ADVERTISEMENT

Operation Sindoor: ನಾಶಗೊಂಡ ಉಗ್ರರ ಒಂಬತ್ತು ನೆಲೆಗಳು ಯಾವುವು? ಅವು ಎಲ್ಲಿವೆ?

ಪಿಟಿಐ
Published 7 ಮೇ 2025, 13:06 IST
Last Updated 7 ಮೇ 2025, 13:06 IST
<div class="paragraphs"><p> Operation Sindoor: ಭಾರತದ ದಾಳಿ </p></div>

Operation Sindoor: ಭಾರತದ ದಾಳಿ

   

ನವದೆಹಲಿ: ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿದ್ದ ಉಗ್ರರ ಪ್ರಮುಖ ತಾಣಗಳನ್ನು ಭಾರತೀಯ ಸೇನೆ ನಾಶಪಡಿಸಿದೆ.

ಇದರಲ್ಲಿ ಬಹಾವಲ್ಪುರದಲ್ಲಿರುವ ಜೈಷ್‌-ಎ-ಮೊಹಮ್ಮದ್ ಪ್ರಧಾನ ಕಚೇರಿ ಹೊರತುಪಡಿಸಿ, ಉಳಿದೆಲ್ಲ ಭಯೋತ್ಪಾದಕರ ಶಿಬಿರಗಳು ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಗೆ ಹತ್ತಿರದಲ್ಲಿವೆ. 

ADVERTISEMENT

ಪಾಕ್‌ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 21 ಭಯೋತ್ಪಾದಕ ಶಿಬಿರಗಳು ಸಕ್ರಿಯವಾಗಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಸಿಕ್ಕಿತ್ತು. ಈ ಪೈಕಿ, ಒಂಬತ್ತು ಶಿಬಿರಗಳನ್ನು ಮಾತ್ರ ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಯಿತು. ಭಾರತದಲ್ಲಿ ನಡೆದ ಪ್ರಮುಖ ದಾಳಿಗಳಲ್ಲಿ ಇಲ್ಲಿ ತರಬೇತಿ ಪಡೆದವರೇ ಭಾಗಿಯಾಗಿದ್ದರು.  ಮುಂಬೈ ದಾಳಿಕೋರ ಅಜ್ಮಲ್ ಕಸಬ್ ಇಲ್ಲಿನ ಶಿಬಿರದಲ್ಲಿ ತರಬೇತಿ ಪಡೆದಿದ್ದ. ಡೇವಿಡ್  ಹೆಡ್ಲಿ, ಝಕಿ-ಉರ್-ರೆಹಮಾನ್ ಲಖ್ವಿ ಮತ್ತು ಮಸೂದ್ ಅಜರ್ ಆಗಾಗ್ಗೆ ಭೇಟಿ ನೀಡಿದ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ.   

* ಮರ್ಕಜ್ ಸುಭಾನ್, ಬಹಾವಲ್ಪುರ್, ಪಾಕಿಸ್ತಾನ: ಇಲ್ಲಿ ‘ಜೈಷ್‌–ಇ–ಮೊಹಮ್ಮದ್‌’ ಉಗ್ರ ಸಂಘಟನೆಯ ಪ್ರಮುಖ ಕಚೇರಿ ಇದೆ. ಈ ಪ್ರದೇಶವು ಅಂತರರಾಷ್ಟ್ರೀಯ ಗಡಿಯಿಂದ 100 ಕಿ.ಮೀ. ದೂರದಲ್ಲಿದೆ. ಭಯೋತ್ಪಾದಕರ ನೇಮಕಾತಿ, ತರಬೇತಿ ಹಾಗೂ ಬೋಧನೆಗೆ ಬಳಕೆಯಾಗುತ್ತಿರುವ ಸ್ಥಳವಿದು. ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ಸೇರಿದಂತೆ ಹಲವು ಕಮಾಂಡರ್‌ಗಳು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಅವರು ಈ ಶಿಬಿರದಿಂದಲೇ ತಮ್ಮ ಸಹಚರರಿಗೆ ನಿರ್ದೇಶನ ನೀಡುತ್ತಿದ್ದರು. 

