ADVERTISEMENT

Online Gaming Bill 2025: ಇ–ಆಟಕ್ಕೆ ಕಾನೂನು ಅಸ್ತ್ರ; ಜೂಜಾಡಿದರೆ ಕಠಿಣ ಕ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2025, 11:31 IST
Last Updated 20 ಆಗಸ್ಟ್ 2025, 11:31 IST
<div class="paragraphs"><p>ಆನ್‌ಲೈನ್ ಗೇಮಿಂಗ್</p></div>

ಆನ್‌ಲೈನ್ ಗೇಮಿಂಗ್

   

ಐ ಸ್ಟಾಕ್ ಚಿತ್ರ

ನವದೆಹಲಿ: ಅಂತರ್ಜಾಲ ಆಧಾರಿತ ಕ್ರೀಡೆಗಳು ಹೆಚ್ಚು ಪ್ರಚಲಿತಗೊಂಡಿರುವ ಸಂದರ್ಭದಲ್ಲೇ ಅದನ್ನು ನಿಯಂತ್ರಿಸುವ ಮಸೂದೆಯೊಂದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ.

ADVERTISEMENT

ಲೋಕಸಭೆಯಲ್ಲಿ ಮಸೂದೆ ಮಂಡನೆಗೂ ಮುನ್ನ ಕೇಂದ್ರ ಸಂಪುಟ ಅದಕ್ಕೆ ಅನುಮೋದನೆ ನೀಡಿದೆ. ಮಸೂದೆ ಕಾನೂನಾಗಿ ಜಾರಿಯಾಗಿದ್ದೇ ಆದಲ್ಲಿ, ಇ–ಆಟವು ದೇಶದಲ್ಲಿ ಇನ್ನಷ್ಟು ಬಲಿಷ್ಠವಾಗಲಿದೆ. ಅದರ ಜತೆಯಲ್ಲೇ ಹಣ ಹೂಡುವ ತಾಣಗಳು ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು. ಹೀಗಾಗಿ ಈ ಮಸೂದೆಯು ಸ್ಪರ್ಧಾತ್ಮಕ ಕ್ರೀಡೆ, ಆಟಗಾರರು ಮತ್ತು ಉದ್ಯಮಕ್ಕೆ ಮಹತ್ವದ್ದಾಗಿದೆ.

ಈ ನೂತನ ಮಸೂದೆಯಲ್ಲಿ ಇ– ಗೇಮಿಂಗ್‌ ಅಂದರೆ ಏನೆಂದು ವ್ಯಾಖ್ಯಾನಿಸಲಾಗಿದೆ?

ನಿರ್ದಿಷ್ಟ ನಿಯಮ ಮತ್ತು ಮಾನದಂಡಗಳನ್ನು ಆಧರಿಸಿ ಕೌಶಲಾಧಾರಿತ ಕ್ರೀಡೆಗಳನ್ನು ವರ್ಚುವಲ್‌ ವೇದಿಕೆಯಲ್ಲಿ ಆಡುವ ಆಟಗಳನ್ನು ಗುರುತಿಸುವುದು ಇದರ ಪ್ರಮುಖ ಉದ್ದೇಶ. ವೃತ್ತಿಪರ ಟೂರ್ನಮೆಂಟ್‌ಗಳು, ಸಂಘಟಿತ ಸ್ಪರ್ಧೆಗಳು ಮತ್ತು ಗೇಮಿಂಗ್‌ಗಳನ್ನೂ ಕ್ರೀಡೆಗಳೆಂದು ಪರಿಗಣಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ತರ ಹೆಜ್ಜೆಯನ್ನಿಟ್ಟಿದೆ.

ಹೀಗಾಗಿ ಇ–ಆಟವನ್ನು ಆನ್‌ಲೈನ್‌ ಜೂಜು ಮಾದರಿಯ ಕ್ರೀಡೆಗಳಿಂದ ಪ್ರತ್ಯೇಕಿಸಲು ಈ ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ಹೀಗಾಗಿ ಇಲ್ಲಿ ಹಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಡುವ ಜೂಜು ಒಳಗೊಂಡವುಗಳನ್ನು ‘ಮನಿ ಗೇಮ್‌’ ಎಂದು ಕರೆಯಲಾಗಿದೆ. ಇ–ಕ್ರೀಡೆಯಿಂದ ಸಂಪೂರ್ಣ ಹೊರಗಿಡಲಾಗಿರುವ ಇದರ ವಿರುದ್ಧ ಕಠಿಣ ಕ್ರಮ ಜರುಗಿಸುವ ಅವಕಾಶವೂ ನೂತನ ಕಾನೂನಿನಲ್ಲಿ ಇರಲಿದೆ.

ಇ–ಆಟಕ್ಕೆ ಸರ್ಕಾರವು 2022ರಲ್ಲೇ ಮಾನ್ಯತೆ ನೀಡಿತ್ತು. ಯುವಜನ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕ್ರೀಡೆಗಳು ವಿಭಾಗದಲ್ಲಿ ಇದನ್ನು ಸೇರಿಸಲಾಗಿತ್ತು. ಆದರೆ ಈ ಹೊಸ ಮಸೂದೆಯು ಅದರ ಮಾನ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಪ್ರಚಾರ ಮತ್ತು ನಿಯಂತ್ರಣವನ್ನು ಇನ್ನಷ್ಟು ಭಿಗಿಗೊಳಿಸಲಿದೆ.

