ADVERTISEMENT

ಒಳನೋಟ | ಸಂಬಂಜವೆಂಬುದು... ಸುದೀರ್ಘ ಸಾಂಗತ್ಯಕ್ಕೂ ಪಾಠ...

ಎಸ್.ರಶ್ಮಿ
Manjunath C Bhadrashetti
Published 4 ಜನವರಿ 2025, 23:30 IST
Last Updated 4 ಜನವರಿ 2025, 23:30 IST
   

ಭಾರತೀಯ ಪುರುಷರು ರೋಮ್ಯಾಂಟಿಕ್‌ ಆಗಿಲ್ಲ. ಅವರಿಗೆ ವಾದಗಳನ್ನು ನಿಭಾಯಿಸುವುದೂ ಗೊತ್ತಿಲ್ಲ. ನಿರ್ಣಾಯಕ ಅಂಶಗಳಿಗೆ ಬಂದಾಗ, ಹೆಣ್ಣುಮಕ್ಕಳನ್ನು ಜರೆದು ಇಲ್ಲವೇ ಹಿಂಸಿಸಿ, ಅವಹೇಳನ ಮಾಡಿ ವಾದಗಳಿಂದ ದೂರ ಸರಿಯುತ್ತಾರೆ. ನಾನು ಭಾರತೀಯ ಪುರುಷರೊಂದಿಗೆ ಡೇಟಿಂಗ್‌ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಲೈಫ್ ಕೋಚ್‌ ಒಬ್ಬರು ತಮ್ಮ ಇನ್‌ಸ್ಟಾಗ್ರಾಂ ನ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದರು.

ದೇಶದಾದ್ಯಂತ ಇದು ಸುದ್ದಿ ಆಯಿತು. ಕೆಲವರು ಜರೆದರು. ಇನ್ನೂ ಕೆಲವರು ಅವರ ವಾದವನ್ನು ಸಮರ್ಥಿಸಿದರು. 

ಜೆನ್ ಝೀ ಅಥವಾ ಮಿಲೇನಿಯಲ್‌ ಎಂದು ಕರೆಯಲಾಗುವ ತಲೆಮಾರಿನ ಸಮಸ್ಯೆಗಳೇ ಭಿನ್ನವಾಗಿವೆ. ಪ್ರೀತಿಸುವುದನ್ನೂ, ತಿರಸ್ಕಾರವನ್ನೂ, ತಿಳಿಹೇಳಬೇಕಾಗಿದೆ ಎಂದು ಮೂಗುಮುರಿಯುವ ಹಿರಿಯರ ನಡುವೆಯೇ ಇದೇ ತಲೆಮಾರಿನವರು ಬಾಂಧವ್ಯದ ಬೆಸುಗೆಗೆ ಅನುಕೂಲವಾಗಲಿ ಎಂದು ಕೋಚಿಂಗ್‌ ನೀಡುತ್ತಿದ್ದಾರೆ.

ADVERTISEMENT

ಡೇಟಿಂಗ್‌ ಆ್ಯಪ್ಸ್‌ ಬಂದವು. ಎಡಕ್ಕೆ, ಬಲಕ್ಕೆ ಸ್ವೈಪ್‌ ಮಾಡುತ್ತ ಯಾರು ಹೊಂದಾಣಿಕೆಯಾದಾರು ಎಂದು ನೋಡುವುದರಲ್ಲಿಯೇ ಯಾವ ಬಾಂಧವ್ಯಗಳೂ ಹೆಚ್ಚುದಿನ ನಿಲ್ಲುತ್ತಿಲ್ಲ ಎಂಬ ಸತ್ಯವೂ ಅರಿವಾಗತೊಡಗಿತು. ಒಂದೇ ಪದದಲ್ಲಿ ಇವಕ್ಕೆ ಉತ್ತರವೆಂಬಂತೆ ’ಕಾಂಪಿಟ್ಯಬಿಲಿಟಿ’ ಇಲ್ಲ ಎನ್ನತೊಡಗಿದರು. ಸಮಸ್ಯೆ ಗೊತ್ತಾಯಿತು. ಪರಿಹಾರ ಕೇಳುವುದು ಯಾರಲ್ಲಿ?

ಇದಕ್ಕೆಂದೇ ಈಗ ಕೋಚ್‌ಗಳು ಇದ್ದಾರೆ. ಒಂದು ಬಾಂಧವ್ಯದಲ್ಲಿ ಏನನ್ನು ನಿರೀಕ್ಷಿಸಬೇಕು ಎಂಬುದೇ ಮೊದಲ ಪಾಠವಾಗುತ್ತಿದೆ ಎಂಬುದು ಬಹುತೇಕ ಕೋಚ್‌ಗಳ ಅಭಿಪ್ರಾಯವಾಗಿದೆ.

ನನ್ನನ್ನು ಯಾರೂ ಪ್ರೀತಿಸಲಾರರೆ? ಎಂಬ ಪ್ರಶ್ನೆಯೊಂದಿಗೆ ಬಂದಿದ್ದ ತರುಣ್‌ (ಹೆಸರು ಬದಲಿಸಲಾಗಿದೆ) ಖಿನ್ನತೆಗೆ ಜಾರಿದ್ದ.  ಹುಡುಗಿಯರು ಅವನನ್ನು ತಿರಸ್ಕರಿಸುತ್ತಾರೆ, ಮತ್ತು ತಾನು ಪ್ರೀತಿಸಲ್ಪಡದವ ಎಂಬುದೇ ಅವನ ಸಮಸ್ಯೆಯಾಗಿತ್ತು ಎಂದು ಸಮಾಲೋಚಕ ಮತ್ತು ಚಿಕಿತ್ಸಕ ಡಾ.ಡಿ.ಎಂ. ಹೆಗಡೆ ಅವರು ವಿವರಿಸಿದರು. 

