ADVERTISEMENT

ಒಳನೋಟ: ಸೋರುವ ಕೊಠಡಿಯಲ್ಲೇ ಕಲಿಕೆ!

ಸಿದ್ದು ಆರ್.ಜಿ.ಹಳ್ಳಿ
Published 29 ಜೂನ್ 2025, 0:28 IST
Last Updated 29 ಜೂನ್ 2025, 0:28 IST
   

ಮಂಡ್ಯ: ‘ಈ ಶಾಲಾ ಕಟ್ಟಡ ನಾಲ್ಕು ದಶಕಗಳಷ್ಟು ಹಳೆಯದ್ದು. ಮಳೆ ಬಂದರೆ ಗೋಡೆಯಿಂದ ನೀರು ಕೆಳಗಿಳಿಯುತ್ತದೆ. ಕಿಟಕಿಗಳು ಹಳೆಯದಾಗಿದ್ದು, ಜೋರು ಮಳೆಯಾದರೆ ತರಗತಿಯೊಳಕ್ಕೆ ನೀರು ಸಿಡಿಯುತ್ತದೆ. ಅಡುಗೆ ಕೋಣೆಯೂ ಶಿಥಿಲವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕಟ್ಟಡವೇ ಇಲ್ಲ’

–ಸರ್ಕಾರಿ ಶಾಲೆಯ ದುಸ್ಥಿತಿ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಕಸಬಾ ಬೆಂಗ್ರೆ ಗ್ರಾಮಸ್ಥರಾದ ತಯ್ಯುಬ್ ಬೆಂಗ್ರೆ ಅವರ ಹತಾಶೆಯ ನುಡಿಗಳಿವು.

ಕಲಬುರಗಿ ನಗರದ ಎಂ.ಎಸ್‌.ಕೆ. ಮಿಲ್‌ ಕಟ್ಟಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ–2ಕ್ಕೆ ಬನ್ನಿ. ಅಲ್ಲಿನ ಪೋಷಕರ ಸಂಕಟದ ಮಾತು ಕೇಳಿ:  ‘ಗೋಡೆಗಳು ಸುಣ್ಣ– ಬಣ್ಣ ಕಾಣದೆ ಬಿರುಕು ಬಿಟ್ಟಿವೆ. ಚಾವಣಿ, ಕಿಟಕಿಗಳು ಕಿತ್ತು ಹೋಗಿವೆ, ಸಣ್ಣ ಮಳೆ ಬಿದ್ದರೂ ತೊಟ್ಟಿಕ್ಕುತ್ತವೆ. ಕೆಸರು ಗದ್ದೆಯಂತಹ ರಸ್ತೆಯನ್ನು ದಾಟಿಕೊಂಡೇ ಶಾಲೆಗೆ ಹೋಗಬೇಕಾದ ಸ್ಥಿತಿ ಮಕ್ಕಳದ್ದು..’

ADVERTISEMENT

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿರುವುದು

‘ಕೊಠಡಿಗಳು ಸೋರುತ್ತಿದ್ದು, ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಚಾವಣಿ ಶಿಥಿಲವಾಗಿರುವುದರಿಂದ, ಪಕ್ಕದ ಕೊಠಡಿಯ ಕಟ್ಟೆಯ ಮೇಲೆ ಕೂರಿಸಿ ಪಾಠ ಮಾಡುತ್ತಿದ್ದೇವೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಚೀಲಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. 

ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳು ಕುಸಿಯುವ ಸ್ಥಿತಿಯಲ್ಲಿವೆ. 1ರಿಂದ 7ನೇ ತರಗತಿವರೆಗೂ 22 ವಿದ್ಯಾರ್ಥಿಗಳಿದ್ದು, ಎರಡು ಕೊಠಡಿಗಳಲ್ಲಿ ಏಳು ತರಗತಿಗಳ ಮಕ್ಕಳಿಗೆ ಪಾಠ ನಡೆಯುತ್ತಿದೆ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ರಾಜ್ಯದಾದ್ಯಂತ ಇರುವ ಸರ್ಕಾರಿ ಶಾಲಾ ಕೊಠಡಿಗಳ ನಿಜ ಬಣ್ಣ ಹೀಗೆ ಬಯಲಾಗಿದೆ. ಹಲವು ಕಟ್ಟಡಗಳು ಸುರಕ್ಷಿತವಲ್ಲ ಎಂಬ ವಿಚಾರವು ಕಳವಳ ಮೂಡಿಸಿದ್ದು, ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ. 

