ADVERTISEMENT

ಒಳನೋಟ: ನೆಡುತೋಪಿನಿಂದ ವನ ವಿಸ್ತರಣೆ?

ದಶಕದಲ್ಲಿ ಅರಣ್ಯ ಏರಿಕೆ –ವಿಜಯ‍ಪುರದಲ್ಲಿ ಹೆಚ್ಚಿದ ಹಸಿರು

ಯತೀಶ್ ಕುಮಾರ್ ಜಿ.ಡಿ
Published 28 ಫೆಬ್ರುವರಿ 2026, 23:30 IST
Last Updated 28 ಫೆಬ್ರುವರಿ 2026, 23:30 IST
<div class="paragraphs"><p>ವಿಜಯಪುರ ಜಿಲ್ಲೆಯ ಮಮದಾಪುರದಲ್ಲಿ ತಲೆ ಎತ್ತಿರುವ ಅರಣ್ಯ ಪ್ರದೇಶ</p></div>

ವಿಜಯಪುರ ಜಿಲ್ಲೆಯ ಮಮದಾಪುರದಲ್ಲಿ ತಲೆ ಎತ್ತಿರುವ ಅರಣ್ಯ ಪ್ರದೇಶ

   

 –ಚಿತ್ರ: ಸಂತೋಷ ಆಜೂರ, ಆರ್‌ಎಫ್‌ಒ 

ಬೆಂಗಳೂರು: ಕರ್ನಾಟಕದಲ್ಲಿ ಕಳೆದೊಂದು ದಶಕದಲ್ಲಿ ದಟ್ಟ ಅರಣ್ಯದ ಪ್ರಮಾಣ ಗಣನೀಯವಾಗಿ ಜಾಸ್ತಿ ಆಗಿದೆ ಎಂದು ಕೇಂದ್ರ ಸರ್ಕಾರದ ಸಾಂಖ್ಯಿಕ ಸಚಿವಾಲಯದ ವರದಿ ಅಭಿಪ‍್ರಾಯಪಟ್ಟು ಅರಣ್ಯ ಇಲಾಖೆಯ ಬೆನ್ನುತಟ್ಟಿದೆ. ಆದರೆ, ನೆಡುತೋಪುಗಳಿಂದಾಗಿಯೇ ಅರಣ್ಯ ಪ್ರಮಾಣ ಹೆಚ್ಚಾಗಿದೆ. ಇದು ನೈಸರ್ಗಿಕ ಅರಣ್ಯವಲ್ಲ. ಜೀವವೈವಿಧ್ಯವಿಲ್ಲದ ಕೃತಕ ಅರಣ್ಯದಿಂದ ಈ ಹೆಗ್ಗಳಿಕೆ ಸಿಕ್ಕಿದೆ ಎಂದು ಪರಿಸರ ತಜ್ಞರು ಬೊಟ್ಟು ಮಾಡುತ್ತಾರೆ.

ADVERTISEMENT

ರಸ್ತೆ ವಿಸ್ತರಣೆ, ಜಲವಿದ್ಯುತ್‌ ಯೋಜನೆಗಳಂತಹ ಹಲವಾರು ಬಗೆಯ ಅಭಿವೃದ್ಧಿ ಯೋಜನೆಗಳಿಂದ ಪಶ್ಚಿಮ ಘಟ್ಟ ಹಾಗೂ ಸಹ್ಯಾದ್ರಿ ಶ್ರೇಣಿಗಳಲ್ಲಿ ಪ್ರತಿಕ್ಷಣವೂ ಅರಣ್ಯ ತೆಳುವಾಗುತ್ತಲೇ ಇದೆ. ಅರಣ್ಯೀಕರಣದ ಹೆಸರಿನಲ್ಲಿ ಬೆಳೆಸಲಾಗುವ ಅಕೇಶಿಯಾ, ನೀಲಗಿರಿಯಂತಹ ಮರಗಳು ಪರಿಸರಕ್ಕೆ ಹಾನಿಮಾಡುವ ಗುಣಗಳನ್ನು ಹೊಂದಿವೆ. ಈ ಮರಗಳ ಎಲೆಗಳು ಭೂಮಿಗೆ ಬಿದ್ದು ಈಗಿರುವ ಫಲವತ್ತತೆಯನ್ನು
ಹೀರಿಕೊಳ್ಳುತ್ತವೆ ಎಂದೂ ಅವರು ಬೆಳಕು ಚೆಲ್ಲುತ್ತಾರೆ.

