ಟ್ರಂಪ್ ನಡೆಯಿಂದ ಕರ್ನಾಟಕದ ಬೊಕ್ಕಸಕ್ಕೆ ಬರೆ
ಚಿತ್ರ : ಕಣಕಾಲಮಠ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ಶೇ 26ರಷ್ಟು ಪ್ರತಿ ಸುಂಕದ ಅಸ್ತ್ರ ಪ್ರಯೋಗಿಸಿದ್ದಾರೆ. ಇದರ ಬಿಸಿ ಕರ್ನಾಟಕದ ವ್ಯಾಪಾರ ವಹಿವಾಟಿಗೂ ತಟ್ಟಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದೆ.
ಕರ್ನಾಟಕದ ಆರ್ಥಿಕತೆಗೆ ಒಂದರ ಮೇಲೊಂದು ಏಟು ಬೀಳುತ್ತಿದೆ. ವಿತ್ತೀಯ ಕೊರತೆ, ಸಾಲದ ಪ್ರಮಾಣ ಏರಿಕೆ, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ- ಈ ಒಂದೊಂದೂ ಅಂಶಗಳು ಅರ್ಥ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ.
ಸದ್ಯ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ಬಳಿಕ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ವ್ಯಾಪಾರ ವಹಿವಾಟಿನ ಇಳಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಖೋತಾ ಆಗಲಿದೆ. ಟ್ರಂಪ್ ನೀತಿಯು ಖಜಾನೆಯ ಮೇಲೆ ಖಚಿತವಾಗಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರವೂ ಅನುಮೋದಿಸುತ್ತದೆ.
‘ಅಮೆರಿಕದ ಸುಂಕ ನೀತಿಯು ರಾಜ್ಯದ ಆರ್ಥಿಕತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಈಗಲೇ ಲೆಕ್ಕ ಹಾಕುವುದು ಅಥವಾ ಅಂದಾಜು ಮಾಡುವುದು ಸುಲಭದ ಕೆಲಸವಲ್ಲ. ಆದರೆ, ಇದು ಪರೋಕ್ಷವಾಗಿ ಉದ್ಯೋಗ ಮತ್ತು ನಿಯಮಿತ ವ್ಯಾಪಾರದ ಜಿಎಸ್‌ಟಿ ಸಂಗ್ರಹದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಅದನ್ನು ತಕ್ಷಣಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್.
ಟ್ರಂಪ್ ನೀತಿಯು ಕೃಷಿ ವಲಯದ ಬೆಳವಣಿಗೆ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಈ ವಲಯವು ಮಳೆ ಕೊರತೆ, ಉತ್ಪಾದನೆ ಕುಸಿತ, ಬೆಲೆ ಅಸ್ಥಿರತೆಯಿಂದಾಗಿ ಸಂಕಷ್ಟದ ಸರಮಾಲೆಗಳನ್ನು ಎದುರಿಸುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ 2023-24ರಲ್ಲಿ ಕೃಷಿ ಹಾಗೂ ಅದರ ಅವಲಂಬಿತ ವಲಯದ ಬೆಳವಣಿಗೆ ದರವು ಶೇ 4.9ರಷ್ಟು ಕುಸಿತ ಕಂಡಿತ್ತು. 2024-25ರಲ್ಲಿ ಶೇ 4ರಷ್ಟು ಏರಿಕೆ ದಾಖಲಿಸಲಿದ್ದು, ಚೇತರಿಕೆಯ ಹಳಿಗೆ ಮರಳಲಿದೆ ಎಂದು ಆರ್ಥಿಕ ಸಮೀಕ್ಷೆಯು ಅಂದಾಜಿಸಿದೆ.
ಮತ್ತೊಂದೆಡೆ ಕೃಷಿ ಉತ್ಪನ್ನಗಳ ರಫ್ತು ಬೆಳವಣಿಗೆಯು ಆಶಾದಾಯಕವಾಗಿಲ್ಲ. 2022-23ರಲ್ಲಿ ₹23,850 ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. 2023-24ರಲ್ಲಿ ₹17,500 ಕೋಟಿಗೆ ಇಳಿದಿದೆ. ಒಟ್ಟಾರೆ ಶೇ 27ರಷ್ಟು ಕಡಿಮೆಯಾಗಿದೆ. ಟ್ರಂಪ್ ನೀತಿಯು ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಕೃಷಿ ತಜ್ಞರು ಹೇಳುತ್ತಾರೆ.
ಕಾಫಿ ಕಥೆ ಏನು?
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಉತ್ಕೃಷ್ಟ ಗುಣಮಟ್ಟದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಭಾರತದಿಂದ 3.82 ಲಕ್ಷ ಟನ್‌ನಷ್ಟು ಕಾಫಿ ರಫ್ತು ಮಾಡಲಾಗಿದೆ. ಇಟಲಿ, ರಷ್ಯಾ, ಬೆಲ್ಜಿಯಂ, ಯುಎಇ, ಟರ್ಕಿ, ಅಮೆರಿಕ ಸೇರಿ ಹಲವು ರಾಷ್ಟ್ರಗಳಿಗೆ ರಫ್ತಾಗಿದೆ. ಅಮೆರಿಕಕ್ಕೆ ಅರೇಬಿಕಾ, ರೊಬಸ್ಟಾ, ಕಾಫಿ ಪುಡಿ, ರೋಸ್ಟೆಡ್ ಕಾಫಿ ಬೀಜ ಸೇರಿ ಒಟ್ಟು 9,285 ಟನ್ ರವಾನಿಸಲಾಗಿದೆ.