ಮಳೆ ನೀರಿಗೆ ತೋಯ್ದ ಗೋಡೆಗಳು ಬಣ್ಣ ಕಳೆದುಕೊಂಡು ಬಿರುಕು ಬಿಟ್ಟಿವೆ, ಚಾವಣಿಗಳ ಸಿಮೆಂಟ್‌ ಉದುರಿ ಹೋಗಿದೆ, ಮುರಿದ ಕಿಟಕಿ–ಬಾಗಿಲುಗಳ ಸಂದಿಯಿಂದ ಸಿಡಿಯುವ ನೀರು ಮಕ್ಕಳನ್ನು ತೋಯಿಸಿದೆ, ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕೂರಿಸಿ, ಪಾಠ ಮಾಡಲು ಶಿಕ್ಷಕರು ಪರದಾಡುತ್ತಿದ್ದಾರೆ.

ಶಾಲೆ ಪ್ರಾರಂಭೋತ್ಸವದ ದಿನ ವಿದ್ಯಾರ್ಥಿಗಳನ್ನು ‘ಕಲಿಕಾ ಸಾಧಕರು’ ಎಂದು ಶಿಕ್ಷಕರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಈ ಸಂಭ್ರಮ ಕೆಲವೇ ದಿನಗಳಲ್ಲಿ ಮಳೆ ನೀರಿನಲ್ಲಿ ಕರಗಿ ಹೋಗಿದೆ. ‘ಸೋರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಬೇಡಿ’ ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರು ಆದೇಶಿಸಿದ್ದಾರೆ. ಆದರೆ, ಇರುವ ಕೊಠಡಿಗಳಲ್ಲೇ ಸುರಕ್ಷಿತವಾಗಿ ಮಕ್ಕಳಿಗೆ ಪಾಠ ಮಾಡುವುದೇ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ.

ರಾಜ್ಯದಲ್ಲಿ 46,755 ಸರ್ಕಾರಿ ಶಾಲೆಗಳಿದ್ದು, 17,258 ಶಾಲಾ ಕೊಠಡಿಗಳ ಕೊರತೆ ಇದೆ. ರಾಜ್ಯದ 5 ಜಿಲ್ಲೆಗಳಲ್ಲಿ ತಲಾ ಒಂದು ಸಾವಿರಕ್ಕೂ ಹೆಚ್ಚು ಕೊಠಡಿಗಳು ನಿರ್ಮಾಣವಾಗಬೇಕಿವೆ.

‘ನೆಲದ ಮೇಲೆ ಕುಳಿತು ಪಾಠ ಕೇಳುವ ವ್ಯವಸ್ಥೆಯನ್ನು ಮುಂದಿನ ವರ್ಷದೊಳಗೆ ಕೊನೆಗೊಳಿಸಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ಕೊಟ್ಟಿದ್ದಾರೆ. ಅದಕ್ಕೆ ಬೇಕಾಗುವ ಅನುದಾನವನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ಕೊಡಿಸಲು ಅವರು ಮುಖ್ಯಮಂತ್ರಿಯ ಮೇಲೆ ಅಗತ್ಯ ಒತ್ತಡ ಹಾಕಬೇಕಾಗಿದೆ. ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯ ಕಾರಣದಿಂದಲೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ ಎಂಬುದು ಬಹಳ ಸ್ಪಷ್ಟ. 

ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ತೆಗ್ಗಿನಕೇರಿ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ–9ರಲ್ಲಿ ಕೊಠಡಿಗಳ ಕೊರತೆಯಿಂದ ಗ್ರಾಮದೇವತೆ ಉಡಚಮ್ಮ ದೇವಸ್ಥಾನದಲ್ಲಿ ತರಗತಿ ನಡೆಸುತ್ತಿರುವ ದೃಶ್ಯ   –ಪ್ರಜಾವಾಣಿ ಚಿತ್ರ: ಅಬ್ದುಲ್‌ ರಜಾಕ್‌ ನದಾಫ್‌  

‘ಶಾಲಾ ಮೂಲಸೌಕರ್ಯವನ್ನು ಖಾತರಿಪಡಿಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲೇಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತವು ಕಳವಳ ಮೂಡಿಸುವ ಮತ್ತೊಂದು ಸಂಗತಿ. ಹಾಗಾಗಲು ಶಿಕ್ಷಕರ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ಸಿಗದಿರುವುದು ಪ್ರಮುಖ ಕಾರಣ’ ಎನ್ನುತ್ತಾರೆ ಶಿಕ್ಷಣ ತಜ್ಞರು.

