ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಭೂಮಿಯ ಅತಿಕ್ರಮಣ ತೆರವಿಗೆ ಹಲವು ದಶಕಗಳ ನಂತರ ಮುಂದಾಗಿರುವ ಅರಣ್ಯ ಇಲಾಖೆಯು ಪ್ರಮುಖ ಧಾರ್ಮಿಕ ಸಂಸ್ಥೆಗಳು, ಉದ್ಯಮಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಒತ್ತುವರಿ ತೆರವು ನೋಟಿಸ್ ಅಸ್ತ್ರ ಪ್ರಯೋಗಿಸಿದೆ. ಈ ಕ್ರಮವು ಮಳೆಗಾಲದ ತಣ್ಣನೆಯ ವಾತಾವರಣದಲ್ಲೂ ಒತ್ತುವರಿದಾರರು ಹಾಗೂ ಆಡಳಿತವರ್ಗದಲ್ಲೂ ಬಿಸಿಯ ವಾತಾವರಣವನ್ನು ಸೃಷ್ಟಿಸಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 34 (ಎ) ಉಲ್ಲಂಘನೆ ಮಾಡಿದ ಆರೋಪದ ಮೇಲೆ ಯಳಂದೂರು ವನ್ಯಜೀವಿ ವಿಭಾಗದ ಅಧಿಕಾರಿಗಳು ಒತ್ತುವರಿ ತೆರವು ನೋಟಿಸ್ ನೀಡಿದ್ದು, ಕೆಲವೆಡೆ ಒತ್ತುವರಿ ತೆರವು ಕಾರ್ಯಾಚರಣೆಯೂ ಆರಂಭವಾಗಿದೆ. ಇದರ ಬೆನ್ನಲ್ಲೇ ಹುಲಿಗಳ ಆವಾಸಸ್ಥಾನದೊಳಗೆ ನಿಯಮ ಬಾಹಿರವಾಗಿ ರೆಸಾರ್ಟ್, ಹೋಂ ಸ್ಟೇ ಸಹಿತ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರು ಕಾನೂನು ಕ್ರಮ ಎದುರಿಸುವ ಸನ್ನಿವೇಶ ನಿರ್ಮಾಣವಾಗಿದೆ.
ಬಿಆರ್‌ಟಿ ಮೀಸಲು ಅರಣ್ಯ ವ್ಯಾಪ್ತಿಗೊಳಪಡುವ ಸರ್ವೆ ನಂಬರ್ 2 ಹಾಗೂ 3ರಲ್ಲಿ ಇರುವ 35 ಎಕರೆ 6 ಗುಂಟೆ ಅರಣ್ಯ ಭೂಮಿಯ ಪೈಕಿ 13 ಎಕರೆಗೂ ಹೆಚ್ಚು ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಸುತ್ತೂರು ಮಠ, ರಾಮಕೃಷ್ಣ ಆಶ್ರಮ ಮತ್ತು ಉದ್ಯಮಿಗಳಾದ ವೆಂಕಟಸತ್ಯ ಸುಬ್ರಹ್ಮಣ್ಯ ಗುಪ್ತ ಹಾಗೂ ಎಂ.ಪಿ.ಶ್ಯಾಮ್, ಡಿ.ವಿ.ಆರ್ಮ್‌ಸ್ಟ್ರಾಂಗ್, ಆರ್.ವಿಜಯಲಕ್ಷ್ಮಿ, ತುಳಸಮ್ಮ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ.
ಬಿಆರ್‌ಟಿ ಅರಣ್ಯದೊಳಗೆ ಅರಣ್ಯ ಭೂಮಿ ಒತ್ತುವರಿ, ಅನರ್ಹರಿಗೆ ವಿವಿಧ ಯೋಜನೆ ಅಡಿ ಕಂದಾಯ ಭೂಮಿ ಹಂಚಿಕೆ, ನಿಯಮಬಾಹಿರವಾಗಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಬಿಳಿಗಿರಿರಂಗನ ಬೆಟ್ಟದ ಸ್ಥಳೀಯರು ನೀಡಿದ ದೂರಿನ ಮೇಲೆ, ಜಂಟಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ 2018ರ ಮಾರ್ಚ್ 8ರಂದು, ಅಂದರೆ ಎಂಟು ವರ್ಷಗಳ ಹಿಂದೆ ಅಂದಿನ ಉಪ ಲೋಕಾಯುಕ್ತ ಸುಭಾಶ್ ಬಿ.ಅಡಿ ನೀಡಿದ್ದ ಆದೇಶದಂತೆ ಜಂಟಿ ಸರ್ವೆ ನಡೆಸಿ ಒತ್ತುವರಿಯಾದ ಭೂಮಿಯನ್ನು ಗುರುತಿಸಿರುವ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ನಡೆಸುತ್ತಿದೆ.