ಈ ಮೊದಲು ಅಮೆರಿಕದಲ್ಲಿ ಭಾರತದ ಕಾಫಿಗೆ ಸುಂಕ ವಿನಾಯಿತಿ ಇತ್ತು. ಈಗ ಪ್ರತಿ ಸುಂಕ ಅನ್ವಯಿಸಲಿದೆ. ಹಾಗಾಗಿ, ಅಲ್ಪ ಪ್ರಮಾಣದಲ್ಲಿ ಪೂರೈಸುವ ರಫ್ತುದಾರರಿಗೆ ತೊಂದರೆಯಾಗಲಿದೆ. ಅಲ್ಲದೆ, ಮತ್ತಷ್ಟು ರಫ್ತು ವಿಸ್ತರಿಸುವ ಗುರಿಗೂ ಅಡ್ಡಿಯಾಗಲಿದೆ.
‘ಭಾರತದಿಂದ ಅತಿಹೆಚ್ಚು ಪ್ರಮಾಣದಲ್ಲಿ ಯುರೋಪ್ ರಾಷ್ಟ್ರಗಳಿಗೆ ಕಾಫಿ ರಫ್ತಾಗುತ್ತದೆ. ಇದಕ್ಕೆ ಹೋಲಿಸಿದರೆ ಅಮೆರಿಕಕ್ಕೆ ಪೂರೈಸುವ ಪ್ರಮಾಣ ಕಡಿಮೆ. ಹಾಗಾಗಿ, ಟ್ರಂಪ್ ನೀತಿಯು ಅತಿಹೆಚ್ಚು ಪರಿಣಾಮ ಬೀರುವುದಿಲ್ಲʼ ಎನ್ನುತ್ತಾರೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವವೃಂದ.
ಸಂಬಾರ ಪದಾರ್ಥಗಳಿಗೆ ಬರೆ
ಕರ್ನಾಟಕದಲ್ಲಿ ಬೆಳೆಯುವ ಸಂಬಾರ ಪದಾರ್ಥಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದೆ. ಇಲ್ಲಿಂದ ಪ್ರಮುಖವಾಗಿ ಕಾಳುಮೆಣಸು, ಒಣಮೆಣಸಿನಕಾಯಿ, ಅರಿಸಿನ ಮತ್ತು ಶುಂಠಿ ರವಾನೆಯಾಗುತ್ತದೆ.
ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆ ಮತ್ತು ಶಿರಸಿ ಭಾಗದಲ್ಲಿ ಗುಣಮಟ್ಟದ ಕಾಳುಮೆಣಸು ಬೆಳೆಯಲಾಗುತ್ತದೆ. ಚಾಮರಾಜನಗರ, ಮೈಸೂರು, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳು ಉತ್ಕೃಷ್ಟ ದರ್ಜೆಯ ಅರಿಸಿನ ಬೆಳೆಯುವಲ್ಲಿ ಪ್ರಸಿದ್ಧಿ ಪಡೆದಿವೆ. ಮಲೆನಾಡು ಭಾಗದಲ್ಲಿ ಹೇರಳವಾಗಿ ಶುಂಠಿ ಬೆಳೆಯಲಾಗುತ್ತದೆ. ಈ ಪದಾರ್ಥಗಳನ್ನು ಖರೀದಿಸುವ ಸ್ಥಳೀಯ ವರ್ತಕರು ಅಮೆರಿಕಕ್ಕೆ ರಫ್ತು ಮಾಡುತ್ತಾರೆ.
ಬಳ್ಳಾರಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಉತ್ಪಾದನೆ ಹೆಚ್ಚಿದೆ. ಈಗ ಮುಕ್ತ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಜಾರಿಗೊಳಿಸಿರುವ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ ಸೌಲಭ್ಯವನ್ನು ರಾಜ್ಯದ ರೈತರಿಗೂ ವಿಸ್ತರಿಸಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರದಿಂದ ಇನ್ನೂ ಮನ್ನಣೆ ಸಿಕ್ಕಿಲ್ಲ.
ಈ ಮೊದಲು ಸಂಬಾರ ಪದಾರ್ಥಗಳ ಮೇಲೆ ಅಮೆರಿಕವು ಶೇ 5.29ರಷ್ಟು ಸುಂಕ ವಿಧಿಸುತ್ತಿತ್ತು. ಸದ್ಯ ಎಷ್ಟು ಸುಂಕ ವಿಧಿಸಲಾಗುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಉತ್ಪನ್ನಗಳು ಪ್ರತಿ ಸುಂಕದ ಪಟ್ಟಿಯಲ್ಲಿದ್ದು, ಬೆಳೆಗಾರರು ಮತ್ತು ವರ್ತಕರಲ್ಲಿ ತಳಮಳ ಸೃಷ್ಟಿಸಿದೆ.