ಮುಗಿಯದ ಕಾಮಗಾರಿ, ತಪ್ಪದ ಕಿರಿಕಿರಿ:

‘ಶಿಥಿಲಗೊಂಡಿರುವ ಶಾಲಾ ಕೊಠಡಿಗಳ ದುರಸ್ತಿ ಮತ್ತು ಮರು ನಿರ್ಮಾಣ ಕಾರ್ಯ ಆಮೆವೇಗದಲ್ಲಿದೆ. ಕೆಲವೆಡೆ ಅನುದಾನದ ಕೊರತೆ, ಮತ್ತೆ ಕೆಲವೆಡೆ ಅನುದಾನವಿದ್ದರೂ ದುರಸ್ತಿ ಆರಂಭಿಸದ ಅಧಿಕಾರಿಗಳ ನಿಷ್ಕಾಳಜಿ ಮತ್ತು ಕೆಲವೆಡೆ ಟೆಂಡರ್ ಪಡೆದ ಏಜೆನ್ಸಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನನೆಗುದಿಗೆ ಬಿದ್ದಿವೆ’ ಎನ್ನುತ್ತಾರೆ ಹಾವೇರಿಯ ಎಸ್‌ಎಫ್‌ಐ ಮುಖಂಡ ಬಸವರಾಜ ಭೋವಿ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 400ಕ್ಕೂ ಅಧಿಕ ಮಕ್ಕಳಿದ್ದಾರೆ. 8 ಕೊಠಡಿಗಳಷ್ಟೇ ಬಳಕೆಗೆ ಯೋಗ್ಯವಾಗಿವೆ. ಈ ಸಮಸ್ಯೆಯಿಂದ ಶಿಕ್ಷಕರು ಕೆಲ ಕಾಲ ಸಭಾಂಗಣದಲ್ಲಿ ತರಗತಿ ನಡೆಸುತ್ತಿದ್ದಾರೆ. 2017ರಲ್ಲಿ ಆರಂಭವಾದ ಹೆಚ್ಚುವರಿ ಮೂರು ಕೊಠಡಿಗಳ ಕಟ್ಟಡ ನಿರ್ಮಾಣದ ಕೆಲಸ 8 ವರ್ಷವಾದರೂ ಪೂರ್ಣಗೊಂಡಿಲ್ಲ.

ಚಾಮರಾಜನಗರ ಜಿಲ್ಲೆಯಲ್ಲಿ 906 ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲ. 327 ಕೊಠಡಿಗಳು ಸಂಪೂರ್ಣವಾಗಿ ದುರಸ್ತಿಯಾಗಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ ಸುಮಾರು 366 ಶಾಲಾ ಕೊಠಡಿಗಳ ದುರಸ್ತಿ ಮತ್ತು ನೂತನ ಕೊಠಡಿಗಳ ನಿರ್ಮಾಣಕ್ಕೆ ₹5.24 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೂ 56 ಕೊಠಡಿಗಳ ದುರಸ್ತಿಯಷ್ಟೇ ನಡೆದಿದೆ. 

‘ಶಿಕ್ಷಣ ಸಚಿವರ ಜಿಲ್ಲೆ’ಯಾದ ಶಿವಮೊಗ್ಗದಲ್ಲಿರುವ 2001 ಸರ್ಕಾರಿ ಶಾಲೆಗಳ ಪೈಕಿ, 60 ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣದ ಕೆಲಸ ಆರಂಭಿಸಲಾಗಿದೆ’ ಎಂದು ಡಿಡಿಪಿಐ ಮಂಜುನಾಥ್ ಮಾಹಿತಿ ನೀಡಿದ್ದಾರೆ.

‘ಕರಾವಳಿಯ ಹವಾಮಾನಕ್ಕೆ ಕಿಟಕಿ, ಬಾಗಿಲುಗಳು ಬೇಗ ಹಾಳಾಗುತ್ತವೆ. ಅವುಗಳೊಂದಿಗೆ ಚಾವಣಿಯ ದುರಸ್ತಿ ಮತ್ತು ನೆಲಹಾಸು ಸುಸಜ್ಜಿತಗೊಳಿಸಲು ಅನುದಾನದ ಬೇಡಿಕೆ ಸಲ್ಲಿಸಲಾಗಿದೆ. ತರಗತಿ ನಡೆಸಲು ಕೊಠಡಿಯ ಕೊರತೆ ಇಲ್ಲ. ಇದ್ದ ಕೊಠಡಿಗಳಲ್ಲೇ ಹೊಂದಾಣಿಕೆ ಮಾಡಿಕೊಂಡಿದ್ದೇವೆ’ ಎಂದು ಬಂಟ್ವಾಳದ ಶಿಕ್ಷಕರೊಬ್ಬರು ಹೇಳಿದರು.

