
ಇಂದು 'ವಿಶ್ವ ಮಾತೃಭಾಷಾ' ದಿನ. ಭಾವಜೀವಿಯಾದ ಮನುಷ್ಯ ಸಾಮಾಜಿಕ ಜೀವಿಯೂ ಹೌದು. ಭಾವನೆಗಳನ್ನು ಸಮಾಜದಲ್ಲಿನ ಇನ್ನಿತರರೊಂದಿಗೆ ಹಂಚಿಕೊಳ್ಳಲು ಸಂವಹನ, ಸ್ಪಂದನದ ಅಗತ್ಯ ಇರಲೇಬೇಕು. ಇದಕ್ಕೆ ಚಂದದ ಸೇತುವೆಯೇ ಭಾಷೆ.
ಎಷ್ಟೇ ಭಾಷೆ ಕಲಿತರೂ ಮೂಲ ಯೋಚನೆಗಳೆಲ್ಲ ರೂಪುಗೊಳ್ಳುವುದು, ಚಂದದ ಭಾವನೆಗಳು ಹುಟ್ಟಿ, ಅವು ಮಾತಿನ ಅನುಭೂತಿಗೆ ನಿಲುಕುವುದೆಲ್ಲ ಮಾತೃಭಾಷೆಯಲ್ಲಿಯೇ. ಹಾಗಾಗಿ ತಾಯ್ನುಡಿ ಎನ್ನುವುದು ಹೃದಯದ ಭಾಷೆ. ದೇಶದಲ್ಲಿರುವ ಪ್ರಮುಖ 8 ಸ್ಥಳೀಯ ಭಾಷೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ತುಳು: ಕರಾವಳಿ ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಪ್ರಧಾನವಾಗಿ ಮಾತನಾಡುವ ಭಾಷೆ ತುಳು. ಶ್ರೀಮಂತ ಮೌಖಿಕ ಪರಂಪರೆಯನ್ನು(ಜಾನಪದ ಗೀತೆಗಳು ಮತ್ತು ಭೂತ ಕೋಲ) ಹೊಂದಿದ್ದು, ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಒಂದು ಕಾಲದಲ್ಲಿ ಅದು ತನ್ನದೇ ಆದ ಲಿಪಿಯನ್ನು (ತಿಗಲರಿ) ಹೊಂದಿದ್ದರೂ, ಇಂದು ಅದನ್ನು ಹೆಚ್ಚಾಗಿ ಕನ್ನಡ ಲಿಪಿಯಲ್ಲಿ ಬರೆಯಲಾಗುತ್ತದೆ.
ಬೋಡೋ: ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಗುರುತಿಸಲ್ಪಟ್ಟ ಬೋಡೋ ಭಾಷೆಯನ್ನು ಅಸ್ಸಾಂನಲ್ಲಿ ಹೆಚ್ಚು ಮಾತನಾಡುತ್ತಾರೆ. ಇದು ಟಿಬೆಟೊ-ಬರ್ಮನ್ ಭಾಷಾ ಕುಟುಂಬಕ್ಕೆ ಸೇರಿದ್ದು, ದಿಯೋಧೈ ಎಂಬ ತನ್ನದೇ ಆದ ಲಿಪಿಯನ್ನು ಹೊಂದಿದೆ.
ಕೊಡವ: ಕರ್ನಾಟಕದ ಕೊಡಗು ಜಿಲ್ಲೆಯ ಸ್ಥಳೀಯ ಭಾಷೆ ಇದಾಗಿದೆ. ಕೊಡವ ಸಮುದಾಯದವರು ಈ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ.
ಗೊಂಡಿ: ಮಧ್ಯ ಭಾರತದಾದ್ಯಂತ ಗೊಂಡ್ ಬುಡಕಟ್ಟು ಸಮುದಾಯಗಳು ಮಾತನಾಡುವ ಗೊಂಡಿ ಭಾಷೆ ಭಾರತದ ಅತಿದೊಡ್ಡ ಬುಡಕಟ್ಟು ಭಾಷೆಗಳಲ್ಲಿ ಒಂದಾಗಿದೆ. ಇದಕ್ಕಾಗಿ ಹಲವಾರು ಲಿಪಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೂ ಇದನ್ನು ಹೆಚ್ಚಾಗಿ ಪ್ರಾದೇಶಿಕ ಲಿಪಿಗಳಲ್ಲಿ ಬರೆಯಲಾಗುತ್ತದೆ.
ಖಾಸಿ: ಖಾಸಿ ಭಾಷೆಯನ್ನು ಮೇಘಾಲಯದಲ್ಲಿ ಮಾತನಾಡಲಾಗುತ್ತದೆ. ಇದು ಆಸ್ಟ್ರೋಏಷಿಯಾಟಿಕ್ ಭಾಷಾ ಕುಟುಂಬಕ್ಕೆ ಸೇರಿದ್ದು, ಭಾರತದಲ್ಲಿ ಅಪರೂಪ. ಇದನ್ನು ರೋಮನ್ ಲಿಪಿಯಲ್ಲಿ ಬರೆಯಲಾಗುತ್ತದೆ.
ತೋಡ: ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿರುವ ತೋಡ ಬುಡಕಟ್ಟು ಸಮುದಾಯದವರು ಈ ಭಾಷೆಯಲ್ಲಿ ಮಾತನಾಡುತ್ತಾರೆ. ವಿಶಿಷ್ಟವಾದ ಧ್ವನಿಶಾಸ್ತ್ರ (phonetics)ಹೊಂದಿರುವ 'ತೋಡ' ಅಳಿವಿನಂಚಿನಲ್ಲಿರುವ ದ್ರಾವಿಡ ಭಾಷೆಯಾಗಿದೆ.
ನಿಹಾಲಿ: ಭಾರತದ ಅತ್ಯಂತ ನಿಗೂಢ ಭಾಷೆಗಳಲ್ಲಿ ಒಂದಾದ ನಿಹಾಲಿಯನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಇದು ಇತರ ಭಾಷೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರದ ಕಾರಣ ಭಾಷಾಶಾಸ್ತ್ರಜ್ಞರು ಇದನ್ನು ಪ್ರತ್ಯೇಕ ಭಾಷೆ ಎಂದೇ ಪರಿಗಣಿಸುತ್ತಾರೆ.
ಗ್ರೇಟ್ ಅಂಡಮಾನೀಸ್: ಅಂಡಮಾನ್ ದ್ವೀಪಗಳ ಸ್ಥಳೀಯ ಜನರು ಮಾತನಾಡುವ ಗ್ರೇಟ್ ಅಂಡಮಾನೀಸ್ ಅಳಿವಿನಂಚಿನಲ್ಲಿದೆ. ಈ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವವರು ಬಹಳ ಕಡಿಮೆ.
ಕೊಂಕಣಿ: ಭಾರತದ ಪಶ್ಚಿಮ ಕರಾವಳಿಭಾಗದಲ್ಲಿ ಮಾತನಾಡುವ ಪ್ರಮುಖ ಇಂಡೋ-ಆರ್ಯನ್ ಭಾಷೆ ಇದಾಗಿದೆ. ಇದು ಗೋವಾ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ. ಕನ್ನಡ, ದೇವನಾಗರಿ, ರೋಮನ್ ಸೇರಿದಂತೆ 5 ವಿವಿಧ ಲಿಪಿಗಳಲ್ಲಿ ಬರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.