ಈಗಾಗಲೇ, ದಾಸ್ತಾನಿರುವ ಒಣಮೆಣಸಿನಕಾಯಿ ಖರೀದಿಯಾಗಿಲ್ಲ. ವರ್ತಕರು ಖರೀದಿಗೆ ಹಿಂದೇಟು ಹಾಕಿದರೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂಬುದು ರೈತರ ಆತಂಕ.
‘ಟ್ರಂಪ್ ನೀತಿಯು ರಾಜ್ಯದ ಸಂಬಾರ ಪದಾರ್ಥಗಳ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರಫ್ತಿಗೆ ಯುರೋಪಿಯನ್ ಒಕ್ಕೂಟ ಸೇರಿ ಬೇರೆ ದೇಶಗಳನ್ನು ಅವಲಂಬಿಸುವುದು ಅನಿವಾರ್ಯವಾಗಬಹುದು’ ಎಂದು ಹೇಳುತ್ತಾರೆ ಕರ್ನಾಟಕ ರಾಜ್ಯ ಸಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ್.
‘ಸದ್ಯ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಿದೆ. ಹಾಗಾಗಿ, ರಫ್ತಿನ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ಅಲ್ಪ ಪ್ರಮಾಣದಲ್ಲಿ ರಾಜ್ಯದ ರೈತರು ಮತ್ತು ವರ್ತಕರ ಮೇಲೆ ಪರಿಣಾಮ ಬೀರಲಿದೆ. ಟ್ರಂಪ್ ನೀತಿಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಸೃಷ್ಟಿಯಾಗಿ ಡಾಲರ್ ಮೌಲ್ಯ ಕಡಿಮೆಯಾದರೆ ಹೆಚ್ಚು ಪರಿಣಾಮ ಬೀರಲಿದೆ’ ಎನ್ನುತ್ತಾರೆ ಅವರು.
ಐ.ಟಿ ವಲಯಕ್ಕೂ ಆತಂಕ
ಟ್ರಂಪ್ ಆಡಳಿತವು ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ಮೇಲೆ ಪ್ರತಿ ಸುಂಕ ವಿಧಿಸುವ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೂ, ಸುಂಕ ನೀತಿಯಿಂದ ಆಗುವ ಪರಿಣಾಮ ತಪ್ಪಿದ್ದಲ್ಲ ಎಂದು ಐ.ಟಿ ತಜ್ಞರು ಹೇಳುತ್ತಾರೆ.
ಸುಂಕ ನೀತಿಯು ಅಮೆರಿಕದ ಆರ್ಥಿಕತೆ ಬೆಳವಣಿಗೆಯ ಕುಸಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದು ಮಾಹಿತಿ ತಂತ್ರಜ್ಞಾನ ಸೇವೆಯ ಬೇಡಿಕೆ ಕುಗ್ಗಿಸುವ ಸಾಧ್ಯತೆಯಿದೆ.
ದೇಶದ ಐ.ಟಿ ಮಾರುಕಟ್ಟೆ ಮೌಲ್ಯ ₹21.31 ಲಕ್ಷ ಕೋಟಿ. ಕರ್ನಾಟಕದ ಸಾಫ್ಟ್‌ವೇರ್ ಕಂಪನಿಗಳಿಗೆ ವಿದೇಶಗಳೇ ಪ್ರಮುಖ ಆದಾಯದ ಮೂಲ. ಈ ಪೈಕಿ ಅಮೆರಿಕದಿಂದ ಅತಿಹೆಚ್ಚು ಆದಾಯ ಬರುತ್ತಿದೆ. ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯವು ಮೂರನೇ ಒಂದು ಭಾಗಕ್ಕೂ ಹೆಚ್ಚು ಪಾಲು ಹೊಂದಿದೆ.
2024–25ನೇ ಆರ್ಥಿಕ ವರ್ಷದಲ್ಲಿ ಐ.ಟಿ ಕಂಪನಿಗಳ ತ್ರೈಮಾಸಿಕ ನಿವ್ವಳ ಲಾಭವು ನಿರೀಕ್ಷಿಸಿದಷ್ಟು ತೃಪ್ತಿಕರವಾಗಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ, ಟ್ರಂಪ್ ನೀತಿಯು ಕಂಪನಿಗಳ ದೀರ್ಘಕಾಲದ ಲಾಭದ ಮೇಲೆ ಪರಿಣಾಮ ಬೀರುವುದನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳುತ್ತಾರೆ ಮಾರುಕಟ್ಟೆ ತಜ್ಞರು.
ಎಚ್–1ಬಿ ವೀಸಾ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದರಿಂದ ಈ ವೀಸಾ ಬಳಸಿಕೊಂಡು ಅಮೆರಿಕದ ಸಂಸ್ಥೆಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದ್ದ ಅವಕಾಶಕ್ಕೆ ಅಡ್ಡಿಯಾಗಲಿದೆ. ಇದು ಐ.ಟಿ ಕಂಪನಿಗಳ ಆದಾಯವನ್ನು ಕುಗ್ಗಿಸಲಿದೆ.