ಕೋವಿಡ್‌ನಂತರ ಕೆಲಸಕ್ಕೆ ಸೇರುವ, ಕೆಲಸದಲ್ಲಿರುವ ಯುವಜನಾಂಗದ ಅತಿದೊಡ್ಡ ಒತ್ತಡವೆಂದರೆ ತಾವೂ ರಿಲೇಷನ್‌ಶಿಪ್‌ನಲ್ಲಿರಬೇಕು. ಪರಸ್ಪರ ಪ್ರೀತಿಸಲ್ಪಡಬೇಕು. ಯಾವ ಶರತ್ತುಗಳೂ ಇರಕೂಡದು. ಇವು ಹುಡುಗರ ಕಡೆಯ ನಿರೀಕ್ಷೆ.

ಹುಡುಗಿಯರು, ಹುಡುಗ ಖರ್ಚು ಮಾಡುವುದಿಲ್ಲ. ಮಹತ್ವಾಕಾಂಕ್ಷೆ ಇಲ್ಲ. ಈಗಲೂ ಅಡುಗೆ ಬರುತ್ತದೆಯೇ ಎಂಬ ಪ್ರಶ್ನೆಯಿಂದಲೇ ಆರಂಭಿಸುತ್ತಾರೆ. ಜಗತ್ತು ಸುತ್ತಬೇಕು, ಪ್ರವಾಸ ಮಾಡಬೇಕು ಎಂಬ ಆಸೆಗಳೇ ಇಲ್ಲ. ಸಾಂಗತ್ಯಕ್ಕಾಗಿ ನೋಡುವವರು ಕೇವಲ ದೈಹಿಕ ಸುಖವನ್ನು ಮಾತ್ರ ಅಪೇಕ್ಷಿಸುತ್ತಾರೆ ಎಂದು ಹೇಳುತ್ತಾರೆ. 

ಈ ಎರಡೂ ಬೇಡಿಕೆಗಳು ಒಂದು ದಿಕ್ಕಿನಲ್ಲಿ ಸಾಗದೇ ಇರುವುದರಿಂದಲೇ ಯಾವ ಬಾಂಧವ್ಯವೂ ದೀರ್ಘಕಾಲದಲ್ಲಿ ಬಾಳುತ್ತಿಲ್ಲ.

ಎಂಜಿನಿಯರಿಂಗ್‌ ಪದವಿ ಮುಗಿಸಿ, ಕೆಲಸಕ್ಕೆ ಸೇರಿರುವ ನೀರಜ್‌ಗೆ ಸಹೋದ್ಯೋಗಿಗಳೆಲ್ಲ ತಮ್ಮ ಜೊತೆಗಾರರೊಂದಿಗೆ ಬರುತ್ತಾರೆ. ಶಾರ್ಟ್‌ ಟರ್ಮ್‌ ಡೇಟಿಂಗ್‌ಗಾದರೂ ಯಾರಾದರೂ ಸಿಗಲಿ ಎಂಬ ಆಸೆಯೇ, ಒತ್ತಡವಾಗಿ ಬದಲಾಗಿದೆಯಂತೆ. ಕಳೆದೆರಡು ವರ್ಷಗಳ ಹಿಂದೆ  NeilsenIQ ಸಂಸ್ಥೆಯ ಅಧ್ಯಯನವೂ ಈ ವಾದವನ್ನು ಪುಷ್ಟೀಕರಿಸುತ್ತಿದೆ. ಭಾರತೀಯ ಯುವಜನಾಂಗಕ್ಕೆ ಮೊದಲ ಡೇಟಿಂಗ್‌, ಸಂಗಾತಿಯನ್ನು ಒಲಿಸಿಕೊಳ್ಳುವುದು, ಬಾಂಧವ್ಯದಲ್ಲಿ ಬಹುದೂರ ಸಾಗಬೇಕು ಎಂಬ ನಿರೀಕ್ಷೆಗಳೇ ಅತಿಹೆಚ್ಚು ಒತ್ತಡ ಸೃಷ್ಟಿಸುತ್ತಿವೆಯಂತೆ. 

ಜಾಗತಿಕ ಮಟ್ಟದಲ್ಲಿಯೂ ಭಗ್ನಹೃದಯಿಗಳ ಸಂಖ್ಯೆಯು ಹೆಚ್ಚುತಿದೆ ಎಂದು ಅಧ್ಯಯನಗಳು ಹೇಳುತ್ತಿವೆ. ನ್ಯೂಜಿಲೆಂಡ್‌ ದೇಶದಲ್ಲಿ ಯುವಜನಾಂಗದಲ್ಲಿ ಭಗ್ನಪ್ರೇಮಿಗಳಾಗಿ, ಹೃದಯಭಗ್ನದಿಂದಾಗಿ ಖಿನ್ನತೆ ಮತ್ತು ಒತ್ತಡವನ್ನು ಅನುಭವಿಸುವವರ ಸಂಖ್ಯೆಯು ಹೆಚ್ಚಾಗಿದೆ. ಈ ಕಾರಣದಿಂದಲೇ ಅಲ್ಲಿಯ ಸರ್ಕಾರ 2022-23ರ ಸಾಲಿನಲ್ಲಿ 4 ದಶಲಕ್ಷ ಡಾಲರ್‌ಗಳಷ್ಟು ಹಣವನ್ನು ಸಮಾಲೋಚನೆಗೆ, ಚಿಕಿತ್ಸೆಗೆ, ಪರ್ಯಾಯ ಚಟುವಟಿಕೆಗಳಿಗಾಗಿ ಮೀಸಲಾಗಿರಿಸಿದೆ.‌

ಭಾರತೀಯರಲ್ಲಿ ’ಲವ್‌ ಗುರು‘ ಪರಿಕಲ್ಪನೆ ಒಡಮೂಡಿದ್ದು ಬಹು ಹಿಂದೆ. ಭಗ್ನಹೃದಯಿಗಳಿಗೆ ಸಮಾಧಾನ ಹೇಳುವ, ಸಮಾಲೋಚಿಸುವ ಕೆಲಸಗಳು ನಡೆದೇ ಇದ್ದವು. ಈಗ ಚಿಕಿತ್ಸೆಗಿಂತಲೂ ಮುನ್ನೆಚ್ಚರಿಕೆ ಒಳಿತು ಎಂಬ ವಾದಕ್ಕೆ ಬಂದು ನಿಂತಿದೆ. 

