ADVERTISEMENT

ಆಳ –ಅಗಲ: 50 ವರ್ಷಗಳ ಬಳಿಕ ಮತ್ತೆ ಚಂದಿರನ ಜಪ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆ
ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆ   

50 ವರ್ಷಗಳ ಬಳಿಕ ಚಂದಿರನ ಅಂಗಳಕ್ಕೆ ಮನುಷ್ಯನನ್ನು ಪುನಃ ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ಅಮೆರಿಕ ಸನ್ನದ್ಧವಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಇದಕ್ಕಾಗಿ ‘ಆರ್ಟೆಮಿಸ್ ಯೋಜನೆ’ಯನ್ನು ರೂಪಿಸಿದೆ. ಮೂರು ಹಂತಗಳ ಈ ಯೋಜನೆಯ ಮೊದಲ ಚರಣ ಆಗಸ್ಟ್ 29ರಿಂದ ಆರಂಭವಾಗಿದೆ. ಮೊದಲ ಯೋಜನೆ ಯಶಸ್ವಿಯಾದಲ್ಲಿ, ಚಂದ್ರನ ಅಂಗಳಕ್ಕೆ ಮತ್ತೆ ಮನುಷ್ಯನನ್ನು ಕಳುಹಿಸುವ ಯತ್ನ ಸಫಲವಾಗಲಿದೆ. 1972ರಲ್ಲಿ ಅಪೋಲೊ–17 ನೌಕೆಯ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಕೊನೆಯದಾಗಿ ಇಳಿದಿದ್ದರು. ಇದಾದ ಐವತ್ತು ವರ್ಷಗಳಲ್ಲಿ ಮತ್ತೆ ಅಂತಹ ಯೋಜನೆಯನ್ನು ನಾಸಾ ಕೈಗೆತ್ತಿಕೊಂಡಿದೆ.

ಏನಿದು ಆರ್ಟೆಮಿಸ್
ಒಟ್ಟು ಮೂರು ಹಂತಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಮನುಷ್ಯನು ಚಂದ್ರನ ಮೇಲೆ ಇಳಿಯಲು ‘ಆರ್ಟೆಮಿಸ್–1’ ಯೋಜನೆ ವೇದಿಕೆ ಒದಗಿಸಲಿದೆ. ಅಂದರೆ, ಮೊದಲ ಚರಣದಲ್ಲಿ (ಆರ್ಟೆಮಿಸ್–1) ಗಗನಯಾತ್ರಿಗಳು ಪ್ರಯಾಣಿಸುತ್ತಿಲ್ಲ. ಆರ್ಟೆಮಿಸ್–2 ಯೋಜನೆಯು 2024ರ ಆರಂಭದಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಈ ನೌಕೆಯಲ್ಲಿ ಗಗನಯಾನಿಗಳು ಪ್ರಯಾಣಿಸಲಿದ್ದಾರೆ.

ಮೊದಲ ಯೋಜನೆಯಲ್ಲಿ ಮನುಷ್ಯನ ಬದಲಾಗಿ ಮನುಷ್ಯಾಕೃತಿಗಳನ್ನು ಕಳುಹಿಸಲಾಗುತ್ತಿದ್ದು, ಇವು ಕಂಪನ, ವಿಕಿರಣ ಹಾಗೂ ವೇಗವರ್ಧನೆಯನ್ನು ಎಷ್ಟರ ಮಟ್ಟಿಗೆ ತಾಳಿಕೊಳ್ಳುತ್ತವೆ ಎಂದು ಪರೀಕ್ಷಿಸಲಾಗುತ್ತದೆ.ಈವರೆಗೆ ನೋಡಿರದ ಚಂದ್ರನ ಮೇಲ್ಮೈ ಅನ್ನು ಅರಿಯುವುದು ಈ ಯೋಜನೆಯ ಉದ್ದೇಶವಾಗಿದ್ದು, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ ಎಂದು ನಾಸಾ ತಿಳಿಸಿದೆ. 42 ದಿನಗಳ ಸುದೀರ್ಘ ಯೋಜನೆಯು ಅಂದುಕೊಂಡಂತೆ ಪೂರ್ಣಗೊಂಡಲ್ಲಿ, 2022ರ ಅಕ್ಟೋಬರ್ 10ರಂದು ನೌಕೆಯು ಚಂದ್ರನ ಅಂಗಳದಿಂದ ಕ್ಯಾಲಿಫೋರ್ನಿಯಾ ಸಮೀಪ ಕರಾವಳಿಗೆ ಬಂದಿಳಿಯಲಿದೆ.

