ADVERTISEMENT

ಕೋಚಿಂಗ್ ಮಾಫಿಯಾ | ಪಿಯುಸಿ : ದುಬಾರಿ ದುನಿಯಾ

ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ l ಕಣ್ಮುಚ್ಚಿ ಕುಳಿತ ಪದವಿ ಪೂರ್ವ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
ಪಿಯು ಬೋರ್ಡ್‌ ಕಟ್ಟಡ
ಪಿಯು ಬೋರ್ಡ್‌ ಕಟ್ಟಡ   

ಪಿಯುಸಿ ಪ್ರವೇಶ ಕೈಪಿಡಿಯ ಕೊನೇ ಪುಟದಲ್ಲಿ ‘ಇಂಟಿಗ್ರೇಟೆಡ್ ಕೋಚಿಂಗ್’ಗೆ ಅವಕಾಶ ಇರುವುದಿಲ್ಲ ಮತ್ತು ಆ ರೀತಿ ಯಾವುದೇ ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಇಂಟಿಗ್ರೇಟೆಡ್ ಕೋಚಿಂಗ್ ನಡೆಸುವ ಕಾಲೇಜುಗಳ ಮಾನ್ಯತೆ ರದ್ದು ಪಡಿಸಲಾಗುವುದು ಎಂದು ಇಲಾಖೆ ಪ್ರಕಟಿಸುತ್ತದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕಾಲೇಜು ಅಥವಾ ಶಿಕ್ಷಣ ಸಂಸ್ಥೆ ವಿರುದ್ದ ಕ್ರಮ ಕೈಗೊಂಡ ಒಂದೇ ಒಂದು ನಿದರ್ಶನವಿಲ್ಲ...

ಬೆಂಗಳೂರು: ವೃತ್ತಿ ಶಿಕ್ಷಣಕ್ಕೆ ಪ್ರವೇಶ ಕೊಡಿಸುವುದಾಗಿ ಹೇಳಿಕೊಂಡು ನಾಯಿಕೊಡೆಗಳಂತೆ ತಲೆ ಎತ್ತಿರುವ ‘ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್’ ಗಳು ಕೋಟಿ, ಕೋಟಿ ಲೂಟಿ ಹೊಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಪೋಷಕರ ವ್ಯಾಮೋಹವೋ, ಕೋಚಿಂಗ್ ಸೆಂಟರ್‌ಗಳ ಮಾರ್ಕೆಟಿಂಗ್ ಗಿಮಿಕ್ಕೊ, ಕಳೆದ ನಾಲ್ಕು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣದ ಜತೆಗೆ ‘ಇಂಟಿಗ್ರೇಟೆಡ್ ಕೋಚಿಂಗ್’ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯದಲ್ಲಿ ಸಾವಿರ ಸಾವಿರಗಳ ಲೆಕ್ಕದಲ್ಲಿ ಹೆಚ್ಚಾಗುತ್ತಿದೆ. ಜತೆಗೆ ಕೋಚಿಂಗ್ ನೀಡುವ ಸಂಸ್ಥೆಗಳ ಸಂಖ್ಯೆಯೂ ಏರಿಕೆ ಆಗುತ್ತಿದೆ.

ADVERTISEMENT

ಕ್ಯಾಪಿಟೇಷನ್ ಮಾಫಿಯಾ ಕಪಿಮುಷ್ಟಿಯಲ್ಲೇ ಬಹುತೇಕ ಕೇಂದ್ರಗಳು ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿವೆ. ವೃತ್ತಿ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಪೂರ್ಣ ಸಿದ್ಧತೆ ಮಾಡುವುದಾಗಿ ಬಣ್ಣ ಬಣ್ಣದ ಕನಸುಗಳನ್ನು ತುಂಬಿ ಅಕ್ಷರಶಃ ದರೋಡೆ ನಡೆಸುತ್ತಿವೆ.

