ಅಜ್ವೈನ್ ಸೋಂಪು ಪುಡಿ
ಅಜವಾನ, ಓಂಕಾಳು ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಓಂಕಾಳು ಚಳಿಯ ವಾತಾವರಣಕ್ಕೆ ಉತ್ತಮವಾದದ್ದು. ಚಳಿಗಾಲದಲ್ಲಿ ಇದರ ಸೇವನೆಯಿಂದ ಜೀರ್ಣಶಕ್ತಿಯನ್ನು ಕಾಪಾಡಿಕೊಳ್ಳುವುದಲ್ಲದೇ, ಚರ್ಮಕ್ಕೂ ಉತ್ತಮ. ಇವುಗಳ ರೆಸಿಪಿ ಹೀಗಿವೆ.
ಜೀರ್ಣಕಾರಕ ಪುಡಿ
ಬೇಕಾಗುವ ಸಾಮಗ್ರಿ: ಓಂಕಾಳು 1/2 ಕಪ್, ಜೀರಿಗೆ 1/4 ಕಪ್, ಸೋಂಪು 1/4 ಕಪ್.
ಮಾಡುವ ವಿಧಾನ: ಬಾಣಲೆಯಲ್ಲಿ ಓಂಕಾಳನ್ನು 1 ಚಮಚ ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಅದೇ ಬಾಣಲಿಯಲ್ಲಿ ಜೀರಿಗೆ ಮತ್ತು ಸೋಂಪನ್ನು ಹುರಿಯಿರಿ. ಮೂರೂ ಪದಾರ್ಥಗಳು ತಣಿದ ನಂತರ ನುಣ್ಣಗೆ ಅರೆದರೆ ಸುವಾಸನೀಯ, ಆರೋಗ್ಯಕರ ಜೀರ್ಣವರ್ಧಕ ಪುಡಿ ಸಿದ್ದ. ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಳ್ಳಬಹುದು.
ಊಟವಾದ ಬಳಿಕ ಈ ಪುಡಿಯನ್ನು ತುಸು ಬೆಲ್ಲದೊಂದಿಗೆ ಮೆಲ್ಲಬಹುದು. ಪಾನೀಯ ಬೇಕಾದಲ್ಲಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಹಾಕಿ ಕುದಿಸಿ, ಶೋಧಿಸಿ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಬಹುದು.
ಓಂಕಾಳಿನ ಸಾಗು
ಓಂಕಾಳಿನ ಸಾಗು
ಬೇಕಾಗುವ ಸಾಮಗ್ರಿ: ಅಲಸಂದಿ ಕಾಯಿ 5-6,, ಕ್ಯಾರೆಟ್1, ಆಲೂಗಡ್ಡೆ1, ಈರುಳ್ಳಿ1,ಕ್ಯಾಪ್ಸಿಕಮ್1/2, ಟೊಮೆಟೊ 1 ಮತ್ತು ಸ್ವೀಟ್ ಕಾರ್ನ್ 1/4 ಕಪ್, ಓಂಕಾಳು 1 ಚಮಚ, ಹುರಿಗಡಲೆ 2 ಚಮಚ, ತೆಂಗಿನತುರಿ 1/4 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೇಲೆ ಹೇಳಿದ ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮಸಾಲೆಗೆ, ತೆಂಗಿನತುರಿ, ಓಂಕಾಳು ಮತ್ತು ಹುರಿಗಡಲೆಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದುಕೊಳ್ಳಿ. ಕುಕ್ಕರಿನಲ್ಲಿ ಒಗ್ಗರಣೆಗೆ ಸಾಸಿವೆ ಸಿಡಿಸಿ, ತರಕಾರಿ, ಉಪ್ಪು ಹಾಕಿ ಒಂದೆರಡು ನಿಮಷ ಹುರಿದು ನಂತರ ರುಬ್ಬಿದ ಮಸಾಲೆ, ಎರಡು ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ ಒಂದು ಸೀಟಿ ಕೂಗಿಸಿ.
ತೆಂಗಿನತುರಿ ಭಾತ್
ತೆಂಗಿನತುರಿ ಭಾತ್
ಬೇಕಾಗುವ ಸಾಮಗ್ರಿ: ಉದುರು ಅನ್ನ 2 ಕಪ್, ಹಸಿ ತೆಂಗಿನ ತುರಿ, ಒಣಕೊಬ್ಬರಿ ತುರಿ ತಲಾ 4 ಚಮಚ, ಸಣ್ಣಗೆ ಹೆಚ್ಚಿದ ಕಾಪ್ಸಿಕಮ್ 2 ಚಮಚ, ಗೋಡಂಬಿ 8-10, ಓಂಕಾಳು 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ತುಪ್ಪ 2 ಚಮಚ. .
ಮಾಡುವ ವಿಧಾನ: ಒಣಕೊಬ್ಬರಿ ಮತ್ತು ಹಸಿಕೊಬ್ಬರಿಯನ್ನು ಅರೆದುಕೊಳ್ಳಿ. ಬಾಣಲಿಗೆ ತುಪ್ಪ ಹಾಕಿ ಓಂಕಾಳು, ಗೋಡಂಬಿಯನ್ನು ಹುರಿದು ನಂತರ ಕಾಪ್ಸಿಕಮ್ ಸೇರಿಸಿ ಬಾಡಿಸಿ, ಅರೆದ ತೆಂಗಿನ ಮಿಶ್ರಣ, ಉಪ್ಪು ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಉರಿಯಾರಿಸಿ ಅನ್ನ ಸೇರಿಸಿ ಮಿಶ್ರಣ ಮಾಡಿ.
ಓಂಕಾಳಿನ ಪೂರಿ
ಓಂಕಾಳಿನ ಪೂರಿ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು 2 ಕಪ್, ಓಂಕಾಳು 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.
ಮಾಡುವ ವಿಧಾನ: ಗೋಧಿಹಿಟ್ಟಿಗೆ, ಅಂಗೈಯಲ್ಲಿ ಮಸೆದ ಓಂಕಾಳು, ಉಪ್ಪು ನಾಲ್ಕರಿಂದ ಐದು ಚಮಚದಷ್ಟು ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ನಂತರ ಸ್ವಲ್ಪ ನೀರುಸೇರಿಸಿ ಹಿಟ್ಟು ಅಣಿಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಸ್ವಲ್ಪ ಮಂದವಾಗಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಕರಿದರೆ ಪರಿಮಳಯುಕ್ತ ಪೂರಿ ರೆಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.