ADVERTISEMENT

EXPLAINER: ಮಾದಕವ್ಯಸನ, ಬಂದೂಕು ಖರೀದಿ; ಪುತ್ರನಿಗೆ ಬೈಡನ್ ಕ್ಷಮಾದಾನ! ಮುಂದೇನು?

ರಾಯಿಟರ್ಸ್
Published 3 ಡಿಸೆಂಬರ್ 2024, 13:40 IST
Last Updated 3 ಡಿಸೆಂಬರ್ 2024, 13:40 IST
<div class="paragraphs"><p>ಜೋ ಬೈಡನ್‌ ಹಾಗೂ ಹಂಟರ್ ಬೈಡನ್‌</p></div>

ಜೋ ಬೈಡನ್‌ ಹಾಗೂ ಹಂಟರ್ ಬೈಡನ್‌

   

ರಾಯಿಟರ್ಸ್ ಚಿತ್ರ

ಮಾದಕ ದ್ರವ್ಯ ಸೇವನೆ, ಬಂದೂಕುಗಳ ಅಕ್ರಮ ಖರೀದಿ ಹಾಗೂ ಆದಾಯ ತೆರಿಗೆ ಪಾವತಿಸದ ಪ್ರಕರಣಗಳಲ್ಲಿ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್‌ ಬೈಡನ್‌ ದೋಷಿಯಾಗಿದ್ದಾರೆ. ಶಿಕ್ಷೆ ಪ್ರಮಾಣ ಪ್ರಕಟವಾಗುವ ಮೊದಲೇ ಅಧ್ಯಕ್ಷರೂ ಆಗಿರುವ ತಂದೆ, ಪುತ್ರನಿಗೆ ಕ್ಷಮಾದಾನ ನೀಡಿದ್ದಾರೆ. ಹಾಗಿದ್ದರೆ, ಇಂಥ ವಿಲಕ್ಷಣ ಪ್ರಕರಣಗಳು ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲೇ...?

ವಿಲ್ಮಿಂಗ್ಟನ್‌: ಮಾದಕದ್ರವ್ಯ ಸೇವನೆ, ಬಂದೂಕು ಖರೀದಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್‌ ಬೈಡನ್‌ ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ. ಆದರೆ, ಇದರ ನಡುವೆಯೇ ಹಂಟರ್‌ ಅವರ ತಂದೆಯೂ ಆಗಿರುವ ಅಧ್ಯಕ್ಷ ಜೋ ಬೈಡನ್ ಅವರು ಪುತ್ರನಿಗೆ ಕ್ಷಮಾದಾನ ನೀಡಿರುವುದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ADVERTISEMENT

ನ್ಯಾಯಾಂಗ ವ್ಯವಸ್ಥೆಯ ಸ್ಪಷ್ಟ ವೈಫಲ್ಯ ಎಂದು ಡೊನಾಲ್ಡ್‌ ಟ್ರಂಪ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಮುಂದೇನಾಗಲಿದೆ ಎಂಬುದರ ಕುರಿತು ಅಮೆರಿಕದಲ್ಲಿ ಚರ್ಚೆಗಳು ಆರಂಭವಾಗಿವೆ. ಅಧ್ಯಕ್ಷರ ಅವಧಿ ಬಹುತೇಕ ಕೊನೆಯ ಹಂತದಲ್ಲಿರುವಾಗ ಪುತ್ರನಿಗೆ ಕ್ಷಮಾದಾನ ನೀಡಿದ್ದರ ಪರ ಹಾಗೂ ವಿರುದ್ಧದ ಚರ್ಚೆಗಳು ಅಮೆರಿಕ ಮಾತ್ರವಲ್ಲದೆ, ಜಗತ್ತಿನ ಇತರ ರಾಷ್ಟ್ರಗಳಲ್ಲೂ ನಡೆಯುತ್ತಿವೆ.

ಕ್ಷಮಾದಾನದಿಂದ ಏನೆಲ್ಲಾ ಸಿಗಲಿವೆ?

ಹಂಟರ್‌ ಬೈಡನ್‌ ಮೇಲಿನ ದೋಷಾರೋಪಗಳು ದೃಢವಾದ ಹಿನ್ನೆಲೆಯಲ್ಲಿ ಡೆಲವೇರ್‌ನ ನ್ಯಾಯಾಧೀಶರು ದೋಷಿ ಎಂದು ಪ್ರಕಟಿಸಿದ್ದರು. ಆದರೆ ಅಧ್ಯಕ್ಷರಾಗಿರುವ ಜೋ ಬೈಡನ್ ಅವರು ತಮ್ಮ ಪುತ್ರ ಹಂಟರ್‌, 2014ರ ಜ. 1ರಿಂದ ಇಲ್ಲಿಯವರೆಗೆ ಕೈಗೊಂಡಿರುವ ಅಥವಾ ಕೈಗೊಂಡಿರಬಹುದಾದ ಎಲ್ಲಾ ಅಪರಾಧ ಕೃತ್ಯಗಳಿಗೆ ಕ್ಷಮಾದಾನ ನೀಡಿದರು. ಈ ಕ್ಷಮಾದಾನದಲ್ಲಿ ಫೆಡರಲ್‌ ಅಪರಾಧಗಳೂ ಒಳಗೊಂಡಿವೆ.

