ADVERTISEMENT

ದೀನ ದಯಾಳ್ ಉಪಾಧ್ಯಾಯರ ಹೆಸರಿನಲ್ಲಿರುವ ಸರ್ಕಾರಿ ಯೋಜನೆಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 7:26 IST
Last Updated 11 ಫೆಬ್ರುವರಿ 2026, 7:26 IST
<div class="paragraphs"><p>ದೀನ್ ದಯಾಳ್ ಉಪಾಧ್ಯಾಯ</p></div>

ದೀನ್ ದಯಾಳ್ ಉಪಾಧ್ಯಾಯ

   

ಚಿತ್ರಕೃಪೆ: AshimKGhos92088

ಏಕಾತ್ಮ ಮಾನವ ವಾದದ ಪ್ರವರ್ತಕ ಎಂದೇ ಖ್ಯಾತಿ ಪಡೆದ ದೀನ್ ದಯಾಳ್ ಉಪಾಧ್ಯಾಯ ಅವರು 1968ರ ಫೆಬ್ರುವರಿ 11ರಂದು ನಿಧನರಾದರು. ದೇಶದ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಲ್ಲದೆ, ಪತ್ರಿಕಾ ವೃತ್ತಿಯಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದರು. ಇವರು ರಾಷ್ಟ್ರಧರ್ಮ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಪಾಂಚಜನ್ಯ ಹಾಗೂ ಸ್ವದೇಶ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಇಂದಿಗೆ ಇವರ ಹೆಸರಿನಲ್ಲಿ ಹಲವಾರು ಯೋಜನೆಗಳಿವೆ. ಅಲ್ಲದೇ ಇವರ ಗೌರವಾರ್ಥವಾಗಿ ಭಾರತ ಸರ್ಕಾರವು 4 ಅಂಚೆ ಚೀಟಿಗಳನ್ನೂ ಪ್ರಕಟಿಸಿದೆ. 

ADVERTISEMENT

ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಹೆಸರಿನಲ್ಲಿರುವ ಪ್ರಮುಖ ಯೋಜನೆಗಳಿವು.

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಯುವಕರಿಗೆ ಉಚಿತ ಕೌಶಲ್ಯಗಳ ತರಬೇತಿ ಹಾಗೂ ಉದ್ಯೋಗ ಒದಗಿಸಲಾಗುತ್ತದೆ. 15 ರಿಂದ 35 ವರ್ಷ ವಯಸ್ಸಿನ ಯುವಕ ಯುವತಿಯರಿಗೆ ತರಬೇತಿ ನೀಡುವುದರ ಜತೆಗೆ ಕನಿಷ್ಠ ವೇತನದೊಂದಿಗೆ ಖಚಿತ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಡುವ ಗುರಿಯನ್ನು ಹೊಂದಿದೆ. 

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ

ಗ್ರಾಮೀಣ ಪ್ರದೇಶದಲ್ಲಿ 24 ಗಂಟೆಗಳ ವಿದ್ಯುತ್‌ ಪೂರೈಕೆ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಎಲ್ಲಾ ಹಳ್ಳಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ದೀನ್ ದಯಾಳ್ ಸ್ಪರ್ಶ ಯೋಜನೆ

ವಿದ್ಯಾರ್ಥಿಗಳಲ್ಲಿ ಅಂಚೆ ಚೀಟಿ ಸಂಗ್ರಹ ಮಾಡುವುದನ್ನು ಹವ್ಯಾಸವಾಗಿ ಬೆಳೆಸಲು ಮತ್ತು ಶೈಕ್ಷಣಿಕವಾಗಿ ಅವರಿಗೆ ಪೂರಕವಾದ ಜ್ಞಾನವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. 6 ರಿಂದ 9ನೇ ತರಗತಿಯ ಆಯ್ದ ವಿದ್ಯಾರ್ಥಿಗಳಿಗೆ ತಿಂಗಳಿಗೆ ₹500 ರಂತೆ ವಾರ್ಷಿಕವಾಗಿ ₹6,000 ಗಳನ್ನು ನೀಡಲಾಗುತ್ತದೆ. ಅಂಚೆ ಚೀಟಿಗೆ ಸಂಬಂಧಿಸಿದ ರಸಪ್ರಶ್ನೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಯೋಜನೆಗೆ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

ದೀನ್ ದಯಾಳ್ ಅಂತ್ಯೋದಯ ಯೋಜನೆ

ಭಾರತ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯದ ಅಡಿಯಲ್ಲಿ ಈ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎಂಬ ಎರಡು ಪ್ರತ್ಯೇಕ ಭಾಗಗಳಿವೆ. ಜೀವನೋಪಾಯ ಮಿಷನ್‌ಗೆ ದೀನ್ ದಯಾಳ್ ಅಂತ್ಯೋದಯ ಯೋಜನೆ ಎಂದು ಹೆಸರಿಡಲಾಗಿದೆ. 

ದೀನ್ ದಯಾಳ್ ಅಂಗವಿಕಲ ಪುನರ್ವಸತಿ ಯೋಜನೆ : 

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರಮುಖ ಯೋಜನೆಗಳಲ್ಲಿ ಅಂಗವಿಕಲರ ಪುನರ್ವಸತಿ ಯೋಜನೆ ಒಂದಾಗಿದೆ. 1999ರಲ್ಲಿ ಈ ಯೋಜನೆ ಆರಂಭವಾಯಿತು. ನಂತರ 2003ರಲ್ಲಿ ಯೋಜನೆಯ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಮಾಡಲಾಯಿತು. ಅಂಗವಿಕಲರ ಶಿಕ್ಷಣ, ತರಬೇತಿ ಮತ್ತು ಪುನರ್ವಸತಿಗಾಗಿ ಶ್ರಮಿಸುವ ಎನ್‌ಜಿಒ, ಸ್ವಯಂಸೇವಾ ಸಂಸ್ಥೆಗಳಿಗೆ ಅನುದಾನ ನೀಡುವ ಯೋಜನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.