1999ರಲ್ಲಿ ಕಂದಹಾರ್ ವಿಮಾನ (ಐಸಿ–814) ಅಪಹರಿಸಲಾಗಿತ್ತು. ಭಾರತದ ಜೈಲಿನಲ್ಲಿದ್ದ ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿದರೆ ಮಾತ್ರ ಒತ್ತೆಯಾಳುಗಳನ್ನು ಬಿಡುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದರು. ಸರ್ಕಾರವು ಮಸೂದ್‌ ಅಜರ್‌ನನ್ನು ಬಿಡುಗಡೆ ಮಾಡಿತ್ತು. ಆ ಬಳಿಕ, ಈ ಪ್ರದೇಶವು ಜೆಇಎಂನ ಪ್ರಮುಖ ಕೇಂದ್ರವಾಯಿತು. 

2001ರಲ್ಲಿ ಸಂಸತ್ತಿನ ಮೇಲೆ ದಾಳಿ, 2000ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಮೇಲಿನ ದಾಳಿ, 2016ರಲ್ಲಿ ಪಠಾಣ್‌ಕೋಟ್‌ನಲ್ಲಿರುವ ವಾಯುನೆಲೆ ಮೇಲಿನ ದಾಳಿ ಮತ್ತು 2019 ರಲ್ಲಿ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಈ ಉಗ್ರರ ಗುಂಪು ಭಾಗಿಯಾಗಿದೆ.

ಅಜರ್ ಏಪ್ರಿಲ್ ಸಾರ್ವಜನಿಕವಾಗಿ 2019ರಿಂದ ಕಾಣಿಸಿಕೊಂಡಿಲ್ಲ. ಆತ 2000ರ ಜನವರಿಯಲ್ಲಿ ಈ ಉಗ್ರ ಸಂಘಟನೆ ಆರಂಭಿಸಿದ. ಪಾಕಿಸ್ತಾನದ ಐಎಸ್‌ಐ, ತಾಲಿಬಾನ್ ನಾಯಕರು, ಬಿನ್ ಲಾಡೆನ್ ಮತ್ತು ಪಾಕಿಸ್ತಾನದ ಸುನ್ನಿ ಪಂಥೀಯ ಸಂಘಟನೆಗಳಿಂದ ಸಹಾಯ ಪಡೆದಿದ್ದ. 

* ಮರ್ಕಜ್ ತಯಬಾ, ಮುರೀದ್ಕೆ , ಪಾಕಿಸ್ತಾನ: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಇದು ಲಷ್ಕರ್-ಎ-ತಯಬಾದ ಪ್ರಧಾನ ಕಚೇರಿ. ಇದನ್ನು ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಲಾಹೋರ್‌ನಿಂದ 40 ಕಿ.ಮೀ. ದೂರದಲ್ಲಿದೆ. ಇಲ್ಲಿ ಉಗ್ರರಿಗೆ ದೈಹಿಕ ತರಬೇತಿ ನೀಡಿ ಎರಡು ವಾರಗಳ ಬೋಧನೆ ಮಾಡಲಾಗುತ್ತದೆ.

ಇಲ್ಲಿ ತರಬೇತಿ ಪಡೆದ ಭಯೋತ್ಪಾದಕರು 26/11ರ ಮುಂಬೈ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಯೊಂದಿಗೆ ನಂಟು ಹೊಂದಿದ್ದಾರೆ. 2008ರ ಮುಂಬೈ ದಾಳಿಯಲ್ಲಿ ಸೆರೆಸಿಕ್ಕ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ ಇಲ್ಲಿ ತರಬೇತಿ ಪಡೆದಿದ್ದಾಗಿ ಒಪ್ಪಿಕೊಂಡಿದ್ದ. 26/11 ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿ ಹಾಗೂ ಭಾರತಕ್ಕೆ ಇತ್ತೀಚೆಗೆ ಹಸ್ತಾಂತರಗೊಂಡ ಉಗ್ರ ತಹವ್ವುರ್‌ ಹುಸೇನ್‌ ರಾಣಾ ಕೂಡ ಈ ಶಿಬಿರಕ್ಕೆ ಭೇಟಿ ನೀಡಿ ತರಬೇತಿ ಪಡೆದಿದ್ದರು. 