ಈಗ ಏನಿದ್ದರೂ ರಿಲೇಷನ್‌ಶಿಪ್‌ ಕೋಚ್‌ಗಳ ಕಾಲ. ಎರಡು ದಿನಗಳ ಆನ್‌ಲೈನ್‌, ಆಫ್‌ಲೈನ್‌ ಕೋರ್ಸ್‌ಗಳಿಗೆ ಕನಿಷ್ಠ ₹4,500 ರೂಪಾಯಿಗಳ ಶುಲ್ಕದಿಂದ ಲಕ್ಷಾಂತರ ರೂಪಾಯಿ ಶುಲ್ಕ ವಿಧಿಸುವ ಕೋಚ್‌ಗಳಿದ್ದಾರೆ. ಕಾಸಿಗೆ ತಕ್ಕಂತೆ, ಇವರ ಪಾಠಗಳು ಆನ್‌ಲೈನ್‌, ಆಫ್‌ಲೈನ್‌, ದೇಶದ ಗಡಿ ಮೀರಿ ವಿದೇಶಗಳಲ್ಲಿಯೂ ಪ್ರೀತಿಯ ಪಾಠ ಹೇಳಿಕೊಡುತ್ತಿದ್ದಾರೆ.

ಇವರ ಬಳಿ ಬರುವ ಬಹುತೇಕ ಪ್ರಕರಣಗಳಲ್ಲಿ ನಿರೀಕ್ಷೆಗಳು ಹೊಂದಾಣಿಕೆಯಾಗುತ್ತಿಲ್ಲ ಎಂದೇ ಹೇಳುತ್ತಾರೆ. ಆದರೆ ಈ ಸತ್ಯ ತಿಳಿಯುವಾಗ ಬಹುತೇಕ ಜೋಡಿಗಳು ಮಾನಸಿಕವಾಗಿ, ದೈಹಿಕವಾಗಿ ಅತ್ಯಾಪ್ತರಾಗಿರುತ್ತಾರೆ. ಹೊಂದಾಣಿಕೆ ಆಗದು ಎಂಬುದು ತಿಳಿದಾಗಲೂ ವಿದಾಯವೆಂಬುದು ಸಹಜವಾಗುವುದಿಲ್ಲ. ಸರಳವಾಗುವುದಿಲ್ಲ. ಕೆಲವೆಡೆ ಜಗಳಗಳೊಂದಿಗೆ ವಿದಾಯ ಹೇಳಿದ್ದರೆ, ಇನ್ನೂ ಕೆಲವೆಡೆ ಯಾವ ಉತ್ತರಗಳನ್ನೂ ಹೇಳದೆಯೇ ತಿರಸ್ಕಾರಕ್ಕೆ ಒಳಗಾಗಿರುತ್ತಾರೆ. ನಿರ್ಲಕ್ಷಿಸುತ್ತಲೇ ಬೇರೆ ಬೇರೆ ದಾರಿ ಎಂಬ ಉತ್ತರಗಳನ್ನೂ ಹೇಳಿರುತ್ತಾರೆ. ಈ ಮಾನಸಿಕ ಒತ್ತಡವನ್ನು ಸ್ವೀಕರಿಸುವುದು ಅಥವಾ ನಿಭಾಯಿಸುವುದು ಎರಡೂ ಸಾಧ್ಯವಾಗುತ್ತಿಲ್ಲ. 

ಭಗ್ನಪ್ರೇಮಿಗಳಾಗುವ ಬದಲು, ಬಾಂಧವ್ಯ ಬೆಸೆಯುವ ಬಗೆ ಹೇಗೆ ಎಂಬತ್ತ ಯುವಜನಾಂಗ ಹೆಚ್ಚು ಗಮನವಹಿಸುತ್ತಿರುವುದರಿಂದಲೇ ಈ ರಿಲೇಷನ್‌ಶಿಪ್‌ ಕೋಚ್‌ಗಳ ಸಂಖ್ಯೆ ಹೆಚ್ಚುತ್ತಲಿದೆ. ವ್ಯಕ್ತಿತ್ವ ನಿರ್ಮಾಣದಂತೆಯೇ ಇಲ್ಲಿ ಬಾಂದವ್ಯ ನಿರ್ಮಾಣ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ರಿಲೇಷನ್‌ಶಿಪ್‌ ಕೋಚ್‌ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಅರುಣವ್‌ ಜೈನ್‌, ರಾಧಿಕಾ ಮೊಹ್ಟಾ.

ಹುಡುಗರಿಗೆ ಮೊದಲು ಮಾತಾಡಿಸುವುದನ್ನು ಹೇಳಿಕೊಡಲಾಗುತ್ತದೆ. ಮೆಲುಧ್ವನಿಯಲ್ಲಿ, ಪರಸ್ಪರ ಅರಿಯುವ ಅರಕೆ ಇರುವ ಧಾಟಿಯಲ್ಲಿ ಮಾತಾಡಬೇಕು. ನಮ್ಮಲ್ಲಿ ಈಗಲೂ ನನಗೆ ಒಪ್ಪಿಗೆಯಾಗಿರುವುದರಿಂದ, ನನ್ನ ನಿರೀಕ್ಷೆಗಳನ್ನು ಕೇಳಬೇಕು ಎಂಬ ಧಾಟಿಯಲ್ಲಿಯೇ ಹುಡುಗರು ಮಾತಾಡುತ್ತಾರೆ. ಸ್ವಾವಲಂಬಿ ಮಹಿಳೆಯರಿಗೆ, ಸೂಕ್ಷ್ಮ ಹುಡುಗಿಯರಿಗೆ ಈ ಧ್ವನಿ, ಧಾಟಿ ಒಂದಿನಿತೂ ಇಷ್ಟವಾಗುವುದಿಲ್ಲ. ಕೆಲವು ಗಂಡುಮಕ್ಕಳು ಹೆಣ್ಮಕ್ಕಳ ಕಂಗಳನ್ನು ದಿಟ್ಟಿಸಿ ಮಾತಾಡುವುದಿಲ್ಲ. ದೃಷ್ಟಿ ಆಗಾಗ ಕತ್ತಿನ ಕೆಳಗೆ ಹೋಗುತ್ತಿರುತ್ತದೆ. ಇಲ್ಲವೇ ಬೇರೆಲ್ಲೋ ಮಾತಾಡುತ್ತಿರುತ್ತಾರೆ. ತಾವೆಷ್ಟು ಜಾಣರು ಎಂಬುದನ್ನು ತೋರಿಸಲೂ ಯತ್ನಿಸುತ್ತಾರೆ. ಫೋನು ಕರೆ ಸ್ವೀಕರಿಸಿ ಜೋರು ಮಾಡುವುದು, ಇಲ್ಲವೇ ಅತಿವಿನೀತರಾಗಿ ತೋರಿಸಿಕೊಳ್ಳುವುದೂ ಮಾಡುತ್ತಿರುತ್ತಾರೆ. ಇವೆಲ್ಲವೂ ತಮ್ಮ ಸಂಗಾತಿಯನ್ನು ಕಣ್ಣಳತೆಯಲ್ಲಿಯೇ ಮೌಲ್ಯಮಾಪನ ಮಾಡುವಂಥ ಹುಡುಗಿಯರಿಗೆ ನಕಾರಾತ್ಮಕ ಅಂಶಗಳಾಗಿ ಕಾಣುತ್ತವೆ.