‘ಬಿಆರ್‌ಟಿ ಅರಣ್ಯದೊಳಗೆ ಅಕ್ರಮ ಒತ್ತುವರಿ ತೆರವುಗೊಳಿಸಬೇಕು, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಅರಣ್ಯ ಭೂಮಿಯನ್ನು ಪತ್ತೆ ಹಚ್ಚಬೇಕು, ರೆಸಾರ್ಟ್‌ಗಳ ನಿರ್ಮಾಣಕ್ಕೆ ತಡೆ ಒಡ್ಡಬೇಕು’ ಎಂದು 2018 ಫೆ.27ರಂದು ಉಪ ಲೋಕಾಯುಕ್ತರು ಸೂಚನೆ ನೀಡಿದ್ದರು. ಈ ಕಾರಣದಿಂದ ಸರ್ವೆ ನಂಬರ್ 1, 2 ಹಾಗೂ 3ರಲ್ಲಿರುವ ಜಮೀನಿನ ಜಂಟಿ ಸರ್ವೆ 2021ರ ಅಕ್ಟೋಬರ್ 1ರಂದು ಹಾಗೂ ಸರ್ವೆ ನಂಬರ್ 4ರಲ್ಲಿರುವ ಭೂಮಿಯ ಸರ್ವೇ ಇದೇ ವರ್ಷದ 6 ತಿಂಗಳ ಹಿಂದೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದಿದೆ.
ಒತ್ತುವರಿ ಕಾರ್ಯಾಚರಣೆ ಚುರುಕು ಪಡೆಯುತ್ತಿದ್ದಂತೆ ಆರ್.ವಿಜಯಲಕ್ಷ್ಮಿ ಹಾಗೂ ಉದ್ಯಮಿ ವೆಂಕಟಸತ್ಯ ಸುಬ್ರಹ್ಮಣ್ಯ ಗುಪ್ತ ಹೈಕೋರ್ಟ್ ಮೊರೆ ಹೋಗಿದ್ದು ಎರಡೂ ಪ್ರಕರಣಗಳಿಗೆ ತಡೆಯಾಜ್ಞೆ ನೀಡಲಾಗಿದೆ. ಆಶ್ರಮ ಹಾಗೂ ಮಠದ ಪ್ರತಿನಿಧಿಗಳು ಅರಣ್ಯ ಇಲಾಖೆಯ ನೋಟಿಸ್ ಪ್ರಶ್ನಿಸಿದ್ದು, ಸರ್ವೆ ನಂಬರ್ 2 ಹಾಗೂ 3ರಲ್ಲಿ ಭೂಮಿ ಹೊಂದಿಲ್ಲ. ಬದಲಾಗಿ ಸರ್ವೆ ನಂಬರ್ 4ರಲ್ಲಿ ಕಾನೂನುಬದ್ಧ ಹಾಗೂ ಮಾಲೀಕತ್ವ ಸಾಬೀತುಪಡಿಸುವ ದಾಖಲೆಗಳು ಇವೆ ಎಂದು ಉತ್ತರ ನೀಡಿವೆ. ಎರಡು ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲಾಗಿದ್ದು ಉಳಿದ ನಾಲ್ಕು ಪ್ರಕರಣಗಳಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
1942ರಲ್ಲಿ ದೇವಸ್ಥಾನದ ಉದ್ದೇಶಗಳಿಗೆ ಬಳಕೆ ಮಾಡಲು 130 ಎಕರೆ ಭೂಮಿಯನ್ನು ಮೀಸಲು ಅರಣ್ಯ ವ್ಯಾಪ್ತಿಯಿಂದ ಕೈಬಿಡಲಾಯಿತು. ಬಳಿಕ, 1962ರಲ್ಲಿ 560 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಿ ಬುಡಕಟ್ಟು ಸಮುದಾಯಗಳ ಜೀವನೋಪಾಯಕ್ಕಾಗಿ ಇನಾಂ, ದರ್ಖಾಸ್ತು, ಅರಣ್ಯ ಹಕ್ಕು ಕಾಯ್ದೆಗಳಡಿ ಸ್ಥಳೀಯ ಬುಡಕಟ್ಟು ಜನರಿಗೆ ಹಂಚಿಕೆ ಮಾಡಲಾಗಿದೆ.
