ADVERTISEMENT

ರೆಸಿಪಿ | ಕ್ರಿಸ್‌ಮಸ್‌ಗೆ ಕೊಕೊ ಸಿಹಿ

ವೇದಾವತಿ ಎಚ್.ಎಸ್.
Published 20 ಡಿಸೆಂಬರ್ 2024, 22:37 IST
Last Updated 20 ಡಿಸೆಂಬರ್ 2024, 22:37 IST
ಚಾಕೊಲೇಟ್ ಕೇಕ್
ಚಾಕೊಲೇಟ್ ಕೇಕ್   

ಕೊಕೊ ಪೌಡರ‍್ ಉಪಯೋಗಿಸಿ ಮನೆಯಲ್ಲೇ ತಯಾರಿಸಿ ರುಚಿಕರವಾದ ತಿನಿಸುಗಳು

ಚಾಕೊಲೇಟ್ ಬ್ರೌನಿ

ಬೇಕಾಗುವ ಸಾಮಗ್ರಿಗಳು: ಡಾರ್ಕ್ ಚಾಕೊಲೇಟ್ 1 ಕಪ್ (200 ಗ್ರಾಂ), ಉಪ್ಪು ರಹಿತ ಬೆಣ್ಣೆ 1/2 ಕಪ್ (120 ಗ್ರಾಂ), ಮೈದಾ 3/4 ಕಪ್ (90 ಗ್ರಾಂ), ಕೊಕೊ ಪೌಡರ‍್ 1/3 ಕಪ್ (40 ಗ್ರಾಂ), ಬೇಕಿಂಗ್ ಪೌಡರ‍್ 2 ಟೀ ಚಮಚ, ಉಪ್ಪು 1/4 ಟೀ ಚಮಚ, ಸಕ್ಕರೆ 3/4 ಕಪ್ (150 ಗ್ರಾಂ), ವೆನಿಲ್ಲಾ ಎಸೆನ್ಸ್ 1 ಟೀ ಚಮಚ, ಕ್ರೀಮ್‌ಯುಕ್ತ ಗಟ್ಟಿ ಮೊಸರು 3/4 ಕಪ್ (180 ಗ್ರಾಂ) ಅಥವಾ ಎರಡು ಮೊಟ್ಟೆ, ಅಲಂಕಾರಕ್ಕೆ ವಾಲ್ ನಟ್ಸ್ ಸ್ವಲ್ಪ, ಚಾಕೋ ಚಿಪ್ಸ್ ಸ್ವಲ್ಪ.