ಇಂಥ ಸಣ್ಣ ಸಣ್ಣ ಕಾರಣಗಳೂ ಮುಂದಿನ ಭೇಟಿಯನ್ನು ಮುಂದೂಡುವಂತೆ ಅಥವಾ ನಿರಾಕರಿಸುವಂತೆ ಮಾಡುತ್ತವೆ. 

'ಸಮಾಲೋಚಕರ ಪ್ರಕಾರ ಹುಡುಗರಲ್ಲಿ ಈಗಲೂ ಹಣ ಗಳಿಸುತ್ತೇನೆ. ನೌಕರಿ ಇದೆ. ಆಸ್ತಿ ಇದೆ. ಇನ್ನೇನು ಬೇಕು ಹುಡುಗಿಯರಿಗೆ, ಎಂಬ ಮನಸ್ಥಿತಿಯೇ ಇದೆ. ಹುಡುಗಿಯರಿಗೀಗ ಹಣಕ್ಕಿಂತಲೂ ಸ್ವಭಾವ ಹೊಂದಾಣಿಕೆ ಆಗಬೇಕು. ಇಬ್ಬರೂ ಒಟ್ಟಿಗಿದ್ದಾಗ ತಮ್ಮದೇ ಸಮಯವಾಗಿರಬೇಕು. ತಮ್ಮನ್ನು ಗೌರವಿಸಬೇಕು. ಹಾಸ್ಯ ಗೊತ್ತಿರಬೇಕು. ಅಪಹಾಸ್ಯ ಮಾಡಕೂಡದು. ತಮಗಿಂತಲೂ ಹೆಚ್ಚು ಗಳಿಸುವವನಿರಬೇಕು. ತಮ್ಮ ಸಂಬಳದ ಕುರಿತು ಹೆಚ್ಚು ಕೇಳಬಾರದು. ಆರ್ಥಿಕ ಸ್ವಾತಂತ್ರ್ಯ ಇರಬೇಕು ಎಂದು ಬಯಸುತ್ತಿದ್ದಾರೆ. 

ಹುಡುಗಿಯರ ಕನಸುಗಳು, ಅವರ ಕೆರಿಯರ್‌ ಆದ್ಯತೆಗಳು, ಆರ್ಥಿಕ ಸ್ವಾತಂತ್ರ್ಯ ಇವೆಲ್ಲವೂ ಹುಡುಗರ ಮನಸಿನೊಳಗೆ ಆತಂಕ ಮೂಡಿಸುತ್ತಿವೆ. ಸ್ವಾತಂತ್ರ್ಯವನ್ನು ಸ್ವೇಚ್ಛೆ ಎಂದೇ ಭಾವಿಸುತ್ತಾರೆ. ಅನಗತ್ಯದ ಕೊಂಕುನುಡಿ, ಟೀಕೆಗಳನ್ನು ಸಹಿಸದ ಹುಡುಗಿಯರು ’ಇದು ಟಾಕ್ಸಿಕ್‌‘ ಮನಸ್ಥಿತಿ ಎಂಬ ತೀರ್ಮಾನಕ್ಕೆ ಬಂದು ದೂರವಾಗುತ್ತಾರೆ. 

ಮದುವೆಯೆಂಬುದೇ ಜವಾಬ್ದಾರಿ. ಜೊತೆಗಿದ್ದರೆ ಖರ್ಚು ನಿಭಾಯಿಸಬೇಕು. ಮನೆ ನೋಡಿಕೊಳ್ಳಲು, ನಡೆಸಲು, ವಂಶ ಮುಂದುವರಿಸಲು ಎಂಬಂಥ ಸಾಂಪ್ರದಾಯಿಕ ಹೊಣೆಗಾರಿಕೆಯ ಒತ್ತಡವೇ ಗಂಡು ಮಕ್ಕಳಲ್ಲಿ ಹೆಚ್ಚಾಗಿದೆ. ವಿಹಾನ್‌ (ಹೆಸರು ಬದಲಿಸಲಾಗಿದೆ) ಲಿವ್‌ ಇನ್‌ ನಲ್ಲಿದ್ದು, ಇದೀಗ ಬೇರ್ಪಟ್ಟು ಒಂಟಿಯಾಗಿ ಬದುಕುತ್ತಿದ್ದಾನೆ. ಬಾಂಧವ್ಯಗಳಲ್ಲಿನ ಒಡಕು, ವಿಶ್ವಾಸವನ್ನೇ ಕೊಂದು ಹಾಕಿದೆ. ಒಂದೇ ಅನುಭವದಿಂದ ಇಂಥ ನಿರ್ಧಾರಕ್ಕೆ ಬರುವ ಗಂಡುಮಕ್ಕಳ ಸಂಖ್ಯೆ ಹೆಚ್ಚಿದೆ. ಬಾಂಧವ್ಯವೆಂಬುದು ಆರಂಭವಾಗುವುದೇ ನಾಲ್ವತ್ತರ ಬಳಿಕ. ನಾಲ್ವತ್ತರ ನಂತರವೂ ಅವರು ಒಟ್ಟಿಗಿದ್ದರೆ ಸುದೀರ್ಘ ಕಾಲದ ಸಾಂಗತ್ಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗಿರುವುದು ಪರಸ್ಪರ ಬಳಸಿಕೊಳ್ಳಲು ಅಲ್ಲ, ಪರಸ್ಪರ ಅವಲಂಬಿತರಾಗಲು ಮತ್ತು ಬದುಕನ್ನು ಹಂಚಿಕೊಳ್ಳಲು ಎಂಬ ಔದಾರ್ಯ ಮೂಡುವವರೆಗೂ ಕಾಯಬೇಕಿದೆ' ಎನ್ನುತ್ತಾರೆ ಮಧ್ಯಸ್ಥಿಕೆ ಕೇಂದ್ರದಲ್ಲಿಯೂ ಸಮಾಲೋಚಕರಾಗಿರುವ ಡಿ.ಎಂ. ಹೆಗಡೆಯವರು. 'ಪ್ರೇಮ ಮತ್ತು ಕಾಮದ ಕಾವು ಇಳಿಯುವುದರಲ್ಲಿಯೇ ಬಾಂಧವ್ಯಗಳಲ್ಲಿ ಬಿರುಕು ಮೂಡುತ್ತಿರುವುದು ವಿಪರ್ಯಾಸ ಆಗುತ್ತಿದೆ' ಎನ್ನುತ್ತಾರೆ ಅವರು.

