ADVERTISEMENT

ಸ್ಪೇಸ್ ಎಕ್ಸ್, ವರ್ಜಿನ್, ಬ್ಲೂ ಆರಿಜಿನ್: ಬಾಹ್ಯಾಕಾಶಕ್ಕೆ ಕರೆದೊಯ್ಯಲು ಪೈಪೋಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 13:15 IST
Last Updated 8 ಡಿಸೆಂಬರ್ 2025, 13:15 IST
<div class="paragraphs"><p>ಬ್ಲೂ ಆರಿಜಿನ್ ರಾಕೇಟ್</p></div>

ಬ್ಲೂ ಆರಿಜಿನ್ ರಾಕೇಟ್

   

ಎಕ್ಸ್ ಚಿತ್ರ

ವಾಷಿಂಗ್ಟನ್‌: ಬಾಹ್ಯಾಕಾಶ ಯಾನದಲ್ಲಿ 1957ರಲ್ಲಿ ಆರಂಭವಾದ ನಾಸಾ ಕಳೆದ ಕೆಲವು ವರ್ಷಗಳವರೆಗೂ ಪ್ರಾಬಲ್ಯ ಮೆರೆದಿತ್ತು. ಚಂದ್ರನ ಅಂಗಳಕ್ಕೆ ಹೋಗಿಬಂತು ಎನ್ನಲಾದ ಅಪೊಲೊ ಸೇರಿದಂತೆ ಹಲವು ಬಾಹ್ಯಾಕಾಶ ಸಾಹಸಗಳನ್ನು ನಡೆಸಿದ್ದು ಪುಟಗಳಲ್ಲಿ ದಾಖಲಾಗಿದೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ಖಾಸಗಿಯವರ ಪ್ರವೇಶದಿಂದಾಗಿ ಬಾಹ್ಯಾಕಾಶಕ್ಕೆ ಕರೆದೊಯ್ಯುವವರಲ್ಲೂ ಈಗ ಪೈಪೋಟಿ ಹೆಚ್ಚಾಗಿದೆ.

ADVERTISEMENT

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಮರಳಲು ಸೂಕ್ತ ನೌಕೆ ಇಲ್ಲದೆ ಸಿಲುಕಿದ್ದ ಭಾರತ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಅವರನ್ನು ಕರೆತರಲು ನೆರವಾದ ಇಲಾನ್ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ನ ಫಾಲ್ಕನ್ 9 ನೌಕೆಯು ಅಚ್ಚರಿ ಮೂಡಿಸಿ, ಹೊಸ ಸಾಧ್ಯತೆ ಕುರಿತು ಬೆಳಕು ಚೆಲ್ಲಿತು. ಇದೀಗ ಬಾಹ್ಯಾಕಾಶಕ್ಕೆ ಕರೆದೊಯ್ದು ಮರಳಿ ಕರೆತರುವ ಪ್ರಯತ್ನದಲ್ಲಿ ‘ಬ್ಲೂ ಆರಿಜಿನ್‌’ ಬಾಹ್ಯಾಕಾಶ ಸಂಶೋಧನಾ ಕಂಪನಿ ಯಶಸ್ವಿಯಾಗಿ ಅಚ್ಚರಿ ಮೂಡಿಸಿದೆ. ಇದರ ಮೂಲಕ ಬಾಹ್ಯಾಕಾಶ ಯಾನವನ್ನು ಇನ್ನಷ್ಟು ಸ್ಪರ್ಧಾತ್ಮಕಗೊಳಿಸಿದೆ.

‘ನ್ಯೂ ಶೆಪರ್ಡ್‌’ ಎಂಬ ನೌಕೆಯ ಮೂಲಕ ಉಪಕಕ್ಷೀಯ ಯೋಜನೆಯನ್ನು ಬ್ಯೂ ಆರಿಜಿನ್‌ ಕಂಪನಿಯ ಕಕ್ಷೆಗೆ ಹಾರಿಸಿತ್ತು. ಕಕ್ಷೆಗೆ ಹಾರಿದಂತೆಯೇ ಸಮುದ್ರದಲ್ಲಿದ್ದ ಲ್ಯಾಂಡಿಂಗ್‌ ವೇದಿಕೆ ಮೇಲೆ ಸುರಕ್ಷಿತವಾಗಿ ಬಂದಿಳಿಯುವ ಮೂಲಕ ಈ ಕ್ಷೇತ್ರಕ್ಕೆ ಯಶಸ್ವಿ ಪದಾರ್ಪಣೆ ಮಾಡಿತು. ಈ ಯಶಸ್ಸಿನ ಬೆನ್ನಲ್ಲೇ ಆರು ಗಗನಯಾತ್ರಿಗಳು ಬಾಹ್ಯಾಕಾಶ ಯಾನ ಕೈಗೊಳ್ಳಲು ಸಜ್ಜಾಗಿದ್ದಾರೆ. ಇದರಲ್ಲಿ ವಿಜ್ಞಾನಿಗಳು, ಎಂಜಿನಿಯರ್‌, ಉದ್ಯಮಿಗಳು ಮತ್ತು ಸಾಹಸಿಗಳು ಇದ್ದಾರೆ. 