‘ಕಲ್ಯಾಣ’ವಾಗದ ಶಾಲೆಗಳು

ಮೂಲಸೌಕರ್ಯ ಮತ್ತು ಕೊಠಡಿಗಳ ಕೊರತೆಯುಳ್ಳ ಸಾವಿರಾರು ಶಾಲೆಗಳು ‘ಕಲ್ಯಾಣ ಕರ್ನಾಟಕ’ದಲ್ಲಿವೆ. ಮುಖ್ಯಶಿಕ್ಷಕರು ಪ್ರತಿ ವರ್ಷ ಶಿಥಿಲಗೊಂಡಿರುವ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿ ನಿರ್ಮಾಣಕ್ಕೆ, ಇಲ್ಲವೇ ದುರಸ್ತಿಗೆ ಕೋರಿ ವರದಿಗಳನ್ನು ಸಲ್ಲಿಸುತ್ತಾರೆ. ಆದರೆ, ಕೆಲವೇ ಶಾಲೆಗಳಿಗೆ ‘ದುರಸ್ತಿ ಭಾಗ್ಯ’ ಸಿಗುತ್ತಿದೆ.

ಶಿಕ್ಷಣ ಭಾಗಿದಾರರ ಸಮಾವೇಶ–2024ರ ವೇಳೆ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗ ಸಿದ್ಧಪಡಿಸಿದ್ದ ವರದಿ ಪ್ರಕಾರ ಕಲ್ಯಾಣ ಕರ್ನಾಟಕದ 6,538 ತರಗತಿ ಕೊಠಡಿಗಳು (ಶೇ 76ರಷ್ಟು) ಮಳೆಗೆ ಸೋರುತ್ತಿವೆ. 5,310 ಶಾಲೆಗಳಲ್ಲಿ (ಶೇ 59ರಷ್ಟು) ಶೌಚಾಲಯ ವ್ಯವಸ್ಥೆ ಇಲ್ಲ. 1,624 ಶಾಲೆಗಳಲ್ಲಿ (ಶೇ 18) ಕುಡಿಯುವ ನೀರಿನ ಸೌಲಭ್ಯವಿಲ್ಲ. 2,466 ಶಾಲೆಗಳಲ್ಲಿ (ಶೇ 27ರಷ್ಟು) ಅಡುಗೆ ಕೊಠಡಿಗಳಿಲ್ಲ. 3,844 ಶಾಲೆಗಳಲ್ಲಿ (ಶೇ 43ರಷ್ಟು) ಅಡುಗೆಯ ಪಾತ್ರೆಗಳೂ ಇಲ್ಲ.

ಕೊಠಡಿಗಳಿವೆ; ಮಕ್ಕಳೇ ಇಲ್ಲ!

ಕೊಡಗಿನಲ್ಲಿ ಕಟ್ಟಡಗಳ ಕೊರತೆ ಇಲ್ಲ. ಆದರೆ, ಮಡಿಕೇರಿ ತಾಲ್ಲೂಕಿನ ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದ ಪಕ್ಕದ ಸಂಪಾಜೆಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೊಯನಾಡಿನಲ್ಲಿ ಶಾಲೆಯ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಇದನ್ನು ಬಿಟ್ಟರೆ, ಉಳಿದೆಡೆ ಸ್ವಂತ ಕಟ್ಟಡಗಳಿವೆ.

ಕಲಬುರಗಿ ನಗರದ ಎಂ.ಎಸ್‌.ಕೆ. ಮಿಲ್‌ನ ಶಿಥಿಲ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ   –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

‘ಹಲವೆಡೆ ಸುಸಜ್ಜಿತ ಕಟ್ಟಡಗಳಿದ್ದರೂ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪೋಷಕರ ಇಂಗ್ಲಿಷ್‌ ಮಾಧ್ಯಮದ ‌ವ್ಯಾಮೋಹವೂ ಇದಕ್ಕೆ ಕಾರಣ.  ಶಾಲಾ ದಾಖಲಾತಿ ಹೆಚ್ಚಿಸಲು ಈ ವರ್ಷದಿಂದ ಇಲ್ಲಿ ಕೆಲವೆಡೆ ಆಯ್ದ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ’ ಎನ್ನುತ್ತಾರೆ ಶಿಕ್ಷಕರು.

ದೇಗುಲ ಆಸ್ಪತ್ರೆ ಕಟ್ಟಡದಲ್ಲಿ ಕಲಿಕೆ!

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ 15 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ತೆಗ್ಗಿನಕೇರಿ ಓಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಉಡಚಮ್ಮ ದೇವಸ್ಥಾನದಲ್ಲಿ ತರಗತಿ ನಡೆಸಲಾಗುತ್ತಿದೆ. 147 ಶಾಲೆಗಳ 495 ಕೊಠಡಿಗಳನ್ನು ದುರಸ್ತಿಗೆ ಗುರುತಿಸಲಾಗಿದೆ. ಜುಲೈ 15ರೊಳಗೆ ಕೊಠಡಿಗಳನ್ನು ದುರಸ್ತಿಗೊಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಡುವು ವಿಧಿಸಿದ್ದಾರೆ.   ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೇದಿನಿ ಗ್ರಾಮ ದಟ್ಟ ಕಾಡಿನ ನಡುವಿನ ಗುಡ್ಡದ ಪ್ರದೇಶದಲ್ಲಿದೆ. ಈ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಕುಸಿದು ಬಿದ್ದು ಒಂದೂವರೆ ವರ್ಷ ಕಳೆದರೂ ಮರು ನಿರ್ಮಾಣವಾಗಿಲ್ಲ. ಪಕ್ಕದ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. 