ಸಾಂಖ್ಯಿಕ ಸಚಿವಾಲಯದ ವರದಿ ಪ್ರಕಾರ, ರಾಜ್ಯದಲ್ಲಿ 2010–11ರಲ್ಲಿ 1,777 ಚದರ ಕಿ.ಮೀ. ದಟ್ಟಾರಣ್ಯ ಇತ್ತು. 2021–22ರ ವೇಳೆಗೆ ಇದರ ಪ್ರಮಾಣ 4,537 ಚದರ ಕಿ.ಮೀ.ಗೆ ಏರಿಕೆ ಆಗಿದೆ. ಸಾಧಾರಣ ದಟ್ಟವಾದ ಅರಣ್ಯಗಳೂ ಹೆಚ್ಚಾಗಿವೆ. 2010–11ರಲ್ಲಿ 20,179 ಚದರ ಕಿ.ಮೀ ಇದ್ದ ಈ ಕಾಡು ಶೇ 4.8ರಷ್ಟು ಹೆಚ್ಚಳವಾಗಿ 2021–22ರಲ್ಲಿ 21,151 ಕಿ.ಮೀ. ಆಗಿದೆ. ಆದರೂ, ಒಟ್ಟಾರೆ ರಾಜ್ಯದ ಅರಣ್ಯ ಪ್ರದೇಶ ಸ್ಥಿರವಾಗಿಯೇ ಉಳಿದಿದೆ. ಕರ್ನಾಟಕದ ಭೂಪ್ರದೇಶದ ಶೇ 19.96 ಪ್ರತಿಶತದಲ್ಲಿ ಅರಣ್ಯ ಇದೆ. ಈ ಅವಧಿಯಲ್ಲಿ ಮೀಸಲು, ಸಂರಕ್ಷಿತ ಹಾಗೂ ವರ್ಗೀಕರಿಸದ ಕಾಡಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಈ ಸಂಖ್ಯೆಗಳು ಆಶಾವಾದಿ ಪ್ರವೃತ್ತಿಯನ್ನು ಸೂಚಿಸುತ್ತವೆ. ಈ ಅಂಕಿ ಅಂಶಗಳು ತಾಂತ್ರಿಕವಾಗಿ ಸರಿ ಇದ್ದರೂ ಸಹಜ ಅರಣ್ಯ ಹಾಗೂ ನೆಡುತೋಪುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫಲವಾಗಿವೆ ಎಂದು ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಹುಲಿ, ಆನೆ, ಚಿರತೆ, ಅನೇಕ ಪಕ್ಷಿ ಮತ್ತು ಕೀಟ ಜಾತಿಗಳಿಗೆ ನೈಸರ್ಗಿಕ ಕಾಡಿನ ಸಂಕೀರ್ಣ ಪರಿಸರವೇ ಅಗತ್ಯ.

ನೆಡುತೋಪುಗಳನ್ನು ಅರಣ್ಯವೆಂದು ಸಮೀಕರಿಸುವುದು ಅರಣ್ಯ ನಾಶವನ್ನು ಮುಚ್ಚಿಹಾಕುವ ಅಪಾಯಕಾರಿ ಪ್ರವೃತ್ತಿಗೆ ದಾರಿ ಮಾಡಿಕೊಡುತ್ತದೆ‘ ಎಂದು ಅವರು ಎಚ್ಚರಿಸಿದ್ದಾರೆ.

‘ಪಶ್ಚಿಮ ಘಟ್ಟದಲ್ಲಿ ನಾಲ್ಕು ನದಿಗಳು ಹುಟ್ಟಿ ಹರಿಯುವ ಪ್ರದೇಶಗಳಲ್ಲಿ 1978ರಿಂದ 2018ರ ನಡುವೆ ಆಗಿರುವ ಭೂ ಬಳಕೆ ಬದಲಾವಣೆ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ ಅಧ್ಯಯನ ನಡೆಸಿತ್ತು. ಪಶ್ಚಿಮ ಘಟ್ಟದ ದಟ್ಟ ಹಸಿರು ವರ್ಣದ ಕಾಡು ಶೇ 41ರಷ್ಟು ನಾಶವಾಗಿರುವುದನ್ನು ಹಾಗೂ ನಿರಂತರ ಕಾಡುಗಳು ಶೇ 60ರಷ್ಟು ಛಿದ್ರವಾಗಿರುವ ಬಗ್ಗೆ ಬೆಳಕು ಚೆಲ್ಲಿತ್ತು‘ ಎಂದು ವಿಜ್ಞಾನಿ ಟಿ.ವಿ.ರಾಮಚಂದ್ರ ವಿಶ್ಲೇಷಿಸುತ್ತಾರೆ.

