ಐಸ್ಟಾಕ್ ಚಿತ್ರ
ಸಿಡ್ನಿ: ಲಾಕ್ ಆಗಿರುವ ಮೊಬೈಲ್, ಬ್ಯಾಂಕ್‌ನ ಆ್ಯಪ್, ಸಾಮಾಜಿಕ ಮಾಧ್ಯಮಗಳ ವೇದಿಕೆ ಪ್ರವೇಶಿಸಲು, ವಿಮಾನ ನಿಲ್ದಾಣದಲ್ಲಿ ಚೆಕ್‌ಇನ್ ಆಗಲು... ಹೀಗೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆಯ ಕೀಲಿಯೇ ಬಳಕೆದಾರರ ಮುಖವಾಗಿದೆ. ಹೀಗೆ ಮುಖ ಆಧಾರಿತ ಬಯೋಮೆಟ್ರಿಕ್ ತಂತ್ರಜ್ಞಾನವು ವ್ಯಕ್ತಿಯ ಗುರುತು ಪತ್ತೆಯಲ್ಲಿ ಸಾಮಾನ್ಯ ಎಂಬಂತಾಗಿದೆ.
ತ್ವರಿತ, ಸುಲಭ ಮತ್ತು ಸುಭದ್ರ ತಂತ್ರಜ್ಞಾನ ಎಂದೇ ಬಿಂಬಿತವಾಗಿದೆ. ಆದರೆ ಇದೇ ಹೊತ್ತಿಗೆ ಈ ತಂತ್ರಜ್ಞಾನವು ಖಾಸಗಿತನ ರಕ್ಷಣೆಯಲ್ಲಿ ಎಷ್ಟು ಸುರಕ್ಷಿತ ಎಂಬ ಸವಾಲನ್ನೂ ಮುಂದಿಟ್ಟಿದೆ. ಕೆಲವೊಂದು ಸಂಸ್ಥೆಗಳು ತಮ್ಮ ಆ್ಯಪ್‌ಗಳ ಮೂಲಕ ಸಂಗ್ರಹಿಸಿದ ಬಳಕೆದಾರರ ದತ್ತಾಂಶಗಳನ್ನು ಅವರ ಅನುಮತಿ ಇಲ್ಲದೆ ಮಾರಾಟ ಮಾಡಿರುವ ಜ್ವಲಂತ ಉದಾಹರಣೆಗಳು ನಮ್ಮ ಮುಂದಿವೆ. ಇದು ಭವಿಷ್ಯದ ಸುರಕ್ಷತೆಯ ಪ್ರಶ್ನೆ ನಮ್ಮ ಮುಂದಿಟ್ಟಿದೆ. ಅದೇ ವೇಳೆಗೆ ಕುಟುಂಬ, ಅದರಲ್ಲೂ ಡಿಜಿಟಲ್ ಲಾಕ್ ಆಗಿ ತಮ್ಮ ಮುಖಗಳನ್ನೂ ನೀಡುತ್ತಿರುವ ಮಕ್ಕಳ ಸುರಕ್ಷತೆಯ ಪ್ರಶ್ನೆಯೂ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ತಡೆರಹಿತ ಅನುಕೂಲಕ್ಕಾಗಿ ಫೇಷಿಯಲ್ ರೆಕಗ್ನಿಷನ್ ಅತ್ಯುತ್ತಮ ಎಂಬ ಮಾತಿಗೆ ತಂತ್ರಜ್ಞಾನ ಜಗತ್ತು ಹೆಚ್ಚು ಪ್ರಚಾರ ನೀಡಿದೆ. ಮೊಬೈಲ್ ಮಾತ್ರವಲ್ಲದೆ ವಿಮಾನ ಯಾನ ಸೇವೆಯಲ್ಲೂ ಪ್ರಯಾಣಿಕರ ಹೆಚ್ಚಿನ ಹಾಗೂ ತಡೆರಹಿತ ಅನುಕೂಲಕ್ಕಾಗಿ ಮುಖ ಗುರುತು ಪತ್ತೆ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದಾಗಿ ಬೋರ್ಡಿಂಗ್ ಪಾಸ್, ಪಾಸ್‌ಪೋರ್ಟ್ ತಪಾಸಣೆ ಎಲ್ಲವೂ ಸರಳವಾಗಿ ಮುಖದ ಸ್ಕ್ಯಾನ್ ಮೂಲಕವೇ ಮುಗಿದುಹೋಗುತ್ತದೆ.