ಪಿಯುಸಿ ಪ್ರವೇಶ ಬಯಸಿ ಕಾಲೇಜಿಗೆ ಎಡತಾಕುವ ಪೋಷಕರಿಗೆ ಖಾಸಗಿ ಕಾಲೇಜುಗಳು ಈಗ ಎರಡು ಬಗೆಯ ‘ಫೀ ಸ್ಟ್ರಕ್ಚರ್’ ಮುಂದಿಡುತ್ತಿವೆ. ಒಂದು, ಕೇವಲ ಪಿಯುಸಿಗೆ; ಇನ್ನೊಂದು ಇಂಟಿಗ್ರೇಟೆಡ್‌ ಕೋಚಿಂಗ್‌ಗೆ. ಈ ಅನುಭವ ಹೊಂದಿರುವ ಪೋಷಕರ ಪ್ರಕಾರ, ಇಂಟಿಗ್ರೇಟೆಡ್ ಕೋಚಿಂಗ್ ಹೆಸರಿನಲ್ಲಿ ಅಕ್ಷರಶಃ ಪೋಷಕರು ಮತ್ತು ವಿದ್ಯಾರ್ಥಿಗಳ ‘ಬ್ರೇನ್ ವಾಷ್’ ಮಾಡಲಾಗುತ್ತಿದೆ.

‘ಪಿಯುಸಿಗೆ ಪ್ರವೇಶ ಬಯಸಿ ವಿಚಾರಿಸಲು ಬರುವ ಪ್ರತಿ ಪೋಷಕರ ಮನಸ್ಸಿನಲ್ಲೂ ಕೋರ್ಸ್ ಆಯ್ಕೆ ಬಗ್ಗೆ ಗೊಂದಲ, ಆತಂಕ ಇದ್ದೇ ಇರುತ್ತೆ. ಇದನ್ನು ‘ಎನ್‌ಕ್ಯಾಷ್’ ಮಾಡೋ ಕಾಲೇಜುಗಳು ನೀಟ್ ಬರೆಯೋ ಆಸಕ್ತಿ ಇದ್ರೆ ಯಾವ ಕೋಚಿಂಗ್ ಪಡೀಬೇಕು, ಜೆಇಇ ಆದರೆ ಯಾವ ಮಾದರಿ ಕೋಚಿಂಗ್, ಸಿಇಟಿ ಆದರೆ ಯಾವ ಕೋಚಿಂಗ್ ತೆಗೆದುಕೊಳ್ಳಬೇಕು ಎಂದು ಹೇಳುವಾಗ, ಗೊಂದಲಕ್ಕೆ ಸಿಲುಕಿ, ಯಾವುದನ್ನು ಆಯ್ಕೆ ಮಾಡಬೇಕು ಅನ್ನೋದು ತಿಳಿಯದೆ, ನೀವೆ ಹೇಳಿ ಯಾವುದು ಬೆಸ್ಟ್ ಎಂದು ಬಿಡ್ತೀವಿ. ಅಲ್ಲಿಗೆ ನಾವು ಖೆಡ್ಡಾಕ್ಕೆ ಬಿದ್ದಂತೆ ಸರಿ,’ ಎನ್ನುತ್ತಾರೆ ಇತ್ತೀಚೆಗಷ್ಟೆ ಮಗಳನ್ನು ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿಗೆ ದಾಖಲು ಮಾಡಿರುವ ಪೋಷಕ ಸಿ,ಎಸ್. ನಂದೀಶ್.

ರಾಜ್ಯಾದ್ಯಂತ ಹಲವು ವರ್ಷಗ ಳಿಂದ ನಡೆಯುತ್ತಿದ್ದ ಖಾಸಗಿ ಮನೆಪಾಠಕ್ಕೆ ಕಡಿವಾಣ ಹಾಕಿದ ಸರ್ಕಾರ, ಇಂಟಿಗ್ರೇಟೆಡ್ ವಿಚಾರದಲ್ಲಿ ಮಾತ್ರ ಮೃದು ಧೋರಣೆ ತಳೆದಂತಿದೆ. ಮಾಹಿತಿ ಪ್ರಕಾರ, ಪ್ರತಿ ವರ್ಷ ಇಂಟಿಗ್ರೇಟೆಡ್ ಕೋಚಿಂಗ್ ವಿರುದ್ದ ನೂರಾರು ದೂರುಗಳು ದಾಖಲಾಗುತ್ತಿವೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಇಂಟಿಗ್ರೇಟೆಡ್ ಶಿಕ್ಷಣದ ವಿರುದ್ದ ಕ್ರಮ ಕೈಗೊಳ್ಳಲು ನಿಯಮಗಳಲ್ಲಿ ಯಾವುದೇ ಅವಕಾಶ ಇಲ್ಲ ಎಂಬ ಹಾರಿಕೆ ಉತ್ತರ ಸಿಗುತ್ತದೆ. ಈ ಹಿಂದೆ ತನ್ವೀರ್ ಸೇಠ್‌ ಅವರು ಶಿಕ್ಷಣ ಸಚಿವರಾಗಿದ್ದಾಗ, ಇಂಟಿಗ್ರೇಟೆಡ್ ಕೋಚಿಂಗ್ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇಲಾಖೆಯ ನಿಯಮಗಳಲ್ಲಿ ಅದಕ್ಕೆ ಅವಕಾಶ ಇಲ್ಲದ ಕಾರಣ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲವಂತೆ.