ಆದರೆ, ಕಂದಾಯ ಇಲಾಖೆಗೆ ಅರಣ್ಯಭೂಮಿ ಹಸ್ತಾಂತರವಾಗಿ 6 ದಶಕಗಳು ಕಳೆದರೂ ಜಮೀನಿನ ಹದ್ದುಬಸ್ತು ಗುರುತಿಸಿ ಪೋಡು ಮಾಡಿಲ್ಲ. ಪರಿಣಾಮ ನೆಲದ ಮೂಲನಿವಾಸಿಗಳಾದ ಆದಿವಾಸಿಗಳು ಸಾಲ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ‘ಬಂಡವಾಳ’ ಮಾಡಿಕೊಂಡಿರುವ ಪ್ರಭಾವಿಗಳು ಸರ್ವೆ ನಂಬರ್ 4ರಲ್ಲಿ ಹಂಚಿಕೆಯಾಗಿರುವ ಭೂಮಿಗಳಲ್ಲಿ ನಿಯಮ ಮೀರಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಭೂಪರಿವರ್ತನೆ ಆಗದೆ ರೆಸಾರ್ಟ್, ಹೋಂಸ್ಟೇ, ವಾಸದ ಮನೆ, ತೋಟದ ಮನೆಗಳು ಇಲ್ಲಿ ನಿರ್ಮಾಣವಾಗಿದೆ. ಈ ವಾಣಿಜ್ಯ ಚಟುವಟಿಕೆಗಳಿಂದಲೇ ಹುಲಿಗಳ ಆವಾಸಸ್ಥಾನ ಕ್ಷೀಣಿಸುತ್ತಿದೆ ಎಂದು ದೂರುತ್ತಾರೆ ಪರಿಸರವಾದಿಗಳು.
ಸರ್ವೆ ನಂಬರ್ 4ರಲ್ಲಿ ಅರಣ್ಯ ಇಲಾಖೆ ಹಸ್ತಾಂತರ ಮಾಡಿದ್ದು 565 ಎಕರೆ. ಆದರೆ, ಕಂದಾಯ ಇಲಾಖೆ ಹಂಚಿಕೆ ಮಾಡಿರುವುದು ಬರೋಬ್ಬರಿ 700 ಎಕರೆಗೂ ಹೆಚ್ಚು ಭೂಮಿ. 140 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಯಾರಿಗೆ ಹಂಚಿಕೆ ಮಾಡಲಾಗಿದೆ ಎಂಬುದು ಕಂದಾಯ ಹಾಗೂ ಅರಣ್ಯ ಇಲಾಖೆ 6 ತಿಂಗಳ ಹಿಂದೆ ನಡೆಸಿರುವ ಜಂಟಿ ಸರ್ವೆಯಿಂದ ಪತ್ತೆಯಾಗಿದೆ. ಈ ವರದಿಯ ಕಡತವು ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದು, ಜಿಲ್ಲಾಡಳಿತ ಜಂಟಿ ಸರ್ವೆಯ ವರದಿಯನ್ನು ಅಂಗೀಕರಿಸಿದರೆ ಒತ್ತುವರಿದಾರರಿಗೆ ಸಂಕಷ್ಟ ಎದುರಾಗಲಿದೆ. ಆದರೆ ವರದಿ ಅಂಗೀಕಾರ ಮಾಡದಂತೆ ರಾಜಕೀಯ ಮುಖಂಡರ ಹಾಗೂ ಪ್ರಭಾವಿಗಳ ಒತ್ತಡವಿದೆ. ಹೀಗಾಗಿಯೇ ಕಡತ ದೂಳು ಹಿಡಿಯುತ್ತಿದೆ ಎನ್ನುವ ಆಪಾದನೆ ಸಾರ್ವಜನಿಕ ವಲಯದಲ್ಲಿದೆ.