‘ಈ ವರದಿಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಅಭಿವೃದ್ಧಿ ಚಟುವಟಿಕೆ ಹಾಗೂ ಮಾನವ ಚಟುವಟಿಕೆಗಳಿಂದಾಗಿ ಅರಣ್ಯ ಕವಚವು ಶೇ 74.19ರಿಂದ ಶೇ 48.04ಕ್ಕೆ ಕುಸಿದಿದೆ. ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣವು ಶೇ 56.07ರಿಂದ ಶೇ 24.85ಕ್ಕೆ ಇಳಿದಿದೆ. ಇದಕ್ಕೆ ಅಣೆಕಟ್ಟೆಗಳ ನಿರ್ಮಾಣ, ಸಾಗುವಾನಿ, ನೀಲಗಿರಿ, ಅಕೇಷಿಯಾದಂತಹ ಏಕಪ್ರಭೇದದ ಸಸ್ಯಗಳನ್ನು ಬೆಳೆಸುವುದು, ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವುದು ಪ್ರಮುಖ ಕಾರಣಗಳು. ಕಾಡನ್ನು ತೋಟಗಳನ್ನಾಗಿ ಮಾರ್ಪಾಡು ಮಾಡಿರುವುದು, ನಿರ್ಮಾಣ ಪ್ರದೇಶಗಳ ಹೆಚ್ಚಳ, ಅರಣ್ಯ ಆಧರಿತ ಕೈಗಾರಿಕೆಗಳ ಸ್ಥಾಪನೆಯೂ ಇದಕ್ಕೆ ಕಾರಣ‘ ಎಂದು ಅವರು ಬೆಳಕು ಚೆಲ್ಲುತ್ತಾರೆ.

‘ಅರಣ್ಯವನ್ನು ಛಿದ್ರಗೊಳಿಸುವಿಕೆಯಿಂದ ನೀರಿನ ಚಕ್ರದ ಮೇಲೂ ದುಷ್ಪರಿಣಾಮ ಉಂಟಾಗಿದೆ. ನಾಲ್ಕು ದಶಕಗಳಲ್ಲಿ 64,355 ಹೆಕ್ಟೇರ್‌ಗಳಷ್ಟು ಕಾಡನ್ನು ಕಾಗದ ತಯಾರಿ, ಜಲವಿದ್ಯುತ್‌, ವಾಣಿಜ್ಯ ಬೆಳೆ ಬೆಳೆಸಲು, ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಮುಂತಾದ ಅರಣ್ಯೇತರ ಚಟುವಟಿಕೆಗೆ ಬಳಸಲಾಗಿದೆ. ನಿರಂತರತೆ ಹೊಂದಿರುವ ಕಾಡುಗಳ ಪ್ರಮಾಣ ಶೇ 62.71ರಿಂದ (1970ರಲ್ಲಿ) ಶೇ 24.74ಕ್ಕೆ (2018ರಲ್ಲಿ) ಕುಸಿದಿದೆ. ತತ್ಪರಿಣಾಮವಾಗಿ ಸ್ಥಳೀಯ ಸಸ್ಯ ವರ್ಗಗಳ ನಡುವೆ ನಂಟು ಕಳೆದುಹೋಗಿ ಕಾಡು ಪ್ರಾಣಿಗಳು ಊರಿಗೆ ನುಗ್ಗುವ ಪ್ರಕರಣಗಳು ಹೆಚ್ಚಿವೆ‘ ಎಂದು ಅವರು ಹೇಳುತ್ತಾರೆ. 

ಪಶ್ಚಿಮ ಘಟ್ಟವನ್ನು ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿಯ ಪ್ರಮಾಣ ಎರಡು ವರ್ಷದಲ್ಲಿ 13 ಚದರ ಕಿ.ಮೀನಷ್ಟು ಹೆಚ್ಚಿದೆ ಎಂಬುದಾಗಿ ಭಾರತೀಯ ಅರಣ್ಯ ವರದಿ ಹೇಳಿದೆ.