ಯುರೋಪಿಯನ್ ಒಕ್ಕೂಟ ಕೂಡ ಆರ್ಥಿಕತೆ ಕುಸಿತದ ಒತ್ತಡಕ್ಕೆ ಸಿಲುಕಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೊರೆ ಹೋಗಿದ್ದು, ಐ.ಟಿ ವೆಚ್ಚಕ್ಕೆ ಕಡಿವಾಣ ಹಾಕುತ್ತಿದೆ. ಇದು ರಾಜ್ಯದ ಐ.ಟಿ ವಲಯದ ಮೇಲೆ ಪರಿಣಾಮ ಬೀರಲಿದೆ.
ಆಟೊ ವಲಯಕ್ಕೆ ಪರಿಣಾಮ ಇಲ್ಲ
ಅಮೆರಿಕದಲ್ಲಿ ನಿಗದಿಪಡಿಸಿರುವ ಆಟೊಮೊಬೈಲ್ ಸುಂಕವು ಭಾರತದಲ್ಲಿ ಉಪಯೋಗಿಸುವ ಮಧ್ಯಮ ವರ್ಗದ ಟ್ಯಾಕ್ಸಿಗಳು ಮತ್ತು ವಾಣಿಜ್ಯ ಬಳಕೆಯ ವಾಹನಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ ಹೇಳಿದೆ.
‘ಟೊಯೊಟೊ, ಮಾರುತಿ, ಕಿಯಾ, ಬಿವೈಡಿ, ಎಂ.ಜಿ. ಹೆಕ್ಟರ್ ಕಂಪನಿಗಳು ದೇಶೀಯ ವಾಹನ ತಯಾರಿಕಾ ಸಾಮರ್ಥ್ಯ ಹೊಂದಿವೆ. ಈ ಕಂಪನಿಗಳ ವಾಹನಗಳು ಜನಸಾಮಾನ್ಯರ ಬಳಕೆಯ ವಾಹನಗಳಾಗಿವೆ. ದೇಶೀಯ ಮಾರುಕಟ್ಟೆ ಹಾಗೂ ದಕ್ಷಿಣ ಏಷ್ಯಾದ ವ್ಯಾಪಾರ ಮಾರುಕಟ್ಟೆಯ ವ್ಯಾಪ್ತಿಯಲ್ಲಿವೆ. ಇದರಿಂದ ಪ್ರವಾಸಿ ವಾಹನಗಳ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ’ ಎಂದು ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಹೇಳುತ್ತಾರೆ.
ತಿಂಡಿ ತಿನಿಸು
ದಕ್ಷಿಣ ಭಾರತದ ತಿಂಡಿ ತಿನಿಸುಗಳು ಅಮೆರಿಕನ್ನರಿಗೆ ಅಚ್ಚುಮೆಚ್ಚು. ಕರ್ನಾಟಕದಿಂದ ‘ರೆಡಿ ಟು ಈಟ್’ ಇನ್‌ಸ್ಟಂಟ್ ಮಿಕ್ಸ್‌ಗಳು ಸಾಕಷ್ಟು ಪ್ರಮಾಣದಲ್ಲಿ ಅಲ್ಲಿಗೆ ರಫ್ತಾಗುತ್ತವೆ. ಇವುಗಳಿಗೆ ಶೇ 5.29ರಷ್ಟು ಸುಂಕ ಅನ್ವಯಿಸುತ್ತಿತ್ತು. ಈಗ ಪ್ರತಿ ಸುಂಕದ ಬಿಸಿ ತಟ್ಟಲಿದೆ. ಸುಂಕ ಹೆಚ್ಚಾದರೆ ಅಲ್ಲಿನ ಖರೀದಿದಾರರು ಹೆಚ್ಚಿನ ಡಾಲರ್ ವ್ಯಯಿಸಬೇಕಾಗುತ್ತದೆ. ಇಲ್ಲಿ ರಫ್ತುದಾರರು ಸುಂಕ ಭರಿಸಬೇಕಿದೆ.
ಔಷಧ, ಜವಳಿಗೆ ವರದಾನ
ಟ್ರಂಪ್ ನೀತಿಯಿಂದ ರಾಜ್ಯದ ಹಲವು ವಲಯಗಳಿಗೆ ಪ್ರಯೋಜನವೂ ಆಗಲಿದೆ. ಔಷಧ ವಲಯದ ಮೇಲೆ ಪ್ರತಿ ಸುಂಕ ಹೇರಿಲ್ಲ. ಇದರಿಂದ ರಾಜ್ಯದ ಔಷಧಗಳ ರಫ್ತಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ.
ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶಕ್ಕೆ ಶೇ 37ರಷ್ಟು ಮತ್ತು ಶ್ರೀಲಂಕಾಕ್ಕೆ ಶೇ 44ರಷ್ಟು ಪ್ರತಿ ಸುಂಕ ವಿಧಿಸಲಾಗಿದೆ. ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳ ಉದ್ದಿಮೆದಾರರು ಬಾಂಗ್ಲಾಕ್ಕೆ ತೆರಳಿ ಸಿದ್ಧಉಡುಪುಗಳ ಘಟಕ ತಯಾರಿಸಿ ಅಲ್ಲಿಂದ ಅಮೆರಿಕಕ್ಕೆ ರಫ್ತು ಮಾಡುತ್ತಿದ್ದರು. ಈಗ ಅಲ್ಲಿ ರಾಜಕೀಯ ಅಸ್ಥಿರತೆ ತಲೆದೋರಿದೆ. ಮತ್ತೊಂದೆಡೆ ಸುಂಕದ ಬಿಸಿ ತಟ್ಟಿದೆ. ಹಾಗಾಗಿ, ಬಳ್ಳಾರಿಯ ಜೀನ್ಸ್, ಬೆಂಗಳೂರಿನ ಸಿದ್ದಉಡುಪು ರಫ್ತಿಗೆ ಉತ್ತೇಜನ ಸಿಗಲಿದೆ ಎಂಬುದು ಕೈಗಾರಿಕಾ ವಲಯ ಅಂದಾಜಿಸಿದೆ.
‘ಆ ಉದ್ಯಮಿಗಳು ತಾಯ್ನಾಡಿಗೆ ಮರಳುವ ಸಾಧ್ಯತೆಯಿದೆ. ಇದರಿಂದ ಸ್ಥಳೀಯ ಸಿದ್ಧಉಡುಪು ವಲಯದ ಬೆಳವಣಿಗೆಗೆ ನೆರವಾಗಲಿದೆ. ಜೊತೆಗೆ, ಉದ್ಯೋಗಗಳ ಸೃಷ್ಟಿ ಮತ್ತು ರಫ್ತಿಗೂ ಸಹಕಾರಿಯಾಗಲಿದೆ’ ಎನ್ನುತ್ತಾರೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್.
ಗ್ರಾನೈಟ್ ಉತ್ಪನ್ನಗಳಿಗೆ ಬಿಸಿ
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳಲ್ಲಿ ಗ್ರಾನೈಟ್ ಮತ್ತು ಅದರ ಉತ್ಪನ್ನಗಳು ಸೇರಿವೆ. ಕರ್ನಾಟಕದಿಂದಲೂ ಪಾಲಿಶ್ ಮಾಡಿದ ಗ್ರಾನೈಟ್‌ಗಳು, ಸ್ಲಾಬ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿದೆ.
ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನಕ್ಕೆ ಹೋಲಿಸಿದರೆ ರಾಜ್ಯದಿಂದ ಮಾಡುವ ರಫ್ತಿನ ಪ್ರಮಾಣ ಕಡಿಮೆ. ಬೆಂಗಳೂರು, ಚಾಮರಾಜನಗರದಲ್ಲಿ ಕಾರ್ಯಾಚರಿಸುವ ಕೆಲವು ಕಂಪನಿಗಳು ಪಾಲಿಶ್ ಮಾಡಿದ ಗ್ರಾನೈಟ್ ಮತ್ತು ಸ್ಲ್ಯಾಬ್‌ಗಳನ್ನು ನೇರವಾಗಿ ಅಮೆರಿಕಕ್ಕೆ ಕಳುಹಿಸುತ್ತವೆ.
ಭಾರತೀಯ ಗ್ರಾನೈಟ್ ಮತ್ತು ಕಲ್ಲು ಉದ್ಯಮದ ಒಕ್ಕೂಟದ ಪ್ರಕಾರ, ಪ್ರತಿ ತಿಂಗಳು 100 ಕಂಟೈನರ್‌ನಷ್ಟು ಗ್ರಾನೈಟ್ ಅಮೆರಿಕಕ್ಕೆ ರಫ್ತಾಗುತ್ತದೆ. ಸರಿ ಸುಮಾರು 2,000 ಟನ್‌ನಿಂದ 4,000 ಟನ್‌ನಷ್ಟು ರವಾನೆಯಾಗುತ್ತದೆ. ಪ್ರತಿ ತಿಂಗಳು ₹10 ಕೋಟಿ ಮೌಲ್ಯದ ಗ್ರಾನೈಟ್, ಸ್ಲ್ಯಾಬ್‌ಗಳನ್ನು ಕಳುಹಿಸಲಾಗುತ್ತದೆ. ವಾರ್ಷಿಕವಾಗಿ ₹120 ಕೋಟಿ ವಹಿವಾಟು ನಡೆಯುತ್ತದೆ. ಚಾಮರಾಜನಗರದಿಂದ ರಫ್ತಾಗುವ ಕರಿಕಲ್ಲು ಸ್ಮಾರಕಗಳ ನಿರ್ಮಾಣದಲ್ಲಿ ಬಳಕೆಯಾಗುತ್ತದೆ.