ಗಮನಾರ್ಹ ವಿಚಾರ ಎಂದರೆ, ಪ್ರತಿ ವರ್ಷ ಪಿಯುಸಿ ಪ್ರವೇಶ ಕೈಪಿಡಿ ಬಿಡುಗಡೆಗೊಳಿಸುವ ಇಲಾಖೆ ಕೈಪಿಡಿ ಕೊನೇ ಪುಟದಲ್ಲಿ ‘ಇಂಟಿಗ್ರೇಟೆಡ್ ಕೋಚಿಂಗ್’ಗೆ ಅವಕಾಶ ಇರುವುದಿಲ್ಲ ಮತ್ತು ಆ ರೀತಿ ಯಾವುದೆ ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಇಂಟಿಗ್ರೇಟೆಡ್ ಕೋಚಿಂಗ್ ನಡೆಸೋ ಕಾಲೇಜುಗಳ ಮಾನ್ಯತೆ ರದ್ದು ಪಡಿಸಲಾಗುವುದು ಎಂದು ಪ್ರಕಟಿಸುತ್ತದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಇಲಾಖೆ ಯಾವುದೇ ಕಾಲೇಜು ಅಥವಾ ಶಿಕ್ಷಣ ಸಂಸ್ಥೆ ವಿರುದ್ದ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ.

ಇನ್ನೊಂದು ಮುಖ್ಯ ವಿಚಾರ, ಇಂಟಿಗ್ರೇಟೆಡ್ ಹೆಸರಲ್ಲಿ ನಡೆಯುತ್ತಿರುವ ಲೂಟಿ ಮತ್ತು ಪೋಷಕರ ಸುಲಿಗೆಯ ಸ್ವರೂಪದ್ದು, ಸಾಮಾನ್ಯ ಮಟ್ಟದ ಪದವಿ ಪೂರ್ವ ಕಾಲೇಜಿನಲ್ಲೂ ಇವತ್ತು ಇಂಟಿಗ್ರೇಟೆಡ್ ಕೋಚಿಂಗ್ ಲಭ್ಯವಿದೆ. ಅದಕ್ಕೆ ಪಡೆಯೋ ಶುಲ್ಕ ₹1 ಲಕ್ಷದಿಂದ ₹4 ಲಕ್ಷದವರೆಗೆ! ನೀಟ್, ಜೆಇಇ ಅಥವಾ ಸಿಇಟಿಯಲ್ಲಿ ತಮ್ಮ ಮಕ್ಕಳು ಉತ್ತಮ ಅಂಕ ಪಡೆಯಲಿ ಎಂಬ ಕಾರಣಕ್ಕೆ ಕೇಳಿದಷ್ಟು ಹಣ ನೀಡಿ ದಾಖಲು ಮಾಡುವ ಪೋಷಕರು, ತಮ್ಮ ಮಕ್ಕಳು ಪಿಯುಸಿ ಶಿಕ್ಷಣ ಮುಗಿಸುವುದರೊಳಗೆ, ಮೆಡಿಕಲ್ ಅಥವಾ ಎಂಜಿನಿಯರಿಂಗ್ ಪದವಿಯ 3 ಅಥವಾ 4 ವರ್ಷಕ್ಕೆ ತಗುಲುವ ವೆಚ್ಚವನ್ನು ಭರಿಸಿರುತ್ತಾರೆ.

ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಟಿಗ್ರೇಟೆಡ್ ಕೋಚಿಂಗ್ ಸಂಸ್ಥೆಗಳು ಕೈಜೋಡಿಸಿರುವುದು ಪ್ರತಿಷ್ಠಿತ ಹಣೆಪಟ್ಟಿ ಹೊತ್ತಿರುವ ಕೆಲ ಖಾಸಗಿ ಪದವಿ ಪೂರ್ವ ಕಾಲೇಜುಗಳ ಜತೆಗೆ. ಪ್ರಾರಂಭದಲ್ಲಿ ಕೇವಲ ಬೆಂಗಳೂರಿಗೆ ಸೀಮಿತ ಆಗಿದ್ದ ಈ ‘ದಂಧೆ’ ಈಗ ರಾಜ್ಯಾದ್ಯಂತ ವ್ಯಾಪಿಸಿದೆ. ಹಿಂದೆ ಇದ್ದ ಖಾಸಗಿ ಮನೆಪಾಠ ಮತ್ತು ಈಗಿನ ‘ಇಂಟಿಗ್ರೇಟೆಡ್ ಕೋಚಿಂಗ್‘ ನಡುವೆ ಅಷ್ಟೇನೂ ವ್ಯತ್ಯಾಸ ಇಲ್ಲ.
ಖಾಸಗಿ ಮನೆಪಾಠ ಕಾಲೇಜಿನಿಂದ ಹೊರಗೆ ನಡೆಯುತ್ತಿತ್ತು ಮತ್ತು ಬಹುತೇಕ ಕಾಲೇಜಿನ ಶಿಕ್ಷಕರೇ ಅಲ್ಲಿ ತರಗತಿ ನಡೆಸುತ್ತಿದ್ದರು. ಇಂಟಿಗ್ರೇಟೆಡ್‌ನಲ್ಲಿ, ಖಾಸಗಿ ಸಂಸ್ಥೆಗಳು ಕಾಲೇಜುಗಳ ಆವರಣದಲ್ಲೆ ರಾಜಾರೋಷವಾಗಿ ಕೋಚಿಂಗ್ ನಡೆಸುತ್ತಿವೆ. ಮನೆಪಾಠ ನಡೆಸೋ ಸಂಸ್ಥೆಗಳ ಮೇಲೆ ಮುಗಿಬೀಳೋ ಇಲಾಖೆ/ಸರ್ಕಾರ, ಇಷ್ಟೇಲ್ಲಾ ತಿಳಿದ್ದಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ದುರಂತವೇ ಸರಿ.

ಎಸ್. ಆರ್. ಉಮಾಶಂಕರ್

ನಿಯಮ ರೂಪಿಸಬೇಕಿದೆ

ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಆಗಿರುವ

ಬೆಳವಣಿಗೆ. ಹೀಗಾಗಿ ಹೊಸದಾಗಿ ನಿಯಮಗಳನ್ನು ರೂಪಿಸಬೇಕು. ದೇಶದಾದ್ಯಂತ ಎಲ್ಲೆಡೆ ಇದೇ ಸಮಸ್ಯೆ ಇರುವುದರಿಂದ ರಾಷ್ಟ್ರಕ್ಕೆ ಅನ್ವಯಿಸುವ ಕಾಯ್ದೆ ಜಾರಿಗೆ ತರಬೇಕಿದೆ. ಈ ಸಂಬಂಧ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಎಲ್ಲವನ್ನೂ ವಿವರಿಸಿ ಪತ್ರ ಬರೆಯಲಾಗಿದೆ. ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿ ಕೇಂದ್ರದ ಸಲಹೆ ಪಡೆದು ಮುಂದಿನ ಹೆಜ್ಜೆ ಇರಿಸಲಾಗುವುದು.

-ಎಸ್. ಆರ್. ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ

ಇಂಟಿಗ್ರೇಟೆಡ್ ಕೋಚಿಂಗ್‌ ಎಂದರೆ?