ADVERTISEMENT

ಆರ್ಟೆಮಿಸ್–1 ಏಕೆ ಮಹತ್ವದ್ದು?

ಚಂದ್ರನತ್ತ ಪ್ರಯಾಣಿಸುವ ಬಾಹ್ಯಾಕಾಶ ಉಡ್ಡಯನ ವ್ಯವಸ್ಥೆ (ಎಸ್‌ಎಲ್‌ಎಸ್) ಹಾಗೂ ಒರಾಯನ್ ಕ್ಯಾಪ್ಸೂಲ್‌ಗಳ ಸಾಮರ್ಥ್ಯ, ಉಷ್ಣಾಂಶ ತಡೆದುಕೊಳ್ಳುವ ಗುಣ ಮೊದಲಾದ ಅಂಶಗಳನ್ನು ತಿಳಿದುಕೊಳ್ಳಲು ಆರ್ಟೆಮಿಸ್–1 ಯೋಜನೆ ನೆರವಾಗಲಿದೆ. ಚಂದ್ರನಿಂದ ಭೂಮಿಗೆ ವಾಪಸಾಗುವ ಪ್ರಾತ್ಯಕ್ಷಿಕೆಯನ್ನೂ ಇದು ಕೈಗೊಳ್ಳಲಿದೆ. ಇದರ ಫಲಿತಾಂಶಗಳು ಆರ್ಟೆಮಿಸ್–2 ಹಾಗೂ ಆರ್ಟೆಮಿಸ್–3 ಯೋಜನೆಗಳಲ್ಲಿ ಮಾನವನನ್ನು ಚಂದ್ರನ ಅಂಗಳಕ್ಕೆ ಕಳುಹಿಸಲು ಸ್ಪಷ್ಟ ತಳಹದಿ ಹಾಕಿಕೊಡುತ್ತವೆ.

ಮೊದಲ ಬಾರಿ ಮಹಿಳೆ

2024ರಲ್ಲಿ ನಾಸಾ ಕೈಗೊಳ್ಳಲು ಉದ್ದೇಶಿಸಿರುವ ಆರ್ಟೆಮಿಸ್–2 ಯೋಜನೆಯಲ್ಲಿ ಚಂದ್ರನ ಅಂಗಳದಲ್ಲಿ ಇಳಿಯುವ ನೌಕೆಯಲ್ಲಿ ಮಹಿಳಾ ಗಗನಯಾತ್ರಿ ಇರಲಿದ್ದಾರೆ. ಈ ಮಹಿಳೆ ಕಪ್ಪು ವರ್ಣೀಯರಾಗಿರಲಿದ್ದಾರೆ ಎಂದು ನಾಸಾ ಹೇಳಿದ್ದು, ಅವರು ಯಾರು ಎಂದು ಬಹಿರಂಗಪಡಿಸಿಲ್ಲ. ಮಹಿಳೆ ಈವರೆಗೆ ಚಂದ್ರನ ಮೇಲೆ ಇಳಿದಿಲ್ಲ. ಯೋಜನೆಯ ಮುಂದಿನ ಹಂತದಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ನಾಸಾ ಜೊತೆ ಕೈಜೋಡಿಸಲಿವೆ.

