ADVERTISEMENT

ವಿದೇಶ ವಿದ್ಯಮಾನ: ಟ್ರಂಪ್ ಕಣ್ಣು ಯಾರ ಮೇಲೆ?

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 0:20 IST
Last Updated 7 ಜನವರಿ 2026, 0:20 IST
<div class="paragraphs"><p>ಡೊನಾಲ್ಡ್‌ ಟ್ರಂಪ್‌</p></div>

ಡೊನಾಲ್ಡ್‌ ಟ್ರಂಪ್‌

   
ಸಾಮ್ರಾಜ್ಯಶಾಹಿ ಮನೋಭಾವ
ತನ್ನ ಸಾಮ್ರಾಜ್ಯಶಾಹಿ ಮನೋಭಾವ ಮತ್ತು ತೈಲ ಹಾಗೂ ಆರ್ಥಿಕ ಅಗತ್ಯಗಳಿಗಾಗಿ ವಿವಿಧ ನೆಪವೊಡ್ಡಿ ವಿದೇಶಗಳ ಮೇಲೆ ದಾಳಿ ಮಾಡುವುದು, ನಿರ್ಬಂಧ ವಿಧಿಸುವುದು ಅಮೆರಿಕಕ್ಕೆ ಹೊಸದೇನಲ್ಲ. ಅದು ‘ದೊಡ್ಡಣ್ಣ’ನ ದರ್ಪವನ್ನು ಮುಂದುವರಿಸುತ್ತಲೇ ಇದೆ. ದಿಢೀರ್ ಕಾರ್ಯಾಚರಣೆ ನಡೆಸಿ, ವೆನೆಜುವೆಲಾದ ಅಧ್ಯಕ್ಷರ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ತನ್ನ ದೇಶದಲ್ಲಿ ಸೆರೆಯಲ್ಲಿಟ್ಟಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮುಂದಿನ ಗುರಿ ಯಾರು ಎನ್ನುವುದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿದೇಶಿ ನಾಯಕರನ್ನು ವಿನಾಕಾರಣ ಕಟಕಟೆಯಲ್ಲಿ ನಿಲ್ಲಿಸುವ ಸ್ವಭಾವ, ಹಠಾತ್ ಕೆರಳುವ ಗುಣ, ಆಕ್ರಮಣಕಾರಿ ವರ್ತನೆ, ಕ್ಷಿಪ್ರ ಕಾರ್ಯಾಚರಣೆಗಳಿಗೆ ಹೆಸರಾದ ಟ್ರಂಪ್ ಅವರು ಪ್ರಸ್ತುತ ಗ್ರೀನ್‌ಲ್ಯಾಂಡ್, ಕೊಲಂಬಿಯಾ, ಇರಾನ್, ಮೆಕ್ಸಿಕೊ ಮತ್ತು ಕ್ಯೂಬಾ ಮೇಲೆ ಕಣ್ಣು ನೆಟ್ಟಿದ್ದಾರೆ. ಸುಭದ್ರ ಸರ್ಕಾರ, ಡ್ರಗ್ಸ್ ವಿರುದ್ಧದ ಹೋರಾಟ ಮುಂತಾದ ಕಾರಣಗಳನ್ನು ಮುಂದು ಮಾಡಿ, ಆ ದೇಶಗಳನ್ನು, ಅಲ್ಲಿನ ನಾಯಕರನ್ನು ‘ಮಣಿಸುವ’ ಸಾಧ್ಯತೆ ಇದೆ ಎನ್ನಲಾಗುತ್ತಿದೆ..

