ADVERTISEMENT

ಅಡುಗೆ ಮಾಡಿದರೆ ಅಹಲ್ಯಾಬಾಯಿ: ಚಪ್ಪರಿಸಿ ಸವಿಯುತ್ತದೆ ಎಲ್ಲರ ಬಾಯಿ

ಸುಮಾ ಬಿ.
Published 9 ಆಗಸ್ಟ್ 2025, 6:26 IST
Last Updated 9 ಆಗಸ್ಟ್ 2025, 6:26 IST
ಅವಲಕ್ಕಿ ಆಂಬೊಡೆಯೊಂದಿಗೆ ಅಹಲ್ಯಾ ಬಾಯಿ
ಅವಲಕ್ಕಿ ಆಂಬೊಡೆಯೊಂದಿಗೆ ಅಹಲ್ಯಾ ಬಾಯಿ   

‘ಅಡುಗೆ... ಅದೊಂದು ಕಲೆ, ಪ್ರೀತಿ, ಶ್ರದ್ಧೆ, ಸದ್ಭಾವನೆ... ಸೇವೆಗಾಗಿ ನಾಲ್ಕು ಜನರಿಗೆ ಊಟಕ್ಕಿಡುವೆ. ಹದವರಿತು ಅಡುಗೆ ಮಾಡಿದರೆ ಎಲ್ಲರಿಗೂ ರುಚಿಸುತ್ತೆ. ರುಚಿಯ ಸೊಗಡು ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಹರಡಿ ಈಗ ಸಾಗರದಾಚೆಗೂ ಹೋಗಿದೆ’ ಎಂದು ಮುಗುಳ್ನಗುತ್ತ ಮಾತಿಗಿಳಿದ ಅಹಲ್ಯಾ ಬಾಯಿ, 48 ವರ್ಷಗಳಿಂದ ತಮ್ಮ ಕೈರುಚಿಯನ್ನು ಜನರಿಗೆ ಉಣಬಡಿಸುತ್ತಿದ್ದಾರೆ.

ಅಹಲ್ಯಾಬಾಯಿ ಕೇಟರಿಂಗ್‌ನಲ್ಲಿ ತಯಾರಾಗುವ ಸಾಂಪ್ರದಾಯಿಕ ಅಡುಗೆಗಳು ಸುತ್ತಮುತ್ತಲ ನಿವಾಸಿಗಳನ್ನಲ್ಲದೆ, ಯೂಟ್ಯೂಬ್‌ ಮೂಲಕ ನಾಡಿನ, ಹೊರನಾಡಿನ ಪಾಕಪ್ರಿಯರನ್ನೂ ಸೆಳೆದಿವೆ. ಬೆಂಗಳೂರಿನ ಶ್ರೀರಾಂಪುರಕ್ಕೆ ಬಂದರೆ ಸಾಕು, ವೀರಾಂಜನೇಯ ದೇವಸ್ಥಾನದ ಸಮೀಪವಿರುವ ಅಹಲ್ಯಾ ಬಾಯಿ ಕೇಟರಿಂಗ್‌ಗೆ ಯಾವುದೇ ಮಾರ್ಗಸೂಚಿ ಫಲಕಗಳಿಲ್ಲದೆಯೂ ಸುಲಭವಾಗಿ ತಲುಪಬಹುದು. ದಾರಿಹೋಕರೇ ದಾರಿ ತೋರುತ್ತಾರೆ. ಅಷ್ಟರಮಟ್ಟಿಗೆ ಜನಪ್ರಿಯರಾಗಿರುವ, 72ರ ವಯಸ್ಸಿನಲ್ಲೂ ತುಂಬು ಉತ್ಸಾಹ, ಜೀವನಪ್ರೀತಿಯಿಂದ ರಸಪಾಕ ತಯಾರಿಸುವ ಅಹಲ್ಯಾಬಾಯಿ ಅವರ ಅಡುಗೆಗಳು ಎಂತಹವರ ಬಾಯಿಯಲ್ಲೂ ರುಚಿಮೊಗ್ಗುಗಳನ್ನು ಅರಳಿಸುತ್ತವೆ. ಒತ್ತಡದ ಜೀವನಶೈಲಿಯಲ್ಲಿ ಸಾಂಪ್ರದಾಯಿಕ ಅಡುಗೆಗಳನ್ನೇ ಮರೆತಿದ್ದ ಬಹುತೇಕರಿಗೆ ಮತ್ತೆ ಅವುಗಳ ರುಚಿ ಹತ್ತಿಸಿದ್ದಾರೆ ಅವರು.