ಅಮೆರಿಕದ ಅಧ್ಯಕ್ಷರ ಪ್ರಯಾಣಕ್ಕೆ ಮೀಸಲಾಗಿರುವ ಏರ್‌ಫೋರ್ಸ್‌ ಒನ್‌ನಿಂದ ಇಳಿಯುತ್ತಿರುವ ಜೋ ಬೈಡನ್ ಹಾಗೂ ಹಂಟರ್ ಬೈಡನ್‌

ಹಂಟರ್‌ ನಡೆಸಿದ ಅಪರಾಧ ಕೃತ್ಯಗಳು ಏನೇನು?

ಮಾದಕದ್ರವ್ಯ ಸೇವನೆಯ ಚಟಕ್ಕೆ ಅಂಟಿರುವುದು, ಅಕ್ರಮವಾಗಿ ಬಂದೂಕು ಖರೀದಿ ಪ್ರಕರಣಗಳಲ್ಲಿ ಹಂಟರ್ ಬೈಡನ್‌ ತಪ್ಪಿತಸ್ಥ ಎಂದು ಡೆಲವೇರ್‌ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಹಂಟರ್‌ನ ವ್ಯಸನ, ಅದರಿಂದ ಅವರ ವರ್ತನೆಯಲ್ಲಿನ ಬದಲಾವಣೆ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕುರಿತು ಗಂಟೆಗಟ್ಟಲೆ ವಿಚಾರಣೆ ನಡೆಯಿತು. ಇದು ಅಧ್ಯಕ್ಷ ಬೈಡನ್‌ ಹಾಗೂ ಅವರ ಬೆಂಬಲಿಗರಿಗೆ ತೀವ್ರ ಮುಜುಗರವನ್ನುಂಟು ಮಾಡಿತು. ಹಂಟರ್‌ ಮೇಲಿನ ಆರೋಪ ಸಾಭೀತಾಗಿದ್ದು, ಡಿ. 12ರಂದು ಶಿಕ್ಷೆ ಪ್ರಕಟವಾಗಬೇಕಿತ್ತು.

ಮಾದಕ ದ್ರವ್ಯ, ಲೈಂಗಿಕ ಕಾರ್ಯಕರ್ತೆಯರ ಬಳಕೆ ಹಾಗೂ ವಿಲಾಸಿ ವಸ್ತುಗಳ ಖರೀದಿಯಲ್ಲಿ ತೊಡಗಿದ್ದ ಹಂಟರ್‌, 14 ಲಕ್ಷ ಅಮೆರಿಕನ್‌ ಡಾಲರ್‌ ತೆರಿಗೆ ಪಾವತಿಸುವಲ್ಲೂ ವಿಫಲರಾಗಿದ್ದರು. ಈ ಪ್ರಕರಣದಲ್ಲೂ ದೋಷಿ ಎಂದಿದ್ದ ನ್ಯಾಯಾಲಯ, ಡಿ. 16ರಂದು ಶಿಕ್ಷೆ ಪ್ರಕಟಿಸುವುದಾಗಿ ಹೇಳಿತ್ತು.

ಶಿಕ್ಷೆ ಪ್ರಕಟವಾಗಿದ್ದರೆ ಹಂಟರ್‌ ಏನೆಲ್ಲಾ ಅನುಭವಿಸಬೇಕಿತ್ತು?

ಬಂದೂಕು ಪ್ರಕರಣದಲ್ಲಿ 15ರಿಂದ 21 ತಿಂಗಳ ಸೆರೆವಾಸ ಅನುಭವಿಸಬೇಕು. ಕೆಲ ಕಾನೂನು ಪಂಡಿತರ ಪ್ರಕಾರ ಇಂಥದ್ದೇ ಪ್ರಕರಣಗಳಲ್ಲಿ ಕಡಿಮೆ ಅವಧಿಯ ಶಿಕ್ಷೆಯನ್ನೂ ವಿಧಿಸಲಾಗಿದೆ. ಆದರೆ ವಿಚಾರಣಾ ಪೂರ್ವ ಬಿಡುಗಡೆಗೆ ಬದ್ಧರಾದರೆ ಶಿಕ್ಷೆಯ ಪ್ರಮಾಣದಲ್ಲೂ ಒಂದಷ್ಟು ರಿಯಾಯಿತಿ ಸಿಗುವ ಸಾಧ್ಯತೆ ಇದೆ. 

ಅಮೆರಿಕದ ಕ್ಯಾಪಿಟಲ್‌ ಹಿಲ್‌ನಲ್ಲಿ ನ್ಯಾಯಾಂಗ ತನಿಖೆ ಎದುರಿಸಲು ಹಾಜರಾಗುತ್ತಿರುವ ಹಂಟರ್ ಬೈಡನ್‌

ಕ್ಷಮಾಪಣಾ ಒಪ್ಪಂದ ಇಲ್ಲವೇ?

