ADVERTISEMENT

EXPLAINER: ಪನಾಮಾ ಕಾಲುವೆ ಮೇಲೇಕೆ ಟ್ರಂಪ್‌ ಕಣ್ಣು? ವಿವಾದದ ಸುಳಿಯಲ್ಲಿ ಜಲಮಾರ್ಗ

ರಾಯಿಟರ್ಸ್
Published 28 ಜನವರಿ 2025, 13:22 IST
Last Updated 28 ಜನವರಿ 2025, 13:22 IST
<div class="paragraphs"><p>ಪನಾಮಾ ಕಾಲುವೆ</p></div>

ಪನಾಮಾ ಕಾಲುವೆ

   

ರಾಯಿಟರ್ಸ್‌ ಚಿತ್ರ

ಜಗತ್ತಿನ 2ನೇ ಅತ್ಯಂತ ಜನನಿಬಿಡ ಅಂತರ ಸಾಗರ ಜಲಮಾರ್ಗ ಪನಾಮಾ ಕಾಲುವೆಯನ್ನು ಮರಳಿ ಪಡೆಯುತ್ತೇವೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಹೇಳಿಕೆಯು ಮಧ್ಯ ಅಮೆರಿಕಾದಲ್ಲಿ ಆತಂಕ ಮೂಡಿಸಿದೆ. ಅಷ್ಟಕ್ಕೂ ಈ ವಿವಾದ ಹುಟ್ಟಿದ್ದೇಕೆ ಎಂಬುದರ ಮಾಹಿತಿ ಇಲ್ಲಿದೆ....

1999ರಲ್ಲಿ ಪನಾಮಾಗೆ ಅತ್ಯಂತ ಪ್ರಮುಖ ಜಲಮಾರ್ಗದ ಕಾಲುವೆಯನ್ನು ಅಮೆರಿಕ ಹಸ್ತಾಂತರಿಸಿತ್ತು. ಆದರೆ ಇದರಲ್ಲಿ ಅನ್ಯ ರಾಷ್ಟ್ರಗಳ ಹಸ್ತಕ್ಷೇಪ ಇರಬಾರದು ಎಂಬ ಷರತ್ತನ್ನು ಪನಾಮಾ ಉಲ್ಲಂಘಿಸಿದೆ. ಕಾಲುವೆಯನ್ನು ಚೀನಾ ನಿರ್ವಹಿಸುತ್ತಿದೆ ಎಂದು ಅಮೆರಿಕಾ ಆರೋಪಿಸಿದೆ.

ADVERTISEMENT

ಕಾಲುವೆಯನ್ನು ಪಾನಾಮಾ ಕಾಲುವೆ ಪ್ರಾಧಿಕಾರ ನಿರ್ವಹಿಸುತ್ತಿದೆ. ಇದೊಂದು ಸ್ವತಂತ್ರ ಸಂಸ್ಥೆಯಾಗಿದ್ದು, ಪನಾಮಾ ಸರ್ಕಾರದ ಅಧೀನಕ್ಕೆ ಒಳಪಟ್ಟಿದೆ. 

ಅಮೆರಿಕಕ್ಕೆ ಏಕೆ ಈ ಕಾಲುವೆ ಬಹು ಮುಖ್ಯ?

82 ಕಿ.ಮೀ. ಉದ್ದದ ಪನಾಮಾ ಕಾಲುವೆಯು ಪೆಸಿಫಿಕ್ ಸಾಗರ ಹಾಗೂ ಅಟ್ಲಾಂಟಿಕ್‌ ಸಾಗರವನ್ನು ಸಂಪರ್ಕಿಸುವ ಕೃತಕ ವ್ಯವಸ್ಥೆಯಾಗಿದೆ. ಇದರಿಂದಾಗಿ ಹಡಗುಗಳು ಸಾವಿರಾರು ಮೈಲಿ ದೂರ ಸಾಗುವುದನ್ನು ತಪ್ಪಿಸುವುದರ ಜತೆಗೆ, ಅವಧಿಯನ್ನು ಒಂದು ವಾರಗಳಿಗೆ ಇಳಿಸಿದೆ. ಇದನ್ನು ನಿರ್ಮಿಸುವ ಮೊದಲು ಹಡಗುಗಳು ದಕ್ಷಿಣ ಅಮೆರಿಕದ ತುದಿಯನ್ನು ತಲುಪಿ ಎರಡೂ ಸಾಗರಗಳನ್ನು ದಾಟಿ ಸಾಗಬೇಕಿತ್ತು.