ಗ್ರೀನ್‌ಲ್ಯಾಂಡ್‌

ಉತ್ತರ ಅಮೆರಿಕದಲ್ಲಿ ಆರ್ಕ್‌ಟಿಕ್ ಸಾಗರ ಮತ್ತು ಉತ್ತರ ಅಟ್ಲಾಂಟಿಕ್‌ ಸಾಗರದ ನಡುವೆ ಇರುವ ದ್ವೀಪ ಗ್ರೀನ್‌ಲ್ಯಾಂಡ್‌. ಹಿಂದೆ ಡೆನ್ಮಾರ್ಕ್‌ನ ವಸಾಹತು ಆಗಿದ್ದ ಈ ದ್ವೀಪ ಆಡಳಿತದಲ್ಲಿ ಸ್ವಾಯತ್ತೆ ಹೊಂದಿದೆ. ಆದರೆ ಇನ್ನೂ ಸಂಪೂರ್ಣವಾಗಿ ಸ್ವತಂತ್ರ ರಾಷ್ಟ್ರವಲ್ಲ. ಡೆನ್ಮಾರ್ಕ್‌ನ ಅಧೀನದಲ್ಲಿದೆ. ನ್ಯಾಟೊದೊಂದಿಗೆ ಗುರುತಿಸಿಕೊಂಡಿದ್ದರೂ ಅದು ಡೆನ್ಮಾರ್ಕ್‌ ಸದಸ್ಯತ್ವದ ಭಾಗವಾಗಿದೆ. ಇಲ್ಲಿನ ಜನಸಂಖ್ಯೆ 57 ಸಾವಿರ ಮಾತ್ರ. ಸ್ಥಳೀಯವಾಗಿ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಿದ್ದರೂ ಡೆನ್ಮಾರ್ಕ್‌ ಆಡಳಿತದ ನೆರಳಿನಲ್ಲಿಯೇ ಕಾರ್ಯಾಚರಿಸುತ್ತದೆ. ಅಮೆರಿಕದಿಂದ ಗ್ರೀನ್‌ಲ್ಯಾಂಡ್‌ 2,700ರಿಂದ 4,900 ಕಿ.ಮೀ ದೂರದಲ್ಲಿದೆ (ನಿರ್ದಿಷ್ಟ ಸ್ಥಳಕ್ಕೆ ಅನುಗುಣವಾಗಿ).

ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಗ್ರೀನ್‌ಲ್ಯಾಂಡ್‌ ತನಗೆ ಬೇಕು ಎಂದು ಹೇಳುತ್ತಾ ಬಂದಿದ್ದ ಡೊನಾಲ್ಡ್‌ ಟ್ರಂಪ್‌, ವೆನೆಜುವೆಲಾದಲ್ಲಿ ಕಾರ್ಯಾಚರಣೆ ನಡೆಸಿದ ನಂತರ, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ‘ನಮಗೆ ಅಲ್ಲಿನ ನೈಸರ್ಗಿಕ ಸಂ‍ಪನ್ಮೂಲಗಳು ಬೇಡ. ದೇಶದ ಭದ್ರತೆಯ ದೃಷ್ಟಿಯಿಂದ ಆ ದ್ವೀಪ ಬೇಕು’ ಎಂದಿದ್ದಾರೆ. ಇದನ್ನು ವಿರೋಧಿಸಿ ಗ್ರೀನ್‌ಲ್ಯಾಂಡ್‌  ಸರ್ಕಾರದ ಮುಖ್ಯಸ್ಥ ಜೆನ್ಸ್‌ ಫ್ರೆಡರಿಕ್‌ ನೀಲ್ಸೆನ್‌ ಮತ್ತು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟ ಫ್ರೆಡರಿಕ್ಸನ್‌ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಐರೋಪ್ಯ ಒಕ್ಕೂಟದ ನಾಯಕರು ಗ್ರೀನ್‌ಲ್ಯಾಂಡ್‌, ಡೆನ್ಮಾರ್ಕ್‌ ಬೆಂಬಲಕ್ಕೆ ನಿಂತಿದ್ದಾರೆ.