ಮಂಗಳ ಗ್ರಹದ ಕನಸಿಗೆ ಭೂಮಿಕೆ

ಮಂಗಳ ಗ್ರಹದ ಮೇಲೆ ಮನುಷ್ಯ ಕಾಲಿಡುವ ದೂರದೃಷ್ಟಿಯ ಯೋಜನೆಗೆ ಆರ್ಟೆಮಿಸ್–1 ಯೋಜನೆಯು ಭೂಮಿಕೆ ಹಾಕಿಕೊಡಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿ ಬಳಸಿರುವ ತಂತ್ರಜ್ಞಾನ ಹಾಗೂ ಉಪಕರಣಗಳ ಸಾಮರ್ಥ್ಯ ಮತ್ತು ಯೋಜನೆಯಲ್ಲಿ ದೊರಕುವ ಮಾಹಿತಿಗಳನ್ನು ಆಧರಿಸಿ, 2040ರಲ್ಲಿ ಮಂಗಳಗ್ರಹಕ್ಕೆ ಮಾನವನನ್ನು ಕಳುಹಿಸಲಾಗುವುದು. ಇದಕ್ಕೂ ಮುನ್ನ, ಚಂದ್ರನ ಮೇಲ್ಮೈನಲ್ಲಿ ಮನುಷ್ಯ ಉಳಿದುಕೊಂಡು ಅಲ್ಲಿ ಕೆಲಸ ಮಾಡಲು ಸಾಧ್ಯವಾದರೆ, ಮಂಗಳ ಗ್ರಹಕ್ಕೆ ಹಾರುವ ದೊಡ್ಡ ಕನಸಿಗೆ ಆನೆಬಲ ಸಿಕ್ಕಂತಾಗುತ್ತದೆ.

ಮೂರು ಹಂತದ ಕಾರ್ಯಾಚರಣೆ

ಈ ಕಾರ್ಯಾಚರಣೆಯು ಮೂರು ಹಂತಗಳನ್ನು ಹೊಂದಿದೆ. ಭೂಮಿಯಿಂದ ಚಂದ್ರನಲ್ಲಿಗೆ ಹೋಗಿ, ಅಲ್ಲಿಂದ ವಾಪಸಾಗುವ ಪಯಣದಲ್ಲಿನ ಹಲವು ಹಂತಗಳಲ್ಲಿ ಎಸ್‌ಎಲ್‌ಎಸ್‌ ಮತ್ತು ಒರಾಯನ್‌ ಅನ್ನು ಪರೀಕ್ಷೆಗೆ ಒಳಪಡಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ

1. ಭೂಮಿಯಿಂದ ಚಂದ್ರನತ್ತ

8–14 ದಿನ ಕಾರ್ಯಾಚರಣೆಯ ಅವಧಿ

* ಒರಾಯನ್‌ ಬಾಹ್ಯಾಕಾಶ ನೌಕೆಯನ್ನು ಹೊತ್ತ ಎಸ್‌ಎಲ್‌ಎಸ್‌ ಆಗಸದತ್ತ ಜಿಗಿಯಲಿದೆ

* ಈ ಹಂತದಲ್ಲಿ ಎಸ್‌ಎಲ್‌ಎಸ್‌ನ ‘ಕೋರ್ ಸ್ಟೇಜ್‌ ರಾಕೆಟ್‌’ ಬೇರ್ಪಡಲಿದೆ. ಎಸ್‌ಎಲ್‌ಎಸ್‌ ಭೂಮಿಯ ಕೆಳ ಹಂತದ ಕಕ್ಷೆಯಲ್ಲಿ ಭೂಮಿಗೆ ಅರ್ಧ ಸುತ್ತು ಸುತ್ತಲಿದೆ

