ಕ್ರಿಸ್ಟಿನಾ ಕೋಚ್, ರೀಡ್ ವೈಸ್ಮನ್, ವಿಕ್ಟರ್ ಗ್ಲೋವರ್ ಮತ್ತು ಜೆರೆಮಿ ಹ್ಯಾನ್ಸೆನ್
ನಾಸಾ ಚಿತ್ರ
ಚಂದ್ರನ ಸುತ್ತ ಹತ್ತು ದಿನಗಳ ಸುತ್ತಾಟಕ್ಕೆ ನಾಲ್ವರು ಗಗನಯಾನಿಗಳನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ. ಫೆಬ್ರುವರಿಯಲ್ಲಿ ಇದಕ್ಕೆ ಸಮಯ ನಿಗದಿಯಾಗಿದ್ದು, ಭಾರತದ ಚಂದ್ರಯಾನ-3ರ ನಂತರ ಇಡೀ ಜಗತ್ತೇ ಮತ್ತೆ ಚಂದ್ರನತ್ತ ಗಮನ ನೆಟ್ಟಿದೆ.
2025ರ ಏಪ್ರಿಲ್‌ನಲ್ಲಿ ಈ ಮಹತ್ವದ ಕಾರ್ಯಾಚರಣೆಯನ್ನು ನಡೆಸುವುದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಈ ಹಿಂದೆ ಹೇಳಿತ್ತು. ಆದರೆ ಅದನ್ನು 2026ರ ಆರಂಭಕ್ಕೆ ಮುಂದೂಡಿತು. ಚಂದ್ರನ ಅಂಗಳಕ್ಕೆ ಗಗನಯಾನಿಗಳ ಕಳುಹಿಸಿದ್ದ ನಾಸಾ, ಇದೀಗ 50 ವರ್ಷಗಳ ನಂತರ ನಾಲ್ವರು ಗಗನಯಾನಿಗಳನ್ನು ಪರೀಕ್ಷಾರ್ಥ ಪ್ರಯೋಗವಾಗಿ ಕರೆದೊಯ್ದು, ಮರಳಿ ಕರೆತರುವ ನೌಕೆಯನ್ನು ಸಜ್ಜುಗೊಳಿಸಿದೆ.
ನಾಸಾದ ‘ಆರ್ಟೆಮಿಸ್’ನ ಎರಡನೇ ಯೋಜನೆಯಾದ ‘ಮಿಷನ್ ಆರ್ಟೆಮಿಸ್–2’ರ ಮೂಲಕ ಭವಿಷ್ಯದಲ್ಲಿ ಚಂದ್ರನ ಮೇಲ್ಮೈನಲ್ಲಿ ಮಾನವ ಸಹಿತ ನೌಕೆಯನ್ನು ಇಳಿಸಿ, ಯಶಸ್ವಿಯಾಗಿ ಭೂಮಿಗೆ ಕರೆತರುವ ಯೋಜನೆಯ ಭಾಗ ಇದಾಗಿದೆ. ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ನಾಸಾದ ಹಂಗಾಮಿ ಉಪ ಸಹಾಯಕ ಆಡಳಿತಾಧಿಕಾರಿ ಲಕೀಶಾ ಹಾಕಿನ್ಸ್ ಹೇಳಿದ್ದಾರೆ.
‘ಚಂದ್ರನ ಅನ್ವೇಷಣೆಯಲ್ಲಿ ಇತಿಹಾಸದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ. ಫೆಬ್ರುವರಿಯಲ್ಲಿ ಈ ಬಾರಿಯ ಯೋಜನೆಯ ಉಡ್ಡಯನ ನಡೆಯಲಿದೆ. ಆದರೆ ಅದಕ್ಕೂ ಪೂರ್ವದಲ್ಲಿ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ’ ಎಂದಿದ್ದಾರೆ.
‘ಗಗನಯಾನಿಗಳನ್ನು ಚಂದ್ರನತ್ತ ಕರೆದೊಯ್ಯಲು ಶಕ್ತಿಶಾಲಿ ರಾಕೆಟ್ ಆದ ಸ್ಪೇಸ್ ಲಾಂಚ್ ಸಿಸ್ಟಂ (SLS) ಸಿದ್ಧಪಡಿಸಲಾಗಿದೆ’ ಎಂದು ಆರ್ಟೆಮಿಸ್ ಉಡ್ಡಯನ ನಿರ್ದೇಶಕ ಚಾರ್ಲಿ ಬ್ಲಾಕ್‌ವೆಲ್ ಥಾಂಪ್ಸನ್ ಈ ಹಿಂದೆ ತಿಳಿಸಿದ್ದರು.