ಗ್ರೀನ್‌ಲ್ಯಾಂಡ್‌ನ ವಾಯವ್ಯಕ್ಕಿರುವ ಪಿಟಿಫ್ಫಿಕ್‌ ನೆಲೆಯಲ್ಲಿ ಅಮೆರಿಕದ ಸೇನೆಯ ಉಪಸ್ಥಿತಿ ಇದೆ. ಅದನ್ನು ಇನ್ನಷ್ಟು ವಿಸ್ತರಿಸಲು ಅದು ಬಯಸಿದೆ. ಈ ಭಾಗದ ಸಾಗರದಲ್ಲಿ ರಷ್ಯಾ ಮತ್ತು ಚೀನಾದ ಉಪಸ್ಥಿತಿ ಹೆಚ್ಚುತ್ತಿದೆ. ಅವುಗಳ ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಓಡಾಡುತ್ತಿವೆ. ವಿರೋಧಿ ರಾಷ್ಟ್ರಗಳ ಚಲನವಲನಗಳ ಮೇಲೆ ನಿಗಾ ಇಡಲು ಇಲ್ಲಿ ಅತ್ಯಾಧುನಿಕ ರೇಡಾರ್‌ ತಂತ್ರಜ್ಞಾನ ಅಳವಡಿಸುವುದು ಅದರ ಯೋಚನೆ. 

ಇದರೊಂದಿಗೆ, ನೈಸರ್ಗಿಕವಾಗಿಯೂ ಇದು ಸಂಪನ್ಮೂಲ ರಾಷ್ಟ್ರ. ವಿವಿಧ ಉದ್ಯಮಗಳಿಗೆ ಬೇಕಾದ ಅಪರೂಪದ ಖನಿಜ ಲೋಹಗಳು, ಲಿಥಿಯಂ, ತೈಲ, ನೈಸರ್ಗಿಕ ಅನಿಲದ ನಿಕ್ಷೇಪ ಇಲ್ಲಿ ಕಂಡು ಬಂದಿದೆ. ಟ್ರಂಪ್‌ ಅವರು ಮಾತಿನಲ್ಲಿ ದೇಶದ ಭದ್ರತೆಗಾಗಿ ದ್ವೀಪ ಅಗತ್ಯ ಎಂದು ಹೇಳುತ್ತಿದ್ದರೂ, ಅಲ್ಲಿನ ನೈಸರ್ಗಿಕ ಸಂಪನ್ಮೂಲದ ಮೇಲೂ ಅವರು ಕಣ್ಣು ನೆಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆನ್ಸ್‌ ಫ್ರೆಡರಿಕ್‌ ನೀಲ್ಸೆನ್‌

ಕೊಲಂಬಿಯಾ

ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆಹಿಡಿದು ಹೊತ್ತೊಯ್ದ ಕೆಲವೇ ಗಂಟೆಗಳ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಾಯಲ್ಲಿ ಬಂದ ಹೆಸರು ಕೊಲಂಬಿಯಾ. ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೊ ಅವರಿಗೆ ಟ್ರಂಪ್ ಎಚ್ಚರಿಕೆಯ ಸಂದೇಶ ನೀಡಿದ್ದೂ ಅಲ್ಲದೇ, ಅವರ ವಿರುದ್ಧ ಸೇನಾ ಕಾರ್ಯಾಚರಣೆ ಉತ್ತಮ ಆಯ್ಕೆಯಾಗಿದೆ ಎಂದಿದ್ದರು.