ಸಮುದ್ರ ಮಟ್ಟದಿಂದ 100 ಕಿ.ಮೀ. ಎತ್ತರದಲ್ಲಿರುವ ಕಾಲ್ಪನಿಕ ಕಾರ್ಮನ್ ರೇಖೆಯವರೆಗೆ ಬ್ಲೂ ಆರಿಜಿನ್‌ ನೌಕೆಯು ಹಾರಿ, ಮರಳಿ ಭೂಮಿಗೆ ಬಂದಿಳಿದಿದೆ. ಪ್ರಯಾಣಿಕರನ್ನು ಹೊತ್ತು ಈಗಾಗಲೇ 16 ಬಾರಿ ಕಾರ್ಯಾಚರಣೆಯನ್ನು ಇದು ನಡೆಸಿದೆ. ಈವರೆಗೂ 86 ಜನರು ಬ್ಲೂ ಆರಿಜಿನ್ ಮೂಲಕ ಕಾರ್ಮನ್‌ ಲೈನ್‌ವರೆಗೂ ಹೋಗಿ ಬಂದಿದ್ದಾರೆ. ಇದೀಗ ಹೊಸ ಯಾನಕ್ಕೆ ಬ್ಲೂ ಆರಿಜಿನ್ ಸಜ್ಜಾಗಿದೆ. ಎನ್‌ಎಸ್–37 ಎಂಬ ಹೆಸರಿನ ಈ ಕಾರ್ಯಾಚರಣೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಏನಿದು ಶೆಪರ್ಡ್‌..?

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಅವರ ಬ್ಲೂ ಆರಿಜಿನ್‌ ಹೊಸ ಮಾದರಿಯ ಶೆಪರ್ಡ್ ರಾಕೇಟ್ ಅಭಿವೃದ್ಧಿಪಡಿಸಿದೆ. ಇದು ಸಂಪೂರ್ಣವಾಗಿ ಮರು ಬಳಕೆ ಮಾಡಬಲ್ಲ ನೌಕೆಯಾಗಿದೆ. ಇದಕ್ಕೆ ಅಮೆರಿಕದ ಗಗನಯಾನಿ ಅಲಾನ್ ಶೆಪರ್ಡ್‌ ಅವರ ಹೆಸರನ್ನೇ ಇದಕ್ಕೆ ಇಡಲಾಗಿದೆ. ಈ ನೌಕೆಯು ಆರು ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಹಗುರವಾದ ಈ ನೌಕೆ ಆಗಸಕ್ಕೆ ಚಿಮ್ಮಿ, ಪ್ಯಾರಾಚೂಟ್ ಸಹಾಯದೊಂದಿಗೆ ಭೂಮಿಗೆ ಮರಳುವ ಸಾಮರ್ಥ್ಯ ಹೊಂದಿದೆ. ಜತೆಗೆ ಗ್ರಹಗಳ ವೀಕ್ಷಣೆಯೂ ಇದರಲ್ಲಿ ಉತ್ತಮವಾಗಿದೆ. ಹಿಂದಿರುಗುವಾಗ ಲಂಬವಾಗಿಯೇ ಇಳಿಯುವುದು ಇದರ ವಿಶೇಷ.