ಈ ಎಸ್‌ಎಲ್‌ಎಸ್‌ಗೆ ಜೋಡಿಸಿರುವ ಓರಿಯನ್ ಎಂದು ಕರೆಯಲಾಗುವ ಕ್ಯಾಪ್ಸೂಲ್‌ನಲ್ಲಿ ಗಗನಯಾನಿಗಳು ಪ್ರಯಾಣಿಸಲಿದ್ದಾರೆ.
ಆರ್ಟೆಮಿಸ್‌ನ ಮೊದಲ ಕಾರ್ಯಾಚರಣೆ 2022ರ ಸೆಪ್ಟೆಂಬರ್‌ನಲ್ಲಿ 22 ದಿನಗಳ ಕಾಲ ನಡೆದಿತ್ತು. ಇದರಲ್ಲಿ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ ಪರಿಭ್ರಮಿಸಿ ಭೂಮಿಯ ವಾತಾವರಣವನ್ನು ಮತ್ತೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.
ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಸಂದರ್ಭದಲ್ಲಿ ಶಾಖವನ್ನು ತಡೆದುಕೊಳ್ಳುವ ನೌಕೆಯ ಗುರಾಣಿಯಲ್ಲಿ ಸಮಸ್ಯೆ ಕಂಡುಬಂದರೂ, ಯೋಜನೆ ಯಶಸ್ವಿಯಾಗಿತ್ತು. ಆ ಸಮಸ್ಯೆಗಳನ್ನು 2ನೇ ಆವೃತ್ತಿಯಲ್ಲಿ ಪರಿಹರಿಸಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಆರ್ಟೆಮಿಸ್–2ರಲ್ಲಿ ನಾಲ್ವರು ಗಗನಯಾನಿಗಳು ಚಂದ್ರನ ಸುತ್ತ ಹತ್ತು ದಿನಗಳ ಕಾಲ ಪರಿಭ್ರಮಿಸಿ ಭೂಮಿಗೆ ಹಿಂದಿರುಗಲಿದ್ದಾರೆ. ಈ ಯೋಜನೆಗೆ ನಾಸಾದ ರೀಡ್ ವೈಸ್ಮನ್, ವಿಕ್ಟರ್ ಗ್ಲೋವರ್ ಮತ್ತು ಕ್ರಿಸ್ಟಿನಾ ಕೋಚ್ ಹಾಗೂ ಕೆನಡಿಯನ್ ಬಾಹ್ಯಾಕಾಶ ಸಂಸ್ಥೆಯ ಜೆರೆಮಿ ಹ್ಯಾನ್ಸೆನ್ ಅವರು ಆಯ್ಕೆಯಾಗಿದ್ದಾರೆ. ಇವರು ಚಂದ್ರನ ಸುತ್ತ ಹಾರಾಟ ನಡೆಸಲಿದ್ದಾರೆಯೇ ಹೊರತು ಅದರ ಮೇಲೆ ಇಳಿಯುವುದಿಲ್ಲ.
ಹೀಗಿದ್ದರೂ 1972ರಲ್ಲಿ ಅಪೊಲೊ 17ರ ನಂತರ ಭೂಮಿಯ ಕಕ್ಷೆಯಾಚೆ ಚಂದ್ರನ ಸಮೀಪ ಹೋಗುತ್ತಿರುವ ಮಾನವ ಸಹಿತ ಕಾರ್ಯಾಚರಣೆ ಇದಾಗಿದೆ ಎಂದು ನಾಸಾದ ವಿಜ್ಞಾನಿಗಳು ಬಣ್ಣಿಸಿದ್ದಾರೆ.