ಆದರೆ, ಇದನ್ನೇ ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಸೂಪರ್ ಮಾರುಕಟ್ಟೆಗಳ ಸಹಿತ ಹಲವು ಕಡೆಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಅವರ ಮುಖ ಚಹರೆಯ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಿವೆ ಎಂಬ ದೂರುಗಳೂ ಕೇಳಿಬಂದಿವೆ.
ಇದಕ್ಕೆ ಪೂರಕ ಎಂಬಂತೆ ಆಸ್ಟ್ರೇಲಿಯಾ ಸರ್ಕಾರವು ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳಿಂದ ದೂರವಿಡಲು ಹಾಗೂ ಅವರ ವಯಸ್ಸು ಪತ್ತೆ ಮಾಡಲು ಮುಖ ಆಧಾರಿತ ವಯಸ್ಸು ಪತ್ತೆ ತಂತ್ರಜ್ಞಾನ ಅಳವಡಿಸಲು ಹೇಳಿದೆ. ಇದೂ ಪರೋಕ್ಷವಾಗಿ ಮಾಹಿತಿ ಸಂಗ್ರಹಕ್ಕೆ ನೆರವಾಗಿದೆ. ಕೆಲ ಪ್ರತಿಷ್ಠಿತ ಶಾಲೆಗಳಲ್ಲೂ ಮುಖ ಚಹರೆಯ ದಾಖಲಿಸಿಕೊಳ್ಳುತ್ತಿರುವ ಕುರಿತು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮಕ್ಕಳ ಬಯೋಮೆಟ್ರಿಕ್ ದತ್ತಾಂಶಗಳ ಅಸಮರ್ಪಕ ನಿರ್ವಹಣೆ ಕುರಿತು ಮೈಕ್ರೊಸಾಫ್ಟ್ ಕೂಡಾ ಕಳವಳ ವ್ಯಕ್ತಪಡಿಸಿದೆ.
ಮುಖ ಚಹರೆ ಗುರುತಪತ್ತೆ ತಂತ್ರಜ್ಞಾನವು ವ್ಯಕ್ತಿಯೊಬ್ಬರ ವಿಭಿನ್ನ ಲಕ್ಷಣಗಳನ್ನು ಸಂಗ್ರಹಿಸಿ, ಅದನ್ನು ತನ್ನಲ್ಲಿರುವ ದತ್ತಾಂಶದೊಂದಿಗೆ ಹೋಲಿಕೆ ಮಾಡುವುದಾಗಿದೆ. ಸಿಸಿಟಿವಿ ಕ್ಯಾಮೆರಾದಂತೆ ಇದು ದಾಖಲಿಸುವುದಿಲ್ಲ. ಬದಲಾಗಿ ವ್ಯಕ್ತಿಗಳನ್ನು ಅವರ ಮುಖ ಚಹರೆ ಆಧಾರದಲ್ಲಿ ವಿಂಗಡಿಸುತ್ತದೆ.
ಇದು ಈ ಹಿಂದಿನ ತಂತ್ರಜ್ಞಾನಕ್ಕಿಂತಲೂ ಭಿನ್ನವಾಗಿದೆ. ಕೋವಿಡ್ ಸಂದರ್ಭದಲ್ಲಿ ಚೆಕ್ ಇನ್‌ಗಾಗಿ ಬಂದ ಕ್ಯೂಆರ್ ಕೋಡ್ ವ್ಯವಸ್ಥೆಯು ಅಂಗಡಿ, ಕೆಫೆ ಮತ್ತು ಏರ್‌ಪೋರ್ಟ್‌ಗಳಲ್ಲಿ ರಾರಾಜಿಸಿತು. ಅದೇ ಮಾದರಿಯಲ್ಲಿ ಅಷ್ಟೇ ತ್ವರಿತವಾಗಿ ಮುಖಚಹರೆ ದಾಖಲು ವ್ಯವಸ್ಥೆಯೂ ಬಂದಿದೆ. ಇದರಲ್ಲಿ ಒಂದು ಗಮನಾರ್ಹ ಬದಲಾವಣೆ ಎಂದರೆ, ಕ್ಯೂ ಆರ್ ಕೋಡ್ ಅನ್ನು ಅಳಿಸಿಹಾಕಬಹುದು ಅಥವಾ ಖಾತೆಯನ್ನೇ ನಿಷ್ಕ್ರಿಯಗೊಳಿಸಬಹುದು. ಆದರೆ ಒಮ್ಮೆ ದಾಖಲಾಗುವ ಮುಖ ಚಹರೆಯ ಮಾಹಿತಿ ಅಳಿಸಿಹಾಕಲಾಗುವುದು ಅಸಾಧ್ಯ.