ಹುಡುಗರಿಗೆ ಈಗ ಎರಡು ಬಗೆಯ ಆತಂಕ ಕಾಡುತ್ತಿದೆ. ಒಂದು ಸೂಕ್ತ ಸಂಗಾತಿ ಸಿಗುತ್ತಿಲ್ಲ. ಸಿಕ್ಕರೂ ಸುದೀರ್ಘವಾಗಿ ಸಾಂಗತ್ಯ ಉಳಿಯುತ್ತಿಲ್ಲ. ಸಾಂಗತ್ಯ ಉಳಿಯದೇ ಬೇರ್ಪಟ್ಟರೆ, ವಿಚ್ಛೇಧನಕ್ಕೆ ಮುಂದಾದರೆ ಪರಿಹಾರ ಮತ್ತು ಜೀವನಾಂಶ ನೀಡುವ ಕುರಿತೂ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಹೊಸದಾಗಿ ಬದುಕು ಆರಂಭಿಸಬೇಕೆಂದರೆ ಆರ್ಥಿಕವಾಗಿ ಸಾಕಷ್ಟು ಸಬಲರಾಗಿರಬೇಕು. ಈ ಒತ್ತಡದಿಂದಾಚೆ ಬರಲೆಂದೇ ಸಾಕಷ್ಟು ಜನರು ಸುದೀರ್ಘ ಸಾಂಗತ್ಯಕ್ಕಾಗಿ ಹಪಹಪಿಸುತ್ತಿದ್ದಾರೆ. ಅದಕ್ಕಾಗಿ ಅದೆಷ್ಟು ಬದಲಾಗಬೇಕಿದೆ? ಅಥವಾ ತಮ್ಮ ಬಯಕೆಗಳನ್ನು ಸಂಗಾತಿಯ ಮುಂದೆ ಯಾವ ಪದಗಳಲ್ಲಿಟ್ಟರೆ ಹೊಂದಾಣಿಕೆಗೆ ಮುಂದಾಗಬಹುದು? ಎಂಬ ಪ್ರಶ್ನೆಗಳನ್ನಿರಿಸಿಕೊಂಡೇ ಈ ಸಮಾಲೋಚಕರ ಮುಂದೆ ಹುಡುಗರು ಕೂರುತ್ತಾರೆ.

ಹುಡುಗರು ಮತ್ತು ಹುಡುಗಿಯರ ನಡುವೆ ಒಂದು ಕಂದರ ಬೆಳೆದು ಬಂದಿದೆ. ಸಹಸ್ರಮಾನದ ನಂತರ ಹುಟ್ಟಿರುವ ಹೆಣ್ಣುಮಕ್ಕಳಲ್ಲಿ ಸ್ವತಂತ್ರ ಯೋಚನೆ, ಕೆರಿಯರ್‌ ಮತ್ತು ಶಿಕ್ಷಣ, ಸ್ವಂತ ನಿರ್ಧಾರ ಮುಂತಾದ ಗುಣಗಳು ಹೆಚ್ಚಿವೆ. ಗಂಡುಮಕ್ಕಳನ್ನು ಬೆಳೆಸುವಲ್ಲಿ ಈಗಲೂ ಮನೆಯ ಜವಾಬ್ದಾರಿ ಹೊರುವಾತ, ವಂಶವನ್ನು ಮುಂದುವರಿಸುವಾತ. ಮನೆಯ ಯಜಮಾನ ಇಂಥ ಆಳುವ ಮತ್ತು ಜವಾಬ್ದಾರಿ ಹೊರುವ ಜೀವವಾಗಿಯೇ ಬೆಳೆಸಲಾಗಿದೆ. ಹುಡುಗರಿಗೂ ಧಾರಾಳಿಯಾಗುವುದು, ಹೆಣ್ಣುಮಕ್ಕಳು ಮದುವೆಯಾಗುವುದು ಬಾಂಧವ್ಯದಲ್ಲಿ ಜೊತೆಯಾಗುವುದು ಸಾಂಗತ್ಯಕ್ಕಾಗಿಯೇ ಹೊರತು ಅಡಿಯಾಳಾಗಿ ಬದುಕಲು ಅಲ್ಲ ಎಂಬ ಮನಃಸ್ಥಿತಿ ಮೂಡಿಸಬೇಕಾಗಿದೆ ಎನ್ನುವುದು ಈ ಕೋಚ್‌ಗಳ ಅಭಿಪ್ರಾಯ.