ಆದಾಯ ತೆರಿಗೆ ಪಾವತಿಸಲು ಎರಡು ಬಾರಿ ವಿಫಲರಾದ ಹಂಟರ್‌ ತಪ್ಪೊಪ್ಪಿಗೆ ಪತ್ರ ನೀಡಲು ಒಪ್ಪಿಕೊಂಡಿದ್ದರು. ಇದರೊಂದಿಗೆ ಬಂದೂಕು ಪ್ರಕರಣದಲ್ಲೂ ಶಿಕ್ಷೆಯಿಂದ ವಿನಾಯಿತಿ ನೀಡಲು ಕೋರಿದ್ದರು. ಅಮೆರಿಕದ ಅಧ್ಯಕ್ಷನ ಪುತ್ರನಿಗೆ ಸಹಜವಾಗಿ ರಕ್ಷಣೆ ಸಿಗುತ್ತದೆ ಎಂದು ರಿಪಬ್ಲಿಕನ್‌ ಪಕ್ಷ ಆರೋಪಿಸಿತ್ತು. ಆದರೆ ರಿಯಾಯಿತಿ ನೀಡುವ ಒಪ್ಪಂದವನ್ನು ನ್ಯಾಯಾಧೀಶರು ಒಪ್ಪಿಕೊಳ್ಳಲು ನಿರಾಕರಿಸಿದರು. ಆ ಮೂಲಕ ಬಂದೂಕು ಪ್ರಕರಣದಲ್ಲಿ ಹಂಟರ್ ವಿಚಾರಣೆ ಎದುರಿಸುವುದು ನಿಶ್ಚಿತವಾಯಿತು.

ಹಂಟರ್ ಬೈಡನ್‌ ಮತ್ತೆ ವಿಚಾರಣೆ ಎದುರಿಸಬೇಕಾಗಬಹುದೇ?

ಅಧಿಕಾರಕ್ಕೆ ಬಂದರೆ ಬೈಡನ್ ಮಗನ ವಿರುದ್ಧದ ಪ್ರಕರಣವನ್ನು ಮುನ್ನೆಲೆಗೆ ತರುವುದಾಗಿ ರಿಪಬ್ಲಿಕನ್ ಪಕ್ಷ ವಾಗ್ದಾನ ಮಾಡಿತ್ತು. ಹೀಗಾಗಿ ಒಂದೊಮ್ಮೆ ಅಮೆರಿಕದ ಸಂಸತ್ತು ಅಥವಾ ನ್ಯಾಯಾಂಗ ಇಲಾಖೆ ನಿರ್ಧರಿಸಿದರೆ, ಹಂಟರ್ ಬೈಡನ್‌ ಮರು ವಿಚಾರಣೆಯು ನಡೆಯುವ ಸಾಧ್ಯತೆ ಇದೆ. ಅಧ್ಯಕ್ಷರು ನೀಡುವ ಕ್ಷಮಾದಾನವು ಯಾವುದೇ ವ್ಯಕ್ತಿಯು ದೇಶದೊಳಗೆ ನಡೆಸುವ ಅಪರಾಧ ಕೃತ್ಯಗಳಿಗೆ ರಕ್ಷಣೆ ನೀಡದು ಎಂದು ತಜ್ಞರು ಹೇಳುತ್ತಾರೆ.

ಹಾಗಿದ್ದರೆ ಬೈಡನ್ ಅವರು ತಮ್ಮ ಪುತ್ರನಿಗೆ ನೀಡಿದ ಕ್ಷಮಾದಾನ ಅಸಿಂಧುವೇ?

ಇಲ್ಲ. ಏಕೆಂದರೆ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಅವರ ಅವಧಿಯಿಂದ ಕ್ಷಮಾದಾನ ಎಂಬುದು ಸಾಮಾನ್ಯ ಎಂಬಂತೆ ನಡೆದುಕೊಂಡೇ ಬಂದಿದೆ. ಗೆರಾಲ್ಡ್ ಫೋರ್ಡ್ ಅವರು ತಮ್ಮ ಹಿಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರಿಗೆ ಕ್ಷಮಾದಾನ ನೀಡಿದ್ದರು. ಬಿಲ್ ಕ್ಲಿಂಟನ್ ಅವರು ತಮ್ಮ ಭಾವನಿಗೆ, ಡೊನಾಲ್ಡ್ ಟ್ರಂಪ್ ಅವರು ರಿಯಲ್‌ ಎಸ್ಟೇಟ್ ಉದ್ಯಮಿಯೂ ಆದ ತಮ್ಮ ಅಳಿಯ ಜೇರ್ಡ್‌ ಕುಷ್ನೆರ್‌ ಅವರಿಗೆ ಕ್ಷಮಾದಾನ ನೀಡಿದ್ದು ಅಮೆರಿಕದ ಇತಿಹಾಸದಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.