ಯಾವುದೇ ವ್ಯಕ್ತಿಯ ಮುಖ ಚಹರೆ ಒಮ್ಮೆ ದಾಖಲಾದರೆ ಅದು ಶಾಶ್ವತವಾಗಿ ಸರ್ವರ್‌ನಲ್ಲಿರುತ್ತದೆ. ಒಂದೊಮ್ಮೆ ಆ ದತ್ತಾಂಶವೇ ಕಳುವಾದರೆ, ವ್ಯಕ್ತಿಯ ಮಾಹಿತಿ ಸೋರಿಕೆಯಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿರುವ ಬಹುತೇಕ ಬ್ಯಾಂಕ್‌ಗಳು ಮತ್ತು ತಂತ್ರಜ್ಞಾನ ಆಧಾರಿತ ವೇದಿಕೆಗಳು ಮುಖ ಚಹರೆ ಆಧರಿಸಿದ ಪ್ರವೇಶವನ್ನೇ ಸುರಕ್ಷತೆಗಾಗಿ ಆಧರಿಸಿವೆ. ತಂತ್ರಜ್ಞಾನ ಎನ್ನುವುದು ಎಂದಿಗೂ ಸರಿಯಾಗಿರುತ್ತದೆ ಎಂದೇ ಹೇಳಲಾಗದು. ಸರಿಯಾದ ವ್ಯಕ್ತಿಯನ್ನೇ ತಪ್ಪಾಗಿ ಗ್ರಹಿಸುವುದು ಇದರ ನಿಜವಾದ ಸಮಸ್ಯೆ.
ವಯಸ್ಸು ಗ್ರಹಿಸುವಿಕೆಯೂ ಕೆಲ ಬಾರಿ ಸರಿಯಾಗಿರುವುದಿಲ್ಲ. ಸಣ್ಣವರನ್ನು ದೊಡ್ಡವರೆಂದು, ದೊಡ್ಡವರನ್ನು ಸಣ್ಣವರೆಂದು ಹೇಳಿದ ಬಹಳಷ್ಟು ಉದಾಹರಣೆಗಳು ಡಿಜಿಟಲ್ ಜಗತ್ತಿನಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ.
ಈ ಸಂಗತಿ ಊಹಾಪೋಹವಲ್ಲ. ಈಗಾಗಲೇ ಇಂಥ ಡಿಜಿಟಲ್ ಮಾಹಿತಿ ಸೋರಿಕೆಯಿಂದ ಹಲವರು ಸಂಕಷ್ಟ ಎದುರಿಸಿದ್ದಾರೆ. ಮುಖ ಚಹರೆ ಗುರುತಿಸುವಿಕೆ ದೋಷದಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಕೆಲವರಿಗೆ ವಿಮಾನ ಕೈತಪ್ಪಿದೆ. ಇನ್ನೂ ಕೆಲವರಿಗೆ ಬ್ಯಾಂಕ್ ಖಾತೆ ತೆರೆಯದೆ ಸಮಸ್ಯೆ ಎದುರಿಸುವಂತಾಗಿದೆ. ಇನ್ನೂ ಕೆಲವೆಡೆ ವ್ಯಕ್ತಿಗಳ ಮಾಹಿತಿ ಕದಿಯಲೂ ಇಂಥ ಮುಖ ಚಹರೆಯ ದಾಖಲೆ ದುರ್ಬಳಕೆಯಾಗಿದೆ.