’ಬಂದಿ ಅಚ್ಛಿ ಹೈ.. ಕುಛ್‌ ಜಮ್‌ ನಹಿ ರಹಾ’ ಉತ್ತರ ಭಾರತೀಯ ಹುಡುಗರ ಸಂಕಟ ಸಾಮಾನ್ಯವಾಗಿ ಹೀಗೆಯೇ ಇರುತ್ತದಂತೆ. ’ಹುಡುಗಿ ಒಳ್ಳೆಯವಳು. ಆದರೆ ಕೂಡಿ ಬರ್ತಿಲ್ಲ’ ಏನಾದರೂ ಮಾಡಿ, ಅವಳು ಬಿಟ್ಟು ಹೋಗದಂತೆ ಇರುವುದು ಹೇಳಿಕೊಡಿ ಎನ್ನುತ್ತಾರೆ. ಕೆಲವರಿಗೆ ಇಲ್ಲಿ ಬರುವ ಮೊದಲು ಒಂದಷ್ಟು ಅಪನಂಬಿಕೆಗಳಿರುತ್ತವೆ. ನಾವಿಲ್ಲಿ ಮ್ಯಾಚ್‌ ಮೇಕಿಂಗ್‌ ಮಾಡ್ತೀವಿ ಅಂತ. ನಾವಿಲ್ಲಿ ಯಾರನ್ನೂ ಮ್ಯಾಚ್‌ ಮೇಕಿಂಗ್‌ ಮಾಡುವುದಿಲ್ಲ. ಬದಲಿಗೆ ಸಾಂಗತ್ಯಕ್ಕೆ ಸಿದ್ಧಪಡಸ್ತೀವಿ. ಯಾರು ಎಲ್ಲಿ ಹೇಗೆ ವರ್ತಿಸಬೇಕು? ಎಷ್ಟು ಮುನಿಸಿಕೊಳ್ಳಬಹುದು? ಸಂಗಾತಿ ಮುನಿಸಿಕೊಂಡರೆ ಕ್ಷಮಾಪಣೆ ಕೇಳುವುದರಿಂದ, ಒಲಿಸಿಕೊಳ್ಳುವವರೆಗೂ ದೇಹಭಾಷೆ, ಬಳಸುವ ಭಾಷೆ ಹೇಗಿರಬೇಕು, ಇವನ್ನೆಲ್ಲ ಹೇಳಿಕೊಡುತ್ತೇವೆ ಎನ್ನುತ್ತಾರೆ ಈ ಕೋಚ್‌ಗಳು.

ಈ ಇಡೀ ಬದುಕಿರುವುದು ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು. ನಮ್ಮ ನಮ್ಮ ಖಾಸಗೀತನವನ್ನು ಗೌರವಿಸುತ್ತಲೇ ಬಾಂಧವ್ಯದೊಳಗೆ ಬೆಳೆಯುವುದು ಕಷ್ಟವೇನಲ್ಲ ಎನ್ನುತ್ತಾರೆ ರಾಧಿಕಾ. ಪ್ರತಿ ತಿಂಗಳೂ ಸರಾಸರಿ 30–35 ಜನರು ಇವರ ಬಳಿ ತರಬೇತಿ ಪಡೆಯಲು ಬರುತ್ತಾರೆ. ಮತ್ತೆ ಕೆಲವು ಸೆಷನ್‌ಗಳಿಗೆ ಮುಂದುವರಿಯುತ್ತಾರೆ. ಕೆಲವು ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿಯೂ ಸಮಾಲೋಚನೆ ಮಾಡಲಾಗುತ್ತದೆ. ಅಲ್ಲಿಯೂ ಕೆಲವರು ತಮ್ಮ ಸಂಗಾತಿಯನ್ನು ಹುಡುಕಿಕೊಂಡ ಉದಾಹರಣೆಗಳೂ ಇವೆ ಎನ್ನುತ್ತಾರೆ.

ದೆಹಲಿಯ ಅರುಣವ್‌ ಗುಪ್ತಾ ಅವರ ಬಳಿಯೂ ಸಾಕಷ್ಟು ಬೆಂಗಳೂರಿಗರು ತರಬೇತಿ ಪಡೆಯುತ್ತಿದ್ದಾರಂತೆ. ಗೋಪ್ಯ ಕಾಪಾಡಬೇಕು ಎಂಬ ಮೊದಲ ಶರತ್ತಿನೊಂದಿಗೇ ದೂರದೂರಿನ ಸಮಾಲೋಚಕರ ಬಳಿ ಕನ್ನಡಿಗರು ಎಡತಾಕುತ್ತಿದ್ದಾರೆ. 

ಬಾಂಧವ್ಯಗಳಲ್ಲಿ ಬಿರುಕು ಬರಲು ಹುಡುಗರೂ ಕಾರಣವಲ್ಲ, ಹುಡುಗಿಯರೂ ಕಾರಣರಲ್ಲ. ಬಿರುಕುಗಳು ಕಂದರವಾಗಲು ಅವರವರ ನಡುವೆ ಕಡಿಮೆಯಾಗುತ್ತಿರುವ ಮಾತುಕತೆಗಳಾಗಿವೆ. ಕೆಲವೆಡೆ ಮೌನ ಔಷಧಿಯ ಕೆಲಸ ಮಾಡುತ್ತದೆ. ಇನ್ನೂ ಕೆಲವೆಡೆ ಮಾತುಗಳು ಮುಲಾಮಿನ ಕೆಲಸ ಮಾಡುತ್ತವೆ. ಕಾಲ, ಸಂದರ್ಭ, ಸನ್ನಿವೇಶಗಳು ನೀಡುವ ಹೊಡೆತದ ಗಾಯಗಳಿಗೆ ಸಕಾಲದಲ್ಲಿ ಮಾಯಿಸಿಕೊಳ್ಳುವ ಚಿಕಿತ್ಸೆಯ ಕೆಲಸವನ್ನು ಈ ಸಮಾಲೋಚಕರು ಅಥವಾ ತಮ್ಮನ್ನೇ ತಾವು ಕರೆದುಕೊಳ್ಳುವಂತಹ ರಿಲೇಷನ್‌ಶಿಪ್‌ ಕೋಚ್‌ಗಳು ಮಾಡುತ್ತಿದ್ದಾರೆ.

