ADVERTISEMENT

ಅಪ್ಪಟ ಆಂಧ್ರ ಶೈಲಿಯ ಚಿಕನ್‌ ಸ್ವಾದ!

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 2:09 IST
Last Updated 6 ಜೂನ್ 2020, 2:09 IST
ಚಿಕನ್‌ ಕರಿ 
ಚಿಕನ್‌ ಕರಿ    

ಆಂಧ್ರ ಶೈಲಿ ಚಿಲ್ಲಿ ಚಿಕನ್‌

ಬೇಕಾಗುವ ಸಾಮಗ್ರಿಗಳು: ಚಿಕನ್‌ ತುಂಡುಗಳು – 1/2 ಕೆ.ಜಿ., ಹಸಿಮೆಣಸು – 12 ರಿಂದ 14, ಬೆಳ್ಳುಳ್ಳಿ – 8 ರಿಂದ 10, ಹಸಿಮೆಣಸಿನ ಪೇಸ್ಟ್ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಕಾಳುಮೆಣಸಿನ ಪುಡಿ – 1 ಚಮಚ, ವಿನಿಗರ್‌ – 2 ಚಮಚ, ಕಾರ್ನ್‌ ಫ್ಲೋರ್‌ – 1 ಟೇಬಲ್‌ ಚಮಚ, ಉಪ್ಪು – ರುಚಿಗೆ, ಎಣ್ಣೆ – 2 ಟೇಬಲ್‌ ಚಮಚ

ತಯಾರಿಸುವ ವಿಧಾನ: ಹಸಿಮೆಣಸಿನ ಕಾಯಿಯನ್ನು ತೊಳೆದು ಹುರಿದುಕೊಂಡು, ಉದ್ದಕ್ಕೆ ಕತ್ತರಿಸಿಕೊಳ್ಳಿ. ಪಾತ್ರೆಯೊಂದರಲ್ಲಿ ಚಿಕನ್ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಹಸಿಮೆಣಸಿನ ಪೇಸ್ಟ್‌, ಕಾಳುಮೆಣಸಿನ ಪುಡಿ ಹಾಗೂ ವಿನಿಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಗಂಟೆ ನೆನೆಯಲು ಇಡಿ. ಪಾತ್ರೆಯೊಂದರಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಬೆಳ್ಳುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಅದೇ ಎಣ್ಣೆಗೆ ಹಸಿಮೆಣಸಿನ ಪೇಸ್ಟ್‌ ಸೇರಿಸಿ ಒಂದು ನಿಮಿಷ ಹುರಿಯಿರಿ. ನಂತರ ನೆನೆಸಿದ ಚಿಕನ್‌ ತುಂಡುಗಳನ್ನು ಸೇರಿಸಿ 2 ರಿಂದ 3 ನಿಮಿಷ ಚೆನ್ನಾಗಿ ಕಲೆಸಿ. ಪಾತ್ರೆಯನ್ನು ಮುಚ್ಚಿ 8 ನಿಮಿಷ ಕುದಿಸಿ. ನೀರು ಸೇರಿಸಿ ಮತ್ತೆ 6 ನಿಮಿಷಗಳ ಕಾಲ ಕುದಿಸಿ. ಆಮೇಲೆ ಉಳಿದ ವಿನಿಗರ್‌ ಹಾಗೂ ಸ್ವಲ್ಪ ಉಪ್ಪು ಸೇರಿಸಿ. ಕ್ಲಾರ್ನ್‌ಫ್ಲೋರ್‌ ಅನ್ನು ಸ್ವಲ್ಪ ನೀರಿನಲ್ಲಿ ಕಲೆಸಿ. ಆ ನೀರನ್ನು ಚಿಕನ್‌ ಕುದಿಯುತ್ತಿರುವ ಪಾತ್ರೆಗೆ ಹಾಕಿ. ಮತ್ತೆ ಎರಡು ನಿಮಿಷ ಕುದಿಸಿ ಗ್ಯಾಸ್ ಆಫ್‌ ಮಾಡಿ.

ADVERTISEMENT

ಚಿಕನ್‌ ಫ್ರೈ

ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡುಗಳು – 750 ಗ್ರಾಂ

ನೆನೆಸಿಡಲು: ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1ಟೇಬಲ್‌ ಚಮಚ, ಅರಿಸಿನ – 1/2 ಟೀ ಚಮಚ, ಮೆಣಸಿನ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1 ಚಮಚ, ಜೀರಿಗೆ ಪುಡಿ – 1 ಚಮಚ, ನಿಂಬೆರಸ – 4 ಚಮಚ, ಉಪ್ಪು ರುಚಿಗೆ,