ತಯಾರಿಸುವ ವಿಧಾನ: ಒಂದು ಗ್ಲಾಸ್ ಅಥವಾ ಸ್ಟೀಲ್ ಬಟ್ಟಲಿಗೆ ಬೆಣ್ಣೆ ಮತ್ತು ಚಿಕ್ಕದಾಗಿ ಕತ್ತರಿಸಿಕೊಂಡ ಡಾರ್ಕ್ ಚಾಕೋಲೆಟ್‌ ಹಾಕಿ. ಮತ್ತೊಂದು ಪಾತ್ರೆಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಕುದಿಯುತ್ತಿರುವ ನೀರಿನ ಮೇಲೆ ಬೆಣ್ಣೆ ಮತ್ತು ಚಾಕೋಲೆಟ್‌ ಹಾಕಿರುವ ಬಟ್ಟಲನ್ನು ಇಟ್ಟು ಅದು ಕರಗುವರೆಗೆ ಮಿಶ್ರಣ ಮಾಡಿ. ನುಣ್ಣನೆ ಹೊಳಪು ಬರುವರೆಗೆ ಮಿಶ್ರಣ ಮಾಡುತ್ತಿರಿ. ಬಳಿಕ ಬಟ್ಟಲನ್ನು ನೀರಿನ ಪಾತ್ರೆಯಿಂದ ತೆಗೆಯಿರಿ. ಜರಡಿಗೆ ಮೈದಾ, ಕೊಕೊ ಪೌಡರ‍್, ಬೇಕಿಂಗ್ ಪೌಡರ‍್, ಉಪ್ಪುನ್ನು ಹಾಕಿ ಒಂದು ಬಟ್ಟಲಿಗೆ ಜರಡಿ ಹಿಡಿದುಕೊಳ್ಳಿ. ಬಳಿಕ ಚಾಕೋಲೆಟ್‌ ಮಿಶ್ರಣಕ್ಕೆ ಸಕ್ಕರೆ, ವೆನಿಲ್ಲಾ ಎಸೆನ್ಸ್ ಹಾಕಿ ಮಿಶ್ರಣ ಮಾಡಿ. ನಂತರ ಗಟ್ಟಿ ಮೊಸರು ಅಥವಾ ಮೊಟ್ಟೆಯನ್ನು ಬಳಸುವವರು ಮೊಟ್ಟೆಯನ್ನು ಹಾಕಿ. ಮೊಸರು ಅಥವಾ ಮೊಟ್ಟೆ ಯಾವುದಾದರೂ ಒಂದನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಜರಡಿ ಹಿಡಿದುಕೊಂಡಿರುವ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ಗಟ್ಟಿಯಾಗಿರಲಿ. ಮಿಶ್ರಣವನ್ನು ಐದು ನಿಮಿಷ ಹಾಗೇ ಬಿಡಿ. ಬಳಿಕ ಕೇಕ್ ತಯಾರಿಸುವ ಬಟ್ಟಲಿಗೆ ಬಟರ‍್ ಪೇಪರ‍್ ಹಾಕಿ ಅದರಲ್ಲಿ ತಯಾರಿಸಿಕೊಂಡ ಮಿಶ್ರಣವನ್ನು ಹಾಕಿ ಸಮತಟ್ಟಾಗಿ ಮಾಡಿಕೊಳ್ಳಿ. ಅದರ ಮೇಲೆ ವಾಲ್ ನಟ್ಸ್ ಮತ್ತು ಚಾಕೋ ಚಿಪ್ಸ್ ಹಾಕಿ. ಇದನ್ನು ಓವನ್‌ನಲ್ಲಿಟ್ಟು 180 ಡಿಗ್ರಿಯಲ್ಲಿ ಅರ್ಧ ಗಂಟೆ ಬೇಯಿಸಿ. ಬೆಂದ ಬಳಿಕ ಓವನ್‌ನಿಂದ ತೆಗೆದು ಆರಲು ಬಿಡಿ. ಬಳಿಕ ಕತ್ತರಿಸಿಕೊಂಡು ಸವಿಯಿರಿ.

ADVERTISEMENT
ಚಾಕೊಲೇಟ್ ಕೇಕ್‌

ಬೇಕಾಗುವ ಸಾಮಗ್ರಿಗಳು: 1-1/4 ಕಪ್ (150 ಗ್ರಾಂ) ಮೈದಾ 1/4 ಕಪ್ (25 ಗ್ರಾಂ) ಕೊಕೊ ಪೌಡರ‍್ 1/2 ಕಪ್ (80ಗ್ರಾಂ) ಬೆಣ್ಣೆ 1/4 ಕಪ್ (60ಗ್ರಾಂ) ಸಕ್ಕರೆ 1 ಟೀ ಚಮಚ ಬೇಕಿಂಗ್ ಪೌಡರ‍್ 1/2 ಟೀ ಚಮಚ ಬೇಕಿಂಗ್ ಸೋಡಾ 5 ಟೇಬಲ್ ಚಮಚ ಕಂಡೆನ್ಸ್ಡ್ ಮಿಲ್ಕ್ 1/2 ಕಪ್ (125 ಎಂಎಲ್) ಮಿಲ್ಕ್ 1 ಟೀ ಚಮಚ ವೆನಿಲ್ಲಾ ಎಸೆನ್ಸ್ 1 ಟೀ ಚಮಚ ಇನ್ಸ್ಟೆಂಟ್ ಕಾಫಿ ಪುಡಿ.ಸಕ್ಕರೆ ನೀರು ತಯಾರಿಸಲು: 1/2 ಕಪ್ ನೀರು 3 ಟೇಬಲ್ ಚಮಚ ಸಕ್ಕರೆ. ಒಂದು ಬಟ್ಟಲಿಗೆ ಹಾಕಿ ಕರಗಿಸಿಕೊಳ್ಳಿ. ಬಳಿಕ ಆರಲು ಬಿಡಿ.