‘ನಾಸಾದ ಸಿಬ್ಬಂದಿ ಹಿಂದೆಂದೂ ಇಲ್ಲದಷ್ಟು ದೂರ ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿದ್ದಾರೆ. ಚಂದ್ರನಿಗೆ 9,200 ಕಿ.ಮೀ. ದೂರದವರೆಗೂ ಆರ್ಟೆಮಿಸ್–2ರ ಗಗನಯಾನಿಗಳು ತಲುಪಲಿದ್ದಾರೆ. ಇದು ಹಿಂದಿನ ಕಾರ್ಯಾಚರಣೆಗಳಿಗಿಂತಲೂ ಚಂದ್ರನಿಗೆ ಅತ್ಯಂತ ಸಮೀಪದ್ದಾಗಿರಲಿದೆ. ಚಂದ್ರನ ಅಂಗಳದಲ್ಲಿ ನೌಕೆ ಇಳಿಸಲು ಸೂಕ್ತ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲು ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ’ ಎಂದಿದ್ದಾರೆ.
ಈ ಯೋಜನೆಯಲ್ಲಿ ಓರಿಯನ್ ಕ್ಯಾಪ್ಸೂಲ್‌ನಲ್ಲಿ ಗಗನಯಾನಿಗಳು ಪ್ರಯಾಣಿಸಲಿದ್ದಾರೆ. ಭೂಮಿಯಿಂದ ಮೇಲಕ್ಕೆ ಚಿಮ್ಮಿ, ಚಂದ್ರನ ಪರಿಭ್ರಮಿಸಿ ಭೂಮಿಗೆ ಮರಳುವವರೆಗೂ ಈ ಕ್ಯಾಪ್ಸೂಲ್ ಅವರಿಗೆ ನೆಲೆಯಾಗಿರುತ್ತದೆ. ಇದು SLS ನ ಮೇಲ್ಭಾಗದಲ್ಲಿರುತ್ತದೆ.
ಆರಂಭದಲ್ಲಿ ಎರಡು ಬೂಸ್ಟರ್ ರಾಕೆಟ್‌ಗಳ ಸಹಾಯದಿಂದ ಭೂಮಿಯ ಕಕ್ಷೆಯವರೆಗೂ ನೌಕೆಯನ್ನು ಕೊಂಡೊಯ್ಯುತ್ತದೆ. 2 ನಿಮಿಷಗಳ ನಂತರ ಅವು ಭೂಮಿಗೆ ಬೀಳುತ್ತವೆ. ಅಲ್ಲಿಂದ ಮುಂದೆ, ಉಡ್ಡಯನದ ಎಂಟು ನಿಮಿಷಗಳ ನಂತರ ಬೃಹತ್ ಕೋರ್ ಹಂತವು ಮಧ್ಯಂತರ ಕ್ರಯೋಜೆನಿಕ್ ಪ್ರೊಪಲ್ಷನ್ ಸಿಸ್ಟಮ್ (ICPS) ಎಂದು ಕರೆಯಲಾಗುವ 2ನೇ ಹಂತ ಮತ್ತು ಓರಿಯನ್ ಸಿಬ್ಬಂದಿ ಇರುವ ಕ್ಯಾಪ್ಸೂಲ್‌ನಿಂದ ಬೇರ್ಪಡುವ ಹಂತವಾಗಿದೆ. ಓರಿಯನ್‌ನ ಸೌರ ಫಲಕಗಳು ನೇರ ಸೂರ್ಯನ ಬೆಳಕು ಇಲ್ಲದಿದ್ದಾಗ ವಿದ್ಯುತ್ ಪುರೈಸಲು ಬಾಹ್ಯಾಕಾಶ ನೌಕೆಯ ಬ್ಯಾಟರಿಗಳು ಕಾರ್ಯಾಚರಣೆಗೆ ನೆರವಾಗಲಿವೆ.
90 ನಿಮಿಷಗಳ ನಂತರ ICPS ನೌಕೆಯು ಎತ್ತರದಲ್ಲಿರುವ ಭೂಮಿಯ ಕಕ್ಷೆಗೆ ಏರಿಸಲು ತನ್ನ ಎಂಜಿನ್‌ಗಳನ್ನು ಹಾರಿಸುತ್ತದೆ. ಇಲ್ಲಿ ಮುಂದಿನ 25 ಗಂಟೆಗಳ ಕಾಲ ಇಡೀ ವ್ಯವಸ್ಥೆಯ ಪರಿಶೀಲನೆ ನಡೆಯುತ್ತದೆ.
