಗೆ ಮುಂದಿನ ಆರ್ಥಿಕ ವರ್ಷಕ್ಕೆ ಅಗತ್ಯವಾದ ಮಾರ್ಗದರ್ಶನವನ್ನೂ ಇವರ ಇಲಾಖೆ ನೀಡುತ್ತದೆ.
4. ಎಂ.ನಾಗರಾಜು, ಆರ್ಥಿಕ ಸೇವೆಗಳ ಕಾರ್ಯದರ್ಶಿ
ಇವರ ಇಲಾಖೆಯು ಸರ್ಕಾರದ ಆರ್ಥಿಕ ಒಳಗೊಳ್ಳುವಿಕೆ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಚಾಲನಾ ಶಕ್ತಿ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಪಿಂಚಣಿ ವ್ಯವಸ್ಥೆಗಳ ಹಣಕಾಸಿನ ಸ್ಥಿತಿಗತಿಗಳ ಮೇಲೆ ಇವರ ಇಲಾಖೆಯು ನಿಗಾ ಇಡುತ್ತದೆ. ಸಾಲ ನೀಡಿಕೆ ಹೆಚ್ಚಳ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳೂ ಸೇರಿದಂತೆ ಸರ್ಕಾರದ ಹಣಕಾಸಿನ ಕಾರ್ಯಸೂಚಿಗಳ ಅನುಷ್ಠಾನದಲ್ಲಿ ಈ ಇಲಾಖೆಯದ್ದು ನಿರ್ಣಾಯಕ ಪಾತ್ರ.
5. ಅರುಣೀಶ್ ಚಾವ್ಲಾ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಕಾರ್ಯದರ್ಶಿ
ಸರ್ಕಾರದ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣ ಯೋಜನೆಗಳ ನೀಲನಕ್ಷೆಯ ಜವಾಬ್ದಾರಿ ಹೊತ್ತಿರುವ ಇಲಾಖೆಯ ನೇತೃತ್ವ ಇವರದ್ದು. ಕೇಂದ್ರ ಸರ್ಕಾರಿ ವಲಯದ ಉದ್ದಿಮೆಗಳಲ್ಲಿರುವ ಸರ್ಕಾರದ ಪಾಲಿನ ಷೇರು ಮಾರಾಟದಿಂದ ಬರುವ ತೇರಿಗೆಯೇತರ ವರಮಾನದ ಗುರಿಗಳನ್ನು ನಿರ್ವಹಿಸುವುದು ಇವರ ಕೆಲಸ.
6. ಕೆ.ಮೋಸೆಸ್ ಚಾಲಾಯಿ, ಸಾರ್ವಜನಿಕ ವಲಯದ ಉದ್ದಿಮೆಗಳ ಇಲಾಖೆ ಕಾರ್ಯದರ್ಶಿ
ಇಲಾಖೆಯ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಬಂಡವಾಳ ವೆಚ್ಚದ ಯೋಜನೆಗಳು ಮತ್ತು ಬಜೆಟ್‌ನಲ್ಲಿ ಹಂಚಿಕೆ ಮಾಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆಯಾಗುವುದನ್ನು ಖಾತ್ರಿ ಪಡಿಸುವುದು ಇವರ ಜವಾಬ್ದಾರಿ. ಆಸ್ತಿ ನಗದೀಕರಣ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಒಟ್ಟಾರೆ ಹಣಕಾಸಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುವ ಹೊಣೆಯೂ ಇವರ ಮೇಲಿದೆ.
7. ವಿ.ಅನಂತ ನಾಗೇಶ್ವರನ್, ಮುಖ್ಯ ಆರ್ಥಿಕ ಸಲಹೆಗಾರ
ಕೇಂದ್ರ ಸರ್ಕಾರದ ಆರು ಇಲಾಖೆಗಳಲ್ಲದೆ, ಮುಖ್ಯ ಆರ್ಥಿಕ ಸಲಹೆಗಾರರ ಕಚೇರಿ ಕೂಡ ಬಜೆಟ್ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಇವರ ಕಚೇರಿಯು ಬಜೆಟ್‌ಗಾಗಿ ದೇಶದ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖವಾದ ಮಾಹಿತಿಗಳನ್ನು ನೀಡುತ್ತದೆ. ಆರ್ಥಿಕ ಪ್ರಗತಿಯ ಮುನ್ಸೂಚನೆ, ಕೃಷಿ, ಕೈಗಾರಿಕೆ, ಸೇವಾ ವಲಯಗಳು ಸೇರಿದಂತೆ ವಿವಿಧ ವಲಯಗಳ ಸಾಧನೆಗಳ ಪರಾಮರ್ಶೆ ಮತ್ತು ಜಾಗತಿಕ ಮಟ್ಟದ ಅಪಾಯ/ಸವಾಲುಗಳನ್ನು ಮೌಲ್ಯಮಾಪನ ಮಾಡಿದ ವಿವರಗಳನ್ನು ನೀಡುತ್ತದೆ. ಇದಲ್ಲದೇ, ಪ್ರಮುಖ ಆರ್ಥಿಕ ಸುಧಾರಣೆಗಳು, ಆರ್ಥಿಕ ನೀತಿಗಳು ಮತ್ತು ಹಣಕಾಸಿನ ಕಾರ್ಯತಂತ್ರಗಳ ಬಗ್ಗೆ ಹಣಕಾಸು ಸಚಿವರಿಗೆ ಸಲಹೆಯನ್ನೂ ನೀಡುತ್ತದೆ.
ಬಜೆಟ್ ಪ್ರಕ್ರಿಯೆ ಅಂತಿಮ ಹಂತ ಮುಟ್ಟಿರುವುದನ್ನು ಹಣಕಾಸು ಇಲಾಖೆಯು ಆಯೋಜಿಸುವ ‘ಹಲ್ವಾ ಸಮಾರಂಭ’ ಎನ್ನುವ ಸಾಂಕೇತಿಕ ಕಾರ್ಯಕ್ರಮದ ಮೂಲಕ ಸೂಚಿಸಲಾಗುತ್ತದೆ. ಬಜೆಟ್ ಪ್ರತಿಗಳು ಮುದ್ರಣಗೊಳ್ಳಲು ಆರಂಭವಾಗಿರುವುದನ್ನೂ ಕಾರ್ಯಕ್ರಮವು ಸಂಕೇತಿಸುತ್ತದೆ.
ಆಧಾರ: ಪಿಟಿಐ, ಮಾಧ್ಯಮ ವರದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.