ಚಾಕೊಲೇಟ್ ಟ್ರಫಲ್ ಐಸಿಂಗ್ ತಯಾರಿಸಲು: 2 ಕಪ್ (400 ಎಂಎಲ್) ಗಟ್ಟಿಯಾದ ಕ್ರೀಮ್ 4 ಕಪ್ (750ಗ್ರಾಂ ಡಾರ್ಕ್ ಚಾಕೊಲೇಟ್) 2 ಟೇಬಲ್ ಚಮಚ (10ಗ್ರಾಂ)ಬೆಣ್ಣೆ. ಕ್ರೀಮ್‌ನ್ನು ಬಟ್ಟಲಿಗೆ ಹಾಕಿ ಬಿಸಿಮಾಡಿ ಅದನ್ನು ಚಿಕ್ಕದಾಗಿ ಕತ್ತರಿಸಿಕೊಂಡ ಡಾರ್ಕ್ ಚಾಕೊಲೇಟ್‌ಗೆ ಸೇರಿಸಿ. ಬೆಣ್ಣೆಯನ್ನು ಹಾಕಿ ಚೆನ್ನಾಗಿ ನುಣುಪಾಗಿ ಹೊಳಪು ಬರುವರೆಗೆ ಮಿಶ್ರಣ ಮಾಡಿ. ಈ ಟ್ರಫಲ್ ಐಸಿಂಗ್‌ಅನ್ನು 3 ರಿಂದ 4 ಗಂಟೆ ಹಾಗೇ ಬಿಡಿ.

