
ಮೊಹಮ್ಮದ್ ಅಯೂಬ್ ಖಾನ್, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಅಲೆಕ್ಸಿ ಕೊಸಿಗಿನ್
ಎಕ್ಸ್ ಚಿತ್ರ
ಭಾರತ ಮತ್ತು ಪಾಕಿಸ್ತಾನ ನಡುವೆ ಆರಂಭಗೊಂಡ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಹಾಗೂ ಸೋವಿಯತ್ ಒಕ್ಕೂಟದ ಪ್ರಯತ್ನದ ಭಾಗವಾಗಿ ನಡೆದ ತಾಷ್ಕೆಂಟ್ ಒಪ್ಪಂದಕ್ಕೆ ಈಗ 60 ವರ್ಷ. 1966ರ ಜ. 10ರಂದು ಒಪ್ಪಂದಕ್ಕೆ ಸಹಿ ಹಾಕಿದ್ದ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮರುದಿನವೇ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಿಗೂಢವಾಗಿ ಮೃತಪಟ್ಟರು ಎಂಬ ಸುದ್ದಿ ಭಾರತದೊಂದಿಗೆ ಇಡೀ ಜಗತ್ತಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು.
1965ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಆರಂಭಗೊಂಡಿತ್ತು. ಈ ಯುದ್ಧ ದಕ್ಷಿಣ ಏಷ್ಯಾದಲ್ಲಿ ದೀರ್ಘಕಾಲದ ಶೀಥಲ ಸಮರಕ್ಕೆ ಉದಾಹರಣೆಯಾಗಿದೆ. ದಕ್ಷಿಣ ಏಷ್ಯಾದೊಂದಿಗೆ ತಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಗಮನಾರ್ಹವಾದ ಈ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸೋವಿಯತ್ ಒಕ್ಕೂಟದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಅವರು ಮಧ್ಯಸ್ಥಿಕೆ ವಹಿಸಿದ್ದರು.
ಈ ಒಪ್ಪಂದಕ್ಕೂ 10 ತಿಂಗಳು ಮೊದಲು ಅಂದರೆ 1965ರ ಏಪ್ರಿಲ್‌ನಲ್ಲಿ ಪಾಕಿಸ್ತಾನವು ಭಾರತ ವಿರುದ್ಧ ‘ಆಪರೇಷನ್ ಜಿಬ್ರಾಲ್ಟರ್’ ಆರಂಭಿಸಿತು. ಇದಕ್ಕೆ ಕಾರಣ ಉಭಯ ರಾಷ್ಟ್ರಗಳ ನಡುವೆ ದೀರ್ಘಕಾಲದಿಂದ ಇದ್ದ ಜಮ್ಮು ಮತ್ತು ಕಾಶ್ಮೀರ ವಿವಾದ. ಈ ಆಪರೇಷನ್ ಮೂಲಕ ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸುವುದು ಅದರ ಉದ್ದೇಶವಾಗಿತ್ತು.
1965ರ ಸೆಪ್ಟೆಂಬರ್ 23ರವರೆಗೆ 17 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿತ್ತು. ಕಾಶ್ಮೀರವನ್ನು ಆಕ್ರಮಿಸುವ ಪಾಕಿಸ್ತಾನದ ಕುತಂತ್ರವನ್ನು ಭಾರತೀಯ ಸೇನೆಯು ಪೂರ್ಣ ಪ್ರಮಾಣದಲ್ಲಿ ಯುದ್ಧ ಸಾರುವ ಮೂಲಕ ವಿಫಲಗೊಳಿಸಿತು. 2ನೇ ವಿಶ್ವ ಯುದ್ಧದ ನಂತರ ಯುದ್ಧ ಟ್ಯಾಂಕ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿದ್ದು ಇದರಲ್ಲೇ. ಭಾರತದ ಯುದ್ಧದ ತೀವ್ರತೆ ಹೇಗಿತ್ತೆಂದರೆ, ಭಾರತೀಯ ಸೈನಿಕರು ಲಾಹೋರ್ ಗಡಿಯನ್ನು ತಲುಪಿದ್ದರು.