ಕೊಲಂಬಿಯಾ, ದಕ್ಷಿಣ ಅಮೆರಿಕದ ನಾಲ್ಕನೇ ಅತ್ಯಂತ ದೊಡ್ಡ ದೇಶವಾಗಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವೂ ಆಗಿದೆ. ಅದು ವೆನೆಜುವೆಲಾದ ಪಶ್ಚಿಮ ಗಡಿಗೆ ಹೊಂದಿಕೊಂಡಿದೆ. ಅಪಾರ ತೈಲ ನಿಕ್ಷೇಪಗಳಿರುವ, ಚಿನ್ನ, ಬೆಳ್ಳಿ, ಪ್ಲಾಟಿನಂ, ಲಿಥಿಯಂ, ಪಚ್ಚೆಯಂಥ ಅಪರೂಪದ ಖನಿಜಗಳಿಗೆ ಹೆಸರಾಗಿದೆ. ಮಾದಕ ವಸ್ತು ಕೊಕೇನ್‌ ಬಳಕೆ ಮತ್ತು ಮಾರಾಟ ಅಲ್ಲಿ ವ್ಯಾಪಕವಾಗಿದೆ. ಎಡಪಂಥೀಯರಾಗಿದ್ದ ಗುಸ್ತಾವೊ ಪೆಟ್ರೊ ಕೊಲಂಬಿಯಾದಲ್ಲಿ 2022ರ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೇರಿದ್ದರು. ಅವರು ಮಾದಕ ವಸ್ತು ಮಾಫಿಯಾದೊಂದಿಗೆ ನಂಟು ಹೊಂದಿದ್ದಾರೆ ಎನ್ನುವುದು ಅಮೆರಿಕದ ಆರೋಪ. ‘ಕೊಕೇನ್ ತಯಾರಿಸಿ, ಅದನ್ನು ಅಮೆರಿಕಕ್ಕೆ ಮಾರುವ ಒಬ್ಬ ರೋಗಗ್ರಸ್ತ ಮನುಷ್ಯ ಕೊಲಂಬಿಯಾ ಅಧಿಕಾರ ಹಿಡಿದಿದ್ದಾನೆ. ಇದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ’ ಎಂದು ಟ್ರಂಪ್ ಸೂಚ್ಯವಾಗಿ ಹೇಳಿದ್ದಾರೆ. ಡ್ರಗ್ಸ್ ತಡೆಗಾಗಿ ಅಮೆರಿಕವು ಕೊಲಂಬಿಯಾಕ್ಕೆ ಪ್ರತಿವರ್ಷ ಕೋಟ್ಯಂತರ ಡಾಲರ್‌ ಸೇನಾ ನೆರವು ನೀಡುತ್ತಿದೆ.

ಗುಸ್ತಾವೊ ಮತ್ತು ಡೊನಾಲ್ಡ್‌ ಟ್ರಂಪ್‌

ಇರಾನ್‌

ಪಶ್ಚಿಮ ಏಷ್ಯಾದಲ್ಲಿರುವ, ಆಯತೊಲ್ಲಾ ಖಮೇನಿ ನಾಯಕತ್ವದ ಇರಾನ್‌ ಮೊದಲಿನಿಂದಲೂ ಅಮೆರಿಕವನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ರಾಷ್ಟ್ರ. ಇರಾನ್‌ ಅಣ್ವಸ್ತ್ರ ಹೊಂದುವುದು ಅಮೆರಿಕಕ್ಕೆ ಇಷ್ಟವಿಲ್ಲ. ಇರಾನಿನಲ್ಲಿ ಕೆಲವು ದಿನಗಳಿಂದ ಆಡಳಿತ ವಿರೋಧಿ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್‌ ಆಯ್ದುಕೊಂಡಿರುವ ಮಾರ್ಗವನ್ನು ಖಂಡಿಸಿ ಟ್ರಂಪ್‌ ಅವರು ಆರಂಭದಲ್ಲಿ ಹೇಳಿಕೆ ನೀಡಿದ್ದರು. ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿ ಹೋರಾಟವನ್ನು ಹತ್ತಿಕ್ಕಲು ಅಲ್ಲಿನ ಆಡಳಿತ ಪ್ರಯತ್ನಿಸುತ್ತಿದೆ. ಇದೇ ಕ್ರಮವನ್ನು ಮುಂದುವರಿಸಿದರೆ ನಾವು ಬಲವಾದ ಏಟು ನೀಡಬೇಕಾಗುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

‘ಇರಾನ್‌ ಬೆಳವಣಿಗೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಹಿಂದೆ ಮಾಡಿದಂತೆ ಅವರು ಈಗಲೂ ಜನರನ್ನು ಕೊಂದರೆ, ಅವರು ಅಮೆರಿಕದಿಂದ ಬಲವಾದ ಏಟು ತಿನ್ನಲಿದ್ದಾರೆ’ ಎಂದು ಹೇಳಿದ್ದಾರೆ. ಕಳೆದ ವರ್ಷ ಇಸ್ರೇಲ್‌–ಇರಾನ್‌ ಕದನದ ಕೊನೆಯ ಹಂತದಲ್ಲಿ ಅಮೆರಿಕ ಇರಾನಿನ ಅಣ್ವಸ್ತ್ರ ಅಭಿವೃದ್ಧಿ ಘಟಕಗಳನ್ನು ಗುರಿಯಾಗಿಸಿಕೊಂಡು ಬಾಂಬ್‌ ದಾಳಿ ನಡೆಸಿತ್ತು. ಈಗ ವೆನೆಜುವೆಲಾದಲ್ಲಿ ಅಮೆರಿಕ ಕೈಗೊಂಡ ಸೇನಾ ಕಾರ್ಯಾಚರಣೆಯನ್ನು ಇರಾನ್‌ ಬಲವಾಗಿ ಖಂಡಿಸಿದೆ.