ತಯಾರಿಸುವ ವಿಧಾನ: ಜರಡಿಗೆ ಮೈದಾ ಕೊಕೊ ಪೌಡರ‍್ ಬೇಕಿಂಗ್ ಪೌಡರ‍್ ಬೇಕಿಂಗ್ ಸೋಡಾವನ್ನು ಹಾಕಿ ಎರಡು ಬಾರಿ ಜರಡಿ ಹಿಡಿಯಿರಿ. ಬಟ್ಟಲಿಗೆ ಬೆಣ್ಣೆ ಮತ್ತು ಸಕ್ಕರೆಯನ್ನು ಹಾಕಿ ಬೀಟರ್‌ನಲ್ಲಿ 2 ನಿಮಿಷ ಬೀಟ್ ಮಾಡಿ ಕ್ರೀಮ್ ತಯಾರಿಸಿಕೊಳ್ಳಿ. ಇದಕ್ಕೆ ಕಂಡೆನ್ಸ್ಡ್ ಮಿಲ್ಕ್ ಸೇರಿಸಿ 2 ನಿಮಿಷ ಬೀಟ್ ಮಾಡಿ. ಬಟ್ಟಲಿಗೆ ಹಾಲು ಕಾಫಿ ಪುಡಿ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಜರಡಿ ಹಿಡಿದ ಮಿಶ್ರಣಕ್ಕೆ ತಯಾರಿಸಿದ ಹಾಲಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಸೇರಿಸಿಕೊಳ್ಳುತ್ತಾ ಕಲಸಿಕೊಳ್ಳಿ. ಬಳಿಕ ಕೇಕ್ ತಯಾರಿಸುವ ಬಟ್ಟಲಿಗೆ ಬಟರ‍್ ಪೇಪರ‍್ ಹಾಕ ತಯಾರಿಸಿದ ಮಿಶ್ರಣವನ್ನು ಹಾಕಿ ಸಮತಟ್ಟಾಗಿ ಮಾಡಿಕೊಳ್ಳಿ. ಓವನ್‌ನಲ್ಲಿಟ್ಟು 180 ಡಿಗ್ರಿಯಲ್ಲಿ ಅರ್ಧ ಗಂಟೆ ಬೇಯಿಸಿ. ಕೇಕ್ ಪೂರ್ತಿ ಆರಿದ ಬಳಿಕ ಮೇಲಿನ ಭಾಗವನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಹಾಗೆಯೇ ಮಧ್ಯದಲ್ಲಿ ಕತ್ತರಿಸಿಕೊಳ್ಳಿ. ಕತ್ತರಿಸಿದ ಭಾಗಕ್ಕೆ ಸಕ್ಕರೆ ನೀರನ್ನು ಬ್ರೆಸ್‌ನಿಂದ ಹಚ್ಚಿ. ನಂತರ ತಯಾರಿಸಿಕೊಂಡ ಟ್ರಫಲ್ ಐಸಿಂಗ್ ಪೂರ್ತಿ ಭಾಗಕ್ಕೂ ಹಾಗೆ. ಹಾಗೆಯೇ ಮೇಲಿನ ಭಾಗಕ್ಕೂ ಸಕ್ಕರೆ ನೀರು ಮತ್ತು ಟ್ರಫಲ್ ಐಸಿಂಗ್ ಹಾಕಿ. ಕೇಕಿನ ಸುತ್ತಲೂ ಟ್ರಫಲ್ ಐಸಿಂಗ್‌ನಿAದ ಅಲಂಕರಿಸಿ ಹತ್ತು ನಿಮಿಷ ರೆಫ್ರಿಜರೇಟರ್‌ನಲ್ಲಿಡಿ. ಓವನ್‌ನಲ್ಲಿ ಸ್ವಲ್ಪ ಟ್ರಫಲ್ ಐಸಿಂಗ್‌ಅನ್ನು 10 ಸೆಕೆಂಡ್ ಬಿಸಿ ಮಾಡಿ. ಆಗ ಅದು ತೆಳುವಾಗಿ ಹೊಳಪಗುತ್ತದೆ. ರೆಫ್ರಿಜರೇಟರ್‌ನಿಂದ ಕೇಕನ್ನು ತೆಗೆದು ಟ್ರಫಲ್ ಐಸಿಂಗ್‌ನಿAದ ನಿಮಗೆ ಬೇಕಾದ ರೀತಿಯಲ್ಲಿ ಅಲಂಕರಿಸಿ. ಈಗ ಚಾಕೊಲೇಟ್ ಕೇಕ್ ಸವಿಯಲು ಸಿದ್ಧ.

ಚಾಕೊಲೇಟ್ ಚಿಪ್ ಕುಕ್ಕೀಸ್

ಬೇಕಾಗುವ ಸಾಮಗ್ರಿಗಳು: ಬೆಣ್ಣೆ 1/4 ಕಪ್ ಸಕ್ಕರೆ ಪುಡಿ 1/3 ಕಪ್ ವೆನಿಲ್ಲಾ ಎಸೆನ್ಸ್ 1/2 ಟೀ ಚಮಚ ಮೊಟ್ಟೆ 1 ಮೈದಾ 3/4 ಕಪ್ ಕೊಕೊ ಪೌಡರ‍್ 1/4 ಕಪ್ ಬೇಕಿಂಗ್ ಪೌಡರ‍್ 1 ಟೀ ಚಮಚ ಬೇಕಿಂಗ್ ಸೋಡಾ 1/4 ಟೀ ಚಮಚ ಚಾಕೊಲೇಟ್ ಚಿಪ್ 1/4 ಕಪ್.