ಪನಾಮಾ ಕಾಲುವೆಯ ನಿರ್ಮಾಣವನ್ನು ಫ್ರಾನ್ಸ್‌ ಆರಂಭಿಸಿತು. ಇದಕ್ಕಾಗಿ 25 ಸಾವಿರ ಕಾರ್ಮಿಕರು ಜೀವ ತೆತ್ತಿದ್ದಾರೆ. 20ನೇ ಶತಮಾನದಲ್ಲಿ ಅಮೆರಿಕವು ಕಾಲುವೆ ನಿರ್ಮಾಣವನ್ನು ಪೂರ್ಣಗೊಳಿಸಿತು. ವಸಾಹತುಶಾಹಿ ಚಳವಳಿಗಳ ಒತ್ತಡದ ಭಾಗವಾಗಿ 1977ರಲ್ಲಿ ಅಮೆರಿಕವು ಪನಾಮಾ ಮೇಲಿನ ಹಿಡತವನ್ನು ಕಾಲುವೆ ಪ್ರದೇಶಕ್ಕೆ ವಹಿಸುವುದಾಗಿ ಘೋಷಿಸಿತ್ತು. ಜತೆಗೆ ಶಾಶ್ವತವಾಗಿ ತಟಸ್ಥವಾಗಿ ಉಳಿಯುವುದಾಗಿ ಘೋಷಿಸಿತ್ತು. ಇದು ಕಾರ್ಯರೂಪಕ್ಕೆ ಬಂದಿದ್ದು 1999ರಲ್ಲಿ. ಆದರೆ ಹವಾಮಾನ ಬದಲಾವಣೆಯಿಂದ 2023 ಮತ್ತು 2024ರಲ್ಲಿ ಎದುರಾದ ಬರಗಾಲದಲ್ಲಿ ಕಾಲುವೆಗೆ ನೀರು ಪೂರೈಸುತ್ತಿದ್ದ ಕೆರೆಗಳು ಬರಿದಾದವು. ಇದರಿಂದಾಗಿ ಕಾಲುವೆ ನಿರ್ವಹಣೆಯ ಆಡಳಿತ ಮಂಡಳಿಯು ಹಡುಗುಗಳ ಸಂಚಾರದ ಮೇಲೆ ನಿರ್ಬಂಧ ಹೇರಿತು. ಇದರ ಪರಿಣಾಮ ಹಡಗುಗಳು ತಮ್ಮ ಸಮಯಕ್ಕಾಗಿ ಕಾಯುವಂತಾಯಿತು.

ಆದರೆ ಈಗಲೂ ಇಲ್ಲಿನ ಪರಿಸ್ಥಿತಿ ಸಂಪೂರ್ಣ ಸರಿಯಾಗಿಲ್ಲ. ಕಾಲುವೆ ಮೂಲಕ ಸಂಚಾರಕ್ಕೆ ಹಡಗುಗಳಿಗೆ ಅವಕಾಶ ನೀಡಲಾಗಿದೆ. ಆದರೆ, ದ್ರವರೂಪದ ನೈಸರ್ಗಿಕ ಅನಿಲ ಸಾಗಿಸುವ ಹಡಗುಗಳನ್ನು ಒಳಗೊಂಡಂತೆ ಬೃಹತ್ ಕ್ಯಾರಿಯರ್‌ಗಳು ಪರ್ಯಾಯ ಮಾರ್ಗವನ್ನೇ ಈಗಲೂ ಅನುಸರಿಸುತ್ತಿವೆ.

ಪನಾಮಾ ಕಾಲುವೆ ಬಳಿ ಸಾಗಲು ಕಾದು ನಿಂತಿರುವ ಹಡಗುಗಳು

ಪನಾಮಾ ಕಾಲುವೆಯಲ್ಲಿ ಚೀನಾ ಪಾತ್ರವೇನು?

‘ಪನಾಮಾವು ಕಾಲುವೆ ಮೇಲಿನ ನಿಯಂತ್ರಣವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಚೀನಾದ ಸೇನೆ ಕಾಲುವೆಯಲ್ಲಿ ಬೀಡು ಬಿಟ್ಟಿದೆ. ಆದರೆ ಇದಕ್ಕೆ ಯಾವುದೇ ಪುರಾವೆಯನ್ನು ಪನಾಮಾ ನೀಡುತ್ತಿಲ್ಲ’ ಎಂಬ ಅಂಶವನ್ನು ಟ್ರಂಪ್ ಅಧ್ಯಕ್ಷರಾದ ನಂತರ ನೀಡಿದ ತಮ್ಮ ಚೊಚ್ಚಲ ಭಾಷಣದಲ್ಲಿ ಹಲವು ಬಾರಿ ಉಲ್ಲೇಖಿಸಿದ್ದಾರೆ. 