2021ರಲ್ಲಿ ಉತ್ತರ ಕನ್ನಡದಲ್ಲಿ 8,130 ಚ.ಕಿ.ಮೀ ಅರಣ್ಯ ಪ್ರದೇಶ ಇತ್ತು. 2023ರ ವೇಳೆಗೆ ಅದು 8,143 ಚ.ಕಿ.ಮೀಗೆ ಹಿಗ್ಗಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ 8,29,693 ಹೆಕ್ಟೇರ್ ಅರಣ್ಯ ಭೂಮಿ ಇದೆ. ಜಿಲ್ಲೆಯ ಒಟ್ಟಾರೆ ಭೂಪ್ರದೇಶದ ಪೈಕಿ ಈ ಪ್ರಮಾಣ ಶೇ 80 ರಷ್ಟಿದೆ ಎನ್ನುತ್ತಾರೆ ಕೆನರಾ ಅರಣ್ಯ ವೃತ್ತದ ಸಿಸಿಎಫ್ ಟಿ.ಹೀರಾಲಾಲ್.

‘ಮಳೆಗಾಲದಲ್ಲಿ ಭೂಕುಸಿತ, ಒತ್ತುವರಿಯಿಂದ ಪ್ರತಿ ವರ್ಷ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವ ಸಾಧ್ಯತೆ ಇದೆ. ವರದಿಯಲ್ಲಿನ ಕೆಲವು ಅಂಶಗಳು ಉತ್ಪ್ರೇಕ್ಷೆಯಿಂದ ಕೂಡಿರುವ ಸಾಧ್ಯತೆ ಇರಬಹುದು. ಇಲ್ಲವೇ ನೆಡುತೋಪಿನಿಂದ ಹಸಿರು ಹೆಚ್ಚಾಗಿರಬಹುದು’ ಎಂಬುದು ಪರಿಸರವಾದಿಯೊಬ್ಬರ ಅಭಿಪ್ರಾಯ.ಗಿ ಭಾರತೀಯ ಅರಣ್ಯ ವರದಿ ಹೇಳಿದೆ.

ಇನ್ನೊಂದೆಡೆ, ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಶೇ 60ಕ್ಕೂ ಹೆಚ್ಚು ಭಾಗವು ಸಂಭವನೀಯ ಭೂಕುಸಿತದ ಪ್ರದೇಶವಾಗಿದ್ದು, ರಾಜ್ಯದ ಏಳು ಜಿಲ್ಲೆಗಳಲ್ಲಿ ಭೂಕುಸಿತ ಸಾಧ್ಯತೆಗಳು ಇವೆ. ಈ ಪೈಕಿ ಅತಿ ಹೆಚ್ಚು ಭೂಕುಸಿತ ಸಾಧ್ಯತೆ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದು ಧಾರವಾಡ ಐಐಟಿ ವರದಿ ಎಚ್ಚರಿಸಿದೆ.

ಉತ್ತರ ಕನ್ನಡದಲ್ಲಿ ವಿಶೇಷವಾಗಿ ಕಾಂಡ್ಲಾ ವನ ವೃದ್ಧಿಯಾಗುತ್ತಿದ್ದು, 8.96 ಚ.ಕಿ.ಮೀ ವ್ಯಾಪಿಸಿದೆ. 2021ರಲ್ಲಿ ಜಿಲ್ಲೆಯಲ್ಲಿ 8.75 ಚ.ಕಿ.ಮೀ ಪ್ರದೇಶದಲ್ಲಿ ಕಾಂಡ್ಲಾ ವನ ಹಬ್ಬಿತ್ತು.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಡಿ ಆರು ಅರಣ್ಯ ವಲಯಗಳು ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಒಂದು ಅರಣ್ಯ ವಲಯವಿದೆ. ಕಳೆದ ಹತ್ತು ವರ್ಷಗಳಿಗೆ ಹೋಲಿಸಿದಾಗ ಪ್ರಾದೇಶಿಕ ವಲಯಗಳಲ್ಲಿ ಅರಣ್ಯದ ಪ್ರಮಾಣ 1,200 ಹೆಕ್ಟೇರ್ ಪ್ರದೇಶದಲ್ಲಿ ವೃದ್ಧಿಸಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಪಕ್ಕದಲ್ಲಿ, ಸರ್ಕಾರಿ ಜಮೀನುಗಳಲ್ಲಿ ಒಟ್ಟು 40 ಸಾವಿರ ಸಸಿಗಳನ್ನು ನೆಡಲಾಗಿದೆ.