ತರಬೇತಿಗೆ ಶುಲ್ಕವೆಷ್ಟು? ಅಗತ್ಯವೇನು?

ರಿಲೇಷನ್‌ಶಿಪ್‌ ಕೋಚ್‌ ಆಗಿರುವ ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯ ರಾಧಿಕಾ ಮೊಹ್ಟಾ ಈ ನಿಟ್ಟಿನಲ್ಲಿ 2017ರಿಂದಲೇ ತರಬೇತಿ ನೀಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.  ಭೇಟಿ ಮತ್ತು ಸಮಾಲೋಚನೆಗೆ ₹2499ರಿಂದ ₹11,499ರವರೆಗೂ ಶುಲ್ಕ ನಿಗದಿ ಮಾಡಿದ್ದಾರೆ. ತರಬೇತಿಗೆ ಬರುವ ಯುವಕ ಯುವತಿಯರಿಗೆ ಅವರು ತಮ್ಮ ಸಂಗಾತಿಯಿಂದ ಏನು ಬಯಸುತ್ತಾರೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಬರುವಂತೆ ಮಾಡಲಾಗುತ್ತದೆ. ನಂತರ ಹೇಗೆ ವರ್ತಿಸಬೇಕು, ಮಾತಾಡಬೇಕು ಎಂಬುದನ್ನೂ ಹೇಳಿಕೊಡಲಾಗುತ್ತದೆ ಎನ್ನುತ್ತಾರೆ.

ಬಹುತೇಕ ಡೇಟಿಂಗ್‌ ಆ್ಯಪ್‌ಗಳಲ್ಲಿ ಸಿಗುವ ಸಂಗಾತಿಗಳು ಅಥವಾ ಇಷ್ಟ ಪಟ್ಟ ಸಂಗಾತಿಗಳಿಗೂ ಮುಂದುವರಿಯುವುದು ಕಷ್ಟವಾಗುತ್ತದೆ. ಬಹುತೇಕ ಸಾಂಗತ್ಯಗಳು ಟೆಕ್ಸ್‌ಟಿಂಗ್‌, ಸೆಕ್ಸ್‌ಟಿಂಗ್‌ಗಳಲ್ಲಿಯೇ ಮುಗಿದುಹೋಗುತ್ತವೆ. ನಿಜವಾಗಿಯೂ ಸುದೀರ್ಘಕಾಲದ ಸಾಂಗತ್ಯ ಬಯಸುವವರಿಗೆ, ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಳ್ಳುವ ಮತ್ತು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಹೇಗೆ ಮುಂದುವರಿಯಬಹುದು ಎಂಬುದನ್ನು ಹೇಳಿಕೊಡಲಾಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ಬ್ರೇಕಪ್ ಆಗಿ, ಬೇರ್ಪಟ್ಟು ಬಂದ ಯುವಜನರಲ್ಲಿ ಆತಂಕವೂ ಇರುತ್ತದೆ. ಮತ್ತೊಂದು ಹೊಸ ಅಧ್ಯಾಯ ಆರಂಭಿಸಲು, ಹಿಂದಿನ ಅನುಭವಗಳನ್ನು, ನೆನಪುಗಳನ್ನು ಬದಿಗಿರಿಸಿ ಮುಂದುವರೆಯುವ ಬಗೆಯನ್ನು ಹೇಳಿಕೊಡಲಾಗುತ್ತದೆ ಎಂದು ತರಬೇತಿಯ ಕುರಿತು ವಿವರಿಸಿದರು.

ಬರುವ ಎಲ್ಲರೂ ಸುದೀರ್ಘ ಸಾಂಗತ್ಯವನ್ನು ಪಡೆದಿದ್ದಾರೆ ಎಂದು ಹೇಳುವುದು ಈಗಲೇ ಕಷ್ಟವಾಗುತ್ತದೆ. ಆದರೆ, ಜಗಳ, ಕಹಿಯಾದ ನೆನಪುಗಳು, ಅತಿರೇಕದ ಹಚ್ಚಿಕೊಳ್ಳುವಿಕೆ, ಮನಸು ಮುರಿದು ಮುದುಡಿ ಹೋಗುವುದು ಇಂಥವಂತೂ ಕಡಿಮೆಯಾಗಿವೆ. ಕೇವಲ ಸಂಬಂಧಗಳಲ್ಲಿ ಅಷ್ಟೇ ಅಲ್ಲ, ವೃತ್ತಿಗೆ ಸಂಬಂಧಿಸಿದಂತೆಯೂ ಅವರ ವ್ಯಕ್ತಿತ್ವ ಬದಲಾಗುತ್ತದೆ. ಬದುಕನ್ನು ನೋಡುವ ಕ್ರಮವೇ ಬದಲಾಗುತ್ತದೆ ಎನ್ನುತ್ತಾರೆ ಅವರು.

ಸಲಿಂಗಿಗಳಾಗಿದ್ದರೆ... 

