ADVERTISEMENT

ಒಳನೋಟ: ರೈಲ್ವೆ ಯೋಜನೆಗಳಿಗೆ ‘ಭೂ ಕಂಟಕ’

ಚುನಾವಣಾ ಭಾಷಣಗಳಲ್ಲಿ ಓಡುವ ರಾಜ್ಯ ‘ರೈಲು’ಗಳು ಹಳಿಗೆ ಬರುವುದು ಯಾವಾಗ?

ಜಿ.ಬಿ.ನಾಗರಾಜ್
Published 2 ಜನವರಿ 2021, 19:46 IST
Last Updated 2 ಜನವರಿ 2021, 19:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚಿತ್ರದುರ್ಗ: ಹೊಸ ಮಾರ್ಗಗಳಲ್ಲಿ ರೈಲು ಸಂಚರಿಸುವಂತೆ ಮಾಡಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ದೃಷ್ಟಿಯಿಂದ ರೂಪಿಸಿದ ರೈಲ್ವೆ ಯೋಜನೆಗಳು, ದಶಕ ಕಳೆದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ, ರಾಜ್ಯ ಮತ್ತು ಕೇಂದ್ರ ಸರ್ಕಾರ ನಡುವಿನ ಸಮನ್ವಯದ ಕೊರತೆಯಿಂದ ಬಹುತೇಕ ರೈಲ್ವೆ ಯೋಜನೆಗಳು ತೆವಳುತ್ತ ಸಾಗುತ್ತಿವೆ.

ನೈರುತ್ಯ ರೈಲ್ವೆ ವಲಯ ರಾಜ್ಯದಲ್ಲಿ 21 ಹೊಸ ಮಾರ್ಗಗಳನ್ನು ಗುರುತಿಸಿದೆ. ಕೆಲವು ಮಾರ್ಗಗಳಿಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಇಎ) ಅನುಮೋದನೆ ಕೂಡ ಸಿಕ್ಕಿದೆ. ಬಜೆಟ್‌ ಬಳಿಕ ಪ್ರಕಟವಾಗುವ ‘ಪಿಂಕ್‌ ಬುಕ್‌’ನಲ್ಲಿ ಪ್ರತಿ ವರ್ಷವೂ ಈ ಯೋಜನೆಗಳ ಉಲ್ಲೇಖವಿದೆ. ಆದರೆ, ಬಜೆಟ್‌ನಲ್ಲಿ ಮಾತ್ರ ಬಿಡಿಗಾಸು ಅನುದಾನ ಸಿಗುತ್ತಿದೆ.

ರೈಲ್ವೆ ಯೋಜನೆಗಳ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ನೀತಿಯನ್ನು ಮನಗಂಡ ಎಸ್‌.ಎಂ.ಕೃಷ್ಣ ಅವರು ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಯೋಜನಾ ವೆಚ್ಚದ ಪಾಲು ಭರಿಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಭೂಮಿಯನ್ನು ಉಚಿತವಾಗಿ ನೀಡಿ ಯೋಜನೆಯ ಅರ್ಧದಷ್ಟು ಪಾಲು ನೀಡುವುದಾಗಿ ಆನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಇಂತಹ 16 ರೈಲ್ವೆ ಯೋಜನೆಗಳು ರಾಜ್ಯದಲ್ಲಿವೆ. ಆದರೆ, ಯಾವುದೇ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿಲ್ಲ.

