ADVERTISEMENT

ಮರ ಪಟ್ಟಾ ಯೋಜನೆ ವೈಫಲ್ಯಕ್ಕೆ ಜಾಗೃತಿಯ ಕೊರತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:06 IST
Last Updated 1 ಜೂನ್ 2019, 20:06 IST

ಬಾಗಲಕೋಟೆ: ‘ನೆರಳಿನ ಕಾರಣಕ್ಕೆ ಬೆಳೆ ಹಾಳಾಗುತ್ತದೆ ಎಂದು ನಂಬಿರುವ ನಮ್ಮ ಮಂದಿ, ಜಮೀನಿನಲ್ಲಿ ತಾನಾಗಿಯೇ ಬೆಳೆದು ನಿಂತ ಮರವನ್ನೇ ಕಡಿದುರುಳಿಸುತ್ತಾರೆ. ಇನ್ನು, ಇಲಾಖೆಯ ಮರಪಟ್ಟಾ ಯೋಜನೆಗೆ ಆಸಕ್ತಿ ತೋರುವರೇ’ ಎಂದು ಜಿಲ್ಲೆಯ ಅರಣ್ಯಾಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಬಯಲು ಸೀಮೆಯಲ್ಲಿ ಮರ ಪಟ್ಟಾ ಯೋಜನೆ ವೈಫಲ್ಯದ ಬಗ್ಗೆ ಕೇಳಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು. ಅವರ ಮಾತಿನಲ್ಲಿ ಹುರುಳಿಲ್ಲದೇ ಇರಲಿಲ್ಲ. ತಕ್ಷಣದ ಪ್ರತಿಫಲ ಬಯಸುವವರಿಗೆ ಸುದೀರ್ಘ ಕಾಲ ಕಾದು, ಫಲ ಪಡೆಯಬೇಕಾದ ಮರಪಟ್ಟಾ ರುಚಿಸಿಲ್ಲ. ಜೊತೆಗೆ ಗಿಡ ನೆಡುವುದು, ಮರ ಬೆಳೆಸುವುದು, ಪರಿಸರ ಸಂರಕ್ಷಣೆ ಇದೆಲ್ಲಾ ಇಲ್ಲಿನ ಜನರ ಕೊನೆಯ ಆದ್ಯತೆ. ಅವರ ನಿರಾಸಕ್ತಿ ಫಲವಾಗಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ.

‘ಅನುಷ್ಠಾನಕ್ಕೆ ಮುನ್ನ ಯೋಜನೆಯ ಅಗತ್ಯತೆ, ಪರಿಸರ ರಕ್ಷಣೆಯಲ್ಲಿ ಸಹಭಾಗಿತ್ವ, ಮರಪಟ್ಟಾದಿಂದ ದೀರ್ಘ ಕಾಲದ ಲಾಭಗಳ ಬಗ್ಗೆ ನಮ್ಮವರೂ (ಅರಣ್ಯ ಇಲಾಖೆ) ಜನರಲ್ಲಿ ಜಾಗೃತಿ ಮೂಡಿಸಲಿಲ್ಲ. ಈಗಲೂ ಹೆಚ್ಚಿನವರಿಗೆ ಆ ಬಗ್ಗೆ ಗೊತ್ತೇ ಇಲ್ಲ. ಇದು ನಮ್ಮಿಂದ ಆಗಿರುವ ವೈಫಲ್ಯ’ ಎಂದೂ ಅಧಿಕಾರಿ ಒಪ್ಪಿಕೊಳ್ಳುತ್ತಾರೆ.

