ಯುದ್ಧ ನೌಕೆಯಿಂದ ಹಾರಿದ ಅಮೆರಿಕದ ವಿಮಾನ
ಎಕ್ಸ್ ಚಿತ್ರ
ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ನಡೆಸಿದ ಆಪರೇಷನ್ ಎಪಿಕ್ ಫ್ಯೂರಿ ಯುದ್ಧಕ್ಕೆ ಅಮೆರಿಕವು ಶತಕೋಟಿ ಡಾಲರ್ನಷ್ಟು ಖರ್ಚು ಮಾಡಿದೆ, ಬಳಸಿದ ಶಸ್ತ್ರಾಸ್ತ್ರಗಳು ಹಾಗೂ ವರದಿಗಳ ಅಂದಾಜುಗಳ ವಿವರ ಇಲ್ಲಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸಾರಿರುವ ಯುದ್ಧ ಇನ್ನಷ್ಟು ಉದ್ವಿಗ್ನವಾಗುವತ್ತ ಸಾಗುತ್ತಿದೆ. ಇನ್ನೂ ಕೆಲ ವಾರಗಳ ಕಾಲ ಇದು ಮುಂದುವರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.
ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಪ್ರತೀಕಾರದ ಶಪಥ ಮಾಡಿದೆ. ಅಮೆರಿಕದ ಸೈನಿಕರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಇದರಿಂದಾಗಿ ಮಂಗಳವಾರವೂ ಯುದ್ಧ ಮುಂದುವರಿದಿದ್ದು, ಇರಾನ್ನ ಕ್ಷಿಪಣಿಯು ರಿಯಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಿದೆ. ಇದು ಇನ್ನಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯೂ ಇದೆ.
ಪರಮಾಣ ಅಸ್ತ್ರವನ್ನು ಇರಾನ್ ಪಡೆಯಬಾರದು ಎಂಬ ಕಾರಣದಿಂದ ಅಮೆರಿಕ ದಾಳಿ ಮಾಡಿರುವುದಾಗಿ ಹೇಳಿದೆ. ಈ ಕುರಿತು ಫೆ. 28ರಂದು ಡೊನಾಲ್ಡ್ ಟ್ರಂಪ್ ಅವರು 8 ನಿಮಿಷಗಳ ವಿಡಿಯೊ ಪೋಸ್ಟ್ ಅನ್ನು ಟ್ರುಥ್ ಸೋಷಿಯಲ್ನಲ್ಲಿ ಹಂಚಿಕೊಂಡಿದ್ದರು. ಇರಾನ್ ಒಳಗೆ ಪ್ರಬಲ ಶಸ್ತ್ರಸಜ್ಜಿತ ಯುದ್ಧ ನಡೆಸುವುದಾಗಿಯೂ ಹೇಳಿದ್ದರು. ಈ ಯುದ್ಧಕ್ಕೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಅವರು ಹೆಸರಿಸಿದ್ದರು.
ಅವರ ಕ್ಷಿಪಣಿ ಯೋಜನೆಗಳು ಮತ್ತು ಶಸ್ತ್ರಾಗಾರವನ್ನು ಪುಡಿಗಟ್ಟುವುದಾಗಿ ಟ್ರಂಪ್ ಅಬ್ಬರಿಸಿದ್ದರು.
ಅದರಂತೆಯೇ ಅಮೆರಿಕ ಸೇನೆಯು ಇರಾನ್ನ 1,250 ಸ್ಥಳಗಳನ್ನು ಗುರಿಯಾಗಿಸಿ ಶನಿವಾರ ದಾಳಿ ನಡೆಸಿತ್ತು. ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್, ಇರಾನ್ನ 11 ನೌಕೆಗಳನ್ನು ನಾಶಪಡಿಸಿರುವುದಾಗಿ ಹೇಳಿದೆ.
ಇಸ್ರೇಲ್ ಹಾಗೂ ಅಮೆರಿಕ ಸೇನೆ ನಡೆಸುತ್ತಿರುವ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ 1989ರಿಂದ ಇರಾನ್ನ ಚುಕ್ಕಾಣಿ ಹಿಡಿದಿದ್ದ ಸರ್ವೋಚ್ಛ ನಾಯಕ ಅಯೋತೊಲ್ಲಾ ಅಲಿ ಖಮೇನಿ ಹಾಗೂ ಇತರ ಅಧಿಕಾರಿಗಳನ್ನು ಟೆಹ್ರಾನ್ನ ಆವರಣವೊಂದರಲ್ಲಿ ಹತ್ಯೆ ಮಾಡಿರುವುದಾಗಿ ಸೇನೆ ಹೇಳಿಕೊಂಡಿದೆ.
ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಯುದ್ಧ ನಡೆಸಲು ಅಮೆರಿಕ ಸಿದ್ಧ ಎಂದು ಟ್ರಂಪ್ ಸೋಮವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ದಾಳಿ ಆರಂಭವಾದಾಗಿನಿಂದ ಈದಿನದವರೆಗೂ ದೇಶದ 131 ನಗರಗಳಲ್ಲಿ 555 ಜನ ಮೃತಪಟ್ಟಿರುವುದಾಗಿ ಇರಾನ್ನ ರೆಡ್ ಕ್ರೆಸೆಂಟ್ ಸಂಸ್ಥೆ ಹೇಳಿದೆ.
ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕುರಿತು ಬ್ರೌನ್ ವಿಶ್ವವಿದ್ಯಾಲಯವು 2025ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ ಅಮೆರಿಕವು 2023ರ ಅ. 7ರಿಂದ ಸುಮಾರು 21.7 ಶತಕೋಟಿ ಡಾಲರ್ (₹2 ಲಕ್ಷ ಕೋಟಿ) ಹಣವನ್ನು ಸೇನಾ ನೆರವಿಗಾಗಿ ವ್ಯಯಿಸಿದೆ. ಇದರೊಂದಿಗೆ ಯೆಮನ್, ಇರಾನ್ ಮತ್ತು ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್ ಪಡೆಯ ನೆರವಿಗಾಗಿ ಅಮೆರಿಕವು 9.65 ಶತಕೋಟಿಯಿಂದ 12.07 ಶತಕೋಟಿ ಡಾಲರ್ವರೆಗೂ ಖರ್ಚು ಮಾಡಿದೆ ಎಂದು ಹೇಳಲಾಗಿದೆ.
ಆ ಮೂಲಕ ಅಮೆರಿಕವು ಈವರೆಗೂ ವೆಚ್ಚ ಮಾಡಿದ ಪ್ರಮಾಣ 31.35 ಶತಕೋಟಿಯಿಂದ 33.77 ಶತಕೋಟಿಯಷ್ಟು ಅಮೆರಿಕನ್ ಡಾಲರ್ (ಸುಮಾರು ₹3 ಲಕ್ಷ ಕೋಟಿ) ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.
ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಪ್ರಕಾರ, ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ವಾಯು, ಜಲ, ನೆಲ ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆಗಾಗಿ ಸುಮಾರು 20 ಬಗೆಯ ಶಸ್ತ್ರಾಸ್ತ್ರಗಳನ್ನು ಬಳಸಿರುವುದಾಗಿ ಹೇಳಲಾಗಿದೆ.
ಇರಾನ್ ಒಳಗೆ ಸುಮಾರು ಒಂದು ಸಾವಿರದಷ್ಟು ಸ್ಥಳವನ್ನು ಗುರಿಯಾಗಿಸಿ ಅಮೆರಿಕ–ಇಸ್ರೇಲ್ ಪಡೆ ದಾಳಿ ನಡೆಸಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಅಮೆರಿಕದ ಬಿ–1 ಬಾಂಬರ್ಗಳು, ಪ್ರಮುಖ ಪರಮಾಣು ಹಾಗೂ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಬಿ–2 ಸ್ಟೆಲ್ತ್ ಬಾಂಬರ್ಗಳ ಬಳಕೆ, ಎಫ್–35 ಲೈಟ್ನಿಂಗ್ ದ್ವಿತೀಯ ಹಾಗೂ ಎಫ್–22 ರ್ಯಾಪ್ಟರ್ಗಳನ್ನು ಈ ದಾಳಿಯಲ್ಲಿ ಬಳಸಲಾಗಿದೆ.
ಎಫ್–15 ಫೈಟರ್ ಜೆಟ್ಗಳನ್ನೂ ಅಮೆರಿಕ ಬಳಕೆ ಮಾಡಿತು. ಆದರೆ ಮಾರ್ಚ್ 1ರಂದು ಮೂರು ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ಕುವೈತ್ ವರದಿ ಮಾಡಿದೆ.