ವಿಜಯನಗರ ಜಿಲ್ಲೆಯಲ್ಲಿ 1.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ಇದೆ. ಜಿಲ್ಲೆಯಲ್ಲಿ ದಟ್ಟ ಅರಣ್ಯ ಪ್ರದೇಶ ತೀರಾ ಕಳವಳಕರ ರೀತಿಯಲ್ಲಿ ಕುಸಿದಿಲ್ಲ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ), ನಗರ ಹಸಿರೀಕರಣ, ರಸ್ತೆ ಬದಿ ಗಿಡ ನೆಡುವುದು, ನರೇಗಾ ಯೋಜನೆ ಅಡಿಯಲ್ಲಿ ಪಾಳು ಭೂಮಿ ಹಸಿರೀಕರಣ ಯೋಜನೆಗಳಂತಹ ಕ್ರಮಗಳಿಂದ ಜಿಲ್ಲೆಯ ಹಸಿರು ಹೊದಿಕೆ ಕಡಿಮೆಯಾಗಿಲ್ಲ. ಮೇಲಾಗಿ ಜಿಲ್ಲೆಯಲ್ಲಿ ಗಣಿಗಾರಿಕೆ ಅಷ್ಟಾಗಿ ನಡೆಯುತ್ತಿಲ್ಲ. ಇದೆಲ್ಲಾ ಕಾರಣಕ್ಕೆ ಜಿಲ್ಲೆಯಲ್ಲಿ ಅರಣ್ಯಪ್ರದೇಶ ಕುಸಿದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆ ಬಗ್ಗೆ ನಿರಂತರ ಜಾಗೃತಿ ಮೂಡಿಸುತ್ತಿರುವುದರಿಂದ ದಾವಣಗೆರೆ ಹಾಗೂ ಪಕ್ಕದ ಚಿತ್ರದುರ್ಗ ಜಿಲ್ಲೆಗಳಲ್ಲಿ ಅರಣ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಈ ಪ್ರಮಾಣ ಕುಸಿತದ ಹಾದಿ ಹಿಡಿದಿದೆ.

ಚಿತ್ರದುರ್ಗ ನಗರದಿಂದ 1 ಕಿ.ಮೀ. ಅಂತರದಲ್ಲಿರುವ ಜೋಗಿಮಟ್ಟಿ ಅರಣ್ಯ ಪ್ರದೇಶವನ್ನು 2015ರಲ್ಲಿ ‘ವನ್ಯಜೀವಿ ಧಾಮ’ ಎಂದು ಘೋಷಣೆ ಮಾಡಿದ ನಂತರ ಈ ಭಾಗದಲ್ಲಿ ಅರಣ್ಯದ ಪ್ರಮಾಣ ಹೆಚ್ಚಳವಾಗಿದೆ.

ಪಶ್ಚಿಮ ಘಟ್ಟದ ಭದ್ರಾ ಅಭಯಾರಣ್ಯ, ಬನ್ನೇರುಘಟ್ಟ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲೇ ಬರುವ ಜೋಗಿಮಟ್ಟಿ ವನ್ಯಧಾಮ ಅಪರೂಪದ ಕುರುಚಲು ಕಾಡು ಎಂದು ಗುರುತಿಸಿಕೊಂಡಿದೆ. ಕರಡಿಗಳ ಅವಾಸಸ್ಥಾನವಾಗಿಯೂ ಪ್ರಸಿದ್ಧಿ ಪಡೆದಿದೆ. ವನ್ಯಜೀವಿ ಧಾಮ ಘೋಷಣೆಯ ನಂತರ ಸೀಳುನಾಯಿಗಳು ಕೂಡ ಪತ್ತೆಯಾಗಿವೆ. ವನ್ಯಜೀವಿ ಧಾಮ ಘೋಷಣೆಯ ನಂತರ ಜನ ಮತ್ತು ದನಕರುಗಳ ಓಡಾಟಕ್ಕೆ ನಿಯಂತ್ರಣ ಹೇರಲಾಗಿದ್ದು ಬೆಟ್ಟಗುಡ್ಡ ಪ್ರದೇಶದಲ್ಲಿ ಹಸಿರು ಹೆಚ್ಚಾಗಿದೆ.

ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ರಸ್ತೆ ಬದಿಯಲ್ಲಿ ನೆಡುತೋಪು ಪೋಷಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಒಟ್ಟು 133 ಕಿ.ಮೀ ಉದ್ದದ ರಸ್ತೆ ಬದಿಗಳಲ್ಲಿ ನೆಡುತೋಪು ಬೆಳೆಸಲಾಗಿದೆ. 39.50– ಹೆಕ್ಟೇರ್‌ ಪ್ರದೇಶದಲ್ಲಿ ಬ್ಲಾಕ್ ನೆಡುತೋಪುಗಳನ್ನು ಬೆಳೆಸಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ 18.75 ಕಿ.ಮೀ ಉದ್ದಕ್ಕೆ ರಸ್ತೆ ಬದಿ ನೆಡುತೋಪು ಬೆಳೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 9 ಕಿ.ಮೀ ಉದ್ದಕ್ಕೆ ನೆಡುತೋಪನ್ನು ಬೆಳೆಸಲಾಗಿದೆ. ಒಟ್ಟಾರೆ ನೆಡುತೋಪು ಸಹ ಕಾಡು ಹೆಚ್ಚಳಕ್ಕೆ ಕಾರಣವಾಗಿದೆ.

‘ನೈಸರ್ಗಿಕ ಕಾಡಿನಿಂದ ವಿಸ್ತರಣೆಯಾಗಿಲ್ಲ’

ಕೇಂದ್ರ ಸರ್ಕಾರದ ಸಾಂಖ್ಯಿಕ ಸಚಿವಾಲಯದ ವರದಿ ಕರ್ನಾಟಕದಲ್ಲಿ ಕಳೆದೊಂದು ದಶಕದಲ್ಲಿ ಅರಣ್ಯ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿ ಅರಣ್ಯ ಇಲಾಖೆಯನ್ನು ಬೆನ್ನುತಟ್ಟಿರುವುದು ಮೇಲ್ನೋಟಕ್ಕೆ ಸಂತೋಷದ ಸಂಗತಿಯಂತೆ ಕಾಣುತ್ತದೆ. ಆದರೆ ಈ ಅಂಕಿಅಂಶಗಳ ಹಿಂದೆ ಇರುವ ವಾಸ್ತವವನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ. ಅರಣ್ಯ ಪ್ರಮಾಣ ಹೆಚ್ಚಾಗಿದೆ ಎನ್ನುವ ಹೇಳಿಕೆಗೆ ಪ್ರಮುಖ ಕಾರಣ ನೈಸರ್ಗಿಕ ಕಾಡಿನ ವಿಸ್ತರಣೆ ಅಲ್ಲ, ಬದಲಾಗಿ ನೆಡುತೋಪುಗಳ ಹೆಚ್ಚಳ ಎಂಬುದನ್ನು ವರದಿ ಸೂಚಿಸುತ್ತದೆ.

ಅರಣ್ಯ ಸಂರಕ್ಷಣೆಯ ಯಶಸ್ಸನ್ನು ಕೇವಲ ವಿಸ್ತೀರ್ಣದ ಅಂಕಿಅಂಶಗಳಿಂದ ಅಳೆಯಬಾರದು. ಅರಣ್ಯದ ಗುಣಮಟ್ಟ, ಜೈವಿಕ ವೈವಿಧ್ಯ ಮತ್ತು ಜೀವಜಂತುಗಳಿಗೆ ಅದರ ಉಪಯುಕ್ತತೆಯೇ ನಿಜವಾದ ಮಾನದಂಡವಾಗಬೇಕು. ಇಲ್ಲದಿದ್ದರೆ, ಅಂಕಿಅಂಶಗಳಲ್ಲಿ ಅರಣ್ಯ ಹೆಚ್ಚಾಗುತ್ತಿರುವಂತೆ ತೋರಿದರೂ, ನೆಲಮಟ್ಟದಲ್ಲಿ ನೈಸರ್ಗಿಕ ಕಾಡುಗಳು ನಿಧಾನವಾಗಿ ಅಳಿದುಹೋಗುತ್ತಿರುವ ವಿಪರ್ಯಾಸ ಮುಂದುವರಿಯುತ್ತದೆ.

ಆದರೆ, ಸಂತಸದ ಸಂಗತಿ ಎಂದರೆ ಹಲವಾರು ಮೀಸಲು ಅರಣ್ಯಗಳು ಮತ್ತು ರಕ್ಷಿತ ಅರಣ್ಯಗಳನ್ನು ಹೊಸದಾಗಿ ಅಧಿಸೂಚಿಸುವ ಮೂಲಕ ರಾಜ್ಯ ಸರ್ಕಾರ ಅರಣ್ಯ ಭೂಮಿ ಸಂರಕ್ಷಣೆಗೆ ಕಾನೂನಿನ ಬಲ ಒದಗಿಸುತ್ತಿದೆ.‌

ಗಿರಿಧರ ಕುಲಕರ್ಣಿ, ಪರಿಸರ ಕಾರ್ಯಕರ್ತ, ಬೆಳಗಾವಿ

ಮಲೆನಾಡಿಗೆ ಅಕೇಶಿಯಾ ಶಾಪ

ಶಿವಮೊಗ್ಗ: ಅಕೇಶಿಯಾ ಬೆಳೆ ಪ್ರದೇಶ ಹೆಸರಿಗಷ್ಟೇ ಅರಣ್ಯ. ಆ ಮರದಲ್ಲಿ ಪಕ್ಷಿಗಳು ಗೂಡು ಕಟ್ಟೊಲ್ಲ. ಪ್ರಾಣಿಗಳಿಗೂ ನೆಲೆ ಸಾಧ್ಯವಿಲ್ಲ. ಇನ್ನು ಅಕೇಶಿಯಾ ಬುಡದಲ್ಲಿ ಬೇರೆ ಗಿಡಗಳು ಇರಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ನಮ್ಮ ಮಲೆನಾಡಿಗೆ ಅಕೇಶಿಯಾ ಶಾಪವಾಗಿದೆ ಎಂದು ಶಿವಮೊಗ್ಗದ ‘ನಮ್ಮೂರಿಗೆ ಅಕೇಶಿಯಾ ಬೇಡ’ ಸಂಘಟನೆಯ ಸಂಚಾಲಕ ಕೆ.ಪಿ.ಶ್ರೀಪಾಲ್ ಆಕ್ರೋಶ ವ್ಯಕ್ಯಪಡಿಸುತ್ತಾರೆ.

ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಕೇಶಿಯಾ ಬೆಳೆ ನಿಲ್ಲಿಸುವಂತೆ ಒತ್ತಾಯಿಸಿ ‘ನಮ್ಮೂರಿಗೆ ಅಕೇಶಿಯಾ ಬೇಡ’ ಸಂಘಟನೆ ಕಳೆದ ಐದು ವರ್ಷಗಳಿಂದ ಹೋರಾಟ ಕೈಗೆತ್ತಿಕೊಂಡಿದೆ.

ಕಾಗದ ಕಾರ್ಖಾನೆಗೆ ಗುತ್ತಿಗೆ:
ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ (ಎಂಪಿಎಂ) ಕಚ್ಚಾ ವಸ್ತುವಾದ ಅಕೇಶಿಯಾ ಬೆಳೆದುಕೊಳ್ಳಲು ರಾಜ್ಯ ಸರ್ಕಾರ 1980ರಲ್ಲಿ 33 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಿತ್ತು. ಈ ಅರಣ್ಯ ಪ್ರದೇಶ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ ಅದರ ಒಂದಷ್ಟು ಭಾಗ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿಗೂ ವಿಸ್ತರಿಸಿದೆ. ಎಂಪಿಎಂ 2015ರಲ್ಲಿ ಬಾಗಿಲು ಹಾಕಿದೆ. ಆದರೆ ಅದಕ್ಕೆ ಕಚ್ಚಾ ವಸ್ತು ಅಕೇಶಿಯಾ ಬೆಳೆದುಕೊಳ್ಳಲು ಕೊಟ್ಟಿರುವ ಜಾಗ ಮಾತ್ರ ಈಗಲೂ ಎಂಪಿಎಂ ಅರಣ್ಯ ಎಂಬ ದಾಖಲೆಯಲ್ಲಿಯೇ ಇದೆ. ಜೊತೆಗೆ ಅರಣ್ಯ ಇಲಾಖೆ ಪ್ರತೀ ವರ್ಷ ಕೊಡುವ ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತರಣೆಯ ಪಟ್ಟಿಯಲ್ಲೂ ಇದು ಒಳಗೊಂಡಿರುತ್ತದೆ.