ಆದರೆ ಟ್ರಂಪ್ ಅವರ ಈ ಆರೋಪವನ್ನು ಪನಾಮಾ ಸರ್ಕಾರ ಹಾಗೂ ಚೀನಾ ಸರ್ಕಾರಗಳು ಸಾರಾಸಗಟಾಗಿ ತಿರಸ್ಕರಿಸಿವೆ. 

ಕಾಲುವೆ ಇರುವ ಪೆಸಿಫಿಕ್ ಮತ್ತು ಅಟ್ಲಾಂಟಿಕ್‌ ಪ್ರವೇಶದಲ್ಲಿರುವ ಬಾಲ್ಬೊ ಮತ್ತು ಕ್ರಿಸ್ಟೊಬಾಲ್‌ ಬಂದರುಗಳನ್ನು ಹಾಂಗ್‌ಕಾಂಗ್‌ ಮೂಲದ ಸಿಕೆ ಹಚಿಸನ್‌ ಹೋಲ್ಡಿಂಗ್ಸ್‌ ಕಂಪನಿ ನಿರ್ವಹಿಸುತ್ತಿದೆ. ಕಂಪನಿಯು ಸಾರ್ವಜನಿಕ ಹೂಡಿಕೆಯನ್ನು ಹೊಂದಿದೆಯೇ ಹೊರತು, ಚೀನಾ ಸರ್ಕಾರದ  ನೇರ ಆಡಳಿತಕ್ಕೆ ಇದು ಒಳಪಟ್ಟಿಲ್ಲ. ಆದರೂ ಹಾಂಗ್‌ಕಾಂಗ್‌ ಕಂಪನಿಯ ಮೇಲೆ ಚೀನಾ ಸರ್ಕಾರ ನಿಗಾ ಇರಿಸಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಅಟ್ಲಾಂಟಿಕ್ ತೀರದಲ್ಲಿರುವ ಎಂಐಟಿ ಬಂದರನ್ನು ಅಮೆರಿಕದ ಖಾಸಗಿ ಸಂಸ್ಥೆ ಎಸ್‌ಎಸ್‌ಎ ಮರೈನ್‌, ಅಟ್ಲಾಂಟಿಕ್ ಬಂದರನ್ನು ತೈವಾನ್‌ನ ಎವರ್‌ಗ್ರೀನ್‌ ಸಮೂಹ ಸಿಸಿಟಿ ಹಾಗೂ ಪೆಸಿಫಿಕ್ ತೀರದ ರೋಡ್‌ಮನ್‌ ಬಂದರನ್ನು ಸಿಂಗಪುರದ ಪಿಎಸ್‌ಎ ಇಂಟರ್‌ನ್ಯಾಷನಲ್‌ ನಿರ್ವಹಿಸುತ್ತಿವೆ ಎಂದು ಸರ್ಕಾರಕ್ಕೆ ಸೇರಿದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ. ಆದಾಗ್ಯೂ, ನೈಸರ್ಗಿಕ ಸಂಪನ್ಮೂಲ ಹೇರಳವಾಗಿರುವ ಲ್ಯಾಟಿನ್ ಅಮೆರಿಕದಲ್ಲಿ ಚೀನಾ ಹಿಡಿತ ವರ್ಷದಿಂದ ವರ್ಷಕ್ಕೆ ಬಿಗಿಗೊಳ್ಳುತ್ತಲೇ ಸಾಗಿದೆ. ಈ ಪ್ರಾಂತ್ಯವೂ ಚೀನಾದತ್ತ ವಾಲುತ್ತಿರುವುದು ಇದು ವಾಷಿಂಗ್ಟನ್‌ನ ನಿದ್ದೆಗೆಡಿಸಿದೆ. 

ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಪನಾಮಾ ಅಧ್ಯಕ್ಷ ಜೋಸ್ ರಾಲ್‌ ಮುಲಿನೊ ಅವರು, ‘ಕಾಲುವೆಯು ಪನಾಮಾದ್ದಾಗಿತ್ತು,  ಪನಾಮಾದ್ದಾಗಿದೆ. ಮುಂದೆಯೂ ಪನಾಮಾಕ್ಕೇ ಸೇರಿದ್ದಾಗಿರುತ್ತದೆ. ಕಾಲುವೆ ಮೂಲಕ ಸಾಗಲು ವಿಧಿಸುವ ಶುಲ್ಕವು ಪಾರದರ್ಶಕವಾಗಿದ್ದು, ಅದನ್ನು ಎಲ್ಲಾ ಆಯಾಮಗಳಿಂದ ಯೋಚಿಸಿ ನಿರ್ಧರಿಸಲಾಗಿದೆ’ ಎಂದಿದ್ದಾರೆ.