‘ಇಲ್ಲಿಯವರೆಗೂ ಅಮೆರಿಕವು ಗ್ರಾನೈಟ್, ಕಲ್ಲಿನ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಿರಲಿಲ್ಲ. ಈಗ ಪ್ರತಿ ಸುಂಕ ಹೇರಲು ನಿರ್ಧರಿಸುವುದರಿಂದ ನಮ್ಮ ಉತ್ಪನ್ನಗಳ ಮೇಲೆ ಸುಂಕ ಬೀಳುವುದು ಖಚಿತ’ ಎಂದು ಭಾರತೀಯ ಗ್ರಾನೈಟ್ ಮತ್ತು ಕಲ್ಲು ಉದ್ಯಮ ಒಕ್ಕೂಟದ ಅಧ್ಯಕ್ಷ ಎಸ್. ಕೃಷ್ಣಪ್ರಸಾದ್ ಹೇಳುತ್ತಾರೆ.
‘ನಿಖರವಾಗಿ ಎಷ್ಟು ಸುಂಕ ಹಾಕಬಹುದು ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಸುಂಕ ಹಾಕಿದರೆ ಅಲ್ಲಿ ಗ್ರಾನೈಟ್ ಬೆಲೆ ಹೆಚ್ಚಾಗಬಹುದು. ಇದರಿಂದ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಆಗ ನಮಗೆ ಶೇ 30ರಿಂದ 40ರಷ್ಟು ನಷ್ಟವಾಗಬಹುದು’ ಎಂಬುದು ಅವರ ವಿವರಣೆ.
ಟ್ರಂಪ್ ಆಡಳಿತವು ಗ್ರಾನೈಟ್ ಮೇಲೆ ಸುಂಕ ವಿಧಿಸಲು ಮುಂದಾಗಿರುವುದು ನಷ್ಟ ಉಂಟು ಮಾಡಬಹುದು ಎಂದು ನಂಬಲಾಗಿದ್ದರೂ, ಅದು ರಾಜ್ಯದ ಪಾಲಿಗೆ ಅನುಕೂಲಕರ ಆಗುವ ಸಾಧ್ಯತೆಯಿದೆ.
ಗ್ರಾನೈಟ್, ಕಲ್ಲಿನ ಉದ್ಯಮದಲ್ಲಿ ನಮಗೆ ಪೈಪೋಟಿ ನೀಡುತ್ತಿರುವುದು ಚೀನಾ. ಅದರ ಮೇಲೆ ಶೇ 54ರಷ್ಟು ಸುಂಕ ವಿಧಿಸಲಾಗಿದೆ. ಹಾಗಾಗಿ, ಅಮೆರಿಕದಲ್ಲಿ ಚೀನಾದ ಗ್ರಾನೈಟ್ ಹಾಗೂ ಅದರ ಉತ್ಪನ್ನಗಳು ದುಬಾರಿಯಾಗಲಿವೆ. ಇದರಿಂದ ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ.
‘ಚೀನಾದ ಉತ್ಪನ್ನಗಳಿಗೆ ಹೋಲಿಸಿದರೆ ಕಡಿಮೆ ಪ್ರತಿ ಸುಂಕ ವಿಧಿಸಿರುವುದರಿಂದ ಭಾರತದ ಉತ್ಪನ್ನಗಳ ದರ ಕಡಿಮೆ ಇರಲಿವೆ. ಹಾಗಾಗಿ, ಅಲ್ಲಿನ ಗ್ರಾಹಕರು ಕರ್ನಾಟಕ ಸೇರಿ ಇತರೆ ರಾಜ್ಯಗಳ ಗ್ರಾನೈಟ್ ಮತ್ತು ಕಲ್ಲಿನ ಉತ್ಪನ್ನಗಳನ್ನು ಖರೀದಿಸಲು ಮುಂದಾಗಬಹುದು. ಹೀಗಾದರೆ, ನಮ್ಮ ಉದ್ಯಮಕ್ಕೆ ಅನುಕೂಲವಾಗಲಿದೆ’ ಎಂದು ವಿವರಿಸುತ್ತಾರೆ ಕೃಷ್ಣಪ್ರಸಾದ್.
