
ಸುಂಕ
ಐಸ್ಟಾಕ್ ಚಿತ್ರ
ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿದ ಶೇ 25, ಶೇ 18 ಹಾಗೂ ಶೇ 10 ಸುಂಕಗಳ ಹಿನ್ನೆಲೆ, ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ ಮತ್ತು ಹೊಸ ತೆರಿಗೆ ಗಣಿತದ ವಿವರವಾದ ವಿಶ್ಲೇಷಣೆ.
ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲಿನ ಸುಂಕವು ದಿನಕ್ಕೊಂದು, ಗಳಿಗೆಗೊಂದರಂತೆ ಬದಲಾಗುತ್ತಿರುವುದು ಉದ್ಯಮ ಹಾಗೂ ಸಮಾಜದಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ. ಶೇ 25, ಶೇ 18 ಅಥವಾ ಶೇ 10 ಈ ಅಂಕಿಗಳಲ್ಲಿ ಯಾವುದು ಅಸಲಿಯತ್ತು ಎಂಬುದರತ್ತ ಗೊಂದಲ ಮೂಡಿದೆ.
ಸರಳವಾಗಿ ಹೇಳುವುದಾದರೆ ತಮ್ಮ ರಾಷ್ಟ್ರ ಪ್ರವೇಶಿಸುವ ಇತರ ರಾಷ್ಟ್ರಗಳ ಯಾವುದೇ ವಸ್ತುವಿನ ಮೌಲ್ಯವನ್ನು ಆಧರಿಸಿ ಆ ರಾಷ್ಟ್ರ ಆಮದು ಸುಂಕ ಹೇರುತ್ತದೆ.
ಉದಾಹರಣೆಗೆ ಒಂದು ವಸ್ತುವಿನ ಬೆಲೆಯು 100 ಅಮೆರಿಕನ್ ಡಾಲರ್ (₹ 9 ಸಾವಿರ) ಎಂದಾದರೆ ಮತ್ತು ಸುಂಕವು ಶೇ 10ರಷ್ಟಾದರೆ ಅಮೆರಿಕ ಸರ್ಕಾರಕ್ಕೆ 10 ಡಾಲರ್ (₹900) ಪಾವತಿಸಬೇಕು. ಅಂದರೆ ವಸ್ತುವಿನ ಒಟ್ಟು ಬೆಲೆಯು ₹9,900 ಆಗಲಿದೆ. ಇದನ್ನೇ ‘ಆಡ್ ವ್ಯಾಲೋರಂ ಟ್ಯಾರಿಫ್’ ಎಂದು ಕರೆಯಲಾಗುತ್ತದೆ.
ಭಾರತದ ವಿಷಯದಲ್ಲಿ ಮೂರು ಹಂತಗಳಲ್ಲಿ ಸುಂಕ ಬದಲಾಗಿದೆ. ಮೊದಲನೆಯದು ಶೇ 25ರಷ್ಟು ದಂಡ ರೂಪದ ತೆರಿಗೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ಅಮೆರಿಕವು ತಮ್ಮ ದೇಶದೊಳಗೆ ಬರುವ ಭಾರತದ ಸರಕುಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಿತು.
ಎರಡನೇ ಹಂತದಲ್ಲಿ ಭಾರತ ಮತ್ತು ಅಮೆರಿಕದ ಮಧ್ಯಂತರ ವ್ಯಾಪಾರ ಒಪ್ಪಂದದ ನಂತರ ರಷ್ಯಾದಿಂದ ತೈಲ ಖರೀದಿಯನ್ನು ಭಾರತ ಕಡಿಮೆ ಮಾಡಿಕೊಳ್ಳುವ ಭರವಸೆ ನೀಡಿದ ಪರಿಣಾಮ, ಅಮೆರಿಕವು ದಂಡ ರೂಪದಲ್ಲಿ ವಿಧಿಸಿದ್ದ ಶೇ 25ರಷ್ಟರ ತೆರಿಗೆಯನ್ನು ಹಿಂಪಡೆಯಿತು.