2011ರಲ್ಲಿ ಪಾಕಿಸ್ತಾನದಲ್ಲಿ ಕೊಲ್ಲಲ್ಪಟ್ಟ ಅಲ್ ಖೈದಾ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಮುರೀದ್ಕೆ ಅತಿಥಿಗೃಹ ನಿರ್ಮಾಣಕ್ಕಾಗಿ ₹10 ಲಕ್ಷ ದೇಣಿಗೆ ನೀಡಿದ್ದ.

ಹಫೀಜ್ ಸಯೀದ್ ನೇತೃತ್ವದಲ್ಲಿ ಈ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. 

* ಮೆಹಮೂನಾ ಜೋಯಾ ಸಿಯಾಲ್‌ಕೋಟ್, ಪಾಕಿಸ್ತಾನ: ಹಿಜ್‌ಬುಲ್ ಮುಜಾಹಿದೀನ್‌ ಸಂಘಟನೆಯ ಪ್ರಮುಖ ತರಬೇತಿ ಕೇಂದ್ರವಾಗಿರುವ ಇದು ಅಂತರರಾಷ್ಟ್ರೀಯ ಗಡಿಯಿಂದ 12 ಕಿ.ಮೀ. ದೂರದಲ್ಲಿದೆ. ಕಠುವಾ ಮತ್ತು ಜಮ್ಮು ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಈ ಶಿಬಿರವನ್ನು ನಿಯಂತ್ರಣ ಕೇಂದ್ರವಾಗಿ ಬಳಸಲಾಗುತ್ತಿತ್ತು. ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲಿನ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಗಳನ್ನು ಈ ಶಿಬಿರದಿಂದಲೇ ಯೋಜಿಸಿ ಕಾರ್ಯಗತಗೊಳಿಸಲಾಗಿತ್ತು. 

* ಸರ್ಜಲ್ ಉಗ್ರ ಶಿಬಿರ, ಸಿಯಾಲ್‌ಕೋಟ್, ಪಾಕಿಸ್ತಾನ: ಇದು ಅಂತರರಾಷ್ಟ್ರೀಯ ಗಡಿಯಿಂದ ಆರು ಕಿ.ಮೀ ದೂರದಲ್ಲಿದೆ. 2025ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ನಾಲ್ವರು ಪೊಲೀಸ್‌ ಸಿಬ್ಬಂದಿಯನ್ನು ಕೊಂದ ಭಯೋತ್ಪಾದಕರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು. 

* ಸವಾಯಿ ನಾಲಾ ಶಿಬಿರ, ಮುಜಫರಾಬಾದ್, ಪಾಕ್‌ ಆಕ್ರಮಿತ ಕಾಶ್ಮೀರ: ತಂಗ್ಧಾರ್‌ ವಲಯದ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಇದು ಎಲ್‌ಇಟಿಯ ಪ್ರಮುಖ ತರಬೇತಿ ಕೇಂದ್ರ. ಇಲ್ಲಿಯ ಉಗ್ರರೇ ಕಳೆದ ವರ್ಷ ಅಕ್ಟೋಬರ್ 20 ಮತ್ತು 24ರಂದು ಸೋನ್‌ಮಾರ್ಗ್‌ನಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ಮತ್ತು ಏಪ್ರಿಲ್ 22ರ ಪಹಲ್ಗಾಮ್ ದಾಳಿ ನಡೆಸಿರುವ ಶಂಕೆ ಇದೆ.