ಸಾಗರದ ಮಧ್ಯದಲ್ಲಿ ಬ್ಲೂ ಆರಿಜಿನ್‌ ರಾಕೇಟ್ ಇಳಿಯುವ ಲ್ಯಾಂಡಿಂಗ್ ಪ್ಯಾಡ್

ಬಾಹ್ಯಾಕಾಶಕ್ಕೆ ಕರೆದೊಯ್ಯಲು ಶುರುವಾಯ್ತು ಪೈಪೋಟಿ

ಬಾಹ್ಯಾಕಾಶ ಪ್ರವಾಸೋದ್ಯಮ ದುಬಾರಿ ಎಂಬುದು ಈಗಿನ ವಾಸ್ತವ. ಸರ್ಕಾರದ ಕಾರ್ಯಕ್ರಮಗಳಲ್ಲಿ ಇದು ಕನಸೇ ಆಗಿತ್ತು. ಆದರೆ ಸ್ಪೇಸ್‌ ಎಕ್ಸ್‌, ಬ್ಲೂ ಆರಿಜಿನ್, ವರ್ಜಿನ್ ಗ್ಯಾಲಾಕ್ಟಿಕ್‌ ಪ್ರವೇಶದ ಮೂಲಕ ಖಾಸಗಿಯವರ ಪಾಲುದಾರಿಕೆಯು ಬಾಹ್ಯಾಕಾಶ ಯಾನದ ಕನಸು ನನಸಾಗಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಬ್ಲೂ ಆರಿಜಿನ್‌ ಶೆಪ‍ರ್ಡ್‌ನ ಈ ಹಿಂದಿನ ಯೋಜನೆಯಲ್ಲಿ ಉಡ್ಡಯನದಿಂದ ಲ್ಯಾಂಡಿಂಗ್‌ವರೆಗೂ ತೆಗೆದುಕೊಂಡಿದ್ದ 10ರಿಂದ 11 ನಿಮಿಷಗಳು. ಇದರಲ್ಲಿ ಸುಮಾರು ಮೂರು ನಿಮಿಷ ಮಾತ್ರ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿತ್ತು.

ಎನ್‌ಎಸ್‌–37 ಬಾಹ್ಯಾಕಾಶ ಯಾನಕ್ಕಾಗಿ ಜರ್ಮನಿಯ ಮೆಕಟ್ರಾನಿಕ್ಸ್‌ ಮತ್ತು ಬಾಹ್ಯಾಕಾಶ ಎಂಜಿನಿಯರ್‌ ಮಿಷೆಲಾ ಬೆಂತಾಸ್‌ ಆಯ್ಕೆಯಾಗಿದ್ದಾರೆ. 2018ರಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆನ್ನು ಮೂಳೆ ಸಮಸ್ಯೆಯನ್ನು ಇವರು ಎದುರಿಸುತ್ತಿದ್ದಾರೆ. ಇದರಿಂದಾಗಿ ನಡೆದಾಡುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. 2022ರಲ್ಲಿ ಶೂನ್ಯ ಗುರುತ್ವಾಕರ್ಷಣೆ ಪ್ರಯೋಗದಲ್ಲಿ ಇವರು ಪಾಲ್ಗೊಂಡಿದ್ದರು. ಇವರು ಗಾಲಿ ಕುರ್ಚಿ ಟೆನಿಸ್‌ ಆಡುತ್ತಾರೆ. ತಮ್ಮಂತವರಿಗೂ ಬಾಹ್ಯಾಕಾಶ ಪ್ರಯಾಣ ಸಾಧ್ಯ ಎಂಬುದನ್ನು ಇವರು ಸಾಬೀತು ಮಾಡಲು ಈ ಸಾಹಸಕ್ಕೆ ಕೈಹಾಕಿದ್ದಾರೆ.

ಇವರೊಂದಿಗೆ ಭೌತವಿಜ್ಞಾನಿ ಜೋ ಹೈಡ್, ಏರೋಸ್ಪೇಸ್ ಎಂಜಿನಿಯರ್ ಹನ್ಸ್ ಕೊನಿಗ್ಸ್‌ಮನ್‌, ಉದ್ಯಮಿ ನೀಲ್ ಮಿಲ್ಚ್‌, ಗಣಿ ಎಂಜಿನಿಯರ್ ಮತ್ತು ಉದ್ಯಮಿ ಅಡೊನಿಸ್‌ ಪೌರೌಲಿಸ್, ಕಂಪ್ಯೂಟರ್ ಸೈನ್ಸ್ ಪದವಿ ಹೊಂದಿರುವ ಜೇಸನ್ ಸ್ಟಾನ್‌ಸೆಲ್ ಈ ಯೊಜನೆಯ ಭಾಗವಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.