‘1962ರಲ್ಲಿ ಅರಣ್ಯ ಇಲಾಖೆ ನೀಡಿದ ಭೂಮಿಯ ಜೊತೆ ಹೆಚ್ಚುವರಿಯಾಗಿ 135 ಎಕರೆ ಭೂಮಿಯನ್ನು ಫಲಾನುಭವಿಗಳಿಗೆ ನೀಡಿ ಎಡವಟ್ಟು ಮಾಡಿರುವ ಕಂದಾಯ ಇಲಾಖೆಯು, ಕಂದಾಯ ಇಲಾಖೆಯ ಮೂಲಕವೇ ಭೂಮಿ ಪಡೆದ ಫಲಾನುಭವಿಗಳ ಜೊತೆ ಚೆಲ್ಲಾಟವಾಡುತ್ತಿದೆ. ಅರಣ್ಯ ಒತ್ತುವರಿಯಾಗಿದ್ದರೆ ಭೂಮಿಯನ್ನು ವಶಪಡಿಸಿಕೊಳ್ಳಲಿ. ಆದರೆ ಕಂದಾಯ ಇಲಾಖೆ ಮಾಡಿದ ತಪ್ಪಿಗೆ ಯಾರು ಹೊಣೆಯಾಗುತ್ತಾರೆ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ಮುಖಂಡರಾದ ಪರಿಸರಪರ ಹೋರಾಟಗಾರ ಜಿ.ಮಲ್ಲೇಶಪ್ಪ.
ಜಂಟಿ ಸರ್ವೆಗೂ ಮುನ್ನ ಸಂಬಂಧಪಟ್ಟ ಭೂಮಾಲೀಕರಿಗೆ ನೋಟಿಸ್ ನೀಡಬೇಕು, ಸರ್ವೆ ಸಮಯದಲ್ಲಿ ಹಾಜರಿರಲು ಅವಕಾಶ ಕಲ್ಪಿಸಬೇಕು ಎಂಬ ನಿಯಮಗಳಿವೆ. ಆದರೆ ಬಹುತೇಕರಿಗೆ ಜಂಟಿ ಸರ್ವೆ ನಡೆದಿರುವುದೇ ತಿಳಿದಿಲ್ಲ. ನೋಟಿಸ್ ನೀಡದೆ ಅರಣ್ಯ ಮತ್ತು ಕಂದಾಯ ಅಧಿಕಾರಿಗಳು ಸರ್ವೆ ಮುಗಿಸಿಕೊಂಡು ಹೋಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಸರ್ವೆಗೂ ಮುನ್ನ ತಮಗೆ ನೋಟಿಸ್ ನೀಡಿಲ್ಲ ಎಂದು ಸುತ್ತೂರು ಮಠದವರು ಸಹ ಪ್ರತಿಕ್ರಿಯಿಸಿದ್ದಾರೆ.
ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶವು ಪೂರ್ವ ಹಾಗೂ ಪಶ್ಚಿಮ ಘಟ್ಟ ಸೇರುವ ಸ್ಥಳದಲ್ಲಿದೆ. ತಮಿಳುನಾಡಿನ ಸತ್ಯಮಂಗಲ, ನೆರೆಯ ಮಲೆ ಮಹದೇಶ್ವರ ವನ್ಯಧಾಮದೊಂದಿಗೆ ಬೆಸೆದುಕೊಂಡಿದ್ದು ಹುಲಿಗಳ ಪ್ರಮುಖ ಆವಾಸಸ್ಥಾನವಾಗಿ ಗುರುತಿಸಿಕೊಂಡಿದೆ. ದುರದೃಷ್ಟವಶಾತ್ ಅರಣ್ಯ ಒತ್ತುವರಿಯಿಂದ ಹುಲಿಗಳ ಆವಾಸಸ್ಥಾನವನ್ನೇ ಬಲವಂತವಾಗಿ ಕಸಿದುಕೊಳ್ಳಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿದ್ದು ಮುಂದೊಂದು ದಿನ ವ್ಯಾಘ್ರಗಳ ಸಂತತಿಯೇ ನಾಶವಾಗುವ ಆತಂಕ ಎದುರಾಗಲಿದೆ.