ADVERTISEMENT

ತುಮಕೂರು– ರಾಯದುರ್ಗ (202 ಕಿ.ಮೀ) ರೈಲ್ವೆ ಯೋಜನೆಗೆ 2007–08ರಲ್ಲಿ ಅನುಮೋದನೆ ದೊರೆತಿದೆ. ರಾಯದುರ್ಗ –ಕಲ್ಯಾಣದುರ್ಗ– ಕದರಿದೇವರಪಲ್ಲಿವರೆಗಿನ 63 ಕಿ.ಮೀ. ಮಾರ್ಗ ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗಿ ಪ್ರಾಯೋಗಿಕ ರೈಲು ಸಂಚಾರವೂ ಯಶಸ್ವಿಯಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ತುಮಕೂರು ಜಿಲ್ಲೆಯ 1,396 ಎಕರೆ ಭೂಮಿಯಲ್ಲಿ 614 ಎಕರೆಯನ್ನು ಮಾತ್ರ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಇನ್ನೂ ಟೇಕ್‌ಆಫ್‌ ಆಗಿಲ್ಲ. 2011–12ರಲ್ಲಿ ಅನುಮೋದನೆ ಸಿಕ್ಕರೂ ಭೂಸ್ವಾಧೀನ ಪ್ರಕ್ರಿಯೆ ಆಮೆಗತಿಯಲ್ಲಿ ನಡೆಯುತ್ತಿದೆ. ರೈಲ್ವೆ ಇಲಾಖೆಗೆ ತುಮಕೂರು ಜಿಲ್ಲೆಯಲ್ಲಿ 135 ಎಕರೆಯನ್ನು ಮಾತ್ರ ಹಸ್ತಾಂತರಿಸಲಾಗಿದೆ. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆ ಅನುಷ್ಠಾನ ವಿಳಂಬವಾದಷ್ಟು ವೆಚ್ಚದ ಹೊರೆ ಹೆಚ್ಚಾಗುತ್ತಿದೆ. ದಿನ ಉರುಳಿದಂತೆ ರಾಜ್ಯ ಸರ್ಕಾರಕ್ಕೆ ಈ ಯೋಜನೆಗಳೇ ಹೊರೆಯಾಗಿ ಪರಿಣಮಿಸುತ್ತಿವೆ.

ಯೋಜನೆಗಳಿಗೆ ಅನುಮೋದನೆ ಸಿಕ್ಕ ಬಳಿಕ ಪ್ರತಿ ವರ್ಷವೂ ಒಂದಷ್ಟು ಅನುದಾನ ಮೀಸಲಿಟ್ಟಿದ್ದರೂ ಈ ವೇಳೆಗೆ ರೈಲು ಸಂಚಾರ ಆರಂಭವಾಗುತ್ತಿತ್ತು. ಸರ್ಕಾರ ಬದಲಾದಂತೆ ಯೋಜನೆ ಅನುಷ್ಠಾನದ ಇಚ್ಛಾಶಕ್ತಿಯೂ ಕುಂದುತ್ತಿದೆ. ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಹಸ್ತಾಂತರಿಸುವಲ್ಲಿ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. 2020–21ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ನೂರಾರು ಕೋಟಿ ಹಣವನ್ನು ಮೀಸಲಿಟ್ಟಿತ್ತು. ಕೋವಿಡ್‌ ವ್ಯಾಪಿಸಿದ ಬಳಿಕ ಸರ್ಕಾರದ ಆದ್ಯತೆ ಬದಲಾಗಿದೆ.

ಹಾಸನ–ಬೇಲೂರು–ಚಿಕ್ಕಮಗಳೂರು ಯೋಜನೆ ರಾಜಕೀಯ ಹಸ್ತಕ್ಷೇಪದಿಂದ ಮಾರ್ಗ ಬದಲಿಸಿದೆ. ಸಕಲೇಶಪುರ ಸಂಪರ್ಕಿಸುವ ಈ ಮಾರ್ಗ ಬೇಲೂರಿನಿಂದ ಹಾಸನಕ್ಕೆ ತಿರುಗಿದೆ. ಬಾಗಲಕೋಟೆ–ಕುಡಚಿಯ 142 ಕಿ.ಮೀ ಮಾರ್ಗದಲ್ಲಿ 30 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ರಾಜ್ಯ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸುವವರೆಗೂ ರೈಲ್ವೆ ಇಲಾಖೆ ಕಾಯಬೇಕಿದೆ. ಭೂಮಿ ಹಸ್ತಾಂತರಿಸಿದರೂ ಕೆಲವೆಡೆ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಂಡಿಲ್ಲ.

ಹೆಜ್ಜಾಲ–ಚಾಮರಾಜನಗರ (142 ಕಿ.ಮೀ) ರೈಲ್ವೆ ಯೋಜನೆಗೆ ಎರಡೂವರೆ ದಶಕ ತುಂಬಿದೆ. ಬೆಂಗಳೂರು ಹಾಗೂ ಸತ್ಯಮಂಗಲ ಸಂಪರ್ಕಕ್ಕೆ ಪೂರಕವಾಗಿರುವ ಈ ಯೋಜನೆ 1996–97ರಲ್ಲಿ ಮಂಜೂರಾಗಿತ್ತು. ಆದರೆ, ಈವರೆಗೆ ಸಣ್ಣ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಕನಕಪುರ–ಮಳವಳ್ಳಿ–ಚಾಮರಾಜನಗರ ಸಂಪರ್ಕಿಸುವ ಈ ಮಾರ್ಗವನ್ನು ತಮಿಳುನಾಡುವರೆಗೆ ವಿಸ್ತರಿಸುವ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಬೆಂಗಳೂರಿನಿಂದ ಹೊರಡುವ ರೈಲು ಆಂಧ್ರಪ್ರದೇಶದ ಗುಂತಕಲ್‌ ಸುತ್ತಿಕೊಂಡು ರಾಯಚೂರು ತಲುಪುವ ತಾಪತ್ರಯಕ್ಕೆ ಕೊನೆ ಎಂದು ಎಂಬುದು ಯಕ್ಷಪ್ರಶ್ನೆಯಾಗಿದೆ.