ಅದಕ್ಕೆ ಬದಲಾಗಿ, ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನಲ್ಲಿ ಭಾರತಕ್ಕೆ ಏರಿದ್ದ ಪ್ರತಿ ಸುಂಕವು ಶೇ 18ಕ್ಕೆ ನಿಗದಿಪಡಿಸಲಾಯಿತು. ಅಂದರೆ ಇದೀಗ ಸುದ್ದಿಯಲ್ಲಿರುವ ಸುಪ್ರೀಂ ಕೋರ್ಟ್‌ನ ತೀರ್ಪಿನ ಮೊದಲು ಭಾರತದ ಉತ್ಪನ್ನಗಳ ಮೇಲೆ ಶೇ 18ರ ಸುಂಕ ಜಾರಿಯಲ್ಲಿತ್ತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿದ್ದ ವ್ಯಾಪಕ ಟ್ಯಾರಿಫ್ ಕ್ರಮಗಳು ಕಾನೂನು ಬಾಹಿರ ಎಂದಿರುವ ಅಲ್ಲಿನ ಸುಪ್ರೀಂ ಕೋರ್ಟ್, ಅಧ್ಯಕ್ಷರು ತಮ್ಮ ಅಧಿಕಾರ ಮೀರಿ ಟ್ಯಾರಿಫ್ ವಿಧಿಸಿದ್ದಾರೆ ಎಂದಿದೆ. ಜತೆಗೆ ವಿಶೇಷವಾಗಿ ಜಾರಿಗೊಳಿಸಿರುವ ಅನೇಕ ಟ್ಯಾರಿಫ್‌ಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದೂ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಇದರಿಂದಾಗಿ ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸುತ್ತಿದ್ದ ಶೇ 18ರ ಸುಂಕ ವ್ಯವಸ್ಥೆಯೂ ಕಾನೂನು ಆಧಾರವನ್ನು ಕಳೆದುಕೊಂಡಂತಾಗಿದೆ.
‘ತಾತ್ಕಾಲಿಕ ಟ್ಯಾರಿಫ್ ವಿಧಿಸಲು ಅಮೆರಿಕ ಅಧ್ಯಕ್ಷರಿಗೆ ಅವಕಾಶವಿದೆ. ಆದರೆ ಅದು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯಿಸಬೇಕು. ಇದು ಗರಿಷ್ಠ 150 ದಿನಗಳಿಗೆ ಸೀಮಿತವಾಗಿರಬೇಕು’ ಎಂದು 1974ರ ವ್ಯಾಪಾರ ಕಾಯ್ದೆ ಸೆಕ್ಷನ್ 122ರ ಅಡಿಯಲ್ಲಿ ಹೇಳಿರುವುದನ್ನೇ ಮುಂದು ಮಾಡಿಕೊಂಡು ಟ್ರಂಪ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಉತ್ಪನ್ನಗಳ ಮೇಲಿನ ಸುಂಕ ಶೇ 18ರಿಂದ ಶೇ 10ಕ್ಕೆ ಇಳಿಯುವ ವಿಷಯದಲ್ಲಿದೆ ಗಣಿತ. ಶೇ 18ರ ಸುಂಕಕ್ಕೆ ಈಗ ಕಾನೂನು ಮಾನ್ಯತೆಯನ್ನು ಕಳೆದುಕೊಂಡಿದೆ. ಹೊಸದಾಗಿ ಶೇ 10ರಷ್ಟು ಸುಂಕವು ಎಲ್ಲಾ ದೇಶಗಳಿಗೂ ಸಮಾನವಾಗಿ ಅನ್ವಯಿಸಲಿದೆ. ಜತೆಗೆ ಹಳೆಯ ಶೇ 18ರ ಸುಂಕವನ್ನು ಹೊಸದಾಗಿ ಜಾರಿಗೆ ಬರಲಿರುವ ಶೇ 10ರ ಮೇಲೆ ಸೇರಿಸಲು ಅವಕಾಶವಿಲ್ಲ. ಹೀಗಾಗಿ ಅಮೆರಿಕಕ್ಕೆ ರಫ್ತಾಗುವ ಭಾರತದ ಉತ್ಪನ್ನಗಳ ಮೇಲೆ ಶೇ 10 ಸುಂಕ ಮಾತ್ರ ಅನ್ವಯವಾಗಲಿದೆ.
ಅಮೆರಿಕ ಪ್ರವೇಶಿಸುವ ಭಾರತದ ಎಲ್ಲಾ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗದು. ಅಮೆರಿಕದ ಆರ್ಥಿಕ ಅಗತ್ಯಗಳ ಹಿನ್ನೆಲೆಯಲ್ಲಿ ಕೆಲವು ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಇವುಗಳಲ್ಲಿ...