ಹುರಿಯಲು: ಈರುಳ್ಳಿ – 2 ಕಪ್‌ (ಹೊಂಬಣ್ಣಕ್ಕೆ ಹುರಿದುಕೊಂಡಿದ್ದು), ಒಣಮೆಣಸು – 2, ಹಸಿಮೆಣಸು – 3 ರಿಂದ 4 (ಉದ್ದಕ್ಕೆ ಸೀಳಿಕೊಂಡಿದ್ದು), ಕರಿಬೇವು – 20 ಎಲೆ, ಏಲಕ್ಕಿ – 3, ಲವಂಗ – 2, ಚಕ್ಕೆ – ಒಂದು ತುಂಡು, ಚಿಕನ್ ಮಸಾಲ – 1/2 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ನೆನೆಸಿಡಲು ತಿಳಿಸಿದ ಎಲ್ಲಾ ಪದಾರ್ಥಗಳನ್ನು ಚಿಕನ್ ತುಂಡುಗಳೊಂದಿಗೆ ಮಿಶ್ರಣ ಮಾಡಿ ಎರಡು ಗಂಟೆಗಳ ಕಾಲ ನೆನೆಸಿಡಿ. ನೀರಿಲ್ಲದೇ ಚಿಕನ್ ತುಂಡುಗಳನ್ನು ಪಾತ್ರೆಯೊಂದರಲ್ಲಿ ಚೆನ್ನಾಗಿ ಬೇಯಿಸಿ. ಅದರಲ್ಲಿ ನೀರು ಬಿಟ್ಟುಕೊಳ್ಳುತ್ತದೆ. ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಮೇಲೆ ಹುರಿಯಲು ತಿಳಿಸಿದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಪುಡಿ ಮಾಡಿ ಅದನ್ನು ಬಿಸಿ ಮಾಡಿರುವ ಎಣ್ಣೆಗೆ ಹಾಕಿ. ಅದಕ್ಕೆ ಒಣಮೆಣಸಿನ ಕಾಯಿ, ಹಸಿಮೆಣಸಿನ ಕಾಯಿ ಹಾಗೂ ಕರಿಬೇವು ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಬೇಯಿಸಿಕೊಂಡ ಚಿಕನ್‌ ತುಂಡುಗಳನ್ನು ಸೇರಿಸಿ. ಕೆಲ ನಿಮಿಷಗಳ ಕಾಲ ಕೈಯಾಡಿಸಿ. ಅದಕ್ಕೆ ಹುರಿದುಕೊಂಡ ಈರುಳ್ಳಿ, ಚಿಕನ್‌ ಮಸಾಲ ಹಾಗೂ ಉಳಿದ ಕರಿಬೇವನ್ನು ಹಾಕಬೇಕು. ಈ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಚಿಕನ್‌ ರೋಸ್ಟ್ ಆಗುವವರೆಗೂ ಹುರಿದುಕೊಳ್ಳಬೇಕು.

ಚಿಕನ್ ಕರಿ

ಬೇಕಾಗುವ ಸಾಮಗ್ರಿಗಳು: ಚಿಕನ್‌ – ಅರ್ಧ ಕೆ.ಜಿ., ಎಣ್ಣೆ – 3 ಟೇಬಲ್ ಚಮಚ, ಈರುಳ್ಳಿ – 3 (ಮಧ್ಯಮ ಗಾತ್ರದ್ದು), ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 1 ಟೇಬಲ್ ಚಮಚ, ಹಸಿಮೆಣಸು – 5, ಅರಿಸಿನ ಪುಡಿ – 1/2 ಚಮಚ, ಮೆಣಸಿನ ಪುಡಿ – 1 ಚಮಚ, ಉಪ್ಪು – ರುಚಿಗೆ, ಕೊತ್ತಂಬರಿ – 1 ಟೇಬಲ್ ಚಮಚ, ಜೀರಿಗೆ – 1 ಚಮಚ, ಕಾಳುಮೆಣಸು – 4, ಏಲಕ್ಕಿ – 2, ಚಕ್ಕೆ – 1 ತುಂಡು, ಲವಂಗ – 3, ಗಸಗಸೆ – 1 ಟೇಬಲ್ ಚಮಚ,ಕೊತ್ತಂಬರಿ ಸೊಪ್ಪು – ಸ್ವಲ್ಪ (ಹೆಚ್ಚಿಕೊಂಡಿದ್ದು), ಮೊಸರು – 1ಕಪ್‌

ತಯಾರಿಸುವ ವಿಧಾನ: ತವಾ ಬಿಸಿ ಮಾಡಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಚಕ್ಕೆ, ಏಲಕ್ಕಿ, ಕಾಳುಮೆಣಸಿನ ಪುಡಿ, ಲವಂಗ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಪಾತ್ರೆಯೊಂದರಲ್ಲಿ ತೆಗೆದಿಡಿ. ಅದೇ ತವಾಗೆ ಗಸೆಗಸೆ ಹಾಕಿ ಕೆಲ ನಿಮಿಷಗಳ ಕಾಲ ಹುರಿದುಕೊಳ್ಳಿ. ಹುರಿದ ಎಲ್ಲಾ ಸಾಮಗ್ರಿಗಳನ್ನು ಪುಡಿ ಮಾಡಿಕೊಳ್ಳಿ. ದೊಡ್ಡ ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಕೆಲ ನಿಮಿಷ ಹುರಿಯಿರಿ. ನಂತರ ಚಿಕನ್‌ ತುಂಡುಗಳನ್ನು ಸೇರಿಸಿ ಬಣ್ಣ ಬದಲಾಗುವವರೆಗೆ ಮತ್ತೆ ಹುರಿಯಿರಿ. ಉಪ್ಪು, ಕೆಂಪುಮೆಣಸಿನ ಪುಡಿ, ಅರಿಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕೆಲ ನಿಮಿಷಗಳ ಕಾಲ ಬೇಯಿಸಿ. ಹುರಿದು ಪುಡಿ ಮಾಡಿಕೊಂಡ ಸಾಮಗ್ರಿಗಳನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಬೇಯಿಸಿ. ಸ್ವಲ್ಪ ನೀರು ಸೇರಿಸಿ ಗ್ರೇವಿ ತಯಾರಿಸಿ ಕುದಿಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.