ಈ ಹಂತದಲ್ಲಿ ಎಲ್ಲವೂ ಸರಿ ಇದ್ದಲ್ಲಿ ಗಗನಯಾನಿಗಳನ್ನು ಹೊತ್ತ ಓರಿಯನ್ ICPS ನಿಂದ ಬೇರ್ಪಡುತ್ತದೆ. ಇವರೆಡರ ನಡುವೆ ‘ಸ್ಪೇಸ್ ಬ್ಯಾಲೆ’ ಎಂಬ ಸಾಧನ ಅಳವಡಿಸಲಾಗಿದ್ದು, ಇದು ಓರಿಯನ್‌ನ ಅನ್ನು ದೂರದಿಂದಲೇ ನಿಯಂತ್ರಿಸಲು ನೆರವಾಗಲಿದೆ.
ಓರಿಯಾನ್‌ನ ಮ್ಯಾನೋವರಿಂಗ್ ಥ್ರಸ್ಟರ್ ಅನ್ನು ICPS ಸಮೀಪಕ್ಕೆ ಸೆಳೆಯುವ ಹಾಗೂ ದೂರಕ್ಕೆ ನೂಕುವ ಕೆಲಸವನ್ನು ಗಗನಯಾನಿಗಳೇ ನಿರ್ವಹಿಸಲಿದ್ದಾರೆ. ಇದು ಚಂದ್ರನಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸುವ ಪ್ರಕ್ರಿಯೆಯ ಅಭ್ಯಾಸದ ಭಾಗವಾಗಿರಲಿದೆ ಎಂದು ತಜ್ಞರು ವಿವರಿಸಿದ್ದಾರೆ.
23 ಗಂಟೆಗಳ ನಂತರ ಓರಿಯನ್‌ನ ಈ ನೌಕೆಯು ಭೂಮಿಯಿಂದ 3.70 ಲಕ್ಷ ಕಿಲೋ ಮೀಟರ್ ದೂರದಲ್ಲಿರುತ್ತದೆ. ಈ ಹಂತದಲ್ಲಿ ಓರಿಯನ್‌ನಲ್ಲಿರುವ ಸರ್ವೀಸ್ ಮಾಡ್ಯೂಲ್ ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಬರ್ನ್ (TLI) ನಡೆಸುತ್ತದೆ.
ಈ ಇಡೀ ಯೋಜನೆಯಲ್ಲಿ ಬಾಹ್ಯಾಕಾಶದಲ್ಲಿ ಮಾನವನ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಮತ್ತು ಭೂಮಿಯ ಆಚೆ ಯಾವೆಲ್ಲಾ ಪ್ರಭಾವಗಳಿಗೆ ಒಳಗಾಗುತ್ತದೆ ಎಂಬ ಪ್ರಯೋಗವೂ ನಡೆಯಲಿದೆ. ಆರ್ಟೆಮಿಸ್–2 ಯೋಜನೆಯ ಆರಂಭ ಹಾಗೂ ನಂತರದಲ್ಲಿ ಗಗನಯಾನಿಗಳ ದೇಹದಿಂದ ರಕ್ತದ ಮಾದರಿ ಪಡೆದು, ಅದರಿಂದ ಅಂಗಾಂಶ ಮಾದರಿಗಳನ್ನು ವಿಜ್ಞಾನಿಗಳು ಬೆಳೆಸಲಿದ್ದಾರೆ. ಆಮೂಲಕ ಗಗನಯಾನಿಗಳ ದೇಹವು ಬಾಹ್ಯಾಕಾಶದಿಂದ ಹೇಗೆ ಪ್ರಭಾವಿತವಾಗಿವೆ ಎಂಬುದನ್ನು ಹೋಲಿಕೆ ಮಾಡಲಾಗುತ್ತದೆ ಎಂದು ನಾಸಾದ ಹಿರಿಯ ವಿಜ್ಞಾನಿ ಡಾ. ನಿಕಿ ಫಾಕ್ಸ್ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ
‘ಬಾಹ್ಯಾಕಾಶದಲ್ಲಿನ ಸೂಕ್ಷ್ಮ ಗುರುತ್ವಾಕರ್ಷಣೆ ಮತ್ತು ವಿಕಿರಣದ ಪರಿಣಾಮವನ್ನು ಆಳವಾಗಿ ಅಧ್ಯಯನ ನಡೆಸಬೇಕಿದೆ. ಅದಕ್ಕಾಗಿ ಗಗನಯಾನಿಗಳನ್ನೇ ನೇರವಾಗಿ ಪ್ರಯೋಗಕ್ಕೆ ಒಡ್ಡುವ ಬದಲು, ಅವರ ರಕ್ತದ ಮಾದರಿಯಿಂದ ಅಂಗಾಂಶಗಳನ್ನು ಸಿದ್ಧಪಡಿಸಿ ಅದರ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದಲೂ ಸ್ಪಷ್ಟವಾದ ವ್ಯತ್ಯಾಸ ದಾಖಲಿಸಲು ಸಾಧ್ಯ’ ಎಂದಿದ್ದಾರೆ.