ಆಯತೊಲ್ಲಾ ಖಮೇನಿ

ಮೆಕ್ಸಿಕೊ

ಅಮೆರಿಕದ ದಕ್ಷಿಣಕ್ಕೆ ಇರುವ ನೆರೆ ರಾಷ್ಟ್ರ ಮೆಕ್ಸಿಕೊದೊಂದಿಗೂ ಟ್ರಂಪ್‌ ಸಂಬಂಧ ಉತ್ತಮವಾಗಿಲ್ಲ. ದಕ್ಷಿಣ ಅಮೆರಿಕದ ರಾಷ್ಟ್ರಗಳಿಂದ ಮೆಕ್ಸಿಕೊ ಮಾರ್ಗವಾಗಿ ಅಕ್ರಮ ವಲಸಿಗರು ಅಮೆರಿಕಕ್ಕೆ ಬರುತ್ತಾರೆ ಎಂಬುದು ಅವರ ಅಸಮಾಧಾನಕ್ಕೆ ಒಂದು ಕಾರಣವಾದರೆ, ಭಾರಿ ಪ್ರಮಾಣದ ಮಾದಕ ವಸ್ತುಗಳು ಅಮೆರಿಕ ಪ್ರವೇಶಿಸಲು ಮೆಕ್ಸಿಕೊ ರಹದಾರಿಯಾಗಿದೆ ಎಂಬುದು ಟ್ರಂಪ್‌ ಕೋಪಕ್ಕೆ ಮತ್ತೊಂದು ಕಾರಣ. ಅಕ್ರಮ ವಲಸಿಗರನ್ನು ತಡೆಯಲು ತಮ್ಮ ಮೊದಲ ಅವಧಿಯಲ್ಲೇ ಅವರು ಮೆಕ್ಸಿಕೊ ಗಡಿಯಲ್ಲಿ ದೊಡ್ಡ ಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ಕಳೆದ ವರ್ಷ ಮತ್ತೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಮೆಕ್ಸಿಕೊ ಕೊಲ್ಲಿಯನ್ನು ಅಮೆರಿಕ ಕೊಲ್ಲಿ ಎಂದು ಮರುನಾಮಕರಣ ಮಾಡಿದ್ದರು.

ಎರಡು ದಿನಗಳ ಹಿಂದೆ ಮಾತನಾಡಿದ್ದ ಟ್ರಂಪ್‌, ‘ಅಮೆರಿಕದ ಒಳಕ್ಕೆ ಬರುತ್ತಿರುವ ಅಕ್ರಮ ವಲಸಿಗರು ಮತ್ತು ಮಾದಕ ದ್ರವ್ಯಗಳ ಹರಿವು ತಡೆಗೆ ಮೆಕ್ಸಿಕೊ ಆಡಳಿತ ಏನೂ ಮಾಡುತ್ತಿಲ್ಲ. ದೇಶಕ್ಕೆ ರವಾನೆಯಾಗುತ್ತಿರುವ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ನಡೆಯಲು ನಾವು ಏನಾದರೂ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಇವುಗಳ ನಿಯಂತ್ರಣಕ್ಕಾಗಿ ತಮ್ಮ ಸೇನಾ ಪಡೆಗಳನ್ನು ಮೆಕ್ಸಿಕೊಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದ್ದೆ. ಆದರೆ, ಮೆಕ್ಸಿಕೊ ಅಧ್ಯಕ್ಷೆ ಕ್ಲೌಡಿಯಾ ಶೇನ್‌ಬಾಮ್‌ ಅವರು ಸಾರ್ವಜನಿಕವಾಗಿ ಇದನ್ನು ತಿರಸ್ಕರಿಸಿದ್ದರು ಎಂದೂ ಹೇಳಿದ್ದಾರೆ.