‘ಬಿಆರ್‌ಟಿಯ ಸರ್ವೆ ನಂಬರ್ 4ರಲ್ಲಿರುವ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿರುವ ದೂರುಗಳಿವೆ. ಉದ್ಯಮಿಗಳು, ರಾಜಕಾರಣಿಗಳು, ಧನಿಕರು ರೆಸಾರ್ಟ್, ಹೋಂಸ್ಟೇ, ವಸತಿಗೃಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಹುಲಿಗಳ ಸಹಿತ ಇತರೆ ಪ್ರಾಣಿಗಳ ಆವಾಸಕ್ಕೆ ಧಕ್ಕೆಯಾಗುತ್ತಿದೆ. ಅನಧಿಕೃತ ವಾಣಿಜ್ಯ ಚಟುವಟಿಕೆ ನಿಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ ಆದೇಶ ನೀಡಿ ಎರಡು ವರ್ಷವೇ ಕಳೆದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿಲ್ಲ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರಾದ ಗಿರಿಧರ ಕುಲಕರ್ಣಿ.
‘ಅರಣ್ಯದೊಳಗೆ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನೆಪದಲ್ಲಿ ತಲೆಮಾರುಗಳಿಂದಲೂ ಅರಣ್ಯದೊಳಗೆ ನೆಲೆಸಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತದೆ’ ಎಂಬ ವದಂತಿ ಸೃಷ್ಟಿಸಲಾಗುತ್ತಿದೆ. ಆದಿವಾಸಿಗಳು ಅರಣ್ಯಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಭೂಮಿಯ ಮಾಲೀಕತ್ವದ ಹಕ್ಕುಪತ್ರಗಳನ್ನು ಪಡೆಯಬಹುದು. ಜಂಟಿ ಸರ್ವೆಯ ವರದಿ ಅನುಷ್ಠಾನದ ಬಳಿಕ ಹಿಂದೆ ಕಂದಾಯ ಇಲಾಖೆಯಿಂದ ಮಂಜೂರಾದ ಭೂಮಿಗೆ ದಾಖಲಾತಿಗಳನ್ನು ಪಡೆಯಬಹುದು ಎನ್ನುತ್ತಾರೆ ಯಳಂದೂರು ವನ್ಯಜೀವಿ ವಲಯದ ಎಸಿಎಫ್ ಅಕ್ಷಯ್ ಪ್ರಕಾಶ್‌ಕರ್.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ರೆಸಾರ್ಟ್, ಹೋಂಸ್ಟೇ, ಹೋಟೆಲ್‌ಗಳು ತಲೆಎತ್ತಿರುವ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪರಿಸರವಾದಿ ಗಿರಿಧರ ಕುಲಕರ್ಣಿ ಸಲ್ಲಿಸಿದ ದೂರಿನನ್ವಯ 2022ರ ನ.28ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಹಾಯಕ ಇನ್‌ಸ್ಪೆಕ್ಟರ್ ಜನರಲ್ ಹರಿಣಿ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಒತ್ತುವರಿ ಪತ್ತೆ ಹಚ್ಚಿ ಸಮಗ್ರ ವರದಿ ಸಲ್ಲಿಸಿದ್ದರು.
‘ಸಂರಕ್ಷಿತ ಅರಣ್ಯದೊಳಗಿರುವ ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶಗಳಿಗೆ ಭೂಮಿ ಪರಿವರ್ತನೆ ಮಾಡಿಕೊಳ್ಳದಿರುವುದು 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಸಂರಕ್ಷಿತ ಅರಣ್ಯ ಭೂಮಿಯ ಮಾದರಿಯನ್ನು ಮುಂದಿನ 50 ವರ್ಷಗಳ ಕಾಲ ಬದಲಾಯಿಸುವಂತಿಲ್ಲ ಎಂಬ 2002ರ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯೂ ಆಗಲಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ರೀತಿಯ ಆದೇಶವನ್ನು ಅರಣ್ಯ ಇಲಾಖೆಯ ವಿಚಕ್ಷಣಾ ದಳದ ಮುಖ್ಯಸ್ಥರು ಸಹ 2023ರಲ್ಲಿ ನೀಡಿ ಅಕ್ರಮ ಚಟುವಟಿಕೆ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
‘ಪರಿಸರ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಬಿಆರ್‌ಟಿಯ ಪರಿಸರ ಸೂಕ್ಷ್ಮ ವಲಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಗಿರಿದರ್ಶಿನಿ ರೆಸಿಡೆನ್ಸಿ, ಡಾ.ಸುದರ್ಶನ್ ಒಡೆತನದ ಗೋರುಕನ ರೆಸಾರ್ಟ್, ಚಂಪಕಾರಣ್ಯ ಹೋಂಸ್ಟೇ, ಆಕಾಶ್ ಲಾಡ್ಜ್, ರಜತಾದ್ರಿ ಹಿಲ್ ವಿಲಾ, ಶ್ವೇತಾದ್ರಿ ಹೋಂಸ್ಟೇ, ರಾಜಕುಮಾರ್ ಲಾಡ್ಜ್, ಸೋಮಣ್ಣ ರೂಮ್ಸ್ ಅಂಡ್ ಲಾಡ್ಜಸ್ ಕಾರ್ಯ ನಿರ್ವಹಿಸುತ್ತಿರುವುದನ್ನು ದಾಖಲೆಗಳ ಸಮೇತ ಪತ್ತೆಹಚ್ಚಿ ಕ್ರಮಕ್ಕೆ ಸೂಚಿಸಲಾಗಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ಕಾರ ತೆರವುಗೊಳಿಸಲು ಮುಂದಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪರಿಸರವಾದಿಗಳು.
ಹೋಟೆಲ್, ರೆಸಾರ್ಟ್, ಹೋಂಸ್ಟೇಗಳಿಂದ ಬಿಡುಗಡೆಯಾಗುವ ತ್ಯಾಜ್ಯ ಅರಣ್ಯದ ಒಡಲು ಸೇರುತ್ತಿದ್ದು ನೀರಿನ ಮೂಲಗಳು ಕಲುಷಿತಗೊಳ್ಳುತ್ತಿದ್ದು ವನ್ಯಜೀವಿಗಳಿಗೂ ಕಂಟಕ ಎದುರಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟ ಸೇರುವ ಪ್ರದೇಶವು ಕರ್ನಾಟಕದ ಊಟಿ ಎಂದೇ ಹೆಸರುವಾಸಿಯಾಗಿದೆ. ರಂಗನಾಥಸ್ವಾಮಿ ದೇವಾಲಯದ ಜೊತೆಗೆ ಮಳೆ ಮತ್ತು ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣದಿಂದ ಭೂಮಿಗೆ ಬೆಲೆ ಹೆಚ್ಚಿ ಅನಿಯಂತ್ರಿತ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ. ಒತ್ತುವರಿ ತೆರವು ಕಾರ್ಯಾಚರಣೆಯು ಹಿತಕರ ವಾತಾವರಣದ ನಡುವೆ ಬಿಸಿಯನ್ನು ಸೃಷ್ಟಿಸಿದೆ.
ಬಿಆರ್‌ಟಿಯ ಸರ್ವೇ ನಂಬರ್ 4ರಲ್ಲಿ ಅರಣ್ಯ–ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಜಂಟಿ ಸರ್ವೇ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಕಾಡಿನೊಳಗಿರುವ ಆದಿವಾಸಿಗಳಿಗೆ ತೊಂದರೆಯಾಗದಂತೆ ಅನುಷ್ಠಾನಗೊಳಿಸಲಾಗುವುದು.–ಸಿ.ಟಿ.ಶಿಲ್ಪಾನಾಗ್ ಜಿಲ್ಲಾಧಿಕಾರಿ
ಬಿಆರ್‌ಟಿ ವ್ಯಾಪ್ತಿಯಲ್ಲಿ ಬಿರ್ಲಾ ಟಿವಿಎಸ್ ಅತ್ತೀಕಾನ್ ಕಂಪೆನಿಗಳು 1600 ಎಕರೆ ಕಾಫಿ ಎಸ್ಟೇಟ್ ಹೊಂದಿವೆ. ಈ ತೋಟಗಳು ಅರಣ್ಯ ಇಲಾಖೆಯ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಪಡೆದಿವೆ. ಈ ಭಾಗದಲ್ಲಿ ಕಾಫಿ ಬೆಳೆಗೆ ಕಾಣಿಸಿಕೊಳ್ಳುವ ರೋಗ ಹತೋಟಿಗೆ ಯಥೇಚ್ಛವಾಗಿ ರಾಂಟಾಕ್ ಕ್ರಿಮಿನಾಶಕ ಸಿಂಪರಿಸಲಾಗುತ್ತಿದೆ. ಗಾಳಿ ಹಾಗೂ ನೀರಿನೊಂದಿಗೆ ಬೆರೆಯುವ ಕ್ರಿಮಿನಾಶಕ ಅರಣ್ಯದೊಳಗಿರುವ ಕೆರೆ ಕಟ್ಟೆ ನದಿ ಹಾಗೂ ಜಲಾಶಯಗಳನ್ನು ಸೇರುತ್ತಿದ್ದು ಪ್ರಾಣಿಗಳ ಜೀವಕ್ಕೆ ಕಂಟಕ ಎದುರಾಗಿದೆ. ಬ್ರಿಟಿಷ್ ಆಡಳಿತದಲ್ಲಿ ಪಡೆದ ದೀರ್ಘಾವಧಿ ಗುತ್ತಿಗೆ ಅವಧಿಯನ್ನು ಕರ್ನಾಟಕ ಸರ್ಕಾರ ಕಡಿಮೆ ಮಾಡಿದೆ. ಇದನ್ನು ಪ್ರಶ್ನಿಸಿ ಕಾಫಿ ತೋಟದ ಮಾಲೀಕರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ದಶಕಗಳಿಂದಲೂ ಈ ವ್ಯಾಜ್ಯ ನಡೆಯುತ್ತಿದೆ. ಈ ದೂರಿನ ಸಂಬಂಧ ಪ್ರತಿಕ್ರಿಯಿಸಿ ಬಿಆರ್‌ಟಿ ಡಿಸಿಎಫ್ ಶ್ರೀಪತಿ ‘ಕಾಫಿ ಎಸ್ಟೇಟ್‌ಗಳಲ್ಲಿ ಸಿಂಪಡಿಸುವ ಕ್ರಿಮಿನಾಶಕ ಅರಣ್ಯದೊಳಗಿರುವ ಜಲಮೂಲಗಳಿಗೆ ಸೇರುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಮೀಸಲು ಅರಣ್ಯದೊಳಗಿರುವ ಖಾಸಗಿ ಎಸ್ಟೇಟ್‌ಗಳ ಜಾಗವನ್ನು ಮತ್ತೆ ಅರಣ್ಯ ಇಲಾಖೆಯ ವಶಕ್ಕೆ ಪಡೆಯಬೇಕಾಗಿದೆ. ಈ ವಿಚಾರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿದ್ದು ಇತ್ಯರ್ಥವಾಗಬೇಕಿದೆ ಎಂದು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಹೊಂಡರಬಾಳುವಿನಲ್ಲಿರುವ ಬಿಆರ್‌ಟಿ ಚೆಕ್‌ಪೋಸ್ಟ್
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಸಂಚಾರ
ಸಿ.ಮಾದೇಗೌಡ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ
ಜಿಲ್ಲಾಡಳಿತಕ್ಕೆ ಸಲ್ಲಿಕೆ: ಸರ್ವೇ ನಂಬರ್ 4ರಲ್ಲಿ ಜಂಟಿ ಸರ್ವೇ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. 1962ರಲ್ಲಿ ಅರಣ್ಯ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದ್ದ 565 ಎಕರೆಗಿಂತಲೂ ಹೆಚ್ಚಿನ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಿದೆ. ಕಂದಾಯ ಇಲಾಖೆಯ ಹಂತದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ. ಒತ್ತುವರಿ ಭೂಮಿ ಗುರುತಿಸಿಕೊಟ್ಟರೆ ತೆರವುಗೊಳಿಸಲಾಗುವುದು. ಅರಣ್ಯವಾಸಿಗಳಿಗೆ ಅರಣ್ಯ ಹಕ್ಕುಕಾಯ್ದೆಯಡಿ (ಎಫ್‌ಆರ್‌ಎ) ಭೂಮಿ ಹಂಚಿಕೆ ಮಾಡಲಾಗುವುದು ಅರಣ್ಯವಾಸಿಗಳಲ್ಲದವರು ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಲಾಗುವುದು.–ಶ್ರೀಪತಿ ಬಿಆರ್‌ಟಿ ಡಿಸಿಎಫ್
ಪರಿಕಲ್ಪನೆ ಮತ್ತು ಪೂರಕ ಮಾಹಿತಿ: ಯತೀಶ್ ಕುಮಾರ್ ಜಿ.ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.