* ಈ ಹಂತದಲ್ಲಿ ಭೂಮಿಯ ಕಕ್ಷೆ ಮತ್ತು ಭೂಮಿಯ ಗುರುತ್ವಾಕರ್ಷಣ ಬಲವನ್ನು ಮೀರಿ ಹೋಗಬೇಕು. ಒರಾಯನ್‌ ನೌಕೆಯಲ್ಲಿರುವ ಕ್ರಯೋಜನಿಕ್‌ ಪ್ರೊಪಲ್ಷನ್ ಎಂಜಿನ್‌ ವ್ಯವಸ್ಥೆಯು ತಾಸಿಗೆ 28,000 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಚಂದ್ರನತ್ತ ಚಿಮ್ಮಲಿದೆ. ಆರ್ಟೆಮಿಸ್‌–1ರಲ್ಲಿ ಬಳಕೆಯಾಗುತ್ತಿರುವ ಕ್ರಯೋಜನಿಕ್ ಪ್ರೊಪಲ್ಷನ್ ಎಂಜಿನ್‌ ಈ ಹಂತದಲ್ಲಿ 95 ಟನ್‌ ತೂಕದಷ್ಟು ನೌಕೆಯನ್ನು ಹೊತ್ತೊಯ್ಯುವಷ್ಟು ಶಕ್ತಿಯನ್ನು ಉತ್ಪಾದಿಸಲಿದೆ

* ಈ ಹಂತದಲ್ಲಿ ಉತ್ಪಾದನೆಯಾಗುವ ಭಾರಿ ಶಕ್ತಿಯನ್ನು ಬಳಸಿಕೊಂಡು ಒರಾಯನ್‌ ನೌಕೆಯು ಭೂಮಿಯ ಮೇಲ್ಮೈನಿಂದ 4.5 ಲಕ್ಷ ಕಿ.ಮೀಗಿಂತಲೂ ಹೆಚ್ಚು ದೂರ ಸಾಗಲಿದೆ. ಮತ್ತು ಚಂದ್ರನನ್ನು ದಾಟಿ 65,000 ಕಿ.ಮೀ.ನಷ್ಟು ದೂರಕ್ಕೆ ಹೋಗಲಿದೆ

* ಈ ಹಂತದಲ್ಲೇ ಒರಾಯನ್‌ ನೌಕೆಯಿಂದ ಕ್ರಯೋಜನಿಕ್‌ ಪ್ರೊಪಲ್ಷನ್‌ ವ್ಯವಸ್ಥೆ ಬೇರೆಯಾಗಲಿದೆ

* ಮನುಷ್ಯನನ್ನು ಸಾಗಿಸುವ ಸಾಮರ್ಥ್ಯವಿರುವ ನೌಕೆಯೊಂದು ಬಾಹ್ಯಾಕಾಶದಲ್ಲಿ ಇಷ್ಟು ದೂರ ಮತ್ತು ಇಷ್ಟು ವೇಗದಲ್ಲಿ ಸಾಗುವುದು ಇದೇ ಮೊದಲು. ಆ ವೇಗವನ್ನು ಸಾಧಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಮತ್ತು ಸಂಭಾವ್ಯ ಅಪಾಯಗಳೇನು ಎಂಬುದನ್ನು ಪರಿಶೀಲಿಸುವುದು ಈ ಕಾರ್ಯಾಚರಣೆಯ ಪ್ರಧಾನ ಉದ್ದೇಶ

2. ಚಂದ್ರನ ಪ್ರದಕ್ಷಿಣೆ

6–19 ದಿನ ಕಾರ್ಯಾಚರಣೆಯ ಅವಧಿ

* ಚಂದ್ರನನ್ನು ದಾಟಿ ಹೋಗುವ ಒರಾಯನ್‌ ನೌಕೆಯು ತನ್ನ ದಿಕ್ಕನ್ನು ಬದಲಿಸಿ, ಚಂದ್ರನತ್ತ ವಾಪಸ್‌ ಆಗಲಿದೆ

* ಚಂದ್ರನನ್ನು ಒಂದು ಸುತ್ತು ಹಾಕಲಿದೆ. ಆನಂತರ ಚಂದ್ರನ ಮೇಲ್ಮೈನಿಂದ ಬಹಳ ದೂರದಲ್ಲಿನ ಒಂದು ಕಕ್ಷೆಯಲ್ಲಿ ಒರಾಯನ್‌, ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಲಿದೆ. (ಈ ಕಾರ್ಯಾಚರಣೆಯಲ್ಲಿ ಒರಾಯನ್ ನೌಕೆಯು ಚಂದ್ರನನ್ನು ಒಂದೂವರೆ ಸುತ್ತು, ಸುತ್ತುವ ಸಾಧ್ಯತೆ ಇದೆ. ಸಮಯ ಅವಕಾಶ ನೀಡದೇ ಇದ್ದರೆ, ಅರ್ಧ ಸುತ್ತಿನ ನಂತರವೇ ಭೂಮಿಯತ್ತ ಪ್ರಯಾಣ ಆರಂಭಿಸಲಿದೆ)