ತಯಾರಿಸುವ ವಿಧಾನ: ಬಟ್ಟಲಿಗೆ ಬೆಣ್ಣೆ ಮತ್ತು ಸಕ್ಕರೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ವೆನಿಲ್ಲಾ ಎಸೆನ್ಸ್ ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಜರಡಿಗೆ ಮೈದಾ ಕೊಕೊ ಪೌಡರ‍್ ಬೇಕಿಂಗ್ ಪೌಡರ‍್ ಬೇಕಿಂಗ್ ಸೋಡಾ ಹಾಕಿ ಜರಡಿ ಹಿಡಿದು ಅದನ್ನು ತಯಾರಿಸಿಕೊಂಡ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಹೊಂದುವAತೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಚಾಕೊಲೇಟ್ ಚಿಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಿಸಿದ ಮಿಶ್ರಣವನ್ನು ಕೈಯಿಂದ ನಾದಿಕೊಂಡು ನಿಮಗೆ ಬೇಕಾದ ಅಳತೆಯ ಉಂಡೆಗಳನ್ನು ತಯಾರಿಸಿ ಚಪ್ಪಟೆ ಮಾಡಿಕೊಳ್ಳಿ. ಎಲ್ಲಾವನ್ನೂ ಹಾಗೆ ತಯಾರಿಸಿ ಓವನ್ ತಟ್ಟೆಗೆ ಬಟರ‍್ ಪೇಪರ‍್ ಹಾಕಿ ಅದರಲ್ಲಿ ಜೋಡಿಸಿ. ಬಳಿಕ ಓವನ್‌ನಲ್ಲಿಟ್ಟು 160 ಡಿಗ್ರಿಯಲ್ಲಿ 20 ನಿಮಿಷ ಬೇಯಿಸಿ. ಚಾಕೊಲೇಟ್ ಚಿಪ್ ಕುಕ್ಕೀಸ್ ರೆಡಿ.

ಚಾಕೊಲೇಟ್ ಕಪ್ ಕೇಕ್‌

ಬೇಕಾಗುವ ಸಾಮಗ್ರಿಗಳು: ಒಂದೂವರೆ ಕಪ್ ಮೈದಾ 1 ಟೀ ಚಮಚ ಬೇಕಿಂಗ್ ಸೋಡಾ 1/2 ಟೀ ಚಮಚ ಉಪ್ಪು 1/2 ಕಪ್ ಕೊಕೊ ಪೌಡರ‍್ 1 ಕಪ್ ಸಕ್ಕರೆ 1 ಟೀ ಚಮಚ ಇನ್ಸ್ಟೆಂಟ್ ಕಾಫಿ ಪುಡಿ 1 ಕಪ್ ನೀರು 1/3 ಕಪ್ ವೆಜಿಟಟೇಬಲ್ ಎಣ್ಣೆ 1 ಮಧ್ಯಮ ಗಾತ್ರದ ಮೊಟ್ಟೆ 1 ಟೇಬಲ್ ಚಮಚ ವಿನೆಗರ‍್.

ತಯಾರಿಸುವ ವಿಧಾನ: ಜರಡಿಗೆ ಮೈದಾ ಬೇಕಿಂಗ್ ಸೋಡಾ ಉಪ್ಪು ಕೊಕೊ ಪೌಡರ‍್ ಹಾಕಿ ಜರಡಿ ಹಿಡಿಯಿರಿ. ಬಳಿಕ ಸಕ್ಕರೆ ಮತ್ತು ಕಾಫಿ ಪುಡಿ ಸೇರಿಸಿ ಮಿಶ್ರಣ ಮಾಡಿ. ನೀರು ಎಣ್ಣೆ ಮೊಟ್ಟೆ ವಿನೆಗರ‍್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಕಪ್ ಕೇಕ್ ತಯಾರಿಸುವ ಕಪ್‌ಗಳಿಗೆ ತಯಾರಿಸಿದ ಮಿಶ್ರಣವನ್ನು ಹಾಕಿ. ಈ ಕಪ್‌ಗಳನ್ನು ಓವನ್‌ನಲ್ಲಿಟ್ಟು 180 ಡಿಗ್ರಿಯಲ್ಲಿ 20 ನಿಮಿಷ ಬೇಯಿಸಿ. ಬೇಕಿದ್ದರೆ ಚಾಕೊಲೇಟ್ ಟ್ರಫಲ್ ಐಸಿಂಗ್‌ನಿAದ ಅಲಂಕರಿಸಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.