ಯುದ್ಧದ ತೀವ್ರತೆ ಹೆಚ್ಚುತ್ತಿರುವುದನ್ನು ಮನಗಂಡ ಸೋವಿಯತ್ ಒಕ್ಕೂಟವು ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಯಿತು. ಇದಕ್ಕಾಗಿ ಅಂದಿನ ಸೋವಿಯತ್ ಒಕ್ಕೂಟದ ಭಾಗವಾದ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ವೇದಿಕೆ ಸಜ್ಜಾಯಿತು. 1966ರ ಜ. 4ರಿಂದ 10ರವರೆಗೆ ನಿರಂತರ ಮಾತುಕತೆಗಳು ನಡೆದವು. ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಪಾಕಿಸ್ತಾನದ ಅಧ್ಯಕ್ಷ ಮೊಹಮ್ಮದ್ ಅಯೂಬ್ ಖಾನ್, ಸೋವಿಯತ್ ಒಕ್ಕೂಟದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆ ವಹಿಸಿದ್ದರು. ಈ ಒಪ್ಪಂದದ ಫಲಿತಾಂಶವನ್ನೇ ತಾಷ್ಕೆಂಟ್ ಘೋಷಣೆ ಎಂದೇ ಕರೆಯಲಾಗುತ್ತದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಹಲವು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಬದ್ಧವಾಗುವುದಾಗಿರುವುದಾಗಿ ಸಹಿ ಹಾಕಿದವು.
ಉತ್ತಮ ಸಂಬಂಧವುಳ್ಳ ನೆರೆಹೊರೆಯ ರಾಷ್ಟ್ರಗಳಾಗಿ ಮುಂದುವರಿಯುವ ಪ್ರಯತ್ನಕ್ಕೆ ಉಭಯ ರಾಷ್ಟ್ರಗಳ ಒಪ್ಪಿಗೆ ಸೂಚಿಸಿದವು. ಯಾವುದೇ ಬಲಪ್ರಯೋಗವಿಲ್ಲದೆ ಉಭಯ ರಾಷ್ಟ್ರಗಳ ನಡುವಿನ ವಿವಾದವನ್ನು ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುವ ವಿಶ್ವಸಂಸ್ಥೆಯ ನಿರ್ಣಯಗಳಿಗೆ ಬದ್ಧರಾಗುವುದಾಗಿ ನಾಯಕರು ಪುನರುಚ್ಚರಿಸಿದರು.
1966ರ ಫೆ. 25ರೊಳಗೆ ಭಾರತ ಮತ್ತು ಪಾಕಿಸ್ತಾನ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಕಾಲಮಿತಿ ನಿಗದಿಪಡಿಸಲಾಯಿತು. ಜತೆಗೆ 1965ರ ಆಗಸ್ಟ್ 5ರಲ್ಲಿ ಎಲ್ಲಿದ್ದವೋ ಅಲ್ಲಿಯೇ ನಿಯೋಜನೆಗೊಳಿಸಲೂ ನಾಯಕರು ಒಪ್ಪಿ, ಕದನ ವಿರಾಮ ಘೋಷಿಸಿದರು.
ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸದಂತೆಯೂ ಮತ್ತು ವಿವಾದಿತ ಹೇಳಿಕೆಗಳನ್ನು ನೀಡದಿರಲು ಒಪ್ಪಿದವು. ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಎಂದಿನಂತೆಯೇ ಮುಂದುವರಿಯಲು ಒಪ್ಪಿದವು. ಇದರಲ್ಲಿ ರಾಯಭಾರ ಕಚೇರಿಯ ಕಾರ್ಯಾಚರಣೆ ಪುನರಾರಂಭ, ಸಾಂಸ್ಕೃತಿಕ ವಿನಿಮಯವೂ ಒಳಗೊಂಡಿತ್ತು.
ಸೆರೆಯಾಗಿರುವ ಯುದ್ಧ ಸೈನಿಕರನ್ನು ಬಿಡುಗಡೆ ಮಾಡುವುದು ಮತ್ತು ದ್ವಿಪಕ್ಷೀಯ ಮಾತುಕತೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದನ್ನೂ ಈ ಒಪ್ಪಂದ ಒಳಗೊಂಡಿತು ಮತ್ತು ಎರಡೂ ರಾಷ್ಟ್ರಗಳ ನಾಯಕರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ಆದರೆ, ಯುದ್ಧಕ್ಕೆ ಕಾರಣವಾದ ಮೂಲ ವಿಷಯ ‘ಕಾಶ್ಮೀರ’ ಕುರಿತು ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ಇದೇ ವಿವಾದದ ಕುರಿತು ಯಾವುದೇ ಚರ್ಚೆಗಳು ನಡೆಯಲಿಲ್ಲ ಎಂಬುದು ಗಮನಾರ್ಹ.