ಇಂಧನ ಮತ್ತು ಇಂಧನ ಉತ್ಪನ್ನಗಳು, ಔಷಧಗಳು, ಕೆಲವು ಎಲೆಕ್ಟ್ರಾನಿಕ್ಸ್ ವಸ್ತುಗಳು, ಮಹತ್ವದ ಖನಿಜಗಳು ಮತ್ತು ಗೊಬ್ಬರ, ಕೆಲವು ವಾಹನಗಳು ಮತ್ತು ವಾಯುಯಾನ ಕ್ಷೇತ್ರದ ಕೆಲ ಉತ್ಪನ್ನಗಳು, ಆಯ್ದ ಕೃಷಿ ಉತ್ಪನ್ನಗಳ ಮೇಲ ಶೇ 10ರಷ್ಟು ತೆರಿಗೆ ಅನ್ವಯವಾಗಲಿದೆ.
ಉದಾಹರಣೆ ರೂಪದಲ್ಲಿ ಹೇಳುವುದಾದರೆ 100 ಡಾಲರ್‌ನ ವಸ್ತುವಿಗೆ ಈ ಮೊದಲಿನ ಶೇ 18ರ ಸುಂಕ ದರದಲ್ಲಿ 18 ಡಾಲರ್ ಸೇರಿ ಉತ್ಪನ್ನದ ಒಟ್ಟು ಬೆಲೆಯು 118 ಡಾಲರ್ ಆಗುತ್ತಿತ್ತು. ಅದೇ ವಸ್ತುವಿನ ಈಗಿನ ಬೆಲೆ ಶೇ 10ರ ದರದಲ್ಲಿ 110 ಡಾಲರ್ ಆಗಲಿದೆ. ಇದರಿಂದ ಪ್ರತಿ 100 ಡಾಲರ್ ವಸ್ತುವಿನ ಮೇಲೆ ಭಾರತಕ್ಕೆ ಶೇ 8ರಷ್ಟು ಉಳಿತಾಯವಾಗಲಿದೆ.
ಅಮೆರಿಕದ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಟ್ರಂಪ್ ಪ್ರತಿಕ್ರಿಯಿಸಿದ್ದು ‘ಯಾವುದೂ ಬದಲಾಗಿಲ್ಲ’ ಎಂದಿದ್ದಾರೆ. ಅವರ ಹೇಳಿಕೆಯನ್ನು ಗಮನಿಸಿದರೆ, ಅಮೆರಿಕ ಇನ್ನೂ ಟ್ಯಾರಿಫ್ ವಸೂಲಿ ಮಾಡುತ್ತಿದೆ. ಭಾರತ ಇನ್ನೂ ಟ್ಯಾರಿಫ್ ಪಾವತಿಸುತ್ತಿದೆ. ವ್ಯಾಪಾರ ಸಮತೋಲನದ ಗುರಿ ಬದಲಾಗಿಲ್ಲ. ಆದರೆ ವಾಸ್ತವವಾಗಿ ನೋಡಿದರೆ, ಟ್ಯಾರಿಫ್ ಪ್ರಮಾಣ ಸ್ಪಷ್ಟವಾಗಿ ಇಳಿಕೆಯಾಗಿದೆ.
ಹೀಗಾಗಿ ದಂಡ ರೂಪದಲ್ಲಿ ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಆರಂಭದಲ್ಲಿ ವಿಧಿಸಿದ ಶೇ 25ರ ಸುಂಕವು ನಂತರ ಪ್ರತಿ ಸುಂಕದ ಆಧಾರದಲ್ಲಿ ಶೇ 18ಕ್ಕೆ ಇಳಿಯಿತು. ಇದನ್ನು ಸುಪ್ರೀಂ ಕೋರ್ಟ್ ಅಮಾನ್ಯ ಮಾಡಿದ ನಂತರ ಜಾರಿಗೆ ಬರುವ ಹೊಸ ಕ್ರಮವು ಶೇ 10ರ ಸುಂಕ ಅನ್ವಯವಾಗಲಿದೆ. 150 ದಿನಗಳಿಗೆ ಅನ್ವಯವಾಗಲಿರುವ ಇದು, ಫೆ. 24ರ ಮಧ್ಯರಾತ್ರಿ 12.01ರಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.