
ಐಸ್ಟಾಕ್ ಚಿತ್ರ
ನವದೆಹಲಿ: ವ್ಯಕ್ತಿಗಳ ವೈಯಕ್ತಿಕ ಮಾಹಿತಿಯ ರಕ್ಷಣೆ ಹೆಚ್ಚಿಸುವುದು ಮತ್ತು ಗೋಪ್ಯತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ದೆಹಲಿ ಸರ್ಕಾರವು ಆಧಾರ್ ವಾಲ್ಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಡಿಜಿಟಲ್ ವ್ಯವಸ್ಥೆ ವಿಸ್ತರಿಸಿದಂತೆ ವೈಯಕ್ತಿಕ ಮಾಹಿತಿಯ ದುರುಪಯೋಗ ಮತ್ತು ದತ್ತಾಂಶ ಸೋರಿಕೆಯ ಅಪಾಯ ಇನ್ನಷ್ಟು ಹೆಚ್ಚಾಗಿದೆ. ಈ ಸೋರಿಕೆಯನ್ನು ತಡೆಯುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ನಿವಾಸಿಗಳ ಆಧಾರ್ ಮಾಹಿತಿಯ ಗೋಪ್ಯತೆಯ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಆಧಾರ್ ವಿವರಗಳನ್ನು ಗೂಢ ಲಿಪಿಯಾಗಿ (ಎನ್‌ಕ್ರಿಪ್ಟ್) ದಾಖಲಿಸುವುದು ಮತ್ತು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಈ ವ್ಯವಸ್ಥೆಯ ಮುಖ್ಯ ಕೆಲಸ. ಈ ದೃಢೀಕರಣ ಸಂದರ್ಭದಲ್ಲಿ ಆಧಾರ್‌ನ 16 ಸಂಖ್ಯೆಗಳಲ್ಲಿ 12 ಸಂಖ್ಯೆಗಳನ್ನಷ್ಟೇ ಬಹಿರಂಗಗೊಳಿಸಲು ವಾಲ್ಟ್ ವ್ಯವಸ್ಥೆ ಮಿತಿಗೊಳಿಸಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDI) ಮಾರ್ಗಸೂಚಿಗಳ ಪ್ರಕಾರ ಈ ಕ್ರಮ ಜಾರಿಗೆ ಬಂದಿದೆ. ಕಾಗದ ರಹಿತ ನಾಗರಿಕ ಸೇವೆಗಳು ಮತ್ತು ಡಿಜಿಟಲ್ ವೇದಿಕೆಗಳು ಬದಲಾದಂತೆ ಆಧಾರ್ ಮಾಹಿತಿಯನ್ನು ಗೂಢ ಲಿಪಿಯಾಗಿ ದಾಖಲಿಸಲು ಮತ್ತು ವ್ಯಕ್ತಿಯ ಗುರುತಿನ ದುರುಪಯೋಗ ತಡೆಯಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.
ಇ–ಡಿಸ್ಟ್ರಿಕ್ಟ್ ಮತ್ತು ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯಂತ ಪ್ರಮುಖ ಸರ್ಕಾರಿ ಸೇವೆಗಳೊಂದಿಗೆ ಕೊಂಡಿಯಾಗಿರುವ ಆಧಾರ್ ವಾಲ್ಟ್, ಸುರಕ್ಷಿತ ಭಂಡಾರದಂತೆ ಕೆಲಸ ಮಾಡಲಿದೆ. ಈ ಗೂಢ ಲಿಪಿಯನ್ನು ಓದಲು ಅನುಮತಿ ಹೊಂದಿದ, ಅಧಿಕೃತ ವ್ಯಕ್ತಿಗೆ ಮಾತ್ರ ಅವಕಾಶ. ಅದೂ ಸರಿಯಾದ ಪರಿಶೀಲನೆ ನಂತರ, ಹುದ್ದೆ ಆಧಾರಿತ ಪ್ರವೇಶ ಸೌಲಭ್ಯ ನೀಡಲಾಗಿದೆ.