ಕೊಠಡಿಗಾಗಿ ‘ಮೌನ ನಡಿಗೆ’; ಮುಖ್ಯಶಿಕ್ಷಕ ಅಮಾನತು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 150 ಮಕ್ಕಳು ಓದುತ್ತಿದ್ದು ಮೂರೇ ಕೊಠಡಿಗಳಿರುವುದರಿಂದ ಮಕ್ಕಳ ಕಲಿಕೆಗೆ ತೊಡಕಾಗಿದೆ. ಕೊಠಡಿಗಳ ನಿರ್ಮಾಣಕ್ಕೆ ಆಗ್ರಹಿಸಿ ಶಿಕ್ಷಕ ವೀರಣ್ಣ ಮಡಿವಾಳರ ಮೇ 27ರಂದು ಮೌನ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ನೌಕರನಾಗಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸೇವೆಯಿಂದ ಅಮಾನತುಗೊಳಿಸಿದ್ದರು. ಇದಕ್ಕೆ ರಾಜ್ಯದಾದ್ಯಂತ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ನಾನು ಯಾರಿಗೂ ಧಿಕ್ಕಾರ ಕೂಗದೆ ನನ್ನನ್ನು ಹಿಂಸಿಸಿಕೊಂಡು ಮೌನವಾಗಿ ಕಾಲ್ನಡಿಗೆ ಜಾಥಾ ಮಾಡಿದ್ದೇನೆಯೇ ಹೊರತು ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ. ಅಮಾನತುಗೊಳಿಸಿದ್ದು ನೋವು ತಂದಿದೆ. ಇದು ಸರ್ಕಾರಿ ಶಾಲೆಗಳಲ್ಲಿ ಶ್ರಮವಹಿಸಿ ದುಡಿಯುವ ಶಿಕ್ಷಕರ ಆತ್ಮಬಲ ಕುಗ್ಗಿಸುವ ತಂತ್ರ’ ಎಂದು ಶಿಕ್ಷಕ ವೀರಣ್ಣ ಮಡಿವಾಳರ ಬೇಸರ ವ್ಯಕ್ತಪಡಿಸಿದರು. 

ಸರ್ಕಾರಿ ಶಾಲೆಗೆ ದಾನಿಗಳ ದೇಣಿಗೆ

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಕರು ಹಳೇ ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ದಾನಿಗಳು ಅಪಾರ ಕೊಡುಗೆ ನೀಡುತ್ತಿರುವುದು ವಿಶೇಷ. ಕೊಪ್ಪಳ ತಾಲ್ಲೂಕಿನ ಕಾಮನೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಇಕ್ಕಟ್ಟಾದ ಏಳು ಕೊಠಡಿಗಳಿವೆ. ಹೀಗಾಗಿ ಶಾಲೆಯ ಶಿಕ್ಷಕರು ತಮ್ಮ ವೇತನದ ಒಂದಷ್ಟು ಹಣವನ್ನು ನೀಡಿ ₹1.48 ಲಕ್ಷ ಸಂಗ್ರಹಿಸಿದರು. ಬಳಿಕ ದಾನಿಗಳು ಹಾಗೂ ಜನಪ್ರತಿನಿಧಿಗಳಿಂದ ಸೇರಿ ಒಟ್ಟು ₹21 ಲಕ್ಷ ಸಂಗ್ರಹಿಸಿ ಒಂದೂವರೆ ಎಕರೆ ಜಾಗವನ್ನು ಶಾಲೆಗೆ ಖರೀದಿಸಿದ್ದಾರೆ. 