* ಗಗನಯಾನಿಗಳ ಜೀವರಕ್ಷಕ ಸಾಧನಗಳ ಕಾರ್ಯನಿರ್ವಹಣೆ, ಒರಾಯನ್‌ ನೌಕೆಯ ನಿಯಂತ್ರಣ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂಬುದನ್ನು ಈ ಹಂತದಲ್ಲಿ ಪರೀಕ್ಷಿಸಲಾಗುತ್ತದೆ

3. ಮರು ಪ್ರಯಾಣ

9–19 ದಿನ ಕಾರ್ಯಾಚರಣೆಯ ಅವಧಿ

* ಚಂದ್ರನ ಪ್ರದಕ್ಷಿಣೆ ಪೂರ್ಣಗೊಂಡ ನಂತರ, ಎಲ್‌ಎಲ್‌ಎಸ್‌ನ ಕೊನೆಯ ಹಂತದ ಎಂಜಿನ್‌ ಕೆಲಸ ಮಾಡಲಿದೆ. ಒರಾಯನ್‌ ನೌಕೆಯನ್ನು ಭೂಮಿಯತ್ತ ತಳ್ಳಲಿದೆ

* ಭೂಮಿಯತ್ತಲಿನ ಅರ್ಧ ದಾರಿಯಲ್ಲಿ ನೌಕೆಯು ತನ್ನ ಚಲನೆಯ ದಿಕ್ಕನ್ನು ಸ್ವಲ್ಪ ಬದಲಿಸಿಕೊಳ್ಳಲಿದೆ

* ಭೂಮಿಗೆ ಸಮೀಪ ಬಂದಾಗ, ಒರಾಯನ್‌ ನೌಕೆಯಲ್ಲಿನ ಕ್ಯಾಪ್ಸೂಲ್‌ ಬೇರ್ಪಡಲಿದೆ. ಕ್ಯಾಪ್ಸೂಲ್‌ ಭೂಮಿಗೆ ಅರ್ಧ ಸುತ್ತು ಬರಲಿದೆ

* ಸ್ಯಾನ್‌ ಡಿಯಾಗೊ ಬಳಿ ಪೆಸಿಫಿಕ್‌ ಸಮುದ್ರಕ್ಕೆ ಕ್ಯಾಪ್ಸೂಲ್‌ ಬೀಳಲಿದೆ

* ಈ ಕ್ಯಾಪ್ಸೂಲ್‌ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ಅದರ ವೇಗ ಪ್ರತಿ ಗಂಟೆಗೆ 40,000 ಕಿ.ಮೀ.ಗಿಂತಲೂ ಹೆಚ್ಚು ಇರಲಿದೆ. ಈ ಹಂತದಲ್ಲಿ ಕ್ಯಾಪ್ಸೂಲ್‌ನ ಮೇಲ್ಮೈನಲ್ಲಿ 2,800 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ. ಅಷ್ಟು ಉಷ್ಣಾಂಶವನ್ನು ತಡೆದುಕೊಳ್ಳಲು ಒರಾಯನ್‌ ಕ್ಯಾಪ್ಸೂಲ್‌ಗೆ ಸಾಧ್ಯವಾಗುತ್ತದೆಯೇ ಎಂಬುದನ್ನು ಪರಿಶೀಲಿಸುವುದೇ ಆರ್ಟೆಮಿಸ್‌–1 ಕಾರ್ಯಾಚರಣೆಯ ಪ್ರಮುಖ ಉದ್ದೇಶ

ಆಧಾರ: ನಾಸಾ, ರಾಯಿಟರ್ಸ್‌, ಪಿಟಿಐ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.