ಸುಂಕದ ಕುರಿತೂ ತಕರಾರು

ಪನಾಮಾ ಕಾಲುವೆಯಲ್ಲಿ ಸಾಗಲು ಹಡಗುಗಳಿಗೆ ಭಾರೀ ಪ್ರಮಾಣದ ಸುಂಕ ವಿಧಿಸಲಾಗುತ್ತಿದೆ ಎಂದು ಅಮೆರಿಕ ಪದೇ ಪದೇ ಆರೋಪಿಸುತ್ತಿದೆ. ಅಮೆರಿಕದ ಸರಕುಗಳು ಸಾಗಲು ಈ ಪ್ರಮಾಣದ ಸುಂಕವನ್ನು ವಿಧಿಸಬಾರದು ಎಂದೂ ತಾಕೀತು ಮಾಡಿದೆ. ಜತೆಗೆ ಅಮೆರಿಕಕ್ಕೆ ರಾಷ್ಟ್ರಕ್ಕೆ ಸೇರಿದ ಎಲ್ಲಾ ಹಡುಗುಗಳ ಮೇಲೂ ಅಧಿಕ ಸುಂಕ ವಿಧಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಗುಡುಗಿದೆ.

2020ರಿಂದ 2023ರವರೆಗೆ ಈ ಕಾಲುವೆಯ ಆದಾಯವು ಶೇ 26ರಷ್ಟು (₹29 ಸಾವಿರ ಕೋಟಿ) ಹೆಚ್ಚಾಗಿದೆ. ಪ್ರತಿ ಹಡಗಿಗೆ ₹35 ಕೋಟಿ ತೆರಿಗೆ ವಿಧಿಸಲಾಗುತ್ತಿದೆ. ಕಾಲುವೆಯಲ್ಲಿ ಸಾಗುವ ಹಡಗುಗಳಿಗೆ ಅವುಗಳ ರಾಷ್ಟ್ರ ಧ್ವಜ, ಯಾವ ದೇಶಕ್ಕೆ ಸೇರಿದ್ದು ಅಥವಾ ಎಲ್ಲಿಗೆ ಹೋಗಲಿದೆ ಎಂಬುದನ್ನು ಆಧರಿಸಿ ಶುಲ್ಕ ವಿಧಿಸಲಾಗುತ್ತಿಲ್ಲ. ಅಮೆರಿಕ ರಾಷ್ಟ್ರಕ್ಕೆ ಸೇರಿದ ವಾಣಿಜ್ಯ ಹಡಗುಗಳು ಇಲ್ಲ. ಈ ಕಾಲುವೆಯಲ್ಲಿ ಅಮೆರಿಕದ ಸೇನೆಗೆ ಸೇರಿದ ಹಡಗುಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂದು ವರದಿಯಾಗಿದೆ.

ಜಗತ್ತಿನ ಹಲವು ರಾಷ್ಟ್ರಗಳ ನಡುವಿನ ರಾಜಕೀಯ ಸಂಘರ್ಷದಿಂದಾಗಿ ಪನಾಮಾ ಮಾತ್ರವಲ್ಲದೆ, ಇತರ ಜಲ ಮಾರ್ಗಗಳ ಶುಲ್ಕಗಳೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದು ಸರಕು ಸಾಗಣೆ ಹಡಗುಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂದೇನು...?‌

ಟ್ರಂಪ್‌ ಬೆದರಿಕೆಯು ಪನಾಮಾದ ಸಾಲದ ಪ್ರಮಾಣವನ್ನು ಹೆಚ್ಚಿಸಿದೆ. ಕಾಲುವೆ ವಾಪಾಸ್ ಪಡೆಯುವ ಟ್ರಂಪ್ ಹೇಳಿಕೆ ನಂತರ ದೇಶದ ಬಾಂಡ್‌ಗಳ ಬೆಲೆಯನ್ನು ಅಮೆರಿಕದ ಹೂಡಿಕೆ ಬ್ಯಾಂಕ್ ಜೆ.ಪಿ. ಮಾರ್ಗನ್‌ ತಗ್ಗಿಸಿರುವುದು ಈ ಪುಟ್ಟ ರಾಷ್ಟ್ರವನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

ಈ ನಡುವೆ ಅಮೆರಿಕದ ಕಾರ್ಯದರ್ಶಿ ಮಾಕ್ರೊ ರುಬಿಯೊ ಅವರು ಜನವರಿ ಅಂತ್ಯದಿಂದ ಫೆಬ್ರುವರಿ ಮೊದಲ ವಾರದಲ್ಲಿ ಪನಾಮಾಕ್ಕೆ ಭೇಟಿ ನೀಡುತ್ತಿದ್ದು, ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶಿ ಭೇಟಿಯಾಗಿದೆ. ಈ ಭೇಟಿಯಲ್ಲಿ ವಲಸೆ ಕುರಿತೂ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.