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಹೆಂಚುಗಳು ಒಡೆದು ಹೋಗಿವೆ

ಕೊಪ್ಪಳ ಸಮೀಪದ ಕುಣಿಕೇರಿ ಗ್ರಾಮದ ಸರ್ಕಾರಿ ಶಾಲೆಗೆ ಹುಚ್ಚಮ್ಮ ಚೌದ್ರಿ ಅವರು 2002ರಲ್ಲಿ ಒಂದು ಎಕರೆ ಭೂಮಿ ದಾನ ನೀಡಿದ್ದರು. 2 ವರ್ಷಗಳ ಬಳಿಕ ಕ್ರೀಡಾ ಚಟುವಟಿಕೆಗಾಗಿ ಇನ್ನೊಂದು ಎಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ನಯಾಪೈಸೆ ಗೌರವ ಧನ ಪಡೆಯದೆ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ 2023ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಕೆ.ಸೂಗೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಿದ್ಧಲಿಂಗೇಶ್ವರ ಮಠದ ಮಠಾಧಿಪತಿ ಶಿವಯೋಗಿ ಮಲ್ಲಿಕಾರ್ಜುನ ಸ್ವಾಮೀಜಿ ಎರಡು ಎಕರೆ ಜಮೀನನ್ನು ದಾನ ಮಾಡಿದ್ದಾರೆ. ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ದಾಖಲಾತಿ ಹೆಚ್ಚಿಸಲು ಶಿಕ್ಷಕರು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ವಂತ ಹಣ ಖರ್ಚು ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನವೀಕರಿಸಿದ್ದಾರೆ. 

ಉತ್ತರ ಕರ್ನಾಟಕ: ಸಾವಿರಾರು ಕೊಠಡಿ ಶಿಥಿಲ

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿರುವ ಸಾವಿರಾರು ಶಾಲಾ ಕೊಠಡಿಗಳು ಮಳೆಯಿಂದ ಶಿಥಿಲಗೊಂಡಿದ್ದು ಮಕ್ಕಳ ಕಲಿಕೆಗೆ ತೊಡಕಾಗಿದೆ.  

ಬೆಳಗಾವಿ ಜಿಲ್ಲೆಯಲ್ಲಿ 1400 ಕೊಠಡಿಗಳು ದುರಸ್ತಿಗೆ ಕಾದಿವೆ. ಭಾರಿ ಮಳೆ ಮತ್ತು ಬಿರುಗಾಳಿಯಿಂದ ಯರಗಟ್ಟಿ ತಾಲ್ಲೂಕಿನ ಗುಡುಮಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮೂರು ಕೊಠಡಿಗಳ ಚಾವಣಿ ಚನ್ನಮ್ಮನ ತಾಲ್ಲೂಕಿನ ಕಾದರವಳ್ಳಿ ದೇಮಟ್ಟಿ ಮತ್ತು ದೇವಗಾಂವ ಶಾಲೆಗಳ ಚಾವಣಿಯ ತಗಡಿನ ಶೀಟು ಹಾರಿ ಹೋಗಿವೆ.

ರಾಮದುರ್ಗ ತಾಲ್ಲೂಕಿನ ನರಸಾಪುರ ಬನ್ನೂರ ಶಿವಪೇಟೆಯ ಶಾಲೆಗಳಲ್ಲೂ ಅವಾಂತರ ಸೃಷ್ಟಿಯಾಗಿವೆ. ಬಳ್ಳಾರಿಯಲ್ಲಿ 769 ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿವೆ. ಹಾವೇರಿ ಜಿಲ್ಲೆಯ 137 ಪ್ರಾಥಮಿಕ ಶಾಲೆಗಳ 229 ಕೊಠಡಿಗಳು ಶಿಥಿಲಗೊಂಡಿವೆ. 

ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಸಮೀಪದ ಯಲೋದಹಳ್ಳಿಯ ಸರ್ಕಾರಿ ಶಾಲೆ ಜಲಾವೃತಗೊಂಡು ತರಗತಿ ಕೊಠಡಿಗಳಿಗೆ ಈಚೆಗೆ ನೀರು ನುಗ್ಗಿತ್ತು 

ಮಣ್ಣಿನ ಕಟ್ಟಡ; ಸುರಕ್ಷತೆಯೇ ಸವಾಲು

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 60 ವರ್ಷ ದಾಟಿದ ಮಣ್ಣಿನ ಗೋಡೆ ಹೊಂದಿರುವ ಹಳೇ ಶಾಲೆಗಳ ಸಂಖ್ಯೆ ಜಾಸ್ತಿ ಇದ್ದು ಈ ಶಾಲೆಗಳ ಸುರಕ್ಷತೆಯೇ ಈಗ ಸವಾಲಿನ ಕೆಲಸವಾಗಿದೆ. 274 ಶಾಲೆಗಳ 536 ಕೊಠಡಿಗಳು ಮಣ್ಣಿನ ಗೋಡೆಯಿಂದ ಕೂಡಿವೆ. ಈ ಪೈಕಿ ಹಳಿಯಾಳ ತಾಲ್ಲೂಕಿನಲ್ಲಿ ಇಂತಹ ಶಾಲೆ ಮತ್ತು ಕೊಠಡಿಗಳ ಸಂಖ್ಯೆ ಜಾಸ್ತಿ ಇದೆ. ಶಾಲಾ ಕಟ್ಟಡಗಳನ್ನು ಪ್ರತಿ ವರ್ಷ ಸಮೀಕ್ಷೆ ನಡೆಸುತ್ತಿರುವ ಶಿಕ್ಷಣ ಇಲಾಖೆ ‘263 ಮಣ್ಣಿನ ಗೋಡೆಯ ಕೊಠಡಿಗಳು ಭದ್ರವಾಗಿವೆ. ಗಾಳಿ ಮಳೆಯಿಂದ ಈ ಕೊಠಡಿಗಳಿಗೆ ಸಮಸ್ಯೆ ಆಗುವುದಿಲ್ಲ. 273 ಕೊಠಡಿಗಳು ಶಿಥಿಲ ಕೊಠಡಿಗಳಾಗಿದ್ದು ಇವುಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕು’ ಎಂದು ವರದಿ ನೀಡಿದೆ. 

ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊಠಡಿಗಳ ಕೊರತೆ ಅಷ್ಟಾಗಿ ಇಲ್ಲ. ಆದರೆ ವಿಪರೀತ ಮಳೆ–ಗಾಳಿಯ ಕಾರಣದಿಂದ ಶಾಲೆಗಳ ಕಟ್ಟಡಗಳಿಗೆ ಹಾನಿಯಾಗುವ ಪ್ರಮಾಣ ಹೆಚ್ಚಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ಎರಡೂ ಜಿಲ್ಲೆಗಳಿಂದ 1119 ಕೊಠಡಿಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ.  ಹದಗೆಟ್ಟ ಶೌಚಾಲಯಗಳು ಗದಗ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು ಶೌಚಾಲಯ ಸಮಸ್ಯೆಯಿಂದ ಬಳಲುತ್ತಿವೆ. ಇರುವ ಕಡೆಗಳಲ್ಲಿ ನಿರ್ವಹಣೆ ಮತ್ತು ನೀರಿನ ಕೊರತೆಯಿಂದಾಗಿ ಬಳಸಲಾಗದಷ್ಟು ಹದಗೆಟ್ಟಿವೆ. ಈ ಸಮಸ್ಯೆಯನ್ನು ನಿವಾರಿಸಲು ಶಾಲಾ ಶಿಕ್ಷಣ ಇಲಾಖೆ ‘ವಿಶೇಷ ಅಭಿಯಾನ’ ನಡೆಸಿ ಸ್ಥಳೀಯ ಸಂಪನ್ಮೂಲ ಬಳಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. 

ಹದಗೆಟ್ಟ ಶೌಚಾಲಯಗಳು

ಗದಗ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು ಶೌಚಾಲಯ ಸಮಸ್ಯೆಯಿಂದ ಬಳಲುತ್ತಿವೆ. ಇರುವ ಕಡೆಗಳಲ್ಲಿ ನಿರ್ವಹಣೆ ಮತ್ತು ನೀರಿನ ಕೊರತೆಯಿಂದಾಗಿ ಬಳಸಲಾಗದಷ್ಟು ಹದಗೆಟ್ಟಿವೆ. ಈ ಸಮಸ್ಯೆಯನ್ನು ನಿವಾರಿಸಲು ಶಾಲಾ ಶಿಕ್ಷಣ ಇಲಾಖೆ ‘ವಿಶೇಷ ಅಭಿಯಾನ’ ನಡೆಸಿ ಸ್ಥಳೀಯ ಸಂಪನ್ಮೂಲ ಬಳಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ. 

‘ಸರ್ಕಾರಿ ಶಾಲೆ ಸಶಕ್ತಗೊಳಿಸಲು ಯೋಜನೆ ರೂಪಿಸಿ’

‘ಸರ್ಕಾರಿ ಶಾಲೆಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿರುವುದು ದುರ್ಬಲ ಸಮುದಾಯಗಳ ಮಕ್ಕಳು. ಆ ಸಮುದಾಯಗಳ ಸಬಲೀಕರಣದ ಕೀಲಿಕೈ ಸರ್ಕಾರಿ ಶಾಲೆಗಳ ಶಿಕ್ಷಕರ ಕೈಯಲ್ಲಿದೆ. ಈ ಶಾಲೆಗಳನ್ನು ಎಲ್ಲ ರೀತಿಯಲ್ಲೂ ಸಶಕ್ತಗೊಳಿಸಲು ಬೇಕಾದ ಸಮಗ್ರ ಯೋಜನೆ ರೂಪಿಸಿ ಅದನ್ನು ಕಾಲಮಿತಿಯೊಳಗೆ ಕಾರ್ಯರೂಪಕ್ಕೆ ತರುವ ಬದ್ಧತೆಯನ್ನು ಸರ್ಕಾರ ಈಗಲಾದರೂ ಪ್ರದರ್ಶಿಸಬೇಕು’ – ಟಿ.ಎಲ್‌.ಕೃಷ್ಣೇಗೌಡ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸಿಪಿಎಂ 