ಪಿಯುಸಿ ಜೊತೆಗೆ ದೇಶದಾದ್ಯಂತ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಹತ್ತಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೀಡಲಾಗುವ ವಿಶೇಷ ತರಬೇತಿ. ಮೊದಲೆಲ್ಲ ಕೋಚಿಂಗ್, ಮನೆಪಾಠದ ಹೆಸರಲ್ಲಿ ಕಾಲೇಜುಗಳ ಆಚೆ ನಡೆಯುತ್ತಿತ್ತು, ಆದರೀಗ ಕಾಲೇಜು ಆವರಣದಲ್ಲೇ ಇಂಟಿಗ್ರೇಟೆಡ್ ಕೋಚಿಂಗ್ ಹೆಸರಿನಲ್ಲಿ ಈ ಎಲ್ಲ ತರಬೇತಿ ನೀಡಲಾಗುತ್ತಿದೆ. ಇದಕ್ಕೆಂದೇ ದೇಶದ ಮೂಲೆ ಮೂಲೆಗಳಿಂದ, ಯುಪಿಎಸ್‍ಸಿ ಪರೀಕ್ಷಾ ತರಬೇತಿಗೆ ಹೆಸರು ಮಾಡಿರುವ ರಾಜಸ್ಥಾನದ ಕೋಟಾ ನಗರ ಸೇರಿದಂತೆ ಹಲವಾರು ನಗರಗಳಲ್ಲಿರುವ ಸಂಸ್ಥೆಗಳು ಈಗ ರಾಜ್ಯದಲ್ಲಿ ಬೇರುಬಿಟ್ಟಿವೆ. ಇಂಟಿಗ್ರೇಟೆಡ್ ಕೋಚಿಂಗ್‍ಗೆ ಈ ಸಂಸ್ಥೆಗಳು ತಮ್ಮದೇ ಆದ ಪ್ರತ್ಯೇಕ ಪಠ್ಯಕ್ರಮ ತಯಾರಿಸಿಕೊಂಡಿರುತ್ತವೆ. ಇವು ಅನುಸರಿಸುವ ಪಠ್ಯಕ್ರಮಕ್ಕೆ ಯಾವುದೇ ಬೋರ್ಡ್ ಅಥವಾ ರಾಜ್ಯ ಸರ್ಕಾರದ ಅನುಮತಿ ಇಲ್ಲ. ಆ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವೂ ಇರುವುದಿಲ್ಲ. ಪಿಯುಸಿ ಪಠ್ಯಕ್ರಮದ ಹೊರತಾಗಿ ಬಹು ಆಯ್ಕೆ ಪ್ರಶ್ನೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಈ ಸಂಸ್ಥೆಗಳ ಗುರಿ. ಪ್ರಥಮ ಪಿಯುಸಿ ಹಂತದಿಂದಲೇ ಪ್ರಾರಂಭವಾಗುವ ಈ ತರಬೇತಿಯ ಗುರಿ ಪಿಯುಸಿ ಪರೀಕ್ಷೆಅಲ್ಲ. ನೀಟ್, ಜೆಇಇಯಂಥ ರಾಷ್ಟ್ರಮಟ್ಟದ ಪರೀಕ್ಷೆಗಳು ಮಾತ್ರ.

ಸರ್ಕಾರ ಏನು ಮಾಡಬೇಕು?

* ಕೂಡಲೆ ರಾಜ್ಯದಲ್ಲಿರುವ ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್‌ಗಳ ಸಮೀಕ್ಷೆ ನಡೆಸಬೇಕು

* ಇಂಟಿಗ್ರೇಟೆಡ್ ಕೋಚಿಂಗ್ ಸೆಂಟರ್‌ಗಳ ನೋಂದಣಿಗೆ ನಿಯಮ ರೂಪಿಸಬೇಕು

* ಪಿಯುಸಿ ಕಾಲೇಜುಗಳ ಮಾದರಿಯಲ್ಲೇ ಕೋಚಿಂಗ್ ಸೆಂಟರ್‌ಗಳಿಗೂ ಮಾನದಂಡ ಇರಬೇಕು

* ಇಂತಿಷ್ಟೇ ಪ್ರವೇಶ, ಶುಲ್ಕ ಮತ್ತು ಪಠ್ಯಕ್ರಮ ನಿಗದಿಗೊಳಿಸಬೇಕು

* ಇಂತಹ ಸೆಂಟರ್‌ಗಳ ನಿಯಮಿತ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಬೇಕು

* ಕೋಚಿಂಗ್‌ಗೆ ಕಾಲಮಿತಿ ನಿಗದಿಗೊಳಿಸಬೇಕು

* ಅನಧಿಕೃತ ಅಥವಾ ಸರ್ಕಾರದ ಅನುಮತಿ ಇಲ್ಲದ ಕಾಲೇಜುಗಳ ಆವರಣದಲ್ಲಿ ನಡೆಸುವ ಕೋಚಿಂಗ್ ಸೆಂಟರ್‌ಗಳ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು

* ಸರ್ಕಾರಿ ಕಾಲೇಜುಗಳಲ್ಲೂ ಉಚಿತ ಕೋಚಿಂಗ್‌ಗೆ ವ್ಯವಸ್ಥೆ ಮಾಡಬೇಕು

ಓದುಗರುಪ್ರತಿಕ್ರಿಯಿಸಲುವಾಟ್ಸಪ್‌ ಸಂಖ್ಯೆ95133 22930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.