ಕ್ಲೌಡಿಯಾ ಶೇನ್‌ಬಾಮ್‌

ಕ್ಯೂಬಾ

ಅಮೆರಿಕದ ಸತತ ಪ್ರಯತ್ನಗಳ ನಡುವೆಯೂ, ಸುಮಾರು ಆರು ದಶಕಗಳಿಂದ ಅದಕ್ಕೆ ಸಡ್ಡು ಹೊಡೆಯುತ್ತಲೇ ಬಂದಿರುವ ಪುಟ್ಟ ದೇಶ ಕ್ಯೂಬಾ. ಕಮ್ಯುನಿಸ್ಟ್ ಆಡಳಿತ ಇರುವ, 1.1ಕೋಟಿ ಜನಸಂಖ್ಯೆಯ ಕ್ಯೂಬಾ, ಸೋವಿಯತ್ ಒಕ್ಕೂಟ ಪತನಗೊಂಡ ನಂತರ ಅಮೆರಿಕಕ್ಕೆ ತಲೆಬಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಕ್ಯೂಬಾ ಕ್ರಾಂತಿಯ ನಾಯಕ ಮತ್ತು ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಅದಕ್ಕೆ ಆಸ್ಪದ ನೀಡಲಿಲ್ಲ.

ಕ್ಯೂಬಾದ ಮೇಲೆ ಅಮೆರಿಕ 1960ರಿಂದಲೂ ಅನೇಕ ನಿರ್ಬಂಧಗಳನ್ನು ವಿಧಿಸುತ್ತಲೇ ಬಂದಿದೆ.  ಫಿಡೆಲ್ ಕ್ಯಾಸ್ಟ್ರೊ ಮತ್ತು ರೌಲ್ ಕ್ಯಾಸ್ಟ್ರೊ ಆಡಳಿತದ ನಂತರ ಹಿರಿಯ ಕಮ್ಯೂನಿಸ್ಟ್ ನಾಯಕ ಮಿಗೆಲ್ ಡಿಯಾಜ್ ಕನ್ಹಲ್ ಕ್ಯೂಬಾ ಅಧ್ಯಕ್ಷರಾಗಿದ್ದಾರೆ. ಕ್ಯೂಬಾಕ್ಕೆ ವೆನೆಜುವೆಲಾದಿಂದ ಶೇ 30ರಷ್ಟು ತೈಲ ರಫ್ತಾಗುತ್ತಿತ್ತು. ಪ್ರಸ್ತುತ ಅದು ಆರ್ಥಿಕತೆ ಕುಸಿತ, ವಿದ್ಯುತ್ ಅಭಾವದ ಜತೆಗೆ ತೀವ್ರ ತೈಲ ಅಭಾವ ಎದುರಿಸುತ್ತಿದೆ. ಟ್ರಂಪ್ ಅವರ ನಿಗಾದಲ್ಲಿ ಕ್ಯೂಬಾ ಕೂಡ ಇದೆ. ಆದರೆ, ‘ಕ್ಯೂಬಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುವ ಅಗತ್ಯವೇ ಇಲ್ಲ. ವೆನೆಜುವೆಲಾದ ಬೆಳವಣಿಗೆಗಳಿಂದ ಅದರ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಅದೇ ಕುಸಿದು ಬೀಳುವಂತೆ ಕಾಣುತ್ತಿದೆ’ ಎಂದು ಟ್ರಂಪ್ ವಿಶ್ವಾಸದಿಂದ ನುಡಿದಿದ್ದಾರೆ.   

ಕ್ಯೂಬಾ ಅಧ್ಯಕ್ಷ  ಮಿಗೆಲ್‌ ಡಿಯಾಜ್‌ ಕನ್ಹೆಲ್‌

ಆಧಾರ:ಬಿಬಿಸಿ, ರಾಯಿಟರ್ಸ್‌, ಎಪಿ, ಫ್ರಾನ್ಸ್‌24

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.