ಬಾಹ್ಯಾಕಾಶ ನೌಕೆಯು ಚಂದ್ರನನ್ನು ದಾಟಿದ ನಂತರ ಗಗನಯಾನಿಗಳು ಭೂಮಿಯ ಗುರುತ್ವಾಕರ್ಷಣೆಯ ಸಹಾಯದಿಂದ ಪೃಥ್ವಿಯತ್ತ ಪ್ರಯಾಣ ಆರಂಭಿಸುತ್ತಾರೆ. ಇದಕ್ಕೂ ನಾಲ್ಕು ದಿನಗಳ ಅಗತ್ಯವಿದೆ.
ಈ ಹಂತದಲ್ಲಿ ಬಾಹ್ಯಾಕಾಶ ನೌಕೆಯ ಪ್ರಾಥಮಿಕ ಪ್ರೊಪಲ್ಶನ್ ವ್ಯವಸ್ಥೆಯನ್ನು ಹೊಂದಿರುವ ಸೇವಾ ಮಾಡ್ಯೂಲ್, ಸಿಬ್ಬಂದಿ ಮಾಡ್ಯೂಲ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ನಂತರ ಗಗನಯಾನಿಗಳು ಭೂಮಿಯ ವಾತಾವರಣವನ್ನು ಮತ್ತೆ ಪ್ರವೇಶಿಸುವ ಮೂಲಕ ಈ ಇಡೀ ಯೋಜನೆಯು ಅತ್ಯಂತ ಕ್ಲಿಷ್ಟಕರ ಭಾಗವನ್ನು ಪ್ರವೇಶಿಸಲಿದ್ದಾರೆ. ಇವರಿರುವ ಕ್ಯಾಪ್ಸೂಲ್ ಕ್ಯಾಲಿಫೋರ್ನಿಯಾದ ಕರಾವಳಿಯ ಬಳಿ ಪ್ಯಾರಾಚೂಟ್ ಸಹಾಯದಿಂದ ಇಳಿಯಲಿದೆ.
ಇದರ ಮುಂದಿನ ಭಾಗವಾಗಿ ಆರ್ಟೆಮಿಸ್–3ನೇ ಯೋಜನೆಯಲ್ಲಿ ಗಗನಯಾನಿಗಳು ಚಂದ್ರನ ಮೇಲೆ ಇಳಿಯುವಂತೆ ಯೋಜನೆ ರೂಪಿಸಲಾಗಿದೆ ಎಂದೆನ್ನಲಾಗುತ್ತಿದೆ. ಆದರೆ 2027ರ ನಂತರದಲ್ಲಿ ಕಾರ್ಯಾಚರಣೆಗೊಳ್ಳಲಿದೆ ಎಂದೂ ತಜ್ಞರು ಅಂದಾಜಿಸಿದ್ದಾರೆ.
ಚಂದ್ರನ ಅಂಗಳದಲ್ಲಿ ನೌಕೆಯನ್ನು ಇಳಿಸಿ ಹಾಗೂ ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ಕರೆತರಲು ಸದ್ಯದ ಪರಿಸ್ಥಿತಿಯಲ್ಲಿ ಇಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್‌ನ ಸ್ಟಾರ್‌ಶಿಪ್‌ನ ಅಗತ್ಯವಿದೆ. ಆದರೆ ಕಳೆದ ಕೆಲ ತಿಂಗಳ ಬೆಳವಣಿಗೆಯನ್ನು ಗಮನಿಸಿದರೆ ಭೂಮಿಯ ಸುತ್ತಲಿನ ಕಕ್ಷೆಯಲ್ಲಿ ಹಾರಾಟ ಮತ್ತು ಗಗನಯಾನಿಗಳನ್ನು ಹೊತ್ತು ಸಾಗುವಲ್ಲಿ ಸಾಧನೆಯ ಹಾದಿ ಇನ್ನೂ ಬಹಳಷ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.