ಕೆಲವು ಸರಕುಗಳ ರಫ್ತು ಇಳಿಕೆಯಾಗಬಹುದು. ಐ.ಟಿ ರಫ್ತಿನ ಮೇಲೆ ಶೂನ್ಯ ಸುಂಕ ಇರುವುದರಿಂದ ಈ ವಲಯದ ತೆರಿಗೆಯಿಂದ ಬರುವ ಆದಾಯದಲ್ಲಿ ಇಳಿಕೆಯಾಗುವುದಿಲ್ಲಪಿ.ಸಿ. ಜಾಫರ್, ಕಾರ್ಯದರ್ಶಿ ಹಣಕಾಸು ಇಲಾಖೆ
ಶಿರಸಿಯ ಕಾಳುಮೆಣಸಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಅಮೆರಿಕದ ಪ್ರತಿ ಸುಂಕದಿಂದಾಗಿ ದೀರ್ಘಾವಧಿಯಲ್ಲಿ ಕಾಳುಮೆಣಸು ಹಾಗೂ ಅದರ ಮೌಲ್ಯವರ್ಧಿತ ಉತ್ಪನ್ನವಾದ ಬೋಳಕಾಳು (ಬಿಳಿಕಾಳು) ಮೇಲೆ ಆಗುವ ಪರಿಣಾಮವನ್ನು ತಳ್ಳಿಹಾಕುವಂತಿಲ್ಲಗಜಾನನ ಹೆಗಡೆ, ಕಾಳುಮೆಣಸು ವರ್ತಕ ಶಿರಸಿ
ಪಾಲಿಮರ್ ಉತ್ಪನ್ನಗಳ ಮೇಲಿನ ನಿರ್ದಿಷ್ಟ ಸುಂಕ ಕುರಿತು ಸ್ಪಷ್ಟವಾಗಿ ಹೇಳಿಲ್ಲ. ಆದರೆ ಭಾರತದ ಪಾಲಿಮರ್ ಉತ್ಪನ್ನಗಳ ರಫ್ತಿನ ಮೇಲೆ ಪ್ರತಿ ಸುಂಕವು ಗಮನಾರ್ಹ ಪರಿಣಾಮ ಬೀರಲಿದೆವಿ. ವಿಜಯಕುಮಾರ್ ಅಧ್ಯಕ್ಷ ಕರ್ನಾಟಕ ರಾಜ್ಯ ಪಾಲಿಮರ್ಸ್ ಅಸೋಸಿಯೇಷನ್
ರಫ್ತು ಆದಾಯ ಇಳಿಕೆ
ಭಾರತದಿಂದ ಅಮೆರಿಕಕ್ಕೆ ಔಷಧಗಳ ರಫ್ತು ಪ್ರಮಾಣವು ಶೇ 14ರಷ್ಟಿದ್ದು ಪ್ರತಿ ಸುಂಕದಿಂದ ಈ ವಲಯವನ್ನು ಹೊರಗಿಡಲಾಗಿದೆ. ಹಾಗಾಗಿ ಆಮದು ಚಟುವಟಿಕೆಯು ಮತ್ತಷ್ಟು ಬಲಗೊಳ್ಳಲಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಯಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳುತ್ತಾರೆ. ಈ ಮೊದಲು ಹರಳು ಮತ್ತು ಚಿನ್ನಾಭರಣ ವಲಯಕ್ಕೆ ಸುಂಕ ಇರಲಿಲ್ಲ. ಈಗ ಪ್ರತಿ ಸುಂಕದ ಬಿಸಿ ಮುಟ್ಟಲಿದೆ. ಇದು ರಫ್ತು ವಹಿವಾಟಿನ ಮೇಲೆ ಪೆಟ್ಟು ಬೀಳಲಿದೆ ಎಂಬುದು ಅವರ ವಿವರಣೆ. 2022–23ರಲ್ಲಿ ಭಾರತವು ಅಮೆರಿಕಕ್ಕೆ ₹5.55 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್ ರಫ್ತು ಮಾಡಿದೆ. ಈ ಪೈಕಿ ಕರ್ನಾಟಕದ ಪಾಲು ಶೇ 42ರಷ್ಟಿದೆ. ಇಲ್ಲಿಂದ ಕಾಫಿ ಕಚ್ಚಾ ರೇಷ್ಮೆಯೂ ರವಾನೆಯಾಗುತ್ತದೆ. ಇವುಗಳಿಗೆ ಸುಂಕ ವಿನಾಯಿತಿ ಇತ್ತು. ಈಗ ಪ್ರತಿ ಸುಂಕ ಅನ್ವಯಿಸಲಿದೆ. ಇದರಿಂದ ರಾಜ್ಯದ ಆದಾಯಕ್ಕೆ ಬರೆ ಬೀಳಲಿದೆ ಎನ್ನುತ್ತಾರೆ ಅವರು. ರಾಜ್ಯದಿಂದ ಪೆಟ್ರೋಲಿಯಂ ಉತ್ಪನ್ನಗಳು ಸಹ ಪೂರೈಕೆಯಾಗುತ್ತವೆ. ಇವುಗಳಿಗೆ ಶೇ 6.67ರಷ್ಟು ಸುಂಕ ವಿಧಿಸಲಾಗುತ್ತಿತ್ತು. ಈಗ ಪ್ರತಿ ಸುಂಕದ ವ್ಯಾಪ್ತಿಗೆ ಬರುವುದರಿಂದ ರಾಜ್ಯದ ರಫ್ತು ಆದಾಯ ಕಡಿಮೆಯಾಬಹುದು ಎಂಬುದು ಅವರ ವಿವರಣೆ.
ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶಕ್ಕೆ ವಿಧಿಸಿರುವ ಪ್ರತಿ ಸುಂಕದ ಪ್ರಮಾಣ ಹೆಚ್ಚಿದೆ. ಇದು ಕರ್ನಾಟಕ ಸೇರಿ ದೇಶದ ಇತರೆ ರಾಜ್ಯಗಳಲ್ಲಿ ಸಿದ್ಧಉಡುಪುಗಳ ರಫ್ತು ಉತ್ತೇಜನಕ್ಕೆ ವರದಾನವಾಗಲಿದೆಎಂ.ಜಿ. ರಾಜಗೋಪಾಲ್ ಅಧ್ಯಕ್ಷ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ
ಸಮುದ್ರ ಆಹಾರ ಉತ್ಪನ್ನ ವಹಿವಾಟಿಗೂ ಪ್ರಹಾರ
ಭಾರತದಿಂದ ವಿದೇಶಕ್ಕೆ ಸೀಗಡಿ ಮೃದ್ವಂಗಿ ಬೊಂಡಾಸ್ (ಸ್ಕ್ವಿಡ್) ವಿವಿಧ ಜಾತಿಯ ಮೀನುಗಳು ರಫ್ತಾಗುತ್ತಿವೆ. ಸಮುದ್ರದ ಮೀನುಗಳು ಹಾಗೂ ಅವುಗಳ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಅಮೆರಿಕವೂ ಒಂದಾಗಿದೆ. 2023–24ರಲ್ಲಿ 17.82 ಲಕ್ಷ ಟನ್ (ವಾರ್ಷಿಕ ವಹಿವಾಟು ಮೌಲ್ಯ ₹60524 ಕೋಟಿ) ಉತ್ಪನ್ನಗಳು ರಫ್ತಾಗಿವೆ. ಈ ಪೈಕಿ 3.29 ಲಕ್ಷ ಟನ್ ಉತ್ಪನ್ನಗಳು ಅಮೆರಿಕಕ್ಕೆ ರಫ್ತಾಗಿದ್ದು ಇದರ ಮೌಲ್ಯ ₹20892 ಕೋಟಿ ಆಗಿದೆ. ಮಂಗಳೂರಿನಿಂದ ಇದೇ ಅವಧಿಯಲ್ಲಿ 2.29 ಲಕ್ಷ ಟನ್‌ನಷ್ಟು ಉತ್ಪನ್ನಗಳು ರಫ್ತಾಗಿದ್ದು ಇದರ ಮೌಲ್ಯ ₹3720 ಕೋಟಿಯಾಗಿದೆ. ಅಮೆರಿಕದ ಸುಂಕ ನೀತಿಯು ಈ ಉತ್ಪನ್ನಗಳ ರಫ್ತಿನ ಮೇಲೂ ಪರಿಣಾಮ ಬೀರಲಿದೆ ಎನ್ನುತ್ತಾರೆ ಉದ್ಯಮಿಗಳು. ‘ನಾವು ಹಲವು ವರ್ಷಗಳಿಂದ ಮೀನಿನ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು ಅಮೆರಿಕಕ್ಕೂ ರಫ್ತು ಮಾಡುತ್ತೇವೆ. ಪ್ರತಿ ಸುಂಕ ನೀತಿಯು ನಮ್ಮ ವಹಿವಾಟಿನ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಆದರೆ ಎಷ್ಟರಮಟ್ಟಿಗೆ ಹೊಡೆತ ನೀಡುತ್ತದೆ ಎಂಬುದನ್ನು ಈಗಲೇ ಊಹಿಸಲಾಗದು’ ಎಂದು ಮಂಗಳೂರಿನ ಆಮ್ಸನ್ ಸೀಫುಡ್ಸ್ ಸಂಸ್ಥೆಯ ಆಡಳಿತ ಪಾಲುದಾರ ಸೋನಿತ್ ವಿವರಿಸುತ್ತಾರೆ. ‘ಪ್ರತಿ ಸುಂಕ ಜಾರಿಯ ಬಳಿಕ ಅಲ್ಲಿನ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಗಳ ದರ ಹೆಚ್ಚಿಸಬೇಕಾಗುತ್ತದೆ. ಗುಣಮಟ್ಟ ಕಾಯ್ದುಕೊಂಡರೆ ದರ ಹೆಚ್ಚಾದ ಬಳಿಕವೂ ಅಲ್ಲಿನ ಗ್ರಾಹಕರು ಉತ್ಪನ್ನವನ್ನು ಇಷ್ಟಪಡಬಹುದು ಅಥವಾ ಖರೀದಿಗೆ ಹಿಂದೇಟು ಹಾಕಬಹುದು. ನಮ್ಮಿಂದ ಮೀನಿನ ಉತ್ಪನ್ನಗಳನ್ನು ಖರೀದಿಸುತ್ತಿರುವ ಸಂಸ್ಥೆಯು ಈಗಾಗಲೇ ಪ್ರತಿ ಸುಂಕದಿಂದ ಮಾರುಕಟ್ಟೆ ಮೇಲಾಗುವ ಪರಿಣಾಮ ತಗ್ಗಿಸಲು ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ’ ಎನ್ನುತ್ತಾರೆ ಅವರು.
ಪೂರಕ ಮಾಹಿತಿ: ಎಸ್. ರವಿಪ್ರಕಾಶ್, ಸೂರ್ಯನಾರಾಯಣ ವಿ., ಪ್ರವೀಣ್ ಪಾಡಿಗಾರ್
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.