* ಸೈಯದ್ನಾ ಬೆಲಾಲ್ ಉಗ್ರರ ತಾಣ, ಮುಜಫರಾಬಾದ್, ಪಾಕ್‌ ಆಕ್ರಮಿತ ಕಾಶ್ಮೀರ: ಜೈಷ್-ಇ-ಮೊಹಮ್ಮದ್‌ನ ಶಿಬಿರ ಇದಾಗಿದೆ. ಗಡಿ ನಿಯಂತ್ರಣ ರೇಖೆಯ ಆಜುಬಾಜಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಕೈಗೊಳ್ಳಲು ಉಗ್ರರಿಗೆ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಒದಗಿಸುವುದು ಹಾಗೂ ವಿವಿಧ ತಂತ್ರಗಳ ತರಬೇತಿ ನೀಡಲಾಗುತ್ತಿತ್ತು. 

* ಗುಲ್ಪುರ್ ಶಿಬಿರ, ಕೋಟ್ಲಿ, ಪಾಕ್‌ ಆಕ್ರಮಿತ ಕಾಶ್ಮೀರ: ಗಡಿ ನಿಯಂತ್ರಣ ರೇಖೆಯಿಂದ  30 ಕಿ.ಮೀ ದೂರದಲ್ಲಿರುವ ಇದು ರಾಜೌರಿ-ಪೂಂಛ್‌ನಲ್ಲಿ ಕೃತ್ಯ ಎಸಗುತ್ತಿದ್ದ ಎಲ್‌ಇಟಿ ಭಯೋತ್ಪಾದಕರ ನೆಲೆ. 2023ರ ಏಪ್ರಿಲ್ 20ರಂದು ಪೂಂಛ್‌ನಲ್ಲಿ ನಡೆದ ದಾಳಿ ಮತ್ತು 2024ರ ಜೂನ್‌ 9ರಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯಾತ್ರಿಕರ ಮೇಲಿನ ದಾಳಿಗಳನ್ನು ಇಲ್ಲಿ ತರಬೇತಿ ಪಡೆದ ಭಯೋತ್ಪಾದಕರು ನಡೆಸಿದ್ದರು. 26/11ರ ಸಂಚುಕೋರ ಝಕಿ-ಉರ್-ರೆಹಮಾನ್ ಲಖ್ವಿ ಆಗಾಗ್ಗೆ ಈ ಶಿಬಿರಕ್ಕೆ ಭೇಟಿ ನೀಡಿ ಬೋಧನೆ ಮತ್ತು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ಎಂಬ ಮಾಹಿತಿಗಳಿವೆ. 

*ಅಬ್ಬಾಸ್ ತಾಣ, ಕೋಟ್ಲಿ, ಪಾಕ್‌ ಆಕ್ರಮಿತ ಕಾಶ್ಮೀರ: ಗಡಿ ನಿಯಂತ್ರಣ ರೇಖೆಯಿಂದ ಸುಮಾರು 13 ಕಿ.ಮೀ ದೂರದಲ್ಲಿರುವ ಇದು ಎಲ್‌ಇಟಿಯ ಆತ್ಮಹತ್ಯಾ ಬಾಂಬರ್‌ಗಳ ತರಬೇತಿ ಕೇಂದ್ರವೆಂದು ಕರೆಯಲಾಗುತ್ತದೆ. ಇಲ್ಲಿ 50 ಉಗ್ರರಿಗೆ ತರಬೇತಿ ನೀಡುವ ಮೂಲಸೌಕರ್ಯ ಇದೆ. 

* ಬರ್ನಾಲಾ ಶಿಬಿರ, ಭಿಂಬರ್, ಪಾಕ್‌ ಆಕ್ರಮಿತ ಕಾಶ್ಮೀರ: ರಾಜೌರಿ-ಪೂಂಛ್‌ ವಲಯದ ಎದುರಿನ ಗಡಿ ನಿಯಂತ್ರಣ ರೇಖೆಯಿಂದ 9 ಕಿ.ಮೀ ದೂರದಲ್ಲಿದೆ. ಇಲ್ಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ನಿರ್ವಹಣೆ ಹಾಗೂ ವಿವಿಧ ತಂತ್ರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.