50 ವರ್ಷಗಳ ಹಿಂದೆ ದೇವಸ್ಥಾನದ ಪ್ರಸಾದ, ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಊಟ ತಯಾರಿಸಿಕೊಡುತ್ತಿದ್ದ ಅಹಲ್ಯಾಬಾಯಿ ತಮ್ಮ ಕೈರುಚಿಯಿಂದಲೇ ಮನೆಮಾತಾದವರು. ಪ್ರಚಾರ ಬಯಸದೆ, ಕೇಳಿದವರಿಗೆ ಶ್ರದ್ಧೆಯಿಂದ ಅಡುಗೆ ಮಾಡಿಕೊಡುತ್ತಿದ್ದ ಅವರು ಇಂದು ದಿನಕ್ಕೆ 40ರಿಂದ 50 ಜನರಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ತಯಾರಿಸಿಕೊಡುತ್ತಾರೆ. ಅವರ ‘ಶುದ್ಧ ಆಹಾರ’, ‘ಮನೆ ಅಡುಗೆ’ಯನ್ನು ಸುತ್ತಮುತ್ತಲಿನ ಹಲವು ಕಚೇರಿಗಳ ಉದ್ಯೋಗಿಗಳು ನೆಚ್ಚಿಕೊಂಡಿದ್ದಾರೆ. ಇದಲ್ಲದೇ ಚಕ್ಕುಲಿ, ಕೋಡುಬಳೆ, ಕಜ್ಜಾಯ, ನಿಪ್ಪಟ್ಟು, ವಾಂಗಿಬಾತ್ ಪುಡಿ, ಬಿಸಿಬೇಳೆ ಬಾತ್‌ ಪುಡಿ, ರಸಂ ಪುಡಿ, ಪುಳಿಯೋಗರೆ ಪುಡಿಯಂತಹವು ವಿದೇಶಕ್ಕೂ ರವಾನೆಯಾಗುತ್ತವೆ.

ADVERTISEMENT

ಸೋಡಾ, ಕೃತಕ ಬಣ್ಣಗಳಿಗೆ ಅವರ ಅಡುಗೆ ಮನೆಯಲ್ಲಿ ಸ್ಥಳವೇ ಇಲ್ಲ. ಈರುಳ್ಳಿ, ಬೆಳ್ಳುಳ್ಳಿ ಸಹ ವರ್ಜ್ಯ. ಪಾಕ ತಯಾರಿಯಲ್ಲಿ ತುಪ್ಪ, ಒಣಹಣ್ಣುಗಳನ್ನು ಹೇರಳವಾಗಿ ಬಳಸುವ ಅಹಲ್ಯಾ ‘ಅದರಲ್ಲೇ ಅಡಗಿದೆ ಆರೋಗ್ಯದ ಗುಟ್ಟು’ ಎನ್ನುತ್ತಾರೆ. ಮೂರ್ನಾಲ್ಕು ವರ್ಷಗಳಿಂದೀಚೆಗೆ ‘ಮನೆ ಮನೆ ರಸದೂಟ’ ಯೂಟ್ಯೂಬ್‌ ಚಾನೆಲ್‌ ಮೂಲಕ ಅವರ ರಸಪಾಕದ ರೆಸಿಪಿಗಳು ಬಹುಜನರಿಗೆ ತಲುಪಿವೆ. ತಮ್ಮ ಅಜ್ಜಿಯ ಕಾಲದ ರೆಸಿಪಿಗಳನ್ನೂ ಸವಿವರವಾಗಿ, ಕಣ್ಣಳತೆಯಲ್ಲೇ ಹೇಳಿಕೊಡುವ ಚಾಕಚಕ್ಯತೆ ಅವರದ್ದು.