ಹೊಂದಾಣಿಕೆ ಎಂಬುದು ಕೇವಲ ಎರಡು ಸ್ವಭಾವ ವ್ಯಕ್ತಿತ್ವಗಳಲ್ಲಿ ಅಲ್ಲ. ಆರ್ಥಿಕ ಹೊಂದಾಣಿಕೆ, ಭಾವನಾತ್ಮಕ, ಔದ್ಯೋಗಿಕ ಮತ್ತು ಕೌಟುಂಬಿಕ ಹೊಂದಾಣಿಕೆಗಳೂ ಈ ’ಕಾಂಪಿಟ್ಯಾಬಿಲಿಟಿ‘ಯ ಆದ್ಯತೆಗಳಾಗಿವೆ. ಈಗ ಇದಕ್ಕೆ ಲೈಂಗಿಕ ಹೊಂದಾಣಿಕೆಯೂ ಹೊಸ ಸೇರ್ಪಡೆಯಾಗಿದೆ. ಇದೀಗ ಸಲಿಂಗಿಗಳಾಗಿದ್ದಲ್ಲಿ, ಸಾಮಾಜಿಕ ಕಟ್ಟುಪಾಡುಗಳಿಗೆ ಹೆದರಿ ಅಥವಾ ಮನೆಯ ಪ್ರತಿಷ್ಠೆಯ ಒತ್ತಡಕ್ಕೆ ಒಳಗಾಗಿ ನಾಮಕಾವಾಸ್ತೆ ಮದುವೆಯಾಗುವವರೂ ಇರುತ್ತಾರೆ. ಅವರೆಲ್ಲ ಮೊದಲೇ ತಮ್ಮ ಆದ್ಯತೆಯನ್ನು ಅರ್ಥ ಮಾಡಿಕೊಂಡರೆ ಸಂಗಾತಿಯನ್ನು ಹುಡುಕುವುದು ಸುಲಭವಾಗುತ್ತದೆ. ಈಗಾಗಲೇ ಇಂಥ ಇಬ್ಬದಿತನವನ್ನು ಅನುಭವಿಸುವ ಯುವಜನರೂ ಸಮಾಲೋಚಕರ ಬಳಿ ಹೋಗುತ್ತಿದ್ದಾರೆ. ಸಂಗಾತಿಯ ಎದುರು ತಮ್ಮ ಇಷ್ಟಗಳನ್ನು ಹೇಳುವುದು, ಹಾಗೆ ಒಪ್ಪಿಕೊಳ್ಳುವುದರಲ್ಲಿ ಯಾವ ಹಿಂಜರಿಕೆಯೂ ಇಲ್ಲದಂಥ ಧೈರ್ಯಪಡೆಯುವುದೂ ಸಾಧ್ಯವಾಗುತ್ತಿದೆ. ತಮ್ಮತನವನ್ನು, ತಮ್ಮ ಅಗತ್ಯಗಳನ್ನೂ, ತಮ್ಮ ಆದ್ಯತೆಗಳನ್ನೂ ಅರಿತುಕೊಂಡರೆ ಸಂಗಾತಿಯನ್ನು ಹುಡುಕುವುದು, ಹೊಂದಿಕೊಳ್ಳುವುದು, ಒಪ್ಪಿಕೊಳ್ಳುವುದು ಸುಲಭವಾಗುತ್ತಿವೆ ಎನ್ನುತ್ತಾರೆ ಸಮಾಲೋಚಕರು.

ಸಂಬಂಧಗಳು ಮುರಿದುಬೀಳಲು ಮುಖ್ಯವಾದ ಕಾರಣಗಳೆಂದರೆ, ಏಕತಾನತೆ ಮೂಡುವುದು, ಮದುವೆಯಾಗಬೇಕು ಎನ್ನುವ ಒಬ್ಬರ ಇಚ್ಛೆಯನ್ನು ಮತ್ತೊಬ್ಬರು ಒಪ್ಪಿಕೊಳ್ಳದೆ ಇರುವುದು, ಬದಲಾದ ಅಭಿರುಚಿಗಳಿಂದಾಗಿ ಉದ್ಯೋಗದ ಬದಲಾವಣೆಯಿಂದ ಪರಸ್ಪರ ದೂರಾಗುವುದು. ಈ ಸಂಬಂಧದಲ್ಲಿ ಬೇರ್ಪಟ್ಟವರು ಹಿಂದಿರುಗಿ ಕೂಡಿಕೊಳ್ಳುವುದು ಅಪರೂಪ. ಮೊದಲೆಲ್ಲ ವಿಚ್ಛೇದನಕ್ಕೆ ಬಂದ ದಂಪತಿಗಳಿಗೆ ಸಮಾಲೋಚನೆಯ ಮೂಲಕ ಹಾಗೂ ಮಧ್ಯಸ್ಥಿಕೆಯ ಮೂಲಕ 60% ಕುಟುಂಬವನ್ನು ಒಗ್ಗೂಡಿಸಬಹುದಾಗಿತ್ತು. ಆದರೆ ಈಗದು ಕ 30 ರಿಂದ 32 ಶೇಕಡಕ್ಕೆ ಇಳಿದಿದೆ.
-ಅಂಜಲಿ ರಾಮಣ್ಣ, ವಕೀಲರು 

-ಅಂಜಲಿ ರಾಮಣ್ಣ

ನನ್ನ ಬಳಿ ಬರುವ ಪುರುಷರಿಗೆ, ವಿವಿಧ ಸಂದರ್ಭಗಳಲ್ಲಿ ಮಹಿಳೆಯರ ಮನಸ್ಥಿತಿ ಹೇಗಿರುತ್ತದೆ ಹಾಗೂ ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಹೇಳಿಕೊಡಲಾಗುತ್ತದೆ. ಪ್ರತಿ ತಿಂಗಳು 40 ರಿಂದ 50 ಜನ ನನ್ನನ್ನು ಸಂಪರ್ಕಿಸುತ್ತಾರೆ. ವೃತ್ತಿಪರರಿಗೆ ಹಾಗೂ ಉದ್ಯಮಿಗಳಿಗೆ ಮಾತ್ರ ಹೇಳಿಕೊಡುತ್ತೇನೆ.
-ಅರುಣವ್ ಗುಪ್ತಾ, ಲೈಫ್‌ಸ್ಟೈಲ್ ಕೋಚ್

-ಅರುಣವ್ ಗುಪ್ತಾ

'ಸಂಬಂಧಗಳನ್ನು ಆದ್ಯತೆಗಳನ್ನಾಗಿ ಮಾಡಬೇಕು. ಏಕೆಂದರೆ ಜೀವನ ಎಂದರೆ ಪ್ರೀತಿಸುವುದು ಮತ್ತು ಪ್ರೀತಿಸುತ್ತಲೇ ಇರುವುದು'
-ರಾಧಿಕಾ ಮೊಹ್ಟಾ, ಮ್ಯಾಚ್ ಮೇಕರ್ ಮತ್ತು ರಿಲೇಶನ್ಸಶಿಪ್ ಕೋಚ್ ಎಚ್.ಎಸ್.ಆರ್. ಲೇಔಟ್ ಬೆಂಗಳೂರು

ರಾಧಿಕಾ ಮೊಹ್ಟಾ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.