ಗುತ್ತಿಗೆ ಅವಧಿ ವಿಸ್ತರಣೆ:

ರಾಜ್ಯ ಸರ್ಕಾರ ಕೊಟ್ಟಿದ್ದ ಗುತ್ತಿಗೆ ಅವಧಿ 2020ರ ಆಗಸ್ಟ್‌ಗೆ ಮುಕ್ತಾಯಗೊಂಡಿದೆ. ಅರಣ್ಯ ಭೂಮಿಯ ಗುತ್ತಿಗೆ ಅವಧಿಯೂ ಮುಗಿದಿದೆ. ಈಗ ಕಾರ್ಖಾನೆಯೂ ಚಾಲನೆಯಲ್ಲಿ ಇಲ್ಲ. ಹೀಗಾಗಿ ಮತ್ತೆ ಗುತ್ತಿಗೆ ಅವಧಿ ವಿಸ್ತರಣೆ ಬೇಡ. ಆ ಭೂಮಿಯನ್ನು ಮತ್ತೆ ಅರಣ್ಯ ಇಲಾಖೆಗೆ ಹಿಂದಿರುಗಿಸಿ ಅಲ್ಲಿರುವ ಅಕೇಶಿಯಾ ಮರಗಳನ್ನು ಕತ್ತರಿಸಿ ಅದರಲ್ಲಿ ಬರುವ ಆದಾಯದಿಂದ ಎಂಪಿಎಂ ಕಾರ್ಖಾನೆಯ ಸಾಲ (₹300 ಕೋಟಿ) ತೀರಿಸುವಂತೆ ಹಾಗೂ ಖಾಲಿ ಜಾಗದಲ್ಲಿ ನೈಸರ್ಗಿಕವಾಗಿ ಅರಣ್ಯ ಗಿಡಗಳ ಬೆಳೆಸಬೇಕು ಎಂದು ‘ನಮ್ಮೂರಿಗೆ ಅಕೇಶಿಯಾ ಬೇಡ’ ಸಂಘಟನೆ ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಾ ಬಂದಿದೆ.

ಎಂಪಿಎಂಗೆ ಮಾತ್ರವಲ್ಲ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕೇಶಿಯಾ ಬೆಳೆಯಲು 10 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸರ್ಕಾರ ಕೊಟ್ಟಿದೆ. ಅದನ್ನು ವಾಪಸ್ ಪಡೆಯುವಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಮ್ಮೂರಿಗೆ ಅಕೇಶಿಯಾ ಬೇಡ ಸಂಘಟನೆ ಹೋರಾಟ ಕೈಗೆತ್ತಿಕೊಂಡಿದೆ.

‘ಪ್ರತೀ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಥಾಗಳ ಕೈಗೆತ್ತಿಕೊಂಡು ಜನಜಾಗೃತಿ ಮೂಡಿಸಲಾಗಿದೆ. ಇದರ ಫಲವಾಗಿ ಹೊಸದಾಗಿ ಅಕೇಶಿಯಾ ನೆಡುವುದನ್ನು ನಿಲ್ಲಿಸಲಾಗಿದೆ’ ಎಂದು ಶ್ರೀಪಾಲ್ ಹೇಳುತ್ತಾರೆ.

‘ಅಕೇಶಿಯಾ ನೆಡುವುದು ನಿಲ್ಲಿಸಿದ ತಕ್ಷಣ ನಮ್ಮ ಹೋರಾಟ ನಿಲ್ಲಿಸಲ್ಲ. ಮತ್ತೆ 40 ವರ್ಷಗಳ ಅವಧಿಗೆ ಗುತ್ತಿಗೆ ಪ್ರಸ್ತಾವವನ್ನು ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾದ ಅಕೇಶಿಯಾ ಬೆಳೆಯನ್ನು ಮಲೆನಾಡಿನಿಂದ ಸಂಪೂರ್ಣ ಹೊರಗೆ ಹಾಕುವುದು ನಮ್ಮ ಹೋರಾಟದ ಅಂತಿಮ ಗುರಿ’ ಎಂದು ಕೆ.ಪಿ.ಶ್ರೀಪಾಲ್ ಹೇಳುತ್ತಾರೆ.

ಪೂರಕ ಮಾಹಿತಿ: ಮಂಜುನಾಥ ಹೆಬ್ಬಾರ್, ಸುಮಾ ಬಿ., ಗಣೇಶ ಹೆಗಡೆ, ಸಂತೋಷ ಚಿನಗುಡಿ, ಪ್ರವೀಣ್‌ ಕುಮಾರ್ ಪಿ.ವಿ., ಬಾಲಕೃಷ್ಣ ಎಂ.ಜಿ, ವೆಂಕಟೇಶ್ ಜಿ.ಎಚ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.