‘ಶಾಲೆ ದುರಸ್ತಿಗೆ ಅನುದಾನದ ಕೊರತೆಯಿಲ್ಲ’

ವಿದ್ಯಾವಿಕಾಸ ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ಸರ್ವ ಶಿಕ್ಷಣ ಅಭಿಯಾನ ಈ ಮೂರು ಯೋಜನೆಗಳಡಿ ಸಾಕಷ್ಟು ಅನುದಾನವನ್ನು ಶಾಲೆಗಳ ದುರಸ್ತಿಗಾಗಿ ಬಿಡುಗಡೆ ಮಾಡಲಾಗುತ್ತಿದೆ. ತುರ್ತು ದುರಸ್ತಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅನುದಾನವನ್ನು ಬಳಕೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ – ತ್ರಿಲೋಕ್‌ ಚಂದ್ರ ಕೆ.ವಿ. ಆಯುಕ್ತ ಶಾಲಾ ಶಿಕ್ಷಣ ಇಲಾಖೆ 

ಶಾಲಾ ಕಟ್ಟಡ ಶಿಥಿಲವಾಗಿದ್ದು ದುರಸ್ತಿ ಮಾಡುವಂತೆ ಮೇಲಧಿಕಾರಿಗಳಿಗೆ ಪ್ರತಿ ವರ್ಷ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಸೋರುವ ಕೋಣೆಗಳಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಮಾಡುತ್ತಿದ್ದೇವೆ.
– ಹಣಮಂತ ರೇವಣ್ಣೂರ್, ಮುಖ್ಯ ಶಿಕ್ಷಕ (ಪ್ರಭಾರ), ಕಲಬುರಗಿ ನಗರದ ಎಂ.ಎಸ್‌.ಕೆ ಮಿಲ್‌ ಸರ್ಕಾರಿ ಶಾಲೆ
ಕಟ್ಟಡ ಶಿಥಿಲಗೊಂಡಿರುವುದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳನ್ನು ಸೆಳೆಯಲು ಖಾಸಗಿ ಶಾಲೆಯವರ ಕ್ರಮಗಳನ್ನು ಅನುಸರಿಸಬೇಕು.
– ಎಂ. ಲಿಂಗರಾಜು, ಮುಖಂಡ, ಸರ್ಕಾರಿ ಕನ್ನಡ ಶಾಲೆ ಉಳಿಸಿ ಹೋರಾಟ ಸಮಿತಿ ದಾವಣಗೆರೆ
ಕೊಠಡಿ ಕುಸಿದು ಅನಾಹುತ ಸಂಭವಿಸಿದಲ್ಲಿ ನಾನೇ ಹೊಣೆಗಾರನಾಗಬೇಕಾಗುವುದರಿಂದ ಶಾಲೆಯ ಪಕ್ಕ ಗೌರಸಂದ್ರ ಮಾರಮ್ಮ ದೇವಸ್ಥಾನವಿದ್ದು ಅಲ್ಲಿಗೆ ಮಕ್ಕಳನ್ನು ಕೂರಿಸಿ ಪಾಠ ಮಾಡಲು ನಿರ್ಧರಿಸಿದ್ದೇನೆ.
– ರಾಮಚಂದ್ರಪ್ಪ, ಮುಖ್ಯಶಿಕ್ಷಕ, ಸಿದ್ದನೂರು ಲಂಬಾಣಿ ಹಟ್ಟಿಯ ಸರ್ಕಾರಿ ಶಾಲೆ
ಚಿತ್ರದುರ್ಗ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಹಂದಿ ಗುಂಡಿಗಳಂತಿವೆ. ಜಿಲ್ಲೆಯ ಮಕ್ಕಳು ಉದ್ಧಾರವಾಗಬೇಕಾದರೆ ಶಾಲಾ ಕೊಠಡಿಗಳು ತುರ್ತಾಗಿ ದುರಸ್ತಿಯಾಗಬೇಕು.
– ಗೋವಿಂದ ಕಾರಜೋಳ, ಸಂಸದ (ಕೆಡಿಪಿ ಸಭೆಯಲ್ಲಿ ಹೇಳಿದ್ದು)
ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಸಂಧ್ಯಾ ಹೆಗಡೆ, ಪ್ರಮೋದ ಕುಲಕರ್ಣಿ, ಹರಿಶಂಕರ್‌ ಆರ್‌., ಅನಿತಾ ಎಚ್‌., ಮಲ್ಲಿಕಾರ್ಜುನ ನಾಲವಾರ, ಇಮಾಮ್‌ಹುಸೇನ್‌ ಗೂಡುನವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.