
ಉಬರ್ ಇಂಡಿಯಾ
ಬೆಂಗಳೂರು: ಓಲಾ, ಉಬರ್ ಮತ್ತು ರ್‍ಯಾಪಿಡೊ ಸೇರಿದಂತೆ ದೇಶದಾದ್ಯಂತ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಚಾಲಕರು ಮುಷ್ಕರ ನಡೆಸುತ್ತಿದ್ದು, ಇವುಗಳ ಮೇಲೆ ಅವಲಂಬಿತವಾಗಿದ್ದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಚಾಲಕರು ಕನಿಷ್ಠ 6 ಗಂಟೆ ಕಾಲ ಆ್ಯಪ್‌ಗಳಿಂದ ಲಾಗೌಟ್ ನಿರ್ಧಾರ ಮಾಡಿದ್ದು, ಕ್ಯಾಬ್, ಆಟೊ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್(ಟಿಜಿಪಿಡಬ್ಲ್ಯುಯು) ಮುಷ್ಕರಕ್ಕೆ ಕರೆ ನೀಡಿದೆ. ಟ್ಯಾಕ್ಸಿ ಸೇವೆಗಳಲ್ಲಿ ಅನ್ಯಾಯದ ಬೆಲೆ ನಿಗದಿ ಪದ್ಧತಿಗಳು ಮತ್ತು ಈ ವಲಯದಲ್ಲಿನ ದುರ್ಬಲ ನಿಯಂತ್ರಣದ ವಿರುದ್ಧ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿ ಕಾಯ್ದೆ 2025 ಅಸ್ತಿತ್ವದಲ್ಲಿದ್ದರೂ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳು ಸ್ವತಂತ್ರವಾಗಿ ದರಗಳನ್ನು ನಿರ್ಧರಿಸುತ್ತಲೇ ಇವೆ ಎಂದು ಅದು ಹೇಳಿದೆ.
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಕನಿಷ್ಠ ದರ ನಿಗದಿ ಇಲ್ಲ. ಯಾವುದೇ ನಿಯಂತ್ರಣವಿಲ್ಲ. ಅಂತ್ಯವಿಲ್ಲದ ಶೋಷಣೆ ನಡೆಯುತ್ತಿದೆ. ಇವುಗಳಲ್ಲಿ ಕಾರ್ಯನಿರ್ವಹಿಸುವ ಲಕ್ಷಾಂತರ ಚಾಲಕರನ್ನು ಬಡತನಕ್ಕೆ ತಳ್ಳಲಾಗುತ್ತಿದೆ. ಕಂಪನಿಗಳು ಲಾಭ ಮಾಡುತ್ತಿವೆ. ಈ ಸಂಬಂಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪನಿಗಳು ತಮಗೆ ಇಷ್ಟ ಬಂದ ಹಾಗೆ ದರ ನಿಗದಿ ಮಾಡುತ್ತಿವೆ. ತಮ್ಮ ಜೀವನೋಪಾಯಕ್ಕಾಗಿ ಟ್ಯಾಕ್ಸಿ ಸೇವೆ ಮೇಲೆ ಅವಲಂಬಿತರಾಗಿರುವ ಚಾಲಕರನ್ನು ಅತಂತ್ರಗೊಳಿಸುತ್ತಿವೆ ಎಂದು ಸಂಘಟನೆ ಆರೋಪಿಸಿದೆ.
ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿ ಕಾಯ್ದೆ 2025ರ ಹೊರತಾಗಿಯೂ, ಪ್ಲಾಟ್‌ಫಾರ್ಮ್‌ಗಳು ಅನಿಯಂತ್ರಿತವಾಗಿ ದರಗಳನ್ನು ನಿಗದಿಪಡಿಸುತ್ತಲೇ ಇವೆ. ನಮ್ಮ ಬೇಡಿಕೆಗಳು ಸ್ಪಷ್ಟವಾಗಿವೆ. ಕನಿಷ್ಠ ಮೂಲ ದರಗಳನ್ನು ನಿಗದಿ ಮಾಡಿ ದುರುಪಯೋಗವನ್ನು ಕೊನೆಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಚಾಲಕರ ಸಂಘಟನೆಯು ಸರ್ಕಾರದ ಮುಂದೆ ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಇಟ್ಟಿದೆ.
ಮೊದಲನೇಯದಾಗಿ, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ಯಾಬ್, ಆಟೊ ಮತ್ತು ಬೈಕ್ ಟ್ಯಾಕ್ಸಿಗಳಿಗೆ ಕೂಡಲೇ ಕನಿಷ್ಠ ಮೂಲ ಬೆಲೆ ನಿಗದಿ ಮಾಡಬೇಕು. ಇದನ್ನು ಮಾನ್ಯತೆ ಪಡೆದ ಚಾಲಕರು ಮತ್ತು ಕಾರ್ಮಿಕರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡಬೇಕು. ಅಲ್ಲದೇ, ಮೋಟಾರು ವಾಹನ ಸಂಗ್ರಾಹಕ ಕಾಯ್ದೆಯ ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದು ಸಂಘಟನೆ ಹೇಳಿದೆ.
ಎರಡನೇಯದಾಗಿ, ಖಾಸಗಿ, ವಾಣಿಜ್ಯೇತರ ವಾಹನಗಳು ಪ್ರಯಾಣಿಕರಿಗೆ ಟ್ಯಾಕ್ಸಿ ಸೇವೆ ಮತ್ತು ಸರಕು ಸಾಗಣೆ ಸೇವೆ ಒದಗಿಸುವುದರಿಂದ ಕಠಿಣ ನಿಷೇಧ ಹೇರಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಈ ಮುಷ್ಕರವು ಗಿಗ್ ಕಾರ್ಮಿಕರ ಪ್ರತಿಭಟನೆಯ ಮುಂದುವರಿದ ಭಾಗವೇ?
ಹಲವು ಪ್ಲಾಟ್‌ಫಾರ್ಮ್ ಆಧಾರಿತ ಉದ್ಯಮದಲ್ಲಿಕೆಲಸ ಮಾಡುತ್ತಿರುವ ಗಿಗ್ ಕಾರ್ಮಿಕರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಫುಡ್ ಡೆಲಿವರಿ ಮತ್ತು ಕ್ವಿಕ್ ಕಾಮರ್ಸ್ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಕಡಿಮೆ ಶುಲ್ಕ ಪಾವತಿ, ಪೀಕ್ ಅವರ್‌ನಲ್ಲಿ ಅಧಿಕ ಶುಲ್ಕ ಪಾವತಿಗೆ ಒತ್ತಾಯಿಸಿದ್ದರು.
ಜನವರಿ 30ರಂದು ಬಿಡುಗಡೆಯಾದ 2025-26ರ ಆರ್ಥಿಕ ಸಮೀಕ್ಷೆಯಲ್ಲಿಯೂ ಗಿಗ್ ಉದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು. ಗಿಗ್ ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಸಮೀಕ್ಷೆ ಒತ್ತಿ ಹೇಳಿತ್ತು. ಆದರೆ, ಕಾರ್ಮಿಕರ ರಕ್ಷಣೆಯಲ್ಲಿನ ಲೋಪವನ್ನೂ ಎತ್ತಿ ತೋರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.