2013–14ರಲ್ಲಿ ರೂಪುಗೊಂಡ ಶ್ರೀನಿವಾಸಪುರ–ಮದನಪಲ್ಲಿ (75 ಕಿ.ಮೀ), ಗೌರಿಬಿದನೂರು–ಚಿಕ್ಕಬಳ್ಳಾಪುರ (44 ಕಿ.ಮೀ) ಹಾಗೂ ಚಿಕ್ಕಬಳ್ಳಾಪುರ–ಪುಟಪರ್ತಿ–ಶ್ರೀಸತ್ಯಸಾಯಿ ನಿಲಯಂ (103 ಕಿ.ಮೀ) ಯೋಜನೆಗಳಿಗೆ ಇನ್ನೂ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ಸಿಕ್ಕಿಲ್ಲ. ಆದರೂ, ಹೊಸ ಮಾರ್ಗಗಳ ಸಮೀಕ್ಷೆ ನಡೆಯುತ್ತಿದೆ.

ಚುನಾವಣಾ ಭಾಷಣದಲ್ಲಿ ‘ರೈಲು’
ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಭಾಷಣದಲ್ಲಿ ಹಳಿ ಇಲ್ಲದ ರೈಲು ಓಡುತ್ತದೆ. ರಾಜ್ಯದ ಬಹುತೇಕ ರೈಲ್ವೆ ಯೋಜನೆಗಳು ಚುನಾವಣೆಯಲ್ಲಿ ವೋಟು ಗಿಟ್ಟಿಸಿಕೊಳ್ಳುವ ವಾಹಕಗಳಾಗಿವೆ.

ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತಾಪವಾಗುತ್ತದೆ. ಅಧಿಕಾರಕ್ಕೆ ಬಂದ ತಕ್ಷಣವೇ ಕಾಮಗಾರಿ ಪ್ರಾರಂಭಿಸುವುದಾಗಿ ಆಶ್ವಾಸನೆ ನೀಡಲಾಗುತ್ತದೆ. ಚುನಾವಣೆ ಮುಗಿದು ಅಧಿಕಾರಾವಧಿ ಪೂರ್ಣಗೊಳ್ಳುವ ಹಂತದಲ್ಲಿ ಮತ್ತೆ ಇದೇ ವಿಚಾರದಲ್ಲಿ ರಾಜಕೀಯ ಶುರುವಾಗುತ್ತದೆ.

₹18,600 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಥೆಯೂ ಭಿನ್ನವಾಗಿಲ್ಲ. 2014ರಲ್ಲಿ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ಉಪನಗರ ರೈಲ್ವೆ ಯೋಜನೆಯನ್ನು ಬಜೆಟ್‌ನಲ್ಲಿ ಉಲ್ಲೇಖಿಸಿದ್ದರು. ಆರು ವರ್ಷಗಳಿಂದ ಬಿಜೆಪಿ ನೇತೃತ್ವದ ಸರ್ಕಾರವೇ ಇದ್ದರೂ ಸಿಕ್ಕಿದ್ದು ಬಿಡಿಗಾಸು ಮಾತ್ರ.

*
ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ರೈಲ್ವೆ ಯೋಜನೆಗಳು ನನೆಗುದಿಗೆ ಬಿದ್ದಿವೆ. ಗದಗ–ವಾಡಿ, ಕುಡಚಿ–ಬಾಗಲಕೋಟೆ, ಗಿಣಿಗೆರ–ರಾಯಚೂರು ಮಾರ್ಗ ಪೂರ್ಣಗೊಂಡರೆ ವಾಣಿಜ್ಯ ವಹಿವಾಟಿಗೆ ಅನುಕೂಲವಾಗಲಿದೆ.
-ಕೆ.ಎನ್‌.ಕೃಷ್ಣಪ್ರಸಾದ್‌, ಕರ್ನಾಟಕ ರೈಲ್ವೆ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.