ಇದರಿಂದ ಅನಧಿಕೃತ ದತ್ತಾಂಶ ಪ್ರವೇಶವನ್ನು ತಡೆಗಟ್ಟುವುದು ಮತ್ತು ಆಧಾರ್ ಮಾಹಿತಿಯನ್ನು ಬಹು ಇಲಾಖೆಗಳಲ್ಲಿ ವ್ಯಾಪಕವಾಗಿ ಬಳಸಿದಾಗ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ನಾಗರಿಕ ಸೌಲಭ್ಯಗಳ ವಿತರಣೆಯಲ್ಲಿ ಸೂಕ್ಷ್ಮ ಡೇಟಾವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದನ್ನು ಆಧಾರ್ ವಾಲ್ಟ್ ಖಚಿತಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಆಧಾರ್ ವಾಲ್ಟ್ ಅನ್ನು ಸೆಂಟರ್ ಫಾರ್ ಡೆವೆಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC) ನಿರ್ವಹಿಸುತ್ತಿದೆ. ನಿರ್ದಿಷ್ಟ ದತ್ತಾಂಶ ಮತ್ತು ಅದರ ಮೂಲಸೌಕರ್ಯದೊಂದಿಗೆ ಮಾಹಿತಿ ವರ್ಗಾವಣೆ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದೆ. ಈ ನೂತನ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಯಾವುದೇ ಸರ್ಕಾರಿ ಸೌಲಭ್ಯ ಹಂಚಿಕೆಯಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ವಾಲ್ಟ್ ವ್ಯವಸ್ಥೆಯು ವಾಸ್ತವದಲ್ಲಿ ಆಧಾರ್ ಸಂಖ್ಯೆಯ ಬದಲು, ತನ್ನದೇ ಆದ ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ. ಇದರಿಂದ ಮೂಲ ಆಧಾರ್ ಸಂಖ್ಯೆ ಗೋಪ್ಯವಾಗಿಯೇ ಉಳಿಯಲಿದೆ. ಯುಐಡಿಐನ ಕಟ್ಟುನಿಟ್ಟಿನ ಮಾಹಿತಿ ರಕ್ಷಣಾ ಶಿಷ್ಟಾಚಾರವನ್ನು ಇದರಲ್ಲಿ ಪಾಲಿಸಲಾಗುತ್ತಿದೆ.
ವಾಲ್ಟ್‌ನ ಎನ್‌ಕ್ರಿಪ್ಶನ್ ಶಿಷ್ಟಾಚಾರದಂತೆ ಬ್ಯಾಕ್ ಎಂಡ್ ಪ್ರಕ್ರಿಯೆಯ ಸಮಯದಲ್ಲಿ 12 ಅಂಕಿಯ ಗುರುತಿನ ಸಂಖ್ಯೆ ಗೋಚರಿಸುವುದನ್ನು ಇದು ತಡೆಯುತ್ತದೆ. ವ್ಯಕ್ತಿಗಳ ವೈಯಕ್ತಿಕ ಮಾಹಿತಿಯನ್ನು ವಾಲ್ಟ್‌ಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಸಿ–ಡಾಕ್ ನೆರವಾಗಲಿದೆ. ಇದು ಪೂರ್ಣಗೊಂಡ ನಂತರ ಆಧಾರ್ ಸಂಬಂಧಿತ ಅರ್ಜಿಗಳು ವೈಯಕ್ತಿಕ ಮಾಹಿತಿ ಸುರಕ್ಷತಾ ವಲಯದ ಮೂಲಕವೇ ಸಾಗಲಿದೆ. ಇದರಲ್ಲಿ ವೈಯಕ್ತಿಕ ಮಾಹಿತಿ ಸೋರಿಕೆಯಾಗಿಲ್ಲ ಎಂಬುದನ್ನು ಇದು ಖಾತ್ರಿಪಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಸರ್ಕಾರವು ಇ–ಆಡಳಿತದ ಭಾಗವಾಗಿ ತನ್ನ ವಿವಿಧ ಇಲಾಖೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವಾಗಿ ಆಧಾರ್ ವಾಲ್ಟ್ ಅನ್ನು ಜಾರಿಗೆ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.