ADVERTISEMENT

ಕಾಶ್ಮೀರಿ ಪಂಡಿತರ ಹತ್ಯೆ, ಮುಸ್ಲಿಮರ ಮೇಲೆ ದಾಳಿ ಎರಡೂ ಒಂದೇ: ಸಾಯಿ ಪಲ್ಲವಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 10:32 IST
Last Updated 16 ಜೂನ್ 2022, 10:32 IST
ಸಾಯಿ ಪಲ್ಲವಿ
ಸಾಯಿ ಪಲ್ಲವಿ    

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಅವರ ಒಂದು ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಪರ ಮತ್ತು ವಿರೋಧವಾಗಿ ಚರ್ಚೆಗಳು ನಡೆಯುತ್ತಿವೆ.

ಬುಧವಾರ ಸಂಜೆಯಿಂದಲೇ ಟ್ವಿಟರ್‌ನಲ್ಲಿ #saipallavi ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗಿದೆ. ಅವರ ಹೇಳಿಕೆಯನ್ನು ಹಲವರು ವಿರೋಧ ಮಾಡಿದರೆ, ಮತ್ತೆ ಕೆಲವರು ಭೇಷ್‌ ಎನ್ನುತ್ತಿದ್ದಾರೆ.

ಸಾಯಿ ಪಲ್ಲವಿ ಸಾಧ್ಯವಾದಷ್ಟು ವಿವಾದಗಳಿಂದ ದೂರ ಇರುತ್ತಾರೆ. ಇದೇ ಮೊದಲ ಸಲ ಅವರು ವಿವಾದಕ್ಕೆ ಸಿಲುಕಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್‘ ಸಿನಿಮಾ ಬಗ್ಗೆ ಅವರು ಮಾತನಾಡಿರುವುದರಿಂದ ವಿವಾದ ಸೃಷ್ಟಿ ಆಗಿದೆ.

ADVERTISEMENT

ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಚಿತ್ರ ಬಿಡುಗಡೆ ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ಅವರುಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಚಾರ ಸಂಬಂಧ ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ.

ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿದಿ ಕಾಶ್ಮೀರಿ ಫೈಲ್ಸ್ ಸಿನಿಮಾದ ಬಗ್ಗೆ ನಿರ್ಭೀತಿಯಿಂದ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಕಾಶ್ಮೀರಿ ಪಂಡಿತರ ಹತ್ಯೆಯನ್ನು ಖಂಡಿಸಿರುವ ಸಾಯಿ ಪಲ್ಲವಿ, ಗೋವು ಸಾಗಿಸುವ ಮುಸ್ಲಿಂ ಚಾಲಕರ ಮೇಲಿನ ಹಲ್ಲೆ, ಹತ್ಯೆಯನ್ನು ಖಂಡಿಸಿದ್ದಾರೆ. ಈ ರೀತಿ ಮಾಡುವುದು ಮನುಷ್ಯತ್ವವಲ್ಲ, ನಾಗರೀಕತೆಯಲ್ಲಿರುವ ನಾವು ಒಳ್ಳೆಯ ಮನುಷ್ಯರಾಗಬೇಕು ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಸದ್ಯ ಅವರ ಈ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ.

ನೀವು ಸತ್ಯವನ್ನೇ ಹೇಳಿದ್ದೀರಾ, ನಿಮ್ಮ ಎದೆಗಾರಿಕೆ ಮೆಚ್ಚುವಂತಹದ್ದು ಎಂದು ಹಲವಾರು ಜನರು ಟ್ವೀಟ್‌ ಮಾಡಿ ಸಾಯಿ ಪಲ್ಲವಿಗೆ ಭೇಷ್‌ ಎಂದು ಹೇಳುತ್ತಿದ್ದಾರೆ.

ಕಾಶ್ಮೀರ ಪಂಡಿತರ ಹತ್ಯೆಯನ್ನು, ಗೋವು ಸಾಗಿಸುವ ಮುಸ್ಲಿಂ ವ್ಯಕ್ತಿಗಳ ಮೇಲಿನ ಹತ್ಯೆ, ಹಿಂಸಾಚಾರಕ್ಕೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಸಾಕಷ್ಟು ಜನರು ಟ್ವೀಟ್‌ಗಳ ಮೂಲಕ ಸಾಯಿ ಪಲ್ಲವಿ ವಿರುದ್ಧ ಕಿಡಿ ಕಾರಿದ್ದಾರೆ.

ಸಾಯಿ ಪಲ್ಲವಿ ಅವರ ಈ ಹೇಳಿಕೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ ವಿರೋಧದ ಚರ್ಚೆಗಳು ಮುಂದುವರೆದಿವೆ. ಈ ವಿಚಾರ ಕುರಿತಂತೆ ಸಾಯಿ ಪಲ್ಲವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೇಳಿಕೆಯನ್ನು ಪೋಸ್ಟ್‌ ಮಾಡಿಲ್ಲ.

‘ವಿರಾಟ ಪರ್ವಂ’

ಟಾಲಿವುಡ್‌ನ ರಾನಾ ದಗ್ಗುಬಾಟಿ ಜೊತೆ ಸಾಯಿ ಪಲ್ಲವಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಟಾಲಿವುಡ್‌ನಲ್ಲಿ‌‌‌‌ ನಿರೀಕ್ಷೆ ಹೆಚ್ಚಿಸಿದೆ.

ಸಾಯಿಪಲ್ಲವಿ ಈ ಸಿನಿಮಾದಲ್ಲಿ ನಕ್ಸಲೈಟ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಟನಾ ಸಾಮರ್ಥ್ಯ ಬೇಡುವ‌ ಈ ಸಿನಿಮಾಗೆ ಆಕೆಯದ್ದು‌ ಪ್ರಧಾನ ಪಾತ್ರ. ಇದರಲ್ಲಿ ಅವರು ನಾಯಕ ರಾನಾ ದಗ್ಗುಬಾಟಿಯ ಪ್ರೇಯಸಿಯಾಗಿ ನಂತರನಕ್ಸಲೈಟ್ ಆಗುತ್ತಾರೆ ಎಂದುಚಿತ್ರತಂಡ ಹೇಳಿದೆ.

ವೇಣು ಉಡುಗಾಲ ನಿರ್ದೇಶನದ ಈ ಸಿನಿಮಾದ ಪೋಸ್ಟರ್‌ಗಳು, ಟ್ರೈಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದೆ. ಸುರೇಶ್ ಪ್ರೊಡಕ್ಷನ್ ಮತ್ತು ಶ್ರೀಲಕ್ಷ್ಮಿ ವೆಂಕಟೇಶ್ವರ‌ ಸಿನಿಮಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಜೂನ್‌ 17 ರಂದು ಈ ಸಿನಿಮಾ ದೇಶದ ನಾನಾ ಭಾಗಗಳಲ್ಲಿನ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.