ಇದರೊಂದಿಗೆ ಎಫ್–16 ಫೈಟಿಂಗ್ ಫಾಲ್ಕನ್, ಎಫ್/ಎ–18 ಸೂಪರನ್ ಹಾರ್ನೆಟ್ ಮತ್ತು ಎ–10 ಅಟ್ಯಾಕರ್ ಜೆಟ್ಗಳನ್ನು ಅಮೆರಿಕ ಬಳಕೆ ಮಾಡಿದೆ.
ಶತ್ರುಗಳ ವಾಯು ದಾಳಿಯನ್ನು ನಿಷ್ಕ್ರಿಯಗೊಳಿಸಲು ಇಎ–18ಜಿ ಗ್ರಾವ್ಲೆರ್ಗಳೆಂಬ ಎಲೆಕ್ಟ್ರಾನಿಕ್ ರಕ್ಷಣೆಯನ್ನು ಅಮೆರಿಕ ಬಳಸಿದೆ.
ಈ ದಾಳಿಯಲ್ಲಿ ಮಾನವ ರಹಿತ ವ್ಯವಸ್ಥೆಯನ್ನೂ ಅಮೆರಿಕ ವ್ಯಾಪಕವಾಗಿ ಬಳಸಿದೆ. ‘ಲುಕಾಸ್’ ಡ್ರೋಣ್ಗಳನ್ನು ಬಳಸಿದೆ. ಎಂಕ್ಯೂ–9 ರೀಪರ್ ಡ್ರೋಣ್ಗಳು, ಎಂ–142 ಎಂಬ ರಾಕೇಟ್ ಲಾಂಚರ್, ನೌಕಾದಳದಲ್ಲಿ ಟೊಮಾಹಾಕ್ ಎಂಬ ಕ್ಷಿಪಣಿ ಉಡ್ಡಯನ ವ್ಯವಸ್ಥೆಯನ್ನು ಅಮೆರಿಕ ಬಳಸಿದೆ ಎಂದು ವರದಿಯಾಗಿದೆ.
ಆಪರೇಷನ್ ಎಪಿಕ್ ಫ್ಯೂರಿ ಆರಂಭಿಸಿದ ಅಮೆರಿಕಕ್ಕೆ ಮೊದಲ 24 ಗಂಟೆಗಳಲ್ಲಿ ಸುಮಾರು 800 ದಶಲಕ್ಷ ಅಮೆರಿಕನ್ ಡಾಲರ್ನಷ್ಟು ಖರ್ಚಾಗಿರಬಹುದು ಎಂದು ಯುದ್ಧ ಪರಿಣಿತರು ಅಂದಾಜಿಸಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.
ಇದರೊಂದಿಗೆ ಹತ್ತಕ್ಕೂ ಹೆಚ್ಚು ಯುದ್ಧ ನೌಕೆಗಳು ಮತ್ತು ಪ್ರಾದೇಶಿಕವಾಗಿ ಸೌಲಭ್ಯಗಳ ಸಂಗ್ರಹ ಸೇರಿದಂತೆ ಆರಂಭಿಕ ವ್ಯವಸ್ಥೆಗಾಗಿ ಹೆಚ್ಚುವರಿಯಾಗಿ 600 ದಶಲಕ್ಷ ಅಮೆರಿಕನ್ ಡಾಲರ್ನಷ್ಟು ಖರ್ಚಾಗಿರಬಹುದು. ಸೆಂಟರ್ ಫಾರ್ ನ್ಯೂ ಅಮೆರಿಕನ್ ಸೆಕ್ಯುರಿಟಿ ಅಂದಾಜಿಸಿರುವ ಪ್ರಕಾರ ಪ್ರತಿದಿನ ಅಮೆರಿಕವು ಸುಮಾರು 65 ಲಕ್ಷ ಅಮೆರಿಕನ್ ಡಾಲರ್ನಷ್ಟು (ಸುಮಾರು ₹600 ಕೋಟಿಯಷ್ಟು) ಎಂದೂ ಅಂದಾಜಿಸಲಾಗಿದೆ.
ಯುದ್ಧ ಇನ್ನಷ್ಟು ದಿನ ಮುಂದುವರಿಯುವ ಸೂಚನೆಯನ್ನು ಎರಡೂ ರಾಷ್ಟ್ರಗಳು ನೀಡಿವೆ. ಹೀಗಾಗಿ ಶಸ್ತ್ರಾಸ್ತ್ರಗಳು ಇನ್ನಷ್ಟು ಬಳಕೆಯಾಗಲಿವೆ. ಇನ್ನಷ್ಟು ಸಾವುನೋವುಗಳು ಸಂಭವಿಸುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.