ರಾಷ್ಟ್ರೀಯ ಇ– ಆಟ ಪ್ರಾಧಿಕಾರಕ್ಕೆ ನಿರ್ವಹಣೆಯ ಹೊಣೆ

ರಾಷ್ಟ್ರೀಯ ಇ–ಆಟ ಪ್ರಾಧಿಕಾರ ರಚನೆಗೆ ಆನ್‌ಲೈನ್‌ ಗೇಮಿಂಗ್ ಮಸೂದೆ 2025ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಸ್ಪರ್ಧಾತ್ಮಕ ಕ್ರೀಡೆಗಳಿಗೆ ಉತ್ತೇಜನ, ಹಣದ ವಹಿವಾಟಿಲ್ಲದ ಸಾಮಾನ್ಯ ಆನ್‌ಲೈನ್ ಸಾಮಾಜಿಕ ಆಟಗಳ ನೋಂದಣಿ, ನ್ಯಾಯೋಚಿತ ಆಟ, ಸುರಕ್ಷತೆ ಮತ್ತು ದೂರುಗಳಿದ್ದಲ್ಲಿ ಅದಕ್ಕೆ ಪ್ರತ್ಯೇಕ ಕಾನೂನು ರಚನೆ, ಸ್ಥಳೀಯ ಆಡಳಿತದ ಕಾನೂನುಗಳೊಂದಿಗೆ ಇದನ್ನು ಅಂತರ್ಗತಗೊಳಿಸಲು ರಾಜ್ಯಗಳೊಂದಿಗೆ ಕೆಲಸ ಈ ಪ್ರಾಧಿಕಾರದ ಹೊಣೆಯಾಗಿದೆ.

ಈ ನೂತನ ಮಸೂದೆ ಮೂಲಕ ವಿದೇಶಿ ಹೂಡಿಕೆ, ಹೊಸ ಉದ್ಯೋಗ ಸೃಜನೆ ಮತ್ತು ಭಾರತದಲ್ಲಿ ಅಂತರರಾಷ್ಟ್ರೀಯ ಇ–ಗೇಮಿಂಗ್‌ಗಳ ಆಯೋಜನೆಗೂ ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣ ಹೂಡಿ ಆಡುವ ಆನ್‌ಲೈನ್‌ ಗೇಮ್‌ಗಳಿಗೆ ಸಂಪೂರ್ಣ ನಿಷೇಧ

ಇ–ಆಟವನ್ನು ಉತ್ತೇಜಿಸುವುದಷ್ಟೇ ಆನ್‌ಲೈನ್‌ ಗೇಮಿಂಗ್‌ ಮಸೂದೆ 2025ರ ಮುಖ್ಯ ಧ್ಯೇಯವಲ್ಲ. ಬದಲಿಗೆ ಸಮಾಜಕ್ಕೆ ಕಂಟಕವಾಗಿರುವ ಜೂಜು ಆಧಾರಿತ ಕ್ರೀಡಾ ಪದ್ಧತಿಗಳ ನಿಯಂತ್ರಣವೂ ಸೇರಿದೆ. ಇ–ಆಟ ಅಥವಾ ಸಾಮಾಜಿಕ ಆಟಗಳ ಮೂಲಕ ಬೆಟ್ಟಿಂಗ್ ಉತ್ತೇಜಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಖಂಡಿತಾ. ಇದರ ಮುಖ್ಯ ಉದ್ದೇಶ ಆಟಗಾರರನ್ನು ದೌರ್ಜನ್ಯದಿಂದ ತಡೆಯುವುದು ಮತ್ತು ಆರೋಗ್ಯಯುತ ಗೇಮಿಂಗ್ ಪರಿಸರವನ್ನು ಸೃಷ್ಟಿಸುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ.

ಮಸೂದೆ ಮೂಲಕ ಆನ್‌ಲೈನ್ ಗೇಮಿಂಗ್‌ನಲ್ಲಿ ಹೊಸ ಶೆಕೆ

ಇಎಸ್‌ಎಲ್‌ ಇಂಡಿಯಾ ಪ್ರೀಮಿಯರ್‌ಶಿಪ್‌ನಿಂದ ಹಿಡಿದು ಕಾಮನ್‌ವೆಲ್ತ್‌ ಇಸ್ಪೋರ್ಟ್ಸ್ ಪಂದ್ಯಾವಳಿವರೆಗೂ ಭಾರತದ ತಂಡಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಸದ್ಯ ಇರುವ ಪರಿಸ್ಥಿತಿಯನ್ನು ಬದಲಿಸಿಗ ಜಾಗತಿಕ ಇ–ಕ್ರೀಡೆಗಳಿಗೆ ಹೊಸ ಮಸೂದೆ ಬಾಗಿಲು ತೆರೆಯಲಿದೆ. ಇದರಿಂದ ಹೆಚ್ಚಿನ ಪ್ರಾಯೋಜಕತ್ವ, ಜಾಗತಿಕ ಟೂರ್ನಿಗಳು ಮತ್ತು ಗೇಮರ್‌ಗಳಿಗೆ ವೃತ್ತಿಪರ ಮಾರ್ಗವನ್ನು ಮಸೂದೆ ಸೃಷ್ಟಿಸಲಿದೆ ಎಂದೇ ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.