ಭವಿಷ್ಯದಲ್ಲಿ ಸಾಲ ನೀಡುವ ಅಥವಾ ವಿಮೆ ಮಂಜೂರು ಮಾಡುವಲ್ಲೂ ಮುಖ ಚಹರೆ ಬಳಕೆಯಾಗಲಿದೆ. ನಿಮ್ಮ ಮುಖ ಆಧರಿಸಿಯೇ ಆರೋಗ್ಯ ವಿಶ್ಲೇಷಣೆ ಮಾಡುವುದರಿಂದ ಅಲ್ಲಿಯೂ ಸಾಕಷ್ಟು ನಷ್ಟ ಎದುರಾಗುವ ಸಾಧ್ಯತೆಗಳೂ ಇವೆ ಎಂದು ತಜ್ಞರು ಹೇಳಿದ್ದಾರೆ.
ಆದರೆ ಮುಖ ಚಹರೆ ಪತ್ತೆಯಿಂದ ಕೇವಲ ನಷ್ಟವೇ ಉಂಟಾಗುತ್ತದೆ ಎಂದು ಹೇಳಲಾಗದು. ಕುಖ್ಯಾತನೊಬ್ಬನ ಪತ್ತೆಗೂ ಇದೇ ಮುಖ ಚಹರೆ ದತ್ತಾಂಶ ಪೊಲೀಸರಿಗೆ ನೆರವಾಗಬಹುದು. ಆದರೆ ಮಕ್ಕಳ ದಾಖಲೆಗಳು ದುರ್ಬಳಕೆಯಾಗುವುದೇ ಹೆಚ್ಚು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮುಖ ಚಹರೆ ದಾಖಲೆಯು ಸಾಧಕಕ್ಕಿಂತ ಬಾಧಕವೇ ಹೆಚ್ಚು. ಅದರಲ್ಲೂ ವಂಚನೆ ಹಾಗೂ ಮಾಹಿತಿ ಕಳವು ಇರುವ ಜಗತ್ತಿನಲ್ಲಿ ಇದರಿಂದಾಗುವ ಹಾನಿಯನ್ನು ಊಹಿಸುವುದೂ ಅಸಾಧ್ಯ. ಕಳೆದುಹೋದ ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿ ಪತ್ರವನ್ನು ಬದಲಿಸಬಹುದು. ಆದರೆ ಮುಖ ಚಹರೆಯನ್ನು ಬದಲಿಸಲು ಸಾಧ್ಯವಿಲ್ಲ.
ಅಜಾಗರೂಕತೆ ಮತ್ತು ಕಡ್ಡಾಯ ಬಳಕೆಯ ನಡುವಿನ ತೆಳುವಾದ ಗೆರೆ ಏನು ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ತಂತ್ರಜ್ಞಾನವನ್ನು ತಡ ಮಾಡದೆ ಅಳವಡಿಸಿಕೊಳ್ಳುವುದರ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ ಎಂಬ ಪ್ರಶ್ನೆ ಎದುರಾಗಿದೆ.
ನಾವು ಉತ್ತರಿಸಬೇಕಾದ ಪ್ರಶ್ನೆಯೆಂದರೆ, ಅಜಾಗರೂಕ ಅನುಷ್ಠಾನ ಮತ್ತು ಕಡ್ಡಾಯ ಬಳಕೆಯ ನಡುವಿನ ಗೆರೆಯನ್ನು ನಾವು ಎಲ್ಲಿ ಎಳೆಯುತ್ತೇವೆ ಎಂಬುದು. ಈ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುವುದರ ಪರಿಣಾಮಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಹೀಗಾಗಿ ಮುಂದಿನ ಬಾರಿ ಎಲ್ಲಿಯೇ ಮುಖವನ್ನು ಸ್ಕ್ಯಾನ್ ಮಾಡಲು ಕೇಳಿದಾಗ ಅದನ್ನು ಕುರುಡಾಗಿ ಒಪ್ಪಿಕೊಳ್ಳಬೇಡಿ. ಅದರ ಅಗತ್ಯವೇನು? ಪ್ರಯೋಜನಗಳೇನು? ಅಪಾಯಗಳೇನು? ಎಂಬುದನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.