ಮಂಗಳೂರು ಬಜ್ಜಿಯೊಂದಿಗೆ ಅಹಲ್ಯಾ ಬಾಯಿ

10ನೇ ವಯಸ್ಸಿನಿಂದಲೇ ಅವರ ತಾಯಿ ಸುಶೀಲಾ ಬಾಯಿ ವಿವಿಧ ರೀತಿಯ ಸಾಂಬಾರ್, ತೊವ್ವೆ, ಸರಳ ಸಿಹಿತಿಂಡಿಗಳನ್ನು ತಯಾರಿಸುವುದನ್ನು ಅವರಿಗೆ ಹೇಳಿಕೊಡುತ್ತಿದ್ದರಂತೆ. ‘ತಾಯಿ ನನಗೆ ಬರೀ ಸ್ಫೂರ್ತಿಯಲ್ಲ, ಬದಲಿಗೆ ಅಡುಗೆಯ ಶಿಕ್ಷಣ ನೀಡಿದವರು, ಮಾರ್ಗದರ್ಶನ ಮಾಡಿದವರು’ ಎಂದು ನೆನಪುಗಳನ್ನು ಮೆಲುಕು ಹಾಕುತ್ತಾರೆ. ‘ಎಲ್ಲರೂ ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ. ಈಗೇನಿದ್ದರೂ ಆರೋಗ್ಯವೇ ಆಸ್ತಿ ಎಂಬಂತಾಗಿದೆ. ಎಲ್ಲ ಇದ್ದರೂ ಆರೋಗ್ಯ ಸರಿ ಇರುವುದಿಲ್ಲ. ನಾವು ಸೇವಿಸುವ ಆಹಾರದಲ್ಲೇ ಆರೋಗ್ಯದ ಗುಟ್ಟು ಅಡಗಿದೆ’ ಎನ್ನುತ್ತಾರೆ.

ಪೂರಿ ಕರಿದು ಮಾಡುವ ಮೋಹನ ಲಾಡು, ಅಕ್ಕಿ– ಬೆಲ್ಲದ ಹಾಲ್‌ಬಾಯ್‌, ಒತ್ತುಶ್ಯಾವಿಗೆ, ಅಪ್ಪಿ ಪಾಯಸ, ಅಂಟಿನ ಉಂಡೆ, ಸಕ್ಕರೆ ಹೋಳಿಗೆ, ಬಗೆಬಗೆಯ ಚಟ್ನಿಪುಡಿಗಳು, ಹಿತಕಿದ ಅವರೆಬೇಳೆ ಸಾರು, ಬಿಸಿ ಅನ್ನ– ತುಪ್ಪದೊಂದಿಗೆ ಸವಿಯಲು ಮೆಂತೆಹಿಟ್ಟು, ಬಾಳೆಹಣ್ಣು– ರವೆಯಿಂದ ತಯಾರಿಸುವ ಸಪಾದ ಭಕ್ಷ್ಯ (ಸತ್ಯನಾರಾಯಣ ಪ್ರಸಾದ), ಮಸಾಲೆ ಸಬ್ಬಕ್ಕಿ ಇಡ್ಲಿ... ಹೀಗೆ ಅವರ ಹಲವಾರು ರೆಸಿಪಿಗಳ ದೃಶ್ಯಗಳು ಪಾಕಪ್ರಿಯರ ಜಿಹ್ವಾಚಾಪಲ್ಯವನ್ನು ಹೆಚ್ಚಿಸಿವೆ. ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳ ಸಮಯದಲ್ಲಿ ಅವರ ಸಾಂಪ್ರದಾಯಿಕ ಅಡುಗೆಗಳಿಗೆ ಬಲು ಬೇಡಿಕೆ.

ಅಹಲ್ಯಾ ಬಾಯಿ

ಮರಾಠಿ ಶೈಲಿಯ ಗುಲ್ಪಾವಟೆ ಸವಿಯಿರಿ

ಗೋಧಿಹಿಟ್ಟು ಬೆಲ್ಲದಿಂದ ಮಾಡುವ ಆರೋಗ್ಯಕರ ಸಿಹಿ ಉಂಡೆ ಗುಲ್ಪಾವಟೆ ಮಕ್ಕಳಾದಿಯಾಗಿ ಎಲ್ಲರನ್ನೂ ಸೆಳೆಯುತ್ತದೆ. ಮರಾಠಿಗರು ಹೆಚ್ಚಾಗಿ ತಯಾರಿಸುವ ಈ ಸಿಹಿ ತಿನಿಸಿಗೆ ಬೆಲ್ಲದ ಪಾಕ ಹಿಡಿಯಬೇಕೆಂಬ ಗೋಜಿಲ್ಲ. ಸುಲಭವಾಗಿ ಕಡಿಮೆ ಪದಾರ್ಥ ಬಳಸಿ ಗುಲ್ಪಾವಟೆ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ ಅಹಲ್ಯಾಬಾಯಿ.

ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು ಚಿರೋಟಿ ರವೆ ಒಣಕೊಬ್ಬರಿ ಬೆಲ್ಲ ತುಪ್ಪ (ಈ ಎಲ್ಲವೂ ಸಮಪ್ರಮಾಣದಲ್ಲಿ ಒಂದೊಂದು ಕಪ್‌) ರುಚಿಗೆ ಏಲಕ್ಕಿ ಪುಡಿ ಹಾಗೂ ತುಪ್ಪದಲ್ಲಿ ಹುರಿದ ಗೋಡಂಬಿ.

ಹೀಗೆ ಮಾಡಿ: ಚಿರೋಟಿ ರವೆ ಹಾಗೂ ಗೋಧಿ ಹಿಟ್ಟನ್ನು ಪ್ರತ್ಯೇಕವಾಗಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಬೆಲ್ಲ ಸ್ವಲ್ಪ ನೀರು ಹಾಕಿ ಕರಗಿಸಿಕೊಂಡು ಅದಕ್ಕೆ ಚಿರೋಟಿ ರವೆ ಹಾಕಿ ಮಿಕ್ಸ್‌ ಮಾಡಿ ಬೇಯಲು ಬಿಡಿ. ಬಳಿಕ ಒಂದು ಬಟ್ಟಲು ತುಪ್ಪ ಹಾಕಿ ಕೈಯಾಡಿಸುತ್ತ ಒಣಕೊಬ್ಬರಿ ಗೋಧಿಹಿಟ್ಟು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ಬಾಣಲೆಯನ್ನು ಕೆಳಗಿಳಿಸಿ ಏಲಕ್ಕಿ ಪುಡಿ ಹುರಿದಿಟ್ಟ ಗೋಡಂಬಿ ಹಾಕಿ ಬೆರೆಸಿ. ಈ ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಉಂಡೆ ಕಟ್ಟಬೇಕು.

ಅನುಭವದ ಕಿವಿಮಾತು

  • ಮೈಸೂರುಪಾಕ್ ಮಿಶ್ರಣವನ್ನು ಒಲೆಯ ಮೇಲೆ ಬೆರೆಸಿ ಮಾಡುವಾಗ ಗುಳ್ಳೆಗಳು ಮೇಲೆದ್ದ ತಕ್ಷಣ ತುಪ್ಪ ಸವರಿದ ತಟ್ಟೆಯಲ್ಲಿ ಹರಡಬೇಕು. ಒಂದು ನಿಮಿಷ ಆಚೀಚೆ ಕಣ್ಣು ಮಿಟುಕಿಸಿದರೂ ಹದ ತಪ್ಪುತ್ತದೆ ಪಾಕ ಗಟ್ಟಿಯಾಗುತ್ತದೆ.

  • ಮಾವಿನ ಗೊಜ್ಜಿಗೆ ರುಚಿ ಹೆಚ್ಚುವುದು ಉದ್ದಿನಬೇಳೆ ಕೆಂಪು ಮೆಣಸಿನಕಾಯಿ ತೆಂಗಿನಕಾಯಿ ಪೇಸ್ಟ್‌ನಿಂದಲೇ. ಇವುಗಳಲ್ಲಿ ಒಂದು ತಪ್ಪಿದರೂ ರುಚಿ ಕೆಡುತ್ತದೆ.

  • ಚಟ್ನಿಪುಡಿಗೆ ಹುಣಸೆಹಣ್ಣನ್ನು ಎಣ್ಣೆಯಲ್ಲಿ ಕರಿದು ಹಾಕಬೇಕು. ಹಾಗೆಯೇ ಹಾಕಿದರೆ ಪುಡಿಯ ಜೊತೆ ಹೊಂದಿಕೊಳ್ಳುವುದಿಲ್ಲ. ಹುಳಿ ಅಂಶ ಅಲ್ಲಲ್ಲಿ ಬಾಯಿಗೆ ಸಿಗುತ್ತದೆ. ಕರಿದು ಹಾಕಿ‌ದಾಗ ಕಾಳುಗಳೊಂದಿಗೆ ಹದವಾಗಿ ಬೆರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.