ತಾಷ್ಕೆಂಟ್ ಘೋಷಣೆ ಬೆನ್ನಲ್ಲೇ 1965ರಲ್ಲಿ ಆರಂಭವಾದ ಯುದ್ಧವನ್ನು ಅಧಿಕೃತವಾಗಿ ಅಂತ್ಯಗೊಳಿಸಲಾಯಿತು. ಎರಡೂ ರಾಷ್ಟ್ರಗಳು ಬಹಿರಂಗವಾಗಿ ಶಾಂತಿಯ ಮಂತ್ರ ಜಪಿಸಿ, ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸಿದವು. ಆದರೆ ಮೂಲ ವಿಷಯ ಕುರಿತು ಯಾವುದೇ ಚರ್ಚೆಗಳಾಗಲೀ ಅಥವಾ ನಿರ್ಣಯಗಳಾಗಲೀ ತೆಗೆದುಕೊಳ್ಳದ ಕಾರಣ 1971ರ ಯುದ್ಧಕ್ಕೆ ಅದು ಮುನ್ನುಡಿ ಬರೆಯಿತು.
ತಾಷ್ಕೆಂಟ್ ಒಪ್ಪಂದದ ನಂತರ ಲಾಲ್ ಬಹದ್ದೂರ್ ಶಾಸ್ತ್ರಿ, ಮೊಹಮ್ಮದ್ ಅಯೂಬ್, ಅಲೆಕ್ಸಿ ಕೊಸಿಗಿನ್
1966ರ ಒಪ್ಪಂದವು ಪಾಕಿಸ್ತಾನದಲ್ಲಿ ರಾಜಕೀಯ ಬಿರುಗಾಳಿಯನ್ನೇ ಬೀಸಿತು. ಅಧ್ಯಕ್ಷ ಅಯೂಬ್ ಖಾನ್ ಆಡಳಿತದಲ್ಲೇ ಭಿನ್ನಾಭಿಪ್ರಾಯ ಉಂಟಾದವು. ಝುಲ್ಫಿಕರ್ ಅಲಿ ಭುಟ್ಟೊ ಅವರು ಸರ್ಕಾರದಿಂದ ಹೊರಬಂದರು. ನಂತರ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಆರಂಭಿಸಿದರು.
ಯುದ್ಧ ಕಾಲದಲ್ಲಿ ದೇಶದ ಏಕತೆ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಅಸುನೀಗಿದ್ದು ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು.
ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ, ಅಂದರೆ 1966ರ ಜ. 11ರಂದು ಲಾಲ್ ಬಹ್ದೂರ್ ಶಾಸ್ತ್ರಿ ಅವರು ಅಸುನೀಗಿದರು. 61 ವರ್ಷದ ಶಾಸ್ತ್ರಿ ಅವರಿಗೆ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ. ಈ ಆಘಾತ ಭಾರತಕ್ಕೆ ಬರಸಿಡಿಲು ಬಡಿದಂತಾಯಿತು. ಸರಳ ಜೀವನ, ಖಡಕ್ ಆಡಳಿತದ ಮೂಲಕ ಜನಮನ ಗೆದ್ದಿದ್ದ ಶಾಸ್ತ್ರಿ ಅವರನ್ನು ಕಳೆದುಕೊಂಡ ಭಾರತೀಯರು ಶೋಕಸಾಗರದಲ್ಲಿ ಮುಳುಗಿದರು.
ಮೃತಪಟ್ಟ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸದಿರುವುದು ಮತ್ತು ಅವರ ದೇಹದ ಮೇಲಿನ ಕೆಲ ಗುರುತುಗಳು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದವು. ಆದರೆ ಅವರ ಸಾವಿಗೆ ನಿಖರ ಕಾರಣವುಳ್ಳ ಅಧಿಕೃತ ಹೇಳಿಕೆಗಳು ಹೊರಬೀಳದ ಕಾರಣ, ಶಾಸ್ತ್ರಿ ಅವರು ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಲ್ಲಿ ಈ ಘೋಷಣೆಯು ವಿವಾದಾತ್ಮಕ ಸ್ಥಾನವನ್ನೇ ಆಕ್ರಮಿಸಿಕೊಂಡಿದೆ. ಕೆಲವರು ಇದನ್ನು ಅಗತ್ಯವಾದ ರಾಜಿ ಎಂದು ಪರಿಗಣಿಸಿದರೆ, ಇನ್ನೂ ಕೆಲವರು ಅಪೂರ್ಣ ಪರಿಹಾರ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.