ADVERTISEMENT

ಮಿಶ್ರಫಲ: ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆಯಡಿ 2002ರಿಂದ ಗ್ರಾಮ ಅರಣ್ಯ ಸಮಿತಿ ರಚಿಸುವ ಪರಿಪಾಟ ಆರಂಭವಾಯಿತು. ಮುಂದಿನ 10 ವರ್ಷಗಳ ಕಾಲ (2012ರವರೆಗೆ) ಸಮಿತಿಗಳ ನಿರ್ವಹಣೆಗೆ ಅನುದಾನ, ಸ್ವ–ಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ಸಾಲ, ಸಹಾಯಧನವನ್ನು ಕೂಡ ಅರಣ್ಯ ಇಲಾಖೆಯಿಂದ ಕಲ್ಪಿಸಲಾಗಿತ್ತು. ಆಗ ಅತ್ಯಂತ ಚುರುಕಿನಿಂದ ಕಾರ್ಯನಿರ್ವಹಿಸಿದ್ದ ಸಮಿತಿಗಳು, ಮುಂದೆ ಆರ್ಥಿಕ ನೆರವು ನಿಲ್ಲುತ್ತಿದ್ದಂತೆಯೇ ಉತ್ಸಾಹ ಕಳೆದುಕೊಂಡವು. ಅದಷ್ಟೇ ಅಲ್ಲ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ನೇಮಕದಲ್ಲಿ ಸ್ಥಳೀಯ ರಾಜಕೀಯ ಮುಖಂಡರು ಮೂಗು ತೂರಿಸಿದ್ದು ಅವುಗಳ ಅಸ್ತಿತ್ವಕ್ಕೆ ಮುಳುವಾಯಿತು.

ಯಶೋಗಾಥೆಗೆ ಹೀಗೊಂದು ನಿದರ್ಶನ..
ಜಿಲ್ಲೆಯಲ್ಲಿ ಗುಡ್ಡಗಾಡು, ಕುರುಚಲು ಕಾಡುಗಳನ್ನು ಅವಲಂಬಿಸಿದ್ದ ಊರು, ತಾಂಡಾಗಳನ್ನು ಗುರುತಿಸಿ ಅಲ್ಲಿ ಮರ ಕಡಿದು ಸಾಗಿಸುವವರು, ಬೇಟೆ ಆಡುವಲ್ಲಿ ಮೊದಲಿನಿಂದಲೂ ಸಕ್ರಿಯವಾಗಿದ್ದವರನ್ನೇ ಕರೆತಂದು ಗ್ರಾಮ ಅರಣ್ಯ ಸಮಿತಿಗೆ ನೇಮಿಸಲಾಯಿತು. ಇದು ಉತ್ತಮ ಫಲ ನೀಡಿತ್ತು. ಹಾಳು ಮಾಡುವವರೇ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಅರಣ್ಯ ಇಲಾಖೆ ನಿರಾಳವಾಗಿತ್ತು. ಅದರಿಂದ ಬೀಳಗಿ ತಾಲ್ಲೂಕಿನ ಗುಳಬಾಳ, ಸುನಗ, ಕುಂದರಗಿ, ಬಾಗಲಕೋಟೆ ತಾಲ್ಲೂಕಿನ ಶಿರೂರು, ದೇವನಾಳ ಸುತ್ತಲಿನ ಕುರುಚಲು ಅರಣ್ಯ ಪ್ರದೇಶ ಕೆಲವೇ ವರ್ಷಗಳಲ್ಲಿ ಮೈದುಂಬಿಕೊಂಡಿತು. ಮುಂದೆ ಇದೇ ಪ್ರದೇಶದ ವ್ಯಾಪ್ತಿಯಲ್ಲಿ ಅಪರೂಪದ ಚಿಂಕಾರ ರಕ್ಷಿತಾರಣ್ಯ ಆರಂಭವಾಗಿದ್ದು ವಿಶೇಷ. ಸರ್ಕಾರದ ನೆರವು ನಿಂತರೂ ಸ್ಥಳೀಯರ ಆಸಕ್ತಿಯಿಂದಾಗಿ ಈಗಲೂ ಗ್ರಾಮ ಅರಣ್ಯ ಸಮಿತಿಗಳು ಸಕ್ರಿಯವಾಗಿವೆ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.